ಮೌನದ ಧ್ವನಿ
ನೀರವತೆಯ ಮೌನದಲಿ
ಅಡಗಿಹ ಸದ್ದು, ಗದ್ದಲವ
ಕೇಳ್ಪ ಕಿವಿಗಳು ನಿನಗಿದ್ದರೆ
ಮಾತನಾಡದೆ
ಏನೆಲ್ಲ ಹರಟುವವರ,
ಕಿವಿ ಮುಚ್ಚಿದ್ದರೂ
ಎಲ್ಲ ಗ್ರಹಿಸುವೆ
ಕನಸಿನ ಬಣ್ಣದ ಲೋಕದಿ
ವಿಹರಿಸುತೆ
ಕಾಮನಬಿಲ್ಲಿನ ಮೇಲೇರಿ
ಈ ಜಗವ ಸುತ್ತುವ ಮನ
ನಿನ್ನದಾದರೆ,
ಮೌನದಲಿ, ನಿಶ್ಯಬ್ಧದಲಿ
ಶಬ್ಧವ ಹುಡುಕುವವ
ನೀನಾದರೆ,
ಎಲ್ಲೆ ಎಲ್ಲಿದೆ
ಈ ಜಗದ ಸೊಬಗಿಗೆ
ನಾ ಬರೆದ ಕವನಗಳ
ಓದುವವರು
ಇಲ್ಲದಿದ್ದರೇನು,
ಹಾಡುವ ಗಾಯಕ
ರಾಗವ ಹಾಕದಿದ್ದರೇನು
ನೀರವ ಮೌನದಲಿ
ಕೇಳುವುದು
ಸುಶ್ರಾವ್ಯ ಗಾನ
ನನ್ನ ಕವನದ ಸಾಲುಗಳು
ಅಂಗಳದಲಿ ಬಿದ್ದ
ತುಂತುರು ಮಳೆಹನಿಯ ಶಬ್ಧದಲಿ
ಪ್ರತಿಧ್ವನಿಸುವ ಪರಿ
ನೀ ಅರಿತೆಯಾದರೆ,
ಎಲ್ಲ ಮೌನದಲಿ ಅಡಗಿಹ
ಶಬ್ಧವ ನೀ ಕೇಳುವೆ
ಮೌನರಾಗದಿ ಹರಿವ
ಗಾನಸುಧೆಯ ಕೇಳಿ
ತಲೆದೂಗಿ ಕಾಯ್ವ
ʼಹರಿʼಯ ಇರುವ
ನೀ ತಿಳಿದೆಯಾದರೆ,
ನಿಶ್ಯಬ್ಧದಲ್ಲಡಗಿಹ
ಶಬ್ಧವ ನೀ ಗುನುಗುನಿಸಿ
ಸಂಭ್ರಮಿಸುವೆ.
–ಎಂ.ಆರ್. ಆನಂದ
ಮೌನವಾಗಿದ್ದಾಗ..ಯಾವಯಾವ…ದ್ವನಿಗಳು..ಅನುರುಣಿಸುತ್ತವೆ..ಎಂಬುದನ್ನು… ತಮ್ಮ.ಕವನದಲ್ಲಿ..ಪಡಿಮೂಡಿಸಿರುವುದು…ಮುದತಂದಿತು…ಧನ್ಯವಾದಗಳು ಸಾರ್.
ಧನ್ಯವಾದಗಳು ಮೇಡಂ
ಅರ್ಥಪೂರ್ಣ ಕವನ.
ವಂದನೆಗಳು.
ಚೆನ್ನಾಗಿದೆ ಕವನ
ವಂದನೆಗಳು
ನಿಜ, ಮೌನದಲಿ ಶಬ್ದವ ಹುಡುಕುವವನ ಸೊಬಗಿನ ಜಗತ್ತಿಗೆ ಎಲ್ಲೆಯೇ ಇಲ್ಲ!
ತಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.