“ಬೀಯಿಂಗ್ ಹ್ಯೂಮನ್..” ಓಹ್ ರಿಯಲೀ??!!
ಕತ್ತಲೆ ತುಂಬಿದ ನಿರ್ಜನ ರಸ್ತೆ. ಬೀದಿ ದೀಪದ ಮಂದ ಬೆಳಕು.. ಮಗುವೊಂದು ರಸ್ತೆಗೋಡುತ್ತದೆ. ರಾಕ್ಷಸನಂತೆ ನುಗ್ಗಿದ ಲಾರಿಯೊಂದು ರಸ್ತೆಮಧ್ಯ ತಲುಪಿದ ಮಗುವಿಗೆ ಢಿಕ್ಕಿ ಹೊಡೆದು ನಿಲ್ಲುವುದು. ಮಗು ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಾ ಬಿದ್ದಿತ್ತು. ಲಾರಿ ಡ್ರೈವರ್ ಅತ್ತಿತ್ತ ನೋಡುತ್ತಾ ಯಾರೂ ಇಲ್ಲವೆನ್ನುವುದ ಖಾತ್ರಿ ಪಡಿಸಿಕೊಂಡು ಬೇಗನೆ ಲಾರಿ ಹತ್ತಿ ಚಲಾಯಿಸುತ್ತಾನೆ. ಕನಿಷ್ಠ ಆ ಶಿಶುವನ್ನು ರಸ್ತೆ ಬದಿಗೆ ಎತ್ತಿ ಹಾಕುವ ಮನುಷ್ಯತ್ವವೂ ಅವನಲ್ಲಿರಲಿಲ್ಲ.. ಕೆಲವು ಕ್ಷಣಗಳ ಬಳಿಕ.. ಅದೇ ದಾರಿಯಲ್ಲಿ ನಡೆದು ಬಂದ ಭಿಕ್ಷುಕನೊಬ್ಬ ಒದ್ದಾಡುತ್ತಿರುವ ಮಗುವನ್ನು ನೋಡಿ ಅದನ್ನು ಪ್ಲಾಟ್ ಫಾರ್ಮ್ ನಲ್ಲಿ ಮಲಗಿಸುತ್ತಾನೆ. ಅವನಲ್ಲಿ ಅಷ್ಟಾದರೂ ಮಾನವೀಯತೆ ಇತ್ತೆನ್ನೋಣ. ಆಷ್ಟಕ್ಕೆ ಈ ವಿಡಿಯೋ ಕ್ಲಿಪ್ ನಿಲ್ಲುತ್ತದೆ… ಮುಂದೇನಾಯಿತೋ ದೇವರೇ ಬಲ್ಲ.
ಇನ್ನೊಂದು ವಿಡಿಯೊ.. ನಾಯಿಯೊಂದು ಕಾರಿಗಡ್ಡ ಸಿಕ್ಕು ಬೀಳುತ್ತದೆ. ಅದೂ ಒದ್ದಾಡುತ್ತಿರುತ್ತದೆ. ನಂತರ ಬಂದ ವಾಹನಗಳೆಲ್ಲಾ ಸಾಯುತ್ತಿರುವ ನಾಯಿಯ ಸಾವಿಗೆ ಕಾರಣಕರ್ತರಾಗಲು ಇಷ್ಟವಿಲ್ಲದಂತೆ ಗಾಡಿಯನ್ನು ಸ್ವಲ್ಪ ತಿರುಗಿಸಿ ಮುಂದೆ ಹೋಗುತ್ತವೆ. ಕೆಲವು ಕ್ಷಣಗಳ ಬಳಿಕ.. ಬೀದಿಯ ಇನ್ನೊಂದು ನಾಯಿ ಕುಟುಕು ಜೀವದೊಂದಿಗೆ ರಸ್ತೆಯಲ್ಲಿ ಬಿದ್ದುಕೊಂಡಿದ್ದ ನಾಯಿಯ ಬಳಿ ಬಂದು ನಿಶ್ಶಬ್ದವಾಗಿ ಕುಳಿತುಕೊಳ್ಳುತ್ತದೆ. ಅದನ್ನು ಕಚ್ಚಿ ಎಳೆದು ಬದಿಗೆ ತರುತ್ತದೆ. ಸುತ್ತಲೂ ನೋಡುತ್ತದೆ. ನಾಯಿ ಯಾತನೆಯಿಂದ ನರಳುತ್ತಿರುವ ಮತ್ತೊಂದನ್ನು ನೋಡಿ ಕತ್ತೆತ್ತಿ ನೋಡುತ್ತಾ ಬೊಗಳುತ್ತಿದ್ದರೆ ಅದು ಸಹಾಯ ಯಾಚಿಸುವುದು ಸ್ಪಷ್ಟವಾಗುತ್ತದೆ. ಅದಕ್ಕ್ಕೆ ಅಷ್ಟು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಾಗದು. ಹಲವರು ವಿಶೇಷವೆನಿಸುವ ಈ ದೃಶ್ಯವನ್ನು ನೋಡುತ್ತಿದ್ದಾರೆ ಹೊರತು ಬೇರೇನೂ ಮಾಡುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲಿ ಮೂಕ ಪ್ರಾಣಿಯೊಂದರ ರೋದನವು ಸಾಗುತ್ತಿರುವ ವಾಹನಗಳ ಅರಚುವ ಸದ್ದಿಗೆ ಮರೆಯಾಗುತ್ತದೆ.
“ಮಾನವೀಯತೆ” ಎಂಬ ಪದವು “ಮಾನವ” ಎಂಬ ಪದವನ್ನೇ ಒಳಗೊಂಡಿದ್ದು ಯಾಕೋ ಕೆಲವು ಬಾರಿ ಈ ವಿಶೇಷಣವೇ ತಪ್ಪೆನಿಸುತ್ತದೆ. ಮನುಷ್ಯನಿಗೇನಾದರೂ ಅವಘಡವಾದರೆ ಸಹಾಯ ಹಸ್ತ ಚಾಚುವವರಿರಬಹುದು. ಆದರೆ ಮೂಕ ಪ್ರಾಣಿಗಳೂ ಎಷ್ಟೋ ಬಾರಿ ಅಳುತ್ತವೆ, ನೋವುಣ್ಣುತ್ತವೆ, ಮಾನವೀಯತೆ ಇಲ್ಲದ ಮಾನವರ ಕೃತ್ಯಗಳಿಂದಾಗಿ. ಮನುಷ್ಯನಿಗೂ ಪ್ರಾಣಿಗೂ ಇರುವ ವೇದನೆಯು ಬೇರೆಯಲ್ಲ, ಇಷ್ಟೇಕೆ ನೆನಪಾಗುವುದಿಲ್ಲ?
ಎರಡೂ ವಿಡಿಯೋಗಳು ಸಿಸಿಟಿವಿ ಯಲ್ಲಿ ಸೆರೆಹಿಡಿಯಲ್ಪಟ್ಟಿದ್ದೆನ್ನಲಾಗಿದ್ದು ನೂರಾರು ಮಂದಿ ಫ಼ೇಸ್ಬುಕ್ಕಿನಲ್ಲಿ ಹಂಚಿಕೊಳ್ಳುತ್ತಾ ಸಾಗಿದ್ದರು. ಫ಼ೇಸ್ ಬುಕ್ ಶೇರ್ ಮಾಡುವ ಭೂಪರೆಲ್ಲಾ ನಿಜವಾಗಿಯೂ ಇಂತಹ ಸ್ಥಿತಿಯನ್ನು ಕಣ್ಣಾರೆ ಕಂಡಾಗ ಯಾವ ರೀತಿ ಪ್ರತಿಕ್ರಿಯಿಸುವರೋ ಎನ್ನುವುದು ಬೇರೆ ವಿಷಯ. ತಮ್ಮ ಪೋಸ್ಟುಗಳ ಲೈಕ್/ಕಮೆಂಟ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಆಗಾಗ ನೋಡಿ “ಫ಼ೇಸ್ ಬುಕ್ ಪಬ್ಲಿಸಿಟಿ” ಯ ತೃಪ್ತಿಯನ್ನಂತೂ ಪಟ್ಟುಕೊಳ್ಳುತ್ತಾರೆ. ಪೋಸ್ಟ್ ಗಳು ಕೆಲವು ಮನಸ್ಸುಗಳಲ್ಲಾದರೂ ಅಚ್ಚಳಿಯದೆ ಉಳಿದು ಮುಂದೊಂದು ಸಂಧರ್ಭದಲ್ಲಿ ಮಾನವನ ಮಾನವೀಯತೆಯೇ ಇಲ್ಲದಂತಹ ವ್ಯಕ್ತಿತ್ವವನ್ನು ಹಿಂದಿಕ್ಕಿದರೆ ಅದು ನಿಜವಾಗಿಯೂ ಉಪಯೋಗಪ್ರದ.
“ಬೀಯಿಂಗ್ ಹ್ಯೂಮನ್” ಎಂದು ದೊಡ್ಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಿದ ಟಿ-ಶರ್ಟ್ ತೊಟ್ಟು ಎದೆಯುಬ್ಬಿಸಿ ನಡೆವ ಮಂದಿ ತಮ್ಮ ಜೀವನದಲ್ಲಿ ಎಷ್ಟು ಘಟನೆಗಳಲ್ಲಿ ಮಾನವೀಯತೆ ಮೆರೆದಿದ್ದಾರೆಂಬುದು ಪ್ರಶ್ನೆಯಾಗುತ್ತದೆ. ತಾವು “ಮಾನವೀಯತೆಯ ಆಗರ” ಎನ್ನುವುದನ್ನು ಈ ತರಹ ಟಿ ಷರ್ಟ್ ಗಳ ಮೇಲೆ ಬರೆದುಕೊಂಡು ನಡೆಯಬೇಕೆ? ದಿನಕ್ಕೊಂದಾದರೂ ಒಳ್ಳೆಯ ಕೆಲಸ ಮಾಡುವ ಪಣ ತೊಟ್ಟು ಯಾರಿಗಾದರೂ ಒಳಿತನ್ನು ಮಾಡಿದರೆ ಆಗ ಇತರರೇ ಗುರುತಿಸಿ ಒಪ್ಪಿಕೊಳ್ಳುತ್ತಾರೆ. ಯಾರೂ ತಮ್ಮ ಗುಣಗಳ ಸರ್ಟಿಫ಼ಿಕೇಟ್ ಎನ್ನುವಂತಹ ಟಿ-ಷರ್ಟ್ ಗಳ ಮೊರೆ ಹೋಗಬೇಕಾಗದು.
ಖಂಡಿತ ಇತರರ ಮುಖದ ನಗುವಿಗೆ ಕಾರಣವಾದಾಗ ಸಿಗುವ ಆನಂದ ಒಮ್ಮೆ ಅನುಭವಿಸಿದವರಾರೂ ಬಿಡಲಾರರು. ಪುಟ್ಟ ಮಕ್ಕಳ ಎಳೆ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಕಥೆ-ಕಾರ್ಟೂನ್ ಗಳ ಮೂಲಕ ಮಾನವೀಯತೆಯ ಗುಣವನ್ನು, ಅಮಾನವೀಯತೆಯ ಪರಿಣಾಮಗಳನ್ನೂ ಉಳಿಸುವ ಕಾರ್ಯ ಮಾಧ್ಯಮಗಳೂ ಜೊತೆಗೆ ಹೆತ್ತವರೂ ಮಾಡಿದರೆ ಮುಂದಿನ ಜನಾಂಗದ ದುರಂತಗಳನ್ನು ತಪ್ಪಿಸಿ ಶುಭಾಂತ್ಯಗೊಳಿಸಬಹುದು!
ಅಲ್ಲಿಯತನಕ “ಬೀಯಿಂಗ್ ಹ್ಯೂಮನ್” ಎಂದರೆ ಬರಿಯ ಪ್ರಶ್ನೆ ಚಿಹ್ನೆಯಷ್ಟೆ!
– ಶ್ರುತಿ ಶರ್ಮಾ, ಮೈಸೂರು.
PRECIOUS ARTICLE.
ದಿನಕ್ಕೆ ನಾಲ್ಕೈದಾದರೂ ಒಳ್ಳೆಯ ಕೆಲಸ ಮಾಡು ಎಂದು ಅವರ kayalli maaDisidare ಅದರ ಬೆಲೆ ಎಳೆಯ ವಯಸ್ಸಿಗೇ gottaaguttade badukE krutaka vaadaaga humaaniTy elli uliyuttade? ಬರಹ ಗುಡ್ .ನಾಲ್ಕನೇ ಪಾರಗ್ರಾಪ್ಹ್ ಇಡೀ ಬರಹಕ್ಕೆ atyuttamavaagide .
ಮಾನವೀಯತೆಯನ್ನು ಮರೆಯುವುದು ಮಾತ್ರವಲ್ಲ, ಮಾನವೀಯತೆ ಇದೆ ಎಂದು ಸೋಗು ಹಾಕಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉತ್ತಮ ಲೇಖನ.