ಲಹರಿ

ಸತ್ಯ ಮಿಥ್ಯಗಳ ಸುಳಿಯಲ್ಲಿ…..!

Share Button
ಮಾಲಿನಿ ವಾದಿರಾಜ್

“ಸತ್ಯ ಮೇವ ಜಯತೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯವಂತರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ” ಎಂದೆಲ್ಲಾ ಭಾಷಣ ಮಾಡುವ ನಾವು, ಅದೇ ಸತ್ಯವನ್ನು ಮರೆಮಾಚಿ ಮಿಥ್ಯವೆಂಬ ಮಾಯಾಂಗನೆಯ ಸೆರಗನ್ನು ಹಿಡಿದು ಹಿಂಬಾಲಿಸುತ್ತೇವೆ. ಮಿಥ್ಯ ಅಥವಾ ಸುಳ್ಳು ಹೇಳುವ ಮನಸ್ಥಿತಿ ಮನುಷ್ಯನಿಗೆ ಹೇಗೆ ಬರುತ್ತದೆ?

ಕೀಳರಿಮೆಯನ್ನು ಹೊಂದಿದವರು, ತಮ್ಮನ್ನು ಶ್ರೇಷ್ಠರೆಂದು ಬಿಂಬಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ಸೋಮಾರಿಗಳು ತಮ್ಮಿಂದ ಆಗದ ಕೆಲಸಕ್ಕೆ ಸಬೂಬು ಹೇಳಲು ಸುಳ್ಳಿನ ಆಶ್ರಯ ಪಡೆಯುತ್ತಾರೆ.ಸಿಕ್ಕ ಅವಕಾಶಗಳಿಂದ, ನೆರೆದ ಜನರಿಂದ ಲಾಭ ಪಡೆಯಲು ಸುಳ್ಳು ಹೇಳುತ್ತಾರೆ. ತಾವು ಮಾಡಿದ ಅಪರಾಧವನ್ನು ಮುಚ್ಚಿಡಲು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ಸತ್ಯವನ್ನು ಹೇಳಿ ಇನ್ನೊಬ್ಬರ ಮನಸ್ಸು ನೋಯಿಸಬಾರದು ಎಂದು ಸುಳ್ಳು ಹೇಳುತ್ತಾರೆ. ಜನರನ್ನು ಮೆಚ್ಚಿಸಲು ಸುಳ್ಳು ಹೇಳುತ್ತಾರೆ. ತಮ್ಮ ಆಪ್ತರು ಶಿಕ್ಷೆ ಅನುಭವಿಸುವುದನ್ನು ತಪ್ಪಿಸಲು ಸುಳ್ಳು ಹೇಳುತ್ತಾರೆ. ಮುಜುಗರ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರೆ.ಖಾಸಗೀತನವನ್ನು ಕಾಪಾಡಿಕೊಳ್ಳಲು ಸುಳ್ಳು ಹೇಳುತ್ತಾರೆ. ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಾ ಅಭ್ಯಾಸವಾಗಿ, ಸುಳ್ಳನ್ನು ಸರಾಗವಾಗಿ ಹೇಳುತ್ತಾರೆ.

ಹೀಗೆ ಸುಳ್ಳು ಹೇಳಲು ನಾನಾ ಕಾರಣಗಳು ಆಸರೆಯಾಗುತ್ತವೆ. ಸುಳ್ಳು ಬಚ್ಚಿಟ್ಟ ಹೆಣದಂತೆ. ಒಂದಲ್ಲ ಒಂದು ದಿನ ಹೆಣದಿಂದ ದುರ್ನಾತ ಬೀರಿ ಎಲ್ಲರಿಗೂ ಬಚ್ಚಿಟ್ಟ ಜಾಗ ಗೊತ್ತಾದಂತೆ, ಸುಳ್ಳನ್ನು ಹೆಚ್ಚು ದಿನ ಬಚ್ಚಿಡಲು ಸಾಧ್ಯವಿಲ್ಲ. ಕೊಂಚ ಸಮಯದ ನಂತರ ಎಲ್ಲರಿಗೂ ತಿಳಿದುಬಿಡುತ್ತದೆ. ಸುಳ್ಳು ಹೇಳುವ ಸ್ವಭಾವದಿಂದ ತಾವು ಮಹಾ ಚಾಣಾಕ್ಷರೆಂದು ಹೆಮ್ಮೆ ಪಟ್ಟುಕೊಳ್ಳುವವರು ಜಗತ್ತಿನ ಮುಂದೆ ತಮ್ಮ ವಿರೂಪ ವ್ಯಕ್ತಿತ್ವವನ್ನೇ ಬೆತ್ತಲಾಗಿ ತೋರಿಸಬೇಕಾದೀತು. ಒಮ್ಮೆ ವ್ಯಕ್ತಿತ್ವ ಹಾಳಾದರೆ, ಒಡೆದ ಗಾಜಿನಂತೆ ಸರಿಪಡಿಸಲು ಆಗುವುದಿಲ್ಲ.

ಇದರಿಂದ ನಮ್ಮ ಆಪ್ತೇಷ್ಟರನ್ನು ಕಳೆದುಕೊಳ್ಳ ಬೇಕಾಗುತ್ತದೆ.ಹೃದಯಕ್ಕೆ ಹತ್ತಿರವಿರುವವರೂ ಸಹ ಮಾನಸಿಕವಾಗಿ ದೂರಾಗುತ್ತಾರೆ. ಕಷ್ಟದ ಸಮಯದಲ್ಲಿ ಯಾರೊಬ್ಬರೂ ನಂಬುವುದಿಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾಗಿ ಬೆಳೆದರೂ ಸುಳ್ಳೆಂಬ ಬಲೆಯಲ್ಲಿ ಸಿಕ್ಕಿ ಒದ್ದಾಡುವುದು ಅನಿವಾರ್ಯವಾಗಿಬಿಡುತ್ತದೆ. ಯಾರೂ ನಂಬದ ಜಗತ್ತಿನಲ್ಲಿ ಬದುಕುವುದೊಂದು ಮಹಾ ಶಿಕ್ಷೆಯೇ ಸರಿ.

ಸತ್ಯ ಎಷ್ಟೇ ಕಷ್ಟ ತಂದೊಡ್ಡಿದರೂ ಆತ್ಮವಿಶ್ವಾಸ ಹೆಚ್ಚಿ, ನಮ್ಮ ದೃಷ್ಟಿಯಲ್ಲಿ ನಾವು ದೊಡ್ಡವರಾಗಿ ಉಳಿಯುತ್ತೇವೆ.  ನಮ್ಮ ಬಗ್ಗೆ ನಮಗೇ ಗೌರವ ಮೂಡುತ್ತದೆ. ಅಂಜಿಕೆಯಿಲ್ಲದೇ ಜೀವನದಲ್ಲಿ ಗಟ್ಟಿ ಹೆಜ್ಜೆ ಇಟ್ಟು ಮುನ್ನಡೆಯುತ್ತೇವೆ. ಸಮಾಜದಲ್ಲಿ ಗೌರವ ಹೆಚ್ಚಾಗಿ, ನಂಬಿಕಸ್ಥರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತೇವೆ. ದೈವ ಕೃಪೆಯಿಂದ ಸದಾ ಸಕಾರಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇವೆ. ಎಲ್ಲಿ ಸತ್ಯ ನೆಲೆ ನಿಲ್ಲುವುದೋ ಅಲ್ಲಿ ಭಗವಂತ ನೆಲೆಸುತ್ತಾನೆ. ಸತ್ಯ ಬದುಕಿನ ಏಳಿಗೆಗೆ ಕಾರಣವಾದರೆ, ಮಿಥ್ಯ ಬೀಳಿಗೆಗೆ ಕಾರಣವಾಗುವುದು.

ಈ ಕಾಲಘಟ್ಟದಲ್ಲಿ ರಾಜ ಹರಿಶ್ಚಂದ್ರನಾಗಲು ಸಾಧ್ಯವಿಲ್ಲ. ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಸುಳ್ಳುಗಳನ್ನು ಹೇಳುವುದು ಅನಿವಾರ್ಯವಾಗಿ ಬಿಡುತ್ತದೆ. ಆದರೆ ಆ ಸುಳ್ಳುಗಳಿಗೆ ಬೇಲಿಹಾಕುವುದನ್ನು ಮರೆಯಬಾರದು. ಅತಿಯಾದ ಅಮೃತ ವಿಷವಾದಂತೆ ಅತಿಯಾದ ಸುಳ್ಳು, ಜೀವ ಹಾಗು ಜೀವನವನ್ನೇ ಹಾಳು ಮಾಡಿಬಿಡುತ್ತದೆ. ಸುಳ್ಳು ಹೇಳುವುದು ಅನಿವಾರ್ಯವಾದರೆ, ಪೂರ್ವಾಪರಗಳನ್ನು ಯೋಚಿಸಿ ಅತಿ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ. ಮಿಥ್ಯದ ದಾರಿಯನ್ನು ಮೊಟಕು ಗೊಳಿಸುತ್ತಾ ನಡೆದರೆ, ಸತ್ಯದ ದಾರಿ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ. ಸತ್ಯದ ದಾರಿಯಲ್ಲಿ ಸಕಾರಾತ್ಮಕತೆ ಹೆಚ್ಚು. ಹೀಗಾಗಿ ಎಲ್ಲಿ ಸತ್ಯ ಹಾಗು ಸಕಾರಾತ್ಮಕತೆ ಮೇಳೈಸುತ್ತದೆಯೋ ಅಲ್ಲಿ ಮನಸ್ಸಿನ ಇಚ್ಚೆಗಳೆಲ್ಲಾ ನೆರವೇರುವುವು.

ಸ್ವಚ್ಛ ಮನಸ್ಸಿನವರಿಂದಷ್ಟೇ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ. ಸತ್ಯದ ಧ್ವನಿ ಜೋರಾದಂತೆಲ್ಲ ಮಿಥ್ಯದ ಧ್ವನಿ ಕ್ಷೀಣಿಸುತ್ತದೆ. ತುಸು ಕಷ್ಟವಾದರೂ, ಸತ್ಯದ ಪರ ನಿಲ್ಲೋಣ. ಸತ್ಯದ ಕೂಗಿಗೆ ಸ್ಪಂದಿಸೋಣ.

– ಮಾಲಿನಿ ವಾದಿರಾಜ್

10 Comments on “ಸತ್ಯ ಮಿಥ್ಯಗಳ ಸುಳಿಯಲ್ಲಿ…..!

  1. ಸತ್ಯ ಮಿಥ್ಯಗಳ ಸುಳಿಯಲ್ಲಿ ಲೇಖನ ಚೆನ್ನಾಗಿದೆ… ನಾನು…ಸುಳ್ಳು ಹೇಳುತ್ತಿಲ್ಲ..ಸತ್ಯವಾಗಿ ಯೂ ..ಚೆನ್ನಾಗಿ ಮೂಡಿಬಂದಿದೆ… ಧನ್ಯವಾದಗಳು…ಸೋದರಿ

  2. Good analysis of sullu. I have a friend who keeps lying all the time. For past 40 yrs she has been lying about her life and sometimes she forgets what lie she had told and comes out with truth. Good luck

  3. ಮಿಥ್ಯೆಗಳಿಗೆ ಬಲವಾದ ಬೇಲಿಯನ್ನು ಹಾಕಬೇಕಾದ ಅಗತ್ಯತೆ, ಕಷ್ಟವಾದರೂ ಸತ್ಯದಿಂದ ಸಿಗುವ ನೆಮ್ಮದಿ ಇತ್ಯಾದಿಗಳು ಬರೆಹದಲ್ಲಿ ಚೆನ್ನಾಗಿ ಮೂಡಿಬಂದಿದೆ.

  4. ಲೇಖನದ ಮೂಲಕ ಸತ್ಯವಂತರಿಗೆ ಕಾಲವಿದೆ ಎಂದು ರೂಪಿಸಿದ್ದೀರಿ. ಸೊಗಸಾದ ಲೇಖನ.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *