ಮಹೋನ್ನತ ಸಾಗರ
ನದಿಯಾಗಿ ನಿಂದಿರುವೆ ಕಡಲ ಬಳಿ
ಹರಿದು ಬಂದು ಕಾದಿರುವೆ ಒಳ ಸೇರಲೆಂದು
ಕಂಪಿಸಿದೆ ಏಕೀ ಹೃದಯ
ವಿಶಾಲ ಶರಧಿಯ ನೋಡಿ
ಮೊರೆವ ಹೆದ್ದೊರೆಗಳ ಹೊಡೆತಕೆ
ತುಂಬಿ ಹರಿದಿದೆ ಕಣ್ಣೀರ ಕೋಡಿ
ಆಗಾಗ ಮುಗಿಲೆತ್ತರದ ಅಲೆಗಳು
ನೆರೆನೆರೆದು ಭುಸುಗುಟ್ಟುವ ನೀರಿನ ಕಣಗಳು
ಎನ್ನೊಡಲ ಮೆಕ್ಕಲು ಮಣ್ಣು ಭಾರವಾಗಿ ಕೂತಿದೆ
ಎನ್ನ ಕೆಂಪಾದ ಕೆನ್ನೆ ನೀಲಿಯಾಗತೊಡಗಿದೆ
ನನ್ನ ಮುಂದೆ ಬಂದ ಕೃಷ್ಣಾ ತುಂಗಭಧ್ರೆಯರೆಲ್ಲಿ
ನಾಗಲೋಟದಲಿ ಓಡಿದ ಉಳಿದ ಅಕ್ಕ ತಂಗಿಯರೆಲ್ಲಿ
ಎಲ್ಲರನು ಈ ಸಮುದ್ರ ರಕ್ಕಸ ನುಂಗಿದನೇ
ಸಿಹಿಯಾದ ಅವರನು ಲವಣ ಬೆರೆಸಿ ತಿಂದನೇ
ಬೇಡವೆಂದರೂ ಬಿಡದೆ ಕರೆಯುತಿಹನು
ತನ್ನ ಕಬಂಧ ಬಾಹುಗಳ ಚಾಚಿ
ಬಾಚಿ ತಬ್ಬಲು ಕಾದಿರುವನು
ಮೋಹದ ನಗೆ ಬೀರಿ ಸೆಳೆದಿಹನು
ಮರಳಿ ಹೋಗಿ ಬಿಡಲೇ ಬಂದ ದಾರಿಯಲೇ
ಹೌದು ನಾನು ಸಾಗಿಬಂದ ಹಾದಿಯಾದರೂ ಎಂತಹದು
ಕಲ್ಲು ಕೊರಕಲುಗಳ ದಾಟಿ ಬಂದೆ
ಹಸಿರು ಹೊದ್ದ ಬೆಟ್ಟಗಳ ಬಳಸಿ ಬಂದೆ
ಅಲ್ಲಲ್ಲಿ ಜಲಪಾತವಾಗಿ ಧುಮಿಕಿದೆ
ಕೆಲವು ಕಡೆ ಗುಪ್ತಗಾಮಿನಿಯಾದೆ
ಓಡಿ ನೋಡಿದ ಹಳ್ಳಿಗಳೆಷ್ಟೋ
ಬಳುಕುತಾ ಹರಿದು ದೂರ ಮಾಡಿದ ಪಟ್ಟಣಗಳೆಷ್ಟೋ
ಅಣೆಕಟ್ಟು ಹಾಕಿ ನನ್ನ ಬಂಧಿಸಲು ನೋಡಿದರು
ತೀರವ ಬಗೆದು ಎನ್ನ ತಿರುಗಿಸಲು ಹವಣಿಸಿದರು
ಕಟ್ಟಿ ಹಾಕಲಿಲ್ಲ ನನ್ನನು ಯಾವುದೇ ಶಕ್ತಿ
ಸಮುದ್ರ ಸೇರುವ ತವಕವೊಂದೇ ಎನಗೆ ಭಕ್ತಿ
ಅಷ್ಟು ಅಡೆ ತಡೆಗಳ ಮೀರಿ ಬಂದರೂ
ಕೊನೆ ಕ್ಷಣದಲಿ ಯಾಕೆ ನನಗೀ ತಾತ್ಸಾರ
ಕಂಪನ ತಂದ ಭಯದ ಪರಿಸರ
ನನ್ನತನ ಕಳೆದು ಹೋಗುವುದೇ ಈ ಅಗಾಧ ಜಲರಾಶಿಯಲಿ
ಅಳಿಸಿ ಹೋಗುವುದೇ ಅಸ್ತಿತ್ವ ಅನಂತತೆಯ ಮಡಿಲಲಿ
ಕಣ್ಮರೆಯಾಗುವ ಆತಂಕ ಮನೆ ಮಾಡಿ ಕುಳಿತಿದೆ
ಹೆಸರು ಮರೆಯಾಗುವ ಕಾಲ ಎನಗಾಗಿ ಕಾದಿದೆ
ಎಂತಹ ಮೂಢಳು ನಾನು
ಸಂಭ್ರಮಪಡುವ ಸಮಯದಲಿ ರೋಧಿಸಿರುವೆ
ಸಣ್ಣತನ ಕಳೆದು ಹಿರಿಮೆ ಪಡೆಯುವ ಕ್ಷಣದಲಿ ನಲುಗಿರುವೆ
ಜೀವನದ ಪರಮ ಗುರಿಯೇ ಇದಲ್ಲವೇ
ನಾನೆಂಬುವುದು ಅಳಿದು ಲೀನವಾಗುವುದು ಸಾಧನೆಯಲ್ಲವೇ
ನದಿಯಲ್ಲ ಈಗ ನಾನು ಮಹೋನ್ನತ ಸಾಗರ
ಘಳಿಗೆ ಘಳಿಗೆಯಲ್ಲೂ ಸಮಾಗಮದ ಸಂಚಾರ
ಅರಿತು ಬೆರೆತು ಹೋಗುವುದೇ ಬದುಕಿನ ಸಾರ
-ಕೆ.ಎಂ ಶರಣಬಸವೇಶ
Superb Sir
Very nice
ಚೆನ್ನಾಗಿದೆ. ಕವನ
ಕಡಲ ಸೇರಲು ಬಂದ ನದಿಯ ಅಳಲು…ಕೊನೆಗೆ ತನ್ನ ಸಾರ್ಥಕ ತೆಯಬಗ್ಗೆ…ವಿಚಾರ ಅರ್ಪಣೆ… ಸೊಗಸಾದ ಕಸೂತಿಯ ಕವಿತೆ.
ಧನ್ಯವಾದಗಳು ಸಾರ್.
Nice
Channagide water life
ತನ್ನತನವ ಕಳೆದುಕೊಂಡು ಸಾಗರವ ಸೇರುವ ನದಿಯ ಕಂಪನ ಹಾಗೂ ಸಂಭ್ರಮ ನೋಡಿ ಬೆರಗಾದೆ ವಂದನೆಗಳು
ಸಾಗರವನ್ನು ಸೇರಲು ಬಂದ ನದಿಯು ತನ್ನ ಅಂತರಾಳವನ್ನು ತೆರೆದಿಟ್ಟಿರುವ ಭಾವಪೂರ್ಣ ಕವನ.
ಮೂಡಿದ ತೊಳಲಾಟಗಳು ಕಳೆದು ಸಾರ್ಥಕತೆಯಲ್ಲಿ ನದಿ ಮಿಂದೆದ್ದಾಗ ನಮಗೂ ಸಮಾಧಾನ ಉಂಟಾಯಿತು. ಸುಂದರ ಕವನ.