ಲಹರಿ

ನನ್ನೊಳಗೇ ಒಂದಾಗಿದ್ದೆ….ನೀನು..

Share Button
PC: Internet

ನಾ ಹುಟ್ಟಿದಾಗಿನಿಂದ ನನಗೆ ಸಂಗಾತಿಯಾಗಿದ್ದು ನೀನಲ್ಲದೇ ಬೇರೆಯಾರು ?

ನಿನ್ನ ಮೇಲೆ ಅತಿಯಾದ ಮೋಹವೇ.. ಹೌದು. ಅಂದೂ..ಇಂದೂ.. ಮುಂದೆಂದೂ ಇರುತ್ತದೆ. ಎಂದೂ ಬದಲಾಗದು. ಕಿತ್ತರೂ ಬರದಂತೆ.

ಆದರೇಕೋ, ಇತ್ತೀಚೆಗೆ ನಿನ್ನನ್ನು ನಾನು ಅತೀ ಪ್ರೀತಿಯಿಂದ ನೋಡಿಕೊಳ್ಳಲು  ಆಗುತ್ತಲೇ ಇಲ್ಲ. ಬೆಳಗಿನ ಧಾವಂತದ ಬದುಕು ನನ್ನದು.  ನಾ ಕೆಲಸಕ್ಕೆ ಹೋಗುವ ಅವಸರದಲ್ಲಿ ನಿನ್ನ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸತ್ಯ.ನೀನೋ ನನ್ನ ಕಷ್ಟವನ್ನು ಒಂದು ಚೂರೂ ಅರ್ಥ ಮಾಡಿಕೊಳ್ಳುವುದಿಲ್ಲ. ಮನಬಂದಂತೆ ಚೂರೂಚೂರೇ ದೂರಸರಿಯುತ್ತಿರುವೆ. ನಿನಗೇಕೆ ನನ್ನ ಮೇಲಿಷ್ಟು ದ್ವೇಷ ? ತಿಳಿಯದಾಗಿದೆ.

ನೀ ನನ್ನ ಮೇಲೆ ಮುನಿಸಿಕೊಂಡಿಲ್ಲ ತಾನೆ.  ನನಗೆ ಇತ್ತೀಚೆಗಂತೂ ನಿನ್ನ ಮೇಲೆ ಅನುಮಾನ ಶುರುವಾಗಿದೆ. ಏಕೆಂದರೆ ನಾನು ಊಟಮಾಡಿದ್ದನ್ನು ನೀನು ಸಹಿಸದಾಗಿರುವೆ.  ನಾನು ಬದುಕಬೇಕಲ್ಲವ? ಏನೋ ಗಡಿಬಿಡಿಯಲ್ಲಿ ಒಂದು ಚೂರು ತಿಂದು ಓಡುವೆ. ನಿನಗೇನು ಕಷ್ಟ?

ಎಂದಾದರೊಂದು ದಿನ ಹೊರಗೆ ಒಂದಿಷ್ಟು ಪಾನಿಪೂರಿ, ಗೋಬಿ ಮಂಚೂರಿ, ಸಮೋಸ ಚಾಟ್ ಇಷ್ಟ ಪಟ್ಟು ತಿನ್ನುವೆ. ನಿನಗೇನು ಕಷ್ಟ?

ಓಹೋ ನಿನ್ನ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದರ ಬಗ್ಗೆ ಬೇಸರವೇ. ಮತ್ತೆಷ್ಟು ಗಮನ ಹರಿಸಲಿ. ದಷ್ಟ ಪುಷ್ಟವಾಗಿ ಬೆಳೆಯಲು ಸರಿಯಾದ ಸಮಯಕ್ಕೆ ಊಟ ಹಾಕಲು ಆಗಲಿಲ್ಲವೆಂದರೂ ಊಟ ಕೊಡುವೆ, ಹಾಲುಕೊಡುವೆ, ಎಣ್ಣೆ ಹಚ್ಚಿ ಸ್ನಾನ ಮಾಡಿಸುವೆ. ಆದರೂ ಮೊಗದಲ್ಲಿ ಕಳೆಯೇ ಇಲ್ಲದಂತೆ ಒರಟು ಒರಟಾಗಿಬಿಡುವೆ. ಅದೆಷ್ಟು ಬೇಗ ಬಣ್ಣ ಕಳೆದುಕೊಂಡು ಬಿಳುಚಿಬಿಡುವೆ.
ನಾನೇನು ನಿನಗೆ ಹಾರೈಕೆ ಮಾಡಲಿ.

ನೀನೆಂದರೆ ನನಗೆ ತುಂಬಾ ಪ್ರೀತಿ. ಅದೆಷ್ಟು ಜನರ ಕಣ್ಣಿಗೆ ಬಿದ್ದಿದ್ದೆ ನೀನು. ಬೇಸರವಾದಾಗಲೆಲ್ಲಾ ಮುಂಗುರುಳುಗಳಲ್ಲಿ ಬೆರಳುಗಳನಾಡಿಸುತ್ತಾ ಕೂರುವುದೇ ನನಗಿಷ್ಟ. ಕನ್ನಡಿಯ ಮುಂದೆ ನಿನ್ನ ಎಷ್ಟುನೋಡಿಕೊಂಡರೂ ಸಾಲದು.  ವಿಧ ವಿಧ ಕೇಶವಿನ್ಯಾಸ ಮಾಡಿ ಸುಖಿಸುತ್ತಿದ್ದೆ . ಆದರೀಗ ಬಹಳ ಬೇಸರ ತಂದಿರುವೆ. ತುಂಬಾ ಉದುರಿ ಹೋಗುತಿರುವೆ. ಹಾವಿನ ಬಾಲದಂತೆ ಬಳುಕುತಿರುವೆ. ಹೆಡೆಯಂತಿದ್ದ ನೀನು ಬಾಲದಂತೆ ಸುತ್ತಿಕೊಂಡ ಮೇಲೆ ನಾನೀಗ ನಿನ್ನ ಕತ್ತರಿಸಿ ತುಂಡರಿಸಬೇಕೆಂದು ತೀರ್ಮಾನ ಮಾಡಿರುವೆ.

 ಹೋಗಿಬಾ ಪ್ರಿಯ ಕೇಶವೇ.

ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

12 Comments on “ನನ್ನೊಳಗೇ ಒಂದಾಗಿದ್ದೆ….ನೀನು..

    1. ಧನ್ಯವಾದಗಳು ಮೇಡಂ

  1. ಸುಂದರ ಕೇಶ ರಾಶಿಯೊಂದಿಗಿನ ಸಂವಾದ ಬಹಳ ಇಷ್ಟವಾಯ್ತು..
    ಹೋಗೋದು ಮಾತ್ರ, ಪ್ರಿಯ ಕೇಶ… ಪುನ: ಬರೋದಿಲ್ಲ.. ಅಲ್ವಾ?

    1. ಧನ್ಯವಾದಗಳು ಮೇಡಂ

    1. ಧನ್ಯವಾದಗಳು ಮೇಡಂ

  2. ಧನ್ಯವಾದಗಳು ಮೇಡಂ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *