ಅಳಿದರೂ ಅಳಿಯದ ಅಪ್ಪ
ಗೆಳೆಯರೊಂದಿಗೆ ಚಿನ್ನಿ ದಾಂಡು ಆಡಿ
ಬೆಳಗ್ಗೆಯಿಂದ ಎಮ್ಮೆಯೊಂದಿಗೆ ಓಡಿ
ಬಳಲಿದ ಕಾಲುಗಳ ಎದೆಗೆ ಮಡಿಸಿ ಜಾರಿದ್ದೆ ನಿದ್ರೆಗೆ
ಮನೆತುಂಬ ಶಿಕ್ಷಕನಾದ ಅಪ್ಪನ ಶಿಷ್ಯಂದಿರು
ದೊಡ್ಡ ಅಂಕಣದ ತುಂಬಾ ಶಾಲೆಯ ಧಡೂತಿ ಹುಡುಗರು
ಮಧ್ಯ ರಾತ್ರಿಯಲ್ಲಿ ಎಲ್ಲೋ ಅಳುವಿನ ಧ್ವನಿ
ಮೇಷ್ಟ್ರು ಹೋಗಿಬಿಟ್ಟರು ಎನ್ನುವ ಮಾತು
ಇದೇನೋ ಕನಸೋ ಎಂದು ಕಣ್ಣುಜ್ಜಿಕೊಳ್ಳುವುದರಲ್ಲಿ
ಯಾರೋ ಬಂದು ಉಳ್ಳಾಡಿಸಿ ಎಬ್ಬಿಸಿದರು
ಅಪ್ಪ ಸತ್ತ ಸುದ್ದಿಯ ಹದಿಮೂರು ವರುಷದ ಪೋರನ ಕಿವಿಯ ಮೇಲಾಕಿದರು
ಅಳುತ್ತಿರುವ ಎಲ್ಲರನು ನೋಡಿ ನನ್ನ ಮನದಲಿ
ಒಂದೇ ಪ್ರಶ್ನೆ ನಾನೂ ಬೋರಾಡಿ ಅಳಬೇಕೇ
ನಾನೇಕೆ ಅಳಬೇಕು ನನಗೆ ಸಿಗುವ ಪೆಪ್ಪರ್ ಮಿಂಟ್ ಇನ್ನು ಮುಂದೆ ಸಿಗುವುದಿಲ್ಲವೆಂದೋ
ಆದರೆ ಕೊಡಿಸಲು ಅಮ್ಮ ಇರುವಳಲ್ಲ
ಉಡಲು ಬಟ್ಟೆ ಸಿಗುವುದಿಲ್ಲ ಎಂದು ನೋವಪಡಬೇಕೆ
ಆದರೆ ಅಣ್ಣಂದಿರು ಬಿಟ್ಟ ಗಟ್ಟಿ ಉಡುಪುಗಳು ಸಾಕಷ್ಟು ಇವೆಯಲ್ಲಾ
ಕಾರಣವೇ ಇಲ್ಲ ನನಗೆ ಅಳಲು
ಇಳಿಯಲೇ ಇಲ್ಲ ನೀರು ನನ್ನ ಕಣ್ಣಲ್ಲಿ
ಬಿಟ್ಟ ಕಣ್ಣು ಬಿಟ್ಟ ಹಾಗೇ ನಿಂತಿದ್ದ ನನ್ನ ಬಳಿ
ಬಂದರು ಒಬ್ಬ ವಯಸ್ಸಾದ ಮುದುಕಿ
ಕಿವಿಯ ಬಳಿ ಉಸುರಿದರು ನನ್ನ ತಂದೆ ದೂರದೂರಿಗೆ ಹೋಗಿರುವುದಾ
ಕ್ರಮಿಸಲು ದೊಡ್ಡ ದಾರಿ ಇರುವುದಾ
ಪುಟ್ಟ ಮನಸ್ಸು ಇದೇ ಸತ್ಯವೆಂದು ನಂಬಿತ್ತು
ಊರಿಗೆ ಹೋದವರು ಬಂದೇ ಬರುವರೆಂಬ ನಿರೀಕ್ಷೆಯಲಿ ಕಾಲ ಕಳೆದಿತ್ತು
ಅದೇನು ಪವಾಡವೋ ಪುಟ್ಟ ಮಗುವಿನ ನಂಬಿಕೆಯ ಹುಸಿಯ ಮಾಡದೆ
ಈಗಲೂ ನಮ್ಮ ತಂದೆ ದೂರದೂರಿನಿಂದ ಬರುವರು
ಬಳಲಿ ಬಂದ ಅವರಿಗೆ ನೀರು ನೀಡುವೆನು ನಾನು
ಉಸ್ಸೆಂದು ಕುಳಿತ ಅವರ ಬಳಿ ಜಗಳ ಕಾಯುವೆನು
ತುಂಬಾ ದಿನಗಳ ಕಾಲ ಹೋಗಿದ್ದಕ್ಕೆ ದೂರು ಹೇಳುವೆನು
ತಪ್ಪಿಲ್ಲ ಇದು ಇಷ್ಟು ವರುಷಗಳು ಕಳೆದರೂ
ನಿಂತಿಲ್ಲ ನಮ್ಮ ತಂದೆ ಮನೆಗೆ ಬರುವುದು
ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂಬಂತೆ
ಅವರ ನೆನಪು ಗಾಢವಾಗಿ ಮನಸ್ಸಲ್ಲಿ ಬೇರೂರಿದೆ
ದೇಹ ಬಿಟ್ಟ ಆತ್ಮವ ವಿಶ್ವಾಸದೀ ಕೂಗಿದೆ
ಸಾವಿನಾಚೆ ಸತ್ಯವ ಅನಾವರಣಗೊಳಿಸಿದೆ
-ಕೆ. ಎಂ ಶರಣಬಸವೇಶ
ಹೃದಯ ಸ್ಪರ್ಷಿ ಕವಿತೆ …ಧನ್ಯವಾದಗಳು ಸಾರ್.
ನೀವು ಓದಿ ಇಷ್ಟಪಟ್ಟು ಪ್ರತಿಕ್ರಿಯೆ ನೀಡುವುದು ಕಂಡು ದೈರ್ಯ ಬಂದಿದೆ. ನೀವೆಲ್ಲಾ ಓದುವಷ್ಟು ಅದು ತಕ್ಕುದಾಗಿದೆ ಅಂತಾ. ಧನ್ಯವಾದ ನಾಗರತ್ನ ಮೇಡಂ
ಧನ್ಯವಾದ ನಾಗರತ್ನ ಮೇಡಂ
ಹೃದಯಸ್ಪರ್ಶಿ ಕವನ
ಧನ್ಯವಾದ ನಯನ ಮೇಡಂ
ಕವನ ಓದುತ್ತಾ ಕಣ್ಣಂಚಿನಲ್ಲಿ ನೀರಿನ ಹನಿಗಳು ಮನಕಲಕಿದ ಕವನ
ಹೌದು ಮೇಡಂ ನನಗೂ ಓದಿದಾಗಲೆಲ್ಲಾ ಇದೇ ಅನುಭವ. ನಿಮ್ಮ ಮಾತೃ ಹೃದಯ ಸಹಜವಾಗಿ ದುಃಖ ಪಡುತ್ತದೆ. ಧನ್ಯವಾದ ಗಾಯತ್ರಿ ಮೇಡಂ
Heart touching poetry sharani
ಧನ್ಯವಾದ ಪ್ರಕಾಶ್. ದೆಹಲಿಯಲ್ಲಿ ಬಿಡುವಿಲ್ಲದ ವಿದ್ಯುತ್ ಅಭಿಯಂತರ ಕೆಲಸದಲ್ಲಿದ್ದರೂ. ಸಾಹಿತ್ಯ ಓದಿ ಖುಷಿಪಡುತ್ತೀಯಾ ಜೊತೆಗೆ ಈ ಪ್ರತಿಕ್ರಿಯೆ
ನನ್ನದೂ ಅದೇ ಅಭಿಪ್ರಾಯ. ಹೃದಯಸ್ಪರ್ಶಿ ಕವಿತೆ.
ಧನ್ಯವಾದ ಪದ್ಮಾ ಆನಂದ್ ಮೇಡಂ. ನಿಮ್ಮ ಈ ಪ್ರೋತ್ಸಾಹ ಮತ್ತೆ ಬರೆಯಲು ಸ್ಪೂರ್ತಿ ನೀಡುತ್ತದೆ
ಇಲ್ಲದ ಅಪ್ಪನ ನೆನಪಲ್ಲಿ ಮೂಡಿದ ಭಾವ ಲಹರಿ ಮನಮುಟ್ಟುತ್ತದೆ.
ಧನ್ಯವಾದ ಶಂಕರಿ ಶರ್ಮ ಅವರಿಗೆ.