ಅಂಕ ಪರದೆ ಜಾರಿದಾಗ…

Share Button

ಕಳೆದವಾರ ತರಗತಿಯಲಿ ಕಿರುಪರೀಕ್ಷೆ ನಡೆದಿತ್ತು
ಜಂಗಮವಾಣಿಯಲ್ಲಿ ಬಂದ ಅಂಕಗಳ ಸಂದೇಶವಿಂದು ಮನೆಯಲಿ ಬಿರುಗಾಳಿ ಸೃಷ್ಟಿಸಿತ್ತು

ಮುನಿದ ಅಮ್ಮ ತಟ್ಟೆ ಪಾತ್ರೆಗಳ ಸಾಂಕೇತಿಕ ಭಾಷೆಯಲಿ ಮಾತನಾಡಿದರು
ನನ್ನ ಮೇಲಿನ ಆಕ್ರೋಶವ ಬರೀ ಉಪ್ಪಿಟ್ಟು ಮಾಡಿ ತೀರಿಸಿಕೊಂಡರು

ಸದಾ ಓದಿನಲಿ ಮುಂದಿರುವ ತಂಗಿ ಮುಸಿ ಮುಸಿ ನಗುತಾ
ತಾನು ಗಳಿಸಿದ ಅಂಕಗಳ ಮೂರು ಬಾರಿ ಕೂಗಿ ಹೇಳಿದಳು

ನಾ ಗಳಿಸಿದ ಸಂಖ್ಯೆಗಳ ಕಂಡು ಅಪ್ಪ ಗಂಭೀರವದನದವರಾದರು
ಹಾಗೇ ಕೂತ ಅವರಲ್ಲಿ ತತ್ವಜ್ಞಾನಿ ಜನಿಸಿ ಬಂದರು

ಅವರ ಇತಿಹಾಸ ಅವರು ಪಟ್ಟ ಕಷ್ಟ ಅವರ ಸಾಧನೆ ಬಗ್ಗೆ
ನೂರ ಒಂದನೆಯ ಬಾರಿ ಕೇಳುವ ಕಠೋರ ಶಿಕ್ಷೆ ವಿಧಿಸಿದರು

ನನಗೇನೋ ಒಳ್ಳೆಯ ಅಂಕ ಗಳಿಸುವಾಸೆ
ಹಾಳಾದ್ದು ಕಾಡುವ ನಿದ್ರೆ ಅಡ್ಡಗಾಲಾಗಿದೆ
ಯಾವ ಮಾಯದಲ್ಲಿ ಮೈಯನ್ನಾವರಿಸಿ ತಲೆ ತೂಗುವಂತೆ ಮಾಡಿದೆ

ಆಗಾಗ ಶಿಕ್ಷಕರ ಅಬ್ಬರಕೆ ಎಚ್ಚರವಾದರೂ
ಆಗಲೇ ಕಳೆದುಕೊಂಡ ಪಾಠ ಎನ್ನ ಅನಾಥನನ್ನಾಗಿಸಿದೆ

ಕಂಡ ಪ್ರಕೃತಿಯ ಸೊಬಗ ಓರೆಕೋರೆಯ ರೇಖೆಗಳಲಿ ಸುಲಭವಾಗಿ ಚಿತ್ರಿಸುವೆ
ನನ್ನದೇ ಸ್ವಭಾವದ ಪಡಿಯಚ್ಚಾದ ನನ್ನ ಗೆಳೆಯ ಅಭಿನಯದಲಿ ಮುಂದಿರುವ

ಇನ್ನೊಬ್ಬ ತುಸು ಕಡಿಮೆ ಅಂಕಗಳಿಸಿದರೂ ಚರ್ಚೆಯಲಿ ಎಲ್ಲರನು ಮೀರಿಸುವ
ಮತ್ತೊಬ್ಬ ಜ್ಞಾನವನು  ಅಕ್ಷರಕ್ಕಿಳಿಸಿ ಆಕರ್ಷಕ ಪ್ರಬಂಧ ಬರೆಯುವ

ಬೇಯಿಸದೆ ರುಚಿಕರ ಖಾದ್ಯಗಳ ತಯಾರಿಸುವ ಕೌಶಲ್ಯ ಒಬ್ಬರಿಗಿದ್ದರೆ
ಭಾವ ಭಕ್ತಿ ಜನಪದ ಗೀತೆಗಳ ಹಾಡುವ ಕಲೆ ಮತ್ತೊಬ್ಬರಿಗೆ

ನಮ್ಮೆಲ್ಲಾ ಪ್ರತಿಭೆಗಳ ಹೊರಗಿಡುವ ಸ್ಪರ್ಧೆಗಳು ಬಂದವು ನೋಡಿ
ನಾವು ಯಾರು ಎಂದು ತೋರಿಸುವ ಕಾಲ ಬಂತು ಬೇಡಿ

ಮುನಿದ ಅಮ್ಮ ಗೋಭಿ ಮಾಡುವಷ್ಟು ತಣ್ಣಗಾದರು
ಪುಸ್ತಕದ ತಂಗಿ ಹುಳು ಸಾಧನೆ ಕಂಡು ಮೂಲೆ ಸೇರಿತು

ಗಂಭೀರತೆಯ ಬಿಟ್ಟ ಅಪ್ಪ ಚಿಕ್ಕ ಮಗುವಿನಂತೆ ಕುಣಿದಾಡಿದರು

ಆಯ್ಕೆ ಮಾಡಿಕೊಳ್ಳುವ ಬದುಕ ನಮ್ಮ ಪ್ರತಿಭೆಗೆ ತಕ್ಕಂತೆ
ಅವಕಾಶಗಳುಂಟು ಎಲ್ಲರಿಗೂ ಈ ಬಾಳ ಜಗದಲಿ
ಸಾಗಿಸಲುಂಟು ನೆಮ್ಮದಿಯ ಜೀವನ ನಗುಮೊಗದಲಿ

– ಕೆ.ಎಂ ಶರಣಬಸವೇಶ

14 Responses

  1. ಹಿರಿಯರಾದ ನಾವು ಕೊಡೋಣ ಪ್ರತಿಭೆಗಳಿಗೆ ಅವಕಾಶವನ್ನು
    ಅರ್ಥಗರ್ಭಿತವಾದ ಕವನ

  2. ನಯನ ಬಜಕೂಡ್ಲು says:

    ಅರ್ಥಪೂರ್ಣ ಕವನ. ಬದುಕು ಕೇವಲ ಅಂಕಗಳ ಮೇಲೆ ನಿಂತಿಲ್ಲ, ಹಲವಾರು ದಾರಿಗಳಿವೆ ಇಲ್ಲಿ ಸಾಗಲು.

  3. ನಮ್ಮ ಆಸಕ್ತಿ ಆಕಾಂಕ್ಷೆ ಗಳನ್ನು ಮಕ್ಕಳ ಮೇಲೆ ಹೇರಬಾರದು ಎಂಬ ಸಂದೇಶ ಜೊತೆಗೆ ಅವರು ತಮ್ಮ ಪ್ರತಿಭೆ ಯನ್ನು ತೋರಿದಾಗ ಬೆನ್ನು ತಟ್ಟಿ ಪ್ರೋತ್ಸಾಹ ನೀಡಬೇಕೆಂಬ ಸಂದೇಶ ಒಳಗೊಂಡ ಕವನ ಮುದಕೊಟ್ಟಿತು.ಧನ್ಯವಾದಗಳು ಸಾರ್

  4. ಅರುಣ ಪ್ರಕಾಶ್ says:

    ಭಾರತೀಯರ ಮನಸ್ಥಿತಿ ಕಷ್ಟಪಟ್ಟು ಕೆಲಸ ಮಾಡು, ಅಮೆರಿಕಾದವರ ಮನಸ್ಥಿತಿ ಇಷ್ಟಪಟ್ಟು ಕೆಲಸ ಮಾಡು, ಆದರೆ ಜಪಾನಿಯರ ಮನಸ್ಥಿತಿ ಪ್ರೀತಿಯಿಂದ ಕೆಲಸ ಮಾಡು. ಯಾವ ಕ್ಷೇತ್ರದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಆ ಕೆಲಸವನ್ನು ಪ್ರೀತಿಸಲು ಸಾಧ್ಯವೂ ಆಗ ಉನ್ನತಿ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಈ ಕವನ ಪೂರಕವಾಗಿದೆ

    • ಕವನದ ತಿರುಳನ್ನು ಬಹಳ ಸೊಗಸಾಗಿ ಕೆಲವೇ ಕೆಲವು ಸಾಲುಗಳಲ್ಲಿ ಹೇಳಿದ್ದೀರಾ….ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ಧನ್ಯವಾದಗಳು ಅರುಣಾ ಮೇಡಂ

  5. Niranjanamurthy balawadimath says:

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀನು ಪಡುತ್ತಿದ್ದ ಕಷ್ಟ ನೆನಪಾಯಿತು ಹಾಗೂ ನಿನ್ನ ಸಾಧನೆಗೆ ಅಭಿನಂದನೆಗಳು

    • ನಿನ್ನದು ಸಹಾ ಹೋರಾಟದಿಂದ ಕಟ್ಟಿಕೊಂಡ ಬದುಕು. ಎಷ್ಟು ಆಸಕ್ತಿ ನೀನು ಮಾಡುವ ಕೆಲಸದಲ್ಲಿ ಅದೇ ನಿನ್ನನ್ನು ಕಾಪಾಡುತ್ತಿದೆ. ಧನ್ಯವಾದಗಳು ಭಾವಜೀವಿ ನಿರಂಜನ ಮೂರ್ತಿಗಳಿಗೆ

  6. Hema says:

    ಅರ್ಥವತ್ತಾದ ಕವನ.

  7. . ಶಂಕರಿ ಶರ್ಮ says:

    ಪ್ರತಿಯೊಬ್ಬರಲ್ಲೂ ಇರುವ ಪ್ರತ್ಯೇಕ ಪ್ರತಿಭೆಗಳನ್ನು ಗುರುತಿಸುವದು ಅತ್ಯವಶ್ಯ… ಮನಮುಟ್ಟಿತು ಕವನ…ಧನ್ಯವಾದಗಳು.

  8. ಕಿಟ್ಟು says:

    ಇವತ್ತಿನ ಸಂದರ್ಭದಲ್ಲಿ ಪ್ರಸ್ತುತ ಕವಿತೆ. ಅದ್ಭತವಾಗಿದೆ… ಅಲ್ಲಲ್ಲಿ ಆಶಾ ಕಿರಣಗಳು ಕಂಡರೂ ಈ ದಿಸೆಯಲ್ಲಿ ಆಗಬೇಕಾದ ಬದಲಾವಣೆ ಬಹಳವೇ ಇದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: