ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣನಾದ ಉಪಮನ್ಯು
ಪೂರ್ವ ಕಾಲದಲ್ಲಿ ಮಕ್ಕಳಿಗೆ ಗುರುಕುಲದಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ಶಿಷ್ಯರು ಗುರುಗಳಿಗೆ ಸರ್ವರೀತಿಯಿಂದಲೂ ವಿಧೇಯರಾಗಿರುತ್ತಿದ್ದರು. ಗುರು-ಶಿಷ್ಯ ಸಂಬಂಧವೂ ಅಷ್ಟೆ ಅದು, ತಂದೆ-ಮಕ್ಕಳ ಸಂಬಂಧದಂತೆ ಇತ್ತು. ಮನೆ ಮಗನಂತಿದ್ದ ಶಿಷ್ಯನು ಪಾಠ ಹೇಳಿ ಕೊಡುವ ಗುರುಗಳನ್ನು ಪ್ರತ್ಯಕ್ಷ ದೇವರಂತೆ ಕಾಣುತ್ತಿದ್ದನು. ಆತ ಮನೆಗೆಲಸದಲ್ಲಿಯೂ ಗುರುವಿಗೂ ಗುರುಪತ್ನಿಗೂ ಎಲ್ಲ ರೀತಿಯಿಂದಲೂ ನೆರವಾಗಬೇಕಾಗಿತ್ತು. ಗುರುವು ಯಾವುದೇ ಕೆಲಸ ಹೇಳಿದರೂ ಅದು ತನ್ನಿಂದ ಆಗಬಹುದೋ ಎಂಬ ವಿವೇಚನೆಗೆಡೆಕೊಡದೆ,ವಿಚಾರಿಸದೆ ಶಿರಸಾವಹಿಸಿ ಮಾಡಬೇಕಿತ್ತು. ಕೆಲವೊಮ್ಮೆ ಪ್ರೀತಿಪಾತ್ರರಾದ ಶಿಷ್ಯರನ್ನು ವೇದ- ವೇದಾಂಗಗಳಲ್ಲೂ ಅವರು ಪಾರಂಗತರೋ ಅವರು ಸಂಯಮ ಶೀಲರೋ ಕಷ್ಟ ಸಹಿಷ್ಣುಗಳೋ ಎಂದು ಗುರುಗಳು ಕಠಿಣ ಪರೀಕ್ಷೆಗಳನ್ನೊಡ್ಡಿ ಪರೀಕ್ಷಿಸುವದೂ ಉಂಟು!. ಇಂತಹ ಸನ್ನಿವೇಶಗಳಲ್ಲಿ ಶಿಷ್ಯನು ಉತ್ತೀರ್ಣನಾದರೆ ಆತನ ಭವಿಷ್ಯದ ಬಾಗಿಲು ತೆರೆದಂತೆಯೇ!.
ಮಹರ್ಷಿಗಳಾದ ಧೌಮ್ಯರ ಆಶ್ರಮದಲ್ಲಿ ಉಪಮನ್ಯು ಎಂಬ ಉತ್ತಮ ವಿದ್ಯಾರ್ಥಿಯಿದ್ದ. ಉಪಮನ್ಯುವಿಗೆ ಅದರ ಶಾಖೋಪಶಾಖೆಗಳಾದ ಕಾವ್ಯ, ಮೀಮಾಂಸೆ ಮೊದಲಾದ ಸಂಸ್ಕೃತ ಶಾಖೆಗಳನ್ನೂ ಕಲಿಸಿದ ಮೇಲೆ ಶಿಷ್ಯನನ್ನು ಒಮ್ಮೆ ಪರೀಕ್ಷಿಸಬೇಕೆಂದು ಧೌಮ್ಯರು ಬಯಸಿದರು. ಆತನು ಬಡವ,ದಿಕ್ಕಿಲ್ಲದವನೆಂದು ವಿಶೇಷ ಕಾಳಜಿಯೂ ಗುರುಗಳಿಗಿತ್ತು.
ಒಂದು ದಿನ ಉಪಮನ್ಯುವನ್ನು ಕರೆದು “ನೀನು ಇಂದಿನಿಂದ ಆಶ್ರಮದ ಹಸುಗಳನ್ನು ಮೇಯಿಸಿಕೊಂಡು ಬರಬೇಕು” ಎಂದರು. “ಆಗಲಿ ಗುರುದೇವ” ಎಂದು ಉಪಮನ್ಯು ದನಗಳನ್ನು ಹೊಡೆದುಕೊಂಡು ಹೊರಟನು. ಹಸುಗಳ ಹೊಟ್ಟೆ ತುಂಬಿಸಿಕೊಂಡು ಬಂದ ಶಿಷ್ಯನಿಗೆ ಗುರುಗಳು ಊಟ ಹಾಕಲಿಲ್ಲ.ಶಿಷ್ಯನು ಹಸಿವಿನಿಂದಲೇ ಮಲಗಿದನು. ಮಾರನೇ ದಿನವೂ ಇದೇ ಗತಿಯಾಯ್ತು. ಮುಂದಿನ ದಿನಗಳಲ್ಲಿ ಶಿಷ್ಯನು ಭಿಕ್ಷೆ ಬೇಡಿ ತನ್ನ ಹೊಟ್ಟೆ ತುಂಬಿಸಿಕೊಂಡನು. ಆ ಕಾಲದಲ್ಲಿ ಬ್ರಹ್ಮಚಾರಿಯಾದವನು ಭಿಕ್ಷಾನ್ನದಿಂದ ಹೊಟ್ಟೆ ಹೊರೆಯಬಹುದಿತ್ತು. ಶಿಷ್ಯನ ಮುಖದಲ್ಲಿ ಗೆಲುವು, ಮಂದಹಾಸವನ್ನು ಗಮನಿಸಿದ ಗುರುಗಳು ಆತನನ್ನು ಹತ್ತಿರಕ್ಕೆ ಕರೆದು “ನೀನು ಊಟಕ್ಕೆ ಏನು ಮಾಡಿರುವೆ?” ಎಂದು ಪ್ರಶ್ನಿಸಿದರು. “ಭಿಕ್ಷೆ ಬೇಡುತ್ತೇನೆ” ಎಂದನವ.
‘ಭಿಕ್ಷಾನ್ನವನ್ನು ಗುರುಗಳಿಗೆ ಅರ್ಪಿಸದೆ ಉಂಡರೆ ಕದ್ದು ಉಂಡಂತೆ’ ಎಂದರು ಧೌಮ್ಯರು. ಗುರುಗಳ ಮಾತಿಗೆ ಬೆಲೆಕೊಟ್ಟು ಅವನು ಮೊದಲ ಭಿಕ್ಷಾನ್ನವನ್ನು ಗುರುಗಳಿಗರ್ಪಿಸಿ ಎರಡನೇ ಬಾರಿ ಭಿಕ್ಷೆ ಎತ್ತಿ ತನ್ನ ಹಸಿವನ್ನು ನೀಗುತ್ತಿದ್ದನು. ಅದನ್ನು ಗಮನಿಸಿದ ಗುರುಗಳು ‘ಎರಡನೇ ಬಾರಿ ಭಿಕ್ಷೆ ಎತ್ತಿ ಉಂಡರೆ ಮತ್ತೊಬ್ಬ ವಿದ್ಯಾರ್ಥಿಯ ಊಟವನ್ನು ಅಪಹರಿಸಿದಂತಾಗುತ್ತದೆ ಇದು ಸರಿಯಲ್ಲ’ ಎಂದರು. ಮುಂದೆ ಉಪಮನ್ಯು ಹಸುಗಳ ಹಾಲನ್ನು ಕರೆದು ಅದನ್ನು ಕುಡಿದು ಹಸಿವನ್ನು ನೀಗಿಸಿಕೊಳ್ಳುತ್ತಿದ್ದನು. ಮುಂದೆಯೂ ಗುರುಗಳು ಶಿಷ್ಯನನ್ನು ಕರೆದು ಈಗ ಊಟಕ್ಕೇನು ಮಾಡುವೆ? ಎಂದು ಕೇಳಿದರು. ‘ಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ’ ಎಂದನವ.
‘ಇದರಿಂದ ಕರುಗಳ ಆಹಾರ ಕಸಿದಂತಲ್ಲವೇ ಇದು ನ್ಯಾಯವೇ’ ಎಂದು ಕೇಳಿದರು ಧೌಮ್ಯರು. ಮುಂದೆ ಆತ ಯೋಚಿಸಿ ಕರುಗಳು ಹಾಲು ಕುಡಿಯುತ್ತಿದ್ದ ಸಮಯದಲ್ಲಿ ಅವುಗಳ ಕಟವಾಯಿಂದ ಜಿನುಗಿದ ನೊರೆಯನ್ನು ಸವಿದು ಹಸಿವನ್ನು ನೀಗಿಕೊಳ್ಳುತ್ತಿದ್ದ.ಇದನ್ನರಿತ ಗುರುಗಳು ಅದನ್ನೂ ನಿಷೇಧಿಸಿದರು. ಹೀಗೆ ಆಶ್ರಮದಲ್ಲೂ ಊಟ ಹಾಕದೆ ಹಸಿವೆಗಾಗಿ ಆತ ಬೇರೆ ಪರಿಹಾರ ಕಂಡುಗೊಂಡಾಗ ಅದನ್ನೂ ಆಕ್ಷೇಪಿಸಿದಾಗ ಆತ ಗುರುಗಳೊಡನೆ ಏನೂ ಎದುರಾಡದೆ ಹಸಿವೆಯಿಂದಲೇ ದಿನ ದೂಡಿದನು. ಒಂದು ದಿನ ತನ್ನ ಹಸಿವೆ ತಾಳಲಾರದೆ ಎಕ್ಕದ ಎಲೆ ಮುರಿದು ಅದರಲ್ಲಿ ಜಿನುಗುವ ಹಾಲನ್ನು ಕುಡಿದನು. ಇದರಿಂದಾಗಿ ಆತನ ಕಣ್ಣು ಕುರುಡಾಯಿತು. ಬಹಳ ಕಷ್ಟದಿಂದ ಆಶ್ರಮಕ್ಕೆ ಬರುವಾಗ ಒಂದು ಪಾಳು ಬಾವಿಯೊಳಕ್ಕೆ ಬಿದ್ದು ಬಿಟ್ಟನು.
ರಾತ್ರಿಯಾದರೂ ಉಪಮನ್ಯು ಬಾರದಿರಲು ಉಳಿದ ಶಿಷ್ಯರನ್ನು ವಿಚಾರಿಸಲು ಅವನಿನ್ನೂ ಬರಲಿಲ್ಲವೆಂದು ಉತ್ತರ ಬಂತು. ಉಪಮನ್ಯುವನ್ನು ಹುಡುಕಿಕೊಂಡು ಉಳಿದ ಶಿಷ್ಯರೊಡಗೂಡಿ ಧೌಮ್ಯರು ಹೊರಟರು. ಗೋಮಾಳದಲ್ಲಾಗಲೀ ಆತನನ್ನು ಕಾಣದಿದ್ದಾಗ “ಮಗೂ… ಉಪಮನ್ಯು ಎಲ್ಲಿದ್ದಿಯಾ?” ಎಂದು ಕರೆದಾಗ “ನಾನು ಇಲ್ಲಿದ್ದೇನೆ ಗುರುಗಳೇ” ಎಂದು ದನಿ ಕೇಳಿದ ಕಡೆ ಧೌಮ್ಯರು ಧಾವಿಸಿ ನೋಡಿದಾಗ ಬಾವಿಯೊಳಗೆ ಶಿಷ್ಯನನ್ನು ಕಂಡರು. ಉಳಿದವರ ಸಹಾಯದಿಂದ ಉಪಮನ್ಯುವನ್ನು ಮೇಲಕ್ಕೆತ್ತಿದಾಗ ಆತನು ದೃಷ್ಟಿ ಹೀನನಾದುದನ್ನು ಕಂಡರು. ಶಿಷ್ಯನ ಈ ದುರವಸ್ಥೆಗೆ ಕಾರಣವೇನೆಂದು ಕೇಳಿದಾಗ ಆತ ಎಲ್ಲವನ್ನೂ ವಿವರವಾಗಿ ಗುರುಗಳಲ್ಲಿ ನಿವೇದಿಸಿಕೊಂಡನು.
ಶಿಷ್ಯನ ವಿಧೇಯತೆಗೆ ಮನಸಾರೆ ಮೆಚ್ಚಿದ ಧೌಮ್ಯರು ಅವನಿಗೆ ಅಶ್ವಿನಿ ದೇವತೆಗಳ ಮಂತ್ರವನ್ನು ಉಪದೇಶಿಸಿ ಕಣ್ಣು ಬರುವಂತೆ ಮಾಡಿದರು. ಅವನ ಶ್ರೇಷ್ಠತೆಯನ್ನು ಉಳಿದವರ ಮುಂದೆ ಕೊಂಡಾಡಿದರು. “ನಿನ್ನ ವಿದ್ಯಾಭ್ಯಾಸ ಪೂರ್ಣವಾಯಿತು.ವಿದ್ಯಾಭ್ಯಾಸವು ಕೇವಲ ಹೊಟ್ಟೆಹೊರೆಯುವುದಕ್ಕಲ್ಲ, ಆತ್ಮದರ್ಶನ ಮಾಡಿಕೊಳ್ಳುವುದಕ್ಕೆ. ಆ ಪರೀಕ್ಷೆಯಲ್ಲಿ ನೀನು ಜಯಶಾಲಿಯಾಗಿರುವೆ. ನಿನಗೆ ಒಳ್ಳೆಯದಾಗಲಿ” ಎಂದು ಹರಸಿ ಬೀಳ್ಕೊಟ್ಟರಲ್ಲದೆ “ಉತ್ತಮ ವಿದ್ಯಾರ್ಥಿಗಳು ಉಪಮನ್ಯುವಿನಿಂದ ಕಿಂಚಿತ್ತಾದರೂ ಕಲಿಯಬಹುದು. ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬಹುದು”.ಎಂದರು.
ಉಪಮನ್ಯುವಿನ ಹೆಸರು ಆ ಚಂದ್ರಾರ್ಕ ಉಳಿಯುವಂತಾಯಿತು.
-ವಿಜಯಾಸುಬ್ರಹ್ಮಣ್ಯ ಕುಂಬಳೆ
ಅಡ್ಮಿನರ್ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.
ಪೌರಾಣಿಕ ಕಥೆ ಸೊಗಸಾಗಿ ಮೂಡಿಬಂದಿದೆ ಮೇಡಂ.ಧನ್ಯವಾದಗಳು.
ಚಂದದ ಕಥೆ
ಹಿಂದೆ, ಗುರುವು ತನ್ನ ಶಿಷ್ಯನ ಮಾನಸಿಕ ಶಕ್ತಿಯನ್ನು ಪರೀಕ್ಷಿಸುವ ವಿಧಾನವು ಕ್ರೂರವೆನಿಸಿದರೂ ಅದರ ಹಿಂದಿರುವ ಹಿರಿದಾದ ಸದುದ್ದೇಶವನ್ನು ಈ ಪೌರಾಣಿಕ ಕಥೆಯು ಸಮರ್ಥವಾಗಿ ಬಿಂಬಿಸಿದೆ…ಧನ್ಯವಾದಗಳು ವಿಜಯಕ್ಕಾ.