ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 12
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
1897ರಲ್ಲಿ ಭಾರತದ “ಗವರ್ನರ್ ಜನೆರಲ್ ಕೌನ್ಸಿಲ್” ಅಪರಾಧಿಗಳ ದಾಖಲೆಗಳ ವರ್ಗೀಕರಣಕ್ಕೆ ಬೆರಳಚ್ಚುಗಳ ಮಾಹಿತಿಯನ್ನು ಉಪಯೋಗಿಸಬಹುದು ಎಂಬ ವರದಿಯನ್ನು ಸ್ವೀಕರಿಸಿ “ಕಲ್ಕತ್ತ ಅಂತ್ರೊಪೊಮೆಟ್ರಿಕ್ ಬ್ಯೂರೋ” ವನ್ನು ಆರಂಭಿಸಿತು. ಇದು ಪ್ರಪಂಚದ ಪ್ರಪ್ರಥಮ ಬ್ಯೂರೋ. ಇಲ್ಲಿ ಅಜೀಜುಲ್ ಹಕ್ ಮತ್ತು ಬೋಸ್ ಬೆರಳಚ್ಚುಗಳ ವರ್ಗೀಕರಣ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದರು. ಈ ವ್ಯವಸ್ಥೆಗೆ ಹಕ್ ಗಣಿತ ಸೂತ್ರವೊಂದನ್ನು ಸಿದ್ಧಪಡಿಸಿದರು. ಬೋಸ್ ಟೆಲೆಗ್ರಾಫಿಕ್ ಕೋಡ್ ಸಿಸ್ಟಂನ್ನು ಅನ್ವಯಿಸಿದರು. ಇವರ ಈ ಶೋಧವು ಇವರ ಸೂಪರ್ ವೈಸರ್ ಎಡ್ವರ್ಡ್ ಹೆನ್ರಿಯ ಹೆಸರಲ್ಲಿ “ಹೆನ್ರಿ ಕ್ಲಾಸಿಫಿಕೇಷನ್ ಸಿಸ್ಟಂ” ಎಂದು ಪ್ರಖ್ಯಾತಿಯನ್ನು ಪಡೆಯಿತು. ಅವರಿಬ್ಬರೂ ಭಾರತದ ಬೆರಳಚ್ಚು ತಜ್ಞರಾಗಿ ಮಾನ್ಯರಾದರು.
ಅವರಿಬ್ಬರ ಸಂಶೋಧನೆಯನ್ನು ಪ್ರತ್ಯೇಕವಾಗಿ ಮಾನ್ಯಮಾಡಿದ ಬ್ರಿಟಿಷ್ ಸರ್ಕಾರ 1925ರಲ್ಲಿ ಹಕ್ ಅವರಿಗೆ 1930ರಲ್ಲಿ ಬೋಸ್ ಅವರಿಗೆ ಸಮಾನವಾಗಿ ೫೦೦೦ರೂ. ಗೌರವಧನ ನೀಡಿತು, ರಾವ್ ಬಹದ್ದೂರ್ ಎಂದು ಮರ್ಯಾದಿಸಿತು. ಇತ್ತೀಚೆಗೆ ಯು.ಕೆ.ಫಿಂಗರ್ ಪ್ರಿಂಟ್ ಸೊಸೈಟಿಯು ಅವರಿಬ್ಬರ ಹೆಸರಿನಲ್ಲಿ ಒಂದು ಸಂಶೋಧನಾ ಪ್ರಶಸ್ತಿಯನ್ನು (ರಿಸರ್ಚ್ ಅವಾರ್ಡ್‌ನ್ನು) ಸ್ಥಾಪಿಸಿದೆ. 1990ರ ವರೆಗೂ ಚಾಲ್ತಿಯಲ್ಲಿದ್ದ ಈ “ಹೆನ್ರಿ ಕ್ಲಾಸಿಫಿಕೇಷನ್ ಸಿಸ್ಟಂ” ವ್ಯವಸ್ಥೆಯನ್ನು ಗಣಕಯಂತ್ರೀಕರಣಕ್ಕೆ ಒಳಪಡಿಸದಿದ್ದ ಫೈಲುಗಳ ದತ್ತಾಂಶಗಳನ್ನು ದಾಖಲು ಮಾಡಿಕೊಳ್ಳಲು ಈಗಲೂ ಬಳಸುತ್ತಾರೆ.
1891ರಲ್ಲಿ ತತ್ತ್ವಶಾಸ್ತ್ರದಲ್ಲಿ, 1892ರಲ್ಲಿ ಭೌತಶಾಸ್ತ್ರದಲ್ಲಿ, 1898ರಲ್ಲಿ ಸಸ್ಯಶಾಸ್ತ್ರದಲ್ಲಿ, 1899ರಲ್ಲಿ ಜೀವಶಾಸ್ತ್ರ ಮತ್ತು ಫಿಸಿಯಾಲಜಿಗಳಲ್ಲಿ ಸ್ನಾತಕೋತ್ತರಪದವಿಯನ್ನು, 1894ರಲ್ಲಿ ಕಾನೂನು ಪದವಿಯನ್ನು, 1908ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯದಲ್ಲಿ ಎಂ.ಡಿ. ಪದವಿಯನ್ನು ಪಡೆದ ಅಸೀಮ ಪ್ರತಿಭಾವಂತ ಇಂದು ಮಾಧಬ್ ಮಲ್ಲಿಕ್ ತರ್ಕಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರಗಳ ಬೋಧಕ, ಕಾನೂನನ್ನು ಪ್ರಾಕ್ಟೀಸ್ ಮಾಡುವ ವಕೀಲ ಆಗುವುದರ ಜೊತೆಗೆ ವೈದ್ಯಕೀಯವನ್ನು ಪ್ರಾಕ್ಟೀಸ್ ಮಾಡುವ ವೈದ್ಯರೂ ಆಗಿದ್ದರು. ಇವರೇ ಭಾರತದಲ್ಲಿ ಆಟೊ-ವ್ಯಾಕ್ಸಿನ್ ವಿಧಾನವನ್ನು ಚಾಲ್ತಿಗೆ ತಂದವರು. ಇವರು ಆಹಾರಪದಾರ್ಥಗಳನ್ನು ಒಟ್ಟಿಗೆ ಆವಿಯಲ್ಲಿ ಬೇಯಿಸುವ ಸ್ಟೀಮ್ ಕುಕ್ಕರ್ ಅನ್ನು ಕಂಡುಹಿಡಿದು ಮಾರುಕಟ್ಟೆಯಲ್ಲಿ ಅದು ICMIC ಎಂಬ ಟ್ರೇಡ್ ಮಾರ್ಕ್‌ನಲ್ಲಿ ದೊರಕುವಂತೆ ಮಾಡಿದರು.
ಕಲ್ಕತ್ತ ಮೆಡಿಕಲ್ ಕಾಲೇಜಿನಲ್ಲಿ 1892ರಲ್ಲಿ ವೈದ್ಯಕೀಯ ಪದವಿಯನ್ನು, 1895ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಗೈನಕಾಲಜಿ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಎಂ.ಡಿ. ಪದವಿ ಪಡೆದ ಕೇದಾರನಾಥ್ ರಿಜಿಸ್ಟ್ರಾರ್, ಹೆಡ್ ಆಫ್ ದಿ ಡಿಪಾರ್ಟ್‌ಮೆಂಟ್, ಪ್ರಿನ್ಸಿಪಾಲ್, ಡೀನ್ ಆಗಿ ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದುದು ಮಾತ್ರವಲ್ಲದೆ “ಇಂಡಿಯನ್ ಮೆಡಿಕಲ್ ಗೆಜೆ಼ಟ್” ನಲ್ಲಿ, ಅಂತರ್ರಾಷ್ಟ್ರೀಯ ಮೆಡಿಕಲ್ ಜರ್ನಲ್ ಗಳಲ್ಲಿ ಬ್ರೈನ್ ಟ್ಯೂಮರ್, ಡಯಾಬಿಟಿಸ್, ಟೆಟನಸ್ ಮುಂತಾದವುಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ ; “ಎ ಹ್ಯಾಂಡ್ ಬುಕ್ ಆಫ್ ಆಬ್ಸ್ಟ್ರೆ ಟ್ರಿಕ್ಸ್” (1914), “ಎ ಟೆಕ್ಸ್ಟ್ ಬುಕ್ ಆಫ್ ಮಿಡ್ ವೈಫ್ರಿ” (1920) ಮುಂತಾದ ಕೃತಿಗಳನ್ನು ರಚಿಸಿ ಮೆಡಿಕಲ್ ಅಧ್ಯಯನಕ್ಕೆ ಪಠ್ಯಗಳನ್ನು ಒದಗಿಸಿದ್ದಾರೆ.
ಯೂರೋಪು, ಅಮೆರಿಕಾಗಳಲ್ಲಿ ಪ್ರವಾಸ ಮಾಡಿ ವಿವಿಧ ರೀತಿಯ ಪ್ರಸೂತಿ ಶಾಸ್ತ್ರಜ್ಞರು ಬಳಸುವ ಫೋರ್ಸೆಪ್ಸ್‌ಗಳನ್ನು ಸಂಗ್ರಹಿಸಿ ಸಂಶೋಧನೆ ಮಾಡಿ ಇವರು ಬರೆದ 900 ಪುಟಗಳ “Obstetric Forceps: Its History and Evolution” (1928) ಎಂಬ ಕೃತಿ ಅತ್ಯಂತ ಪ್ರಮುಖವಾದದ್ದು. ತಮ್ಮ ಸಂಶೋಧನೆಯನ್ನು ಆಧರಿಸಿ ಅವರು ತಾವೇ ವಿನ್ಯಾಸ ಮಾಡಿ ಸಿದ್ಧಪಡಿಸಿದ ಲಾಂಗ್ ಕರ್ವ್ಡ್ ಫೋರ್ಸೆಪ್ಸ್ ಭಾರತೀಯ ಸ್ತ್ರೀಯರಿಗೆ ವರದಾನವಾಯಿತು.
ಕಲ್ಕತ್ತದಲ್ಲಿ ಸ್ಥಾಪಿತವಾಗಿದ್ದ “Alipore Zoological Garden”ನ ಪ್ರಪ್ರಥಮ ಸೂಪರಿನ್‌ಟೆಂಡೆಂಟ್ ರಾಮ ಬ್ರಹ್ಮ ಸನ್ಯಾಲ್. ಇವರು ಜೀವಶಾಸ್ತ್ರಜ್ಞರಾಗಿ ತರಬೇತಿ ಪಡೆದ ಪ್ರಪ್ರಥಮ Zoo keeper. ಇವರು “Zoological society of London” ನ ಸಕ್ರಿಯ ಸದಸ್ಯರಾಗಿದ್ದರು captive breeding ನಲ್ಲಿ pioneer ಆಗಿದ್ದರು. ಇವರು 1892ರಲ್ಲಿ ಪ್ರಕಟಿಸಿದ “A handbook of the Management of Animals in Captivity in Lower Bengal” ಮುಂದಿನ 50 ವರ್ಷಗಳ ವರೆಗೂ ಅತ್ಯಂತ ಗಮನಾರ್ಹ ಕೈಪಿಡಿ ಆಗಿತ್ತು. ಇದು ಪ್ರತಿದಿನ ಆಹಾರ ಕೊಟ್ಟ ಪ್ರಾಣಿಗಳ ಸಂಖ್ಯೆ, ಪ್ರಾಣಿಗಳಿಗೆ ಕೊಟ್ಟ ಆಹಾರದ ಪ್ರಮಾಣ, ಆ ಆಹಾರಕ್ಕೆ ತಗುಲಿದ ವೆಚ್ಚ ,ಪ್ರತಿಯೊಂದು ಪ್ರಾಣಿಯ ಅಭ್ಯಾಸಗಳು ಮತ್ತು ವರ್ತನೆಗಳು ಇವುಗಳ ಬಗ್ಗೆ ಸನ್ಯಾಲ್ ತಮ್ಮ ವೃತ್ತಿ-ಕರ್ತವ್ಯದ ಭಾಗವಾಗಿ ಬರೆದ ಲಾಗ್ ಬುಕ್ ನ್ನು ಆಧರಿಸಿತ್ತು.
ಇದರಲ್ಲಿ 241 ವಿಧದ (mammals) ಸಸ್ಸನಿಗಳು ಮತ್ತು 402 ವಿಧದ ಪಕ್ಷಿಗಳ ಬಗ್ಗೆ ಪ್ರತ್ಯೇಕವಾದ ಅವಲೋಕನಗಳಿವೆ. ಅವರ ಅವಲೋಕನಗಳನ್ನು ಆಧರಿಸಿದ ಲೇಖನಗಳನ್ನು ಬರೆಯಲು ಬಂಗಾಳದ ಗವರ್ನರ್ ಕೇಳಿಕೊಂಡಿದ್ದುದರಿಂದ ಅಂಥ ಲೇಖನಗಳನ್ನು ಇಂಗ್ಲಿಷಿನಲ್ಲಿ ಈಗಾಗಲೇ ಬರೆದಿದ್ದರು. ಈ ಲೇಖನಗಳ ಒಟ್ಟಾರೆ ಗ್ರಹಿಕೆ ಕೃತಿಯಾಗಿ ಪ್ರಕಟವಾದ ಕೂಡಲೇ ಈ ತಲಸ್ಪರ್ಶಿ ಕೃತಿಯನ್ನು ಮೆಚ್ಚಿ ವಿಜ್ಞಾನ ಪತ್ರಿಕೆ Nature ರಿವ್ಯೂ ಮಾಡಿದುದರಿಂದ ಸನ್ಯಾಲ್ ಅವರಿಗೆ ಭಾರತದ ಆಚೆಗಿನ ಪ್ರಾಣಿವಿಜ್ಞಾನಿಗಳ ಸಮುದಾಯದ ಮತ್ತು Zoological Society of London ನ ಮಾನ್ಯತೆ ದೊರೆಯಿತು.
ತಮ್ಮ ತಿಳುವಳಿಕೆಯನ್ನು ಮುಂದಿನ ತಲೆಮಾರಿನವರಿಗೆ ಪರಿಚಯಿಸಲು ಸನ್ಯಾಲ್ ಮಕ್ಕಳ ಪತ್ರಿಕೆಗಳಾದ “ಸಖ”ದಲ್ಲಿ 1887ರಿಂದ 1890ರ ವರೆಗೆ, “ಮುಕುಲ್”ನಲ್ಲಿ 1895ರಿಂದ 1900ರ ವರೆಗೆ ಜನಪ್ರಿಯ ಲೇಖನಗಳನ್ನು ಬಂಗಾಳಿಯಲ್ಲಿ ಬರೆದರು. 1896ರಲ್ಲಿ ಶಾಲಾ ಮಕ್ಕಳಿಗಾಗಿ “Hours with Nature” ಎಂಬ ಕೃತಿಯನ್ನು ಪ್ರಕಟಿಸಿದರು. “Asiatic Society of Bengal” ಪತ್ರಿಕೆಯಲ್ಲಿ ಮೃಗಾಲಯದಲ್ಲಿಯ ಅವಲೋಕನಗಳನ್ನು ಆಧರಿಸಿದ ಟಿಪ್ಪಣಿಗಳನ್ನು ಪ್ರಕಟಿಸಿದರು. 1893-95ರ ಅವಧಿಯಲ್ಲಿ “Proceedings of the London Zoological Society” ಪತ್ರಿಕೆಯಲ್ಲಿ ವೈಜ್ಞಾನಿಕ ಟಿಪ್ಪಣಿಗಳನ್ನು ಪ್ರಕಟಿಸಿದರು.
ಇವರು ತಮ್ಮ ವೈಜ್ಞಾನಿಕ ವಿಧಾನಗಳಿಂದಾಗಿ 1883ರಲ್ಲಿ ಆಸ್ಟ್ರೇಲಿಯನ್ ಮತ್ತು ದೇಶೀಯ ದನಗಳ ಮಿಶ್ರ ತಳಿಯನ್ನು ಪಡೆಯುವುದರಲ್ಲಿ; 1893-95ರ ಅವಧಿಯಲ್ಲಿ “Semnopithecus” ಮತ್ತು “S. cristatus”ಗಳ ಮಿಶ್ರ ತಳಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು; 1889ರಲ್ಲಿ ಸುಮಾತ್ರ-ಖಡ್ಗಮೃಗದ ಜನನ ಸಾಧ್ಯವಾಗಿತ್ತು. ಅಂತಹುದು 2001ರ ವರೆಗೂ ಮತ್ತೊಂದು ಸಂಭವಿಸಿರಲಿಲ್ಲ. 1898ರಲ್ಲಿ ಮಾಡಿದ ಯೂರೋಪ್ ಪ್ರವಾಸದಿಂದ ಯೂರೋಪಿನ ಮೃಗಾಲಯಗಳ ಪ್ರಾಣಿಗಳ ವಾಸಸ್ಥಾನ, ಆಹಾರಕ್ರಮ, ಅವುಗಳನ್ನು ನೋಡಿಕೊಳ್ಳುವ ರೀತಿ, captive breeding ಯಶಸ್ವಿಯಾಗಲು ಕಾರಣಗಳು ಇವುಗಳ ಸಂಪೂರ್ಣ ಮಾಹಿತಿ ಪಡೆದು ಅವುಗಳನ್ನು ಆಧರಿಸಿ ತಮ್ಮ ನಿರ್ದೇಶಕರಿಗೆ ವರದಿಯನ್ನು ಪತ್ರಿಕೆಗಳಿಗೆ ಟಿಪ್ಪಣಿಯನ್ನು ಬರೆದರು. ತಮ್ಮ ಅಂತ್ಯದ ವರೆಗೂ ಜೀವಲೋಕದ ಅಧ್ಯಯನದಲ್ಲಿ ಮಗ್ನರಾಗಿದ್ದರು.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36075
(ಮುಂದುವರಿಯುವುದು)
-ಪದ್ಮಿನಿ ಹೆಗಡೆ
ಎಂದಿನಂತೆ ಪದ್ಮಿನಿ ಮೇಡಂ ಅವರ ಮಾಹಿತಿ ಪೂರ್ಣ ಲೇಖನ ಮುಂದುವರೆದಿದೆ…ಕುಕ್ಕರಿನ ಪರಿಕಲ್ಪನೆ…ಅದರ ಆಗಿನ ಆಕಾರ ಗಮನ ಸೆಳೆಯಿತು…. ಧನ್ಯವಾದಗಳು ಮೇಡಂ.
Informative
ಎಂದಿನಂತೆ ಸೊಗಸಾದ ಮಾಹಿತಿಪೂರ್ಣ ಲೇಖನ.
ಪ್ರೀತಿಯಿಂದ ಲೇಖನವನ್ನು ಓದಿ ಪ್ರತಿಕ್ರಿಯಿಸಿದ ನಾಗರತ್ನ ಬಿ. ಆರ್. ಮೇಡಂ, ನಯನ ಬಜಕೂಡ್ಲು ಮೇಡಂ, ಶಂಕರಿ ಶರ್ಮ ಮೇಡಂ ಅವರಿಗೆ ಧನ್ಯವಾದಗಳು