ಮುಗುಳ್ನಗೆ
ಎಲ್ಲ ದೇಶಗಳಿಗೆ
ಎಲ್ಲ ಭಾಷೆಯ ಮಂದಿಗೆ
ಅರ್ಥವಾಗುವ ಮಾತು
ಮುಗುಳ್ನಗೆ
ಸಮಸ್ಯೆಗಳ ಬಲೆಯಿಂದ
ಕಷ್ಟಗಳ ಸುಳಿಯಿಂದ
ದೂರಕೊಯ್ಯುವ ದೋಣಿ
ಮುಗುಳ್ನಗೆ
ಮನಸ ಹಗುರತೆಗೆ
ಮುಖದಂದ ಸಿರಿಗೆ
ಅಳಿಸಲಾಗದ ಅಲಂಕಾರ
ಮುಗುಳ್ನಗೆ
ಪ್ರೇಮಾಂಕುರಕ್ಕೆ
ಸಲ್ಲಾಪ ಸಂಭ್ರಮಕ್ಕೆ
ನೀರನೆರೆಯುವ ನದಿಯೆ
ಮುಗುಳ್ನಗೆ
ದ್ವೇಷಗಳನಳಿಸಿ
ಆತ್ಮೀಯತೆ ಬೆಳೆಸಿ
ಚೆಂದ ಹಬ್ಬುವ ಬಳ್ಳಿ
ಮುಗುಳ್ನಗೆ
ಶಯ್ಯೆಯಲಿ ಕೊನೆ
ದಿನವನೆಣಿಸುವಲ್ಲಿ
ಬಂಧ ಮುಕ್ತಿಯಲ್ಲಿರಲಿ
ಮುಗುಳ್ನಗೆ
-ಅನಂತ ರಮೇಶ್
ವಾವ್ ಅರ್ಥಪೂರ್ಣ ವಾದ ಕವನ…ಮೆಲಕು ಹಾಕುವಂತಿದೆ..
ಧನ್ಯವಾದಗಳು ಸಾರ್.
ಸೊಗಸಾದ ಕವನ
ಸುಂದರ ಕವಿತೆ.
ಭಾವಪೂರ್ಣ ಕವನ…ಮುಗುಳ್ನಗೆ!
ಮರೆಯಾಗುವುದು ಭೇದಗಳು ಮುಗುಳ್ನಗೆಯ ಮಂದಸ್ಮಿತದಲ್ಲಿ/
ಸ್ನೇಹಭಾವದ ಮಹಾಪೂರವು ಹರಿಯುವುದು ಮುಗುಳ್ನಗೆಯಲ್ಲಿ/
ತಾರತಮ್ಯವಿಲ್ಲದೆ ಬದುಕು ಹಸನಾಗುವುದು ಮಂದಹಾಸದಲ್ಲಿ/
ಮೈತ್ರಿಯಾ ಹನಿಹನಿಗಳು ತುಂತುರಿಸುವುದು ಮುಗುಳ್ನಗೆಯಲ್ಲಿ/
ಸೆರೆಯಾಗುವುದು ಹೃದಯಗಳು ಮುಗುಳ್ನಗೆಯ ಪ್ರಭಾವದಲ್ಲಿ/
ಸದಾಶಯಗಳ ಪ್ರವಾಹವು ಪ್ರವಹಿಸುವುದು ಮುಗುಳ್ನಗೆಯಲ್ಲಿ/
ವ್ಯತ್ಯಾಸಗಳಿಲ್ಲದೆ ಕ್ಷಣಗಳು ಸುಗಮವಾಗುವುದು ಹಸನ್ಮುಖದಲ್ಲಿ/
ವೈವಿದ್ಯತೆಯಲಿ ಗರಿ ಕೆದುರುವುದು ಗೆಳೆತನವು ಮುಗುಳ್ನಗೆಯಲ್ಲಿ/
ಮುಗುಳ್ನಗೆಯ ಮಹತ್ವವ ಚಿತ್ರಿಸಿರುವಿರಿ ಕವನದಲ್ಲಿ/
ಬಿಡಿ ಬಿಡಿಯಾಗಿ ಬಿಡಿಸಿರುವಿರಿ ಜೀವನದ ಪ್ರಸಂಗಗಳಲ್ಲಿ
ಮುಗುಳ್ನಗೆಯ ಮಹತ್ವವ ಚಿತ್ರಿಸಿರುವಿರಿ ಕವನದಲ್ಲಿ/
ಭಾವ ಭಾವವಾಗಿ ಬಿಚ್ಚಿರುವಿರಿ ಬಾಳಿನ ಸಂದರ್ಭಗಳಲ್ಲಿ/