ಸ್ಮಿತವಿರಲಿ ವದನದಲಿ
ಕತ್ತಿಯಂತಹ ಹರಿತ ಮಾತೂ ಶರಣಾಗುವುದು
ನಗುವೊಂದೇ ಆದಾಗ ಉತ್ತರ,
ಮೌನದ ಮುದ್ರೆಯೊತ್ತಿ ಆಗು ಹೃದಯವೇ
ನೀ ಮನಗಳಿಗೆ
ನಗುವಲ್ಲೇ ಹತ್ತಿರ .
ನಿರಾಳ ಹೃನ್ಮನ ಎಲ್ಲವ ಮರೆತು
ಕ್ಷಣಕಾಲ ಒಮ್ಮೆ
ಹಿತವಾಗಿ ನಗಲು ,
ಸಿಂಗಾರಗೊಳ್ಳುವುದು ಈ ನಗುವಿನಿಂದಲೇ
ಕಂಡವರ ಮನ ಮುಗಿಲೂ.
ಒಂದೊಂದು ಊರಲ್ಲೂ ಒಂದೊಂದು ಭಾಷೆ
ಆದರೆ ನಗುವಿಗಿಲ್ಲ ಇದಾವುದರ ಹಂಗು ,
ಎಲ್ಲಾ ಜಾತಿ ಧರ್ಮಗಳ ಮರೆಸಿ
ಬೆಸೆಯುವುದು ಹೃದಯಗಳ ಈ ಸುಂದರ ನಗು “.
ಉಮ್ಮಳಿಸಿ ಬರುವ ದುಃಖವೂ
ಹೊಂದುವುದು ತುಸು ಸಮಾಧಾನ
ಒಂದು ನಗು ಮೊಗವ ಕಂಡಾಗ ,
ನಗುವೇ ಹೀಗೆ, ಒಂದು ಸಾಂತ್ವನ,
ನಿವಾರಿಸುವುದು ಮೆಲ್ಲನೆ ನೋವಿನ ಆವೇಗ .
ಪ್ರೀತಿಯಲ್ಲೂ ನಗುವೇ …..
ನಿನ್ನದೇ ಪಾತ್ರ ,
ಕಣ್ಣ ಭಾಷೆಯೊಡನೆ , ತುಟಿಯಂಚಿನ ನಗುವೊಂದೇ
ಮನಗಳ ಬೆಸೆವ ಸೂತ್ರ.
ಮಾಸದಿರಲಿ ಎಂದಿಗೂ
ತುಟಿಯಂಚಿನ ಅರೆಬಿರಿದ ಮುಗುಳು,
ಈ ನಗುವೇ ಆಗಬಲ್ಲುದು ಅವೆಷ್ಟೋ
ಮುದುರಿದ ಮನಸುಗಳ ಹಾದಿಯಲ್ಲಿ
ಆತ್ಮವಿಶ್ವಾಸದ ಕಂದೀಲು .
– ನಯನ ಬಜಕೂಡ್ಲು
ನಗುವಿಗಿಲ್ಲ….ಭಾಷೆ…ಯಾವುದೇ ಜಾತಿ ಧರ್ಮ ಗಳ ಹಂಗು…
ಅರ್ಥ ಪೂರ್ಣ ವಾದ ಸಾಲುಗಳು…ಚಂದದ ಕವನಕಟ್ಟಿಕೊಟ್ಟ ನಿಮಗೆ ಧನ್ಯವಾದಗಳು ನಯನ ಮೇಡಂ.
ಚಂದದ ಅರ್ಥಗರ್ಭಿತವಾದ ಕವನ ವಂದನೆಗಳು
ಸೂಪರ್
ಚಂದದ ಕವನ
ನಿಜ. ಮುಖದಲ್ಲಿ ಮುಗುಳುನಗೆಯಿದ್ದರೆ ಅಲಂಕಾರ ಸಂಪೂರ್ಣವಾಗುವುದು.ನವಿರಾದ ಭಾವನೆಯನ್ನು ಮೂಡಿಸುವ ‘ನಗೆಮೊಗ’ದ ಕವನ ಬಲು ಇಷ್ಟವಾಯಿತು.
ನಗೆಯ ಎಲ್ಲ ಮೊಗಗಳ ಸುಂದರ ಅನಾವರಣ. ಕವಿತೆ ಓದಿ ಮುಗಿಸಿದಾಗ ತುಟಿಯಂಚುನಲ್ಲಿ ಒಂದು ಹೂ ನಗೆ ಅರಳಿತು.
ಅರ್ಥಪೂರ್ಣವಾಗಿದೆ..ಧನ್ಯವಾದಗಳು
ಹೌದು… ಕಿರುನಗೆಯು ಆತ್ಮವಿಶ್ವಾಸದ ಕಂದೀಲು…ಸೊಗಸಾದ ಭಾವ ಲಹರಿ..
ಬಹಳ ಚೆನ್ನಾಗಿದೆ