ಶ್ರಾವಣವೆಂದಿತು..
ಆಷಾಢದ ಮೋಡಗಳು
ಕೈ ಬೀಸಿ ಕರೆದು
ಮೆಲ್ಲನುಸುರಿದವು.
ಗುಟ್ಟನೊಂದ ಕಿವಿಯೊಳಗೆ
ವಿದಾಯದೆಳೆ ಹೊತ್ತು
ತೆರಳುವ ನೋವು ನನಗೇ ಗೊತ್ತು
ಬರುತಿಹ ಶ್ರಾವಣ ನನ್ನ
ಹೋಗು ಹೋಗೆನುತ ಹಂಗಿಸಿತು
ಸಣ್ಣಗೆ ಹನಿಯುದುರಿಸಿದರೆ ಸಾಕೇ?
ಗಾಳಿಯ ಮೊರೆತದಲಿ
ಮಳೆ ಮೋಡಗಳ ಚೆಲ್ಲಾಡುವುದೇಕೆ?
ಈಗ ನೋಡು, ನನ್ನ ಆಗಮನ
ಇಳೆಯ ತೊಳೆದು ಬಣ್ಣದ
ಹೂವುಗಳ ರಂಗೋಲಿಯಿಡುವೆ
ನಕ್ಷತ್ರ ಕಂಗಳ ಬೆಳಕ
ಅಂಗಳದಲಿ ಮಿನುಗಿಸುವೆ.
ಹಸಿರ ರಾಶಿಯಲಿ ಭುವಿಯ
ತೇರನೆಳೆಯುವೆ
ಹೆಂಗೆಳೆಯರೆದೆಯಲಿ
ರಂಗಿನ ರಾಗಗಳ ನುಡಿಸುವೆ
ನೀ ಕೊಟ್ಟ ವಿರಹ ಶಾಪದ
ಜೋಡಿಗಳ ಜೊತೆಗೂಡಿಸುವೆ
ತುಂಬಿ ಹರಿವ
ನದಿತೊರೆಗಳಬ್ಬರದ ಇನಿದನಿ
ಧಗೆಯಲದ್ದಿದ ಧರೆಯ ನಸುನಗೆಯ
ಹಸಿಯೊಡಲ ರಾಗ
ಆಗಸಕೆ ಮೊಗ ಮಾಡಿದ ಪರಾಗ
ಎಲ್ಲ ಎಲ್ಲವೂ ನನಗಾಗಿ ಕಾಯ್ವ
ಅಭಿಸಾರಿಕೆಯಾಗಿದ್ದವು
ಕೆಸರನೆರಚಿ, ತಣಿಸಿ
ನೀರಾಟವಾಡುತ್ತಾ,
ಮುದದ ಮುದ್ದಾದ
ತಲ್ಲಣಗಳಿಗೆ
ಜೊತೆಯಾಗುತ್ತಾ
ನಲಿದುಲಿದು
ಒಲಿದು ಬರುವ ….
ನಾನೇ ಶ್ರಾವಣ
-ಬಿ. ಕೆ. ಮೀನಾಕ್ಷಿ, ಮೈಸೂರು
ಶ್ರಾವಣವೆಂದಿತು…ಕವನ ಸೊಗಸಾಗಿ ಮೂಡಿಬಂದಿದೆ.
ಧನ್ಯವಾದಗಳು ಮೀನಾ
ಸುಂದರ ಕವನ
ಶ್ರಾವಣದ ಮನದ ನುಡಿಗಳು ಭಾವಪೂರ್ಣವಾಗಿ ಮೂಡಿ ಬಂದಿವೆ… ಈ ಸುಂದರ ಕವನದಲ್ಲಿ.
ಕವನ ಚೆನ್ನಾಗಿ ಮೂಡಿಬಂದಿದೆ ತಂಗಿ.
ಚೆನ್ನಾಗಿ ಮೂಡಿಬಂದಿದೆ.
ಚೆನ್ನಾಗಿದೆ.
ಚೆನ್ನಾಗಿದೆ.
ಕವನವನ್ನೋದಿ ಪ್ರತಿಕ್ರಿಯೆ ನೀಡಿದ ನಾಗರತ್ನ ಮೇಡಂ, ನಯನಾ ಮೇಡಂ, ಶಂಕರಿಶರ್ಮ ಮೇಡಂ, ವಿಜಯ ಸುಬ್ರಹ್ಮಣ್ಯ ಮತ್ತು ಮೂವರು ಅನಾಮಧೇಯರಿಗೆ….ಎಲ್ಲರಿಗೂ ಆಭಾರಿಯಾಗಿರುವೆ. ನಿಮ್ಮಲ್ಲರ ಮೆಚ್ಚುಗೆ ನನ್ನ ಬರವಣಿಗೆಯ ಸ್ಪೂರ್ತಿ. ಧನ್ಯವಾದ