ಶಕ್ತಿಶಾಲಿ…?
ಬಯಲಿನಲಿ ಹೆಮ್ಮರವೊಂದು ಸೆಟೆದು ನಿಂತಿತ್ತು ಹಮ್ಮು ಬಿಮ್ಮುನಲಿ
ವಿಶಾಲವಾಗಿ ಹರಡಿಕೊಂಡಿರುವ ರೆಂಬೆ ಕೊಂಬೆಗಳು
ರಕ್ಕಸ ಮರದ ತುಂಬ ಹಚ್ಚ ಹಸುರಾದ ಎಲೆಗಳು
ನಕ್ಕು ನಲಿದಿತ್ತು ಆಳಕ್ಕಿಳಿದ ಬೇರುಗಳಿಂದ ಪೋಷಕಾಂಶಗಳ ಪಡೆಯುತಲಿ
ಅಹಂಕಾರದಲಿ ಮೆರೆದಿತ್ತು ತಿರುಚಿದ ಬಲವಾದ ಕಾಂಡದ ಬೆಂಬಲದಲಿ
ಹಿಯ್ಯಾಳಿಸಿ ನಗುತ್ತಿತ್ತು ಕೆಳಗಿರುವ ಗರಿಕೆ ಹುಲ್ಲನ್ನು ನೋಡಿ
ಕೊಲ್ಮಿಂಚು ಗುಡುಗು ಸಿಡಿಲುಗಳ ಒಳಗೊಂಡ ಸುರಿಮಳೆ ಸುರಿದಿತ್ತು ಕಾರಿರುಳ ರಾತ್ರಿಯಲಿ
ಎದ್ದಿತ್ತು ಸುಳಿಗಾಳಿ ಎಡೆಬಿಡದೆ ಸುರಿಯುವ ಹನಿಗಳ ಕೂಡ
ಉರುಳಿಸಿತ್ತು ಒಣ ಜಂಭದ ವೃಕ್ಷವ ಆ ಬಿರುಗಾಳಿ ಬುಡ ಸಮೇತ
ಮಣ್ಣುಪಾಲಾಗಿತ್ತು ನಾನೇ ಶಕ್ತಿಶಾಲಿ ಎಂದು ಬೀಗಿದ ಮರವೀಗ
ಎಲ್ಲಾ ತಲೆಕೆಳಗಾಗಿ ಮಾಡಿತ್ತು ಊಹಿಸದೆ ಬಂದ ಸಂದರ್ಭ ಆಗ
ಮಮ್ಮಲ ಮರುಗಿತ್ತು ಗರಿಕೆ ಹುಲ್ಲು ಬೇರು ಮೇಲಾಗಿ ಬಿದ್ದ ಮಹಾತರುವನ್ನು ಕಂಡು
ನಿಂತಿತ್ತು ಎದೆಯೊಡ್ಡಿ ಭೋ ಎಂದು ಬೀಸುವ ಗಾಳಿಗೆ ಕೊಂಕದೆ ಸಹಜತೆಯ ಉಂಡು
ಸಾಧಿಸಿ ತೋರಿತ್ತು ಒಮ್ಮೊಮ್ಮೆ ಮೃದುವಾಗಿರುವುದೇ ಗಟ್ಟಿತನದ ಲಕ್ಷಣವೆಂದು
– ಕೆ ಎಂ ಶರಣಬಸವೇಶ
ಉತ್ತಮ ಸಂದೇಶ ವುಳ್ಳ ಕವನ ಧನ್ಯವಾದಗಳು ಸಾರ್.
ಧನ್ಯವಾದಗಳು ನಾಗರತ್ನ ಮೇಡಂ
ಚೆನ್ನಾಗಿದೆ
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ
Addabidde guruji
Thank you so much Venkatesh Nayak
ಮೃದುವಾಗಿರುವುದೇ ಗಟ್ಟಿ ತನದ ಲಕ್ಷಣ, ಸೊಗಸಾದ ಸಂದೇಶ ಹೊತ್ತ ಸುಂದರ ಕವಿತೆ
ಮೃದುವಿನ ಗಟ್ಟಿತನ ಹೊತ್ತ ಸಾದೋಹರಣ ಚಿತ್ರಕವನ ಬಹಳ ಚೆನ್ನಾಗಿದೆ.