ಆತಂಕ
ರಾತ್ರಿ ಹತ್ತು ಗಂಟೆ ಸಮಯ ವೆಂಕಟೆಮ್ಮ ಟಿ.ವಿ ಚಾಲು ಮಾಡಿದಾಗ ವಾರೆಂಟ ಅನ್ನುವ ಕಾರ್ಯಕ್ರಮ ಮೂಡಿ ಬರುತಿತ್ತು. ಅದನ್ನು ನೋಡಿ ಮುಗಿಸುತಿದ್ದಂತೆ ಇವಳ ಮೈ ಜುಮ್ ಎಂದು ಮುಖ ಸಂಪೂರ್ಣ ಬೆವರಿ ಹೋಯಿತು. ಕೈಕಾಲು ಶಕ್ತಿ ಹೀನವಾದವು. ಗಂಟಲು ಒಣಗಿ ಇಳಿ ವಯಸ್ಸಿನ ಮೇಲೆ ದುಷ್ಪರಿಣಾಮ ಬೀರಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದಳು.
ಅಂದು ಮನೆಯಲ್ಲಿ ಯಾರೂ ಇಲ್ಲದ ಕಾರಣ ಬೇಸರ ಕಳೆಯಲು ಟಿವಿ ಚಾಲು ಮಾಡಿದ್ದಳು. ಟಿವಿಯಲ್ಲಿನ ಆ ಒಂದು ಘಟನೆ ಬೆಚ್ಚಿ ಬೀಳಿಸಿತು. ಮಗ ಶ್ರೀಪಾದ ಹೆಂಡತಿ ,ಮಕ್ಕಳ ಜೊತೆ ಹೊರಗಡೆ ಹೋಗಿದ್ದ. ತಡ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ ಇನ್ನೂ ಯಾಕೆ ಬಂದಿಲ್ಲ ಇಷ್ಟು ಹೊತ್ತಿಗೆ ಬರಬೇಕಾಗಿತ್ತು ಅಂತ ಬೆವರು ಬಿಟ್ಟ ಮುಖ ಸೀರೆ ಸೆರಗಿನಿಂದ ಒರೆಸಿಕೊಂಡು ನಡುಗುವ ಕೈಯಿಂದ ಟಿವಿ ಬಂದ್ ಮಾಡಿ, ಕುರ್ಚಿಯಿಂದ ಮೇಲೆದ್ದಳು. ಸೀದಾ ದೇವರ ಕೋಣೆಗೆ ಬಂದು ಇಣುಕಿದಾದ ಜಗುಲಿಯ ಮೇಲೆ ಸಾಲಾಗಿ ಜೋಡಿಸಿಟ್ಟ ದೇವರ ಮೂರ್ತಿಗಳು ಇದ್ದ ಜಾಗದಲ್ಲೇ ಇದ್ದವು . ಆದರೆ ಲಕ್ಷ್ಮಿಯ ಬೆಳ್ಳಿಯ ಮೂರ್ತಿ ಕ್ಛಣ ಕಾಲ ಅಲುಗಾಡಿದಂತೆ ಭಾಸವಾಯಿತು.
ವಾಪಸ್ ಬಂದು ಮಂಚದ ದಿಂಬಿಗೆ ತಲೆಕೊಟ್ಟು ಶೂನ್ಯ ದಿಟ್ಟಿಸತೊಡಗಿದಳು. ಸ್ವಲ್ಪ ಸಮಯದ ನಂತರ ಹೊರಗಿನಿಂದ ಬಾಗಿಲು ಬಡಿಯುವ ಸದ್ದು ಕೇಳಿಸಿತು/ ಆಗ ಇವಳಿಗೆ ಮತ್ತಷ್ಟು ಗಾಬರಿಯಾಗಿ ಯಾರು ಬಾಗಿಲು ಬಾರಿಸೋರು? ಅಂತ ನಡುಗುವ ದನಿಯಲ್ಲಿ ಪ್ರಶ್ನಿಸಿದಳು.
“ಏ ಅವ್ವಾ ಯಾಕೆ ಗಾಬರಿಯಾಗ್ತಿ ನಾನೇ ಇದ್ದೀನಿ .ನಮಗ ಬಿಟ್ಟು ಈ ಸಮಯದಾಗ ಮತ್ಯಾರು ಬರ್ತಾರೆ” ಅಂತ ಶ್ರೀಪಾದ ಜೋರು ದನಿಯಲ್ಲಿ ಹೇಳಿದ. ಮಗನ ಮಾತು ಸ್ವಲ್ಪ ಧೈರ್ಯ ಮೂಡಿಸಿ ಮೆಲ್ಲಗೆ ಬಂದು ಬಾಗಿಲು ತೆಗೆದಳು.
” ನಮಗೆ ಬರಲು ತಡಾ ಆಯಿತು. ನೀನು ಇಷ್ಟೋತನಕ ನಮ್ಮ ದಾರೀನೇ ಕಾದಿರಬೇಕು? ಏನು ಮಾಡೋದು ದಾರಿಯಲ್ಲಿ ಅಚಾನಕ ಶ್ರೀನಿವಾಸ ಸಿಕ್ಕಿದ್ದ . ಇವತ್ತು ಆತನ ಮದುವೆ ವಾರ್ಷಿಕೋತ್ಸವ . ಊಟ ಮಾಡಿಕೊಂಡು ಹೋಗಲು ಒತ್ತಾಯ ಮಾಡಿದ. ಆತನ ಜೊತೆ ಹೋಟಲಿಗೆ ಹೋಗಿ ಊಟ ಮಾಡಿಕೊಂಡು ಬರಲು ಇಷ್ಟು ತಡಾ ಆಯಿತು ” ಅಂತ ಶ್ರೀಪಾದ ವಾಸ್ತವ ಹೇಳಿ ಸಮಜಾಯಿಷಿ ನೀಡಿದ.
“ನಿನಗೂ ಕರೆದುಕೊಂಡು ಹೋಗಿದ್ದರೆ ಛೊಲೊ ಆಗ್ತಿತ್ತು. ಊಟ ಮಾಡಿ ಬರ್ತಿದ್ದೆ ” ಅಂತ ಸೊಸೆ ನಾಗಲಕ್ಷ್ಮಿ ಕೂಡ ಅಭಿಪ್ರಾಯ ಹೊರ ಹಾಕಿದಳು. ಅವರ ಮಾತಿಗೆ ವೆಂಕಟೆಮ್ಮ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾದಳು .
” ನಿನಗೂ ಪಾರ್ಸಲ್ ಊಟ ತಂದೀವಿ ಊಟ ಮಾಡು. ಅಂತ ಮೊಮ್ಮಗಳು ಒತ್ತಾಯ ಪಡಿಸಿದಳು. ಅವಳ ಮಾತಿಗೂ ಹ್ಞೂಂ ಹ್ಞಾಂ ಅನ್ನದೇ ಇವಳು ಯೋಚನೆಯಲ್ಲೇ ಮುಳುಗಿದಳು.
ಮುಂಜಾನೆ ಎದ್ದು ನೋಡಿದಾಗ ಬಡಿಸಿದ ಊಟ ಇವಳ ಪಕ್ಕದಲ್ಲಿ ಹಾಗೇ ಇತ್ತು . “ಇಳಿ ವಯಸ್ಸಿನ್ಯಾಗ ನಿನಗ ಇಷ್ಟೊಂದು ಜಿದ್ದು ಇರಬಾರದು /ಉಣ್ಣುವ ಅನ್ನದ ಮ್ಯಾಲ ಯಾಕೆ ಸಿಟ್ಟು ತೋರಿಸ್ತಿ” ಅಂತ ನಾಗಲಕ್ಷ್ಮಿ ಪ್ರಶ್ನಿಸಿ ಸಿಟ್ಟು ಹೊರ ಹಾಕಿದಳು.
ಆದರೂ ವೆಂಕಟಮ್ಮನ ಮೌನ ಹಾಗೇ ಮುಂದುವರೆಯಿತು. ಸ್ನಾನ ಮುಗಿಸಿ ಪೂಜೆ ಮಾಡಲು ದೇವರ ಕೋಣೆ ಪ್ರವೇಶಿಸಿದಳು. ಜಗಲಿಯ ಮೇಲಿನ ಎಲ್ಲಾ ದೇವರ ಮೂರ್ತಿಗಳನ್ನು ತಿಕ್ಕಿ ತೊಳೆದು ಸಾಲಾಗಿ ಜೋಡಿಸಿ ಪೂಜೆಮಾಡಿ ದೀಪ ಬೆಳಗಿದಳು. ಲಕ್ಷ್ಮಿ ಮೂರ್ತಿ ಕಡೆ ದೃಷ್ಟಿ ಹರಿದಾಗ ಎದೆಯಲ್ಲಿ ಸಣ್ಣ ನಡುಕ ಶುರುವಾಗಿ ಗಡಿಬಿಡಿಯಿಂದ ಪೂಜೆ ಮುಗಿಸಿ ಹೊರ ಬಂದಳು.
“ಈಗಲಾದರು ತಿನ್ನು. ನಿನ್ನೆಯೂ ರಾತ್ರಿ ಊಟ ಮಾಡಿಲ್ಲ. ಹಂಗೇ ಉಪವಾಸ ಮಲಗೀದಿ , ಮೊದಲೇ ಶಕ್ತಿ ಕಡಿಮೆ ಆಗ್ಯಾದ ಅಂತ ನಾಗಲಕ್ಷ್ಮಿ ಚಹಾ ಬಿಸ್ಕಿಟ್ ತಂದು ಮುಂದಿಟ್ಟಳು. ಆಗಲೂ ವೆಂಕಟಮ್ಮ ತಿನ್ನದೇ ಇದ್ದಾಗ “ನಾವೆಲ್ಲ ನಿನಗೇನು ಕಮ್ಮಿ ಮಾಡೀವಿ ಅಂತ ಹಿಂಗ ಮಾಡ್ತಿದಿ? ಏನಾಗಿದೆ ನಿನಗೆ ನಿನ್ನ ವರ್ತನೆ ವಿಚಿತ್ರವಾಗಿದೆ ಅಂತ ಸಿಡುಕಿ ಗಂಡನ ಹತ್ತಿರ ಬಂದು ವಿಷಯ ತಿಳಿಸಿದಳು. “ಅವ್ವನ ಆರೋಗ್ಯ ಸರಿ ಇಲ್ಲ ಅಂತ ಕಾಣಸ್ತಿದೆ. ಡಾಕ್ಟರಗ ಕರೆಸಿ ಇವಳ ಆರೋಗ್ಯ ತಪಾಸಣೆ ಮಾಡಿಸಿದರೆ ಸರಿಯಾಗುತ್ತದೆ ಅಂತ ಶ್ರೀಪಾದ ಡಾಕ್ಟರಿಗೆ ಕರೆಸಿ ತೋರಿಸಿದ .ಅವರು ಪರೀಕ್ಷೆ ಮಾಡಿ ಗೋಲಿ ಔಷಧಿ ಕೊಟ್ಟು ಗಾಬರಿಯಾಗುವ ವಿಷಯವೇನಿಲ್ಲ ಒಂದೆರಡು ದಿನದಲ್ಲಿ ಆರಾಮ ಆಗ್ತಾದೆ ಅಂತ ಹೇಳಿ ಹೊರಟು ಹೋದರು.
ಮನೆಯಲ್ಲಿ ಎಲ್ಲರೂ ಗಾಢ ನಿದ್ದೆಗೆ ಜಾರಿದಾಗ ವೆಂಕಟೆಮ್ಮ ಮಧ್ಯೆ ರಾತ್ರಿ ಹಾಸಿಗೆಯಿಂದ ಎದ್ದು ಚಟ್ಟನೆ ಚೀರಿ ಯಾರೋ ಬಂದಿದ್ದಾರೆ ಗೇಟ ಸಪ್ಪಳ ಆಗ್ತಿದೆ . ಲಕ್ಷ್ಮಿ ಮೂರ್ತಿ ಒಯ್ತಾರೆ ನಮ್ಮ ಮಾನ ಮರ್ಯಾದೆ ಹೋಗ್ತಾದೆ. ಅಂತ ಜೋರು ದನಿಯಲ್ಲಿ ಕಿರುಚತೊಡಗಿದಳು. ಅವಳ ಧನಿ ಕೇಳಿ ಮಲಗಿದವರು ಗಾಬರಿಯಾಗಿ ಓಡಿ ಬಂದು “ಏನಾಗಿದೆ ನಿನಗೆ ಎರ್ಡ್ಮೂರು ದಿನದಿಂದ ಹಿಂಗ್ಯಾಕ ಮಾಡತೀದಿ? ಯಾರು ಬಂದರು? ಎಲ್ಲಿ ಬಂದರು ? ನಾವೆಲ್ಲಾ ಇಷ್ಟು ಜನ ಇರ್ಬೇಕಾದರೆ ಯಾರು ಬರ್ತಾರೆ ” ಅಂತ ಶ್ರೀಪಾದ ಪ್ರಶ್ನಿಸಿ ಸಮಜಾಯಿಷಿ ನೀಡಲು ಮುಂದಾದ.
“ಏನೋ ಕೆಟ್ಟ ಕನಸು ಬಿದ್ದಿರಬೇಕು ಇಳಿ ವಯಸ್ಸಿನ್ಯಾಗ ಹಿಂಗೆಲ್ಲಾ ಆಗೋದು ಸಹಜ ಅಂತ ನಾಗಲಕ್ಷ್ಮಿ ಕೂಡ ದನಿಗೂಡಿಸಿದಳು.
ವೆಂಕಟಮ್ಮನ ಸಮಸ್ಯೆ ಪ್ರತಿ ರಾತ್ರಿಯೂ ಹಾಗೇ ಮುಂದುವರೆಯಿತು. ಸಮಸ್ಯೆ ಯಾರಿಗೂ ಅರ್ಥವಾಗದೇ ಕಗ್ಗಂಟಾಗಿ ಉಳಿಯಿತು.
ಹೋದ ತಿಂಗಳು ಇವಳ ಕೈಗೆ ನಾಗಲಕ್ಷ್ಮಿ ಎರಡು ಸಾವಿರ ರುಪಾಯಿ ಕೊಟ್ಟು ಈ ವರ್ಷದಿಂದ ನಾವೂ ವರಮಹಾಲಕ್ಛ್ಮಿ ಪೂಜೆ ಮಾಡೋಣ ಒಂದು ಬೆಳ್ಳಿ ಮೂರ್ತಿ ತಂದು ಕೊಡು ಅಂತ ಹೇಳಿದ್ದಳು. ದೇವರು ದಿಂಡಿರ ಬಗ್ಗೆ ಭಕ್ತಿ ಹೊಂದಿದ್ದ ವೆಂಕಟೆಮ್ಮ ಸೊಸೆಯ ಮಾತಿಗೆ ತಲೆಯಾಡಿಸಿ ಮೂರ್ತಿ ಖರೀದಿಸಲು ಹೊರಟಾಗ ದಾರಿಯಲ್ಲಿ ಸರಸ್ವತಿ ಎದುರಾಗಿ ಎಲ್ಲಿಗೆ ಹೊರಟಿರುವೆ? ಅಂತ ಪ್ರಶ್ನಿಸಿದಳು. ಲಕ್ಷ್ಮಿ ಮೂರ್ತಿ ತರಲು ಬಾಜಾರಿಗೆ ಹೋಗುವೆ ಎಂದಾಗ ” ಬಾಜಾರಿಗೆ ಯಾಕ ಹೋಗತಿ ಇಲ್ಲೇ ಒಬ್ಬಳು ಮೂರ್ತಿ ಮಾರಾಟ ಮಾಡ್ತಾಳೆ ಅವಳ ಹತ್ರಾ ತೊಗೊಂಡ್ರೆ ಕಡಿಮೆ ಬೆಲೆಗೆ ಸಿಗ್ತಾದೆ ” ಅಂತ ಸಲಹೆ ಕೊಟ್ಟಳು.
“ಗುರುತು ಪರಿಚಯ ಇಲ್ಲದವಳ ಹತ್ತಿರ ಬೆಳ್ಳಿ ಮೂರ್ತಿ ತೊಗೊಂಡ್ರ ಹ್ಯಾಂಗ? ಕಲ್ಲಬೆಳ್ಳಿ ಮೂರ್ತಿ ಕೊಟ್ಟು ಮೋಸ ಮಾಡಿದರ ಏನು ಮಾಡೋದು ಅಂತ ಆತಂಕ ವ್ಯಕ್ತಪಡಿಸಿದಳು.
“ನೂರಾರು ಮಂದಿ ಅವಳ ಹತ್ರಾನೇ ತೊಗೊಳ್ತಾರೆ ಹೋದ ವರ್ಷ ನಾನೂ ಅವಳ ಹತ್ರಾನೇ ತೊಗೊಂಡೆ ಅಂತ ಸರಸ್ವತಿ ವಾಸ್ತವ ಹೇಳಿದಾಗ ವೆಂಕಟಮ್ಮ ಮರು ಮಾತಾಡದೆ ಒಪ್ಪಿಕೊಂಡಳು.
ಇಬ್ಬರೂ ಸೇರಿ ಆ ಮೂರ್ತಿ ಮಾರುವ ಮಹಿಳೆ ಹತ್ತಿರ ಹೋಗಿ ಒಂದು ಲಕ್ಷ್ಮಿ ಮೂರ್ತಿ ಬೇಕಾಗಿದೆ ಅಂತ ಹೇಳಿದರು. ಅವಳು ತನ್ನ ತನ್ನ ಹತ್ತಿರ ಇರುವ ಹತ್ತು ಹಲವು ಸಣ್ಣ ದೊಡ್ಡ ಮೂರ್ತಿ ತೋರಿಸಿ ಯಾವುದು ಬೇಕೋ ಅದನ್ನು ತೊಗೊಳ್ರಿ ಅಂತ ಮುಂದಿಟ್ಟಳು. ಮೂರ್ತಿಗಳು ಒಂದಕ್ಕಿಂತ ಒಂದು ಚನ್ನಾಗಿದ್ದವು .ಅವುಗಳಲ್ಲಿ ಒಂದನ್ನು ಆರಿಸಿ ಇದಕ್ಕೆ ಎಷ್ಟು? ಅಂತ ವೆಂಕಟಮ್ಮ ಪ್ರಶ್ನಿಸಿದಳು.
“ಜಾಸ್ತಿ ಏನಿಲ್ಲ ಬರೀ ಸಾವಿರ ರೂಪಾಯಿ. ನೀವು ಇದನ್ನು ಬೇರೆ ಕಡೆ ಕೊಂಡರ ಎರಡು ಸಾವಿರದ ಕೆಳಗೆ ಕೊಡೋದೇ ಇಲ್ಲ. ನಾವು ಕಿಲೋ ಗಟ್ಟಲೇ ಬೆಳ್ಳಿ ತಂದು ಮನೆಯಲ್ಲೇ ಮೂರ್ತಿ ತಯಾರು ಮಾಡಿ ಮಾರಾಟ ಮಾರತೀವಿ ಅಂತ ಹೇಳಿದಳು. ಅವಳ ಮಾತಿನ ಮೇಲೆ ಭರವಸೆ ಮೂಡಿ ಸಾವಿರ ರುಪಾಯಿ ಕೊಟ್ಟು ವೆಂಕಟಮ್ಮ ಮೂರ್ತಿ ಖರೀದಿಸಿ ತಂದಿದ್ದಳು.
“ನಮ್ಮ ಅತ್ತೆ ಬಹಳ ಶ್ಯಾಣ್ಯಾ ಛೊಲೊ ಮೂರ್ತಿ ತಂದಿದ್ದಾಳೆ ಅಂತ ನಾಗಲಕ್ಷ್ಮಿ ಅಕ್ಕ ಪಕ್ಕದ ಮನೆಯವರಿಗೆ ಕರೆದು ತೋರಿಸಿ ಗುಣಗಾನ ಮಾಡಿದ್ದಳು/ ಆಗ ವೆಂಕಟಮ್ಮಳಿಗೆ ಬಹಳ ಖುಷಿಯಾಗಿತ್ತು.
ಸಧ್ಯ ಇದನ್ನೆಲ್ಲಾ ನೆನಪಿಸಿಕೊಂಡು ವೆಂಕಟಮ್ಮ ಯೋಚನೆಯಲ್ಲಿ ಮುಳುಗಿ “ನಾನು ಮೂರ್ತಿ ತಂದಾಗ ಎಲ್ಲರ ಕಡೆಯಿಂದ ಹೊಗಳಿಸಿಕೊಂಡಿದ್ದೆ. ಈಗ ಮೂರ್ತಿ ಅಸಲಿಯತ್ತು ಗೊತ್ತಾದರೆ ಎಲ್ಲರ ಕಡೆಯಿಂದ ಬೈಸಾಕೊಳ್ಳುವ ಪರಸ್ಥಿತಿ ಬರ್ತಾದೆ ಮೂರ್ತಿ ಮಾರಾಟ ಮಾಡಿದ ಹೆಂಗಸು ಕಳ್ಳಿ ಅನ್ನುವದು ಟೀವಿ ನೋಡಿದ ಮ್ಯಾಲೇ ನನಗೂ ಗೊತ್ತಾಗಿದೆ. ಅವಳಿಂದ ಮೂರ್ತಿ ಖರೀದಿಸಿ ತಪ್ಪು ಮಾಡಿದೆ. ಮೊದಲೇ ಗೊತ್ತಿದ್ದರೆ ನಾನೆಲ್ಲಿ ತೊಗೊಳ್ಳತಿದ್ದೆ . ಸರಸ್ವತಿ ಮಾತು ಕೇಳಬಾರದಿತ್ತು .ನಮ್ಮ ಮನೆತನದ ಮರ್ಯಾದೆಯ ಗತಿ ಎನು? ಅಂತ ಯೋಚಿಸಿ ಜಗುಲಿಯ ಮೇಲಿನ ಆ ಮೂರ್ತಿ ತೆಗೆದು ಯಾರ ಕಣ್ಣಿಗೂ ಬೀಳದಂತೆ ಅರಿವೆಯೊಂದರಲ್ಲಿ ಸುತ್ತಿ ಮುಚ್ಚಿಟ್ಟಳು.
ಮರುದಿನ ನಾಗಲಕ್ಷ್ಮಿ ದೇವರ ಕೋಣೆಗೆ ಹೋದಾಗ ಲಕ್ಷ್ಮಿ ಮೂರ್ತಿ ಕಾಣೆಯಾಗಿದ್ದು ಕಂಡು ಗಾಬರಿಯಾಯಿತು. ಯಾರೋ ನಮ್ಮ ಮನೆಯ ಲಕ್ಷ್ಮಿ ಮೂರ್ತಿ ಕಳವು ಮಾಡಿದ್ದಾರೆ ಅಂತ ಗುಲ್ಲೆಬ್ಬಿಸಿದಳು. ವಿಷಯ ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಓಣಿ ತುಂಬಾ ಪುಕಾರಾಯಿತು ಮನ್ಯಾಗಿನ ಎಲ್ಲಾ ಸಾಮಾನು ಬಿಟ್ಟು ಜಗಲಿ ಮ್ಯಾಲಿನ ಮೂರ್ತಿ ಒಂದೇ ಕಳುವಾಗಿದೆ ಏನಿದು ವಿಚಿತ್ರ ಅಂತ ಎಲ್ಲರೂ ಪರಸ್ಪರ ಮಾತಾಡಿಕೊಂಡರು.
ಪೋಲೀಸರಿಗೆ ಕಂಪ್ಲೇಂಟಾದರು ಕೊಡ್ರಿ .ತಾನೇ ಸತ್ಯ ಹೊರ ಬರ್ತಾದೆ ಅಂತ ಕೆಲವರು ಶ್ರೀಪಾದನಿಗೆ ಸಲಹೆ ಕೊಟ್ಟರು. ಅವರ ಮಾತು ಕೇಳಿಸಿಕೊಂಡ ವೆಂಕಟೆಮ್ಮ ಒಳ ಮನೆಯಿಂದ ತಕ್ಷಣ ಹೊರ ಬಂದು ಯಾವದೇ ಕಂಪ್ಲೇಂಟ್ ಕೊಡೋದು ಬೇಡ. ನಮ್ಮ ಮನೆಗೆ ಯಾವ ಪೋಲೀಸರು ಬರ ಕೂಡಲು ನಮ್ಮ ಮನ್ಯಾಗಿನ ಲಕ್ಷ್ಮಿ ಮೂರ್ತಿ ಯಾರೂ ಕಳವು ಮಾಡಿಲ್ಲ ನಾನೇ ಮುಚ್ಚಿಟ್ಟಿದ್ದು . ಅಂತ ವಾಸ್ತವ ಹೇಳಿದಳು.
ವೆಂಕಟೆಮ್ಮನ ಮಾತಿಗೆ ಎಲ್ಲರೂ ಗಾಬರಿಯಾಗಿ ದೇವರು ದಿಂಡಿರು ಪೂಜೆ ಪುನಸ್ಕಾರ ಅನ್ನುವ ನೀನೇ ಮೂರ್ತಿ ಮುಚ್ಚಿಟ್ಟರ ಹ್ಯಾಂಗ ? ಅಂತ ಪ್ರಶ್ನಿಸಿದರು. ಆಗ ಸತ್ಯ ಹೇಳುವ ಅನಿವಾರ್ಯತೆ ಉಂಟಾಗಿ ನಾನು ಆ ಕಳ್ಳಿಯಿಂದ ಮೂರ್ತಿ ಖರೀದಿಸಿ ತಪ್ಪು ಮಾಡಿದೆ. ಅವಳು ಸಿಕ್ಕಿ ಬಿದ್ದು ನಮಗೂ ಸಂಕಟ ತಂದೊಡ್ಡಿದ್ದಾಳೆ. ಯಾವಾಗ ಬೇಕಾದರೂ ಪೋಲೀಸರು ನಮ್ಮ ಮನೆಗೆ ಬಂದು ವಿಚಾರಣೆ ಮಾಡಬಹುದು ಅಂತ ಮೂರ್ತಿ ಮುಚ್ಚಿಟ್ಟಿದ್ದೇನೆ ಎಂದು ಸತ್ಯ ಬಾಯ್ಬಿಟ್ಟಳು. ಇವಳ ಮಾತು ಕೇಳಿ ಎಲ್ಲರೂ ದಂಗಾಗಿ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡತೊಡಗಿದರು!!!
–ಶರಣಗೌಡ ಬಿ ಪಾಟೀಲ ತಿಳಗೂಳ ,ಕಲಬುರಗಿ.
ಅತ್ಯಂತ ಕುತೂಹಲಕರ ವಾದ ಕಥೆ… ಚೆನ್ನಾಗಿ ಮೂಡಿಬಂದಿದೆ..ಸಾರ್
ಚೆನ್ನಾಗಿದೆ
ಅಡ್ಡ ರಸ್ತೆ ಯಾವತ್ತೂ ವಿಪತ್ತಿಗೆ ದಾರಿ ಎಂಬ ಸಂದೇಶ ಹೊತ್ತ ಸುಂದರ ಕಥೆ
ಅತಿ ಆಸೆ ಗತಿಗೇಡು..! ಸೊಗಸಾದ ನಿರೂಪಣೆಯ ಕಥೆ ಚೆನ್ನಾಗಿದೆ.