ತೂಕ
ನನ್ನ ತನು ಅದು ನಡೆಯುವಾಗ
ತಾ ನಡೆಯುತಿಲ್ಲ ನಾ ನಡೆಸ ಬೇಕಲ್ಲ
ಒಂದು ಹೆಚ್ಚು ಎರಡು ಕಮ್ಮಿ
ನಡೆಯ ನಡುವೆ ಕೆಮ್ಮಿ ಕೆಮ್ಮಿ
ಮೀಸೆ ಬಂದವಗೆ ದೇಶ ಕಾಣದೆಂಬ ನಾಣ್ಣುಡಿ
ಕಾಣದಾಗಿದೆ ಎನಗೆ ನೆಲವಿಂದು ಗಂಡಸಾಗಿ
ಇದು ನಾನಲ್ಲ ನಾ ಹೀಗಿರಲಿಲ್ಲ
ಏನಾಗಿದೆ ನನಗೆ ಏಕಾಗಿದೆ ಹೀಗೆ
ಕೂತು ತಿಂದರೆ ಕೊಪ್ಪರಿಗೆ ಸಾಲದೆಂದರು
ನಾ ಕೂತರೇ ಕೊಪ್ಪರಿಗೆ ಸಿಗುವುದು
ನಸುಕಿನಲ್ಲಿ ಕೂತ ಕೂತು ಏಳುವುದು ಮುಸ್ಸಂಜೆಯಲೇ
ತಿಂಡಿ ಊಟ ಮಾತು ಮೌನ ಎಲ್ಲವೂ ಕೂತಲ್ಲಿಯೇ
ಕೂತು ಕೂತು ಮನವು ಸೋತುಏಳಲಾರೆ ಹೇಳಲಾರೆ
ಕೂತ ತನುವ ಕುಸಿದ ಮನವ ಬೇಕೆಂದರೂ ಬಿಡಲಾರೆ
ನಾಳೆ ಎದ್ದು ಓಡಬೇಕು ಹತ್ತು ಸುತ್ತು ತಿರುಗಬೇಕು
ಎಳೆಯ ಮನವ ಹಳೆಯ ತನುವ ಒಟ್ಟಿನಲ್ಲಿ ಪಡೆಯಬೇಕು
ಇಂದು ಎಂದ ನಾಳೆ ನನಗೆ ಎಂದೆಂದಿನ ನಾಳೆಯಾಗಿ
ಹಳೆಯ ತನುವು ಎಳೆಯ ಮನವು ನಿನ್ನೆಯಲ್ಲೇ ಉಳಿದುಹೋಗಿ
ನನ್ನ ತನು ಅದು ನಡೆಯುವಾಗ
ತಾ ನಡೆಯುತಿಲ್ಲ ನಾ ನಡೆಸಬೇಕಲ್ಲ
-ಕಿಟ್ಟು
Nice
ಚೆನ್ನಾದ ಕವನ..ಧನ್ಯವಾದಗಳು ಸಾರ್
ಚಂದದ ಕವಿತೆ.
ಟೆಕ್ಕಿಗಳ ಮನದ ನೋವು ಕವನದಲ್ಲಿ ಚೆನ್ನಾಗಿ ಮೂಡಿಬಂದಿದೆ.
ಕಷ್ಟ ಟೆಕ್ಕಿ ಜೀವನ