ಅಂತರ ರಾಷ್ಟ್ರೀಯ ಯೋಗ ದಿನಾಚರಣೆ
ನಮ್ಮ ಭಾರತ ದೇಶ ವಿಶ್ವಕ್ಕೆ ನೀಡಿದ ಮಹತ್ತರ ಕೊಡುಗೆಗಳಲ್ಲಿ ಯೋಗಾಭ್ಯಾಸವೂ ಒಂದು. ಯೋಗಾಸನಗಳಿಗೆ ಭಾರತ ತವರೂರಾದರೂ ಅದಕ್ಕೆ ವಿಶ್ವ ಮಾನ್ಯತೆ ಲಭಿಸಿದ್ದು ಎಂಟು ವರುಷಗಳ ಹಿಂದೆ ಮಾತ್ರ. ಭಾರತೀಯ ಪುರಾಣ ಪುರುಷರು ಯೋಗಾಭ್ಯಾಸದಿಂದ ಮನಸ್ಸು ಮತ್ತು ದೇಹಗಳ ಮೇಲೆ ನಿಗ್ರಹವನ್ನು ಸಾಧಿಸಿದ್ದರು ಎಂಬುದು ಪುರಾಣದ ಮಾತಾಯಿತು. ಆಧುನಿಕ ಯೋಗದ ತವರು ಮತ್ತು ರಾಜಧಾನಿ ನಮ್ಮ ಹೆಮ್ಮೆಯ ಮೈಸೂರು. ಒಂದು ಶತಮಾನಕ್ಕೂ ಹಿಂದೆಯೇ ಆಧುನಿಕ ಯೋಗದ ಪಿತಾಮಹ ಎನಿಸಿಕೊಂಡಿದ್ದ ತಿರುಮಲ ಕೃಷ್ಣಮಚಾರ್ಯ ಅವರಿಗೆ ರಾಜಾಶ್ರಯ ನೀಡಿ ಮೈಸೂರಿಗೆ ಕರೆತಂದು ಇಂದಿನ (ಅಂದಿನ ಕೂಡ) ಸಂಸ್ಕೃತ ಪಾಠಶಾಲೆಯ ಅಂಗಳದಲ್ಲೇ ಯೋಗಶಾಲೆಗೂ ಅವಕಾಶವನ್ನಿತ್ತವರು ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ತಿರುಮಲ ಕೃಷ್ಣಮಚಾರ್ಯ ಅವರ ಭಾವಮೈದುನರೇ ಆಧುನಿಕ ಯೋಗದಲ್ಲಿ ಹತ್ತು ಹಲವು ಸಾಧನೆಗಳನ್ನು ಮಾಡಿ ಹೊಸ ಹೊಸ ವಿನ್ಯಾಸದ ಆಸನಗಳನ್ನು ಅಭಿವೃದ್ಧಿ ಪಡಿಸಿ ಜನಸಾಮಾನ್ಯರಿಗೆ ತಲುಪಿಸಿದವರು ಪ್ರಾಚಾರ್ಯ ಬಿ.ಕೆ.ಎಸ್. ಐಯ್ಯಂಗಾರ್ ಅವರು. ಅನಾದಿ ಕಾಲದಿಂದಲೂ ಅಭ್ಯಾಸ ಮಾಡಿದವರ ಮಾನಸಿನ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದೆ ಯೋಗಾಭ್ಯಾಸ.
ಕನ್ನಡದ ಮೇರುನಟ, ನಮ್ಮೆಲ್ಲರ ನೆಚ್ಚಿನ ಡಾ.ರಾಜ್ ಕುಮಾರ್ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ದೇಹ, ಮನಸ್ಸು ಮತ್ತು ಶಾರೀರವನ್ನು ಅತ್ಯಂತ ಸುಸ್ಥಿತಿಯಲ್ಲಿಟ್ಟುಕೊಳ್ಳಲು ಯೋಗಾಭ್ಯಾಸವೇ ಕಾರಣ ಎಂದರೆ ತಪ್ಪಾಗಲಾರದು. ಅವರು ಒಂದು ದಿನವೂ ತಮ್ಮ ಯೋಗಾಭ್ಯಾಸವನ್ನು ತಪ್ಪಿಸುತ್ತಿರಲಿಲ್ಲವಂತೆ. ಎಷ್ಟು ಕಠಿಣವಾದ ಆಸನಗಳನ್ನೂ ನಿರಂತರ ಅಭ್ಯಾಸದಿಂದ ಲೀಲಾಜಾಲವಾಗಿ ಮಾಡಿಬಿಡುತ್ತಿದ್ದರು.
ಎಂಟು ವರುಷಗಳ ಹಿಂದೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮ ಮತ್ತು ಸಂಕಲ್ಪದಿಂದ ಯೋಗಾಭ್ಯಾಸಕ್ಕೆ ವಿಶ್ವ ಮಾನ್ಯತೆ ಸಿಕ್ಕಿ, ವರ್ಷದ ಅತ್ಯಂತ ದೀರ್ಘ ಹಗಲನ್ನು ಹೊಂದಿದ ಜೂನ್ 21 ನೇ ದಿನಾಂಕ ಅಂತರ ರಾಷ್ರ್ಟೀಯ ದಿವಸವಾಗಿ ಆಚರಿಸಲ್ಪಡುತ್ತಿದೆ. ಹಾಗೆಯೇ ಕಠಿಣ ಮತ್ತು ನಿಯಮಿತ ಅಭ್ಯಾಸ ನಡೆಸುವ ಒಂದು ವರ್ಗದ ಜನತೆಗೆ ಮಾತ್ರ ಸೀಮಿತವಾಗಿದ್ದ ಯೋಗ ಇಂದು ಪ್ರಪಂಚದಾದ್ಯಂತ ಹಬ್ಬಿದೆ, ಹರಡಿದೆ. ಹಾಗೂ ಬಹು ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಿದೆ, ಸುಸ್ಥಿತಿಯಲ್ಲಿಟ್ಟಿದೆ.
ಸುಮಾರು 45-50 ವರುಷಗಳಿಂದಲೂ ಕನ್ಯಾಕುಮಾರಿಯ ವಿವೇಕಾನಂದ ಯೋಗ ಕೇಂದ್ರವು ಯೋಗಾಭ್ಯಾಸವನ್ನು ಪಸರಿಸುವ ಕ್ರಿಯೆಯಲ್ಲಿ ಸದ್ದುಗದ್ದಲಗಳಿಲ್ಲದೆ ತನ್ನನ್ನು ತಾನು ತೊಡಗಿಸಿಕೊಂಡಿದೆ.
ನನ್ನ ಜೀವನದಲ್ಲಿ ಯೋಗಾಭ್ಯಾಸದ ಪಾತ್ರವನ್ನು ಕುರಿತು ಹೇಳುವುದಾದರೆ, ಸುಮಾರು 40-42 ವರುಷಗಳಷ್ಟು ಹಿಂದೆಯೇ ನಾನಾಗ ಓದುತ್ತಿದ್ದ ಎನ್.ಎಂ.ಕೆ.ಆರ್.ವಿ. ಕಾಲೇಜಿಗೆ ವಿವೇಕಾನಂದ ಯೋಗ ಕೇಂದ್ರದ ಡಾ||ನಾಗರತ್ನಾ ಅವರು ಬಂದು ಹತ್ತು ದಿವಸಗಳ ಯೋಗ ಶಿಬಿರವನ್ನು ನಡೆಸಿಕೊಟ್ಟಿದ್ದರು. ನಾವೆಲ್ಲಾ ಆಗ ಎಸ್.ಎಸ್.ಎಲ್.ಸಿ. ಮುಗಿದ ಕೂಡಲೇ ಸೀರೆಯುಡಲು ಪ್ರಾರಂಭಿಸಿ ಬಿಡುತ್ತಿದ್ದೆವು. ಈ ಯೋಗ ಶಿಬಿರ ನಡೆದಾಗ ನಾನಾಗ ಅಂತಿಮ ವರ್ಷದ ಬಿ. ಎಸ್. ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಚೂಡಿದಾರ್, ಪ್ಯಾಂಟ್, ಶರ್ಟ ತೊಡುವುದನ್ನು ಯೋಚಿಸಲೂ ಸಾಧ್ಯವಾಗದ ಮಾತಾಗಿತ್ತು. ನಾವು ಮೂವರು ಗಳಸ್ಯ ಕಂಠಸ್ಯ ಗೆಳತಿಯರು ಹೆಸರೇನೋ ಕೊಟ್ಟು ಬಿಟ್ಟಿದ್ದೆವು. ಸರಿ, ಅಣ್ಣಂದಿರ ಪ್ಯಾಂಟು, ಶರಟುಗಳನ್ನು ಬ್ಯಾಗಿನಲ್ಲಿ ತುರುಕಿಕೊಂಡು ಹೋದೆವು. ಯೋಗ ತರಗತಿಯ ಸಮಯವಾಯಿತು. ಬಟ್ಟೆ ಬದಲಾಯಿಸಿಕೊಂಡು ಬಂದಾಗ ಒಬ್ಬೊಬ್ಬರೂ ನಮ್ಮಂತೆಯೇ ತಮ್ಮದಲ್ಲದ ಅಳತೆಯ ಬಟ್ಟೆಗಳಲ್ಲಿ ವಿಚಿತ್ರವಾಗಿ ಕಾಣುತ್ತಿದ್ದೆವು. ಒಬ್ಬರನ್ನು ನೋಡಿಕೊಂಡು ಇನ್ನೊಬ್ಬರು ನಕ್ಕಿದ್ದೇ ನಕ್ಕಿದ್ದು. ನಂತರ ಡಾ||ನಾಗರತ್ನ ಅವರು ಬಂದು ಯೋಗಾಭ್ಯಾಸದ ಕುರಿತಾಗಿ ಹತ್ತು ನಿಮಿಷಗಳು ಮಾತನಾಡಿ ಹಲವಾರು ಸರಳ ಆಸನಗಳನ್ನು ಹೇಳಿಕೊಟ್ಟರು. ಎಲ್ಲರೂ ಯೌವನದ ಹೊಸ್ತಿಲಲ್ಲಿದ್ದೆವು. ಯಾವ ಆಸನವೂ ಕಷ್ಟವೆನಿಸಲಿಲ್ಲ. ಆದರೆ ಮನಸ್ಸಿಗೆ, ದೇಹಕ್ಕೆ ಸಿಕ್ಕ ಹರುಷ ಮತ್ತು ಮುದ ಅಸಾಧಾರಣವಾಗಿತ್ತು. ಆ ಹತ್ತು ದಿನಗಳು ಅತ್ಯಂತ ಸಂತೋಷದಾಯಕವಾದ ದಿನಗಳಾಗಿದ್ದವು. ನಂತರ ಕೆಲವಾರು ತಿಂಗಳುಗಳು ಮನೆಯಲ್ಲೇ ಮಾಡುತ್ತಿದ್ದೆವಾದರೂ ಯಾವಾಗ ನಿಂತುಹೋಯಿತೋ ತಿಳಿಯಲೇ ಇಲ್ಲ.
ಮತ್ತೆ ಈಗ ಎಂಟು ವರುಷಗಳ ಹಿಂದೆ ಮೈಸೂರಿನ ಮೊಹಲ್ಲ, ಮೊಹಲ್ಲಗಳಲ್ಲಿಯೂ ಉಚಿತ ಪತಂಜಲಿ ಯೋಗ ಕೇಂದ್ರಗಳು ಪ್ರಾರಂಭವಾದಾಗ, ಆಗಲೇ ಮಧುಮೇಹಕ್ಕೆ ತುತ್ತಾಗಿದ್ದ ನಾನು ಮತ್ತು ನಮ್ಮವರು ಯೋಗಶಾಲೆಗೆ ಹೋಗುವ ಮನಸ್ಸು ಮಾಡಿದೆವು. ನಮ್ಮ ಯೋಗದ ಉಪಾಧ್ಯಾಯರಾದ ಶ್ರೀಯುತ ನಾಗಮಲ್ಲು ಅವರು ಅತ್ಯಂತ ಆಸಕ್ತಿ ಹಾಗೂ ಮುತುವರ್ಜಿಯಿಂದ ಹೇಳಿಕೊಡುತ್ತಾರೆ. ನನ್ನವರು ಮುಂದುವರೆಸಿದರೆ, ನಾನು ಹಿಂದುಳಿದುಬಿಟ್ಟೆ. ನನ್ನವರಿಗಂತೂ ಯೋಗಾಭ್ಯಾಸ ಎಷ್ಟು ಉಪಯೋಗಕರವಾಗಿ ಪರಿಣಾಮ ಬೀರಿತ್ತೆಂದರೆ, ಒಂದು, ಒಂದೂವರೆ ವರ್ಷದ ನಿರಂತರ ಯೋಗಾ ಭ್ಯಾಸದಿಂದ 40 ಯುನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದವರು ಎಂಟು ಯುನಿಟ್ ಗಳಿಗೆ ಇಳಿಯುವಂತಾಯಿತು. ಇದರಿಂದ ಪ್ರಭಾವಿತಳಾಗಿ ನಾನೂ ಸಹ ಯೋಗತರಗತಿಗೆ ಹೋಗಲು ಪುನರಾರಂಭಿಸಿದೆ. ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ ನಾನು ಈಗ ಮಾತ್ರೆಗೆ ಇಳಿದಿದ್ದೇನೆ. ಯೋಗಾಭ್ಯಾಸ ಮಾಡಿದರೆ ಮನಕ್ಕೆ ದೇಹಕ್ಕೆ ಸಿಗುವ ಆನಂದ, ಹಗುರವಾದ ಭಾವನೆ ವರ್ಣಿಸಲಸದಳ. ಅದನ್ನು ಅನುಭವಿಸಿಯೇ ತೀರಬೇಕು. ಇಷ್ಟು ಸುಲಭದಲ್ಲಿ, ದಿನಕ್ಕೆ 45-50 ನಿಮಿಷಗಳು ನಾವು, ನಮಗಾಗಿ ಮೀಸಲಿಟ್ಟು ಯೋಗಾಭ್ಯಾಸವನ್ನು ಮಾಡಿದರೆ, ನಮ್ಮ ಆಯಸ್ಸು ಇರುವವರೆಗೂ ನಾವು ಆದಷ್ಟೂ ಆರೋಗ್ಯಕರವಾಗಿರಬಹುದೆಂಬುದು ನನ್ನ ಧೃಡವಾದ ನಂಬಿಕೆ, ಈ ನಂಬಿಕೆ ನನಗೆ ಸತತ ಅಭ್ಯಾಸದಿಂದ, ಅನುಭವದಿಂದ ಬಂದಿದೆ.
ನನ್ನ ಪುರಾಣ ಇರಲಿ, ಈ ಎಂಟನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ನಮ್ಮ ನೆಚ್ಚಿನ ಫ್ರಧಾನ ಮಂತ್ರಿಯವರು ನಮ್ಮ ಮೈಸೂರಿಗೆ ಆಗಮಿಸಿ, ಅರಮನೆಯ ಮುಂಭಾಗ, ಹದಿನೈದು ಸಾವಿರ ಜನರೊಂದಿಗೆ ಯೋಗಾಸನಗಳನ್ನು ಮಾಡಿದ್ದಾರೆ. ಇಡೀ ನಗರ ಅದನ್ನು ಸಂಭ್ರಮಿಸಿದೆ. ನಾನೂ ಹೋಗಬೇಕೆಂದಿದ್ದೆ. ತಾಂತ್ರಿಕ ಕಾರಣಗಳಿಂದ ಹೋಗಲಾಗಲಿಲ್ಲ. ಆದರೂ ಹಿಂದಿನ ಎರಡೂ ಭಾನುವಾರಗಳ ಪೂರ್ವಾಭ್ಯಾಸಕ್ಕೆ ಹೋಗಿ ನಮ್ಮ ಹೆಮ್ಮೆಯ ಅರಮನೆಯ ಅಂಗಳದಲ್ಲಿ ಅಭ್ಯಾಸ ಮಾಡಿ ಬಂದ ತೃಪ್ತಿ ನನಗಿದೆ. ದಿನಾಂಕ 21.06.2022 ರ ಸಂಜೆ ನಮ್ಮ ಯೋಗ ತರಗತಿಯ ಎಲ್ಲ ಸದಸ್ಯರುಗಳೂ ಒಟ್ಟಾಗಿ ಯೋಗವನ್ನು ಮಾಡಿ ಸಂಭ್ರಮಿಸಿದೆವು. ಬಿಡದೆ ನಿತ್ಯ ಯೋಗವನ್ನು ಮಾಡುವುದಾಗಿ ಸಂಕಲ್ಪವನ್ನೂ ಮಾಡಿದೆವು.
ಬನ್ನಿ ನಾವೆಲ್ಲರೂ ಯೋಗಾಭ್ಯಾಸವನ್ನು ಮಾಡಿ ನಿರೋಗಿಗಳಾಗೋಣ. ಯೋಗದ ತವರು, ರಾಜಧಾನಿ ಎನಿಸಿಕೊಳ್ಳುವ ಮೈಸೂರಿನ ಹೆಮ್ಮೆಯ ನಾಗರೀಕರಾಗಿ ಯೋಗವನ್ನು ಎಲ್ಲರಿಗೂ ಪಸರಿಸೋಣ.
ಎಲ್ಲರಿಗೂ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಶುಭಕಾಮನೆಗಳು.
–ಪದ್ಮಾ ಆನಂದ್
ಉತ್ತಮ ಲೇಖನ, ಅಭಿನಂದನೆಗಳು
ನಿಮ್ಮ ಮತ್ತು ಆನಂದ ಅವರ ಆರೋಗ್ಯ ಸುಧಾರಣೆಗೆ ಕಾರಣವಾದ ಯೋಗಾಭ್ಯಾಸ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇವೆ.
ಪದ್ಮ/ಶುಭ ಮತ್ತು. ಶಾಂತಾರಾಮ್
ಹೃದಯ ಪೂರ್ವಕ ವಂದನೆಗಳು
ಲೇಖನವನ್ನು ಪ್ರಕಟಿಸಿದ “ಸುರಹೊನ್ನೆ” ಗೆ ತುಂಬು ಮನದ ಧನ್ಯವಾದಗಳು
ಬಹಳ ಉಪಯುಕ್ತ ಮಾಹಿತಿ. ಸಹಿತ ಆಕರ್ಷಕ ಲೇಖನ. ಶ್ರೀಮತಿ ಪದ್ಮಾ ಆನಂದ್ ಅವರು ಬರಿ ಬೋಧನೆ ಯಲ್ಲದೆ ಅಭ್ಯಾಸ ಸಹಿತದ ಅನುಭವದಿಂದ ಬರೆದ ಲೇಖನ. ಅವರ ಉತ್ಸಾಹ, ಆಸಕ್ತಿ, ಸರ್ವ ಅನುಕರಣೀಯ. ಸದಾ ನಡೆಯಲಿ ಅವರ ಸಮಾಜ ಸೇವೆಯ ಕಾರ್ಯಯಾಗ. ಶಂಕರ.
ಧನ್ಯವಾದಗಳು ಸರ್
ಯೋಗದಿನದ ಶುಭ ಹಾರೈಕೆಗಳೊಂದಿಗೆ ಪ್ರಾರಂಭಿಸಿದ ಲೇಖನವಿದ್ಯಾರ್ಥಿ ದಿಸೆಯಲ್ಲಿನ ಅನುಭವ ತದನಂತರ ಯೋಗಮಾಡುವುದರಿಂದಾದ ಅನುಕೂಲಗಳು.. ಕೊನೆಯಲ್ಲಿ ಉಪಯುಕ್ತ ಸಂದೇಶ… ಓದಿಸಿಕೊಂಡು ಹೋಯಿತು.. ಧನ್ಯವಾದಗಳು ಪದ್ಮಾ ಮೇಡಂ
ವಂದನೆಗಳು ಗೆಳತಿ
Nice
Thank you very much
ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ನೀಡುವ ಯೋಗದ ಮಹತ್ವವನ್ನು ತಮ್ಮ ಸ್ವಾನುಭವದ ಮೂಲಕ ಹಂಚಿರುವ ಸೊಗಸಾದ ಸಕಾಲಿಕ ಲೇಖನ. ಧನ್ಯವಾದಗಳು ಮೇಡಂ.
ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.
ಆರೋಗ್ಯ ಸುಧಾರಣೆಗೆ ಕಾರಣವಾದ ಯೋಗಾಭ್ಯಾಸದ ಸ್ವಾನುಭವದ ಸೊಗಸಾದ ಲೇಖನ.
ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ತಡವಾಗಿ ಪ್ರತಿಕ್ರಯಿಸುತ್ತಿರುವುದಕ್ಕಾಗಿ ಕ್ಷಮೆಯಿರಲಿ