ಅವರೆ ಹುಳು….
“ಅಮ್ಮಾ “….ಎಂದು ಕಿಟಾರನೆ ಕಿರುಚಿದ ಶಬ್ಧಕ್ಕೆ ಬೆಚ್ಚಿದ ಸುಗುಣ, ಟಿ ವಿ ನೋಡುತ್ತಾ, ಸೊಗಡಿನ ಅವರೆಕಾಯಿ ಸಿಪ್ಪೆ ಬಿಡಿಸುತ್ತಿದ್ದವಳು ಬೆಚ್ಚಿ ಹಿಂದಿರುಗಿ ನೋಡಿದಳು.
ನಾಲ್ಕು ವರ್ಷದ ಮಗಳು ಧನ್ವಿತ ಭಯದಿಂದ ನಡುಗುತ್ತಾ ನಿಂತಿದ್ದಳು. “ಏನಾಯಿತು ಪುಟ್ಟ “ಸುಗುಣ ಕೂಡಾ ಗಾಬರಿಯಿಂದ ಅವಳ ಮುಖ ನೋಡಿದಳು.
ಧನ್ವಿತಾಳ ಗಮನ ಅಮ್ಮನ ಸೀರೆಯಮೇಲೆ ಹಾವಿನ ಹೆಡೆಯಂತೆ ತಲೆಯೆತ್ತಿ ಹರಿಯುತ್ತಿದ್ದ ದಪ್ಪನೆಯ ಅವರೆಯ ಹುಳದ ಮೇಲಿತ್ತು. ಇನ್ನೇನು ಅದು ಸುಗುಣಾಳ ಹೊಟ್ಟೆಯ ಮೇಲೆ ಹತ್ತುವುದರಲ್ಲಿ ಇತ್ತು.. ನಡುಗುತ್ತಾ ಬೆರಳು ಮಾಡಿ ತೋರಿಸಿದ ಮಗುವಿನ ದೃಷ್ಟಿಯತ್ತ ಕಣ್ಣು ಹಾಯಿಸಿದ ಸುಗುಣ,” ಅಯ್ಯೋ ಇಷ್ಟಕ್ಕೇ ಚೀರಿಕೊಂಡು ಹೆದರಿದೆಯ…ಇದು ನಮಗೇನು ಮಾಡದು “ಎಂದು ಹಿಡಿದು ಪಕ್ಕದಲ್ಲಿ ಇದ್ದ ನೀರಿನ ಪಾತ್ರೆಗೆ ಹಾಕಿದಳು.
ನೀರಿನಲ್ಲಿ ಶವದಂತೆ ತೇಲುತ್ತಿದ್ದ ಹತ್ತು ಹದಿನೈದು ಹುಳುಗಳ ನಡುವೆ ಬದುಕಿ ಬರುವ ಸಾಹಸದಲ್ಲಿ ಸೋತು ಐದು ನಿಮಿಷದಲ್ಲಿ ಅದರ ಒದ್ದಾಟ ನಿಲ್ಲಿಸಿತು. ಅದೂ ಕೂಡಾ ತೇಲಲು ಪ್ರಾರಂಭಿಸಿತು.
ಈ ದೃಶ್ಯ ಪುಟ್ಟ ಧನ್ವಿತಾಳ ಮೇಲೆ ಅಗಾಧ ಪರಿಣಾಮ ಬೀರಿತು. “ಅಮ್ಮ, ಅವು ನಮಗೇನು ಮಾಡಲ್ಲ ಅಂತ ಹೇಳಿದೆ ತಾನೆ. ಆದರೇಕೆ ಅವುಗಳನ್ನು ಎತ್ತಿ ನೀರಿಗೆ ಹಾಕಿ ಕೊಲೆಮಾಡುತ್ತಿರುವೆ. ಪಾಪ ಅದು ಒದ್ದಾಡಿ ಒದ್ದಾಡಿ ಸತ್ತು ಹೋಯಿತು.
ಪಕ್ಕದ ಮನೆಯ ಪಾಪು ಕೂಡಾ ಏನೂ ತೊಂದರೆ ಕೊಟ್ಟಿರಲಿಲ್ಲ. ಅದೂ ಕೂಡಾ ಹೀಗೆ ನೀರಲಿ ಮುಳುಗಿ ಸತ್ತುಹೋಯಿತು. ಪೋಲಿಸ್ ಬಂದು ಅಂಕಲ್ ನ ಹಿಡಿದುಕೊಂಡು ಹೋದರು. ಇದನ್ನು ನೋಡಿದರೆ ನಿನ್ನ ಕೂಡಾ ಹಿಡಿದುಕೊಂಡು ಹೋಗುವರ……?”
‘ಆ ಮಗುವಿನ ಮಾತಿಗೆ ಬೆಚ್ಚಿಬೀಳುವ ಸರದಿ ಸುಗುಣಾದು. ಈ ಪುಟ್ಟ ಮಗುವಿನ ಮನಸ್ಸನ್ನು ನಾ ಹೇಗೆ ಸರಿಪಡಿಸಬೇಕು….ಹೇಗೆ ಸಮಜಾಯಿಷಿ ಕೊಡುವುದು ಎಂದುಕೊಂಡು ಮಗುವಿನ ಕೈ ಹಿಡಿದು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮುದ್ದು ಮಾಡುತ್ತಾ ” ನೋಡು ಚಿನ್ನ ನಮಗೆ ಈ ಅವರೆಕಾಳು ಬೇಕು ಹೌದಲ್ಲವೇ?”…..
‘ಗೋಣಾಡಿಸಿದ ಧನ್ವಿತ ” ಹೌದು ನನಗೆ ತುಂಬಾ ಇಷ್ಟ ಇವು” ಎಂದಳು.
‘”ಹಾಗಾದರೆ, ಈ ಅವರೆ ಹುಳುಗಳನ್ನು ಹಾಗೆ ಬಿಟ್ಟರೆ ಇಡೀ ಹೊಲದ ಕಾಳನ್ನು ತಿಂದು ಬಿಡುತ್ತೆ. ರೈತರು ಅವರೆಕಾಯಿ ಬೆಳೆಯೋದು ಯಾಕೆ?. ಜನರಿಗೆ ಮಾರಿ ಹಣ ಸಂಪಾದಿಸಲು. ಆ ಹಣದಿಂದ ಮನೆಗೆ ಬೇಕಾದ ಹಣ್ಣು,ತರಕಾರಿ ಕೊಂಡುಕೊಳ್ಳಲು , ಮಕ್ಕಳ ಓದು ಬರಹಕ್ಕೆ ಹಣಬೇಕು ಅಲ್ಲವ, ಅದನ್ನು ಹೊಂದಿಸಲು”..
” ಎಲ್ಲವನ್ನೂ ಪಾಪ ಅಂತ ಹುಳುವಿಗೆ ಬಿಟ್ಟರೆ ರೈತರು ದುಡ್ಡು ಸಂಪಾದಿಸುವುದು ಹೇಗೆ?” ..
‘ಅಷ್ಟಕ್ಕೂ ಈ ಹುಳುಗಳಿಂದ ಧಾನ್ಯಗಳು ಹಾಳಾಗುವುದೇ ಹೊರತು ಉಪಯೋಗ ಕಿಂಚಿತ್ತೂ ಇಲ್ಲ. ನೀನೇ ಹೇಳು ಈಗ ಈ ಹುಳುಗಳನ್ನು ಜೀವಸಹಿತ ಬಿಟ್ಟು ಮಾಡುವುದೇನು? ಈ ಹುಳುಗಳನ್ನು ಕೋಳಿ, ಗುಬ್ಬಿ,ಕಾಗೆ ಮತ್ತಿತರ ಪಕ್ಷಿಗಳು ತಿನ್ನುವವು”.
‘”ಪರಿಸರದಲ್ಲಿ ಆಹಾರದ ಸಮತೋಲನವನ್ನು ಕಾಪಾಡಲು ನಿಸರ್ಗವೇ ದಾರಿತೋರಿಸಿರುತ್ತದೆ. ಅದಕೆಲ್ಲಾ ನಾವು ಚಿಂತಿಸಬಾರದು. ಈಗ ಆಹಾರವಾಗಿ ಕುರಿ,ಕೋಳಿ ಆಡು, ಮೀನು ಸಾಕಾಣಿಕೆ ಮಾಡುವುದು ಯಾಕೆ?
‘ಅದನ್ನು ಆಹಾರವಾಗಿ ಸೇವನೆ ಮಾಡಲು …ವ್ಯಾಪಾರದಲ್ಲಿ ಹಣಗಳಿಸಲು. ಅವು ಜೀವಿಗಳು ಹೌದು… ಅವನ್ನು ಕೊಂದರೆ ಪಾಪ ಬರುತ್ತದೆ. ಆದರೆ ಆಹಾರದ ಸಮತೋಲನವನ್ನು ಕಾಪಾಡಿಕೊಂಡು ಹೋಗಲು ಇದು ಅನಿವಾರ್ಯ”.
‘”ಈ ಹುಳುವಿನಂತಹ ಜೀವಿಗಳನ್ನು ಸಾಕಿ ಏನು ಮಾಡುವುದಿದೆ ಹೇಳು?….. ಅದರಿಂದ ಏನಾದರೂ ಉಪಯೋಗ ಇದೆ ಅಂದರೆ ಮಾತ್ರ ಪ್ರಾಣಿಗಳನ್ನು ಸಾಕುವರು. ಅದು ಆಹಾರಕ್ಕೆ, ಹಣಗಳಿಕೆಗೆ, ಗೊಬ್ಬರಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಅವುಗಳನ್ನು ಸಾಕುವರು.
‘ಹಾಗಂತ ಪ್ರಾಣಿಸಂತತತಿ ಹೆಚ್ಚು ಆದರೂ ಕಷ್ಟ ನಮಗೆ ತಾನೆ. ಅದನ್ನು ನಿರ್ವಹಣೆಮಾಡಲು ನಾವು ದುಡಿಯಬೇಕಾಗುತ್ತದೆ. ನಮ್ಮ ಹೊಟ್ಟೆ ಪಾಡು ಯಾರು ನೋಡಿಕೊಳ್ಳುವರು”…..
”ಈ ಹುಳುಗಳು ನಿಷ್ಪ್ರಯೋಜಕ. ಹಾಗಾಗಿ ಬೀದಿಗೆ ಎಸೆಯುತ್ತಾರೆ. ಪಕ್ಷಿಗಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಇದು ಅಪರಾಧವೇನಲ್ಲ . ಓಕೆ ಬಿ ರಿಲ್ಯಾಕ್ಸ್” …. ಎಂದು ಮಗುವಿನ ತಲೆ ಸವರಿದಳು.
ಧನ್ವಿತ ಹೂಂ ಎಂದು ಗೋಣು ಆಡಿಸಿತು. ಅದಕೇನು ಅರ್ಥ ಆಯಿತೋ ಪಾಪ. ಆದರೂ ಆ ಹುಳುವಿನ ಒದ್ದಾಟ ಅಚ್ಚಳಿಯದೆ ಉಳಿಯಿತು.
” ಅಮ್ಮಾ ನಂದೊಂದ್ಮಾತು….ಈಗ ಮನುಷ್ಯರೆಲ್ಲರೂ ಈ ಪ್ರಾಣಿಗಳಂತೆ ಉಪಯೋಗಕ್ಕೆ ಬರುವರ. ಮನುಷ್ಯರನ್ನು ಕೊಂದರೆ ಮಾತ್ರ ಪೋಲಿಸು ಬರುವರು. ನಾವು ನ್ಯಾಯ ಕೇಳುವೆವು ಅಂತನಾ…?
ಆದರೆ ಮೂಕ ಪ್ರಾಣಿಗಳು ಯಾರ ಹತ್ರ ನ್ಯಾಯ ಕೇಳಬೇಕು “….. ಎಂದಾಗ ಮೂಕವಾಗುವುದು ಮಾತ್ರ ಸುಗುಣಾಳಿಗೆ ಉಳಿಯಿತು.
“ಇಷ್ಟು ಪುಟ್ಟ ಮಗು ಇಂತಹ ಪ್ರಶ್ನೆಕೇಳಬಹುದೆಂದು ಅನಿಸಿರಲಿಲ್ಲ. ಇಷ್ಟೆಲ್ಲಾ ಈ ಅವರೆ ಹುಳುವಿನಿಂದ ಆದದ್ದು. ಮಕ್ಕಳ ಮೇಲೆ ಎಂತಹ ಪರಿಣಾಮ ಬೀರುವುದು ಸಣ್ಣ ಘಟನೆಗಳು”… ಎಂದು ಯೋಚಿಸುತ್ತಾ ಮಗುವನ್ನು ರಮಿಸಲು ಅದರ ಗಮನ ಬೇರೆಕಡೆ ಸೆಳೆಯಲು, ಅವಳನ್ನು ಟಿ.ವಿ.ಯಲ್ಲಿ ಬರುತ್ತಿದ್ದ ಮಕ್ಕಳ ಕಾರ್ಯಕ್ರಮದ ಕಡೆ ಸೆಳೆದಳು.
ಇನ್ನು ಮುಂದೆ ಇಂತಹ ಸಂದರ್ಭ ಬರದಂತೆ ನೋಡಿಕೊಳ್ಳಬೇಕು ಎಂದು ಅಂದುಕೊಂಡಳು.
ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಬಿಡುವುದು ವಿಪರ್ಯಾಸ.
-ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ
ಹೌದು ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಲು ಕಷ್ಟ ಅದರಲ್ಲೂ ಮಕ್ಕಳಿಗೆ.. ಅವರ ಹುಳದ ಮೂಲಕ ಚಿಂತನೆ ಗೆ ಹಚ್ಚುವ ಲೇಖನ ಬರೆದಿರುವ ಗೆಳತಿ ನಿಮಗೆ ಧನ್ಯವಾದಗಳು
ಧನ್ಯವಾದಗಳು ಮೇಡಂ
Nice article
ಧನ್ಯವಾದಗಳು ಮೇಡಂ
Thumbha channagede
ಮಗುವಿನೊಂದಿಗೆ ನಮ್ಮನ್ನೂ ಚಿಂತನೆಗೆ ಹಚ್ಚಿತು…ತಮ್ಮ ಲೇಖನ!