ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 3
(ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…)
9. ಹಿಮಚಿರತೆ :
ಹಿಮ ಚಿರತೆ ಒಂದು ಸುಂದರವಾಗಿ ಕಾಣುವ ಪ್ರಾಣಿ. ಎತ್ತರದ ಪರ್ವತಗಳಲ್ಲಿ ಇದರ ವಾಸ. ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪೂರ್ವ-ಪಶ್ಚಿಮ ಹಿಮಾಲಯದಲ್ಲಿ ವಾಸಿಸುತ್ತದೆ. ಹಿಮದಲ್ಲಿ ವಾಸಮಾಡಲು ಇದರ ದೇಹದಲ್ಲಿ ಅನೇಕ ಮಾರ್ಪಾಡುಗಳಿವೆ. ದೇಹದ ಮೇಲೆ ದಟ್ಟವಾದ ಕೂದಲಿದೆ. ಬೂದು ಅಥವಾ ಕೆನೆಹಳದಿ ಬಣ್ಣ. ಬೂದು ಮತ್ತು ಕಪ್ಪುಬಣ್ಣದ ಚುಕ್ಕಿಗಳು ಇರುತ್ತವೆ. ಪಾದಗಳ ಮೇಲೆಯೂ ಕೂದಲು ಇರುತ್ತದೆ. ಬಾಲ ಸುಮಾರು ಒಂದು ಮೀಟರ್ ಉದ್ದವಿರುತ್ತದೆ. ಇದನ್ನು ದೇಹದ ಸೂಕ್ಷ್ಮಭಾಗಗಳು ಬೆಚ್ಚಗಿರಲು ಮುಚ್ಚಿಕೊಳ್ಳುತ್ತದೆ. ವೈಜ್ಞಾನಿಕ ಹೆಸರು ಪ್ಯಾಂಥೆರ ಅನ್ಸಿಯ (Panthera uncia)) ಆತಂಕಕಾರಿ ಸಂಖ್ಯೆಯಲ್ಲಿದೆ ಎಂದು ಗುರುತಿಸಲಾಗಿದೆ.
ಭಾರತದಲ್ಲಿ ಸುಮಾರು 500 ಹಿಮಚಿರತೆಗಳು ಇರಬಹುದು. ಈ ಚಿರತೆ ನಿರ್ನಾಮ ಹೊಂದಬಹುದು ಎನ್ನುವ ಭಯವಿದೆ. ಇದರ ಆಹಾರ ಟಿಬೆಟ್ ಮತ್ತು ಹಿಮಾಲಯದಲ್ಲಿ ಕಂಡುಬರುವ ಭರಲ್ ಎನ್ನುವ ನೀಲಿ ಕುರಿ. ಹಿಮಚಿರತೆಯ ಆವಾಸಸ್ಥಾನಗಳನ್ನು ಮಾನವ ನಾಶಮಾಡುತ್ತಿದ್ದಾನೆ. ಸಂಘರ್ಷವೂ ನಡೆಯುತ್ತಿರುತ್ತದೆ. ಚೀನಾ ದೇಶದ ಸಾಂಪ್ರದಾಯಿಕ ಔಷಧಿಗಳಲ್ಲಿ ಹಿಮಚಿರತೆಯ ದೇಹದ ಭಾಗಗಳನ್ನು ಉಪಯೋಗಿಸುತ್ತಾರೆ. ಆದ್ದರಿಂದ ಕಳ್ಳಬೇಟೆಗೆ ಹಿಮಚಿರತೆ ತುತ್ತಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯಿಂದ ಇದರ ಆವಾಸಸ್ಥಾನಗಳು ಕಡಿಮೆಯಾಗುತ್ತಿವೆ. ಅಳಿವಿನಂಚಿಗೆ ದೂಡಲ್ಪಟ್ಟಿದೆ ಹಿಮಚಿರತೆ.
11. ಕೆಂಪು ಪಾಂಡ :
ಅಳಿವಿನಂಚಿಗೆ ದೂಡಲ್ಪಟ್ಟಿರುವ ಇನ್ನೊಂದು ಮುದ್ದು ಮುದ್ದಾದ ಪ್ರಾಣಿಯೆಂದರೆ ಕೆಂಪು ಪಾಂಡ. ಐಯುಸಿಎನ್ ಕೆಂಪು ಪಟ್ಟಿಯಲ್ಲಿದೆ. ಇದು ಪೂರ್ವ ಹಿಮಾಲಯದಲ್ಲಿ, ಅಂದರೆ ನೇಪಾಳ, ಭೂತಾನ್ ಮತ್ತು ನಮ್ಮ ದೇಶದಲ್ಲಿ ಹಾಗೂ ನೈರುತ್ಯ ಚೀನಾದಲ್ಲಿ ವಾಸಮಾಡುತ್ತದೆ. ಕೆಂಪು ಪಾಂಡ ಪ್ರಪಂಚದಲ್ಲಿಯೇ 10,000 ಕ್ಕೂ ಕಡಿಮೆ ಇದೆ. ಡಬ್ಲ್ಯೂಡಬ್ಲ್ಯೂಎಫ್ ಮಾಡಿರುವ ಗಣತಿಯ ಪ್ರಕಾರ 2020 ರಲ್ಲಿ ಕೇವಲ 1864 ಕಾಡುಗಳಲ್ಲಿ ಉಳಿದಿವೆ. ಕೆಂಪುಪಾಂಡದ ವೈಜ್ಞಾನಿಕ ಹೆಸರು ಎಲ್ಯೂರಸ್ ಫಲ್ಗೆನ್ಸ್ (Ailurus fulgens) ಬಹುಪಾಲು ಸಮಯವನ್ನು ಮರಗಳ ಮೇಲೇ ಕಳೆಯುತ್ತದೆ. ದೇಹದ ಮೇಲೆ ಒತ್ತಾದ ಕೆಂಪು-ಕಂದು ಬಣ್ಣದ, ತುಪ್ಪಳವಿದೆ. ಬಾಲ ಉದ್ದವಾಗಿದ್ದು, ಪೊದೆಯಂತೆ ಕೂದಲಿರುತ್ತದೆ. ಇದು ಕೊಂಬೆಯಿಂದ ಕೊಂಬೆಗೆ ಹೋಗುವಾಗ ಮತ್ತು ಚಲಿಸುವಾಗ ಸಮತೋಲನಕ್ಕೆ ಸಹಾಯಕಾರಿ. ನಡೆಯುವಾಗ ಅಡ್ಡಡ್ಡಕ್ಕೆ ವಾಲುವಂತೆ ಅನ್ನಿಸುತ್ತದೆ. ಏಕೆಂದರೆ ಮುಂದಿನ ಕಾಲುಗಳು ಕುಳ್ಳಾಗಿವೆ. ಬೆಕ್ಕಿಗಿಂತ ಸ್ವಲ್ಪ ದೊಡ್ಡಪ್ರಾಣಿ. ಹೊಟ್ಟೆ ಮತ್ತು ಕಾಲುಗಳು ಕಪ್ಪುಬಣ್ಣ. ತಲೆಯ ಆಚೀಚೆ ಮತ್ತು ಕಣ್ಣಿನ ಮೇಲ್ಭಾಗದಲ್ಲಿ ಬಿಳಿಯ ಪಟ್ಟೆಗಳಿವೆ. ಇದು ಉಗುರುಗಳನ್ನು ಅರ್ಧ ಒಳಗೆ ಎಳೆದುಕೊಳ್ಳಬಹುದು. ಕೊಂಬೆಗಳನ್ನು ಗಟ್ಟಿಯಾಗಿ ಹಿಡಿಯುವುದರಲ್ಲಿ ಇವು ಸಹಾಯ ಮಾಡುತ್ತವೆ. ಬಿದಿರನ್ನು ಹಿಡಿಯಲು ಹೆಬ್ಬೆಟ್ಟಿನ ಮೂಳೆ ದೊಡ್ಡದಾಗಿದೆ. ಉದ್ದದ ಪೊದೆಯಂತಿರುವ ಬಾಲ ಚಳಿಗಾಲದಲ್ಲಿ ದೇಹದ ಭಾಗಗಳಿಗೆ ಹೊದಿಕೆಯಂತೆ ಇದ್ದು ಚಳಿ ತಡೆಯುತ್ತದೆ. ಕೆಂಪು ಪಾಂಡ ಬೊಂಬಿನ ಎಲೆಗಳನ್ನು ಮತ್ತು ಬೊಂಬನ್ನು ತಿನ್ನುತ್ತದೆ. ಒಮ್ಮೊಮ್ಮೆ ಹಣ್ಣು, ಕೀಟಗಳು, ಪಕ್ಷಿಗಳ ಮೊಟ್ಟೆ ಮತ್ತು ಚಿಕ್ಕ ಹಲ್ಲಿಯಂತಹ ಪ್ರಾಣಿಗಳನ್ನು ತಿನ್ನುತ್ತದೆ.
ಕೆಂಪು ಪಾಂಡದ ಶತ್ರು ಪ್ರಕೃತಿಯಲ್ಲಿ ಹಿಮಚಿರತೆ. ಇದರ ಮರಿಗಳನ್ನು ಇತರ ಮಾಂಸಾಹಾರಿ ಪ್ರಾಣಿಗಳು ಮತ್ತು ಬೇಟೆಯಾಡುವ ಪಕ್ಷಿಗಳು ತಿನ್ನಬಹುದು. ಆದರೆ ಮುಖ್ಯ ಶತ್ರು ಮಾನವನೇ ಆಗಿದ್ದಾನೆ. ಕೆಂಪು ಪಾಂಡ ಇರುವ ಕಾಡುಗಳ ನಾಶವಾಗುತ್ತಿದೆ. ಕಳ್ಳ ಬೇಟೆಯಾಡಿ ಹಿಡಿಯುತ್ತಾರೆ. ಮುದ್ದುಪ್ರಾಣಿಯಾಗಿ ಮಾರಾಟ ಮಾಡುತ್ತಾರೆ. ಚೀನಾ ಮತ್ತು ಮಯನ್ಮಾರ್ ದೇಶಗಳಲ್ಲಿ ದೇಹದಭಾಗಗಳನ್ನು ಔಷಧಿಗೆ ಉಪಯೋಗಿಸುತ್ತಾರೆ. ಇದರ ಸುಂದರ ತುಪ್ಪಳವನ್ನು ಟೋಪಿ ಮುಂತಾದುವನ್ನು ಮಾಡಲು ಉಪಯೋಗಿಸುತ್ತಾರೆ. ಕಾಡುಗಳ ನಾಶದಿಂದ ಕೆಂಪು ಪಾಂಡಗಳು ಬೇರ್ಪಟ್ಟು ಅಲ್ಲಲ್ಲೇ ಒಳಸಂತಾನಾಭಿವೃದ್ಧಿ ಆಗುವುದರಿಂದಲೂ ಕಡಿಮೆ ಸಂಖ್ಯೆಯಾಗುತ್ತಿದೆ.
11 ಭಾರತದ ಹುಲಿ :
ಹುಲಿಯ ಬಗ್ಗೆ ತಿಳಿಯದೇ ಇರುವವರು ಯಾರು? ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ. ಕಾಡಿನಲ್ಲಿ ನಿರ್ಭಯವಾಗಿ ಸಂಚರಿಸುವ ಶಕ್ತಿಗೆ ಹೆಸರಾದ ಪ್ರಾಣಿ. ಇದೂ ಕೂಡ ಅಳಿವಿನಂಚಿನಲ್ಲಿದೆ. ‘ಪ್ರಾಜೆಕ್ಟ್ ಟೈಗರ್’ ಎನ್ನುವ ಯೋಜನೆಯಿಂದ ಹುಲಿಯ ಸಂಖ್ಯೆ ಸ್ವಲ್ಪ ಜಾಸ್ತಿಯಾಗಿದೆ. ಹುಲಿಯ ವೈಜ್ಞಾನಿಕ ಹೆಸರು ಪ್ಯಾಂಥೇರ ಟೈಗ್ರಿಸ್ ಟೈಗ್ರಿಸ್ (Panthera tigris tigris) ಭಾರತ ಉಪಖಂಡದಲ್ಲಿ ಕಾಣಬರುತ್ತದೆ. ಎಲ್ಲರೂ ಹುಲಿಯನ್ನು ಮೃಗಾಲಯದಲ್ಲಿ ನೋಡಿಯೇ ಇರುತ್ತಾರೆ. ಪಟ್ಟೆಗಳುಳ್ಳ ಹುಲಿ ಕಿತ್ತಳೆ ಬಣ್ಣದಿಂದ ಸ್ವಲ್ಪ ಹಳದಿ ಬಣ್ಣದವರೆಗೂ ಇರುತ್ತದೆ. ಕಾಡಿನಲ್ಲಿರುವ ಹುಲಿಯ ಆಯುಸ್ಸು 4-10 ವರ್ಷಗಳು. ಹುಲಿಯ ಆಹಾರ ಜಿಂಕೆ, ಕಾಡುಹಂದಿ, ಸಾರಂಗ ಈ ರೀತಿಯ ದೊಡ್ಡ ಪ್ರಾಣಿಗಳು. ವಯಸ್ಸಾದ, ಬೇಟೆಯಾಡಲು ಆಗದ ಹುಲಿ ಹಳ್ಳಿಗಳಿಗೆ ಬಂದು ದನಕರುಗಳನ್ನು, ಮನುಷ್ಯರನ್ನು ಆಕ್ರಮಣ ಮಾಡಬಹುದು. ಹುಲಿಯ ಕಳ್ಳಬೇಟೆ ನಿರಂತರವಾಗಿ ನಡೆದಿದೆ. ಅದರ ಚರ್ಮ, ಉಗುರು, ಮೂಳೆ ಇವುಗಳನ್ನು ಕಳ್ಳತನದಲ್ಲಿ ಸಾಗಿಸಿ ಮಾರುತ್ತಾರೆ. ಚೀನಾದ ನಾಟಿ ಔಷಧಿಯಲ್ಲಿ ಹುಲಿಯ ಎಲುಬುಗಳನ್ನು ಉಪಯೋಗಿಸುತ್ತಾರೆ. ಇದಲ್ಲದೆ ಕಾಡಿನ ನಾಶ, ಇದರಿಂದ ಹುಲಿಯ ಬೇಟೆ ಕಡಿಮೆಯಾಗುವುದೂ ಇನ್ನೊಂದು ಕಾರಣ. ಹುಲಿ, ಸಿಂಹಗಳಿಗೆ ಕಾಡಿನಲ್ಲಿ ಶತ್ರುಗಳೇ ಇಲ್ಲ. ಅವು ಆಹಾರ ಸರಪಣಿಯ ತುದಿಯಲ್ಲಿರುತ್ತವೆ. ಹುಲಿಗಳಿಗೆ ಈಗ ನೆಮ್ಮದಿಯ ತಾಣಗಳಾಗಿರುವುದು ರಕ್ಷಿತಾರಣ್ಯಗಳು. ನಮ್ಮ ದೇಶದ ಅನೇಕ ರಾಷ್ಟ್ರೀಯ ಉದ್ಯಾನಗಳಲ್ಲಿ ಹುಲಿಗಳಿವೆ. ಕರ್ನಾಟಕದ ಬಂಡೀಪುರ, ನಾಗರಹೊಳೆ ಮತ್ತು ಭದ್ರಾ ಅರಣ್ಯಗಳಲ್ಲಿವೆ. ರಣತಂಭೋರ್, ಜಿಮ್ ಕಾರ್ಬೆಟ್ ಉದ್ಯಾನಗಳಲ್ಲಿವೆ. 2018 ರಲ್ಲಿ ನಡೆದ ಗಣತಿಯಲ್ಲಿ 2967 ಹುಲಿಗಳಿದ್ದುವು. ಕರ್ನಾಟಕದಲ್ಲಿ 524 (2018 ರಲ್ಲಿ) ಇದ್ದುವು. ಮಧ್ಯಪ್ರದೇಶದಲ್ಲಿ 526 ಇದ್ದವು. ದೇಶದಲ್ಲಿ ಗಣನೀಯವಾಗಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. 2006 ರಲ್ಲಿ 1411, 2010 ರಲ್ಲಿ 1706, 2014 ರಲ್ಲಿ 2226 ಮತ್ತು 2018 ರಲ್ಲಿ 2967 ಹುಲಿಗಳನ್ನು ಲೆಕ್ಕ ಮಾಡಲಾಯಿತು. ಹುಲಿ-ಬಲಿಪ್ರಾಣಿಗಳ ಲೆಕ್ಕಾಚಾರ 2020 ರಲ್ಲಿ ನಡೆದ ಗಣತಿ ಅನ್ವಯ ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮೀ. ಗೆ 12 ಹುಲಿಗಳು ವಾಸಿಸುತ್ತಿವೆ. ನಾಗರಹೊಳೆ ಅರಣ್ಯದಲ್ಲಿ 125 ಹುಲಿ ವಾಸವಿದ್ದು, ಹುಲಿ ಅಭಿವೃದ್ಧಿಗೆ ಪೂರಕವಾದ ಅರಣ್ಯ ಮತ್ತು ಆಹಾರ ಸರಪಳಿ ಉತ್ತಮವಾಗಿದ್ದು, ಪ್ರತಿ ಚದರ ಕಿ.ಮೀ. ಗೆ ಚುಕ್ಕಿ ಜಿಂಕೆ 24, ಸಾಂಬಾರ 5, ಕಾಡುಕುರಿ 2, ಕಡವೆ 5, ಕಾಡುಹಂದಿ 4೪ ವಾಸ ಇವೆ.
(ಮುಗಿಯಿತು)
-ಡಾ.ಎಸ್.ಸುಧಾ, ಮೈಸೂರು
ಅಪರೂಪದ ಮಾಹಿತಿಗಳನ್ನೊಳಗೊಂಡ ಬರಹ
ವಂದನೆಗಳು
ನಿಜವಾಗಿಯೂ… ತಿಳಿದು ಕೊಳ್ಳಲೇಬೇಕಾದ…ಸಂಗತಿ…ಬಹಳ.
ಚೆನ್ನಾದ..ವಿವರಣೆಯೊಂದಿಗೆ…. ಬರೆಯುತ್ತಿರುವ ನಿಮಗೆ…ನನ್ನ. ನಮನಗಳು..ಸುಧಾಮೇಡಂ.
ವಂದನೆಗಳು. ಸುಧಾ
ಅಳಿವಿನಂಚಿನಲ್ಲಿರುವ ಪ್ರಾಣಿಗಳ ಕುರಿತ ಬರೆಹವು ಉತ್ತಮ ಮಾಹಿತಿಗಳನ್ನು ಒಳಗೊಂಡಿರುವಂತೆಯೇ ಮಾನವನಿಗೆ ಎಚ್ಚರಿಕೆಯ ಗಂಟೆಯನ್ನೂ ಬಡಿದಿದೆ!
ವಂದನೆಗಳು. ಸುಧಾ
Hima chirathe chitra tappgi ಆಚಾಗಿದೆ. ಕ್ಷಮಿಸಿ. ಸುಧಾ.
ಹೌದು, ಅಚಾತುರ್ಯವಾಗಿದೆ, ನಮ್ಮ ಗಮನಕ್ಕೆ ತಂದುದಕ್ಕಾಗಿ ಧನ್ಯವಾದಗಳು.ಈಗ ಸರಿಪಡಿಸಿದ್ದೇವೆ.
ಜಾಗ್ರತೆ ಮೂಡಿದರೆ ಸಂತೋಷ
ಅಳಿವಿನಂಚಿನಲ್ಲಿರುವ ಪ್ರಾಣಿಗಳ ಲೇಖನ ಮಾಲೆ ಅತ್ಯಂತ ಮಾಹಿತಿಪೂರ್ಣ ಮತ್ತು ಸಂಧರ್ಬೋಚಿತವಾಗಿಯೂ ಮೂಡಿ ಬಂತು. ಅಭಿನಂದನೆಗಳು.