ವಿಶೇಷ ದಿನ

ನವರಾತ್ರಿಯ ಉತ್ಸವ…..

Share Button

ಶರತ್ಕಾಲದಲ್ಲಿ  ಪಾಡ್ಯದಿಂದ ಪ್ರಾರಂಭವಾಗುವ ಒಂದು ಉತ್ಸವವೆಂದರೆ ಅದು ‘ಶರನ್ನವರಾತ್ರಿ’.  ದುರ್ಗಾ ದೇವಿಯನ್ನು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ರೂಪಗಳನ್ನು ಮುಖ್ಯವಾಗಿ ಒಂಭತ್ತು ರೂಪಗಳಲ್ಲಿ ಆಚರಿಸುವ ಇದೊಂದು ಮಹೋನ್ನತ ಹಬ್ಬವೇ ಹೌದು.

ಬದುಕಿನಲ್ಲಿ ಹೊಸತನವನ್ನುಂಟುಮಾಡುವ ಈ ಹಬ್ಬವು,  ಪ್ರಕೃತಿ ಮಾತಾ ಸ್ವರೂಪಿಯಾದ ಲಕ್ಷ್ಮಿಯನ್ನು ಮೂರುದಿನಗಳಲ್ಲಿ, ನಂತರದ ಮೂರು ದಿನಗಳಲ್ಲಿ ದಿನಗಳಲ್ಲಿ ಸರಸ್ವತಿಯನ್ನು, ಕೊನೆಯ ಮೂರು ದಿನಗಳನ್ನು ತಾಯಿ ದುರ್ಗೇಯ ಹೆಸರಿನಲ್ಲಿ ಆರಾಧಿಸಿ ನಮ್ಮ ಸತ್ ಚಿತ್ ಆನಂದಕ್ಕೆ ಒಂದು ಹೊಸತನವನ್ನು ಪಡೆಯಬಹುದು.

ನಿಜವಾದ ಆತ್ಮವಿಜಯ ಇಲ್ಲಿ ಪ್ರಾರಂಭವಾಗುತ್ತದೆ.  ಏಕೆಂದರೆ ದಶಮಿಯ ತನಕ ತಾಯಿಯ ಆರಾಧನೆಯನ್ನು ಮಾಡುವ ತಾಳ್ಮೆ ನಮಗಿರಬೇಕಾಗುವುದು ಇಲ್ಲಿಂದಲೇ.  ದೇವಿಯನ್ನು ನಿತ್ಯವೂ ಆರಾಧಿಸಬೇಕಾಗುವುದು.

ಶಕ್ತಿ ದೇವತೆಗೆ ಪ್ರಸನ್ನತೆಯನ್ನು ಉಂಟುಮಾಡಲು ಇದು ಸರಿಯಾದ ಸಮಯ.  ಏಕೆಂದರೆ ದೇವಿಯ ಸಪ್ತಶತಿ ಪಾರಾಯಣ, ನಾರಾಯಣ ಹೃದಯ ಪಾರಾಯಣ, ಲಕ್ಷ್ಮೀ ಹೃದಯ ಪಾರಾಯಣ, ಲಲಿತಾ ಸಹಸ್ರನಾಮ ಇನ್ನಿತರ ದೇವೀ ಸ್ತುತಿಯನ್ನು ಪಾರಾಯಣಮಾಡಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದಾದ ಕಾಲವಿದು.

ಮದುವೆ,ಮುಂಜಿ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳಿಗೆ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ತಿಥಿ, ವಾರ, ನಕ್ಷತ್ರ, ಯೋಗ, ಕರಣ,ಮುಂತಾದವು ಯಾವ ಸಮಯದಲ್ಲೂ ಸಿಗದೇ ಹೋದರೆ ಈ ಮೇಲಿನವುಗಳನ್ನು ಗಮನಿಸದೆ ಈ ಶರನ್ನವರಾತ್ರಿಯ ಸಮಯದಲ್ಲಿ ಆಚರಿಸುವ ವಾಡಿಕೆ ಇದೆ. ಎಲ್ಲ ಕಷ್ಟಗಳನ್ನು ನಿವಾರಿಸುವ ದೇವಿ ಭಕ್ತರಿಗೆ ಮನದುಂಬಿ ಹಾರೈಸುತ್ತಾಳೆಂದು ಹೇಳಿರುವರು.

ಈ ಶರನ್ನವರಾತ್ರಿಯ ಪೂಜಾ ಕಲ್ಪ ಹೇಗಿದೆ ಎಂದರೆ , ಕಲಶಸ್ಥಾಪನೆ, ಪ್ರಾತಃ ಕಾಲ, ಮಧ್ಯಾಹ್ನ, ಪ್ರದೋಷ ಕಾಲಗಳೆಂಬ ಮೂರುಕಾಲಗಳಲ್ಲೂ ಕುಲದೇವತೆಯನ್ನು ಪೂಜಿಸುವುದು.  ಸಪ್ತಶತಿ ಓದುವುದು, ನಂದಾದೀಪ ಬೆಳಗಿಸುವುದು, ಮಾಲಾಬಂಧನ, ಉಪವಾಸ,ಸುವಾಸಿನಿಯರಿಗೆ ಭೋಜನ ಮಾಡಿಸುವುದು, ಕುಮಾರಿ ಭೋಜನ ಮತ್ತು ಪೂಜೆ ಕೊನೆಯಲ್ಲಿ ಸಪ್ತಶತ್ಯಾದಿ ಸ್ತೋತ್ರ,ಮಂತ್ರ,ಹೋಮ ಹವನ ಇವೆಲ್ಲಾ ವಿಹಿತವಾಗಿದ್ದು ತಮ್ಮ ಕುಲಾಚಾರದಂತೆ ಅನುಷ್ಠಾನ ಮಾಡಬೇಕೆಂದು “ಧರ್ಮ ಸಿಂಧು” ಹೇಳುವುದು.

ಕಳಶಸ್ಥಾಪನೆ ರಾತ್ರಿಯಲ್ಲಿ ಮಾಡಬಾರದು . ಪಾಡ್ಯದ ದಿನ ಮಡಿಯುಟ್ಟು, ಸಕಾಲದಲ್ಲಿ ಪ್ರಾರಂಭಿಸಬೇಕು.  ದೇವಿಗೆ ಷೋಡಶೋಪಚಾರ ಪೂಜೆಯನ್ನು ಮಾಡಿ, ಬಲಿಪ್ರಧಾನ ಮಾಡಬೇಕು.  ಉದ್ದಿನ ಅನ್ನ ಅಥವಾ ಬೂದುಗುಂಬಳ ಕಾಯಿಯನ್ನು ಸಮರ್ಪಿಸಬೇಕು.  ದೇವಿಗೆ ಅಖಂಡ ನಂದಾದೀಪವನ್ನು ಬೆಳಗಿಸಬೇಕು.

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

One comment on “ನವರಾತ್ರಿಯ ಉತ್ಸವ…..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *