
ತುರ್ತುಗಳ ನಡುವೆ ಸಂಯಮ
ಅನಿವಾರ್ಯ ಸರಕು
ದಿನತಪ್ಪಿದರೆ ಹದ ತಪ್ಪುವುದೀ ದೇಹ
ವೈದ್ಯರ ಪರಾಕು
ಇಲ್ಲಿ ಪದೇ ಪದೇ ಕಾಣುವ
ಪೇಲವ ಮುಖದ ನಲುಗುವ ಪಾದಗಳು
ನಿಲ್ಲಲಾರದೆ ಬಳಲುತ್ತಿದೆ ನೆರಳು !
ನಿಸ್ತೇಜದ ಜೋಡಿ ಕಂಗಳು
ದಿಟ್ಟಿಸುವ ಛಾವಣಿಯು
ಕರುಣೆ ತೋರದೆ
ಅರೆ ಅಕ್ಷಿಯ ಭಾವನೆಗಳ
ಶೂನ್ಯ ನೋಟದಲ್ಲು
ಇಂಚಿಂಚು ಆಶಾವಾದಗಳು………
ಚರಿತ್ರೆಯ ಮುಖವಾಡದಲ್ಲಿ ಬಳಲಿ
ಪ್ರಾಣ ಕೈಯಲ್ಲಿ ಹಿಡಿದ ರೋಗಿಗು
ಬದುಕಿ ಬರುವ ಚೈತನ್ಯ
ಜನ್ಮವಾಗಿದೆ ಜನ್ಯ !
ಗಾಲಿ ಕುರ್ಚಿಗಳ ಅತ್ತಿಂದಿತ್ತ ತಳ್ಳುತ್ತಾ
ಅರೆ ಬಿರಿದ ನಗುವಿನೊಂದಿಗೆ
ಓಡಾಡುವ ವಾರ್ಡ್ ಬಾಯ್
ಕ್ಯಾಂಟಿನ್ ಹುಡುಗನ ರಭಸಕ್ಕೆ
ಸಿಡಿಮಿಡಿಯುವ ಕಸಗುಡಿಸುವಾಕೆ
ಶಸ್ತ್ರ ಚಿಕಿತ್ಸೆ ಕೋಣೆಯೆದುರು
ಬೆವೆತ ಮುಖದಿ ಶತಪಥ ಹಾಕುವ ಆತ್ಮೀಯರು
ವೈದ್ಯರ ಹಿಂದೋಡಿ ಕೇಳುವ ಮಂದಿ
ಸುತ್ತಿ ಬಳಸಿ ನಡೆದಾಡಿ
ತಮ್ಮ ರೋಗಿಯ ಹುಡುಕುವವರೆಲ್ಲರು
ಕಾಣಸಿಗುವರು ಇಲ್ಲಿ
ಭಾವನೆಗಳಿಲ್ಲದ ಬರಿದು ಮುಖಗಳು……..
ರೋಗಿಯೊಂದಿಗೆ ಉಳಿದ ಬಂಧು
ಒಂದರ್ಥದಲ್ಲಿ ಬೆಂದಂತೆ
ಲಿಫ್ಟ್ ಕೆಟ್ಟರೆ ಏದುಸಿರು ಅವಗಾಹಿಸಿ
ಊಟ, ಮೆಡಿಸಿನ್ ಎಂದೋಡಾಡಿ
ಸೊಳ್ಳೆಯೊಂದಿಗು ಸೆಣಸಾಡಿ
ಡ್ರಿಪ್ಸ್ ಮುಗಿದರೆಂಬ ಭಯದಿ
ಕಾದು ಕುಳಿತು ದಾದಿಯ ಕರೆದು
ಮುದುಡಿ ಮಲಗಿ ಬೆಳಗು ಮಾಡಿ
ಬಿಡುವು ನೋಡಿ ಪಕ್ಕದ ವಾರ್ಡ್‌ನ
ಕಷ್ಟ ಸುಖ ವಿಚಾರಿಸಿ
ಜೊತೆಯಲ್ಲಿ ನಿಡಿದಾದ ನಿಟ್ಟುಸಿರು ಬೆಟ್ಟದಷ್ಟು……..
ಎದೆ ಬಿಕ್ಕಿ ಅತ್ತಾಗ
ಆ ನೋವಿನಲ್ಲಿ ಬಾಳಿನರ್ಥ
ಹುಡುಕುವರೆಲ್ಲರು ಕಾಣಸಿಗುವರಿಲ್ಲಿ!
– ಸಂಗೀತ ರವಿರಾಜ್, ಕೊಡಗು
ಚೆನ್ನಾಗಿದೆ.
ಸೂಪರ್
ಅರ್ಥವತ್ತಾದ ಕವನ.
ಕವಿತೆ ತುಂಬಾ ಸುಂದರವಾಗಿದೆ.ಪ್ರತಿಯೊಬ್ಬರನ್ನು ತಟ್ಟುವ ಅದ್ಭುತ ಕವಿತೆ. ಅಭಿನಂದನೆಗಳು.
ಕವನ ವಾಸ್ತವದ ಸುತ್ತ ಹೆಣೆದಿದೆ .ಮತ್ತು ಸತ್ಯದ ಅನಾವರಣ .ಭ್ರಾಮಕ , ಅತಿರಂಜನೆಗಿಂತ ಇಂಥ ಕವನಗಳು ಹತ್ತಿರವಾಗುತ್ತವೆ ,ವೆ .ಗುಡ್ .
ಚನ್ನಾಗಿ ಬರೆದಿದ್ದೀರಿ ಸಂಗೀತ ರವಿರಾಜ್ ಅವ್ರೆ ……….
Aelrigu vandanegalu