ಪರಾಗ

ಸತ್ಯಾಸತ್ಯತೆ

Share Button

ರಂಗಪ್ಪನ ತಲೆಯಲ್ಲಿ  ಯೋಚನೆಗಳು  ಸುನಾಮಿ ಅಲೆಯಂತೆ ಎದ್ದು ಆತಂಕಗೊಳಿಸಿದವು. ದಿನಾ ಮುಂಜಾನೆ ಏಳುವ ಹೊತ್ತಿಗೆ ಎದ್ದು  ಜಳಕಾ ಮಾಡಿ  ಒಂದೆರಡು ಬಿಸಿ ರೊಟ್ಟಿ  ಗಬಗಬನೆ  ತಿಂದು ಹೊರಗೆ ಹೆಜ್ಜೆಯಿಟ್ಟಾಗ ಸೂರ್ಯ ತನ್ನ ಹೊಂಬಿಸಿಲು ಬೀರುತಿದ್ದ. ರಸ್ತೆಯ ಪಕ್ಕದ ಒಂದು ಬೇವಿನ ಗಿಡಕ್ಕೆ ಬೆನ್ನು ಹಚ್ಚಿ ಉದ್ದುದ್ದ ಕಾಲು ಚಾಚಿ  ಶೂನ್ಯ ದಿಟ್ಟಿಸಿದ. ಆದರೆ ಇವನ ಚಿಂತೆಗೆ  ಯಾವ  ಪರಿಹಾರವೂ   ಸಿಗದಾಯಿತು. ಬೇಸಿಗೆಯ  ಬಿಸಿಲು ಏರಿ ಸಾಯಂಕಾಲ  ಕ್ರಮೇಣ ಇಳಿಯಿತು , ಗಾಳಿ ಸುಂಯ್ ಅಂತ  ಬೀಸಿ ಬೇವಿನ ಗಿಡದ  ಹಳದಿ ಎಲೆ ಪಳ ಪಳನೆ ಉದುರಿ ಮೈಮೇಲೆ ಬಿದ್ದವು ಆದರೂ ಇವನಿಗೆ ಅರಿವೇ ಇರಲಿಲ್ಲ.

ಊರು ಸೀಳಿಕೊಂಡು ಹೋಗುವ  ರಸ್ತೆ ಇವನ ಮುಂದಿನಿಂದಲೇ ಹೋಗುತಿತ್ತು. ಜನ ಹೊಲ, ಗದ್ದೆ ಊರು ಕೇರಿಗಳಿಗೆ ಹೋಗಿ ಬರಬೇಕಾದರೆ ಅಲ್ಲಿಂದಲೇ ಹೋಗಿ ಬರುತಿದ್ದರು. ಅಕ್ಕ ಪಕ್ಕ ಹೋಟೆಲು ಕಿರಾಣಾ ಅಂಗಡಿ ತಲೆಯೆತ್ತಿ ವ್ಯಾಪಾರ ವಹಿವಾಟು ನಡೆಸುತಿದ್ದವು. ಜನರ ದೃಷ್ಟಿ ಸಹಜವಾಗಿ ರಂಗಪ್ಪನ ಕಡೆ  ಹರಿದಾಗ  ಅವರೆಲ್ಲ ಇವನ ಬಗ್ಗೆ  ಒಂದೆರಡು ಮಾತಾಡೇ ಮುಂದೆ ಸಾಗುತಿದ್ದರು.

“ಪಾಪ ರಂಗಪ್ಪ ಈಗ  ರಿಕಾಮಿ ಮನುಷ್ಯಾ ಏನು ಮಾಡೋದು ವಯಸ್ಸಾದ ಮ್ಯಾಲ  ಕೆಲಸಕ್ಕೆ ಬಾರದವನಾಗಿದ್ದಾನೆ  ಅಂತ ಬಾವಿಮನಿ ಬನ್ನೆಪ್ಪ ಹೇಳಿದಾಗ ಇವನಿಂದ ಏನು ಕೆಲಸಾ ಆಗ್ತಾದೆ ? ಕೆಲಸ ಮಾಡಲು ಶಕ್ತಿ ಬೇಕಲ್ಲ? ಈಗ ಸುಮ್ಮನೆ ಕೂಡೋದೇ ಒಂದು  ಕೆಲಸ ಅಂತ ಶಾಂತಪ್ಪ ಕೂಡ ದನಿಗೂಡಿಸಿದ. ಹಿಂಗ ಆದರೆ ಹೊಟ್ಟೆ ಹ್ಯಾಂಗ ತುಂಬಬೇಕು ಇವನು ಮನೆಗೂ ಭಾರ ಮಂದಿಗೂ ಭಾರ ಅಂತ ಮಾತು ಮುಂದುವರೆಸಿದರು. ಇಂತವರು ಬೇಗನೆ ಶಿವನ ಪಾದಾ ಸೇರಿ ಬಿಡಬೇಕು ಅಂತ ಕೊನೆಗೆ ಒಂದು ಅಭಿಪ್ರಾಯಕ್ಕೂ ಬಂದು ಬಿಟ್ಟರು.   

ಅವರ  ಮಾತು ಕಿವಿಗೆ ಬಿದ್ದಾಗ ರಂಗಪ್ಪನಿಗೆ ಬೇಸರ ಮೂಡಿತು. “ನಾನೇ  ಕೆಲಸ ಮಾಡುತಿದ್ದರೆ  ಇವರೆಲ್ಲ ಹಿಂಗ್ಯಾಕೆ ಮಾತಾಡತಿದ್ದರು ಅಂತ ತನ್ನ ತಾನೇ ಯೋಚಿಸಿ ಮುಖ ಸಪ್ಪಗೆ ಮಾಡಿದ.

ಸಧ್ಯ  ರಂಗಪ್ಪನ  ಶಕ್ತಿ ಕಡಿಮೆಯಾದ್ದರಿಂದ ಊರಲ್ಲಿ ಯಾರೂ ಕೆಲಸಕ್ಕೆ ಕರೆಯುತಿರಲಿಲ್ಲ, ಸ್ವಂತ ಉದ್ಯೋಗ ಮಾಡಬೇಕೆಂದರೂ  ಹಣದ ಕೊರತೆ ಕಾಡುತಿತ್ತು. ಚಹಾ, ಪಾಣಿ, ಎಲೆ, ಅಡಿಕೆ, ಅಂತ ಕೆಲವು ಚಟಗಳೂ ರೂಢಿಯಾಗಿದ್ದವು. ಕೈಯಲ್ಲಿ ಹಣ ಓಡಾಡುವಾಗ ಯಾವ ಚಿಂತೆಯೂ ಇರಲಿಲ್ಲ. ಸಧ್ಯ ಚಟಗಳಿಗೆ ತಿಲಾಂಜಲಿ ನೀಡಬೇಕೆಂದರೂ ಅವು ಬಹಳ ಅಂಟಿಕೊಂಡ ಬಂದಿದ್ದವು . ಒಮ್ಮೆಲೆ ಬಿಡುವದು  ಕಷ್ಟವಾಗಿತ್ತು.

ಗಂಡನಿಗೆ ಯಾರೂ ಕೆಲಸಕ್ಕೆ ಕರೆಯುತಿಲ್ಲ ಅಂತ ಸಾವಿತ್ರವ್ವ ತಾನೇ ಕೂಲಿ ಕೆಲಸಾ  ಮಾಡಿ ಸಂಸಾರ ನಡೆಸತೊಡಗಿದಳು. ಕುಟುಂಬದಲ್ಲಿ ಮಕ್ಕಳು ಮರಿ ಯಾರೂ ಇರಲಿಲ್ಲ.ಮಕ್ಕಳೇನಾದರೂ ಇದ್ದಿದ್ದರೆ ಇಳಿವಯಸ್ಸಿನಲ್ಲಿ ಆಸರೆಯಾಗಬಹುದಾಗಿತ್ತು. ನಮ್ಮ ಹಣೆಬರದಾಗೇ ಮಕ್ಕಳ ಭಾಗ್ಯಇಲ್ಲ ಏನು ಮಾಡೋದು ಅಂತ ಆಗಾಗ ಇಬ್ಬರೂ  ಸಂಕಟ ಹೊರ ಹಾಕುತಿದ್ದರು.

“ನಾನೇ ಕೆಲಸ ಮಾಡದವನು ಹೆಂಡತಿ ದುಡಿದ ಹಣದಲ್ಲಿ  ನನಗೂ ಒಂದಿಷ್ಟು  ಖರ್ಚಿಗಿ  ಕೊಡು” ಅಂತ ಹೇಗೆ ಕೇಳೋದು ಅನ್ನುವ ಸ್ವಾಭಿಮಾನ  ರಂಗಪ್ಪನಿಗೆ ಕಾಡುತಿತ್ತು. ಗಂಡ ಕೇಳದಿದ್ದರೂ ಸಾವಿತ್ರವ್ವ  ಇವನ ಖರ್ಚಿಗೆ ಒಂದಿಷ್ಟು ಹಣ ಆಗಾಗ ಕೊಡುತಿದ್ದಳು.

ರಂಗಪ್ಪನ  ಖಾಸಾ ಗೆಳೆಯ  ರಾಮಪ್ಪ  ಬಹಳ ವರ್ಷಗಳ ಹಿಂದೆ  ಬೆಂಗಳೂರಿಗೆ ಗುಳೇ ಹೋಗಿ ಅಲ್ಲಿಯೇ  ಕೆಲಸ ಮಾಡಿಕೊಂಡಿದ್ದ. ಅವನಿಗೆ ಎಲ್ಲರೂ ಬೆಂಗಳೂರು ರಾಮಪ್ಪ ಅಂತಲೇ ಕರೆಯುತಿದ್ದರು. ಆತ ಊರಿಗೆ ಬರುವದೆ ಅಪರೂಪ. ಊರಲ್ಲಿ   ಹಬ್ಬ ಜಾತ್ರೆ ಉತ್ಸವ ಏನಾದರೂ ಇದ್ದಾಗ  ಬರುತಿದ್ದ. ಆಗ ರಂಗಪ್ಪನಿಗೆ ಭೇಟಿಯಾಗಿ ಕುಶಲೋಪರಿ ವಿಚಾರಿಸುತಿದ್ದ. ” ನನ್ನಜೊತೆ ನೀನೂ  ಬೆಂಗಳೂರಿಗೆ ಬಂದು ಬಿಡು, ಅಲ್ಲೇ ಇಬ್ಬರೂ ಜೊತೆಯಾಗಿ ಕೆಲಸಾ ಮಾಡಿದರೆ ನನಗೂಟೈಮ್ ಪಾಸ್ ಆಗ್ತಾದೆ ಅಂತ ಅನೇಕ ಸಲ ಒತ್ತಾಯಿಸಿದ್ದ. ಆದರೆ  ರಂಗಪ್ಪ ಮಾತ್ರ ಆತನ ಮಾತಿಗೆ ಒಪ್ಪದೆ ಊರಲ್ಲೇ ಸಾಕಷ್ಟು ಕೆಲಸಾ ಇದೆ ಅದು ಬಿಟ್ಟು ನಾನ್ಯಾಕ  ಬೆಂಗಳೂರಿಗೆ ಬರಲಿ ಅಂತ ಕಡ್ಡಿ ಮುರಿದಂಗ ಹೇಳಿದ್ದ.

ಅಂದು ರಾಮಪ್ಪ ವೀರಭದ್ರ ದೇವರ ಜಾತ್ರೆಗೆ ಊರಿಗೆ ಬಂದಾಗ ರಂಗಪ್ಪ ಕೆಲಸವಿಲ್ಲದೇ ಖಾಲಿ ಕುಳಿತಿದ್ದಾನೆ ಅನ್ನುವ ವಿಷಯ ಗೊತ್ತಾಯಿತು. ತಕ್ಷಣ ಗೆಳಯನ ಬಳಿ ಧಾವಿಸಿ ಬಂದಾಗ ರಂಗಪ್ಪ ಅದೇ ಬೇವಿನ ಮರಕ್ಕೆ ಬೆನ್ನು ಹಚ್ಚಿ ಚಿಂತಾಕ್ರಾಂತನಾಗಿ ಕುಳಿತಿದ್ದ. ಇವನ ಭುಜ ಹಿಡಿದು ಅಲುಗಾಡಿಸಿ “ಸುಮ್ಮನೆ ಚಿಂತಿ ಮಾಡಿ ಯಾಕೆ ಕೈಕಟ್ಟಿ ಕೂಡತಿ ಎಷ್ಟು ಕುಂತರೂ ಅಷ್ಟೇನಿನಗ ಯಾರೂ ಇಲ್ಲಿ ಯಾರೂ ಕೆಲಸಕ್ಕೆ ಕರೆಯೋದಿಲ್ಲ ಈಗಲಾದರೂ ನನ್ನ ಜೊತೆ ಬೆಂಗಳೂರಿಗಿ ಬಂದು ಬಿಡು ಅಂತ ಪುನಃ ಒತ್ತಾಯಿಸಿದ .

” ಇಲ್ಲೇ ನನಗೆ ಕೆಲಸ ಇಲ್ಲ ಅಂದ್ಮೇಲೆ  ಅಲ್ಲಿ  ಯಾವ ಕೆಲಸಾ ಸಿಗ್ತಾದೆ”  ಅಂತ ರಂಗಪ್ಪ ಪ್ರಶ್ನಿಸಿದ. “ಯಾಕೆ ಸಿಗೋದಿಲ್ಲ ಅಲ್ಲೊಂದು ವಾಚಮೆನ ಕೆಲಸಾ ಖಾಲಿ ಇದೆ. ಇಲ್ಲಿ ಕೂಡೋ ಬದಲಿಗೆ ಅಲ್ಲೇ ಕುಂತರ ಕೈತುಂಬಾ ಪಗಾರ ಕೊಡ್ತಾರೆ ನಿನ್ನ ಖರ್ಚು  ಹೊಂಟು ಹೋಗ್ತಾದೆ ” ಅಂತ ಸಲಹೆ ನೀಡಿದ. “ಸುಮ್ಮನೆ ಕುಂತರೆ  ಹ್ಯಾಂಗ  ಪಗಾರ ಕೊಡ್ತಾರೆ ” ಅಂತ  ಮರು ಪ್ರಶ್ನಿಸಿದ.

“ಬೆಂಗಳೂರು ಅಂದ್ರ ಏನಂತ ತಿಳಿದೀದಿ ಅದು  ನಮ್ಮಂಗ  ಹಳ್ಳಿ ಊರಾ? ಅಲ್ಲಿ ಕುಂತರೂ ಪಗಾರ ನಿಂತರೂ ಪಗಾರ ಇದೆ” ಅಂತ ಹಳ್ಳಿ ಧಾಟಿಯಲ್ಲಿ ಹೇಳಿದ. ಆತನ  ಮಾತು ರಂಗಪ್ಪನ  ಆಸೆ ಚಿಗುರುವಂತೆ ಮಾಡಿತು. ಸೀದಾ  ಮನೆಗೆ ಬಂದು ಹೆಂಡತಿಯ  ಮುಂದೆ ವಿಷಯ ಪ್ರಸ್ತಾಪಿಸಿದ.

“ದೂರದ ಬೆಂಗಳೂರಿಗಿ ಯಾಕೆ  ಹೋಗತಿ? ಕೆಲಸಾ ಮಾಡುವ ವಯಸ್ಸಾ ನಿನ್ನದು? ಸುಮ್ಮನೆ  ಉಂಡು ಮನ್ಯಾಗ ಕುಂತಿರು .ನಾನೆಲ್ಲ ಸಂಸಾರದ ಖರ್ಚು ನೋಡ್ಕೊತಿನಿ ಅಂತ  ಸಲಹೆ ನೀಡಿದಳು. ಆದರೂ ರಂಗಪ್ಪ ಹಾಗೋ ಹೀಗೋ ಹೆಂಡತಿಗೆ  ಒಪ್ಪಿಸಿ ಮರುದಿನ ರಾಮಪ್ಪನ ಜೊತೆ  ಉದ್ಯಾನ ರೈಲು ಹತ್ತಿ  ಬೆಂಗಳೂರಿಗೆ ಪಯಣ ಬೆಳೆಸಿದ.

ರಂಗಪ್ಪ ತಾನು ತೊಟ್ಟ ಧೋತಿ ಅಂಗಿ ಕಳಚಿಟ್ಟು ಯೂನಿಫಾರ್ಮ್ ಹಾಕಿಕೊಂಡ. ಆ ಒಂದು ದೊಡ್ಡ ಮನೆಯಲ್ಲಿ ವಾಚಮನ ಕೆಲಸ ಶುರು ಮಾಡಿದ.  ದನ್ನು  ಮನೆ ಅನ್ನುವದಕ್ಕಿಂತ ಅರಮನೆ ಅಂತಲೇ ಹೇಳಬೇಕು, ಆ ಮನೆಯಲ್ಲಿ  ಯಾರೂಬ್ಬರೂ ಖಾಯಂ ಇರುತಿರಲಿಲ್ಲ  ವ್ಯಾಪಾರ ,ಉದ್ಯೋಗ, ನೌಕರಿ ಅಂತ ಬೇರೆ ಬೇರೆ ಕಡೆ  ಹೋಗುತಿದ್ದರು. ಅವರು ವಾರದಲ್ಲಿ ಒಂದೆರಡು ಬಾರಿ ಮಾತ್ರ ಮನೆಗೆ ಬರುತಿದ್ದರು.

ರಂಗಪ್ಪನ  ಗುಣ ಸ್ವಭಾವ ತಿಳಿದುಕೊಳ್ಳಲು ಆ ಮನೆಯವರಿಗೆ  ಬಹಳ ದಿನ ಬೇಕಾಗಲಿಲ್ಲ. ನಿಯತ್ತಿನ ಮನುಷ್ಯ ಅಂತ ಖಾತ್ರಿಪಡಿಸಿಕೊಂಡು ಮನೆಯ ಕೀಲಿ ಕೈ ಇವನ ಕೈಗಿಟ್ಟು ನೀನು  ನಮ್ಮ ಮನ್ಯಾಗ ಇರೋತನಕ  ಮನೆಕಡೆ  ನಮಗ್ಯಾವ ಚಿಂತೇಯೂ ಇಲ್ಲ ನೀನೊಬ್ಬ ಮನಿ ಮನುಷ್ಯ ಇದ್ದಂಗ ಅಂತ ಹೇಳಿದಾಗ ರಂಗಪ್ಪ ಖುಷಿಯಿಂದ ತಲೆಯಾಡಿಸಿ ಅವರಿಟ್ಟ ಭರವಸೆ  ಉಳಿಸಿಕೊಂಡು ಕೆಲಸದಲ್ಲಿ ನಿರತನಾದ.

ರಾಮಪ್ಪ ಕೂಡ ಅದೇ ಏರಿಯಾದಲ್ಲಿ ಸೆಂಟ್ರಿಂಗ ಕೆಲಸಾ ಮಾಡುತಿದ್ದ. ತನ್ನ ಕೆಲಸದಲ್ಲಿ ಬಿಡುವಿದ್ದಾಗ ರಂಗಪ್ಪನ  ಹತ್ತಿರ ಬಂದು ತಾಸು ಘಳಿಗೆ ಕುಳಿತು ಪರಸ್ಪರ ಯೋಗಕ್ಷೇಮ ವಿಚಾರಿಸಿ ಚಹಾ ಪಾಣಿ ಮಾಡಿ ಹೋಗುತಿದ್ದ .

ರಂಗಪ್ಪ ತನ್ನ ಖರ್ಚು ನೋಡಿಕೊಂಡು ಒಂದಿಷ್ಟು ಹಣ ಮನೆಯ ಖರ್ಚಿಗೂ ಕಳಿಸುತಿದ್ದ . ಸುಮಾರು ಎರಡ್ಮೂರು ವರ್ಷ ಹಾಗೇ ಕಳೆದು ಹೋಯಿತು. ಸಾವು ಯಾರಿಗೂ ಹೇಳಿ ಕೇಳಿ ಬರೋದಿಲ್ಲ ಅನ್ನುವಂತೆ ಅವತ್ತು  ರಂಗಪ್ಪ ಅಚಾನಕ ಹಾರ್ಟ್ ಅಟ್ಯಾಕ ಆಗಿ ಸಾವನ್ನಪ್ಪಿದ. ಇದು ಆ ಮನೆಯವರಿಗೆ ತೀವ್ರ  ಅಘಾತ ತಂದಿತು. ರಂಗಪ್ಪ ಛೊಲೊ ಮನುಷ್ಯ ಇದ್ದ  ಈಗಿನ ಕಾಲದಾಗ ಇಂಥಹ ಮನುಷ್ಯ ಸಿಗೋದೇ ಅಪರೂಪ ಅಂತ  ಅವರು ಹಳಾಳಿಸಿದರು. ರಂಗಪ್ಪನ ಶವ  ಊರಿಗೆ ಒಯ್ಯಲು ಅವರೇ ತಮ್ಮ ಸ್ವಂತ  ಖರ್ಚಿನಲ್ಲಿ ಅಂಬುಲೆನ್ಸ ವ್ಯವಸ್ಥೆ ಮಾಡಿ  ರಾಮಪ್ಪನ ಜೊತೆ ಕಳಿಸಿದರು. ರಂಗಪ್ಪನ ಸಾವು ಊರವರಿಗೂ ದುಃಖ ತರಿಸಿತು. ಗಂಡನ ಸಾವಿನಿಂದ  ಸಾವಿತ್ರವ್ವ ಕಂಗೆಟ್ಟು ಹೋದಳು. ಆತನ ಅಗಲಿಕೆಯ ನೋವು ಮರೆಯದಂತಾಯಿತು.

ಸುಮಾರು ದಿನಗಳ ನಂತರ ರಂಗಪ್ಪ ನೌಕರಿ ಮಾಡುತಿದ್ದ  ಆ ಮನೆ ಇದ್ದಕ್ಕಿದ್ದಂತೆ ಒಂದಿನ ಕಳ್ಳತನವಾಯಿತು. ಕಳ್ಳತನ ಮಾಡಿದವರು ಗೇಟಿನ ಕೀಲಿ ಮುರಿಯದೇ ಗೋಡೆ ಒಡೆಯದೇ ಕಳ್ಳತನ ಮಾಡಿದ್ದರು. ಆ ಕಳ್ಳತನ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಇದು ಯಾರೋ ಗೊತ್ತಿದ್ದವರೆ ಮಾಡಿದ್ದಾರೆ ಅಂತ ಎಲ್ಲರಿಗೂ ಸಂಶಯ ಮೂಡಿತು ಆದರೆ ಯಾರು ಮಾಡಿದ್ದು ಅಂತ ಗೊತ್ತಾಗದೆ ಹೋಯಿತು.

“ರಂಗಪ್ಪ ವಾಚಮನ ಆಗಿದ್ದಾಗ ಒಂದೇ ಒಂದು ದಿನ ನಮ್ಮ ಮನೆ ಕಳ್ಳತನವಾಗಿರಲಿಲ್ಲ ಕೀಲಿ ತೆರೆದು ಕಳ್ಳತನ ಮಾಡಬೇಕಾದರೆ ಕಳ್ಳರ ಹತ್ತಿರ ಕೀಲಿಕೈ ಎಲ್ಲಿಂದ ಬಂತು? ರಂಗಪ್ಪನ ಹೊರತು ನಾವು ಯಾರಿಗೂ ಕೀಲಿ ಕೈ ಕೊಟ್ಟಿರಲಿಲ್ಲ ” ಅಂತ ಮನೆಯವರು ಯೋಚಿಸಿದರು.

” ನಿನ್ನ ಗಂಡ ತೀರಿ ಹೋದ ಮೇಲೆ ನಮ್ಮ ಮನೆ  ಕಳ್ಳತನವಾಗಿದೆ” ಅಂತ ಆ ಮನೆಯ ಹಿರಿಯ ವ್ಯಕ್ತಿಯೊಬ್ಬ ಒಂದಿನ ಬೆಂಗಳೂರಿನಿಂದ  ಫೋನ್ ಮಾಡಿ ಸಾವಿತ್ರವ್ವಳಿಗೆ ವಿಷಯ  ತಿಳಿಸಿದ. ವಿಷಯ ಕೇಳಿ ಸಾವಿತ್ರವ್ವಳಿಗೆ ಗಾಬರಿಯಾಯಿತು. ಯಾರು ಕಳ್ಳತನ ಮಾಡಿರಬೇಕು ಅಂತ ಯೋಚಿಸಿ ಹಳಾಳಿಸಿದಳು.

ಸ್ವಲ್ಪ ದಿನದ ನಂತರ  ರಾಮಪ್ಪ ಬೆಂಗಳೂರಿನ ಕೆಲಸ ಬಿಟ್ಟು ಊರಿಗೆ  ಬಂದ. ಬಂದವನೇ ಒಂದು ಭವ್ಯ ಬಂಗಲೆ ಕಟ್ಟಿಸಿಕೊಂಡು ವ್ಯಾಪಾರ ಉದ್ಯೋಗ ಶುರುಮಾಡಿದ. ಊರಲ್ಲೇ ಶ್ರೀಮಂತ ವ್ಯಕ್ತಿಯಾಗಿ ಗುರ್ತಿಸಿಕೊಂಡ. ಕೂಲಿ ಮ್ಯಾಲ ಇಷ್ಟೊಂದು ಹಣ ಹ್ಯಾಂಗ ಗಳಿಸಿದ ಅಂತ ಜನ ಗುಸುಗುಸು ಚರ್ಚೆ ಆರಂಭಿಸಿದರು. ಆದರೆ  ಹಣ ಇವನ ಹತ್ತಿರ  ಎಲ್ಲಿಂದ ಬಂತು ಅನ್ನೋದು ಮಾತ್ರ ಯಾರಿಗೂ ಗೊತ್ತಾಗಲಿಲ್ಲ .

ಅಂದು ರಾಮಪ್ಪ ಮನೆಯ ಮುಂದೆ ಮಗನ ಮದುವೆ ಮಾಡಲು ಭರ್ಜರಿ ತಯಾರಿ ಆರಂಭಿಸಿದ. ಸಾವಿತ್ರವ್ವ ಆತನ   ಮನೆಗೆ ಹೋದಾಗ ಇವಳ ದೃಷ್ಟಿ ಗೋಡೆಯ ಮೊಳೆಗೆ ತೂಗುಹಾಕಿದ ಕೀಲಿ ಕೈ ಕಡೆ ಹರಿಯಿತು. ಇದು ನನ್ನ  ಗಂಡನ ಹತ್ತಿರ ಇರುತಿದ್ದ ಕೀಲಿ ಕೈ ಅಲ್ಲವೇ? ಇದು ನಿನ್ನ ಹತ್ತಿರ ಹ್ಯಾಂಗ ಬಂತು? ಅಂತ ಪ್ರಶ್ನಿಸಿದಳು.

” ಆ ಕೀಲಿ ಕೈ ನಿನ್ನ ಗಂಡನದೇ. ಅವತ್ತು ಅವನ ಶವ ಆಂಬ್ಯುಲೆನ್ಸನಲ್ಲಿ ತೆಗೆದುಕೊಂಡು ಬರುವಾಗ ಇದು ಆತನ ಉಡದಾರದಲ್ಲಿತ್ತು.ಇದನ್ನು ನಿನ್ನ ಕೈಗೆ ಕೊಡೋದೋ? ಅಥವಾ ಬೆಂಗಳೂರು ಮಾಲಿಕರಿಗೆ ಕೊಡೋದೋ? ಅಂತ ಗೊತ್ತಾಗದೆ ನನ್ನ ಹತ್ರಾನೇ ಇಟ್ಕೊಂಡಿದ್ದೆ, ಅಂತ ವಾಸ್ತವ ಹೇಳಿದ.

ರಾಮಪ್ಪನ ಮಾತು ಇವಳಿಗೆ ಆಶ್ಚರ್ಯ ತರಿಸಿತು. ಅ ಕೀಲಿ ಕೈ ಬಗ್ಗೆ ನೂರಾರು ಸಂಶಯ ಗರಿಗೆದರಿದವು . ರಾಮಪ್ಪನ ಸ್ವಭಾವ ಮೊದಲೇ ಗೊತ್ತಿತ್ತು ಆತ ನಿಯತ್ತಿನ ಮನುಷ್ಯ ಅಲ್ಲ ಅಂತ ಊರಲ್ಲಿ ಎಲ್ಲರೂ ಹೇಳುತಿದ್ದರು. ಇವನೇ ಯಾಕೆ ಆ ಬೆಂಗಳೂರು ಮಾಲಿಕರ ಮನೆ ಕಳು ಮಾಡಿರಬಾರದು ಅಂತ ಸ್ವಲ್ಪ ಹೊತ್ತು ತಾನೇ ಪತ್ತೇದಾರಿಕೆ ನಡೆಸಿ ತಾಳೆ ಹಾಕಿದಳು. ತನ್ನ ತಾಳೆ ಸರಿ ಅನಿಸುತಿದ್ದಂತೆ  ಈ ವಿಷಯ ಮೊದಲು ಬೆಂಗಳೂರ ಮಾಲಿಕರಿಗೆ ತಿಳಿಸಬೇಕು ಅಂತ ಸಾವಿತ್ರವ್ವ ಟೆಲಿಫೋನ್ ಬೂತ್ ಕಡೆ ಸರಸರನೆ ಹೆಜ್ಜೆ ಹಾಕಿದಳು!!!!

ಶರಣಗೌಡ ಬಿ ಪಾಟೀಲ ತಿಳಗೂಳ, ಕಲಬುರಗಿ

6 Comments on “ಸತ್ಯಾಸತ್ಯತೆ

  1. ಕುತೂಹಲ ಭರಿತ ಕಥೆ… ಸೊಗಸಾದ ನರೂಪಣೆ ಗಮನ ಸೆಳೆಯಿತು..ಧನ್ಯವಾದಗಳು ಸಾರ್

  2. ಪ್ರಾಮಾಣಿಕತೆಯನ್ನು ಎತ್ತಿಹಿಡಿಯುವ ಸೊಗಸಾದ ಕತೆ.

  3. ಕುತೂಹಲಭರಿತ ಸೊಗಸಾದ ಸಂದೇಶ ಹೊಂದಿರುವ ಕಥೆ.

  4. ಬಡ ಸಾವಿತ್ರವ್ವನ ಪ್ರಾಮಾಣಿಕತೆಯು ತನ್ನ ಗೌರವವನ್ನು ಎತ್ತಿ ಹಿಡಿದ ಪರಿ ಅನನ್ಯ…!! ಸೊಗಸಾದ ಕಥೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *