ವಯಸ್ಸಿಗೇ ಸವಾಲು; ಸರೋಜಿನಿ ಭಟ್
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಎಂಬ ಪುಟ್ಟ ಗ್ರಾಮದವರಾದ ಎಂಬತ್ತೈದರ ಹರೆಯದ ಸರೋಜಿನಿ ಭಟ್ ರವರು ತುಂಬು ಜೀವನೋತ್ಸಾಹ ಲವಲವಿಕೆ ಚುರುಕುತನದ ಚಟುವಟಿಕೆಯ ಪ್ರತಿರೂಪ. ಸದಾ ಹಸನ್ಮುಖಿ ಸ್ನೇಹಮಯಿ ಮೃದುಮಧುರ ಮಾತುಗಳ ಇವರು ಬಂಧುಗಳಲ್ಲಿ “ಅಮ್ಮಯ್ಯ” ಎಂದೇ ಜನಪ್ರಿಯರು.
ಇವರದು ಕಸವನ್ನು ರಸವಾಗಿಸುವ ಸೃಜನಶೀಲ ಮನಸ್ಸು. ಇವರ ಕೈಯ್ಯಲ್ಲಿ ನಿರುಪಯುಕ್ತ ವಸ್ತುಗಳು ಉಪಯುಕ್ತ ವಸ್ತುಗಳಾಗಿ ಮಾರ್ಪಡುತ್ತವೆ. ಬಳಸಿ ಬಿಸಾಡಿದ ಪ್ಲಾಸ್ಟಿಕ್ ಕವರ್ ಗಳಿಂದ ಇವರು ಚೌಕ ವೃತ್ತ ಆಯತಾಕಾರಗಳ ಮೇಲುಹಾಸುಗಳನ್ನು (ಮ್ಯಾಟ್ ಗಳು) ಸಿದ್ಧಪಡಿಸುತ್ತಾರೆ. ಹಳೆಯ ಬಣ್ಣದ ಬಟ್ಟೆಗಳನ್ನು ಹರಿದು ಎಳೆಗಳನ್ನಾಗಿಸಿ ಅವುಗಳನ್ನು ಹೆಣೆದು ಅಂದವಾದ ಕಾಲೊರೆಸನ್ನಾಗಿಸುತ್ತಾರೆ. ಹೆಚ್ಚಾಗಿ ನಿರುಪಯುಕ್ತವಾಗಿ ಕೈಯಿಂದ ಕೈಗೆ ದಾಟಿಹೋಗುವ ರವಿಕೆ ಕಣಗಳನ್ನು ಬಳಸಿ ಶಾಲು, ಕಾಲೊರೆಸು, ಕೈಚೀಲ, ತೋರಣ ಮುಂತಾದವುಗಳನ್ನು ಸಿದ್ಧಪಡಿಸುತ್ತಾರೆ. ಸಿಗರೇಟ್ ಪ್ಯಾಕ್ ಮತ್ತು ಖಾಲಿ ಟೂಥ್ ಪೇಸ್ಟ್ ಟ್ಯೂಬ್ ಗಳು ಇವರ ಕೈಯ್ಯಲ್ಲಿ ಮುದ್ದಾದ ನಾಯಿ ಮುಂತಾದ ಬೊಂಬೆಗಳಾಗಿ ರೂಪು ತಳೆಯುತ್ತವೆ. ಇವರು ಬಟ್ಟೆಯಿಂದ ಸಿದ್ಧಪಡಿಸುವ ಜಿಪ್ ಹ್ಯಾಂಡಲ್ ಇರುವ ವ್ಯಾನಿಟಿ ಬ್ಯಾಗ್ ಗಳು ಕೈಯಿಂದ ಸಿದ್ಧಪಡಿಸಿದವುಗಳೆಂದರೆ ನಂಬಲಾಗದಷ್ಟು ಅಚ್ಚುಕಟ್ಟಾದ ಆಕರ್ಷಕ ವಿನ್ಯಾಸ ಹೊಂದಿರುತ್ತವೆ.
ಎಂಬತ್ತೈದರಷ್ಟು ಈ ಇಳಿವಯಸ್ಸಿನಲ್ಲೂ ಹೊಲಿಗೆ ಮೆಷಿನ್ ನಿಂದ ಬಟ್ಟೆ ಹೊಲಿಯಲು ಸರೋಜಿನಿಯವರಿಗೆ ವಯೋಸಹಜವಾಗಿ ಜೊತೆಗೂಡಿರುವ ಕಾಲುನೋವು ಅಡ್ಡಬರುವುದಿಲ್ಲ. ಚೂಡಿದಾರ್ ಗಳ ಆಧುನಿಕ ವಿನ್ಯಾಸಗಳನ್ನು ಗಮನಿಸಿ ಅದರಂತೆ ಹೊಲಿಯುವುದನ್ನು ಕಲಿಯುವ ಅವರ ಉತ್ಸಾಹದ ಮನೋಭಾವ ನೋಡಿ ವಯಸ್ಸೇ ಹಿಮ್ಮೆಟ್ಟುತ್ತದೇನೋ. ಎಳೆಯ ಮಕ್ಕಳ ಮನರಂಜಿಸಲು ಅವರಿಗೆ ಮೊಲದ ಕಿವಿಯಂತಹ ವಿನ್ಯಾಸದ, ಬಣ್ಣಬಣ್ಣದ ಕುಲಾವಿ, ಅಂಗಿಗಳನ್ನು ಹೊಲಿಯುತ್ತಾರೆ.
ಕರಕುಶಲತೆಯಲ್ಲಿ ಮಾತ್ರವಲ್ಲದೆ ಸಾಂಪ್ರದಾಯಿಕವಾದ ರುಚಿಕರ ತಿನಿಸುಗಳ ತಯಾರಿಯಲ್ಲೂ ಎತ್ತಿದ ಕೈ ಎನಿಸಿರುವ ಇವರ ವ್ಯಕ್ತಿತ್ವದಲ್ಲೇ ‘ಅಮ್ಮಯ್ಯ’ ಹೆಸರಿನಂತೆ ಮಾತೃತ್ವವಿದೆ. ಮೊಮ್ಮಕ್ಕಳು, ಮರಿಮಕ್ಕಳ ಲಾಲನೆಪಾಲನೆಯನ್ನೂ ತಾವೇ ಹರ್ಷದಿಂದ ಕೈಗೆತ್ತಿಕೊಂಡು ಮಾಡಿದವರು. ಸದಾ ಎಲ್ಲರ ಒಳಿತನ್ನು ಹಾರೈಸುತ್ತಾ ನೆರೆಹೊರೆಯವರು, ಊರವರು, ಬಂಧುಬಾಂಧವರಿಗೆಲ್ಲ ಆತ್ಮೀಯರಾಗಿರುವವರು. ತಮ್ಮ ಮನೆ ಸಣ್ಣದೇ ಆದರೂ, ಆದಾಯ ಸೀಮಿತವಾದುದಾದರೂ ಮನಸ್ಸಿನ ಸಿರಿತನಕ್ಕೆ ಸೀಮೆಯಿಲ್ಲದವರು. ಆಗಾಗ ಮನೆಯಲ್ಲಿ ಏನಾದರೂ ಕಾರ್ಯಕ್ರಮ ಏರ್ಪಡಿಸಿ ಆ ನೆಪದಲ್ಲಿ ಬಂಧುಗಳನ್ನು ಆಹ್ವಾನಿಸಿ ನಾಲ್ಕಾರು ದಿನಗಳು ಉಳಿಸಿಕೊಂಡು ಅಟ್ಟು ಉಣಿಸಿ ಬಡಿಸಿ ಕೈತುಂಬ ತಿಂಡಿ ತಿನಿಸುಗಳ ಉಡುಗೊರೆಯೊಂದಿಗೇ ಕಳಿಸಿಕೊಡುವವರು. ಜೀವನಾಸಕ್ತಿಯ ಇವರು ಹಲವು ಪ್ರವಾಸಗಳಲ್ಲೂ ಭಾಗಿಯಾದವರು.
ವೃದ್ಧಾಪ್ಯ ಎಂದರೆ ಅದೊಂದು ಶಾಪ ಎಂಬಂತೆ ತಾವೂ ಗೋಳಾಡುತ್ತಾ ಸುತ್ತಮುತ್ತಲವರೂ ನಿಟ್ಟುಸಿರಿಡುವಂತೆ ಮಾಡುವ ವೃದ್ಧರ ನಡುವೆ ಮಾಗಿದ ಈ ವಯಸ್ಸಲ್ಲಿ ಸದಾ ನಗುಮೊಗದಿಂದ ಇರುವ ಸರೋಜಿನಿಯವರ ಜೀವನೋತ್ಸಾಹ ಎಲ್ಲರಿಗೂ ಸ್ಫೂರ್ತಿಪ್ರದ.
– ಕೆ.ಆರ್.ಉಮಾದೇವಿ ಉರಾಳ, ತೀರ್ಥಹಳ್ಳಿ.
ಅದ್ಭುತ.
Thank you.
ವಾವ್… ಚಟುವಟಿಕೆ ಯ ಚೇತನ ದ ವ್ಯಕ್ತಿ….ಇಂಥಹವರು…ನೋರ್ಕಾಲ ಬಾಳಲಿ..
ಪರಿಚಯಿಸಿದಕ್ಕೆ ಧನ್ಯವಾದಗಳು ಮೇಡಂ
ಮೆಚ್ಚುಗೆಗೆ ಧನ್ಯವಾದಗಳು
Thank you
Very nice
ಮನಸ್ಸನ್ನು ಚಟುವಟಿಕೆಯಲ್ಲಿರಿಸಿದರೆ ವಯಸ್ಸು ಗಾವುದ ದೂರ!
ಇಂತಹ ಹಿರಿಯರೊಬ್ಬರ ಪರಿಚಯ ಲೇಖನ ಬಹಳ ಚೆನ್ನಾಗಿದೆ.
ಮೆಚ್ಚುಗೆಗೆ ಧನ್ಯವಾದಗಳು
ಅಮೋಘ
ಧನ್ಯವಾದಗಳು
ಹಿರಿಯರ ಪರಿಚಯ ಚೆನ್ನಾಗಿದೆ, ಸ್ಫೂರ್ತಿಪ್ರದ..
Reply
Thank you.
ಸುಂದರ ವ್ಯಕ್ತಿ ಚಿತ್ರಣ. ಇಂಥಹವರ ಜೀವನ ಹಲವರಿಗೆ ಮಾರ್ಗದರ್ಶಕವಾಗುತ್ತವೆ. ಅದನ್ನು ಗುರುತಿಸಿ ಲೇಖನವನ್ನಾಗಿಸಿ ಸುರಹೊನ್ನೆಯ ಓದುಗರಿಗೆ ಪರಿಚಯಿಸಿದ್ದಕ್ಕಾಗಿ ಲೇಖಕಿ ಅಭಿನಂದನಾರ್ಹರು.
ತಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.