ಕಾಣದಂತೆ ಮಾಯವಾದನೋ: ಅಮರನಾಥ ಯಾತ್ರೆ ,ಹೆಜ್ಜೆ 2

Share Button

ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಅಮರನಾಥ ಗುಹೆಯ ಭೌಗೋಳಿಕ ಹಾಗೂ ವೈಜ್ಞಾನಿಕ ವಿವರಗಳನ್ನು ತಿಳಿಯೋಣವೇ? ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹಾ ದೇವಾಲಯ. ಇದು ಸುಮಾರು ಐದು ಸಾವಿರ ವರ್ಷಗಳಷ್ಟು ಪುರಾತನ ದೇಗುಲ ಎಂಬ ದಾಖಲೆಯಿದೆ. ಈ ರಾಜ್ಯದ ರಾಜಧಾನಿಯಾದ ಶ್ರೀನಗರದಿಂದ ನೂರಾ ನಲವತ್ತೊಂದು ಕಿ.ಮೀ. ದೂರದಲ್ಲಿರುವ ಈ ದೇಗುಲವು ಸಮುದ್ರ ಮಟ್ಟದಿಂದ 12,756 ಅಡಿ ಎತ್ತರದಲ್ಲಿದೆ. ಈ ಗುಹೆಯು ಅರವತ್ತು ಅಡಿ ಉದ್ದವಿದ್ದು, ಹದಿನೈದು ಅಡಿ ಎತ್ತರ ಹಾಗೂ ಮೂವತ್ತು ಅಡಿ ಅಗಲವಿದೆ. ಇದೊಂದು ನೈಸರ್ಗಿಕವಾಗಿ ರೂಪುಗೊಂಡಿರುವ ಗುಹೆಯಾಗಿದ್ದು, ಇದರ ಮೇಲ್ಛಾವಣಿಯಿಂದ ಸದಾ ತೊಟ್ಟಿಕ್ಕುವ ನೀರಿನ ಹನಿಗಳು ಘನೀಕೃತವಾಗಿ ಹದಿಮೂರು ಅಡಿ ಎತ್ತರವಿರುವ ಲಿಂಗದ ಆಕಾರವನ್ನು ಪಡೆದಿದೆ. ಅಕ್ಕ ಪಕ್ಕದಲ್ಲಿರುವ ಹಿಮದ ಆಕೃತಿಗಳು ಪಾರ್ವತಿ ಹಾಗೂ ಗಣಪತಿಯನ್ನು ಹೋಲುತ್ತವೆಯಾದ್ದರಿಂದ, ಅವುಗಳಿಗೂ ಪೂಜೆಯನ್ನು ಸಲ್ಲಿಸುತ್ತಾರೆ. ಯಾತ್ರಿಗಳು ಪ್ರತಿವರ್ಷ ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಮಾತ್ರ ಅಮರನಾಥನ ದರ್ಶನವನ್ನು ಪಡೆಯಬಹುದಾಗಿದೆ. ಇದನ್ನು ರಾಸಲಿಂಗ, ಶುದ್ಧಿಲಿಂಗ, ಅಮರೇಶ್ವರ, ಅಮರನಾಥ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆರ್ಯಭಟನು ರಚಿಸಿರುವ ‘ರಾಜವಾಲಿಪಾಠಕ’ ಎಂಬ ಗ್ರಂಥದಲ್ಲಿ ಅಮರನಾಥ ಗುಹೆಯ ಉಲ್ಲೇಖವಿದೆ. ಹನ್ನೊಂದನೇ ಶತಮಾನದಲ್ಲಿ ರಾಣಿ ಸೂರ್ಯಮತೀದೇವಿಯು ಈ ಗುಹಾ ದೇಗುಲಕ್ಕೆ ತ್ರಿಶೂಲವನ್ನು ಸಮರ್ಪಿಸಿದಳೆಂಬ ಮಾಹಿತಿಯೂ ಲಭ್ಯ. ಸ್ಥಳೀಯರು ಇದನ್ನು ಬಾಬಾ ಬರ್ಫಾನಿ ಶಿವಲಿಂಗವೆಂದೂ ಕರೆಯುತ್ತಾರೆ.

ಅಮರನಾಥ ಯಾತ್ರೆಯು ಅಡಿಗಡಿಗೂ ಸಂಕಷ್ಟಗಳನ್ನು ತಂದೊಡ್ಡಿ, ಯಾತ್ರಿಗಳ ಶ್ರದ್ಧೆ, ಸ್ಥೈರ್ಯವನ್ನು ಪರೀಕ್ಷಿಸುವಂತಿದೆ. ಒಂದೆಡೆ ಆತಂಕವಾದಿಗಳ ಆಕ್ರಮಣಕಾರಿ ಮನೋಪ್ರವೃತ್ತಿ, ಮತ್ತೊಂದೆಡೆ ಪ್ರಾಕೃತಿಕ ವಿಕೋಪಗಳು ಯಾತ್ರಿಗಳನ್ನು ಕಂಗೆಡಿಸುತ್ತವೆ. ಕಾಲ್ನಡಿಗೆಯಲ್ಲಿ ಸಾಗುವ ಯಾತ್ರಿಗಳು ಶ್ರೀನಗರದಿಂದ ಹೊರಟು 96 ಕಿ.ಮೀ ದೂರದಲ್ಲಿರುವ ಪಹಲ್‌ಗಾವ್‌ಗೆ ವಾಹನಗಳಲ್ಲಿ ತೆರಳಿ, ನಂತರ 46 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗುವರು. ಮೊದಲ ದಿನ, 9,500 ಅಡಿ ಎತ್ತರದಲ್ಲಿರುವ ಪಹಲ್‌ಗಾವ್‌ನಿಂದ ಹದಿನಾರು ಕಿ.ಮೀ. ದೂರವನ್ನು ಕ್ರಮಿಸಿ ಚಂದನವಾಡಿಯಲ್ಲಿ ತಂಗುವರು. ನಂತರ, ಮೂರು ಕಿ.ಮೀ ದೂರದಲ್ಲಿ 11,000 ಸಾವಿರ ಅಡಿ ಎತ್ತರದಲ್ಲಿರುವ ಪಿಸುಘಾಟ್, ಒಂಭತ್ತು ಕಿ.ಮೀ. ದೂರದಲ್ಲಿ 11,730 ಅಡಿ ಎತ್ತರದಲ್ಲಿರುವ ಶೇಷನಾಗ್ ಸರೋವರ, ಹನ್ನೆರೆಡು ಕಿ.ಮೀ. ದೂರದಲ್ಲಿ 12,000 ಅಡಿ ಎತ್ತರದಲ್ಲಿರುವ ಪಂಚತಾರಿಣಿಯ ಮೂಲಕ ಅಮರನಾಥ ಗುಹೆಯನ್ನು ತಲುಪುವರು. ಇನ್ನೂ ಕೆಲವರು ಬಾಲ್ಟಾಲ್ ಬೇಸ್ ಕ್ಯಾಂಪಿನಿಂದ ಹದಿನಾಲ್ಕು ಕಿ.ಮೀ. ಚಾರಣ ಮಾಡಿ ಅಮರನಾಥ ಗುಹೆಯನ್ನು ತಲುಪುವರು. ಕಡಿದಾದ ರಸ್ತೆಗಳು, ಪರ್ವತಗಳ ಮೇಲೆ ತೆಳುವಾದ ಗಾಳಿ, ಆಮ್ಲಜನಕದ ಕೊರತೆಯನ್ನೂ ನೀಗಿಸಿಕೊಳ್ಳುತ್ತಾ ಸಾಗುವ ಯಾತ್ರಿಗಳ ಸ್ಥೈರ್ಯವನ್ನು ಮೆಚ್ಚತಕ್ಕದ್ದೇ.

ಯಾತ್ರಿಗಳ ಸುರಕ್ಷತೆಗಾಗಿ ಭಾರತೀಯ ಪ್ಯಾರಾ ಮಿಲಿಟರಿ ಪಡೆ, ಕೇಂದ್ರ ಮೀಸಲು ಪಡೆ, ಜಮ್ಮು ಕಾಶ್ಮೀರದ ಪೊಲೀಸ್ ಪಡೆ ಸದಾ ಸನ್ನದ್ಧವಾಗಿರುತ್ತವೆ. ಯಾತ್ರಾರ್ಥಿಗಳು ಪೂರ್ವಭಾವಿಯಾಗಿ ಅಮರನಾಥ ಯಾತ್ರಾ ಟ್ರಸ್ಟ್ ಜೊತೆಗೆ ನೊಂದಾಯಿಸಿಕೊಳ್ಳಬೇಕು. ಮೊದಲಿಗೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆಯಬೇಕು. 2022 ನೇ ಸಾಲಿನಲ್ಲಿ ಜುಲೈ ಮೂವತ್ತರಿಂದ ಅಗಸ್ಟ್ ಹನ್ನೆರಡರವರೆಗೆ ಅಮರನಾಥ ಯಾತ್ರೆ ನಡೆಸಲಾಗುವುದು ಎಂದು ಘೋಷಿಸಲಾಗಿತ್ತು. ಕೊವಿಡ್-19 ರ ಆರ್ಭಟದಿಂದ ಎರಡು ವರ್ಷ ಯಾತ್ರೆ ರದ್ದಾಗಿದ್ದುದರಿಂದ, ಈ ಬಾರಿ ಯಾತ್ರಿಗಳ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು. 1985 ರಲ್ಲಿ 2,000 ದಿಂದ 3,000 ಯಾತ್ರಿಗಳು ಅಮರನಾಥ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ನಿಧಾನವಾಗಿ ಯಾತ್ರಿಗಳ ಸಂಖ್ಯೆ ಹೆಚ್ಚಾಗತೊಡಗಿತು, 40,000 ಸಾವಿರದಿಂದ 50,000 ಸಾವಿರ ಜನರು ಯಾತ್ರೆ ಕೈಗೊಳ್ಳುತ್ತಿದ್ದರು. ನಾಲ್ಕಾರು ವರ್ಷಗಳಿಂದ ಆರರಿಂದ ಎಂಟು ಲಕ್ಷ ಜನ ಅಮರನಾಥ ಗುಹೆಗೆ ಭೇಟಿ ನೀಡುತ್ತಿದ್ದಾರೆ.

ನಾನು ಎಂಟು ಜನ ಗೆಳೆಯರ ಗುಂಪಿನೊಂದಿಗೆ ಅಮರನಾಥ ಯಾತ್ರೆಗೆ ಹೊರಟಿದ್ದೆ. ಗೆಳತಿ ಸುವರ್ಣ ಫೋನ್ ಮಾಡಿ ಅಮರನಾಥಕ್ಕೆ ಹೊಗೋಣ ಬರುತ್ತೀಯ ಎಂದಾಗ ನನ್ನ ಮೊದಲ ಪ್ರತಿಕ್ರಿಯೆ ನಕಾರಾತ್ಮಕವಾಗಿತ್ತು. ಆದರೆ ಮನದಾಳದಲ್ಲಿ ಯಾತ್ರೆಗೆ ಹೋಗುವ ಹಂಬಲ ಪುಟಿಯುತ್ತಿತ್ತು. ಮತ್ತೆ ಗೆಳತಿಗೆ ಫೋನ್ ಮಾಡಿ ಯಾತ್ರೆಗೆ ಬರುವೆನೆಂದು ತಿಳಿಸಿದೆ. ಅವಳ ಮಗ ಕಾರ್ತೀಕ್ ಕಳುಹಿಸಿದ ಎಲ್ಲಾ ಅರ್ಜಿಗಳನ್ನೂ ತುಂಬಿಸಿ ಕಳುಹಿಸಿದೆ. ಆದರೆ ಭೋರ್ಗರೆಯುತ್ತಿದ್ದ ಮಳೆಯನ್ನು ಕಂಡು ಕಂಗಾಲಾಗಿದ್ದೆ. ನಾವು ಯಾತ್ರೆಗೆ ಹೊರಡುವ ಹಿಂದಿನ ದಿನ ಸೂಟ್‌ಕೇಸ್ ಎತ್ತುವಾಗ ಕೆಳಭಾಗದ ಬೆನ್ನಿನ ಭಾಗ ಛಳಕ್ ಎಂದು ಕೂರಲೂ ಆಗದೆ, ನಿಲ್ಲಲೂ ಆಗದ ಪರಿಸ್ಥಿತಿ ಉಂಟಾಗಿತ್ತು. ಮನೆ ತುಂಬಾ ವೈದ್ಯರು, ಮಗ, ಮಗಳು, ಸೊಸೆ, ಅಳಿಯ ಎಲ್ಲರೂ ಒಂದೊಂದು ಬಗೆಯ ನೋವು ನಿವಾರಕ ಮಾತ್ರೆ ತಂದುಕೊಟ್ಟು ಉಪಚರಿಸಿದರು. ಮಾರನೆಯ ದಿನ ಯಾತ್ರಾ ಸಂಸ್ಥೆಯವರು ಅಮರನಾಥ ಯಾತ್ರೆಯನ್ನು ಪುನಃ ಆರಂಭಿಸಿದ ಸುದ್ದಿ ಕೇಳಿ ಬೆನ್ನು ನೋವು ಮಾಯವಾಗಿತ್ತು. ಜುಲೈ ಇಪ್ಪತ್ತೆರಡರಂದು ಶಿವಮೊಗ್ಗಾದಿಂದ ಹೊರಟು ಬೆಂಗಳೂರಿನಲ್ಲಿದ್ದ ಗೆಳತಿ ಸುವರ್ಣ ಮನೆ ತಲುಪಿದೆ. ಮುಂಜಾನೆ ನಾಲ್ಕು ಗಂಟೆಗೆ ಇಂಡಿಗೋ ವಿಮಾನದಲ್ಲಿ ಡೆಲ್ಲಿ ಮೂಲಕ ಶ್ರೀನಗರಕ್ಕೆ ಬಂದು ಸೇರಿದೆವು. ಶ್ರೀನಗರದಲ್ಲಿ ಅಮರನಾಥ ಯಾತ್ರಿಗಳ ಸುರಕ್ಷತೆಗಾಗಿ ಸೈನಿಕರ ದಂಡೇ ನೆರೆದಿತ್ತು. ಒಂದೆಡೆ ಬಂದೂಕು ಹಿಡಿದು ನಿಂತ ಸೈನಿಕರು ಇನ್ನೊಂದೆಡೆ ಯಾತ್ರಿಗಳಿಗೆ ಸುಸ್ವಾಗತ ಕೋರುವ ಫ್ಲೆಕ್ಸಿಗಳು. ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡುತ್ತಿದ್ದವು. ಬಂದೂಕಿನಿಂದ ಎಷ್ಟು ಕಾಲ ಶಾಂತಿ ಸ್ಥಾಪಿಸಲು ಸಾಧ್ಯ? ಮತೀಯ ದ್ವೇಷ, ಹಿಂಸೆಗೆ ಕೊನೆಯೇ ಇಲ್ಲವೇ?

ಶ್ರೀನಗರದಿಂದ ತೊಂಭತೈದು ಕಿ.ಮೀ. ದೂರದಲ್ಲಿದ್ದ ಸೋನೋಮಾರ್ಗ್‌ಗೆ ಪಯಣಿಸುವ ಹಾದಿಯಲ್ಲಿ ಪ್ರಕೃತಿ ಸೌಂದರ್ಯ ಎಲ್ಲರ ಮನ ಸೆಳೆಯುವಂತಿತ್ತು. ನೀಲ ಆಗಸದಲ್ಲಿ ತೇಲುತ್ತಿದ್ದ ಬಿಳಿ ಮೋಡಗಳು, ಹಿಮಾಲಯ ಪರ್ವತದ ಗಿರಿ ಶಿಖರಗಳ ಮಧ್ಯೆ ಹೆಬ್ಬಾವಿನಂತೆ ಹಾದು ಹೋಗುವ ದಾರಿ, ಹಸಿರು ಹೊದ್ದು ನಿಂತ ಬೆಟ್ಟ ಗುಡ್ಡಗಳು, ಹಿಮ ಕರಗಿ ನೀರಾಗಿ ಹರಿಯುತ್ತಿದ್ದ ಜಲಧಾರೆ ನಿಸರ್ಗದ ರಮಣೀಯತೆಯನ್ನು ಪ್ರದರ್ಶಿಸುವಂತಿದ್ದವು. ದಾರಿಯುದ್ದಕ್ಕೂ ನಾವು ಕಂಡದ್ದು – ಸೇಬಿನ ತೋಟಗಳು, ಹುಲುಸಾಗಿ ಬೆಳೆದಿದ್ದ ಕೇಸರಿ ಹೊಲಗಳು ಹಾಗೂ ಸೇಬು ಹಣ್ಣಿನ ಹಾಗಿದ್ದ ಹುಡುಗಿಯರು. ನಮ್ಮ ಅಂದಿನ ತಂಗುದಾಣ ರಾಜ್ ವಿಲಾಸ್ ಹೊಟೇಲ್, ಹಿಂಬಾಗದಲ್ಲಿ ಬೆಟ್ಟ ಗುಡ್ಡಗಳು, ಮುಂದೆ ಝುಳು ಝುಳು ಹರಿಯುತ್ತಿದ್ದ ಸಿಂಧೂ ನದಿ, ಸುತ್ತಲೂ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದ ಕೈತೋಟ, ನಮ್ಮ ಪ್ರಯಾಣದ ಆಯಾಸವನ್ನು ಮರೆಸಿದ್ದವು. ಸಿಂಧೂ ನದಿಯ ದಡದಲ್ಲಿ ಸುತ್ತಾಡಲು ಹೊರಟೆವು. ತಕ್ಷಣವೇ ಅಲ್ಲಿದ್ದ ಸೈನಿಕರು ನಮ್ಮ ಸುತ್ತಾಟಕ್ಕೆ ಬ್ರೇಕ್ ಹಾಕಿ, ಹೊಟೇಲಿಗೆ ಹಿಂದಿರುಗಲು ಆದೇಶಿಸಿದರು. ಬಹುಶಃ ಯಾತ್ರಿಗಳ ಸುರಕ್ಷತೆಗಾಗಿ, ಸೈನಿಕರು ಹಾಕಿದ್ದ ಬೇಲಿ ಇದಾಗಿತ್ತು.

ಈ ಬರಹದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=36660

ಮುಂದುವರಿಯುವುದು…

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

4 Responses

  1. ಅಮರನಾಥ.. ಯಾತ್ರೆ… ಸೊಗಸಾದ… ನಿರೂಪಣೆಯೊಂದಿಗೆ..
    ಓದಿಸಿಕೊಂಡು…ಹೋಗುತ್ತಿದೆ…ಧನ್ಯವಾದಗಳು..ಮೇಡಂ.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ಶಂಕರಿ ಶರ್ಮ says:

    ಯಾತ್ರಾ ವಿವರಣೆ ಬಹಳ ಸೊಗಸಾಗಿ ಮೂಡಿಬರ್ತಾ ಇದೆ…ಧನ್ಯವಾದಗಳು ಮೇಡಂ.

  4. ಲೇಖನವನ್ನು ಓದಿ ಪ್ರತಿಕ್ರಿಯಿಸಿದ ಗೆಳತಿಯರಿಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: