ಜೂನ್ ನಲ್ಲಿ ಜೂಲೇ : ಹನಿ 3
ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…
ಜಿಮ್ ಅವರು ವ್ಯವಸ್ಥೆ ಮಾಡಿದ್ದ ಕಾರೊಂದರಲ್ಲಿ ನಮ್ಮ ಲಗೇಜುಗಳನ್ನಿರಿಸಿದೆವು. ಲೇಹ್ ನ ‘ಕರ್ಜೂ’ ಎಂಬಲ್ಲಿರುವ ಹೋಟೆಲ್ ಗ್ಯಾಲಕ್ಸಿಯಲ್ಲಿ ನಮ್ಮ ವಾಸ್ತವ್ಯಕ್ಕೆ ಕಾಯ್ದಿರಿಸಿದ್ದರು. ವಿಮಾನ ನಿಲ್ದಾಣದಿಂದ ಸುಮಾರು ಕಾಲು ಗಂಟೆ ಪ್ರಯಾಣಿಸಿದೆವು. ಟಾರು ರಸ್ತೆ ಮುಗಿದು ಕಚ್ಚಾಮಣ್ಣಿನ ಗಲ್ಲಿಗಳಂತಹ ಚಿಕ್ಕರಸ್ತೆಗೆ ಪ್ರವೇಶಿಸಿದ್ದೆವು. ಹೋಟೆಲ್ ಪಕ್ಕದ ತಿರುವಿನ ವರೆಗೆ ಬಂದ ಡ್ರೈವರ್ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿ, ಕೆಳಗಿಳಿದ. ಯಾಕೆಂದರೆ, ರಸ್ತೆಗೆ ಅಡ್ಡವಾಗಿ ಜೆ.ಸಿ.ಬಿ ಯಂತ್ರವೊಂದನ್ನು ಇಡಲಾಗಿತ್ತು. ಅಕ್ಕಪಕ್ಕದ ಜನರ ಬಳಿ ಆತ ಏನನ್ನೋ ಮಾತನಾಡಿ ಬಂದು ನಮ್ಮನ್ನು ಉದ್ದೇಶಿಸಿ , ‘ಇಧರ್ ರಾಸ್ತಾ ಬಂದ್ ಹೋ ಚುಕಾ ಹೈ, ಜಾನಾ ನಹೀ ವೊ ಕಬ್ ಖೋಲೇಂಗೆ, ಆಪ್ ಲೋಗ್ ಪೈದಲ್ ಮೇ ಜಾನಾ ಹೈ..ಹೋಟೆಲ್ ಪಾಸ್ ಮೆ ಹೈ, ದಸ್ ಮಿನಟ್ ಮೆ ಹೋಟೆಲ್ ಪಹುಂಚೇಂಗೆ” ಅಂದ.
ಅಂತೂ ಅತಿ ಸುಲಭವಾಗಿ, ನಿಮಗೆ ದರ್ಶನ ಕೊಡಲಾರೆ ಎಂದು ಲೇಹ್ ನಗರಿ ಪಣ ತೊಟ್ಟಂತಿತ್ತು. ಆಗ ಅಲ್ಲಿ ಹೆಚ್ಚು ಚಳಿ ಇರಲಿಲ್ಲ. ಹತ್ತು ನಿಮಿಷ ನಡೆಯುವುದು ಕಷ್ಟವಲ್ಲ. ಆದರೆ ಲಗೇಜನ್ನು ಎತ್ತಿಕೊಂಡು ಹೋಗಲು ಕಷ್ಟವೆನಿಸಿತ್ತು. ಅದು ಮಣ್ಣಿನ ಕಚ್ಚರಸ್ತೆಯಾದುದರಿಂದ ಬ್ಯಾಗ್ ಚಕ್ರದ ಮೂಲಕ ರಸ್ತೆಯಲ್ಲಿ ಎಳೇದುಕೊಂಡು ಹೋಗಲು ಸಾಧ್ಯವಿರಲಿಲ್ಲ. ಈ ಬಗ್ಗೆ ತೋಡಿಕೊಂಡಾಗ, ‘ ಆಪ್ ಐಸೆ ಜಾಯಿಯೆ, ಹೋಟೆಲ್ ಸೆ ಕೋಯೀ ಆಯೇಗಾ’ ಎಂದು ನಮಗೆ ದಾರಿ ತೋರಿಸಿ, ನಮ್ಮ ಲಗೇಜನ್ನು ಹೋಟೆಲ್ ಗೆ ಸಾಗಿಸುವ ವ್ಯವಸ್ಥೆ ಮಾಡಿದ.
ನಿಧಾನವಾಗಿ ನಡೆಯಲಾರಂಭಿಸಿದೆವು. ನಾಲ್ಕಾರು ಹೆಜ್ಜೆ ನಡೆದಾಗಲೇ ‘ಸ್ಥಳ ಮಹಿಮೆ’ಯ ಅರಿವಾಗಿತ್ತು. ಅಬ್ಬಾ ಸುಸ್ತು ಎನಿಸತೊಡಗಿತ್ತು. ಲೇಹ್ ಎತ್ತರದ ಪರ್ವತಪ್ರದೇಶವಾದುದರಿಂದ, ಆಮ್ಲಜನಕ ಕಡಿಮೆಯಾದುದರ ಅನುಭವವಾಯಿತು. ಏದುಸಿರು ಬಿಡಲಾರಂಭಿಸಿದ್ದೆವು. ರಸ್ತೆಯೂ ಧೂಳುಮಯ. ಇಕ್ಕಟ್ಟಾದ ಆ ದಾರಿಯಲ್ಲಿ ಹಲವಾರು ಮಂದಿ ಬೈಕ್ ಸವಾರರು ಎದುರಾದರು. ಅವರೆಲ್ಲಾ ಮೌಂಟೇನ್ ಬೈಕಿಂಗ್ ಸಾಹಸಿಗಳು. ಬೈಕ್ ನ ಎರಡೂ ಪಾರ್ಶಗಳಿಗೆ ಬ್ಯಾಗ ಗಳನ್ನು ನೇತಾಡಿಸಿಕೊಂಡು, ಹೆಡ್ ಲೈಟ್ ಉಳ್ಳ ಹೆಲ್ಮೆಟ್ ಧರಿಸಿ, ಸಂಗಾತಿಯೊಂದಿಗೆ ಬೈಕ್ ಚಲಾಯಿಸುತ್ತಿದ್ದವರೇ ಹೆಚ್ಚು. ಪರ್ವತಗಳಲ್ಲಿ ಸಾಹಸದ ಸವಾರಿಗಾಗಿ ವಿನ್ಯಾಸಗೊಳಿಸಲಾಗಿದ್ದ ಹಲವಾರು ಬೈಕುಗಳು ಅಲ್ಲಲ್ಲಿ ಕಂಡವು.
ಈ ನಡುವೆ ನಮಗೆ ಮನೆಗೆ ಫೋನ್ ಮಾಡಬೇಕೆನಿಸಿತು .ಮೊಬೈಲ್ ಫೋನ್ ಅನ್ನು ನೋಡಿದರೆ ಅದು ಸ್ಥಬ್ದವಾಗಿತ್ತು. ಪಕ್ಕದಲ್ಲಿ ಇದ್ದ ಒಂದೆರಡು ಅಂಗಡಿಗಳ ಒಳಹೊಕ್ಕು ಇಲ್ಲಿ ಕಾಯಿನ್ ಬೂತ್ ಇದೆಯೇ? ಎಸ್.ಟಿ.ಡಿ ಬೂತ್ ಇದೆಯೇ ಇತ್ಯಾದಿ ವಿಚಾರಿಸಿದಾಗ, ಜಮ್ಮು-ಕಾಶ್ಮೀರವು ಸೂಕ್ಷ್ಮ ಜಾಗವಾದುದರಿಂದ ಮತ್ತು ಭಯೋತ್ಪಾದಕರು ದುರುಪಯೋಗಪಡಿಸುವ ಸಾಧ್ಯತೆ ಇರುವುದರಿಂದ ಇಲ್ಲಿ ಯಾವುದೇ ಕಂಪೆನಿಯ ಪ್ರಿ-ಪೈಡ್ ಸಿಮ್ ಗಳು ಕೆಲಸ ಮಾಡುವುದಿಲ್ಲವೆಂದೂ, ನಮಗೆ ಅವಶ್ಯಕತೆ ಇದ್ದರೆ ಸ್ಥಳೀಯ ಪೋಸ್ಟ್ ಪೈಡ್ ಸಿಮ್ ಕೊಂಡುಕೊಳ್ಳಬಹುದು, ಆದರೆ ಅದಕ್ಕೆ ಅರ್ಜಿ ಸಲ್ಲಿಸಿ, ನಮ್ಮ ಮೂಲ ಗುರುತಿನ ಚೀಟಿ, ಬೆರಳಿನ ಗುರುತು ಇತ್ಯಾದಿ ಕೊಟ್ಟರೆ ಎರಡು ದಿನಗಳಲ್ಲಿ ಪೋಸ್ಟ್ ಪೈಡ್ ಸಿಮ್ ಸಿಗಬಹುದೆಂದೂ ತಿಳಿಸಿದರು. ಅಷ್ಟೆಲ್ಲಾ ಕಷ್ಟಪಡುವ ಬದಲು, ಬೇಕಾದಾಗಲೆಲ್ಲಾ ತಮ್ಮ ಫೋನ್ ಅನ್ನು ಬಳಸಿ ಮಾತನಾಡಬಹುದೆಂದರು. ನಾವು ಅಲ್ಲಿ ಏನನ್ನೂ ಕೊಳ್ಳದಿದ್ದರೂ, ತಾವಾಗಿ ಈ ರೀತಿ ಫೋನ್ ಕೊಡುವ ಧಾರಾಳತನ ಅಲ್ಲಿಯವರಿಗೆ ಇದೆ.
ಲಡಾಖಿ ಜನರು ಸ್ನೇಹಪ್ರಿಯರು, ಮೃದುಭಾಷಿಗಳು ಹಾಗೂ ಅತಿಥಿ ಸತ್ಕಾರಕ್ಕೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಜೂನ್ ನಿಂದ ಅಕ್ಟೋಬರ್ ವರೆಗಿನ ಬೇಸಿಗೆ ಸಮಯದಲ್ಲಿ, ವರ್ಷದ ಕೇವಲ ಐದು ತಿಂಗಳು ಮಾತ್ರ ಅವರಿಗೆ ಪ್ರವಾಸಿಗಳಿಂದ ಆದಾಯ. ಹಾಗಾಗಿ, ಪ್ರತಿಯೊಬ್ಬರೂ, ಪ್ರವಾಸಿಗಳಿಗೆ ಅನುಕೂಲವಾಗುವ ರೀತಿ ವರ್ತಿಸುತ್ತಾರೆ.
ಇಲ್ಲಿ ಆಗಾಗ ಕಿವಿಗೆ ಬೀಳುವ ಪದ ‘ಜೂಲೇ’ . ಪರಸ್ಪರ ಭೇಟಿಯಾದಾಗ, ಮುಂಜಾನೆ ಶುಭಾಶಯವಾಗಿ, ಧನ್ಯವಾದ ರೂಪವಾಗಿ ಹೀಗೆ ನಮಸ್ಕಾರ, ಥ್ಯಾಂಕ್ಯೂ, ಪರವಾಗಿಲ್ಲ ಇತ್ಯಾದಿ ಪದಗಳಿಗೆ ಸಮಾನಾರ್ಥಕವಾಗಿ ‘ ‘ಜೂಲೇ’ ಅಂತ ಹೇಳುತ್ತಿರುತ್ತಾರೆ. ಹಾಗಾಗಿ,ಇಲ್ಲಿಯ ವರೆಗೆ ಪ್ರವಾಸಕಥನವನ್ನು ಓದಿದ ನಿಮಗೆಲ್ಲರಿಗೂ ‘ಜೂಲೇ’ !
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ :
(ಮುಂದುವರಿಯುವುದು..)
-ಹೇಮಮಾಲಾ, ಮೈಸೂರು
ಪ್ರವಾಸ ಕಥನ ದ ನಿರೂಪಣೆಗೆ ನಿಮಗೆ ನಮ್ಮ ಜೂಲೇ ಗೆಳತಿ
Beautiful
Sweet memories
ಲಡಾಕ್ ಜನರ ಸ್ನೇಹಪ್ರಿಯತೆ ಬಹಳ ಇಷ್ಟವಾಯ್ತು. ಎಂದಿನಂತೆ ಸೊಗಸಾಗಿದೆ, ಪ್ರವಾಸ ಕಥನ ನಿರೂಪಣೆ…ನಿಮಗೂ ಜೂಲೇ..!!
ಸೊಗಸಾದ ಸ್ನೇಹಪ್ರಿಯತೆಯ ಪ್ರವಾಸ ಕಥನ