ಪುಸ್ತಕ ಪರಿಚಯ: ‘ಅಪರಾಧಿ ನಾನಲ್ಲ’- ಲೇಖಕಿ: ಶ್ರೀಮತಿ ಆಶಾಕಿರಣ್ ಎಂ
ಶ್ರೀಮತಿ ಆಶಾಕಿರಣ್ ಎಂ ಇವರು ಬೇಲೂರಿನವರು. ವೃತ್ತಿಯಲ್ಲಿ ಶಿಕ್ಷಕರು. ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆ ಇವರ ನೆಚ್ಚಿನ ಹವ್ಯಾಸಗಳು. ಇವರ ಚೊಚ್ಚಲ ಕೃತಿ ʼಸುಮುಖ ಕಲಾʼ ಒಂದು ಕವನ ಸಂಕಲನ. ಇವರ ಎರಡನೇ ಕೃತಿಯೇ ‘ಅಪರಾಧಿ ನಾನಲ್ಲ’ ಎಂಬ ಕಿರು ಕಾದಂಬರಿ. ಇದನ್ನು ಒಂದೇಓದಿಗೆ ಓದಿ ಮುಗಿಸಬಹುದಾದ ದೀರ್ಘ ಕತೆಯೆಂದರೂ ಒಪ್ಪುತ್ತದೆ. ಹಾಗೆ ಒಂದೇ ಓದಿಗೆ ಓದಿಸಿಕೊಳ್ಳುವ ಸತ್ವವೂ ಇದರಲ್ಲಿದೆ. ಸಾಮಾಜಿಕ ಕಾದಂಬರಿಯಾಗಿ ಪ್ರಾರಂಭವಾಗುವ ʼಅಪರಾಧಿ ನಾನಲ್ಲʼ ಕೊನೆಕೊನೆಗೆ ಪತ್ತೇದಾರಿ ಕಾದಂಬರಿಯಾಗಿ ಬೆಳೆಯುತ್ತದ್ದಾದರೂ, ಈ ಕಾದಂಬರಿಯ ಸಾಮಾಜಿಕ ದೃಷ್ಠಿಕೋನ ನಮ್ಮನ್ನು ಹೆಚ್ಚು ಆಕರ್ಷಿಸುತ್ತದೆ.
ಕಾದಂಬರಿಯ ಪಾತ್ರ, ಸನ್ನಿವೇಷಗಳ ಮೂಲಕ ಶ್ರೀಮತಿ ಆಶಾಕಿರಣ್ ರವರು ಆಧುನಿಕತೆಗೆ ತೆರೆದುಕೊಂಡ ಗ್ರಾಮ ಜೀವನಗಳು ವಿಕಾಸದತ್ತ ಮುಂದುವರೆಯುತ್ತಿರುವ ಚಿತ್ರಣವನ್ನು, ನವಯುಗದ ತರುಣ ತರುಣಿಯರ ಪ್ರೀತಿ – ಪ್ರೇಮ, ಸರಸ – ವಿರಸಗಳನ್ನು ಹಾಗೂ ಕ್ಷುಲ್ಲಕ ಕಾರಣಗಳಿಗೆ ಪ್ರಾಣಹಾನಿಯಂತಹ ಭೀಕರ ಕೃತ್ಯಗಳಿಗೆ ಮುಂದಾಗುವ ಯುವ ಜನಾಂಗದ ಅವಿವೇಕವನ್ನು ಸಮರ್ಥವಾಗಿ ಓದುಗರ ಮುಂದಿಡುವ ಪ್ರಯತ್ನವನ್ನು ಮಾಡಿದ್ದಾರೆ.
ಇಲ್ಲಿನ ಕತೆಯೆಲ್ಲವೂ ಬೆಂಗಳೂರು ಮತ್ತು ಬನದೂರುಗಳ ನಡುವೆಯೇ ನಡೆಯುವಂತದ್ದು. ನೈಜವಾದ ಕತೆ ಪ್ರಾರಂಭವಾಗುವುದು ಸಹನಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಬನದೂರಿನಿಂದ ಬೆಂಗಳೂರಿಗೆ ಬರುವಲ್ಲಿಂದ. ಅವಿನಾಷ್ ಈ ಕತೆಯ ಹೀರೋ ಆಗಿ ಕಂಡರೂ ಸಹನಳದ್ದೇ ಇಲ್ಲಿ ಪ್ರಮುಖ ಪಾತ್ರ. ಇದೊಂದು ಸ್ತ್ರೀ ಪಾತ್ರ ಕೇಂದ್ರಿತ ಕಾದಂಬರಿ ಎಂದರೆ ತಪ್ಪಾಗಲಾರದು. ಇಲ್ಲಿನ ಪ್ರತಿನಾಯಕ ಮತ್ತು ಕಳನಾಯಕ ಪಾತ್ರಗಳು ಮಹಿಳೆಯರದ್ದೇ ಆದರೂ ವಿಭಿನ್ನ ಪಾತ್ರಗಳು ಹಾಗು ವಿಶಿಷ್ಟ ಕಥಾಹಂದರ ಈ ಕೃತಿಯಲ್ಲಿದೆ. ಪ್ರಾರಂಭದಲ್ಲಿ ಸಹನಳನ್ನು ಕಾಡುವ ಸೀಮಾ ಮುಂದೆ ಮನಃಪರಿವರ್ತನೆಗೊಂಡು ಸಹನಳೊಂದಿಗೆ ಸ್ನೇಹ ಬೆಳೆಸುತ್ತಾಳೆ. ಆದರೆ, ರಂಜನಿಯ ಮೇಲಿನ ದ್ವೇಷದಿಂದ ಆಕೆಯನ್ನು ಕೊಲೆ ಮಾಡಲು ಪ್ರಯತ್ನಿಸುವ ಸುಜಾತ ಕೊನೆಗೆ ತಾನೇ ಕೊಲೆಯಾಗುವುದು ದುರಂತ. ಸೀಮಾ ಮತ್ತು ರಂಜನಿಯ ಪಾತ್ರಗಳನ್ನು ಖಳ ನಾಯಕಿ ಪಾತ್ರಗಳೆಂದು ಗುರುತಿಸುವುದೂ ಸಹ ಕಷ್ಟವೇ.
ಅವಿನಾಷನ ತಾಯಿಯಾದ ಕವಿತ, ಮನೆಯ ನಿಸ್ವಾರ್ಥ ಕೆಲಸಗಾರ ತಿಮ್ಮ, ಸಹನಳಿಗೆ ಸದಾ ಆಸರೆಯಾಗಿದ್ದು ಸುಹಾಸನ ಪ್ರೀತಿಗಾಗಿ ಹಂಬಲಿಸುತ್ತಾ ಹಲವು ತೊಂದರೆಗಳನ್ನು ಅನುಭವಿಸುವ ರಂಜನಿ ಇವರೆಲ್ಲರೂ ಅವರವರ ಕತೆಗಳಲ್ಲಿ ಅವರೇ ನಾಯಕ ನಾಯಕಿಯರು. ಅವಿನಾಶನ ತಾಯಿ ಕವಿತಳ ವೃತ್ತಾಂತ ಎಂಥಹ ಓದುಗನನ್ನು ಒಂದು ಕ್ಷಣ ನಿಂತು ಯೋಚಿಸುವಂತೆ, ಕಣ್ಣಾಲಿಗಳು ತೇವವಾಗುವಂತೆ ಮಾಡುತ್ತದೆ. ಅವಿನಾಷನ ತಾಯಿ ಕವಿತ ತಾನು ಎಲ್ಲಾ ಕಳೆದುಕೊಂಡು ಮೋಸಹೋಗಿ, ಅದಕ್ಕೆ ಪ್ರತಿಕಾರವೋ ಎಂಬಂತೆ ಮತ್ತೆ ಪುಟಿದು ನಿಲ್ಲುವುದು ನಮಗೆಲ್ಲ ಮಾದರಿ. ಹಲವು ಭಾಷಣ-ಘೋಷಣೆಗಳು ಮಾಡಲಾರದ ಮಾನಸಿಕ ಪರಿವರ್ತನೆಯನ್ನು ತಣ್ಣಗೆ ಮಾಡಬಲ್ಲ ಶಕ್ತಿ ಈ ಪಾತ್ರಕ್ಕಿದೆ.
ಕಾದಂಬರಿಯಲ್ಲಿ ನಾವು ಗುರುತಿಸಬಹುದಾದ ಮತ್ತೊಂದು ಪ್ರಮುಖ ಅಂಶ ಕಾದಂಬರಿಯ ಪೋಷಕ ಪಾತ್ರಗಳು ತೋರಿಸುವ ಪ್ರಬುದ್ಧತೆ ಮತ್ತು ಮುಕ್ತತೆ. ಅವಿನಾಶನ ಮನೆಗೆ ಬೇಟಿ ನೀಡಿದ ರಂಜನಿ ಮತ್ತು ಸಹನರನ್ನು ಅವಿನಾಶನ ತಾಯಿ ಕವಿತ ಬಹಳ ಪ್ರೀತಿಯಿಂದ ಸ್ವಾಗತಿಸಿ ಆದಿನ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ನೀಡುತ್ತಾಳೆ. ಇನ್ನು ಸ್ನೇಹಿತರೊಡನೆ ಬನದೂರಿಗೆ ಹೋಗಬೇಕಾದ ಸಂದರ್ಭದಲ್ಲಿಯೂ ಕವಿತಳ ಈ ಮುಕ್ತತೆ ನಮಗೆ ವಿಶೇಷವೆನಿಸುತ್ತದೆ. ಸೀಮಾಳ ತಂದೆಯೂ ಮಗಳನ್ನು ಸಂತೋಷವಾಗಿ ಬನದೂರಿಗೆ ಕಳುಹಿಸಿ ಕೊಡುತ್ತಾನೆ. ಬನದೂರಿನಲ್ಲಿಯೂ ಇದೇ ರೀತಿಯ ಮುಕ್ತ ವಾತಾವರಣ.
ಗಂಡು ಮಕ್ಕಳು, ಹೆಣ್ಣು ಮಕ್ಕಳೆಂಬ ಬೇಧವಿಲ್ಲ. ಮಕ್ಕಳೆಲ್ಲರೂ ಮಕ್ಕಳೇ. ಶಿವಶಂಕರಪ್ಪನ ಮನೆಯಲ್ಲಿ ಮಕ್ಕಳಾದ ಸಹನ ಮತ್ತು ಸುಹಾಸನಿಗಿರುವಷ್ಠೇ ಸ್ವತಂತ್ರ ಮನೆಯ ಕೆಲಸಗಾರ ತಿಮ್ಮನಿಗೂ ಇದೆ. ಹಾಗೇ ನೋಡಿದರೆ ಎಂದೂ ತಿಮ್ಮನನ್ನು ಅವರು ಕೆಲಸದವನೆಂದು ಭಾವಿಸಿದ್ದೇ ಇಲ್ಲ. ಕಾದಂಬರಿಯ ಕೊನೆಯ ಭಾಗದಲ್ಲಿಯೂ ಮಕ್ಕಳು ತಾವು ಪ್ರೀತಿಸಿದವರನ್ನು ವಿವಾಹವಾಗಲು ಬಯಸಿದಾಗ ಅವರ ಪೂಷಕರು ಬಹಳ ಮುಕ್ತ ಮನಸ್ಸಿನಿಂದ ಅದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಬದಲಾದ ಕಾಲ – ದೇಶಗಳಿಗೆ ಅನುಗುಣವಾಗಿ ತಂದೆ ತಾಯಿಗಳು ತೋರಬೇಕಾದ ಪ್ರಬುದ್ಧತೆಗೂ ಇದೊಂದು ಉತ್ತಮ ಮಾದರಿ.
ಇಂದಿನ ಸಮಾಜದಲ್ಲಿ ಕುಲ, ಜಾತಿ, ಅಂತಸ್ತುಗಳ ಹೆಸರಿನಲ್ಲಿ ಹೊಡೆದಾಡುವ, ಜಾತಿ ಪ್ರತಿಷ್ಠೆಗಾಗಿ ಹೆತ್ತ ಮಕ್ಕಳನ್ನೇ ಹೊಡೆದು ಸಾಯಿಸುವ ಪ್ರವೃತ್ತಿಯ ಪೋಷಕರನ್ನು ನಾವು ನೋಡುತ್ತೇವೆ. ಇಂತಹ ಸತ್ವಹೀನವಾದ ಜಾತಿ ಹಾಗೂ ಅಂತಸ್ತುಗಳ ಪ್ರತಿಷ್ಠೆಗೆ ಕೊಡಲಿ ಪೆಟ್ಟು ನೀಡುವ ಮತ್ತು ಅವುಗಳ ನಿಸ್ಸಾರತೆಯನ್ನು ಹೇಳುವ ಕೆಲಸವನ್ನು ಈ ಕಾದಂಬರಿ ಬಹಳ ತಣ್ಣಗಿನ ದ್ವನಿಯಲ್ಲಿ ಮತ್ತು ಅಷ್ಟೇ ಪ್ರಬಲವಾಗಿ ಮಾಡಿದೆ. ಸ್ನೇಹ, ಪ್ರೀತಿಗಳ ಮುಂದೆ ಜಾತಿ ಹಾಗೂ ಅಂತಸ್ತುಗಳ ಪ್ರಶ್ನೆ ಪುಸ್ತಕದುದ್ದಕ್ಕೂ ಎಲ್ಲಿಯೂ ಅಪ್ಪಿತಪ್ಪಿಯೂ ಸುಳಿಯುವುದಿಲ್ಲ. ಜಾತಿ ಹಾಗೂ ಅಂತಸ್ತುಗಳಿಗೆ ಕಾದಂಬರಿ ಯಾವ ವಿಶೇಷ ಮಾನ್ಯತೆಯನ್ನೂ ನೀಡುವುದಿಲ್ಲ. ನಿಜಕ್ಕೂ ಸಮಾಜಕ್ಕೆ ಇದೊಂದು ಮಾದರಿ ಹಾಗೂ ಉತ್ತಮವಾದ ಸಂದೇಶ.
ಓದುಗನಿಗೆ ಸುಲಭವಾಗಿ ಅರ್ಥವಾಗುವ ಭಾಷಾ ಗುಣ, ಆಪ್ತ ಎನಿಸುವ ಮತ್ತು ಕುತೂಹಲ ಕೆರಳಿಸುತ್ತಾ ಓದಿಸಿಕೊಂಡು ಹೋಗುವ ಕಥಾಹಂದರಗಳು, ಕತೆಯ ನೈಜತೆ ಮತ್ತು ಕಾದಂಬರಿಕಾರರಿಗೆ ಕತೆಯನ್ನು ಹೆಣೆಯುವಲ್ಲಿ ಇರುವ ಸ್ವಾತಂತ್ರ್ಯ ಹಾಗೂ ಕತೆಯು ಓದುಗನಲ್ಲಿ ಉಂಟುಮಾಡುವ ಸಂವೇದನೆ ಇವು ಯಾವುದೇ ರೀತಿಯ ಸಣ್ಣ ಕತೆ ಅಥವಾ ಕಾದಂಬರಿಗಳ ಜನಪ್ರಿಯತೆಯನ್ನು ಅಥವಾ ಕೃತಿಯ ಯಶಸ್ಸನ್ನು ನಿರ್ಧರಿಸುವ ಪ್ರಮುಖ ಅಂಶಗಳು ಎಂದು ಹೇಳಬಹುದು.
ಈ ದೃಷ್ಠಿಯಲ್ಲಿ ಗಮನಿಸಿದರೆ ಪ್ರಸ್ತುತ ಅಪರಾಧಿ ನಾನಲ್ಲ ಕೃತಿಯ ಭಾಷೆ ಹಾಗೂ ಸಂಭಾಷಣೆಗಳು ಸರಳವಾಗಿವೆ ಮತ್ತು ಬಹುಮಟ್ಟಿಗೆ ಓದುಗರೊಂದಿಗೆ ಆಪ್ತತೆಯನ್ನು ಸಾಧಿಸುವ ಪ್ರಯತ್ನ ಮಾಡಿವೆ. ಒಂದು ಮಟ್ಟದವರೆಗೆ ಓದುಗರ ಆಸಕ್ತಿಯನ್ನು ಕೆರಳಿಸಿ ಓದಿಸಿಕೊಳ್ಳುವ ಗುಣ ಹಾಗೂ ವಾಸ್ತವಿಕತೆಗೆ ಹತ್ತಿರವಾದ ಸನ್ನಿವೇಶಗಳು ಹಾಗೂ ಅಷ್ಟೇ ಮುಖ್ಯವಾಗಿ ಓದುಗನ ಸಂವೇದನೆಯನ್ನು ಜಾಗೃತಗೊಳಿಸುವ ಆಶಯವುಳ್ಳ “ಅಪರಾಧಿ ನಾನಲ್ಲ” ಕೃತಿ ಒಂದು ಯಶಸ್ವಿ ಕಾದಂಬರಿ ಎನಿಸಿಕೊಳ್ಳುವ ಎಲ್ಲ ಲಕ್ಷಣಗಳನ್ನು ಹೊಂದಿದೆ.
ಕೆಲವು ಕಡೆಗಳಲ್ಲಿ ಲೇಖಕರು ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಕತೆಗೆ ಇನ್ನು ಹೆಚ್ಚಿನ ನೈಜತೆಯ ಸ್ಪರ್ಶವನ್ನು ಕೊಡಬಹುದಿತ್ತು ಎನಿಸುತ್ತದೆ. ಕಾದಂಬರಿಯ ಕೊನೆ ಕೊನೆಗೆ ಬಂದ ಹಾಗೆ ಕಥೆಯು ಕೊಂಚ ಆತುರವಾಗಿ ಮುಗಿದುಹೋಯಿತು ಎಂದೂ ಎನಿಸುವುದುಂಟು. ಇದರೊಂದಿಗೆ, ಕಾದಂಬರಿಯ ಒಂದೆರಡು ಸನ್ನಿವೇಶಗಳ ಕಥಾ ನಿರೂಪಣೆಯಲ್ಲಿ ತಲೆದೊರಿರುವ ಕೊಂಚ ಮಟ್ಟದ ಕೃತಕತೆ, ಅಚ್ಚಿನ ದೋಷಗಳು, ಮುಖಪುಟ ವಿನ್ಯಾಸ ಇಂತಹ ವಿಚಾರಗಳ ಕುರಿತು ಹೆಚ್ಚಿನ ಗಮನ ಹರಿಸಬೇಕಿತ್ತು
ಎನಿಸುತ್ತದೆ. ಜಗತ್ತಿನಲ್ಲಿ ಯಾವುದೂ ಪರಿಪೂರ್ಣವಲ್ಲ. ಒಂದು ಮೌಲ್ಯಯುತವಾದ ಕಲಾಕೃತಿಗೆ ಹಲವು ವಿಶಿಷ್ಟ ಲಕ್ಷಣಗಳಿರುವಂತೆ ಅದರದ್ದೇ ಆದ ಮಿತಿಗಳೂ ಇರುತ್ತವೆ. ಮಿತಿಗಳು ಮಾತ್ರ ಇರುತ್ತವೆ, ವೈಫಲ್ಯವಲ್ಲ. ಇಂತಹ ಮಿತಿಗಳನ್ನು ಗುರುತಿಸಿಕೊಂಡು ಅವುಗಳನ್ನು ಮೀರುತ್ತಾ ನೈಜತೆಯೆಡೆಗೆ ಸಾಗುವುದರಿಂದ ನಮ್ಮ ಬರವಣಿಗೆ ಮತ್ತಷ್ಟು ತೀಕ್ಷ್ಣವಾಗುತ್ತಾ ಪ್ರಖರವಾಗುತ್ತಾ ಸಾಗುತ್ತದೆ. ಆದರೆ, ನಿರಂತರ ಕಲಿಕೆಯ ಹಂಬಲ ನಮಗಿರಬೇಕಷ್ಟೇ.
ಈ ಹಿನ್ನೆಲೆಯಲ್ಲಿ “ಅಪರಾಧಿ ನಾನಲ್ಲ” ಒಂದು ಯಶಸ್ವಿ ಕಾದಂಬರಿ. ಸಣ್ಣ ಪುಟ್ಟ ತಪ್ಪುಗಳಿದ್ದರೂ ಸಹ ಅವು ಕಥಾ ಸಂದರ್ಭಕ್ಕೆ ಮತ್ತು ಸಹೃದಯರ ಆಸ್ವಾದನೆಗೆ ಯಾವುದೇ ಭಂಗತರುವುದಿಲ್ಲ. ಸಾಹಿತ್ಯ ಪೋಷಕರು ಮತ್ತು ಸಹೃದಯಿಗಳು ಪುಸ್ತಕವನ್ನು ಕೊಂಡು ಓದಿ
ಪ್ರತಿಕ್ರಿಯಿಸಿ, ತಿದ್ದುವ ಮೂಲಕ ಬರಹಗಾರರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕೆಂದು ವಿನಂತಿ.
ಪುಸ್ತಕಗಳಿಗಾಗಿ ಸಂಪರ್ಕಿಸಿ: ಸ್ಪಂದನ ಸಿರಿ ಪ್ರಕಾಶನ, ಹಾಸನ. 9972125656
ನಮಸ್ಕಾರಗಳು.
– ಶ್ರೀ ವರುಣ್ ರಾಜ್ ಜಿ.
ವಿಚಾರ ಮಂಟಪ ಸಾಹಿತ್ಯ ಬಳಗ.
ಚೆನ್ನಾಗಿದೆ ಪುಸ್ತಕ ಪರಿಚಯ
ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ… ಧನ್ಯವಾದಗಳು ಮೇಡಂ.
ವಸ್ತುನಿಷ್ಟ ಪುಸ್ತಕ ಪರಿಚಯ ಆಪ್ತವಾಗಿ ಮೂಡಿ ಬಂದಿದೆ.
ವಿಮರ್ಶಾತ್ಮಕ ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ.
ಅಭಿನಂದನೆಗಳು ಮೇಡಂ