ಕಾದಂಬರಿ: ನೆರಳು…ಕಿರಣ 13
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಎಲ್ಲಾ ವಿಷಯಗಳನ್ನು ಚುಟುಕಾಗಿ ತಿಳಿಸಿದ ಲಕ್ಷ್ಮಿ “ಆ ದಿನ ಉಡಲು ನಿನ್ನ ಹತ್ತಿರ ಹೊಸ ಸೀರೆ ಇದೆಯಾ? ಇಲ್ಲಾ ಅವರುಗಳನ್ನೆಲ್ಲ ಆಹ್ವಾನಿಸಿ ಹಿಂದಕ್ಕೆ ಬರುವಾಗ ಒಂದು ಸೀರೆ ತಂದುಕೊಟ್ಟರೆ ಅದನ್ನು ರೆಡಿಮಾಡಲು, ಅಂದರೆ ಅಂಚು ಹೊಲಿದು, ಬ್ಲೌಸ್ ಸಿದ್ಧಪಡಿಕೊಳ್ಳಲು ಆಗುತ್ತಾ ಭಾಗ್ಯ?” ಎಂದು ಮಗಳನ್ನು ಕೇಳಿದಳು.
“ಈ ತರಾತುರಿಯಲ್ಲಿ ಹೊಸ ಸೀರೆ ತರಲು ಹೋಗಬೇಡಿರಮ್ಮ, ಚಿಕ್ಕತಾತ ಗೌರಕ್ಕನ ಮದುವೆ ಸಂದರ್ಭದಲ್ಲಿ ನಿಮಗೆ ಕೊಟ್ಟಿದ್ದ ಸೀರೆಯನ್ನು ನನಗಿಂತ ನಿನಗೇ ಚೆನ್ನಾಗಿ ಒಪ್ಪುತ್ತೇ ಅಂತ ಕೊಟ್ಟಿದ್ದಿರಿ. ಅದು ಹಾಗೇ ಇದೆ. ಅದಕ್ಕೆ ಅಂಚು, ಕುಚ್ಚು, ಬ್ಲೌಸ್ ಎಲ್ಲ ರೆಡಿ ಮಾಡಿಯಾಗಿದೆ. ಎಲ್ಲಿಗೂ ಉಟ್ಟುಕೊಂಡು ಹೋಗಿಲ್ಲ. ಅದನ್ನೇ ಉಟ್ಟುಕೊಂಡರಾಯಿತು.” ಎಂದಳು ಭಾಗ್ಯ.
“ಒಳ್ಳೆಯದೇ ಆಯಿತು, ಹಾ ! ನಾಳೆ ಬಸವ ಒಂದಿಬ್ಬರು ಸಹಾಯಕರನ್ನು ಕರೆದುಕೊಂಡು ಮನೆ ಸ್ವಚ್ಛ ಮಾಡಿಕೊಡುತ್ತೇನೆ ಅಂದರೆ ಅವನಿಗೆ ಕೆಲಸ ಒಪ್ಪಿಸುತ್ತೇನೆ. ಅಡುಗೆಮನೆ, ದೇವರಕೋಣೆ, ಊಟದ ಮನೆಗಳನ್ನು ನೀವೇ ಎಲ್ಲರೂ ಸೇರಿ ಸ್ವಚ್ಛಮಾಡಿ. ಆ ದಿನ ಹಾಕಿಕೊಳ್ಳುವ ಬಟ್ಟೆಬರೆಗಳನ್ನು ತೆಗೆದಿಟ್ಟುಕೊಳ್ಳಿ. ಭಾವನಾ ಆ ದಿನ ಬಂದವರ ನೀರು, ನಿಡಿ ಊಟ ಉಪಚಾರ, ಕುಂಕುಮ, ತಾಂಬೂಲ ಇವೆಲ್ಲ ಕೊಡುವ ಕಡೆ ಸ್ವಲ್ಪ ಗಮನ ಹರಿಸು. ಮಾವನಿಗೆ ಎಲ್ಲ ವ್ಯವಸ್ಥೆ ವಹಿಸುತ್ತೇನೆ. ಅವರು ತಮ್ಮ ಸಹಾಯಕರೊಂದಿಗೆ ಅದನ್ನು ನಿರ್ವಹಿಸುತ್ತಾರೆ. ಆದರೂ ಸ್ವಲ್ಪ ನಿಗಾ ವಹಿಸಮ್ಮ. ಮನೆಯಲ್ಲೇ ಮಾಡುವುದರಿಂದ ಆದಷ್ಟೂ ಲೋಪವಾಗದಂತೆ ಸಿದ್ಧತೆ ಮಾಡಿಕೊಳ್ಳೋಣ.” ಎಂದಳು ಲಕ್ಷ್ಮಿ. “ಅಮ್ಮಾ ನಾವೇನು ಮಾಡೋಣ?” ಚಿಕ್ಕವರಾದ ವೀಣಾ, ವಾಣಿ ಕೇಳಿದರು. ನೀವಿನ್ನೂ ಚಿಕ್ಕವರು. ಭಾವನಾ ಅಕ್ಕ ಹೇಳಿದಂತೆ ಕೇಳಿ” ಎಂದು ಅವರಿಬ್ಬರ ತಲೆ ಸವರಿ ಕೊಠಡಿಯಿಂದ ಹೊರ ನಡೆದಳು.
ನಾವುಗಳು ಅವರುಗಳ ಮನೆಗಳಿಗೆ ಹೋಗಿ ಬರುವಷ್ಟರಲ್ಲಿ ಸಂಜೆಯ ಅಡುಗೆಗೆ ತಡವಾಗಬಹುದು. ಮಕ್ಕಳಿಗೆ ಹೇಳಿ ಹೋಗಬೇಕು. ಮಾವನ ಮನೆಯಲ್ಲಿ ತೊಂದರೆಯಾಗುವುದಿಲ್ಲ. ತಿಂಗಳ ಹಿಂದೆ ಅಲ್ಲಿಗೆ ಹೋಗಿದ್ದಾಗ ಸೂಕ್ಷ್ಮವಾಗಿ ವಿಷಯ ತಿಳಿಸಿದ್ದೆ. ಆಯಿತು ಬಿಡು ನಮ್ಮ ಕೈಲಾದುದನ್ನೆಲ್ಲ ನಿನಗೆ ಮಾಡಿಕೊಡುತ್ತೇವೆ. ಯಾರೂ ಇಲ್ಲವೆಂದುಕೊಳ್ಳಬೇಡ. ಎಂದು ಭರವಸೆಯ ಮಾತನಾಡಿದ್ದರು. ಈಗ ಸಲಹೆ ಸಹಾಯ ಎಲ್ಲವೂ ಸಿಗಬಹುದೆಂಬ ನಿರೀಕ್ಷೆಯಿದೆ. ಆದರೆ ಭಟ್ಟರ ಚಿಕ್ಕಪ್ಪಂದಿರ ಮನೆಗಳಲ್ಲಿ ಯಾವರೀತಿಯ ಮಾತುಗಳು ಬರುತ್ತವೆಯೋ..ಅದರಲ್ಲೂ ಹಿರಿಯ ಚಿಕ್ಕಪ್ಪನ ಹೆಂಡತಿ ಚಿಕ್ಕಮ್ಮ ಅವರ ಮಗಳ ಮದುವೆ ಮಾಡುವಾಗಲೇ “ಶಂಭು ಮಕ್ಕಳನ್ನು ಹೀಗೆ ಸ್ಕೂಲಿಗೆ ಕಳಿಸ್ತಾ ಇರ್‍ತೀಯೋ ಅಥವಾ ಅವರುಗಳಿಗೆಲ್ಲ ಒಂದು ಗೂಡು ಕಟ್ಟಿಕೊಡುವ ಕಡೆ ಗಮನ ಹರಿಸುತ್ತೀಯೋ? ನಾಲ್ಕು ಜನ ಬಾಲೆಯರು. ಅವರಲ್ಲಿ ಇಬ್ಬರು ಆಗಲೇ ನೀರು ಹಾಕಿಕೊಂಡಿದ್ದಾರೆ. ಒಬ್ಬರನ್ನೂ ಇನ್ನೂ ದಾಟಿಸಿಲ್ಲ. ವರ್ಷಗಳು ಹೆಚ್ಚಾದಷ್ಟೂ ಬೇಡಿಕೆಗಳ ಪಟ್ಟಿ ಉದ್ದವಾಗುತ್ತೆ. ನೆನಪಿಟ್ಟಿಕೋ” ಎಂದು ಯೋಗ್ಯತೆಯನ್ನು ಹಳಿಯುವಂತೆ ಚುಚ್ಚಿ ಮಾತನಾಡಿದ್ದರು. “ಬರಿಯ ಅಂದಚಂದ ಉಪಯೋಗಕ್ಕೆ ಬರೋಲ್ಲ.” ಅಂತಾನೂ ಸೇರಿಸಿದ್ದರು. ಈಗ ಗಂಡಿನ ಕಡೆಯವರೇ ಕೇಳಿಕೊಂಡು ಬಂದಿದ್ದಾರೆಂಬ ಸಂಗತಿ ಏನಾದರೂ ಅವರ ಕಿವಿಗೆ ಬಿದ್ದರೆ ಮತ್ತೇನಾದರೂ ಹೊಸೆಯಬಹುದು. ಇವರಿಗೆ ಹೇಳಬೇಕು, ಅವರೇನೇ ಹೇಳಿದರೂ ತುಟಿಬಿಚ್ಚಬೇಡಿ ಅಂತ. ಹೀಗೆ ಯೋಚಿಸುತ್ತಾ ಅಡುಗೆಗೆ ತರಕಾರಿ, ಇತರೆ ಸಾಮಾನು ಸರಂಜಾಮುಗಳನ್ನು ಹೊಂದಿಸಿಟ್ಟಳು ಲಕ್ಷ್ಮಿ.
ತಾಯಿ ತಮ್ಮ ಕೋಣೆಯಿಂದ ಹೊರಗೆ ಹೋಗುತ್ತಿದ್ದಂತೆ “ಭವಾನಿ ಅಕ್ಕ, ಜೋಯಿಸರ ಮನೆಯವರು ಒಂದು ಸಾರಿಯೂ ನಮ್ಮ ಮನೆಗೆ ಭೇಟಿಕೊಡದೇ ಸೀದಾ ‘ಎಂಗೇಜ್‌ಮೆಂಟ್’ ಮಾಡಿಬಿಡಿ ಎಂದು ಹೇಳಿಕಳುಹಿಸಿದ್ದಾರೆ. ತಡಮಾಡಿದರೆ..”
ತಂಗಿಯ ಮಾತನ್ನು ಅರ್ಧದಲ್ಲೇ ತಡೆದ ಭಾಗ್ಯ “ ಆತುರ ಅವರೊಬ್ಬರಿಗೇನಲ್ಲ, ನಮ್ಮ ಹೆತ್ತವರೂ ಕಮ್ಮಿಯಿಲ್ಲ, ಪೈಪೋಟಿಗೆ ಬಿದ್ದವರಂತೆ ಅವರು ಹೇಳಿದ್ದಕ್ಕೆಲ್ಲ ತಾಳ ಹಾಕುತ್ತಿದ್ದಾರೆ. ಹೋಗಲಿ ಬಿಡು, ಸುಮ್ಮನೆ ದಾರದಂತೆ ಅತ್ತಲಿತ್ತ ಜಗ್ಗಾಡುವುದರ ಬದಲು ಅಧ್ಯಾಯ ಮುಗಿದು ಹೋಗಲಿ. ಹೆತ್ತವರಿಗೆ ಒಂದು ನೆಮ್ಮದಿ. ಅದು ಬಿಡು, ಆ ಬಸವನ ಸಿಬ್ಬಂದಿಯಿಂದ ಮನೆ ಕ್ಲೀನ್ ಮಾಡಿಸುತ್ತಾರಂತೆ. ಅವನು ನಂಬಿಕಸ್ತ ನಿಜ, ಕೆಲಸಾನೂ ಮಾಡ್ತಾನೆ, ಮಾಡಿಸುತ್ತಾನೆ. ಎಲ್ಲವೂ ಸರಿ ಆದರೆ ಶತ ಒರಟ. ವಸ್ತುಗಳ ಬೆಲೆ ಅವನ ಮೆದುಳಿಗೇ ಹೋಗುವುದಿಲ್ಲ. ಆದ್ದರಿಂದ ನಮ್ಮ ಪುಸ್ತಕಗಳು, ಬಟ್ಟೆಬರೆ ಇತ್ಯಾದಿಗಳನ್ನು ತೆಗೆದು ಊಟದ ಮನೆಯಲ್ಲಿಟ್ಟುಬಿಡೋಣ. ಅವರದ್ದೆಲ್ಲಾ ಸಾರಣೆ ಮುಗಿದಮೇಲೆ ಜೋಡಿಸಿಕೊಳ್ಳೋಣ. ಹೇಗಿದ್ದರೂ ಅಪ್ಪ, ಅಮ್ಮ ಹೊರಗೆ ಹೋಗಿಬರುವುದು ಲೇಟಾಗುತ್ತೆ. ಅಷ್ಟರಲ್ಲಿ ಈ ಕೆಲಸ ಮಾಡೋಣ. ಬಹುಶಃ ಅಡುಗೆ ಕೆಲಸವನ್ನೂ ನಮಗೇ ಹಚ್ಚಬಹುದು.” ಎಂದಳು ಭಾಗ್ಯ.
ಅಕ್ಕನ ಮಾತಿಗೆ ಹೆಚ್ಚು ವಾದಿಸಲು ಹೋಗದೇ ಭಾವನಾ ಬರಿಯ ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದಳು.
ಚಿಕ್ಕವರಿಬ್ಬರೂ ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ಅವರಿಬ್ಬರ ಮಾತುಗಳು ಮುಗಿಯುವುದನ್ನೇ ಕಾಯುತ್ತಿದ್ದರೇನೋ ಎಂಬಂತೆ “ಭಾವನಾ ಅಕ್ಕಾ, ಈಗ ನಿಕ್ಕಿ ಮಾಡುತ್ತಾರಲ್ಲಾ ಭಾಗ್ಯಕ್ಕನಿಗೆ ಅವತ್ತು ಹಾಕಿಕೊಳ್ಳಲು ಅಮ್ಮ ನಮಗೆ ಬಂಗಾರದ ಸರ, ಓಲೆ ಎಲ್ಲಾ ಕೊಡುತ್ತಾರಾ?” ಎಂದು ಕೇಳಿದರು.
ಅವರಿಬ್ಬರ ಮಾತುಗಳನ್ನು ಕೇಳಿದ ಭಾವನಾ “ಆಹಾ ಏನು ಆಸೆ ನೋಡು, ಚೋಟುದ್ದ ಇವೆ, ಕಿವಿಗೆ ಹಾಕಿರುವ ಚಿಕ್ಕ ಸ್ಟಾರ್‌ಗಳನ್ನೇ ಎರಡರೆಡು ಸಾರಿ ಕಳೆದುಕೊಂಡಿದ್ದೀರಿ, ನೇರುಪ್ಪಾಗಿ ಇಟ್ಟುಕೊಳ್ಳೋಕೆ ಬರಲ್ಲ. ಇಂಥವರಿಗೆ ಬಂಗಾರದ ಸರ, ಓಲೆ ಬೇಕಂತೆ.” ಎಂದು ಅವರಿಬ್ಬರ ತಲೆಮೇಲೆ ಮೊಟಕಿದಳು.
“ಬಿಡು ಭಾವನಾ ಪಾಪ, ಅವರನ್ನು ಏಕೆ ಗದರಿಸುತ್ತೀ, ನನ್ನ ಮುದ್ದು ತಂಗಿಯರಾ, ಬಂಗಾರ ತುಂಬ ದುಬಾರಿ ಕಣ್ರೇ, ಅಕಸ್ಮಾತ್ ಕಳೆದುಹೋದರೆ ಬೈಗುಳ. ಆದ್ದರಿಂದ ನಿಮ್ಮ ಹತ್ತಿರ ಇರುವ ಬಣ್ಣ ಬಣ್ಣದ ಸರ, ಬಳೆ, ಓಲೆ ಇವುಗಳನ್ನೇ ಹೊಂದಿಸಿಟ್ಟುಕೊಳ್ಳಿ. ಬಂಗಾರದ ಒಡವೆಗಳಿಗಿಂತ ಚಂದ ಕಾಣಿಸುತ್ತವೆ, ಕಳೆದುಹೋದರೂ ಭಯವಿಲ್ಲ;. ನಮ್ಮಷ್ಟು ದೊಡ್ಡವರಾದಾಗ ಅಮ್ಮನೇ ನಿಮಗೆ ಕೊಡುತ್ತಾರೆ.” ಎಂದು ಸಮಾಧಾನ ಮಾಡಿದಳು ಭಾಗ್ಯ.
“ಏನು ನಡೆಸಿದ್ದೀರಾ ಮಕ್ಕಳಾ?” ಎಂದು ಕೇಳುತ್ತಾ ಒಳಬಂದ ಅಪ್ಪನನ್ನು ನೋಡಿದ ಬಾಗ್ಯ , ಭಾವನಾ ಇಬ್ಬರೂ ಚಿಕ್ಕವರಿಗೆ ಕಣ್ಣುಸನ್ನೆಯಿಂದ ಸೂಚನೆಕೊಟ್ಟು “ಏನಿಲ್ಲ ಅಪ್ಪಾ, ಹೀಗೆ ಸುಮ್ಮನೆ ಮಾತನಾಡುತ್ತಿದ್ದೆವು.’ ಎಂದರು.
“ಹಾ ..ಅಮ್ಮ ಎಲ್ಲ ವಿಷಯ ಹೇಳಿರಬೇಕಲ್ಲಾ ಭಾಗ್ಯ, ನಾವುಗಳು ಹಿಂದಿರುಗಿ ಬರುವವರೆಗೆ ಮನೆಯ ಕಡೆ ಜಾಗ್ರತೆ. ಬಸವ ನಾವು ಬರುವುದರೊಳಗೆ ಬಂದರೆ ಹೊರಗೆ ಹೋಗಿದ್ದಾರೆ, ಸ್ವಲ್ಪ ಹೊತ್ತು ಬಿಟ್ಟುಬನ್ನಿ ಎಂದು ಹೇಳಮ್ಮಾ.” ಇನ್ನೇನೂ ಹೇಳಲು ತೋಚದೆ “ಲಕ್ಷ್ಮೀ ಏನು ಮಾಡುತ್ತಿದ್ದೀ? ತಯಾರಾದೆಯಾ? ನಾನು ಒಂದೈದು ನಿಮಿಷದಲ್ಲಿ ರೆಡಿಯಾಗಿಬಿಡುತ್ತೇನೆ” ಎಂದು ಹೇಳುತ್ತಾ ಮಕ್ಕಳ ಕೋಣೆಯಿಂದ ಹೊರ ನಡೆದರು.
“ವ್ಹಾರೆವ್ಹಾ ! ನಾನು ಹೋಗಿ ಎಬ್ಬಿಸದ ಹೊರತು ಏಳದ ಪತಿದೇವ ಎದ್ದು ನನ್ನನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಪರವಾಗಿಲ್ಲ ಜವಾಬ್ದಾರಿ ತಲೆಗೆ ಹೋಗುತ್ತಿರುವ ಲಕ್ಷಣ ಕಾಣುತ್ತಿದೆ.” ಎಂದು ಮನದಲ್ಲಿ ಅಂದುಕೊಂಡು ಇನ್ನು ಉತ್ತರ ಕೊಡದಿದ್ದರೆ ನನ್ನ ಹೆಸರು ಕೂಗುತ್ತಾ ಮನೆಯೆಲ್ಲಾ ಎಡತಾಕುತ್ತಾರೆಂದು “ಎದ್ದಿರಾ? ನಾನು ರೆಡಿಯಾಗಿದ್ದೇನೆ, ನೀವು ರೆಡಿಯಾಗಿ. ಕುಡಿಯಲಿಕ್ಕೇನಾದರೂ ಬೇಕೆ?” ಎಂದು ಕೇಳಿದಳು ಲಕ್ಷ್ಮಿ.
“ಬೇಡ ಲಕ್ಷ್ಮಿ” ಎನ್ನುತ್ತಾ ತಾವು ಸಿದ್ಧರಾಗಲು ತಮ್ಮ ಕೋಣೆಗೆ ಹೋದರು ಭಟ್ಟರು.
ಲಕ್ಷ್ಮಿಯ ಮಾವನ ಮನೆಗೆ ಹೋದಾಗ ಅಲ್ಲಿರುವ ಹಿರಿಯ ದಂಪತಿಗಳನ್ನು ನಮ್ಮ ಮನೆಗೆ ಕಳುಹಿಸಿಕೊಡಿ ಎಂದು ಕೇಳಬೇಕು. ನಿಶ್ಚಿತಾರ್ಥಕ್ಕೆ ಬಂದವರನ್ನು ಮದುವೆ ಪೂರ್ಣವಾಗುವವರೆಗೆ ತಮ್ಮಲ್ಲಿಯೇ ಇರಿಸಿಕೊಳ್ಳುತ್ತೇವೆ. ನಾವುಗಳು ಅತ್ತಲಿತ್ತ ಕೆಲಸಕ್ಕಾಗಿ , ಕರೆಯಲಿಕ್ಕಾಗಿ ಹೋದಾಗ ಮನೆಯಲ್ಲಿ ಬರಿಯ ಹುಡುಗಿಯರೇ ಇರುತ್ತಾರೆ. ಅದಕ್ಕಾಗಿ ಅವರನ್ನು ಒಪ್ಪಿಸಬೇಕೆಂದು ಮನದಲ್ಲಿ ಅಂದುಕೊಂಡಳು. ಅಷ್ಟರಲ್ಲಿ ಭಟ್ಟರು ತಯಾರಾಗಿ ಬಂದುದನ್ನು ನೋಡಿದಳು. ಭಾಗ್ಯ ಊಹಿಸಿದಂತೆ ರಾತ್ರಿಯ ಅಡುಗೆಯ ಜವಾಬ್ದಾರಿ ಅವಳಿಗೇ ವಹಿಸಿ ಮತ್ತೊಮ್ಮೆ ಮನೆಯ ಕಡೆ ಎಚ್ಚರಿಕೆ ಹೇಳಿ ಗಂಡನೊಡನೆ ಮನೆಯಿಂದ ಹೊರ ನಡೆದಳು ಲಕ್ಷ್ಮಿ.
ಅಪ್ಪ. ಅಮ್ಮರನ್ನು ಕಳುಹಿಸಿ ಮನೆ ಬಾಗಿಲು ಭದ್ರಪಡಿಸಿದಳು ಭಾಗ್ಯ. ಈ ಮೊದಲು ಯೋಚಿಸಿದಂತೆ ಸೋದರಿಯರ ನೆರವಿನಿಂದ ಪುಸ್ತಕಗಳು, ಬಟ್ಟೆಬರೆ ಇಟ್ಟಿದ್ದ ಪೆಟ್ಟಿಗೆಗಳು, ಇತರೆ ಸಾಮಾನುಗಳನ್ನು ಜತನವಾಗಿ ತಂದು ಊಟದ ಮನೆಯ ಚಜ್ಜಾ ಖಾಲಿಯಾಗಿದ್ದ ಗೂಡುಗಳಲ್ಲಿ ಇಡಿಸಿದಳು.
ಇತ್ತ ಭಟ್ಟರು ತಮ್ಮ ಹೆಂಡತಿ ಲಕ್ಷ್ಮಿಯೊಡಗೂಡಿ ಚಿಕ್ಕಪ್ಪನ ಮನೆ ತಲುಪಿದರು. ಇಬ್ಬರೂ ಚಿಕ್ಕಪ್ಪಂದಿರು ಅಕ್ಕಪಕ್ಕದಲ್ಲೇ ಇದ್ದುದರಿಂದ ಇಬ್ಬರ ಮನೆಗೆ ಹೋಗಲು ಒಂದೇ ದಾರಿ. ಅವರಿಬ್ಬರ ಬಾಳಸಂಗಾತಿಗಳು ಒಬ್ಬರಿಗಿಂತ ಒಬ್ಬರು ಬಾಯಿಮಾತಿನ ಉಪಚಾರ ಮಾಡುವುದರಲ್ಲಿ ಸಿದ್ಧಹಸ್ತರು. ಅದರಲ್ಲೂ ಭಟ್ಟರ ಹಿರಿ ಚಿಕ್ಕಪ್ಪನ ಮಡದಿ ವ್ಯಂಗ್ಯ ಬೆರೆಸಿ ಮಾತನಾಡುವುದರಲ್ಲಿ ಎತ್ತಿದಕೈ. ಈಗ ನಾವು ಹೇಳುವ ವಿಷಯಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೋ.. ಲಕ್ಷ್ಮಿ ಹೇಳಿದಂತೆ ಅವರು ಏನೇ ಹೇಳಿದರೂ ತುಟಿಬಿಚ್ಚದಂತೆ ನಮ್ಮ ಮನೆಯಲ್ಲಿ ನಡೆಸುವ ಕಾರ್ಯಕ್ಕೆ ಆದಷ್ಟೂ ವಿನಯವಾಗಿ ಆಮಂತ್ರಿಸುವುದು ಎಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡೇ ಬಾಗಿಲು ಬಡಿದರು. ಯಾರೂ..ಎಂಬ ಸೊಲ್ಲು ಒಳಗಿನಿಂದ ಬಂದಿತೇ ವಿನಃ ಬಾಗಿಲು ತೆರೆಯಲಿಲ್ಲ. ಆದರೆ ಪಕ್ಕದಲ್ಲೇ ಇದ್ದ ಇನ್ನೊಬ್ಬ ಚಿಕ್ಕಪ್ಪನ ಮನೆ ಬಾಗಿಲು ತೆರೆಯಿತು.
“ಓ ! ಭಟ್ಟ, ಲಕ್ಷ್ಮೀ ಇದೇನು ಈ ಉರಿಬಿಸಿಲಿನಲ್ಲಿ ಛೇ..ಅಲ್ಲ ವಾತಾವರಣ ತಂಪಾಗಲು ಎರಡು ಗಂಟೆ ಮುಂಚಿತವಾಗಿ ಆಗಮನ? ಅದೂ ಹೆಂಡತಿಯ ಸಮೇತ. ಪಾಪ ಅವಸರದಲ್ಲಿ ಮನೆಬಾಗಿಲಿಗೆ ಬೀಗ ಹಾಕಿರುವುದೂ ಕಾಣಿಸಲಿಲ್ಲ ಅನ್ನಿಸುತ್ತೆ. ಬನ್ನಿ, ಅಣ್ಣ ತಮ್ಮಂದಿರಿಬ್ಬರೂ ಕೆಲಸದ ಮೇಲೆ ಪಕ್ಕದೂರಿಗೆ ಹೋಗಿದ್ದಾರೆಂದು ಹೇಳಿದರು ಭಟ್ಟರ ಹಿರಿಯ ಚಿಕ್ಕಮ್ಮ ಕಮಲಮ್ಮನವರು.
“ಅಲ್ಲಾ ಮನೆಯೊಳಗಿಂದ ಯಾರೂ ಎನ್ನುವ ಕೂಗು..”
ಭಟ್ಟರ ಮಾತಿನ್ನೂ ಮುಗಿದೇ ಇರಲಿಲ್ಲ. “ಅಯ್ಯೋ ಒಂದೇ ಗೋಡೆ, ಬಾಗಿಲು ಎರಡು. ಎಲ್ಲಿಂದ ಹೇಳಿದರೂ”
“ಹೋಗಲಿ ಬಿಡಿ ಅತ್ತೆ, ಗೊತ್ತಾಗಲಿಲ್ಲ.” ಎಂದಳು ಲಕ್ಷ್ಮಿ.
‘ಓಹೋ..ಗಂಡನ ಪರವಾಗಿ ಮಾತಾಡೋದು ನೋಡು” ಎಂದಳು. “ಹೋಗಲಿ ಬಿಡಕ್ಕಾ ಪಾಪ ಹೊರಗೇ ನಿಲ್ಲಿಸಿ ಏನು ಮಾತು. ಮನೆಯೊಳಕ್ಕೆ ಬರಲಿ ಬಿಡು.” ಎಂದವಳು ಕಿರಿಯ ಚಿಕ್ಕಮ್ಮ ಸರೋಜಮ್ಮ. ಅವಳ ಕಡೆ ಕೃತಜ್ಞತೆಯಿಂದ ನೋಡಿದ ಲಕ್ಷ್ಮಿ ಭಟ್ಟರ ಕಡೆ ತಿರುಗುತ್ತಾ ಒಳಗೆ ಹೋಗಲು ಸನ್ನೆ ಮಾಡಿದಳು.
“ಹೂಂ..ಅದೂ ಸರೀನೇ ಬನ್ನಿ.,” ಎಂದು ಹೇಳುತ್ತಾ ಒಳಗೆ ಅಡಿಯಿಟ್ಟರು ಭಟ್ಟರ ಚಿಕ್ಕಮ್ಮ ಕಮಲಮ್ಮ.
ವೆರಾಂಡಾ ದಾಟಿ ಹಾಲಿಗೆ ಕಾಲಿಟ್ಟ ಲಕ್ಷ್ಮಿ ಹಾಗೇ ದಿಟ್ಟಿಸಿದಳು. ಎದುರು ಬದುರಾಗಿ ಮಂದಲಗಿ ಹಾಸಿತ್ತು. ದಿಂಬುಗಳು ಇದ್ದವು. ಒಹೋ ಓರಗಿತ್ತಿಯರಿಬ್ಬರೂ ಊಟ ಮುಗಿಸಿ ಪವಡಿಸಿದ್ದರೆಂದು ಕಾಣಿಸಿತು. ಪುಣ್ಯವಂತರು. ಇರುವ ಇಬ್ಬಿಬ್ಬರು ಮಕ್ಕಳಲ್ಲಿ ಹೆಣ್ಣುಮಕ್ಕಳ ಜವಾಬ್ದಾರಿ ಮುಗಿಸಿದ್ದಾರೆ. ಗಂಡುಮಕ್ಕಳು ಸಂಸಾರವಂದಿಗರಾಗಿದ್ದಾರೆ. ಆದರೂ ಅವರ ಕೈಹಿಡಿದ ಹೆಣ್ಣುಮಕ್ಕಳು ಅತ್ತೆಯರ ಗುಣಗಳನ್ನು ಬಹಳ ಬೇಗ ಅರಿತು ಜಮೀನಿನ ಉಸ್ತುವಾರಿಕೆಯ ನೆಪವೊಡ್ಡಿ ಅಲ್ಲಿಯೇ ಸಮೀಪದಲ್ಲಿ ತಮ್ಮತಮ್ಮ ನಿವಾಸಗಳನ್ನು ಹೂಡಿದ್ದಾರೆ. ಇಲ್ಲಿಯ ಒಡನಾಟವೂ ಇದೆ. ತಮ್ಮ ಇಚ್ಛೆಯಂತೆ ಬದುಕನ್ನೂ ನಡೆಸುತ್ತಿದ್ದಾರೆ. ಆದಷ್ಟು ಬೇಗ ವಿಷಯ ತಿಳಿಸಿ ಹೊರಟು ಬಿಡುವುದು ಸೂಕ್ತ. ಮಾವಂದಿರಿದ್ದರೆ ಒಳ್ಳೆಯದಿತ್ತು. ಇವರುಗಳ ಹಾಗೆ ಬಾಯಿಮಾತಿನಲ್ಲಿ ಉಚಾಯಿಸಿ ಮಾತನಾಡುವವರಲ್ಲ. ನಮ್ಮ ಗ್ರಹಚಾರ ಎಂದುಕೊಂಡು ಭಟ್ಟರ ಕಡೆ ನೋಡಿದಳು. ಅವರು ಏನು ಮಾಡಬೇಕು, ಎಲ್ಲಿ ಕೊಡಬೇಕು ತಿಳಿಯದೆ ಅತ್ತಿತ್ತ ನೋಡುತ್ತಾ ನಿಂತಿದ್ದರು.
“ಅಲ್ಲಿದ್ದ ದಿಂಬುಗಳನ್ನು ಎತ್ತಿ ಕೈಲಿಹಿಡಿದು “ಬನ್ನಿ. ಕುಳಿತುಕೊಳ್ಳಿ” ಎಂದರು ಹಿರಿಯ ಚಿಕ್ಕಮ್ಮ. ಅವರು ಅಷ್ಟು ಹೆಳಿದ್ದೇ ತಡ ಪಟ್ಟನೆ ಮಂದಲಿಗೆಯ ಮೇಲೆ ಆಸೀನರಾದರು. ಕೈಯಲ್ಲಿದ್ದ ದಿಂಬುಗಳನ್ನು ಅಲ್ಲಿಯೇ ಇದ್ದ ಸ್ಟೂಲಿನ ಮೇಲಿಟ್ಟು ಮತ್ತೊಂದು ಮಂದಲಿಗೆಯ ಮೇಲೆ ಇಬ್ಬರೂ ಓರಗಿತ್ತಿಯರು ಕುಳಿತರು. ಒಂದೆರಡು ನಿಮಿಷ ಯಾರೂ ಮಾತನಾಡಲೇ ಇಲ್ಲ.
ಆಗ ಲಕ್ಷ್ಮಿಯೇ “ಅತ್ತೇ, ನೀವು ಯಾವಾಗಲೂ ಹೇಳುತ್ತಿದ್ದರಲ್ಲಾ ಹೆಣ್ಣುಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಬೇಕೆಂದು, ಹೋದ ವರ್ಷವೂ ನಿಮ್ಮ ಮಗಳ ಮದುವೆಯ ಸಂದರ್ಭದಲ್ಲೂ ಹೇಳಿದ್ದಿರಿ, ಅದಕ್ಕೇ ಈ ವರ್ಷ ನನ್ನ ದೊಡ್ಡ ಮಗಳು ಭಾಗ್ಯಳ ಮದುವೆ ಮಾಡಿ ಮುಗಿಸೋಣವೆಂದು ನಿರ್ಧರಿಸಿಕೊಂಡೆವು.” ಎಂದಳು.
“ಹೌದಾ ! ಪರವಾಗಿಲ್ಲವೇ? ನನ್ನ ಮಾತಿಗೆ ಬೆಲೆ ಕೊಟ್ಟಿದ್ದೀರ ಅಂದ ಹಾಗಾಯ್ತು. ಈಗೇನು ಎಲ್ಲಾದರೂ ಸಂಬಂಧ ನೋಡುತ್ತಿದ್ದೀರೇನು?” ಎಂದು ಕೇಳಿದರು ಕಮಲಮ್ಮ.
“ಒಂದು ಸಂಬಂಧ ಬಂದು ಒಪ್ಪಂದ ಭಾನುವಾರ ಅಂತ ಪಕ್ಕಾ ಆಗಿದೆ. ಅದಕ್ಕೇ ನೀವೆಲ್ಲಾ ತಪ್ಪದೆ ಬಂದು ಶುಭಕಾರ್ಯವನ್ನು ನಡೆಸಿ ಮಕ್ಕಳಿಗೆ ಆಶೀರ್ವಾದ ಮಾಡಬೇಕು.” ಎಂದು ಬಡಬಡನೆ ಹೇಳಿ ಅಲ್ವಾ ಲಕ್ಷ್ಮೀ” ಎಂದರು ಭಟ್ಟರು.
“ವಾವ್ ! ಮಾತುಕತೆಯೆಲ್ಲಾ ಆಗಿ ಪಕ್ಕಾ ಆದಮೇಲೆ ಇಲ್ಲಿಗೆ ಆಗಮಿಸಿದ್ದಾರೆ ದಂಪತಿಗಳು, ನೋಡೇ ಸರೋಜಾ. ಮನೆಯಲ್ಲಂತೂ ಹಿರಿಯರೆಲ್ಲ ಹರಿಪಾದ ಸೇರಿಬಿಟ್ಟಿದ್ದಾರೆ. ಇವರೇ ಮನೆಗೆ ಯಜಮಾನರು. ಆದರೂ ಮನೆತನದ ಹಿರಿಯರು ಇದ್ದಾರೆಂಬುದು ನೆನಪೇ ಇವರುಗಳಿಗಿಲ್ಲ. . ಹೂಂ ಆಯಿತು, ಯಾರ ಮನೆಯ ಹುಡುಗ? ಊರ್‍ಯಾವುದು? ಏನು ಮಾಡಿಕೊಂಡಿದ್ದಾನೆ? ಕೊಡೋದು, ಬಿಡೋದೇನು?” ಎಂದು ಕೇಳಿದರು ಕಮಲಮ್ಮ.
ಅವರ ಪ್ರಶ್ನೆಗಳಿಗೆಲ್ಲ ಲಕ್ಷ್ಮಿಯೇ ಸಂಕ್ಷಿಪ್ತವಾಗಿ ಉತ್ತರಿಸಿ “ಖಂಡಿತಾ ಬರಬೇಕು ಅತ್ತೆ. ಮಾವಂದಿರು, ಮಕ್ಕಳಿಗೂ ದಯವಿಟ್ಟು ಹೇಳಿ.” ಎಂದಳು.
“ಓ ! ಆ ಜೋಯಿಸರ ಮನೇನಾ ! ಅತಿಯಾದ ಮಡಿಹುಡಿ, ಒಬ್ಬನೇ ಮಗ. ಹೆತ್ತವರು ಹಾಕಿದ ಗೆರೆ ದಾಟೋಲ್ಲಾಂತ ಕೇಳಿದ್ದೀನಿ. ಏನೋಪ್ಪ ಅವರುಗಳೇ ಕೇಳಿಕೊಂಡು ಬಂದಿದ್ದಾರೆಂದರೆ ಏನೋ..ಎಂತೋ.. ಅಲ್ಲದೆ ನಾಲ್ಕು ಹೆಣ್ಣುಮಕ್ಕಳು ಎಲ್ಲವನ್ನೂ ನೋಡ್ತಾ ಕುಂತರೆ ಆಗುತ್ತಾ, ಆಯಿತು ಬಿಡಿ. ಕಾಫಿ? ನಿಮಗೆ ಅಭ್ಯಾಸವಿಲ್ಲ. ಏನಾದರೂ ತಿಂಡಿ ಮಾಡಲೇ? ಎಂದರು. ಕುಳಿತಲ್ಲೇ ಕುಳಿತರು ಕಮಲಮ್ಮ.
“ಬೇಡಿ ಅತ್ತೆ, ನಾವಿನ್ನೂ ನನ್ನ ಸೋದರ ಮಾವನ ಮನೆಗೆ ಹೋಗಬೇಕು. ಸಂಜೆಯಾಗಿಬಿಡುತ್ತೆ. ಬರುತ್ತೇವೆಂದು ಎದ್ದಳು ಲಕ್ಷ್ಮಿ. ಭಟ್ಟರು ಮತ್ತೊಮ್ಮೆ ಹೇಳಿದ್ದನ್ನೇ ಹೇಳಿ ತಾವೂ ಎದ್ದರು.
“ಅಯ್ಯೋ ಬರುವುದೇ ಅಪರೂಪ, ಕುದುರೆಮೇಲೆ ಬಂದವರಂತೆ ಬಂದಿದ್ದೀರಾ. ಸರೋಜಾ ಕುಂಕುಮ ಕೊಡಮ್ಮಾ” ಎಂದರು ಹಿರಿಯ ಚಿಕ್ಕಮ್ಮ ಕಮಲಮ್ಮನವರು.
ಅಕ್ಕ ಹೇಳಿದ್ದನ್ನು ಶಿರಸಾ ವಹಿಸಿ ಪಾಲಿಸುವಂತೆ “ಇವತ್ತೇ ವೀಳ್ಯದೆಲೆ ಇಲ್ಲ ನೋಡು ಲಕ್ಷ್ಮಿ” ಎಂದೆನ್ನುತ್ತಾ ಬರಿ ಕುಂಕುಮವಿತ್ತರು. ಅವರಿಂದ ಬೀಳ್ಕೊಂಡು ದಂಪತಿಗಳು ಕಾಲುದಾರಿ ಹಿಡಿದು ಲಕ್ಷ್ಮಿಯ ಮಾವನ ಮನೆಯ ಕಡೆ ನಡೆದರು. “ನಮ್ಮ ದೊಡ್ಡ ಚಿಕ್ಕಮ್ಮನ ಮಾತುಗಳು ಬೇಸರ ತಂದಿತೇ ಲಕ್ಷ್ಮೀ, ಅಲ್ಲಾ ಅಜ್ಜಿ, ತಾತ, ಅಪ್ಪ, ಅಮ್ಮ ಹೋದಮೇಲೆ ನಮ್ಮನೆ ಕಡೆಗೆ ತಲೇನೇ ಹಾಕುತ್ತಿಲ್ಲ. ಅಲ್ಲದೆ ಹಿರಿಯರ ವಾರ್ಷಿಕಕಾರ್ಯವನ್ನು ಮಠಕ್ಕೆ ಒಪ್ಪಿಸಿದ್ದೇನೆಂಬ ಆಕ್ಷೇಪಣೆ ಬೇರೆ ಮಾಡಿದ್ದರು. ಅದಕ್ಕೂ ಬಂದರೆ ಬಂದರು, ಬಿಟ್ಟರೆ ಬಿಟ್ಟರು. ಹೀಗಿದ್ದೂ ಈಗ ಹಿರಿಯರು ನಾವಿದ್ದೇವೆಂದು ತೋರಿಸಿ ತಪ್ಪು ಎಣಿಸುತ್ತಿದ್ದಾರೆ. ತಮ್ಮ ಮಗಳ ಮದುವೆ ನಿಶ್ಚಿತಾರ್ಥಕ್ಕೆ ಇದ್ದಬದ್ದವರನ್ನೆಲ್ಲ ಕರೆದು ಬಂದವರಿಗೆ ನಾವುಗಳು ಕಾಣಿಸಲೇ ಇಲ್ಲ. ಕೊನೆಯಲ್ಲಿ ಮದುವೆಯ ಶಾಸ್ತ್ರ ಸಂಬಂಧಗಳಿಗೆ ಸಹಾಯಕ್ಕೆ ಸೈ ಎಂದು ಬಡಿವಾರ ಮಾಡಿಕೊಂಡು ಬಂದು ಆಹ್ವಾನಿಸಿದರು. ಇಷ್ಟೆಲ್ಲ ತಮ್ಮಲ್ಲಿ ತಪ್ಪಿಟ್ಟುಕೊಂಡು ನಮ್ಮನ್ನು ಹಂಗಿಸಿ ಚುಚ್ಚುಮಾತನಾಡುತ್ತಾರೆ. ಛೇ.. ನಮ್ಮವರಿಂದ ನಿನಗೆ ಸಹಾಯವಾಗದಿದ್ದರೂ ನೋವು ಉಂಟು ಮಾಡುವುದರಲ್ಲಿ ಗಟ್ಟಿಗರು” ಎಂದು ನೊಂದು ನುಡಿದರು ಭಟ್ಟರು.
“ಬಿಡಿ.. ಅವರನ್ನು ನಾನಿವತ್ತು ನೋಡುತ್ತಿದ್ದೀನಾ. ಸದ್ಯ ನನ್ನ ಮಾತಿಗೆ ಬೆಲೆಕೊಟ್ಟು ನೀವು ಮೌನವಹಿಸಿದರಲ್ಲಾ ಅಷ್ಟು ಸಾಕು.” ಎಂದಳು ಲಕ್ಷ್ಮಿ. ಹೀಗೇ ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಳ್ಳುತ್ತಾ ಲಕ್ಷ್ಮಿಯ ಮಾವ ರಾಮಣ್ಣನವರ ಮನೆ ತಲುಪಿಯೇ ಬಿಟ್ಟರು.
ಮನೆಯ ಬಾಗಿಲಲ್ಲೇ ಯಾರೊಡನೆಯೋ ಮಾತನಾಡುತ್ತ ನಿಂತಿದ್ದ ರಾಮಣ್ಣ ಇವರಿಬ್ಬರನ್ನು ನೋಡಿ “ಲೇ.. ರತ್ನಾ ಬಾಯಿಲ್ಲಿ, ಯಾರು ಬಂದಿದ್ದಾರೆ ನೋಡೆಂದು ಕೂಗಿ ಹೇಳುತ್ತಾ ಮಾತನಾಡುತ್ತಿದ್ದವರ ಹತ್ತಿರ ಮಾತು ಮುಗಿಸಿದವರೇ ಇವರಿಬ್ಬರನ್ನೂ ಮನೆಯೊಳಕ್ಕೆ ಆಹ್ವಾನಿಸಿದರು. ಅಷ್ಟರಲ್ಲಿ ಗಂಡನ ಕರೆಗೆ ಸ್ಫಂದಿಸಿದ ರಾಮಣ್ಣನವರ ಹೆಂಡತಿ ರತ್ನಮ್ಮ ತನ್ನವರ ಸೋದರ ಸೊಸೆ ಲಕ್ಷ್ಮಿ, ಅವಳ ಗಂಡನನ್ನು ಸಂತಸದಿಂದ “ಬನ್ನಿ ಬನ್ನಿ” ಎಂದು ಆತ್ಮೀಯವಾಗಿ ಬರಮಾಡಿಕೊಂಡವರು.
ಹಾಲಿನಲ್ಲಿ ಹಾಸಿದ್ದ ಜಮಖಾನದ ಮೇಲೆ ದಂಪತಿಗಲನ್ನು ಕೂಡಿಸಿ ತಾವು ಅವರಿಗೆದುರಾಗಿ ಕುಳಿತರು ರಾಮಣ್ಣ ದಂಪತಿಗಳು.
“ಏನು ಮಾವ ಮನೆಯಲ್ಲೇ ಇದ್ದೀರಾ? ಇವತ್ತೇನು ಯಾವುದೂ ಆರ್ಡರ್ ಇರಲಿಲ್ಲವೇ. ಮಾಧು, ಅವನ ಹೆಂಡತಿ ಮಕ್ಕಳು ಯಾರೂ ಕಾಣುತ್ತಿಲ್ಲವಲ್ಲ” ಎಂದು ಕೇಳಿದಳು ಲಕ್ಷ್ಮಿ.
“ನಾಳೆಗೆ ಒಂದು ಆರ್ಡರ್ ಇದೆ. ಅದಕ್ಕೆ ಸ್ವಲ್ಪ ತಯಾರಿ ಮಾಡಿಕೊಳ್ಳುವುದಿತ್ತು. ಇಷ್ಟೊತ್ತೂ ಅದೇ ಕೆಲಸದಲ್ಲಿದ್ದೆ. ಮಾಧು, ಹೆಂಡತಿ ಮಕ್ಕಳ ಜೊತೆ ಧರ್ಮಸ್ಥಳಕ್ಕೆ ಹೋಗಿದ್ದಾನೆ. ನಾಳಿದ್ದು ಬರುತ್ತಾನೆ. ಏನು ವಿಷಯ ಜೋಡಿಯಾಗಿ ಬಂದು ಬಿಟ್ಟಿದ್ದೀರಲ್ಲಾ.” ಎಂದು ಕೇಳಿದರು ರಾಮಣ್ಣ.
“ಹೂ ಮಾವ, ನಾನು ಹೇಳಿದ್ದೆನಲ್ಲಾ ಗಂಡಿನ ವಿಷಯ” ಎಂದಳು ಲಕ್ಷ್ಮಿ.
“ಒಹೋ ಅದೇ ಜೋಯಿಸರ ಮಗ ! ನೆನಪಿದೆ ಹೇಳು. ಏನಾಯಿತು?” ಎಂದರು ರಾಮಣ್ಣ.
“ಎಲ್ಲಾ ಮಾತುಕತೆ ನಡೆದು ಮುಂದಿನ ಭಾನುವಾರ ನಿಶ್ಚಿತಾರ್ಥ ಮಾಡಿಬಿಡಿ ಎಂದು ಹೇಳಿದ್ದಾರೆ. ಅದಕ್ಕೆ ಕರೆಯಲು ಬಂದೆವು.” ಎಂದರು ಭಟ್ಟರು.
“ಅದೊಂದೇ ಅಲ್ಲ ಮಾವ, ಆ ದಿನದ ತಿಂಡಿ, ಊಟದ ವ್ಯವಸ್ಥೆ ಎಲ್ಲವನ್ನೂ ನೀವೇ ಮಾಡಿಕೊಡಬೇಕು. ನನಗಾದರೂ ಯಾರಿದ್ದಾರೆ. ನೀವುಗಳೇ ಮುಂದೆನಿಂತು ಕಾರ್ಯಕ್ರಮ ನಡೆಸಿಕೊಡಬೇಕು” ಎಂದು ಕೇಳಿಕೊಂಡಳು ಲಕ್ಷ್ಮಿ.
“ಮಾಡೋಣ ಬಿಡು. ಒಳ್ಳೆಯ ಮನೆತನ, ಸಭ್ಯಜನರ ಹಾಗೆ ಕಾಣಿಸುತ್ತಾರೆ. ನಾನೂ ಒಂದೆರಡು ಸಾರಿ ಅವರ ಮನೆಯಲ್ಲಿ ನಡೆಸಿದ್ದ ಪೂಜಾಕಾರ್ಯಗಳಿಗೆ ಸಿಬ್ಬಂದಿ ಸಮೇತ ಹೋಗಿ ಅಡುಗೆ ಮಾಡಿಕೊಟ್ಟು ಬಂದಿದ್ದೇನೆ. ಆಚಾರ ವಿಚಾರ ಸ್ವಲ್ಪ ಜಾಸ್ತಿ. ನೀನೂ ಮಕ್ಕಳನ್ನು ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಬೆಳೆಸಿದ್ದೀಯೆ. ಊರೂ ದೂರವೇನಲ್ಲ. ಇಲ್ಲೇ ಮತ್ತೊಂದು ಬಡಾವಣೆ. ನೆನೆಸಿಕೊಂಡಾಗ ಹೋಗಿ ಬರಬಹುದು. ಎಷ್ಟು ಇನ ಬರುತ್ತಾರಂತೆ. ನಿಮ್ಮ ಕಡೆಯಿಂದ ಎಷ್ಟಾಗಬಹುದು? ಏನೇನು ಮಾಡಬೇಕು? ನೀವಿಬ್ಬರೂ ವಿಚಾರಮಾಡಿ ಪಟ್ಟಿ ಮಾಡಿಕೊಡಿ. ಅನುಕೂಲವಾಗುತ್ತದೆ.” ಎಂದರು ರಾಮಣ್ಣ.
“ಇಲ್ಲಿದೆ ಮಾವ, ನಾವಿಬ್ಬರೂ ಚರ್ಚೆಮಾಡಿ ನಮಗೆ ತಿಳಿದಂತೆ ಬರೆದು ತಂದಿದ್ದೇವೆ. ಸರಿಯಾಗಿದೆಯ ನೋಡಿ. ಇನ್ನೇನಾದರು ಬದಲಾವಣೆ ಅಗತ್ಯವಿದ್ದರೆ ಸೂಚಿಸಿ ಹೇಳಿ.” ಎಂದು ತಾವು ಬರೆದುಕೊಂಡು ಬಂದಿದ್ದ ಪಟ್ಟಿಯನ್ನು ರಾಮಣ್ಣನವರ ಕೈಯಿಗೆ ಕೊಟ್ಟಳು ಲಕ್ಷ್ಮಿ.
ಅದ್ಯಾವ ಪಟ್ಟಿಯೆಂದು ಭಟ್ಟರ ಮನದಲ್ಲಿ ಗಲಿಬಿಲಿ ಮೂಡಿದರೂ ಏನಿದ್ದರೂ ಆಮೇಲೆ ಹೇಳುತ್ತಾಳೆ ಬಿಡು. ನಾನು ಮಲಗಿದ್ದಾಗ ತಯಾರಿ ಮಾಡಿರಬೇಕು. ನಾನೀಗ ಬಾಯಿಬಿಡದಿರುವುದೇ ಲೇಸೆಂದುಕೊಂಡರು.
ಆಕೆ ಕೊಟ್ಟ ಪಟ್ಟಿಯ ಕಡೆ ಕಣ್ಣಾಡಿಸಿದ ಲಕ್ಷ್ಮಿಯ ಮಾವ ರಾಮಣ್ಣನಿಗೆ ತಮ್ಮ ಸೋದರ ಸೊಸೆಯ ಬುದ್ಧಿಮತ್ತೆಯ ಬಗ್ಗೆ ಹೆಮ್ಮೆಯೆನ್ನಿಸಿತು. ಬೆಳಗ್ಗೆ ತಿಂಡಿಗೆ ಇಡ್ಲಿ, ವಡೆ, ಚಟ್ಣಿ, ಸಾಂಬಾರು, ಕೇಸರಿಬಾತು, ಒಂದಿಪ್ಪತ್ತೈದು ಜನಕ್ಕೆ, ಮಧ್ಯಾನ್ಹ ಊಟಕ್ಕೆ ನಿಂಬೆಹಣ್ಣಿನ ಚಿತ್ರಾನ್ನ, ಹುರುಳಿಕಾಯಿ ಪಲ್ಯ, ಸೌತೆಕಾಯಿ ಪಚ್ಚಡಿ, ಹೆಸರುಬೇಳೆ ಕೋಸಂಬರಿ, ಕಾಯೊಬ್ಬಟ್ಟು, ಶ್ಯಾವಿಗೆ ಪಾಯಸ, ಅನ್ನ, ತಿಳಿಸಾರು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಆಲುಬೋಂಡ, ಮೊಸರು, ಮಜ್ಜಿಗೆ ಸುಮಾರು ಮೂವತ್ತರಿಂದ ನಲವತ್ತು ಜನಕ್ಕೆ ಎಂದಿತ್ತು. ಬಾಳೆಹಣ್ಣು, ಬೀಡ ಸೇರಿಸಲಾಗಿತ್ತು.
“ಸರೀನಾ ಮಾವ?” ಕಾತುರದಿಂದ ಕೇಳಿದಳು ಲಕ್ಷ್ಮಿ.
“ತಿಂಡಿಗೆ ಜನ ಸರಿ, ಒಂದಿಪ್ಪತ್ತೈದು ಎಂದರೆ ಮೂವತ್ತು ಜನರಿಗೆ ಅಡ್ಜಸ್ಟ್ ಮಾಡಬಹುದು. ಆದರೆ ಊಟಕ್ಕೆ ಇನ್ನೊಂದು ಹತ್ತು ಜನ ಸೇರಿಸಿದರೆ ಒಳ್ಳೆಯದು. ನಿಮ್ಮ ಮನೆ ಅಕ್ಕಪಕ್ಕದವರು, ಬಸವನ ಬಳಗ, ಇತ್ಯಾದಿ ಮಕ್ಕಳು ಸೇರಿದರೆ ಪರವಾಗಿಲ್ಲ. ಸ್ವಲ್ಪ ಹೆಚ್ಚೇ ಇರಲಿ ಅಂತ ನನ್ನ ಅಭಿಪ್ರಾಯ. ಏನಂತೀರಾ ಭಟ್ಟರೇ?” ಎಂದರು ರಾಮಣ್ಣ.
“ಆಯಿತು ಮಾವ, ನೀವು ಹೇಳಿದಂತೆಯೇ ಇರಲಿ. ಮಿಕ್ಕರೂ ಪರವಾಗಿಲ್ಲ. ಕಮ್ಮಿ ಆಗಬಾರದು. ಹಿಂದಿನ ದಿನವೇ ಮನೆಗೆ ಬಂದುಬಿಡಿ ಮಾವ, ಅತ್ತೆ, ಅಲ್ಲಿಯೇ ತಿಂಡಿ ಊಟ ಎಲ್ಲಾ ತಯಾರಿ ಮಾಡಿದರಾಯಿತು.” ಎಂದಳು ಲಕ್ಷ್ಮಿ.
“ಬೇಡ ಲಕ್ಷ್ಮೀ, ನಿನಗ್ಯಾಕೆ ತೊಂದರೆ. ಬೆಳಗ್ಗೆ ಅವರುಗಳು ಬರುವಷ್ಟರಲ್ಲಿ ನಾನು ತರುತ್ತೇನೆ ಯೋಚಿಸಬೇಡ. ಮನೆಯಲ್ಲಿ ಎಲ್ಲ ಅನುಕೂಲವಿದೆ. ಗಾಡಿಯಿದೆ. ಅಲ್ಲೆಲ್ಲ ಏಕೆ ಗದ್ದಲ., ಹೊಗೆ ಎಲ್ಲಾ.” ಎಂದರು ರಾಮಣ್ಣ.
“ಅವರು ಹೇಳುವುದರಲ್ಲೂ ಅರ್ಥವಿದೆ ಲಕ್ಷ್ಮಿ. ಹಾಗೇ ಮಾಡಲಿ ಬಿಡು. ಅದಕ್ಕೇನು ಬೇಕೋ ಏರ್ಪಾಡು ಮಾಡಿಕೊಳ್ಳಲಿ ಬಿಡು.” ಎಂದರು ಭಟ್ಟರು. “ಸರಿ ಹಾಗಾದರೆ..ಹಾ..ಇನ್ನೊಂದು ಮಾತು ಮಾವ, ದಯವಿಟ್ಟು ಇಲ್ಲ ಅನ್ನದೆ ನಡೆಸಿಕೊಡಿ.” ಎಂದಳು ಲಕ್ಷ್ಮಿ.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35145
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ಬ್ಯೂಟಿಫುಲ್. ಸೊಗಸಾಗಿದೆ ಕಾದಂಬರಿ.
ಬಹಳ ಚೆನ್ನಾಗಿ ಹರಿದು ಬರುತ್ತಿರುವ ಸಾಮಾಜಿಕ ಕಥಾನಕ ಮನಗೆದ್ದಿದೆ… ಧನ್ಯವಾದಗಳು, ನಾಗರತ್ನ ಮೇಡಂ.
ಧನ್ಯವಾದಗಳು ನಯನ ಮತ್ತು ಶಂಕರಿ ಮೇಡಂ