ಮಳೆಯೆಂದರೇ………
ಮತ್ತೆ ನೆನಪುಗಳ ಹೊತ್ತ ಮಳೆಯ ರಭಸ ಹೆಚ್ಚುತ್ತಿದೆ. ಮಳೆ ಎಂದರೆ ನೆನಪೆ! ನೆನಪೆಂದರೆ ಸೊಬಗು..! ಮನದ ಕುಕ್ಕೆಯೊಳಗೆ ಬಚ್ಚಿಟ್ಟಿದ್ದ ನೆನಪುಗಳೆಲ್ಲವೂ ಅಪ್ಪಣೆ ಇಲ್ಲದೆ ಮನದ ಪರದೆಯೆಡೆಗೆ ಮಳೆಯೊಡನೆ ಹರಿದು ತೇವಗೊಳಿಸುತ್ತದೆ. ತುಂತುರು ತುಸು ಸಮಾಧಾನ ಕೊಟ್ಟರೆ, ಗುಡುಗು ಹೆದರಿಸಿ,ಮಿಂಚು ಬೆಚ್ಚಿ ಬೀಳಿಸುತ್ತದೆ. ಈ ಮಳೆ ನೆನಪನ್ನು ಹರವಿ ಎತ್ತೆತ್ತಲೋ ಕೊಂಡೊಯ್ದು ಅದೆಷ್ಟೋ ವರ್ಷಗಳ ಹಿಂದಿನ ನೆನಪಿನ ಪುಟಗಳನ್ನು ಮಗುಚಲಾರಂಭಿಸುತ್ತವೆ . ಕೊರೆಯುವ ಚಳಿಯಲ್ಲೂ ಬೆವರಿಳಿಸಿದರೆ ಒಮ್ಮೊಮ್ಮೆ ಪ್ರಣಯ ಮಳೆಯಾಗಿಯೂ ಆವರಿಸಿಬಿಡುತ್ತದೆ.
ಆಗ ಮಳೆ ನೆನೆದ ದಿನಗಳೆಲ್ಲ ಈಗ ಮತ್ತೆ ಮತ್ತೆ ನಮ್ಮನ್ನು ಹಿಂಬಾಲಿಸುವ ನೆನಪಾಗಿ ಉಳಿದಿದೆ. ಮಳೆಯಲ್ಲರಳುವ ಕೊಡೆಯನ್ನು ಬದಿಗಿಟ್ಟು ಹನಿಗಳತ್ತ ಮುಖ ಮಾಡುವ ಆಸೆಯಾದರೂ, ಈಗ ಒಂದು ಹನಿಯೂ ತಲೆ ನೇವರಿಸದಂತೆ ಜಾಗ್ರತೆ ವಹಿಸುವ ಕಾಲ. ಏಕೆಂದರೇ ಪ್ರಪಂಚವನ್ನು ವ್ಯಾಪಿಸಿ ಕಾಡುತ್ತಿರುವ ಮಹಾಮಾರಿಯ ವಿವಿಧ ಅವತಾರಗಳ ಭಯದ ಜೊತೆ ಜೊತೆಗೆ ವಯಸ್ಸು ಓಡುವ ವೇಗಕ್ಕೆ ಆರೋಗ್ಯವನ್ನು ಕಾಪಿಡಬೇಕಾದ ಅನಿವಾರ್ಯತೆ. ಹಲಸು, ಮಾವುಗಳನ್ನು ತಿಂದುಂಡು, ಸೊಪ್ಪು ಸದೆಗಳತ್ತ ತಿರುಗಿ ಅಣಬೆ ಕಣಲೆಗಳನ್ನ ಹುಡುಕಿ ತರುವುದರ ಜೊತೆಗೆ ಏಡಿಗಳ ಹಿಡಿದು ಅದರ ಖಾದ್ಯಗಳನ್ನು ತಿನ್ನುವ ಬಯಕೆ. ಆದರೆ ಎಡೆಬಿಡದೆ ಸುರಿಯುವ ಮಳೆಯಲ್ಲಿ ಮನೆಯ ಅಂಗಳಕ್ಕೂ ಕಾಲಿಡಲಾಗದೆ ಬರೆ ನೆನಪುಗಳೊಂದಿಗೆ ಬದುಕಬೇಕಿದೆ . ಬದಲಾಗುತ್ತಿರುವ ಮಳೆಯಂತೆಯೇ ನಮ್ಮೊಡನೆ ಧಾವಿಸುವ ನೆನಪುಗಳನ್ನು ಸ್ವೀಕರಿಸಬೇಕಿದೆ. ನಮ್ಮ ಜೀವನದುದ್ದಕ್ಕೂ ಹೃದಯವನ್ನು ತಟ್ಟಿದವರು, ಎದೆಯಾಳಕ್ಕಿಳಿದವರು ಜೊತೆಗೆ ನಮ್ಮನ್ನು ಸಾಕಿ ಸಲಹಿದ ಹಿರಿ ಜೀವಗಳು ಎಡೆಬಿಡದೆ ಜೊತೆಯಾಗಿ ಅವರು ಕೊಟ್ಟ ಒಳ್ಳೆಯ ಹೊತ್ತುಗಳು ಮುಂದೆಂದಿಗೂ ನಮ್ಮೊಡನೆ ಇರುತ್ತವೆ. ಸುರಿಮಳೆಯಲ್ಲಿ ನಾವು ಮನೆಯ ಮಕ್ಕಳೆಲ್ಲಾ ಅಂದು ಸೂರು ಸೋರುವ ಜಾಗದಲ್ಲಿ ಒಳ ನುಗ್ಗುವ ನೀರಿಗೆ ಪಾತ್ರೆಗಳನ್ನಿಟ್ಟು, ಸೋರದ ಜಾಗದಲ್ಲಿ ಕಂಬಳಿ ಹೊದ್ದು ಕುಳಿತು ಮನೆ ಒಳಗೆ ಬೀಳುವ ಹನಿಗಳನ್ನೇ ನೋಡುತ್ತಿದ್ದರೆ ನಮ್ಮಜ್ಜಿ ಹಲಸಿನ ಬೀಜ ಹುರಿದು ಬೆಲ್ಲದ ಕರಿ ಕಾಫಿ ಕಾಯಿಸಿ ನಮಗೆಲ್ಲ ಕೊಡುತ್ತಿದ್ದ ನೆನಪಿನ್ನೂ ನಿನ್ನೆಯಂತೆ ಹಿಂಬಾಲಿಸುತ್ತಿವೆ. ಜೊತೆಗೆ ಅಡಿಗಡಿಗೆ ನಮ್ಮನ್ನು ತಿದ್ದಲು ಬಳಸುತ್ತಿದ್ದ ಗಾದೆಗಳು ಕೂಡ!
ನಮ್ಮ ಬಾಲ್ಯದ ಹುಚ್ಚಾಟಗಳಿಗೆಲ್ಲಾ ನಮ್ಮೊಡನೆ ನಮ್ಮಂತೆಯೇ ಆಡುತ್ತಿದ್ದ ಅಜ್ಜನ ನೆನಪೆಂದರೆ ಅದೊಂದು ಮಜವೇ! ಮತ್ತೂ ಮತ್ತೂ ಅವರ ಒಡನಾಟ ಬೇಕೆನ್ನುವಷ್ಟು ಆಪ್ತತೆ. ಅಜ್ಜ ಕಿತ್ತು ಕೊಟ್ಟ ಹುಣಸೆ ಹಣ್ಣು ಚೀಪುತ್ತಾ ಹುಣಸೆ ಮರದ ಕೊಂಬೆಯನ್ನು ಗಟ್ಟಿ ಹಿಡಿದು ನೇತಾಡುತ್ತಾ ಅಜ್ಜನಿಗೆ ನಮ್ಮನ್ನು ಜೋರಾಗಿ ನೂಕಿ ಉಯ್ಯಾಲೆಯಂತೆ ತೂಗಲು ಹೇಳಿ ನಕ್ಕು ನಲಿದ ದಿನಗಳು. ಅಬ್ಬಾ…! ಪ್ರಪಂಚದ ಸುಖವೆಲ್ಲಾ ಅಜ್ಜನೊಡನೆ ನಮಗೆ ಸಿಕ್ಕಿದ ಬಾಲ್ಯ ಮಧುರ ನೆನಪಿನ ಮಳೆಯಾಗಿ ಕ್ಷಣ ಕ್ಷಣವೂ ಆವರಿಸುತ್ತಲೇ ಇದೆ.
ನಾಟಿ ಔಷಧಿ ಮಾಡುವುದರಲ್ಲಿ ಮತ್ತು ಮರ ಹತ್ತುವುದರಲ್ಲಿ ನಿಪುಣನಾಗಿದ್ದ ನಮ್ಮಜ್ಜ ಆವತ್ತು ಮಾತ್ರ ತುಂತುರು ಮಳೆ ಲೆಕ್ಕಿಸದೆ ಎಲೆ ಅಡಿಕೆ ಹಾಕಿ ಕತ್ತಿ ಹಿಡಿದು ಜೇನು ಹಲಸಿನ ದೊಡ್ಡ ಮರವೇರಿದ್ದರು. ತುಸು ದೂರ ನಿಂತು ಈಗ ಹಣ್ಣು ಬೀಳುತ್ತದೆ ಎಂದು ಕಾದಿದ್ದ ನಮಗೆ ಢಮ್… ಎಂಬ ಸದ್ದು ಕೇಳಿ ದೊಡ್ಡ ಹಣ್ಣೇ ಬಿತ್ತೆಂದು ಓಡಿದರೆ ಬಿದ್ದದ್ದೂ ಅಜ್ಜ. ಅಯ್ಯೋ! ಎಂದು ನಾವೆಲ್ಲ ಓಡಿ ಹತ್ತಿರ ಹೋದರೂ ಬಿದ್ದಲ್ಲಿಂದ ಅಜ್ಜ ನೋಡಿದ ಪರಿಗೆ ನಾವು ಬಿದ್ದು ಬಿದ್ದು ನಕ್ಕು ಹೊಟ್ಟೆ ಕಿವುಚಿ ಅಲ್ಲೇ ಹೊರಳಾಡಿದೆವು. ಅಜ್ಜ ಎದ್ದು ಮುನಿಸುಕೊಂಡು ಜೋರು ಮಾಡಿದಾಗ ಸದ್ಯಕ್ಕೆ ನಿಲ್ಲಿಸಿದರೂ ಎಷ್ಟೋ ವರ್ಷಗಳವರೆಗೆ ಅದನ್ನು ನೆನಪಿಸಿಕೊಂಡು ನಾವೆಲ್ಲಾ ಹಾಸ್ಯ ಮಾಡಿ ಅಜ್ಜನ ಮುಖದಲ್ಲಿ ಮುನಿಸು ಕಾಣುತ್ತಿದ್ದೆವು. ಮುನಿಸು ಅಜ್ಜನಿಗೆ ಬಲು ಅಪರೂಪ. ಹಾಗಾಗಿ ನಮಗೆ ಅಜ್ಜನೆಂದರೆ ಅದೇನೋ ಎಲ್ಲರಿಗಿಂತ ಸಲಿಗೆ.
ಮಳೆ ಹೊತ್ತು ತರುವುದು ಹಳೆ ನೆನಪನ್ನಷ್ಟೇ ಅಲ್ಲ, ಮೊನ್ನೆ ಮೊನ್ನೆಯ ಘಟನೆಗಳನ್ನು ಕೂಡಾ ಕಣ್ಣ ಮುಂದೆ ತಂದು ಕಾಡಿಸದೆ ಇರಲಾರದು.ಶಿಕ್ಷಕಿಯಾಗಿರುವುದರಿಂದ ಶಾಲೆಯಲ್ಲೂ ವರ್ಷ ವರ್ಷವೂ ಮಳೆಗಾಲದಲ್ಲಿ ಒಂದೊಂದು ಬಗೆಯ ಅನುಭವ. ವಾರದ ಹಿಂದೆ ಯಾರಿಗೋ ಬೇಡವಾದ ಎರಡು ಹೆಣ್ಣು ನಾಯಿ ಮರಿಗಳನ್ನು ಶಾಲೆಯ ಮೈದಾನದಲ್ಲಿ ಬಿಟ್ಟು ಹೋಗಿದ್ದರು. ಜಗತ್ತೇನೆಂದು ತಿಳಿಯದೆ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುವ ಮುದ್ದು ಮರಿಗಳು. ಮಕ್ಕಳ ಹಿಂದೆ ಓಡಿ ತರಗತಿ ಕೋಣೆಗೆ ನುಗ್ಗುತ್ತಿದ್ದವು. ಯಾರಿಗೂ ಬೇಡವಾದ ಇವುಗಳ ಪರಿಸ್ಥಿತಿ ನೆನೆದರೆ ಒಂದು ರೀತಿಯ ಅಸಹಾಯಕತೆ. ಜಡಿ ಮಳೆಯಲ್ಲಿ ಮನೆಯಲ್ಲೆ ಸಾಕಿದನಾಯಿಯ ಮರಿಗಳು ಹೆಣ್ಣಾದ ತಪ್ಪಿಗೆ ಹೀಗೆ ಎಲ್ಲೋ ತಂದು ಬಿಟ್ಟು ಹೋಗುವವರ ಮನಸ್ಥಿತಿಗೆ ಏನೆನ್ನಬೇಕು?ಕಳೆದ ಮಳೆಗೆ ಹೀಗೆನಮ್ಮ ಮನೆಯ ಬಳಿ ಯಾರೋ ಬಿಟ್ಟು ನೆನೆಯುತ್ತಿದ್ದಎರಡು ಹೆಣ್ಣು ಮರಿಗಳ ಶೋಚನೀಯ ಸ್ಥಿತಿಗೆ ಮರುಗಿ, ಮಗನ ಪೋಷಣೆಯಲ್ಲಿ ತಿಂದುಂಡು ಈಗ ಮನೆಯ ಭದ್ರತೆಯ ಜವಾಬ್ದಾರಿ ಹೊತ್ತಿದ್ದಾರೆ.
ಅದೊಂದು ಶನಿವಾರ. ಆ ದಿನ ಇದ್ದಕಿದ್ದಂತೆ ಮಳೆಶುರುವಿಟ್ಟಿತ್ತು. ಮಧ್ಯಾಹ್ನದ ಶಾಲೆ ಮುಗಿಸಿ ಮನೆಗೆ ಬಂದು ವಿಶ್ರಾಂತಿಗಾಗಿ ಮಲಗಿದ್ದೆ. ನೆನಪುಗಳೊಂದಿಗೆ ಸರಸವಾಡುತ್ತಾ ಕಣ್ಮುಚ್ಚಿದಾಗ ಇನ್ನೇನು ನಿದ್ದೆ ಆವರಿಸುವ ಹೊತ್ತು. ಬದಿಗಿರಿಸಿದ್ದ ಮೊಬೈಲ್ ರಿಂಗಣಿಸಿ ನಿದ್ದೆಗೆ ಭಂಗ ತಂದಿದ್ದಕ್ಕೆತುಸು ನೀರಸದಿಂದಲೇ ಹಲೋ ಎಂದರೆ ಶಿಕ್ಷಕಿ ಮಿತ್ರರೊಬ್ಬರು ಆಗ ತಾನೇ ಸ್ಕೂಟಿ ಅಪಘಾತದಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ ಸುದ್ದಿ ಅವಸರವಸರವಾಗಿ ಹೇಳಿ ಇಟ್ಟಾಗ ಬೆಚ್ಚಿ ಎದ್ದು ಆಸ್ಪತ್ರೆಗೆ ಓಡಿದರೆ, ಅದಾಗಲೇ, ನೂರಾರು ಶಿಕ್ಷಕರು ಅಲ್ಲಿಗೆ ಜಮಾಯಿಸಿ ಆ ದುರಂತವನ್ನು ಅರಗಿಸಿಕೊಳ್ಳಲಾಗದೆ ನಿಂತಿದ್ದು ಕಣ್ಣಲ್ಲಿ ನಿನ್ನೆ ಮೊನ್ನೆಯ ನೆನಪು ಮತ್ತು ಎಂದೆಂದಿಗೂನಂಬಲಾಗದ ದುರ್ವಿಧಿ. ಇತ್ತೀಚಿನ ದಿನಗಳವರೆಗೂ ನಮ್ಮೊಳಗೆ ನಮ್ಮವರಾಗಿ ಓಡಾಡಿಕೊಂಡಿದ್ದ ಪ್ರತಿಭಾನ್ವಿತ ಶಿಕ್ಷಕಿ. ಶಿಕ್ಷಕರ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವುದರ ಮೂಲಕ ಬಹುಮಾನ ಪಡೆದು ತನ್ನ ಪ್ರತಿಭೆಯನ್ನು ಸಾಬೀತು ಪಡಿಸುತ್ತಿದ್ದ ಆಕೆ ಕುಟುಂಬಕ್ಕೆ ಹಾಗೂ ಶಾಲೆಗೆ ಮಾತ್ರವಲ್ಲ ಇಡೀ ಶಿಕ್ಷಕ ಬಳಗವನ್ನೇ ಬೆಚ್ಚಿ ಬೀಳಿಸಿದ್ದು ಈಗ ನೆನಪಷ್ಟೆ. ಶವಾಗಾರದೊಳಗೆ ರಕ್ತದಲ್ಲಿ ಮಡುಗಟ್ಟಿದ್ದ ಶಿಕ್ಷಕಿಯನ್ನೊಮ್ಮೆ ಕೊನೆಯದಾಗಿ ನೋಡಲು ಆಸ್ಪತ್ರೆಯನ್ನು ಸುತ್ತುವರೆದಿದ್ದ ನೂರಾರು ಮಂದಿಗಳಲ್ಲಿ ತಾಸುಗಟ್ಟಲೆ ಸುರಿಮಳೆಯನ್ನು ಲೆಕ್ಕಿಸದೆ ಕಲ್ಲಾಗಿ ನಿಂತವರೆಷ್ಟೋ, ಮರಗಟ್ಟಿದಂತೆ ನಿಟ್ಟುಸಿರು ಬಿಟ್ಟವರು ಎಷ್ಟೆಷ್ಟೋ?
ಆಕೆ ನಮ್ಮನ್ನಗಲಿ ದಿನಗಳಷ್ಟೇ ಕಳೆದಿದೆ. ಮಳೆ ಈಗ ತೀವ್ರಗೊಂಡಿದೆ. ಆಕೆಯ ನೆನಪು ಮಳೆಯಲ್ಲಿ ವಿಲೀನವಾಗಿ ಮಳೆ ಹೊಯ್ದಾಗಲೆಲ್ಲ ಮಳೆಯಂತೆ ನೆನಪಾಗಿ ಇಡೀ ಶಿಕ್ಷಕ ಕುಲಕ್ಕೆ ಮರೆಯಲಾಗದ ನಿರಂತರ ಮಳೆಯಾಗಿ ಉಳಿದಿದ್ದಾರೆ.
ಈ ಮಳೆ ಮತ್ತೆ ಮತ್ತೆ ಹೆದರಿಸುತ್ತಲೇ ಇದೆ. ಜಿಲ್ಲೆಯಕೆಲವೆಡೆ ಭೂಕಂಪವಾಗಿ, ಕೆಲವೆಡೆ ಮೆಲ್ಲಗೆ ಬೆಟ್ಟ ಜರಿದು,ಮರಗಳುರುಳಿ ಒಂದೆರಡು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿ ಬಿಟ್ಟೂ ಬಿಡದೆಹೆದರಿಸುತ್ತಿದೆ. ಬೆಟ್ಟ,ಗುಡ್ಡ, ಹೊಳೆಯಿಂದ ಪ್ರಕೃತಿ ಸೌಂದರ್ಯದ ಬೀಡಾದ ಕೊಡಗಿನ ಗಡಿಯ ಊರು ಪದೇ ಪದೇ ಸಣ್ಣಗೆ ಕಂಪಿಸಿ, ಕಂಪಿಸುತ್ತಲೇ ನಮ್ಮೊಳಗನ್ನೂ ಕಂಪಿಸುತ್ತಿದೆ.
ವರ್ಷ ವರ್ಷವು ತನ್ನ ಅವತಾರವನ್ನು ಬದಲು ಮಾಡುವ ಸಾಮರ್ಥ್ಯ ಮಳೆಗೆ ಈಗ ಒಗ್ಗಿ ಹೋಗಿದೆ.ಇಳೆ ಕಾಯುವ ಮಳೆಯೆಂದರೆ ನೆನಪಷ್ಟೇ ಅಲ್ಲ, ಒಂದು ರೀತಿಯ ಭಯ ಕೂಡಾ….
-ಸುನೀತ ಕುಶಾಲನಗರ
ಮಳೆಗಾಲದಲ್ಲಿ ನ…ಸಿಹಿ ಕಹಿಗಳನೆನಪನ್ನು ..ಒಳಗೊಂಡ…ಲೇಖನ ನಮ್ಮ ಹಳೆಯ… ನೆನಪನ್ನು ಕೆದಕಿ.. ಮೆಲಕುಹಾಕುವಂತೆ ಮಾಡಿತು ..
ಅದಕ್ಕಾಗಿ ಧನ್ಯವಾದಗಳು ಮೇಡಂ.
ಚಂದದ ಬರಹ
ಚಂದದ ಬರಹ ಸುನೀತ
ತುಂಬಾ ಚೆನ್ನಾಗಿದೆ ಸುನೀತ
ನಿಮ್ಮ
ಮನಸಿನಂತೆ
ಬರೆಹದಂತೆ
ಅಲ್ಲಿಯ
ಆಪ್ತತೆಯಂತೆ
ನಿಷ್ಕಪಟತೆಯಂತೆ
ನಿಮ್ಮ ಬರೆಹ
ಸಿಹಿ, ಕಹಿ ನೆನಪುಗಳನ್ನು ಹೊತ್ತ ಮಳೆಯೊಂದಿಗೆ ನಡೆಯುತ್ತಾ, ಅದನ್ನು ನಮ್ಮೊಂದಿಗೆ ಹಂಚಿಕೊಡಿರುವಿರಿ…ಧನ್ಯವಾದಗಳು.
ಓದಿದ ಪ್ರೀತಿಗೆ ಹಾಗೂ ಸುರಹೊನ್ನೆಗೆ ಧನ್ಯವಾದಗಳು.
ಮಳೆ ಲೇಖನ ನನ್ನ ಕೊಡಗಿನ ಬಾಲ್ಯವನ್ನು ನೆನಪಿಸಿತು. ಸುಂದರ ಲೇಖನ. ಧನ್ಯವಾದಗಳು ಮೇಡಂ.
6) ನೆನಪಿನ ನಾಲೆಯಲ್ಲಿ ತೇಲಿ ಬರುವುದು ಸಿಹಿಕಹಿ ನೆನಪುಗಳು/
ನೆನಪಿನ ನಾಲೆಯಲ್ಲಿ ತೇಲಿ ಬರುವುದು ಸಿಹಿಕಹಿ ನೆನಪುಗಳು/
ಸೂಚನೆಯಿಲ್ಲದೆ ತರಂಗಗಳಾಗಿ ಬರುವುದು ಬದುಕಿದ ದಿನಗಳು/
ನೆನಪಿನ ನಾಲೆಯಲ್ಲಿ ತೇಲಿ ಬರುವುದು ಸಿಹಿಕಹಿ ನೆನಪುಗಳು/
ಮುನ್ಸೂಚನೆಯಿಲ್ಲದೆ ಅಲೆಗಳಾಗಿ ಬರುವುದು ಬಾಳಿದ ಕ್ಷಣಗಳು/
ತುಂತುರಾಗಿ ತಣಿಸುವುದು ತನುಮನವ ಸಿಹಿಜೇನ ಸ್ಮರಣೆಗಳು/
ಸವಿಯಲು ಮತ್ತೊಮ್ಮೆ ಸುಖ ಸಂತೋಷವ ವಾಸ್ತವ ಚಿಂತನಗಳಲ್ಲಿ/
ಗುಡುಗಾಗಿ ಗರ್ಜಿಸುತ ಬೆಚ್ಚಿಸುವುದು ಕಹಿ ಕಷಾಯದ ಜ್ಞಾಪಕಗಳು/
ಅನುಭವಿಸಲು ಮಗದೊಮ್ಮೆ ಕಷ್ಟನಷ್ಟಗಳ ಯಥಾರ್ಥ ಭಾವಗಳಲ್ಲಿ/
ಬದುಕೊಂದು ನೆನಪಿನ ಸುರುಳಿಯು ಆವಿಷ್ಕರಿಸುವುದು ಗಳಿಗೆಯಲ್ಲಿ/
ಜೀವಿತದಲ್ಲಿ ನೆಡೆದು ಬಂದ ದಾರಿಯನು ಯಥಾರ್ಥದಲ್ಲಿ ವ್ಯಕ್ತಿಸುವುದು/
ಸ್ವಸ್ಥ ಚಿತ್ತದಲ್ಲಿ ಪರ್ಯಾಯವಿಲ್ಲ ಸಂಚರಿಸದೆ ಪುನರಾವರ್ತನೆಯಲ್ಲಿ /
ತೇಲಿ ಬರುವ ನೆನಪಿನ ದೋಣಿಯ ಕ್ರಿಯಾತ್ಮಕದಲಿ ತಡೆಯಲಾಗದು/
ಅರಸಿ ಬಂದ ನೆನಪುಗಳ ಸಮ್ಮಿಶ್ರಣವ ಮಾರ್ಪಡಿಸಲಾಗದು ಸ್ವಯಿಚ್ಛೆಯಲಿ/
ಸಾಕ್ಷ್ಯಚಿತ್ರವಾಗಿ ಚಿರಸ್ಥಾಯಿಯಲಿ ಸುರುಳುತಿರುವುದು ಧಾರಾವಾಹಿಯಾಗಿ/
ವೈಯುಕ್ತಿಕ ಜೀವನದ ಕರಡುಪ್ರತಿಯಾಗಿ ಜೀವಂತವಾಗಿರುವುದು ಬಾಳಿನಲಿ /
ಸಾಕ್ಷ್ಯಾಧಾರಿತವಾಗಿ ಕಾಲಗರ್ಭದ ತೆರೆಯಲ್ಲಿ ಚಲಿಸುವುದು ಶಾಶ್ವತವಾಗಿ/
ಮಳೆಯ ಹೆಣಿಗೆಯೊಂದಿಗಿನ ಬದುಕಿನ ಎಳೆಗಳ ಹೆಣಿಗೆ! ಬರವಣಿಗೆಯ ಶೈಲಿ ಚೆನ್ನಾಗಿದೆ