ಬೆಳಕು-ಬಳ್ಳಿ

ಸುರಿಯಲಿ ವರ್ಷಧಾರೆ

Share Button

ವಾರದಲ್ಲಿ ಎರಡು ಬಾರಿ ಬೀಡು ಬಿರುಸಾಗಿ ಸುರಿಯುತ್ತಿದ್ದ ಮಳೆ
ಈಗೀಗ  ಕಣ್ಮರೆಯಾಗಿದೆ
ಅಡ್ಡಾದಿಡ್ಡಿ ಬಂದು ಧರೆಯನ್ನು ತೊಯಿಸಿ ತೊಪ್ಪೆಯಾಗಿಸುವ ಹನಿಗಳಿಗಾಗಿ
ಮನ ಹಪಹಪಿಸಿದೆ

ಸುರಿದಷ್ಟು ತೀವ್ರತೆ ಪಡೆಯುತ್ತಿದ್ದ ವರ್ಷದ ವೇಗಕ್ಕಾಗಿ
ಬಳಲಿದ ಧರೆಯಿಂದು ಬಾಯಿ ತೆರೆದು ಕಾಯುತಿದೆ
ಬಿಸಿಲ ಬೇಗೆಗೆ ಬಿರುಕು ಮೂಡಿದ ಧರಣಿ
ಹರಿಯುವ ತಂಪನೆಯ ಹಳ್ಳ ತೊರೆಗಳಿಗಾಗಿ ಹಂಬಲಿಸಿದೆ

ಕರಿಮೋಡ ಸುತ್ತುಗಟ್ಟಿ ಶಿಷ್ಟಾಚಾರ ನಿಯಮಗಳ ಮರೆತು
ಸುಯ್ಯನೆ ಸುಳಿಗಾಳಿ ಎಬ್ಬಿಸಿ ಮುಖಕ್ಕೆ ರಾಚುವ ಇರಚಲಿಗಾಗಿ ಬಯಕೆ ಇಮ್ಮಡಿಯಾಗಿದೆ

ಕವಿಯುವ ಕಾರ್ಮೋಡಗಳ ಮಾರುತಗಳು ಹೊತ್ತೊಯ್ದವೋ
ಭುವಿಗಿಳಿಯುವ ಕಾವನ್ನು ಕಟ್ಟಡಗಳು ಕಸಿದುಕೊಂಡವೋ

ಬರುವಾಗ ಶನಿ ಮಳೆಯೆಂದು ಶಪಿಸಿದ ಮನಸ್ಸುಗಳು
ಕೋಲ್ಮಿಂಚು ಗುಡುಗಿನ ಸಪ್ಪಳಕೆ ಹಾತೊರೆಯುತಿವೆ

ವಟಗುಟ್ಟುವ ಮಂಡೂಕದ ಬಾಯೊಣಗಿ
ಸದ್ದೇ ಹೊರಡದಾಗಿದೆ ನೀರಿಲ್ಲದ ಕೊಳದಲ್ಲಿ
ಜಲಚರಗಳ ಬಲಿದಾನ ಮುಂದುವರೆದಿದೆ

ಜವರಾಯನ ಮೀಸೆ ಮುಕ್ಕಾಗಿಸಲು
ಎಲ್ಲೆಲ್ಲೂ ಹಸಿರ ತುಂಬಿಸಿ ನಗುವ ತುಂಬಲು

ಬಳಲಿ ಬೆಂಡಾದ ತನುಗಳಿಗೆ ಜೀವಧಾರೆ ಹರಿಸಲು
ನರ ನಾಡಿಗಳಲ್ಲೂ ಜೀವದ ಸಂಚಯನ ಮೂಡಿಸಲು

ಬಾ ಹೇ ಅಮೃತಧಾರೆಯೇ……ಎಮ್ಮ ಭಾಗ್ಯದ…..ಸೆಲೆಯೇ..

-ಕೆ.ಎಂ ಶರಣಬಸವೇಶ.

7 Comments on “ಸುರಿಯಲಿ ವರ್ಷಧಾರೆ

  1. ಜೀವಜಲವನ್ನು ಮನತುಂಬಿ ಕರೆಯುವ ಸೊಗಸಾದ ಕವನ.

  2. ಪ್ರಕೃತಿಯ ವೇಳಾಪಟ್ಟಿಯಲ್ಲಿ ಆದ ವ್ಯತ್ಯಾಸದಿಂದಾಗಿ ಉಂಟಾಗಿರುವ ನಿರಾಶೆಯನ್ನು ಕವಿತೆ ಪ್ರಭಾವಿತವಾಗಿ ಬಿಂಬಿಸಿದೆ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *