ಕಾದಂಬರಿ: ನೆರಳು…ಕಿರಣ 24

Share Button

 –ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಅಷ್ಟರಲ್ಲಿ ನಾರಾಣಪ್ಪ ಹಿತ್ತಲಲ್ಲಿದ್ದ ಅತ್ತೆ ಸೊಸೆಯನ್ನು ಕೂಗುತ್ತಾ ಬಂದರು. “ಅಮ್ಮಾ ಚಿಕ್ಕಮ್ಮನವರ ಸಂಗೀತದ ಗುರುಗಳು ಗೌರಿಯಮ್ಮ ಬಂದಿದ್ದಾರೆ. ಹಾಲಿನಲ್ಲಿ ಕೂಡಿಸಿ ಬಂದಿದ್ದೇನೆ ಬನ್ನಿ” ಎಂದು ಹೇಳಿದರು.

‘ಹೌದೇ ! ಬಾ ಭಾಗ್ಯಾ” ಎಂದು ತಾವೇ ಮುಂದಾಗಿ ಹೊರಟುಬಂದರು ಸೀತಮ್ಮ. ಭಾಗ್ಯ ಅವರನ್ನು ಹಿಂಬಾಲಿಸಿದಳು.

“ನಮಸ್ತೇ ಗೌರಿಯಮ್ಮ, ನಿಮ್ಮ ಶಿಷ್ಯ ನಟೇಶ ಊರಿನಲ್ಲಿಲ್ಲವೇ, ತಾವು ಈ ಹೊತ್ತಿನಲ್ಲಿ ಬಂದಿದ್ದೀರಲ್ಲಾ  ಅದಕ್ಕೇ ಕೇಳಿದೆ” ಎಂದರು ಸೀತಮ್ಮ.

“ಹೌದು ನಾನು ಅವನನ್ನು ಕಳುಹಿಸಿದ ನಂತರವೇ ಬರುತ್ತಿದ್ದುದು. ಆದರೆ ನಿಮ್ಮ ಮನೆಗೆ ಇದ್ದಕ್ಕಿದ್ದಂತೆ ಬರಬೇಕಾಗಿತ್ತು. ಹೇಗೂ ಇಷ್ಟು ಹತ್ತಿರ ಬಂದಿದ್ದೀನಲ್ಲಾ, ಒಂದು ಹೆಜ್ಜೆ ನಿಮ್ಮ ಮನೆಗೆ ಬರೋಣವೆಂದು ಬಂದೆ. ಎಲ್ಲಿಗಾದರೂ ಹೊರಡುವರಿದ್ದರೇನು?” ಎಂದು ಕೇಳಿದರು ಗೌರಿಸುಬ್ರಹ್ಮಣ್ಯ.

“ಛೇ..ಛೇ ಅಂಥದ್ದೇನೂ ಇಲ್ಲ. ನಮ್ಮ ಮನೆಯವರು, ಮಗ ಪೂಜಾಕಾರ್ಯಕ್ರಮಕ್ಕೆ ಹೊರಗೆ ಹೋಗಿದ್ದಾರೆ. ನಾನು ಸೊಸೆಯ ಹತ್ತಿರ ಹಿತ್ತಲಲ್ಲಿ ಮಾತನಾಡುತ್ತಿದ್ದೆ ಅಷ್ಟೇ. ಇವಳೇ ನನ್ನ ಸೊಸೆ ಭಾಗ್ಯ. ಇವಳಿಗೆ ನಿಮ್ಮ ಬಳಿ ಸಂಗೀತ ಮುಂದುವರೆಸಿ ವಿದ್ವತ್ ಪರೀಕ್ಷೆ ಪಾಸುಮಾಡಬೇಕೆಂಬ ಆಸೆಯಿದೆ.” ಎಂದು ಭಾಗ್ಯಳನ್ನು ಅವರಿಗೆ ಪರಿಚಯಿಸಿದರು ಸೀತಮ್ಮ.

ಭಾಗ್ಯ  ತನ್ನೆರಡೂ ಕೈಗಳನ್ನು ಜೋಡಿಸಿ ವಂದಿಸಿದಳು. ಅವಳನ್ನು ದಿಟ್ಟಿಸಿ ನೋಡಿದರು ಗೌರಿಯಮ್ಮ. “ಅಬ್ಬಾ ! ಎಂಥಹ ರೂಪರಾಶಿ, ಇವರ ಮನೆಯಲ್ಲಿ ಚಲುವಿನಲ್ಲಿ ಯಾರೂ ಕಮ್ಮಿಯಿಲ್ಲ. ಆದರೆ ಈ ಹುಡುಗಿಯಲ್ಲಿ ಚಲುವಿನೊಡನೆ ಇನ್ನೊಬ್ಬರನ್ನು ಆಕರ್ಷಿಸುವ ವ್ಯಕ್ತಿತ್ವ ಎದ್ದು ಕಾಣುತ್ತದೆ. ಏನನ್ನಾದರೂ ಸಾಧಿಸಬಲ್ಲಳೆಂಬ ಛಲ ಅವಳ ಮುಖದಲ್ಲಿ ಒಡಮೂಡಿದೆ. ನಾನೊಡ್ಡುವ ಸಣ್ಣ ಪರೀಕ್ಷೆಯಲ್ಲಿ ಗೆದ್ದರೆ ವಾರದಲ್ಲಿ ಮೂರುದಿನ ಇವಳ ದರ್ಶನ.

“ಗೌರಿಯಮ್ಮಾ, ಏಕೆ ಏನೂ ಮಾತನಾಡದೆ ಮೌನವಾಗಿಬಿಟ್ಟಿರಿ?” ಎಂದ ಸೀತಮ್ಮನ ಮಾತು ಅವರನ್ನು ವಾಸ್ತವಕ್ಕೆ ಕರೆತಂದಿತು.

“ಹ್ಹ..ಹ್ಹ ಏನಿಲ್ಲ, ಸೀತಮ್ಮ ಈ ಮಗುವಿನ ಹೆಸರೇನೆಂದಿರಿ? “ಭಾಗ್ಯಾ” ಇದು ಅವರ ತವರಿನವರಿಟ್ಟ ಹೆಸರೋ ಅಥವಾ ನೀವಿಟ್ಟ ಹೆಸರೋ. ಕೆಲವರು ಮದುವೆಯಾದ ಮೇಲೆ ಬೇರೆ ಇಡುತ್ತಾರೆ, ಅದಕ್ಕೇ ಕೇಳಿದೆ” ಎಂದರು.

“ಹೂ ಪದ್ಧತಿ ಇದೆ, ಆದರೆ ನಾವೇನೂ ಬದಲಾಯಿಸಿಲ್ಲ. ಅವಳ ಹೆತ್ತವರು ಇಟ್ಟ ಹೆಸರನ್ನೇ ಉಳಿಸಿಕೊಂಡಿದ್ದೇವೆ.” ಎಂದರು ಸೀತಮ್ಮ. ಭಾಗ್ಯಳಿಗೆ ಅಲ್ಲಿಯೇ ಹಾಸಿದ್ದ ಜಮಖಾನೆಯ ಮೇಲೆ ಕೂಡಲು ಹೇಳಿ ತಾವೂ ಖುರ್ಚಿಯಿಂದ ಇಳಿದು ಅವಳಿಗೆದುರಾಗಿ ಕುಳಿತರು.

“ತಪ್ಪು ತಿಳಿಯಬೇಡ ಭಾಗ್ಯಾ, ನಾನು ನನ್ನಬಳಿ ಪಾಠಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ನಿಜವಾಗಿ ಆಸಕ್ತಿ ಇದೆಯೋ ಅಥವಾ ಇನ್ಯಾರದ್ದೋ ಬಲವಂತಕ್ಕೆ ಬಂದಿರುವರೋ ಎಂಬುದನ್ನು ಪರೀಕ್ಷಿಸಿಯೇ ಸೇರಿಸಿಕೊಳ್ಳುವುದು ಕ್ರಮ. ಈಗಾಗಲೇ ಜ್ಯೂನಿಯರ್, ಮತ್ತು ಸೀನಿಯರ್ ಎರಡೂ ಪರೀಕ್ಷೆಗಳನ್ನು ಮುಗಿಸಿ ಮುಂದೆ ಕಲಿಯಲು ಬರುವವರಿಗೆ ಅವರಲ್ಲಿನ ಸಂಗೀತಜ್ಞಾನ, ಸ್ವರಮಾಧುರ್ಯ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಂಡು, ಮುಂದುವರೆಯಲು ಅರ್ಹರಾಗಿದ್ದಾರೆಯೇ, ಅಥವಾ ಹಿಂದಿನಿಂದ ಮತ್ತೆ ಪ್ರಾರಂಭಿಸುವ ಅಗತ್ಯವಿದೆಯೇ ಎಂದು ತಿಳಿದುಕೊಂಡು. ಅವರು ನನ್ನ ಅಭಿಪ್ರಾಯವನ್ನು ಒಪ್ಪುವುದಾದರೆ ಪಾಠಕ್ಕೆ ಸೇರಿಸಿಕೊಳ್ಳುತ್ತೇನೆ. ನೇರವಾಗಿ ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ ಕೆಲವರು ಇವರು ಸ್ವಪ್ರತಿಷ್ಠೆಯವರು, ಅಹಂಕಾರಿ ಎಂದೆಲ್ಲ ಬಿರುದುಗಳನ್ನು ನೀಡಿದ್ದಾರೆ. ನಾನು ಇದ್ಯಾವುದಕ್ಕೂ ಸೊಪ್ಪು ಹಾಕದೆ ನನ್ನ ರೀತಿಯಲ್ಲಿ ಸಂಗೀತದ ಪಯಣವನ್ನು ಮುಂದುವರೆಸಿದ್ದೇನೆ. ಇದನ್ನು ಅರ್ಥಮಾಡಿಕೊಂಡವರು ಕೆಲವೇ ಜನ ನನ್ನಲ್ಲಿಗೆ ಬರುತ್ತಾರೆ. ಶ್ರೀನಿವಾಸ ತಮ್ಮ ಮನೆಯಲ್ಲೇ ಪಾಠ ಹೇಳಿಕೊಡಬೇಕೆಂದು ಕೇಳಿಕೊಂಡ. ಹೀಗೆ ಕೆಲವು ಕಡೆಗಳಿಗೆ ಹೋಗುತ್ತೇನೆ. ಹಾಗಾಗಿ ಇಲ್ಲಿಗೂ ಬರಲು ಒಪ್ಪಿಕೊಂಡೆ. ಇಲ್ಲಿ ಪಾಸು ಮಾಡಿದ ಪರೀಕ್ಷೆಯ ಅಂಕಗಳು ಮಾನದಂಡವಲ್ಲ. ಅವು ನಿಷ್ಪ್ರಯೋಜಕವೆಂದಲ್ಲ. ನನ್ನ ಮನಸ್ಸಿಗೆ ಸಮಾಧಾನವಾಗಬೇಕಷ್ಟೇ.” ಎಂದು ಹೇಳಿ ಜೊತೆಯಲ್ಲೇ ತಂದಿದ್ದ ಶೃತಿಪೆಟ್ಟಿಗೆಯನ್ನು ಸಜ್ಜಗೊಳಿಸಿದರು.

“ಇದರಲ್ಲಿ ತಪ್ಪು ತಿಳಿಯುವುದೇನಿದೆ ಮೇಡಂ, ನನಗೆ ಚಿಕ್ಕಂದಿನಿಂದಲೂ ಸಂಗೀತವೆಂದರೆ ಪ್ರಾಣ. ಆಸಕ್ತಿಯಿಂದಲೇ ಕಲಿತು ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾದೆ. ಮುಂದೆ ಕಲಿಯಬೇಕೆಂಬ ಆಸೆ ಬೆಟ್ಟದಷ್ಟಿದೆ. ಅದಕ್ಕೇ ಮನೆಯವರೆಲ್ಲರ ಪ್ರೋತ್ಸಾಹವೂ ಇದೆ. ಖಂಡಿತಾ ನೀವೇನು ಪರೀಕ್ಷೆ ಮಾಡಬೇಕೆಂದಿರುವಿರೋ ಮಾಡಿ. ನನ್ನ ಅರಿವು ನಿಮ್ಮ ಮನಸ್ಸಿಗೆ ಸಮಾಧಾನ ತರದಿದ್ದರೆ ನಾನು ಯಾವ ಹಂತ ಮುಟ್ಟಲು ಯೋಗ್ಯಳೋ ತಿಳಿಸಿ. ಅಲ್ಲಿಂದಲೇ ಪ್ರಾರಂಭಿಸೋಣ” ಎಂದಳು ಭಾಗ್ಯ.

“ಅಹಾ ಹುಡುಗಿ ದಿಟ್ಟೆಯೂ ಹೌದು” ಎಂದುಕೊಂಡು ಸಂಗೀತಕ್ಕೆ ಸಂಬಂಧಿಸಿದ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು ಗೌರಿಯಮ್ಮ. ಕೀರ್ತನೆಗಳನ್ನು, ದೇವರನಾಮಗಳನ್ನು ಹಾಡಿಸಿದರು. ಅವೆಲ್ಲವೂ ಅವರಿಗೆ ತೃಪ್ತಿ ತಂದವು. ಒಮ್ಮೆಲೇ ಹೊಗಳಬಾರದೆಂದು “ಆಯಿತು ನಾನು ನಿನಗೆ ಪಾಠ ಹೇಳಿಕೊಡುತ್ತೇನೆ. ನಿಮಗೆ ಯಾವ ಸಮಯ ಉತ್ತಮ? ಸಾಮಾನ್ಯವಾಗಿ ನಾನು ಹೇಳಿಕೊಡಲು ಹೋಗುವುದು ಬೆಳಗಿನ ಹೊತ್ತು. ನಿಮಗೆ ಅನುಕೂಲವಾಗುತ್ತದೆಯೇ? ವಾರಕ್ಕೆ ಮೂರುದಿನ ಬೆಳಗ್ಗೆ ಎಂಟುಗಂಟೆಗೆ ಬರಲೇ? ಇನ್ನು ಮೂರುದಿನಗಳು ನಿನ್ನ ಅಭ್ಯಾಸಕ್ಕೆ ಅನುಕೂಲವಾಗಲಿ. ನಂತರ ಅಗತ್ಯವಾದರೆ ಹೆಚ್ಚು ಮಾಡೋಣ. ಯಾವುದನ್ನೂ ಮನೆಯವರೊಂದಿಗೆ ಚರ್ಚಿಸಿ ನನಗೆ ತಿಳಿಸು. ಒಂದು ಒಳ್ಳೆಯ ದಿವಸ ಗಣಪತಿ, ಸರಸ್ವತಿಯ ಪೂಜೆಮಾಡಿ ಪ್ರಾರಂಭಿಸೋಣ, ಆಗಬಹುದೇ?” ಎಂದು ಕೇಳಿದರು.

“ಖಂಡಿತ ಹೇಳಿಕಳುಹಿಸುತ್ತೇನೆ ಗೌರಿಯಮ್ಮ” ಎಂದರು ಸೀತಮ್ಮ.

“ಸರಿ, ಹಾಗಾದರೆ ನಾನಿನ್ನು ಬರುತ್ತೇನೆ” ಎಂದು ಹೊರಟರು ಗೌರಿಯಮ್ಮ. ಅವರನ್ನು ಕೂರಿಸಿ ಹಾಲು, ಹಣ್ಣನ್ನು ನೀಡಿ ಉಪಚರಿಸಿ ತಾಂಬೂಲ ನೀಡಿ ಕಳುಹಿಸಿಕೊಟ್ಟರು ಸೀತಮ್ಮನವರು.

ಅವರನ್ನು ಬೀಳ್ಕೊಟ್ಟು ಬಾಗಿಲು ಭದ್ರಪಡಿಸಿ ಒಳಬಂದವರನ್ನು ಉಟಕ್ಕೆ ಕರೆದರು ನಾರಾಣಪ್ಪ. ಸೊಸೆಯ ಜೊತೆಯಲ್ಲಿ ಊಟ ಮಾಡುತ್ತಾ “ಭಾಗ್ಯ ನಿನ್ನನ್ನು ಗೌರಿಯಮ್ಮ ಪ್ರಶ್ನೆ ಮಾಡಿದ್ದು, ಅವರು ತಮಗನಿಸಿದ್ದನ್ನು ಹೇಳಿದ್ದು ಬೇಸರ ತಂದಿತೇ?” ಎಂದು ಪ್ರಶ್ನಿಸಿದರು ಸೀತಮ್ಮ.

“ಛೇ.ಛೇ.. ಹಾಗೇನಿಲ್ಲ ಅತ್ತೆ, ಅವರ ನೇರ ನುಡಿಗಳು, ವೃತ್ತಿಧರ್ಮ, ನನಗೆ ಇಷ್ಟವಾಯಿತು. ಗುರುಗಳಾದವರು ನಿಷ್ಠುರವಾಗಿಯೇ ಇರಬೇಕು. ಇವರು ಚೆನ್ನಾಗಿ ಕಲಿಸುವರೆಂದು ನನಗನ್ನಿಸುತ್ತಿದೆ. ಮನೆಯೂ ಸಮೀಪವೇ ಇದೆಯೆನ್ನುತ್ತಿದ್ದೀರಿ, ಏನಾದರೂ ಕೇಳುವುದಕ್ಕೂ, ಹೇಳುವುದಕ್ಕೂ ಅನುಕೂಲ.” ಎಂದಳು ಭಾಗ್ಯ.

“ಆಯಿತು ನಿಮ್ಮ ಮಾವ, ಸೀನು ಬಂದನಂತರ ವಿಷಯ ತಿಳಿಸಿ ದಿನ ಗೊತ್ತುಪಡಿಸಿಕೋ. ಬೆಳಗ್ಗೆ ಎಂಟುಗಂಟೆ ಬಹಳ ಪ್ರಶಸ್ತವಾದುದೆಂದು ನನ್ನ ಅನಿಸಿಕೆ. ಎಲ್ಲಿ ಪಾಠಕ್ಕೆ ಅನುಕೂಲ ಸ್ಥಳ, ಕೆಳಗಿನ ರೂಮೋ, ನಡುವಿನ ಹಾಲೋ, ಅಥವಾ ಹಿತ್ತಲಿನ ಪಡಸಾಲೆಯೋ ಅವರಿಬ್ಬರನ್ನೂ ಕೇಳಿ ನಿರ್ಧರಿಸಿಕೊ. ಚೆನ್ನಾಗಿ ಕಲಿಯಮ್ಮ” ಎಂದು ಶುಭ ಹಾರೈಸಿದರು ಸೀತಮ್ಮ.

ಊಟ ಮುಗಿಸಿ ಭಾಗ್ಯಳ ಹತ್ತಿರ ಅದೂ, ಇದೂ ಮಾತನಾಡಿ ತಾನು ಸ್ವಲ್ಪ ಹೊತ್ತು ಮಲಗುತ್ತೇನೆಂದು ತಮ್ಮ ರೂಮಿಗೆ ಹೋದರು. ಭಾಗ್ಯ ಕುಳಿತಲ್ಲಿಂದ ಎದ್ದು ನಾಣಜ್ಜ ಏನು ಮಾಡುತ್ತಿದ್ದಾರೆಂದು ನೋಡಲು ಅಡುಗೆ ಮನೆಗೆ ಹೋದಳು. ಅವರಾಗಲೇ ಊಟ ಮುಗಿಸಿ ಹಿತ್ತಲಿನ ಪಡಸಾಲೆಯಲ್ಲಿ ಅಡ್ಡಾಗುತ್ತಿರುವುದು ಕಾಣಿಸಿತು. ಅವಳು ಬಂದದ್ದನ್ನು ಕಂಡು “ಬನ್ನೀ ಚಿಕ್ಕಮ್ಮೋರೆ, ನೀವು ಮಲಗಲಿಲ್ಲವೇ?” ಎಂದರು.

“ನಾಣಜ್ಜ, ದಯವಿಟ್ಟು ನನ್ನನ್ನು ಚಿಕ್ಕಮ್ಮೋರೆ ಅಂತ ಅಷ್ಟುದ್ದ ಕರೆಯುವುದು ಬಿಟ್ಟು ಭಾಗ್ಯಮ್ಮ ಅಂತ ಕರೀರಿ ಸಾಕು. ಎಷ್ಟು ಸಾರಿ ಹೇಳಿದರೂ ಕೇಳುವುದೇ ಇಲ್ಲ ನೀವು” ಎಂದು ಆಕ್ಷೇಪಿಸಿದಳು.

“ಸರಿ ಬಿಡಿ, ಹಾಗೇ ಕರೆಯುತ್ತೇನೆ. ನಿಮಗೆ ಗೌರಿಯಮ್ಮ ಸಂಗೀತ ಹೇಳಿಕೊಡಲು ಒಪ್ಪಿದ್ದು ನನಗೆ ಬಹಳ ಸಂತಸತಂದಿತು. ಆಕೆ ತುಂಬ ದಿಟ್ಟ ಹೆಂಗಸು, ಖಂಡಿತವಾದಿ ಲೋಕವಿರೋಧಿ ಎಂಬಂತೆ ಬಹಳ ಜನಕ್ಕೆ ಅವರನ್ನು ಕಂಡರೆ ಆಗುವುದಿಲ್ಲ” ಎಂದರು ನಾರಾಣಪ್ಪ.

“ನಾಣಜ್ಜ, ಅವರು ಈ ಕುಟುಂಬದವರಿಗೆ ಎಷ್ಟು ಕಾಲದಿಂದ ಪರಿಚಯ? ಅವರಿಗೆ ಮದುವೆ, ಮಕ್ಕಳು..ನಿಮಗೆ ತಿಳಿದಿದ್ದರೆ ಹೇಳಿ. ಅತ್ತೆಯವರನ್ನೇ ಕೇಳಬೇಕೆಂದಿದ್ದೆ. ಅವರೇನೆಂದುಕೊಳ್ಳುತ್ತಾರೋ ಎಂದು ಸುಮ್ಮನಾದೆ” ಎಂದಳು ಭಾಗ್ಯ.

“ಅದರಲ್ಲೇನಿದೆ ತಪ್ಪು,” ಎಂದು ಹೇಳಿ ಅಲ್ಲಿಯೇ ಪಡಸಾಲೆಯ ಕಂಬಕ್ಕೆ ಒರಗಿಕೊಂಡು ಕುಳಿತರು ನಾರಾಣಪ್ಪ. ಭಾಗ್ಯಳೂ ಅವರಿಗೆದುರಾಗಿ ಕುಳಿತಳು.

“ಸುತ್ತಮುತ್ತಲಿನವರೆಲ್ಲ ಅವರನ್ನು ಕರೆಯುವುದು ಗೌರಿಯಮ್ಮ ಎಂದು, ಅವರ ಪೂರ್ಣ ಹೆಸರು ಗೌರಿ ಸುಬ್ರಹ್ಮಣ್ಯ. ಇದೇ ಊರಿನವರು. ನಮ್ಮ ಮತಸ್ಥರೇ, ಅವರ ಒಡ ಹುಟ್ಟಿದವರೆಂದರೆ ಇವರ ತಮ್ಮನಿದ್ದಾನೆ. ಇವರ ತಂದೆ ತಾಯಿಗಳಿಬ್ಬರೂ ಸಂಗೀತ ಕಲಿಸುತ್ತಿದ್ದವರೇ. ಇವರಿಗೂ ಆಸಕ್ತಿ ಬಾಲ್ಯದಿಂದಲೇ. ಮನೆಯ ವಾತಾವರಣದ ಪ್ರಭಾವದಿಂದ ಬಹಳ ಬೇಗನೆ ಅದು ಅವರ ವಶವಾಯಿತೇನೋ ಎಂಬಂತೆ ಮಿಡ್ಲ್‌ಸ್ಕೂಲು ಮುಗಿಸುವಷ್ಟರಲ್ಲೇ ಸೀನಿಯರ್ ಪರೀಕ್ಷೆ ಪಾಸು ಮಾಡಿದ್ದರು. ವಯಸ್ಸು ಕಡಿಮೆಯಿದ್ದರೂ ವಿಶೇಷ ಅನುಮತಿ ಪಡೆದು ಪರೀಕ್ಷೆಗೆ ಕುಳಿತಿದ್ದರು. ಅದೇ ಸಮಯಕ್ಕೆ ಗೃಹಿಣಿಯೂ ಆದರಂತೆ. ಅವರ ಪತಿ ಆಗಿನ ಕಾಲದಲ್ಲಿ ವೈದ್ಯರಾಗಿದ್ದರಂತೆ. ಸತಿಪತಿಗಳಲ್ಲಿ ಹೊಂದಾಣಿಕೆಯಾಗಲಿಲ್ಲವಂತೆ. ಹಿರಿಯರ ಬುದ್ಧಿವಾದಗಳು ಪ್ರಯೋಜನವಾಗದೆ ಕೊನೆಗೆ ಕುಟುಂಬದವರ ಸಮ್ಮುಖದಲ್ಲಿಯೇ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾದರಂತೆ. ಆತನು ಮತ್ತೆ ಮದುವೆಯಾಗಿದ್ದಾರೆ. ಈ ಹೆಣ್ಣುಮಗಳು ಸಂಗೀತವನ್ನೇ ಮುಂದುವರೆಸಿ ವಿದ್ವತ್ ಪೂರ್ಣಗೊಳಿಸಿದರು. ಆಕೆಯ ಪೋಷಕರು ನಡೆಸುತ್ತಿದ್ದ ಸಂಗೀತಶಾಲೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈಗ ಅವರ ತಂದೆ ತಾಯಿಗಳು ಕಾಲವಾಗಿದ್ದಾರೆ. ತಮ್ಮ ಪಕ್ಕದ ಮನೆಯಲ್ಲಿಯೇ ವಾಸವಿದ್ದು ಅವನ ಸಂಸಾರವೇ ಇವರಿಗೆ ಆಸರೆ. ತಮ್ಮನ ಮಗ, ಸೊಸೆ ಸಂಗೀತ ವಾದ್ಯಗಳ ತರಗತಿ ಪ್ರಾರಂಭಿಸಿದ್ದು ಇವರ ಸಂಗೀತಶಾಲೆಗೆ ಹೊಸ ಮೆರುಗನ್ನು ತಂದಿದ್ದಾರೆ. ಶೀನು ಮೃದಂಗ, ವೀಣೆ ಕಲಿಯಲು ಅಲ್ಲಿಗೇ ಹೋಗುವುದು. ಈಗ ಗೌರಿಯಮ್ಮ ತುಂಬ ಬೇಕಾದವರ ಮನೆಗಳಿಗೆ ಮಾತ್ರ ಪಾಠ ಹೇಳಿಕೊಡಲು ಹೋಗುತ್ತಾರೆ. ಪರೀಕ್ಷೆ ಕಟ್ಟಿಸುತ್ತಾರೆ. ಶಿಷ್ಯರು ಕಲಿತಮೇಲೆ ತಾವೇ ಸ್ವತಂತ್ರವಾಗಿ ಸಂಗೀತಶಾಲೆ ಪ್ರಾರಂಭಿಸಬೇಕೆಂದರೆ ಅವರಿಗೆ ಸಹಾಯ ಮಾಡುತ್ತಾರೆ. ಸುಬ್ರಹ್ಮಣ್ಯ ಎಂಬುದು ಅವರ ತಂದೆಯವರ ಹೆಸರು. ಅವರು ಗಂಡನಿಂದ ಬೇರೆಯಾಗಿ ಬಂದಾಗ ಇಲ್ಲಿಯ ಜನರ ಬಾಯಿಗೆ ಆಹಾರವಾಗಿದ್ದರಂತೆ. ಅವುಗಳಿಗೆಲ್ಲ ಹೆದರದೆ, ಕುಗ್ಗದೆ ದಿಟ್ಟತನದಿಂದ ಮುಂದುವರೆದು ಇಷ್ಟೆಲ್ಲ ಸಾಧನೆ ಮಾಡಿದ್ದಾರೆ. ನೊಂದ ಜೀವಿ, ಆದರೆ ಸಾಧಕರು. ಜೊತೆಗೆ ಅವರು ಯೋಗಪಟುವೂ ಹೌದು. ನನ್ನ ಅಂದಾಜಿನ ಪ್ರಕಾರ ಅವರು ಈಗ ಎಂಭತ್ತರ ಆಸುಪಾಸಿನಲ್ಲಿದ್ದಾರೆ ಹಿರಿಯರು.” ಎಂದು ಗೌರಿಯಮ್ಮನ ಸವಿವರವನ್ನು ಹೇಳಿದರು ನಾರಾಣಪ್ಪ.

ಇದನ್ನೆಲ್ಲ ಕೇಳುತ್ತಿದ್ದಂತೆ ಭಾಗ್ಯಳಿಗೆ ಗೌರಿಯಮ್ಮನೇ ಕಣ್ಮುಂದೆ ಬಂದು ನಿಂತಂತಾಯಿತು. ಅತ್ತೆ ತನ್ನನ್ನು ಪರಿಚಯಿಸಿದಾಗ ಅವರು ನೋಡಿದ ನೇರನೋಟ ತಾನು ತಲೆತಗ್ಗಿಸುವಷ್ಟು ತೀಕ್ಷ್ಣವಾಗಿತ್ತು. ಎಂಭತ್ತರ ಆಸುಪಾಸು, ಅಬ್ಬಾ ! ಅವರನ್ನು ನೋಡಿದವರ್‍ಯಾರೂ ಅಷ್ಟೆಂದು ಹೇಳಲಾರರು. ಬಣ್ಣ ಮತ್ತು ರೂಪಿನಲ್ಲಿ ಸಾಧಾರಣವೆಂದರೂ ದೇಹದಾರ್ಢ್ಯತೆಯಲ್ಲಿ ಯೋಗಾಸನದಿಂದ ಚೆನ್ನಾಗಿಯೇ ಇದ್ದಾರೆ. ಬದುಕನ್ನು ಕಟ್ಟಿಕೊಂಡ ರೀತಿ, ಹಾಗೂ ಮತ್ತೊಬ್ಬರ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡುತ್ತಿರುವ ಅವರ ವ್ಯಕ್ತಿತ್ವದ ಬಗ್ಗೆ ಪೂಜ್ಯ ಭಾವನೆ ಮೂಡಿತು.

“ಭಾಗ್ಯಮ್ಮ, ಅವರ ಕಥೆ ಕೇಳಿ ಸುಮ್ಮನೆ ಕುಳಿತುಬಿಟ್ಟಿರಿ” ಎಂದರು ನಾರಾಣಪ್ಪ.

“ಹೌದು ನಾಣಜ್ಜ, ಎಂಥಹ ಕರುಣಾಜನಕ ಕಥೆ, ಕೇಳಿ ಮನಸ್ಸು ಆರ್ದ್ರವಾಯಿತು. ಹಾಗೇ ಬದುಕಿನ ನೊಗಹೊತ್ತು ಸಾಗುತ್ತಿರುವ ಅವರ ಚೈತನ್ಯ ಮೆಚ್ಚುಗೆಯಾಯೀತು.” ಎಂದಳು ಬಾಗ್ಯ.

“ಹೌದು ಭಾಗ್ಯಮ್ಮ, ಒಬ್ಬೊಬ್ಬರ ಬದುಕಿನ ಹಿಂದೆಯೂ ಒಂದೊಂದು ಕಥೆಯಿದ್ದೇ ಇರುತ್ತದೆ. ಈಗ ನನ್ನನ್ನೇ ತೆಗದುಕೊಳ್ಳಿ. ನನ್ನನ್ನು ಹೆತ್ತವರ್‍ಯಾರೆಂದು ನೋಡಿದ ನೆನಪೇ ಇಲ್ಲ. ಈ ಮನೆಗೆ ತಂದುಬಿಟ್ಟವರು ಪತ್ತೆಯಿಲ್ಲ. ನನಗೆ ಅಲ್ಪಸ್ವಲ್ಪ ವಿದ್ಯೆ ಕಲಿಸಿ, ಬುದ್ಧಿಕಲಿಸಿ ಆಶ್ರಯವಿತ್ತು ಸಲಹುತ್ತಿರುವವರೇ ನನಗೆಲ್ಲಾ. ಇವರೇ ನನ್ನ ಸರ್ವಸ್ವ.  ಈ ಮನೆಯೇ ನನಗೆ ಆಲಯ.” ಎಂದು ನೊಂದು ನುಡಿದರು. ನಾರಾಣಪ್ಪ.

“ದುಃಖಿಸಬೇಡಿ ನಾಣಜ್ಜ, ಒಳ್ಳೆಯ ಆಶ್ರಯವೇ ನಿಮಗೆ ದೊರಕಿದೆ. ಯೋಚಿಸಬೇಡಿ. ನಿಮ್ಮನ್ನು ನಾಣಜ್ಜನೆಂದು ಕರೆದಿದ್ದೇನೆ. ನೀವು ನನಗೆ ನನ್ನಜ್ಜನಂತೆಯೇ, ಹಾಗೇ ನೋಡಿಕೊಳ್ಳುವೆ. ಹೋಗಿ ಈಗ ವಿಶ್ರಾಂತಿ ಪಡೆಯಿರಿ. ನಾನೂ ನನ್ನ ರೂಮಿಗೆ ಹೋಗುತ್ತೇನೆ” ಎಂದು ರೂಮಿನೆಡೆಗೆ ನಡೆದಳು.

ಒಂದೆರಡು ದಿನದಲ್ಲಿ ಶ್ರೀನಿವಾಸ, ಜೋಯಿಸರಿಬ್ಬರೂ ಹಾಸನದ ಬಳಿಯ ಊರಿನಿಂದ ಹಿಂದಿರುಗಿದರು. ಅಲ್ಲಿನ ಕಾರ್ಯಕಲಾಪಗಳ ಬಗ್ಗೆ ಹೇಳುತ್ತಾ “ಸೀತೂ ಈಸಾರಿ ಒಂದು ಅಚ್ಚರಿಯ ಸಂಗತಿ ನಡೆಯಿತು. ಒಂದುಕಡೆ ಮಂಡಲಪೂಜೆಗೆಲ್ಲಾ ಅಣಿಮಾಡಿದ್ದರು. ಅದಕ್ಕೆ ಪೂರಕವಾಗಿ ಮಂಡಲ ರಚಿಸುವವರು ಕೊನೆಯ ಘಳಿಗೆಯಲ್ಲಿ ಕೈಕೊಟ್ಟರು. ಸಿದ್ಧತೆಯೆಲ್ಲ ಮುಗಿದಿದೆ. ಹೇಗೆ ಮಾಡುವುದೆಂದು ತಿಳಿಯದೆ ಇನ್ನೊಮ್ಮೆ ಇಟ್ಟುಕೊಳ್ಳಿ ಎಂದು ಹೇಳಿದೆ.”

“ಏಕೆ ಅಲ್ಲಿ ನಿಮ್ಮೊಡನೆ ಶೀನು ಇರಲಿಲ್ಲವೇ, ಅವನಿಗೆ ಎಲ್ಲವೂ ಬರುತ್ತಿತ್ತಲ್ಲಾ” ಎಂದು ಕೇಳಿದರು ಸೀತಮ್ಮ.

PC:Internet

“ಇಲ್ಲ, ಅವನನ್ನು ಆ ಊರಿನ ಮುಖ್ಯಸ್ಥರು ತಮ್ಮ ಮನೆಯಲ್ಲಿ ಗಣಪತಿಹೋಮ ಮಾಡಿಸಲೆಂದು ನನ್ನನ್ನು ಒಪ್ಪಿಸಿಯೇ ಕರೆದುಕೊಂಡು ಹೋಗಿದ್ದರು. ಏನು ಮಾಡುವುದು. ಇಷ್ಟೆಲ್ಲ ಸಿದ್ಧತೆ ಮತ್ತೊಮ್ಮೆ ಮಾಡಿಕೊಳ್ಳುವುದೆಂದರೆ ಎಂದುಕೊಳ್ಳುತ್ತಿರುವಾಗ ಆ ಮನೆಯ ಹೆಣ್ಣುಮಗಳೊಬ್ಬಳು ಜೋಯಿಸರೇ ನಾನು ಈ ಮನೆಯ ಸೊಸೆ, ನನಗೆ ಮಂಡಲ ರಚನೆ ಬರುತ್ತದೆ. ಸಾಮಗ್ರಿಗಳೆಲ್ಲ ಇಲ್ಲೇ ಇವೆ. ತಾವು ಅನುಮತಿ ಕೊಟ್ಟರೆ ನಾನೇ ಬಿಡಿಸುತ್ತೇನೆ ಎಂದು ಕೇಳಿದಳು. ನಾನು ಯಾವುದೂ ತಪ್ಪಾಗಬಾರದಮ್ಮಾ ಎಂದೆ. ಸರಿಯಾಗಿಲ್ಲದಿದ್ದರೆ ಇನ್ನೊಮ್ಮೆ ಇಟ್ಟುಕೊಳ್ಳೋಣ. ಇಲ್ಲಾ ನಿಮ್ಮ ಮಗನೇ ಬೇಗ ಹಿಂದಿರುಗಿದರೆ ಸರಿಯಾದ ಮುಹೂರ್ತವಿದ್ದರೆ ಮಾಡಬಹುದಲ್ಲಾ ಎಂದಳು. ಆಯಿತಮ್ಮಾ ಪ್ರಯತ್ನಿಸು ಎಂದೆ. ಸೀತೂ ಎಷ್ಟು ಚೆನ್ನಾಗಿ ಬಿಡಿಸಿದ್ದಳೆಂದರೆ ಯಾವಕಡೆಯಿಂದ ಪರೀಕ್ಷಿಸಿದರೂ ತಪ್ಪು ಕಾಣಿಸಲಿಲ್ಲ. ಎಳೆಗಳಿಗೆ ಬಳಸಿದ ಬಣ್ಣ, ಆಕಾರ, ಅಳತೆ, ಎಲ್ಲವೂ ಸಮರ್ಪಕವಾಗಿದ್ದವು. ಸಾಂಗವಾಗಿ ಪೂಜೆಯನ್ನು ಮುಗಿಸಿದೆ. ಆ ಹುಡುಗಿಯನ್ನು ಆಶೀರ್ವದಿಸಿ ಬಂದೆ” ಎಂದರು.

ಆಗ ಅಲ್ಲಿಯೇ ಇದ್ದ ಭಾಗ್ಯ “ಈ ಮನೆಯ ಸೊಸೆಗೂ ಆಯಾಯ ಪೂಜೆಗಳ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ರಚಿಸುವ ರಂಗೋಲಿಗಳು, ಹಾಗೂ ಮಂಡಲ ಪೂಜೆಗೆ ವಿಶೇಷ ಮಂಡಲವನ್ನೂ ರಚಿಸಲು ಬರುತ್ತದೆ ಮಾವಯ್ಯಾ” ಎಂದಳು ಮೆಲುದನಿಯಲ್ಲಿ.

ಚೀಲದಿಂದ ಪೂಜಾ ಸಾಮಗ್ರಿಗಳು, ಪುಸ್ತಕಗಳು, ಇತ್ಯಾದಿಗಳನ್ನು ಅವರು ಕೊಟ್ಟಿದ್ದ ಉಡುಗೊರೆಗಳಿಂದ ಪ್ರತ್ಯೇಕ ಮಾಡುತ್ತಿದ್ದ ಶ್ರೀನಿವಾಸ “ವಾವ್ ! ಭಾಗ್ಯ, ನಿಜವಾಗಲೂ ನಿನಗೆ ಬರುತ್ತದೆಯಾ? ವೆರಿಗುಡ್, ನಾನು ಪೂಜೆ ಪುನಸ್ಕಾರಗಳಿಗೆ ಹೋಗುವಾಗ ನಿನ್ನನ್ನು ಸಹಾಯಕ್ಕೆ ಕರೆದುಕೊಂಡು ಹೋಗಬಹುದು. ಸತಿಪತಿಗಳೊಂದಾದ ಸೇವೆ ಭಗವಂತನಿಗೆ ಪ್ರಿಯವಂತೆ” ಎಂದು ನಗೆಚಟಾಕಿ ಹಾರಿಸಿದ. “ಹೂ..ನೀನು ಹೋದೆಡೆಯಲ್ಲೆಲ್ಲಾ ಸುತ್ತಿಬರಲು ನನ್ನ ಸೊಸೆಯೇನು ಬಿಟ್ಟಿ ಬಿದ್ದಿದ್ದಾಳಾ. ಹಾಗೆಲ್ಲಾ ಯೊಚಿಸಬೇಡ ಮಗನೇ. ಪೂಜೆಗಳೆಲ್ಲ ಅಪ್ಪಮಕ್ಕಳಿಗಷ್ಟೇ ಇರಲಿ ಎಂದರು. ನಂತರ ಗೌರಿಯಮ್ಮ ಮನೆಗೆ ಬಂದದ್ದು, ಅವರ ಸವಾಲುಗಳನ್ನು ಭಾಗ್ಯ ಯಶಸ್ವಿಯಾಗಿ ಎದುರಿಸಿದ್ದು, ಅವರು ಪಾಠ ಹೇಳಿಕೊಡಲು ಒಪ್ಪಿಕೊಂಡದ್ದು ಎಲ್ಲವನ್ನೂ ಚುಟುಕಾಗಿ ತಿಳಿಸಿದರು. ನೀವಿಬ್ಬರೂ ಸೇರಿ ಒಂದು ಒಳ್ಳೆಯ ದಿನ ಮತ್ತು ಎಲ್ಲಿ ಪಾಠ ಮಾಡುವುದೆಂಬ ಸ್ಥಳವನ್ನು ನಿಗದಿಪಡಿಸಿ” ಎಂದರು ಸೀತಮ್ಮ.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35698

ಬಿ.ಆರ್.ನಾಗರತ್ನ, ಮೈಸೂರು

10 Responses

  1. ನಯನ ಬಜಕೂಡ್ಲು says:

    ಪ್ರತಿಯೊಂದು ಭಾಗವೂ ಬಹಳ ಚಂದ

  2. ಧನ್ಯವಾದಗಳು ನಯನ ಮೇಡಂ

  3. ಶಂಕರಿ ಶರ್ಮ says:

    ಸರ್ವಗುಣ ಸಂಪನ್ನೆ, ಬಹುಮುಖ ಪ್ರತಿಭಾವಂತೆ ಭಾಗ್ಯಳ ಪಾತ್ರ ಇಷ್ಟವಾಯ್ತು. ಎಲು ಕಂತುಗಳೂ ಚೆನ್ನಾಗಿವೆ.

  4. Padma Anand says:

    ಎಂದಿನಂತೆ, ಗೌರಿಯಮ್ಮ ಪಾತ್ರದ ಪೋಷಣೆಯೂ ಸೊಗಸಾಗಿ ಮೂಡಿಬಂದು, ಕಾದಂಬರಿಯ ಈ ಭಾಗವೂ ಸುಲಲಿತವಾಗಿ ಓದಿಸಿಕೊಂಡಿತು.

  5. ನಾಗರತ್ನ ಬಿ. ಆರ್ says:

    ಧನ್ಯವಾದಗಳು ಶಂಕರಿ ಮೇಡಂ ಹಾಗೂ ಪದ್ಮಾ ಮೇಡಂ.

  6. ವಿಜಯಾಸುಬ್ರಹ್ಮಣ್ಯ says:

    ಬಹು ಚೆನ್ನಾಗಿದೆ.

  7. ಧನ್ಯವಾದಗಳು ವಿಜಯಾ ಮೇಡಂ

  8. padmini hegade says:

    ಕಾದಂಬರಿಯ ಈ ಭಾಗವೂ ಸುಲಲಿತವಾಗಿದೆ

  9. ಧನ್ಯವಾದಗಳು ಪದ್ಮಿನಿ ಮೇಡಂ.

  10. Anonymous says:

    ಸಂಗೀತ ಶಿಕ್ಷಣ ಸಂವಾದ ಪೂರಕವಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: