ಅವಿಸ್ಮರಣೀಯ ಅಮೆರಿಕ-ಎಳೆ 43
ಕಲ್ಪನಾತೀತ ಕ್ಯಾಸಿನೋಗಳು
ಒಳಹೊಕ್ಕಾಗ ಬೇರೆಯೇ ಲೋಕ… ಅಲ್ಲಿಯ ವೈಭವವನ್ನು ಏನು ಹೇಳಲಿ!? ಎಲ್ಲೆಲ್ಲೂ ಅಮೃತಶಿಲೆಯ ಮೂರ್ತಿಗಳು. ಗೋಡೆ ಮೇಲೆ, ಛಾವಣಿ ಮೇಲೆ ಎಲ್ಲಿ ನೋಡಿದರೂ… ನಯನ ಮನೋಹರ ಚಿತ್ರಗಳು. ಕಟ್ಟಡದ ಒಳಗೆ ಮುಂಭಾಗದಲ್ಲಿರುವ ಚಂದದ ಮೂರ್ತಿಗಳ ನಡುವೆ ಚಿಮ್ಮುತ್ತಿರುವ ಸುಂದರ ನೀರಿನ ಕಾರಂಜಿ. ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಬರುವ ವಿವಿಧ ಪಂಗಡಗಳ, ವಿವಿಧ ರೀತಿಯ ಜನರನ್ನು ನೋಡುವುದೇ ಬಹಳ ಕುತೂಹಲಕಾರಿ, ಮನೋರಂಜಕವಾಗಿರುತ್ತದೆ! ನಾವಲ್ಲಿರುವಾಗಲೇ ಬಂದ ಆರಡಿಗಿಂತಲೂ ಎತ್ತರದ, ಕೆಂಪು ಕಣ್ಣುಗಳ ದಪ್ಪಗಿನ ನೀಗ್ರೋ ಮಹಿಳೆಯೊಬ್ಬಳನ್ನು ಕಂಡು ನಾನು ನಿಜಕ್ಕೂ ಹೆದರಿದೆ ಎನ್ನಬಹುದು. ನಮ್ಮನ್ನು ಅವಳ ಮುಂದೆ ಕುಬ್ಜರಂತೆ ಕಾಣುತ್ತಿತ್ತು! ಆದರೆ, ಬಹಳ ಸ್ನೇಹಮಯಿ ಹಾಗೂ ಸಂಭಾವಿತಳಾದ ಅವಳು, ನಾವು ಮಕ್ಕಳೊಂದಿಗೆ ಅಲ್ಲೇ ಕಟ್ಟೆ ಮೇಲೆ ಕುಳಿತ ಚಿತ್ರವೊಂದನ್ನು ನಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ಸಹಾಯ ಮಾಡಿದುದರಿಂದ, ಅದರ ಜೊತೆಗೆ ಅವಳ ಸವಿನೆನಪು ಕೂಡಾ ನಮ್ಮ ನೆನಪಿನ ಸಂದೂಕದೊಳಗೆ ಸೇರಿ ಹೋಗುವಂತಾಯಿತು. ಇಲ್ಲಿ ಹೆಚ್ಚಾಗಿ ಕಂಡುಬರುವ ಕರಿಯರನ್ನು ನಾವು ಸಾಮಾನ್ಯವಾಗಿ ನೀಗ್ರೋಗಳೆಂದು ಕರೆದರೂ ಆ ಶಬ್ದವನ್ನು ಸಾರ್ವಜನಿಕವಾಗಿ ತಪ್ಪಿಯೂ ಉಪಯೋಗಿಸುವಂತಿಲ್ಲ…ಅದು ಅಪರಾಧವಾಗುತ್ತದೆ.. ರೆಡ್ ಇಂಡಿಯನ್ಸ್(Red Indians) ಎನ್ನಬೇಕು.
ನಾವು ಈಗಿರುವ ಈ ಕಟ್ಟಡದ ಹೆಸರೇ ಪ್ಯಾರಿಸ್ ಜೂಜುಕೇಂದ್ರ (Paris Casino). ಇದನ್ನು ಐಫೆಲ್ ಟವರ್ ನ ಮಾದರಿಯಲ್ಲಿ ರಚಿಸಲು ಯೋಜನೆ ಸಿದ್ಧಪಡಿಸಿ, 1994ರಲ್ಲಿ ಕಟ್ಟಲು ಪ್ರಾರಂಭವಾಯಿತು. ಆದರೆ ಅದರ ಅಗಾಧ ಎತ್ತರವು, ಬಳಿಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಇಳಿಯುವ ಮತ್ತು ಏರುವ ವಿಮಾನಗಳಿಗೆ ತೊಂದರೆಯಾಗುವುದೆಂಬುದನ್ನು ಮನಗಂಡು, ಅದರ ಎತ್ತರವನ್ನು ಅರ್ಧದಷ್ಟು ಕಡಿಮೆಗೊಳಿಸಿ, 540 ಅಡಿಗಳಷ್ಟು ಎತ್ತರಕ್ಕೆ ಕಟ್ಟಲಾಯಿತು. ಇದು 34 ಅಂತಸ್ತುಗಳನ್ನು ಹೊಂದಿದ್ದು, 95,263 ಚ.ಅಡಿಗಳಷ್ಟು ಜಾಗದಲ್ಲಿ ಕ್ಯಾಸಿನೋವಿದೆ. ಉಳಿದಂತೆ ಇದರಲ್ಲಿ 2,916 ರೂಂಗಳಿವೆ. ಕ್ಯಾಸಿನೋದಲ್ಲಿ ಸುಮಾರು 1,700ರಷ್ಟು ಜೂಜಾಟದ ಯಂತ್ರಗಳಿದ್ದು, ಇವಿಷ್ಟೂ ಜನರಿಂದ ತುಂಬಿರುತ್ತವೆ. ಈ ಮಹಾಸೌಧದ ಹೊರಗಡೆ ಪ್ಯಾರಿಸ್ ನಲ್ಲಿ ಹರಿಯುವ ನದಿಗಳ ರೂಪದಲ್ಲಿ ನಿರ್ಮಿಸಲಾದ ಸೊಗಸಾದ ಕೊಳದಲ್ಲಿ ಓಡಾಡುವ ದೋಣಿಯಲ್ಲಿರುವ ಅಂಬಿಗನು ಹುಟ್ಟು ಹಾಕುತ್ತಾ, ಪ್ಯಾರಿಸ್ ನ ಸಾಂಪ್ರದಾಯಿಕ ಉಡುಗೆ ತೊಟ್ಟು, ಹಾವಭಾವಯುಕ್ತವಾಗಿ ಅಲ್ಲಿಯ ಸಾಂಪ್ರದಾಯಿಕ ಗೀತೆಯನ್ನು ಏರುಧ್ವನಿಯಲ್ಲಿ ಹಾಡುತ್ತಾ ಪ್ರವಾಸಿಗರನ್ನು ಕೊಳದಲ್ಲಿ ಸುತ್ತಾಡಿಸುವುದನ್ನು ನೋಡಲು ವಿಶೇಷವೆನಿಸುತ್ತದೆ. ಈ ದೋಣಿ ವಿಹಾರಕ್ಕೆ ನಿಗದಿತ ಶುಲ್ಕವಿದೆ. ನಾವು ಕೊಳದ ಪಕ್ಕದಲ್ಲಿ ಕುಳಿತು ಐಸ್ಕ್ರೀಮ್ ಮೆಲ್ಲುತ್ತಾ, ಅಲ್ಲಿಯ ನೋಟವನ್ನು ಆಸ್ವಾದಿಸುತ್ತಾ ಸ್ವಲ್ಪ ಸಮಯ ಕಳೆದೆವು.
ಎಲ್ಲಾ ಕಡೆಗಳಿಗೂ ನಡೆದು ಹೋಗಬಹುದಾದರೂ, ಸಾರ್ವಜನಿಕರಿಗಾಗಿ ಪಟ್ಟಣದೊಳಗೆ ಉಚಿತವಾಗಿ ಓಡಾಡಲು ಪುಟ್ಟ ರೈಲಿನ ವ್ಯವಸ್ಥೆಯಿದೆ. ಅದರ ಅನುಭವಕ್ಕಾಗಿ ನಾವು ಅದರೊಳ ಹೊಕ್ಕೆವು. ಸಾಮಾನ್ಯವಾದ ರೈಲಿಗಿಂತ ಅಗಲ ಕಿರಿದಾದ ಈ ಯಾಂತ್ರೀಕೃತ ರೈಲಿನಲ್ಲಿ ಪಯಣಿಸುವ ಅವಧಿ ಅಲ್ಪವಾಗಿದ್ದರೂ ಬಹಳ ಸೊಗಸಾದ ಅನುಭವವನ್ನು ನೀಡಿದ್ದಂತೂ ನಿಜ. ಸಹ ಪ್ರಯಾಣಿಕರ ಸಮಯೋಚಿತ ಸಹಾಯವೂ ಇದರಲ್ಲೊಂದಾಗಿ ಸೇರಿಹೋಯಿತು.
ನಾವು ರೈಲಿನಿಂದ ಇಳಿಯುತ್ತಿದ್ದಂತೆಯೇ ನಮ್ಮ ಮುಂಭಾಗದಲ್ಲೇ ಬಹು ಎತ್ತರಕ್ಕೆ ತಲೆಯೆತ್ತಿ ಕುಳಿತಿತ್ತು…ಸಿಂಹನಾರಿ.. ಸ್ಫಿಂಕ್ಸ್! (Sphinx). ಅದರ ಹಿಂಬದಿಯಲ್ಲಿತ್ತು… ಆಗಸದೆತ್ತರದ ಫಿರಮಿಡ್…ಅದೂ ಅಂತಿಂಥಹದಲ್ಲ, ಪೂರ್ತಿ ಗಾಜಿನದಾಗಿದ್ದು ಫಳಫಳಿಸುತ್ತಿತ್ತು! ಪಟ್ಟಣದ ದಕ್ಷಿಣ ಭಾಗದಲ್ಲಿರುವ LUXOV ಹೆಸರಿನ 30 ಅಂತಸ್ತಿನ, 1,20,000ಚ. ಅಡಿ ವಿಸ್ತೀರ್ಣದ ಈ ಕಟ್ಟಡವನ್ನು ಈಜಿಫ್ಟ್ ನ ಜಗತ್ಪಸಿದ್ಧ ಫಿರಮಿಡ್ ಮಾದರಿಯಲ್ಲಿ 1993ರಲ್ಲಿ ಕಟ್ಟಲಾಯಿತು. ಇದರಲ್ಲಿ ಹೋಟೇಲ್ ಮತ್ತು ಕ್ಯಾಸಿನೋಗಳಿದ್ದು, ಸುಮಾರು 4407ರೂಮುಗಳು, 2000 ಜೂಜಾಟದ ಯಂತ್ರಗಳು, ಹಾಗೂ ಮೇಜಿನ ಮೇಲೆ ಆಡುವಂತಹ 87 ರೀತಿಯ ವಿವಿಧ ಆಟಗಳಿವೆ. ಸುಮಾರು 375 ಮಿಲಿಯ ಡಾಲರ್ ಹಣವು ಇದರ ಪ್ರಾರಂಭದ ನಿರ್ಮಾಣಕ್ಕೆ ಖರ್ಚಾಗಿದ್ದು; ನಂತರದ ದಿನಗಳಲ್ಲಿ ಆಗಿಂದಾಗ್ಗೆ ಕಟ್ಟಡವನ್ನು ಆಕರ್ಷಕವಾಗಿಸುವುದು ನಡೆದೇ ಇತ್ತು. ಅದು ಮಾತ್ರವಲ್ಲದೆ ಜನರ ಆಕರ್ಷಣೆಗಾಗಿ ಇಲ್ಲಿ ಬಿಳಿ ಹುಲಿಯನ್ನು ತಂದಿರಿಸಲಾಗಿತ್ತಾದರೂ, ಅದು ಇತ್ತೀಚೆಗೆ ಅಸುನೀಗಿತ್ತು ಎಂಬ ವಿಷಯ ತಿಳಿಯಿತು. ಮುಂದಕ್ಕೆ ನಮ್ಮ ನಡಿಗೆ ನ್ಯೂಯಾರ್ಕ್ ನ್ಯೂಯಾರ್ಕ್ (Newyork Newyork) ಕ್ಯಾಸಿನೋ ಕಡೆಗೆ…!
ಇದು ನಗರದ ವಾಯವ್ಯ ದಿಕ್ಕಿನಲ್ಲಿದ್ದು, ಅಮೆರಿಕದ ಜಗತ್ಪ್ರಸಿದ್ಧ ನ್ಯೂಯಾರ್ಕ್ ಮಹಾನಗರದ ಪ್ರತಿರೂಪದಂತೆ, ಸುಮಾರು 460 ಮಿಲಿಯ ಡಾಲರ್ ಹಣದಲ್ಲಿ ನಿರ್ಮಾಣಗೊಂಡಿದೆ. ಇಲ್ಲಿ, 26 ರಿಂದ 45 ಅಂತಸ್ತುಗಳುಳ್ಳ 12 ಗಗನಚುಂಬಿ ಬೃಹತ್ ಕಟ್ಟಡಗಳಿವೆ. 1997 ರಲ್ಲಿ ಪ್ರಾರಂಭಿಸಲಾದ ಈ ಕಟ್ಟಡ ಸಮುಚ್ಚಯವು ಸುಮಾರು18 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದ್ದು; ಅದರಲ್ಲಿರುವ ಹೋಟೇಲುಗಳಲ್ಲಿ ಒಟ್ಟು 2024 ರೂಮುಗಳಿವೆ. ಇಲ್ಲಿ ಕ್ಯಾಸಿನೋಗಳ ಜೊತೆಗೆ, ಬೇರೆ ಕ್ಯಾಸಿನೋಗಳಲ್ಲಿ ಇಲ್ಲದಿರುವಂತಹ 108 ಕಿ.ಮೀ. ವೇಗದಲ್ಲಿ, 203 ಅಡಿಗಳಷ್ಟು ಎತ್ತರದಲ್ಲಿ ತಿರುಗುವ ರೋಲರ್ ಕೋಸ್ಟರ್ ನಂತಹ ವಿಶೇಷ ತರಹದ ಆಟಗಳ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಸಮುಚ್ಚಯದ ಮುಂಭಾಗದಲ್ಲಿ ಜಗತ್ಪ್ರಸಿದ್ಧ Statue of Liberty ಯ ಪ್ರತಿಕೃತಿಯು ಮನಸೆಳೆಯುತ್ತದೆ. ಸಮಯದ ಅಭಾವದಿಂದ ಇವುಗಳನ್ನು ದೂರದಿಂದಲೇ ನೋಡಿ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಅದಾಗಲೇ ಸಂಜೆಯಾಗುತ್ತಾ ಬಂದಿತ್ತು…ನಮಗಾಗಿ ಕಾದಿರಿಸಿದ ಹೋಟೇಲ್ Polo Towers ಗೆ ಹೋಗಿ ನಮ್ಮ ರೂಮನ್ನು ವಶಕ್ಕೆ ತೆಗೆದುಕೊಳ್ಳಬೇಕಿತ್ತು. ಹಾಗೆಯೇ ಹೋಗುತ್ತಾ ಒಂದು ಸಣ್ಣ ಸೇತುವೆಯನ್ನು ದಾಟುತ್ತಿದ್ದಾಗ, ಅದರ ಪಕ್ಕದಲ್ಲಿ ಯುವತಿಯೋರ್ವಳು ಬಿಕ್ಷೆ ಬೇಡುತ್ತಿದ್ದುದನ್ನು ಗಮನಿಸಿದೆ. ಅವಳು ತನ್ನ ಮುಖವನ್ನು ಕೆಳಮಾಡಿ ಕುಳಿತಿದ್ದು, ಅತೀ ದೀನಸ್ಥಿತಿಯಲ್ಲಿರುವಂತೆ ಗೋಚರಿಸುತ್ತಿತ್ತು. ನನಗೆ ಬಹಳ ಅಚ್ಚರಿಯಾಯ್ತು…ಇಂತಹ ಸ್ಥಳದಲ್ಲೂ ಇದು ಸಾಧ್ಯವೇ ಎಂದು! ಆಮೇಲೆ ನಿಜ ಸ್ಥಿತಿ ಅರಿವಾದಾಗ ನಿಜಕ್ಕೂ ಗಾಬರಿಯಾಯ್ತು. ಜೂಜಾಟದಲ್ಲಿ ಕೈಯಲ್ಲಿರುವುದನ್ನೆಲ್ಲ ಕಳೆದುಕೊಂಡಾಗ ಇಂತಹ ಸ್ಥಿತಿ ಬರುವುದು ಇಲ್ಲಿ ಮಾಮೂಲು. ಅತೀ ಶ್ರೀಮಂತರು ತಮ್ಮಲ್ಲಿರುವ ರಾಶಿ ಹಣವನ್ನು ಜೂಜಿನಲ್ಲಿ ಖಾಲಿಯಾಗಿಸಿ ಈ ತರಹ ಬೀದಿ ಪಾಲಾಗುವುದು…ಅದರಲ್ಲೂ ಸ್ತ್ರೀಯರು..! ಅಬ್ಬಬ್ಬಾ…ಯೋಚಿಸುವಾಗಲೇ ನನಗೆ ಭಯವಾಗತೊಡಗಿತು. ಒಂದೆರಡು ಡಾಲರುಗಳನ್ನು ಅವಳ ಕೈಯಲ್ಲಿತ್ತು ತೆರಳಿದೆವು.
ನಮ್ಮ ಹೊಸ ಹೋಟೇಲಿಗೆ ತಲಪಿದಾಗ ಸಂಜೆ ಗಂಟೆ ಐದು. ವಿಶಾಲವಾದ ವರಾಂಡ, ಅದರಲ್ಲಿ ಸೋಫಾ ಕಂ ಬೆಡ್ ತರಹದ ದೊಡ್ಡದಾದ ಆಸನ, ಪಕ್ಕದಲ್ಲೇ ಊಟಕ್ಕಾಗಿ ಮೇಜು ಕುರ್ಚಿಗಳು,ಸಕಲ ಸೌಲಭ್ಯಗಳನ್ನು ಒಳಗೊಂಡ ಚೊಕ್ಕದಾದ ಅಡುಗೆ ಕೋಣೆ, ಸಾಕಷ್ಟು ಟವೆಲ್, ಸಾಬೂನು ಇರಿಸಿದ ಸ್ನಾನಗೃಹ..ಎಲ್ಲವನ್ನೂ ನೋಡುವಾಗ ಅಲ್ಲಿಯ ಅಚ್ಚುಕಟ್ಟುತನಕ್ಕೆ ತಲೆದೂಗದಿರಲು ಸಾಧ್ಯವೇ ಇಲ್ಲವೆನ್ನಿ. ಸ್ವಲ್ಪ ಹೊತ್ತಿನಲ್ಲೇ ಕತ್ತಲಾವರಿಸಿತು. ನಿಜವಾಗಿ ಇಲ್ಲಿಯ ಚಟುವಟಿಕೆಗಳು ಹೊರಜಗತ್ತಿಗೆ ತೆರೆದುಕೊಳ್ಳಲು ಆರಂಭವಾಗುವುದೇ ಈ ಹೊತ್ತಿನಿಂದ. ನಾವೂ ಸುತ್ತಾಡಲು ಹೊರಟೆವು…
(ಮುಂದುವರಿಯುವುದು….)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=36373
–ಶಂಕರಿ ಶರ್ಮ, ಪುತ್ತೂರು.
ಚಂದದ ಪ್ರವಾಸ ಕಥನ
ಧನ್ಯವಾದಗಳು
ಸೊಗಸಾದ… ನಿರೂಪಣೆ ಯೊಂದಿಗೆ..ಅಮೆರಿಕಾ.. ಪ್ರವಾಸ..ಕಥನ… ಕೊಡುತ್ತಿರುವ..ನಿಮಗೆ.. ಧನ್ಯವಾದಗಳು.. ಶಂಕರಿ. ಮೇಡಂ
ಧನ್ಯವಾದಗಳು ನಾಗರತ್ನ ಮೇಡಂ.
ನಿರೂಪಣೆ ಚೆನ್ನಾಗಿದೆ
ಧನ್ಯವಾದಗಳು
ಸೊಗಸದ ಪ್ರವಾಸ ಕಥನ
ಕ್ಯಾಸಿನೋಗಳ ಸುಂದರ ವರ್ಣನೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದರೊಂದಿಗೇ ಜೂಜಿನಿಂದಾಗುವ ದುಷ್ಪರಿಣಾಮದ ಬಗ್ಗೆಯೂ ಸೂಚ್ಯವಾಗಿ ನೀಡಿರುವ ಎಚ್ಚರಿಕೆಯೂ ಇಷ್ಟವಾಯಿತು.