ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 18
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಪಾರ್ಸಿ ಕುಟುಂಬದಲ್ಲಿ ಜನಿಸಿದ ರೂಪಾಬಾಯಿ ಫರ್ದೂಂಜಿ ವಿದ್ಯಾಭ್ಯಾಸವನ್ನು 1885ರಲ್ಲಿ ಆರಂಭಿಸಿ ಹೈದರಾಬಾದಿನ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದರು. 1889ರಲ್ಲಿ ಮೆಡಿಕಲ್ ಡಾಕ್ಟರ್‌ಗೆ ಸಮಾನವಾದ ಹಕೀಮ್ ಪದವಿಯನ್ನು ಪಡೆದು ಉನ್ನತ ವಿದ್ಯಾಭ್ಯಾಸಕ್ಕಾಗಿ ಬಾಲ್ಟಿಮೋರ್‌ಗೆ ತೆರಳಿದರು ಅಲ್ಲಿಯ ಜಾನ್ಸ್ ಹಾಕಿನ್ಸ್ ಹಾಸ್ಪಿಟಲಿನಲ್ಲಿ ಅನೆಸ್ಟಿಕ್ಸ್ (ಅರೆವಳಿಕೆ ಶಾಸ್ತ್ರ) ವಿಭಾಗದಲ್ಲಿ ಮೆಡಿಕಲ್ ಪದವಿಯನ್ನು ಪಡೆದರು. ಆನಿಬೆಸೆಂಟ್ ಅವರ ಪ್ರೋತ್ಸಾಹದಿಂದ ಅನೆಸ್ತಿಟಿಕ್ಸ್ ಕ್ಷೇತ್ರದಲ್ಲಿ ಮತ್ತೂ ಹೆಚ್ಚಿನ ಅನುಭವವನ್ನು ಪಡೆಯಲು 1909ರಲ್ಲಿ ಎಡಿನ್ ಬರ್ಗ್, ಸ್ಕಾಟ್ಲೆಂಡಿಗೆ ಹೋದರು. ಅನೆಸ್ತೆಟಿಕ್ಸ್ ಕ್ಷೇತ್ರದಲ್ಲಿಯ ಪರಿಣತಿಗೆ ಪೂರಕವಾದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಲ್ಲಿ ಡಿಪ್ಲೊಮ ಪದವಿಯನ್ನು ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದಿಂದ ಪಡೆದು ಭಾರತಕ್ಕೆ ಹಿಂದಿರುಗಿದರು. ಭಾರತದಲ್ಲಿ ಕ್ಲೋರೋಫಾರಂನ್ನು ಅರಿವಳಿಕೆಯಾಗಿ ಬಳಕೆಗೆ ತರುವುದರಲ್ಲಿ ಪ್ರಧಾನ ಪಾತ್ರ ವಹಿಸಿದ ರೂಪಾಬಾಯಿ 1888 ಮತ್ತು 1891ರ ಕ್ಲೋರೋಫಾರಂ ಕಮಿಷನ್‌ಗಳಲ್ಲಿ ಕ್ರಿಯಾಶೀಲ ಪಾತ್ರವನ್ನು ಹೊಂದಿದ್ದರು.
1889ರಿಂದ 1917ರ ವರೆಗೆ ಹೈದರಾಬಾದಿನ ಬ್ರಿಟಿಷ್ ರೆಸಿಡೆನ್ಸಿ ಹಾಸ್ಪಿಟಲಿನಲ್ಲಿ, ಅಫ್ಜಲ್‌ಗುಂಜ್ ಹಾಸ್ಪಿಟಲಿನಲ್ಲಿ (ಉಸ್ಮಾನಿಯಾ ಜನೆರಲ್ ಹಾಸ್ಪಿಟಲಿನಲ್ಲಿ) ಮತ್ತು ವಿಕ್ಟೋರಿಯಾ ಝೆನಾನಾ ಮ್ಯಾಟರ್ನಿಟಿ ಹಾಸ್ಪಿಟಲಿನಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡಿ 1920ರಲ್ಲಿ ಚದೇರ್‌ಘಾಟ್ ಹಾಸ್ಪಿಟಲಿನಲ್ಲಿ ಸೂಪರಿನ್‌ಟೆಂಡೆಂಟ್ ಆಗಿ ನಿವೃತ್ತಿ ಪಡೆದ ರೂಪಾಬಾಯಿ ಭಾರತದಲ್ಲಿ ಮಾತ್ರವಲ್ಲ ಇಡೀ ಪ್ರಪಂಚದಲ್ಲಿಯೇ ಪ್ರಪ್ರಥಮ ಅರೆವಳಿಕೆ ತಜ್ಞೆ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.
ಇಷ್ಟೆಲ್ಲ ಮಹತ್ವದ ಸಾಧನೆಯನ್ನು ಸ್ವಯಂ ಸ್ಫೂರ್ತಿಯಿಂದ ಮಾಡಿದ್ದರೂ ರೂಪಾಬಾಯಿ ವೈಯಕ್ತಿಕ ಮಾಹಿತಿಯನ್ನು ಕಿಂಚಿತ್ತೂ ಉಳಿಸದಿರುವ ಎಲೆಮರೆಯ ಹೂ!
1886ರಲ್ಲಿ ಕೇರಳದ ಕೊಟ್ಟಾಯಂ ನಲ್ಲಿ ಜನಿಸಿದ ಮೇರಿ ಪೂನೆನ್ ಲೂಕೋಸ್ ವಿಜ್ಞಾನದ ವಿದ್ಯಾರ್ಥಿನಿಯಾಗಿ ಪ್ರವೇಶ ಪಡೆಯುವುದನ್ನು ಅಲ್ಲಿಯ ಮಹಾರಾಜ ಕಾಲೇಜು ತಿರಸ್ಕರಿಸಿದುದರಿಂದ ಅನಿವಾರ್ಯವಾಗಿ ಇತಿಹಾಸದ ವಿದ್ಯಾರ್ಥಿನಿಯಾದರು. ಮದ್ರಾಸ್ ವಿಶ್ವವಿದ್ಯಾನಿಲಯದ ಪ್ರಪ್ರಥಮ ಪದವೀಧರೆಯಾದರು. ಆನಂತರ ವೈದ್ಯಕೀಯವನ್ನು ಅಧ್ಯಯನ ಮಾಡಲು ಯುನೈಟೆಡ್ ಕಿಂಗ್‌ಡಮ್.ಗೆ ಹೋದರು. ಲಂಡನ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಭಾಗದಲ್ಲಿ ಪ್ರಪ್ರಥಮ ಭಾರತೀಯ ಪದವೀಧರೆಯಾದರು. ಲಂಡನ್ನಿನ ರೋಟುಂಡ ಹಾಸ್ಪಿಟಲ್ ಮತ್ತು ಗ್ರೇಟ್ ಓರ್ಮಂಡ್ ಸ್ಟ್ರೀಟ್ ಹಾಸ್ಪಿಟಲ್ ಗಳಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡಿದರು. ಗೈನಕಾಲಜಿಸ್ಟ್ ಮತ್ತು ಅಬ್‌ಸ್ಟ್ರೆಷಿಯನ್ ಆಗಿ 1916ರಲ್ಲಿ ಭಾರತಕ್ಕೆ ಹಿಂದಿರುಗಿ ಥೈಕಾಡ್ ನ “ವುಮೆನ್ ಅಂಡ್ ಚಿಲ್ಡ್ರನ್ ಹಾಸ್ಪಿಟಲಿ”ನಲ್ಲಿ ಗೈನಕಾಲಜಿಸ್ಟ್ ಆಗಿ ನೇಮಕಗೊಂಡರು.
1924ರಲ್ಲಿ ದರ್ಬಾರ್ ಫಿಸಿಷಿಯನ್ ಆಗಿ ನೇಮಕಗೊಂಡು ಟ್ರಾವಂಕೂರಿನ ಮೆಡಿಕಲ್ ಸರ್ವೀಸಿನ ಮುಖ್ಯಸ್ಥರಾದ ಪ್ರಪ್ರಥಮ ಭಾರತೀಯ ಮಹಿಳೆ ಎಂಬ ಖ್ಯಾತಿಯನ್ನು ಪಡೆದರು. 1938ರಲ್ಲಿ ಜನೆರಲ್ ಸರ್ಜನ್ ಆಗಿ ಪದೋನ್ನತಿಯನ್ನು ಪಡೆದು ಪ್ರಪ್ರಥಮ ಭಾರತೀಯ ಮಹಿಳೆ ಮಾತ್ರವಲ್ಲದೆ ಪ್ರಪ್ರಥಮ ಜಾಗತಿಕ ಮಹಿಳಾ ಸರ್ಜನ್ ಎಂದೆನ್ನಿಸಿಕೊಂಡರು. ಪಾರಂಪರಿಕ ಸೂಲಗಿತ್ತಿಯರ ಮಕ್ಕಳಿಗೆ ಹೆರಿಗೆ ಮಾಡಿಸುವ ತರಬೇತಿಯ ಯೋಜನೆಯನ್ನು ಕಾರ್ಯಗತ ಮಾಡಿ ಆರೋಗ್ಯ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಿದರು.
1886ರಲ್ಲಿ ಅಮೆರಿಕೆಯ ಪೆನ್ಸಿಲ್ವೇನಿಯನ್ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಪದವಿಯನ್ನು ಪಡೆದ ಎರಡನೆಯ ಭಾರತೀಯ ಮಹಿಳೆ ಗುರುಬಾಯಿ ಕರ್ಮಾಕರ್. 1893ರಿಂದ 23 ವರ್ಷಗಳ ಕಾಲ ಬಾಂಬೆಯ ಅಮೆರಿಕನ್ ಮರಾಠಿ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಕರ್ಮಾಕರ್ ಅವರ ವಿಶೇಷ ಕಾಳಜಿ ಮೂಕವಾಗಿ ಬಗೆ ಬಗೆಯಾಗಿ ಹಿಂಸೆಯನ್ನು ಅನುಭವಿಸುತ್ತಿದ್ದ ಬಡಪಾಯಿ ಬಾಲವಿಧವೆಯರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕುರಿತಾದದ್ದು ಆಗಿತ್ತು. ಆ ದಿಕ್ಕಿನಲ್ಲಿ ಅವರು ಗಮನಾರ್ಹ ಸೇವೆಯನ್ನು ಸಲ್ಲಿಸಿದರು.
ಸೈಟೊ ಜೆನೆಟಿಕ್ಸ್ ಮತ್ತು ಫೈಟೊ ಜಿಯಾಗ್ರಫಿ ಮತ್ತು ಸಸ್ಯಗಳ ತಳಿ ಸಂವೃದ್ಧಿ ಕ್ಷೇತ್ರಗಳಲ್ಲಿ ಕೆಲಸಮಾಡಿದ ಭಾರತೀಯ ಸಸ್ಯವಿಜ್ಞಾನಿ ಜಾನಕಿ ಅಮ್ಮಾಳ್ ಜನಿಸಿದುದು 1897ರಲ್ಲಿ. ಕಬ್ಬು ಮತ್ತು ಬದನೇಕಾಯಿ ಸಸ್ಯಗಳ ವಿಶೇಷ ಅಧ್ಯಯನ ಇವರ ಆದ್ಯತೆಯ ಕ್ಷೇತ್ರ. ಸಸ್ಯಗಳ ಆನುವಂಶೀಯ ಶ್ರೇಣಿಗಳ ಅಧ್ಯಯನದಲ್ಲೂ ಅವರಿಗೆ ವಿಶೇಷ ಆಸಕ್ತಿ ಇತ್ತು. ಕೇರಳದ ಮಳೆಕಾಡುಗಳ ಆರ್ಥಿಕ ಮೌಲ್ಯದ ಬಗ್ಗೆಯೂ ವಿಶೇಷವಾದ ಕಾಳಜಿ ಇತ್ತು. ಔಷಧೀಯ ಸಸ್ಯಗಳ ಪರಂಪರಾಗತ ತಿಳುವಳಿಕೆ ಮತ್ತು ಅವುಗಳಿಗೆ ಸಂಬಂಧಿಸಿದ ರೂಢ್ಯಾಚರಣೆಗಳ ಬಗೆಗೆ ತೀವ್ರವಾದ ಕುತೂಹಲ, ಆಸಕ್ತಿ ಇತ್ತು.
ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದ ಜಾನಕಿ 1924ರಲ್ಲಿ ವಿದ್ಯಾರ್ಥಿವೇತನ ಪಡೆದು ಸ್ನಾತಕೋತ್ತರ ಪದವಿಯನ್ನು ಪಡೆಯಲು ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದರು. 1926ರಲ್ಲಿ ಸ್ನಾತಕೋತ್ತರ ಪದವಿ ಪಡೆದು ಭಾರತಕ್ಕೆ ಹಿಂದಿರುಗಿ ಮದ್ರಾಸಿನ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. “ಓರಿಯಂಟಲ್ ಬಾರ್ಬರ್ ಫೆಲೋ” ಆಗಿ ಮಿಚಿಗನ್ ವಿಶ್ವವಿದ್ಯಾನಿಲಯಕ್ಕೆ ಮತ್ತೆ ಪ್ರವೇಶ ಪಡೆದರು. 1931ರಲ್ಲಿ ಪಿ.ಹೆಚ್.ಡಿ. ಪದವಿ ಪಡೆದು ತ್ರಿವೇಂಡ್ರಂನ ಮಹಾರಾಜ ಕಾಲೇಜ್ ಆಫ್ ಸೈನ್ಸ್ ನಲ್ಲಿ ಪ್ರಾಧ್ಯಾಪಕರಾದರು.
1934ರಲ್ಲಿ ಸಿ.ಡಿ. ಡಾರ್ಲಿಂಗ್‌ಟನ್ ನೊಂದಿಗೆ ಲಂಡನ್ನಿನ “ಜಾನ್ ಇನ್ಸ್ ಇನ್‌ಸ್ಟಿಟ್ಯೂಟ್ ನಲ್ಲಿ ಕೆಲಸ ಮಾಡಲು ಲಂಡನ್ನಿಗೆ ತೆರಳಿದರು. ಅಲ್ಲಿಂದ ಹಿಂತಿರುಗಿದ ನಂತರ ಕೊಯಂಬತ್ತೂರಿನಲ್ಲಿ ಶುಗರ್ ಕೇನ್ ಬ್ರೀಡಿಂಗ್ ಇನ್‌ಸ್ಟಿಟ್ಯೂಟ್ ನಲ್ಲಿ ಸಿ.ಎ. ಬಾರ್ಬರ್ ಅವರೊಂದಿಗೆ ಕೆಲಸ ಮಾಡಿ ಅನೇಕ ಇಂಟರ್ ಜೆನೆಟಿಕ್ ವರ್ಗಗಳ ಉತ್ಪಾದನಾ ಕಾರ್ಯದಲ್ಲಿ ನಿರತರಾದರು. ಭಾರತದ ಪರಿಸರದಲ್ಲಿ ಬೆಳೆಯಬಲ್ಲ ಅತಿ ಸಿಹಿಯಾದ ಕಬ್ಬಿನ ಹೊಸ ತಳಿಯನ್ನು ಅಭಿವೃದ್ಧಿ ಪಡಿಸಿದರು. ಆರು ವರ್ಷಗಳ ಕಾಲ ಜೊತೆಯಾಗಿ ಅಧ್ಯಯನ ಮಾಡಿ ಸಿ.ಡಿ. ಡಾರ್ಲಿಂಗ್ ಟನ್ ಮತ್ತು ಜಾನಕಿ 1945ರಲ್ಲಿ “ಕ್ರೋಮೋಸೋಮ್ಸ್ ಅಟ್ಲಾಸ್ ಆಫ್ ಕಲ್ಟಿವೇಟೆಡ್ ಪ್ಲಾಂಟ್ಸ್” ನ್ನು ಪ್ರಕಟಿಸಿದರು. ಇದರಿಂದಾಗಿ ರಾಯಲ್ ಹಾರ್ಟಿಕಲ್ಚರ್ ಸೊಸೈಟಿಯಲ್ಲಿ ಸೈಟಾಲಜಿಸ್ಟ್ ಆಗಿ ಕೆಲಸ ಮಾಡಲು 1945ರಲ್ಲಿ ಆಹ್ವಾನಿತರಾದರು. ಅಲ್ಲಿ ಮಂಗೋಲಿಯಾ ಸಸ್ಯಗಳ ಆನುವಂಶೀಯತೆ ಮತ್ತು ಅವುಗಳ ಹೈಬ್ರಿಡೈಜೇಷನ್ ಕುರಿತು ಪ್ರಾಯೋಗಿಕ ಅಧ್ಯಯನ ಮಾಡಿದರು.
ಭಾರತ ಸರ್ಕಾರ “ಬಟಾನಿಕಲ್ ಸರ್ವೇ ಆಫ್ ಇಂಡಿಯಾ” ಸಂಸ್ಥೆಯನ್ನು ಪುನರ್ರಚಿಸಲು ಅವರಿಗೆ ನೀಡಿದ ಆಹ್ವಾನವನ್ನು ಸ್ವೀಕರಿಸಿ ಅಲಹಾಬಾದಿನ ಸೆಂಟ್ರಲ್ ಬಟಾನಿಕ್ ಲ್ಯಾಬೊರೇಟರಿಯ ಪ್ರಪ್ರಥಮ ಮಹಿಳಾ ನಿರ್ದೇಶಕರಾದರು. 1984ರ ವರೆಗೂ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ ಕಾರ್ಯಮಗ್ನರಾಗಿ ಮಾನ್ಯರಾಗಿದ್ದರು. ಅವರ ಕಬ್ಬಿನ ತಳಿಗಳ ಸಂಶೋಧನೆಯು ಭಾರತದಾದ್ಯಂತ ಕಬ್ಬು ಬೆಳೆಯುವ ಭೌಗೋಳಿಕ ಪರಿಸರವನ್ನು ವಿಶ್ಲೇಷಿಸಲು ಸಹಾಯಕವಾಯಿತು. ಜಪಾನೀಯರಿಗೆ ಮತ್ತು ಚೀನೀಯರಿಗೆ ಪ್ರಿಯವಾದ ಮಂಗೋಲಿಯಾ ಸಸ್ಯದ ಅವರ ಪ್ರಾಯೋಗಿಕ ಅಧ್ಯಯನವನ್ನು ಮೆಚ್ಚಿಕೊಂಡು ಮಂಗೋಲಿಯಾದ ಒಂದು ವಿಶಿಷ್ಟ ತಳಿಗೆ “ಮಂಗೋಲಿಯಾ ಕೋಬಸ್ ಜಾನಕಿ ಅಮ್ಮಾಳ್” ಎಂದು ನಾಮಕರಣ ಮಾಡಿ ಆಕೆಯನ್ನು ರಾಯಲ್ ಹಾರ್ಟಿಕಲ್ಚರ್ ಸಂಸ್ಥೆ ಗೌರವಿಸಿದೆ. ಅಮೆರಿಕನ್ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ ಪದವಿ ಪಡೆದ ಪ್ರಪ್ರಥಮ ಮಹಿಳಾ ಸಸ್ಯಶಾಸ್ತ್ರಜ್ಞೆ ಮತ್ತು ಮಿಚಿಗನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಪದವಿ ಪಡೆದ ಪ್ರಪ್ರಥಮ ಮಹಿಳಾ ಏಷ್ಯನ್ ಸಸ್ಯಶಾಸ್ತ್ರಜ್ಞೆ ಜಾನಕಿ ಅಮ್ಮಾಳ್.
1901ರಲ್ಲಿ ಜನಿಸಿ ಭಾರತದಲ್ಲಿ ಕಲ್ಕತ್ತ ಡೆಂಟಲ್ ಕಾಲೇಜ್ ಅಂಡ್ ಹಾಸ್ಪಿಟಲ್ ನಲ್ಲಿ 1928ರಲ್ಲಿ ಪದವಿ ಪಡೆದು ದಂತವೈದ್ಯರಾದ ತಬಿತ ಪ್ರಪ್ರಥಮ ಭಾರತೀಯ ಮಹಿಳಾ ದಂತ ವೈದ್ಯೆ. ಪದವಿ ದೊರೆತ ಕೂಡಲೇ ಚಿತ್ತರಂಜನ್ ಸೇವಾಸದನ ಹಾಸ್ಪಿಟಲ್‌ನಲ್ಲಿ ಡೆಂಟಲ್ ಕ್ಲಿನಿಕ್ ಆರಂಭಿಸಿದರು. Dufferin ಆಸ್ಪತ್ರೆಯಲ್ಲಿಯೂ ಕೆಲಸವನ್ನು ಮಾಡಿದ ಇವರು “ಕಲ್ಕತ್ತ ಡೆಂಟಲ್ ಜರ್ನಲ್” ನಲ್ಲಿಯೂ “Women International Zionist Organization” ನಲ್ಲಿಯೂ ಕ್ರಿಯಾಶೀಲರಾಗಿದ್ದರು. ದಕ್ಷಿಣೆ ವಿದ್ಯಾರ್ಥಿವೇತನ ಪಡೆದು 1928ರಲ್ಲಿ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 1930ರಲ್ಲಿ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ ಪದವಿ ಪಡೆದ ಇರಾವತಿ ಕರ್ವೆ ಜನಿಸಿದುದು 1905ರಲ್ಲಿ. 1931ರಿಂದ 1936ರ ವರೆಗೆ ಬಾಂಬೆಯ ಎಸ್.ಎನ್.ಡಿ.ಟಿ. ವುಮೆನ್ ವಿಶ್ವವಿದ್ಯಾನಿಲಯದಲ್ಲಿ ಆಡಳಿತಗಾರರಾಗಿದ್ದ ಇವರು 1939ರಲ್ಲಿ ಡೆಕನ್ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ಮತ್ತು ಆಂತ್ರೊಪಾಲಜಿ ವಿಭಾಗಗಳ ಮುಖ್ಯಸ್ಥರಾದರು. ಇವರ ವಿಶೇಷ ಆಸಕ್ತಿಯ ಕ್ಷೇತ್ರಗಳು ಆಂತ್ರೊಪಾಲಜಿ, ಆಂತ್ರೊಪೊಮೆಟ್ರಿ, ಸೆರಾಲಜಿ, ಪ್ರಾಕ್ತನಶಾಸ್ತ್ರ (ಇಂಡಾಲಜಿ) ಮತ್ತು ಪ್ರಾಗ್ಜೀವಶಾಸ್ತ್ರ (ಪ್ಯಾಲೆಆಂಟಾಲಜಿ). ಇವರು ಪ್ರಖ್ಯಾತ ಪ್ರಪ್ರಥಮ ಮಹಿಳಾ ಆಂತ್ರೊಪಾಲಜಿಸ್ಟ್ ಮತ್ತು ಡಬ್ಲ್ಯು. ಹೆಚ್. ಆರ್. ರಿವರ್ಸ್ ರವರ ತಾಂತ್ರಿಕತೆಯನ್ನು ಆಧರಿಸಿದ ಸಂಸ್ಕೃತಿ ಪ್ರಸಾರಕಿ.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36369
(ಮುಂದುವರಿಯುವುದು)
-ಪದ್ಮಿನಿ ಹೆಗಡೆ
Nice
ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ… ಓದಿ ಸಿಕೊಂಡು..ಹೋಯಿತು…ಧನ್ಯವಾದಗಳು ಮೇಡಂ.
ನಯನ ಬಜಕೂಡ್ಲು ಮೇಡಂ ಮತ್ತು ಬಿ,ಆರ್. ನಾಗರತ್ನ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು/
ಉತ್ತಮ ಮಾಹಿತಿಯುಕ್ತ ಲೇಖನ ಮಾಲೆ.
ಶಂಕರಿ ಶರ್ಮ ಮೇಡಂಗೆ ಧನ್ಯವಾದಗಳು
ಎಲೆಮರೆಯ ಕಾಯಿಗಳ ಅದ್ಭುತ ಪ್ರತಿಭೆಯ ಅನಾವರಣದ ಲೇಖನ ಮಾಲಿಕೆ ಅಪರೂಪದ ಮಾಹಿತಿಗಳನ್ನು ನೀಡುತ್ಯಿದೆ.