ಸುರಿಯಲಿ ವರ್ಷಧಾರೆ
ವಾರದಲ್ಲಿ ಎರಡು ಬಾರಿ ಬೀಡು ಬಿರುಸಾಗಿ ಸುರಿಯುತ್ತಿದ್ದ ಮಳೆ
ಈಗೀಗ ಕಣ್ಮರೆಯಾಗಿದೆ
ಅಡ್ಡಾದಿಡ್ಡಿ ಬಂದು ಧರೆಯನ್ನು ತೊಯಿಸಿ ತೊಪ್ಪೆಯಾಗಿಸುವ ಹನಿಗಳಿಗಾಗಿ
ಮನ ಹಪಹಪಿಸಿದೆ
ಸುರಿದಷ್ಟು ತೀವ್ರತೆ ಪಡೆಯುತ್ತಿದ್ದ ವರ್ಷದ ವೇಗಕ್ಕಾಗಿ
ಬಳಲಿದ ಧರೆಯಿಂದು ಬಾಯಿ ತೆರೆದು ಕಾಯುತಿದೆ
ಬಿಸಿಲ ಬೇಗೆಗೆ ಬಿರುಕು ಮೂಡಿದ ಧರಣಿ
ಹರಿಯುವ ತಂಪನೆಯ ಹಳ್ಳ ತೊರೆಗಳಿಗಾಗಿ ಹಂಬಲಿಸಿದೆ
ಕರಿಮೋಡ ಸುತ್ತುಗಟ್ಟಿ ಶಿಷ್ಟಾಚಾರ ನಿಯಮಗಳ ಮರೆತು
ಸುಯ್ಯನೆ ಸುಳಿಗಾಳಿ ಎಬ್ಬಿಸಿ ಮುಖಕ್ಕೆ ರಾಚುವ ಇರಚಲಿಗಾಗಿ ಬಯಕೆ ಇಮ್ಮಡಿಯಾಗಿದೆ
ಕವಿಯುವ ಕಾರ್ಮೋಡಗಳ ಮಾರುತಗಳು ಹೊತ್ತೊಯ್ದವೋ
ಭುವಿಗಿಳಿಯುವ ಕಾವನ್ನು ಕಟ್ಟಡಗಳು ಕಸಿದುಕೊಂಡವೋ
ಬರುವಾಗ ಶನಿ ಮಳೆಯೆಂದು ಶಪಿಸಿದ ಮನಸ್ಸುಗಳು
ಕೋಲ್ಮಿಂಚು ಗುಡುಗಿನ ಸಪ್ಪಳಕೆ ಹಾತೊರೆಯುತಿವೆ
ವಟಗುಟ್ಟುವ ಮಂಡೂಕದ ಬಾಯೊಣಗಿ
ಸದ್ದೇ ಹೊರಡದಾಗಿದೆ ನೀರಿಲ್ಲದ ಕೊಳದಲ್ಲಿ
ಜಲಚರಗಳ ಬಲಿದಾನ ಮುಂದುವರೆದಿದೆ
ಜವರಾಯನ ಮೀಸೆ ಮುಕ್ಕಾಗಿಸಲು
ಎಲ್ಲೆಲ್ಲೂ ಹಸಿರ ತುಂಬಿಸಿ ನಗುವ ತುಂಬಲು
ಬಳಲಿ ಬೆಂಡಾದ ತನುಗಳಿಗೆ ಜೀವಧಾರೆ ಹರಿಸಲು
ನರ ನಾಡಿಗಳಲ್ಲೂ ಜೀವದ ಸಂಚಯನ ಮೂಡಿಸಲು
ಬಾ ಹೇ ಅಮೃತಧಾರೆಯೇ……ಎಮ್ಮ ಭಾಗ್ಯದ…..ಸೆಲೆಯೇ..
-ಕೆ.ಎಂ ಶರಣಬಸವೇಶ.
ಸುಂದರ ಕವನ
ಧನ್ಯವಾದಗಳು ನಯನ ಬಜಕೂಡ್ಲು ಹಾಗೂ ನಾಗರತ್ನ ಮೇಡಂ
ಮಳೆಗೆ ಆಹ್ವಾನವನ್ನು ಕವಿತೆಯ ಮೂಲಕ ಉಣಬಡಿಸಿರುವ ನಿಮಗೆ ಧನ್ಯವಾದಗಳು ಸಾರ್
ಧನ್ಯವಾದಗಳು ಮೇಡಂ
ಜೀವಜಲವನ್ನು ಮನತುಂಬಿ ಕರೆಯುವ ಸೊಗಸಾದ ಕವನ.
ಚಂದದ ಕವನ
ಪ್ರಕೃತಿಯ ವೇಳಾಪಟ್ಟಿಯಲ್ಲಿ ಆದ ವ್ಯತ್ಯಾಸದಿಂದಾಗಿ ಉಂಟಾಗಿರುವ ನಿರಾಶೆಯನ್ನು ಕವಿತೆ ಪ್ರಭಾವಿತವಾಗಿ ಬಿಂಬಿಸಿದೆ