ವಾಟ್ಸಾಪ್ ಕಥೆ 6 : ಸಾರ್ಥಕತೆ.
ಒಂದು ಸುಂದರವಾದ ಹೂದೋಟವಿತ್ತು. ಅಲ್ಲಿ ಬಗೆಬಗೆಯ ಹೂಗಳು ಅರಳಿ ಸೊಗಸಾಗಿ ಕಾಣುತ್ತಿದ್ದವು. ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದವು.
ಆ ದಾರಿಯಲ್ಲಿ ಒಬ್ಬ ವ್ಯಾಪಾರಿ ಹಾದುಹೋದ. ಅವನು ಹೂಗಳನ್ನು ನೋಡಿದ. ಇವುಗಳನ್ನೆಲ್ಲ ಒಯ್ದು ಮಾರುಕಟ್ಟೆಯಲ್ಲಿ ಮಾರಿದರೆ ತುಂಬ ಲಾಭ ಸಿಗುತ್ತದೆ ಎಂದು ಆಲೋಚಿಸಿದನು.
ಒಬ್ಬ ರಾಜ ಕುದುರೆ ಸವಾರಿ ಮಾಡುತ್ತಾ ತೋಟದ ದಾರಿಯಲ್ಲಿ ಬಂದು ಹೂಗಳನ್ನು ನೋಡಿ ಆನಂದಿಸಿದ. ಈ ಸುಂದರ ಹೂಗಳನ್ನು ಕೊಂಡೊಯ್ದು ಅರಮನೆಯಲ್ಲಿ ಸಿಂಗಾರ ಮಾಡಿದರೆ ಎಷ್ಟು ಚಂದ ಎಂದು ಆಲೋಚಿಸಿದ.
ಒಬ್ಬ ಕವಿಯು ಅದೇ ಹಾದಿಯಲ್ಲಿ ನಡೆದುಬಂದ. ಅವನು ಬಹಳ ಹೊತ್ತು ಹೂಗಳ ಸೌಂದರ್ಯವನ್ನು ನೋಡುತ್ತಾ ಭಾವಪರವಶನಾದ. ಒಂದು ಸುಂದರವಾದ ಕವಿತೆ ರಚನೆಮಾಡಿ ತನ್ನ ಮನದ ಭಾವನೆಗಳನ್ನು ಪಡಿಮೂಡಿಸಿದ.
ಹೂಗಳನ್ನು ಮಾರಿ ಜೀವನ ನಡೆಸುವ ಹೂವಾಡಗಿತ್ತಿಯೊಬ್ಬಳು ಆ ದಾರಿಯಲ್ಲಿ ಬಂದಳು. ತರಹೆವಾರಿ ಹೂಗಳನ್ನು ನೋಡಿ ಸಂತೋಷಪಟ್ಟಳು. ಇವೆಲ್ಲವನ್ನೂ ಕೊಂಡೊಯ್ದು ಮಾಲೆ ಮಾಡಿ ಗ್ರಾಹಕರಿಗೆ ಮಾರಿದರೆ ತುಂಬ ಒಳ್ಳೆಯ ವ್ಯಾಪಾರವಾಗುತ್ತದೆ ಎಂದು ಯೋಚಿಸಿದಳು.
ಒಬ್ಬ ದೇವಾಲಯದ ಅರ್ಚಕರು ಅದೇ ದಾರಿಯಲ್ಲಿ ನಡೆದು ಬಂದರು. ಹೂಗಳನ್ನು ಕಂಡು ಎಷ್ಟು ಚೆನ್ನಾಗಿವೆ ಎಂದುಕೊಂಡರು. ಇವುಗಳನ್ನು ಕೊಂಡೊಯ್ದು ದೇವರ ಮೂರ್ತಿಗೆ ಅಲಂಕಾರ ಮಾಡಿದರೆ ತುಂಬ ಆಕರ್ಷಕವಾಗಿರುತ್ತದೆ. ಎಂದುಕೊಂಡರು.
ಇಷ್ಟೆಲ್ಲ ನಡೆಯುತ್ತಿದ್ದರೂ ಹೂಗಳು ಮಾತ್ರ ತಮ್ಮಷ್ಟಕ್ಕೆ ತಾವು ಅರಳಿ ನಿಂತು ಸುವಾಸನೆ ಬೀರುತ್ತಿದ್ದವು. ಅದು ಅವುಗಳ ನಿಗದಿತ ಕರ್ತವ್ಯವಾಗಿತ್ತು. ಅವುಗಳ ಜೀವಿತದ ಅವಧಿಯು ಅಲ್ಪ ಕಾಲ ಮಾತ್ರವೆಂಬುದು ಅವುಗಳಿಗೆ ಗೊತ್ತಿದ್ದರೂ ನಿಶ್ಚಿಂತೆಯಿಂದ ಇದ್ದವು.
ಹೂಗಳು ಅರಳಿ ನಿಂತಿದ್ದನ್ನು ನೋಡಿ ಬೇರೆಬೇರೆ ವ್ಯಕ್ತಿಗಳು ಭಿನ್ನವಾಗಿ ಆಲೋಚಿಸಿದರೂ ಹೂಗಳಿಗೆ ಅವರ ಅಭಿಪ್ರಾಯಗಳಿಂದ ಏನೂ ಪರಿಣಾಮವಾಗಲಿಲ್ಲ. ಹೀಗೇ ಸಮಾಜದಲ್ಲಿ ನಾವು ಹೇಗಿದ್ದರೂ ಅನೇಕರು ವಿಭಿನ್ನರೀತಿಯಲ್ಲಿ ಪರಿಗಣಿಸುತ್ತಾರೆ. ನಮ್ಮ ಬಗ್ಗೆ ಬೇರೆಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇದರಿಂದ ನಾವು ಕೂಡ ಹೂಗಳಂತೆ ನಿರ್ಲಿಪ್ತ ರೀತಿಯಿಂದ ನಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡುತ್ತಾ ಬದುಕಿನಲ್ಲಿ ಸಾರ್ಥಕತೆಯನ್ನು ಸಾಧಿಸಬೇಕು. ಇದಕ್ಕೆ ಹೂಗಳೇ ನಮಗೆ ಮಾದರಿಯಾಗಿವೆ.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಉತ್ತಮ ಸಂದೇಶವನ್ನೊಳಗೊಂಡ ಕಥೆ
ಹೌದು ಬದುಕು ಹೂವಿನಂತಿದ್ದರೆ ಎಷ್ಟು ಚಂದ
ಧನ್ಯವಾದಗಳು ನಯನ ಮೇಡಂ.. ಸ್ವಲ್ಪ ತೊಂದರೆ ಯಿಂದ ಕಥೆ ಗೆ ಪೂರಕ ಚಿತ್ರ ಬರಲಿಲ್ಲ…
ಹೂಗಳು ಹೊತ್ತು ತಂದ ಸುಂದರ ಸಂದೇಶಕ್ಕಾಗಿ ಕಥೆ ಇಷ್ಟವಾಯಿತು.
ಅರ್ಥಪೂರ್ಣ ಸಂದೇಶ. ತುಂಬಾ ಇಷ್ಟವಾಯಿತು.
ಸುಜಾತಾ ರವೀಶ್
ಹೂವಿನ ನಿಷ್ಕಾಮ ಕರ್ಮದ ಸುಂದರ ಸಂದೇಶವನ್ನು ಹೊತ್ತ ಕಥೆ ತುಂಬಾ ಚೆನ್ನಾಗಿದೆ… ಧನ್ಯವಾದಗಳು ನಾಗರತ್ನ ಮೇಡಂ
ಧನ್ಯವಾದಗಳು ಗಾಯತ್ರಿ ಮೇಡಂ, ಪದ್ಮಾಮೇಡಂ ಹಾಗೂ ಸುಜಾತಾ ಮೇಡಂ ಅವರುಗಳಿಗೆ
ಕಥೆ ಮಾದರಿಯಾಗಿದೆ.
ಧನ್ಯವಾದಗಳು ಪದ್ಮಿನಿ ಮೇಡಂ