ಅಗ್ನಿಯಾದ ಅಂಗೀರಸ
ಸೃಷ್ಟಿಕರ್ತ ಪರಬ್ರಹ್ಮ ಪಂಚಭೂತಗಳನ್ನು ಸೃಷ್ಟಿಸಿ ಅವುಗಳಿಗೆ ಒಂದೊಂದು ಕೆಲಸವನ್ನೂ ನಿಯಮಿಸಿರುತ್ತಾನೆ.ಒಂದು ವೇಳೆ ಯಾವುದೋ ನಿಮಿತ್ತ ಮಾತ್ರದಿಂದ ಅವುಗಳಲ್ಲಿ ಯಾರಾದರೂ ತಮ್ಮ ಕೆಲಸಕ್ಕೆ ಚ್ಯುತಿ ಮಾಡಿದರೆ…? ಬ್ರಹ್ಮನು ಅದಕ್ಕೆ ಬದಲೀ ವ್ಯವಸ್ಥೆ ಮಾಡಬೇಕು ತಾನೇ?.ಆಫೀಸು ಕೆಲಸಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬರು ರಜೆಹಾಕಿದರೆ; ಮೇಲಿನ ವ್ಯವಸ್ಥಾಪಕರು ಆ ಕೆಲಸಕ್ಕೆ ಬೇರೊಬ್ಬರನ್ನು ನೇಮಿಸಬೇಡವೇ? ಹೀಗೇ ಆಯಿತು.
ಒಮ್ಮೆ ದೇವತೆಗಳು ಹವಿರ್ಭಾಗ ಕೊಡಲಿಲ್ಲವೆಂದೋ ಅವರ ಮೇಲಿನ ಸಿಟ್ಟಿನಲ್ಲಿ ಅಗ್ನಿಯು ತನಗೆ ವಹಿಸಿಟ್ಟ ಕೆಲಸವನ್ನು ಮಾಡದೆ ಬೇರೆಲ್ಲೋ ಅಡಗಿ ಕುಳಿತನಂತೆ. ಸರಿ, ವಿಷ್ಣು ಮಹೇಶ್ವರಾದಿಯಾಗಿ ದೇವತೆಗಳಿಂದ ಬ್ರಹ್ಮನಿಗೆ ದೂರು ಹೋಯಿತು. ಇಂತಹ ಪರಿಸ್ಥಿತಿಯಲ್ಲಿ ಬ್ರಹ್ಮನಿಗೆ ಬದಲಿ ವ್ಯವಸ್ಥೆ ಮಾಡದೆ ಇರುವುದಕ್ಕಾಗುತ್ತದೆಯೇ? ಅಗ್ನಿಯಿಲ್ಲದೆ ಲೋಕ ನಡೆದೀತೇ? ಬ್ರಹ್ಮನು ಯೋಚಿಸಿದ.ಅಗ್ನಿಯನ್ನು ಕಂಡುಹುಡುಕಿದವನಾದರೋ ಅಂಗೀರಸ.ಅಗ್ನಿಯ ಸಿಟ್ಟು ಶಮನವಾಗುವ ತನಕ “ನೀನು ಅಗ್ನಿಯಾಗಬೇಕೆಂದು ಅಂಗೀರಸನಿಗೆ ಬ್ರಹ್ಮ ಅಪ್ಪಣೆ ಮಾಡಿದ. ಈ ಅಂಗೀರಸ ಮುನಿ ಯಾರು? ಇವನ ಹುಟ್ಟು ಹೇಗೆ ಎಂಬುದನ್ನು ತಿಳಿಯೋಣ.
ಅಂಗೀರಸ ಬ್ರಹ್ಮನ ಮಾನಸ ಪುತ್ರ. ಒಮ್ಮೆ ರುದ್ರಜಪ ಮಾಡುತ್ತಿದ್ದಾಗ ಬ್ರಹ್ಮನ ರೇತಸ್ಸು ಜಾರಿತು. ಇದಕ್ಕೆ ಜೀವಕೊಟ್ಟು ಬ್ರಹ್ಮ ಪೋಷಿಸಿದ.ಈತನೇ ಅಂಗೀರಸ. ಮುಂದೆ ಇವನು ಬ್ರಹ್ಮರ್ಷಿ ಎನಿಸುತ್ತಾನೆ. ಈತನ ಪತ್ನಿಯ ಹೆಸರು ವಸುಧಾ. ಇವನಿಗೆ ಕರ್ದಮ ಪ್ರಜಾಪತಿಯ ಮಗಳಾದ ‘ಶ್ರದ್ಧೆ’ ಎಂಬ ಇನ್ನೊಬ್ಬ ಪತ್ನಿಯೂ ಇದ್ದಳು. ದೇವಗುರುಗಳಾದ ಬೃಹಸ್ಪತಾಚಾರ್ಯರು ಇವರ ಪುತ್ರ.
ಬೃಹಸ್ಪತಿಯನ್ನು ಇವರು ಬೃಹತ್ ಕೀರ್ತಿ, ಬೃಹತ್ ಜ್ಯೋತಿ,ಬೃಹತ್ ಬ್ರಹ್ಮ, ಬೃಹತ್ ನ್ಮನ,ಬೃಹನ್ಮಂತ್ರ,ಬೃಹದ್ದಾಸ ಮೊದಲಾದ ಆರು ವಿಶೇಷ ಹೆಸರುಗಳಿಂದ ಕರೆದಿದ್ದಾರೆ ಎಂದು ಹೇಳಲಾಗುತ್ತದೆ. ಅಂಗೀರಸನಿಗೆ ಭಾನುಮತಿ, ರಾಕಾ, ಸೀನಿವಾಲಿ, ಏಕಾನೇಕಾ, ಅರ್ಚಿಸ್ಮತಿ, ಹಿಷ್ಮತಿ, ಮಹಾಮತಿ ಎಂಬ ಏಳುಮಂದಿ ಹೆಣ್ಣು ಮಕ್ಕಳೂ ಇದ್ದರು ಎಂದು ತಿಳಿದು ಬರುತ್ತದೆ.
ಅಂಗೀರಸನಿಗೆ ಆತ್ರಿ,ಮರೀಚಿ,ಪುಲಸ್ಯ,ಪುಲಹ,ಕ್ರತು ಎಂಬೀ ಸಹೋದರರಿದ್ದರು. ಅರ್ಥಾತ್ ಬ್ರಹ್ಮನ ಮಾನಸ ಪುತ್ರರು.
ಅಂಗೀರಸನು ಗೋತ್ರ ಪ್ರವರ್ತಕನೂ ಹೌದು. ಸಂವತ್ಸರಗಳ ಯಾದಿಯಲ್ಲೂ ಅಂಗೀರಸನ ಹೆಸರು ಬರುತ್ತದೆ.
-ವಿಜಯಾಸುಬ್ರಹ್ಮಣ್ಯ ಕುಂಬಳೆ
ಅಡ್ಮಿನ್ ಹೇಮಮಾಲಾ ಹಾಗೂ ಓದುಗರಿಗೆ ಕೃತಜ್ಞತೆಗಳು.
ಚೆನ್ನಾಗಿದೆ. ತಿಳಿದಿರದ ಹೊಸ ವಿಚಾರ.
ಪುರಾಣಕಥೆಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡುವ ನಿಮಗೆ ಇದೋ ನಿಮಗೆ ನಮನಗಳು
ಪುರಾಣದಲ್ಲಿ ಅಂಗೀರಸನ ಪಾತ್ರ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
ಅಂಗೀರಸ ಮಹರ್ಷಿಯು ಅಗ್ನಿಯ ಕೆಲಸ ವಹಿಸಿಕೊಂಡ ಕಥೆ ವಿಶೇಷವೇ ಹೌದು.