‘ಜನಮೇಜಯ’ನ ಜಯ
ನಮ್ಮ ಪೂರ್ವಿಕ ಚರಿತ್ರೆಯನ್ನು ನಾವೊಮ್ಮೆ ಅವಲೋಕನ ಮಾಡಬೇಕು. ನಮ್ಮ ಹಿರಿಯರೆಲ್ಲ ಹೇಗಿದ್ದರು? ಯಾರು ಪರೋಪಕಾರ ಮಾಡಿದರು! ಸಮಾಜ ಮುಖಿಯಾದ ಕೆಲಸ ಯಾರಿಂದ ಮಾಡಲ್ಪಟ್ಟಿತು? ಯಾರಿಂದ ಕೆಟ್ಟ ಕೆಲಸಗಳಾಗಿ ಹೋಯಿತು? ಹೇಗೆ ಅದರ ದುಷ್ಪರಿಣಾಮಗಳೇನು? ಎಂದೆಲ್ಲ ನಾವು ತಿಳಿಯಬೇಕು. ಹಿರಿಯರ ಜೀವನದಲ್ಲೊಮ್ಮೆ ಕಣ್ಣಾಡಿಸಿದಾಗ ನಮಗೆ ಒಳ್ಳೆಯದು ಯಾವುದು? ಕೆಟ್ಟದು ಯಾವುದು? ಎಂಬುದು ತಿಳಿದು ಒಳ್ಳೆಯ ಮಾರ್ಗದರ್ಶನದಲ್ಲಿ ಮುನ್ನಡೆಯಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ‘ಕೇಳು ಜನಮೇಜಯ ಧರಿತ್ರೀ ಪಾಲ’ ಎಂದು ಪ್ರಾರಂಭಿಸಿ ಮಹಾಭಾರತದ (ಜನಮೇಜಯನ ಪೂರ್ವಿಕರ) ಕಥೆಯನ್ನು ಹೇಳುತ್ತಾನೆ. ‘ಪಂಚಮ ವೇದ’ವೆಂದು ಕರೆಯಲ್ಪಡುವ, ವ್ಯಾಸ ನಿರೂಪಿತವಾದ ಈ ಒಂದು ಪುಣ್ಯ ಕಥೆಯನ್ನು ಕೇಳಿದ ಜನಮೇಜಯನಿಗೆ ತನಗೊದಗಿದ ಕುಷ್ಠರೋಗವು ವಾಸಿಯಾಗುತ್ತದೆ. ಈ ಜನಮೇಜಯ ಯಾರು? ಕುಷ್ಠರೋಗ ಹೇಗೆ ಬಂತು?
ಮಹಾಭಾರತದ ಕಥೆಯಲ್ಲಿ ಅರ್ಜುನ-ಸುಭದ್ರೆಯರ ಮಗನೇ ಅಭಿಮನ್ಯು. ಈತನ ಮಗ ಪರೀಕ್ಷಿತ. (ಈತನ ಬಗ್ಗೆ ಇದೇ ಅಂಕಣದಲ್ಲಿ ಬರೆದಿದ್ದೆ). ಪರೀಕ್ಷಿತನ ಮಗನೇ ಜನಮೇಜಯ. ಈತನ ತಾಯಿ ಭದ್ರವತಿ, ಈಕೆಗೆ ‘ಇರಾವತಿ’ ಎಂಬ ಹೆಸರೂ ಇತ್ತು. ಕಾಶೀರಾಜನಾದ ಸುವರ್ಣವರ್ಮನ ಮಗಳಾದ ಪುಪ್ಪಮೆ ಈತನ ಮಡದಿ, ಶತಾನೀಕ ಮತ್ತು ಶಂಕುಕರ್ಣ ಇವನ ಮಕ್ಕಳು. ಶ್ರುತಸೇನ, ಉಗ್ರಸೇನ, ಭೀಮಸೇನರು ಜನಮೇಜಯನ ತಮ್ಮಂದಿರು. ಜನಮೇಜಯ ರಾಯನಿಗೆ ವೈಶಂಪಾಯನರು ಮಾತ್ರವಲ್ಲದೆ ವ್ಯಾಸರ ಇನ್ನೋರ್ವ ಶಿಷ್ಯರಾದ ಜೈಮಿನಿ ಮಹಾಮುನಿಗಳೂ ಮಹಾಭಾರತ ಕಥೆಯನ್ನು ಮತ್ತೊಮ್ಮೆ ಹೇಳುತ್ತಾರಂತೆ. ವೈಶಂಪಾಯನರು ಯಾವ ಸಂದರ್ಭದಲ್ಲಿ? ಜೈಮಿನಿ ಮುನಿಗಳು ಯಾವಾಗ ಹೇಳಿದರು ನೋಡೋಣ.
ಒಮ್ಮೆ ಪರೀಕ್ಷಿತನು ಬೇಟೆಯಾಡುತ್ತಾ ಅರಣ್ಯದಲ್ಲಿ ಸಂಚರಿಸುತ್ತಿರಲು ಅವನು ಗುರಿಯಿಟ್ಟ ಹರಿಣವೊಂದು ತಪ್ಪಿಸಿಕೊಂಡು ಹೋಯಿತು. ಆ ಜಿಂಕೆಯನ್ನು ಬೆನ್ನಟ್ಟುತ್ತಾ ಹೋಗುತ್ತಿದ್ದಾಗ ಒಂದೆಡೆ `ಶಮೀಕ’ ಋಷಿಯು ತಪಸ್ಸು ಮಾಡುತ್ತಿರುವುದು ರಾಜನಿಗೆ ಕಂಡಿತು. ‘ತಪ್ಪಿಸಿದ ಹರಿಣ ಎಲ್ಲಿ ಹೋಯಿತು ನೀನು ಕಂಡೆಯಾ?’ ಎಂದು ಮುನಿಯಲ್ಲಿ ವಿಚಾರಿಸಿದ ರಾಜ. ತನ್ನ ಪಂಚೇಂದ್ರಿಯಗಳನ್ನು ಸ್ವಾಧೀನದಲ್ಲಿರಿಸಿ ಕೊಂಡು ಧ್ಯಾನ ಮಾಡುತ್ತಿದ್ದ ಋಷಿಗೆ ಬೇರೆಯವರ ಪ್ರಶ್ನೆ ಕಿವಿಗೆ ಬೀಳುತ್ತದೆಯೇ? ಇಲ್ಲ. ಸುಮ್ಮನೆ ತಪಸ್ಸು ಮಾಡುತ್ತಿದ್ದ ಮನಿಯನ್ನು ಮತ್ತೊಮ್ಮೆ ಕೇಳಲಾಗಿ ಆಗಲೂ ಉತ್ತರವಿಲ್ಲ.
‘ವಿನಾಶಕಾಲೇ ವಿಪರೀತ ಬುದ್ದಿ’ ಎನ್ನುವಂತೆ ಈ ಸಂದರ್ಭದಲ್ಲಿ ರಾಜನಿಗೆ ಕುಚೇಷ್ಟೆ ಮಾಡುವ ಮನಸ್ಸಾಯಿತು. ಅಲ್ಲೆಲ್ಲೋ ಒಂದು ಹಾವು ಸತ್ತು ಬಿದ್ದಿರುವುದನ್ನು ಕಂಡಿದ್ದ. ಅದನ್ನು ಒಂದು ಕೋಲಿನಿಂದ ಎಳೆದು ತಂದು ಮುನಿಯ ಕೊರಳಿಗೆ ಹಾಕಿ ಹೊರಟು ಹೋದ. ಸ್ವಲ್ಪದರಲ್ಲೇ ಮುನಿಯ ಮಗನಾದ ಶೃಂಗಿಯು ಆಶ್ರಮದಿಂದ ಬಂದು ನೋಡುತ್ತಾನೆ! ಏಕೋಧ್ಯಾನದಿಂದ ತಪಸ್ಸು ಮಾಡುತ್ತಿರುವ ತನ್ನ ತಂದೆಯ ಕೊರಳಲ್ಲಿ ಸತ್ತ ಹಾವು! ಅಸಾಧ್ಯ ಕೋಪದಿಂದ ಶೃಂಗಿಯು ನನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿದ ರಾಜನು ಏಳು ದಿನದೊಳಗೆ ತಕ್ಷಕನೆಂಬ ಸರ್ಪಕಡ್ಡಿ ಸಾಯಲಿ!
ಎಂದು ಶಾಪ ಕೊಡುತ್ತಾನೆ. ಎಷ್ಟೋ ಹೊತ್ತಿನ ಮೇಲೆ ಧ್ಯಾನದಿಂದ ಹೊರಬಂದ ಶಮೀಕ ಋಷಿಗೆ ತನ್ನ ಮಗನಿಂದ ವಿಷಯ ತಿಳಿಯುತ್ತದೆ, ಅರಿಷಡ್ವರ್ಗವನ್ನು ಗೆದ್ದ ಮುನಿಗೆ, ಮಗನ ಮುಂಗೋಪದ ತೀರ್ಮಾನ ಸರಿಕಾಣಲಿಲ್ಲ. ತನ್ನ ಶಿಷ್ಯರಲ್ಲಿ ಒಬ್ಬನನ್ನು ಕರೆದು ರಾಜನ ಆಸ್ಥಾನಕ್ಕೆ ಹೋಗಿ ವಿಷಯ ತಿಳಿಸಿ ಬಾ ಎಂದು ಕಳುಹಿಸುತ್ತಾನೆ.
ವಿಷಯ ತಿಳಿದ ರಾಜ ಚಿಂತಾಕ್ರಾಂತನಾದ. ತನ್ನಿಂದ ಆಚಾತುರ್ಯವಾಗಿದೆ. ಇದಕ್ಕೇನು ಮಾಡುವುದು? ಒಂದು ಕಂಬದ ಮೇಲೆ ಮಂದಿರವನ್ನು ನಿರ್ಮಿಸಿ ಅದರಲ್ಲಿದ್ದು ಸುತ್ತಲೂ ವೈದ್ಯರನ್ನು, ಮಾಂತ್ರಿಕರನ್ನು, ಕಾವಲುಗಾರರನ್ನು ನೇಮಿಸುತ್ತಾನೆ. ಒಂದು, ಎರಡು, ಮೂರು ಹೀಗೆ ಆರು ದಿನಗಳು ಸರಿದು ಏಳನೇ ದಿನದ ಸಂಜೆಯೂ ಬಂತು. ಇನ್ನೇನು ಅಪಾಯ ತಪ್ಪಿತು ಎಂದು ಸಂತೋಷದಲ್ಲಿದ್ದ ರಾಜ . ಕೆಲವು ಸರ್ಪಗಳ ಅಪೇಕ್ಷೆಯಂತೆ ಅತಿಥಿರೂಪದಲ್ಲಿದ್ದ ತಕ್ಷಕನು, ಅವನು ಕೊಂಡೊಯ್ದ ಹಣ್ಣಿನಲ್ಲಿ ಒಂದು ಕ್ರಿಮಿಯಾಗಿಯೂ ಬಂದನು. ಪರೀಕ್ಷಿತನು ಹಣ್ಣನ್ನು ತೆಗೆದು ಕೈಯಲ್ಲಿ ಹಿಡಿಯುತ್ತಿದ್ದಂತೆ ಕ್ರಿಮಿಯು ತನ್ನ ಸರ್ಪದ ರೂಪ ತಾಳಿ ರಾಜನನ್ನು ಕಚ್ಚಿ ಕೊಂದೇ ಬಿಟ್ಟಿತು.
ಕಾಲಕ್ರಮೇಣ ಬಾಲಕನಾಗಿದ್ದವ ಜನಮೇಜಯ ಯುವರಾಜನಾಗಿ ಪಟ್ಟಕ್ಕೆ ಬಂದ. ತನ್ನ ತಂದೆಗೆ ತಕ್ಷಕನೆಂಬ ಸರ್ಪದಿಂದ ಮರಣ ಬಂತೆಂದು ತಿಳಿದ ಜನಮೇಜಯನಿಗೆ ಪ್ರತೀಕಾರ ಮಾಡುವ ಸೇಡು ಹುಟ್ಟಿಕೊಂಡು ಸರ್ಪಕುಲವನ್ನೇ ನಾಶಮಾಡುವ ಸಲುವಾಗಿ ಸರ್ಪದ್ವರವೆಂಬ ಯಜ್ಞವನ್ನು ಕೈಗೊಳ್ಳುತ್ತಾನೆ. ಈ ಸರ್ಪಯಾಗದಿಂದಾಗಿ ಜನಮೇಜಯನಿಗೆ ಕುಷ್ಠರೋಗ ತಗುಲುತ್ತದೆ. ಇದನ್ನರಿತ ವ್ಯಾಸ ಮಹರ್ಷಿಯು ತನ್ನ ಶಿಷ್ಯನಾದ ವೈಶಂಪಾಯನ ಮುನಿಯಿಂದ ಮಹಾಭಾರತ ಕಥೆಯನ್ನು ಹೇಳಿಸುತ್ತಾನೆ. ಮಹಾಭಾರತ ಕಥೆಯನ್ನು ಸವಿಸ್ತಾರವಾಗಿ ಕೆಲವು ದಿನಗಳ ಪರ್ಯಂತ ಆಲಿಸಿದ ಜನಮೇಜಯನು ತನ್ನ ರೋಗವನ್ನು ಹಿಮ್ಮೆಟ್ಟಿಸುವಲ್ಲಿ ಜಯ ಸಾಧಿಸುತ್ತಾನೆ. ಕಾರಣ, ಮಹಾಭಾರತಕ್ಕೆ ‘ಜಯ’ ಎಂಬ ಹೆಸರೂ ಇದೆ. ಜನಮೇಜಯನಲ್ಲಿದ್ದ ರೋಗವು ವಾಸಿಯಾಯಿತಾದರೂ ಲೇಶ ಭಾಗ ಉಳಿಯುತ್ತದೆ.
ಪುನಃ ಚಿಂತಿಸಿದ ವ್ಯಾಸರು ತಮ್ಮ ಮತ್ತೋರ್ವ ಶಿಷ್ಯನಾದ ಜೈಮಿನಿ ಮುನಿಯಿಂದ ಮಹಾಭಾರತ ಕಥೆಯನ್ನು ಹೇಳಿಸುತ್ತಾನೆ. ಈಗ ಜನಮೇಜಯನಲ್ಲಿದ್ದ ಕುಷ್ಠರೋಗ ಸಂಪೂರ್ಣ ವಾಸಿಯಾಗುತ್ತದೆ. ಮುಂದೆ ಯಾವುದೇ ಸೋಲಿನಲ್ಲಿ, ಚಿಂತೆಯಲ್ಲಿ, ರೋಗದಿಂದ ಬಳಲುತ್ತಿದ್ದವರು ಮಹಾಭಾರತ ಕಥೆಯನ್ನು ಭಕ್ತಿಯಿಟ್ಟು ಕೇಳಿದಲ್ಲಿ ಪಠಿಸಿದಲ್ಲಿ ಇಷ್ಟಾರ್ಥದಲ್ಲಿ ಜಯ ಸಾಧಿಸುತ್ತಾರೆ ಎಂಬ ನಂಬಿಕೆ ಹುಟ್ಟಿಕೊಂಡಿತು.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಅಡ್ಮಿನ್ ಹೇಮಮಾಲ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.
Very nice
ಎಂದಿನಂತೆ.. ಪೌರಾಣಿಕ ಕಥೆಯಲ್ಲಿ ಈ ಸಾರಿ ಜನಮೇಜಯ ಕಥೆ ಮತ್ತೊಂದು ಸಾರಿ ಮನದಟ್ಟಾಗುವಂತೆ ಮಾಡಿದ ವಿಜಯಾಮೇಡಂಗೆ ಧನ್ಯವಾದಗಳು
ಪೌರಾಣಿಕ ಕಥೆಗಳನ್ನು ಓದುವುದೇ ಒಂದು ಭಾಗ್ಯ…..ಎಷ್ಟೋ ವಿಚಾರಗಳು ಗೊತ್ತಿರಲಿಲ್ಲ…… ಬಹಳ ಆಸಕ್ತಿ ಮೂಡಿಸಿದ ಬರಹ. ಧನ್ಯವಾದಗಳು ತಲುಪಿಸಿದ ವಿಜಯಾ ಸುಬ್ರಹ್ಮಣ್ಯ ಮೇಡಂ ಗೆ
ಪೌರಾಣಿಕ ಮಾಹಿತಿಗಳನ್ನು ತಿಳಿಸಿಕೊಡುವ ಸುಂದರ ಕಥೆ.
ಉತ್ತಮ ಸಂದೇಶಯುಕ್ತ ಪೌರಾಣಿಕ ಕಥೆಗಳು ಸದಾ ನಮಗೆ ದಾರಿದೀಪ..ಧನ್ಯವಾದಗಳು ವಿಜಯಕ್ಕ.