ಸುಖ ವಿಲ್ಲಾ

Share Button

ಇಲ್ಲಿರುವ ಎಲ್ಲಾ ಮನೆಗಳೇ
ಆದರೆ ಹಾಗೆನ್ನುವ ಹಾಗಿಲ್ಲ , ಇದೆಲ್ಲ ವಿಲ್ಲಾ.
ಹೊರಗಿನಿಂದ ಕಾಣುತಿವೆ
ಒಂದೇ ಬಗೆಯ ಮುಖದವೆಲ್ಲಾ
ಸಾಲಾಗಿ ನಿಂತಿವೆ ತಳೆದು
ಒಂದೇ ಬಣ್ಣದಲ್ಲೆಲ್ಲಾ

ಸುತ್ತೆಲ್ಲಾ ತಡೆಗೋಡೆ
ಮಧ್ಯೆ ಮುಖ್ಯದ್ವಾರ
ಒಳಗೆ ಹೋಗುವ ಹಾಗಿಲ್ಲ
ಹಾಗೆಯೇ ಎಲ್ಲಾ,
ತಡೆಯುವನವ ಕಾವಲುಗಾರ
ಮುಂಚಿತವಾಗಿ ತಿಳಿಸಬೇಕು
ಅಲ್ಲಿನ ಭೇಟಿಯ ಸಮಾಚಾರ

ಒಳಗೇನಿಲ್ಲ ಹೇಳಿ ?
ಆಟದ ಮೈದಾನ,
ಈಜುಕೊಳ,ಮರ, ಗಿಡಗಳಿಂದ ತುಂಬಿದ ಉದ್ಯಾನವನ
ಸಾವಕಾಶ, ಸಾವಧಾನವೇ
ಇಲ್ಲಿ ಪ್ರಧಾನ

ವಿಲ್ಲಾದೊಳಗೆಲ್ಲ ವ್ಯವಸ್ಥಿತ
ವಾತಾವರಣ
ಎಲ್ಲವನ್ನೂ ಅದರದರ
ಜಾಗದಲ್ಲಿರಿಸೆ
ಕಾಣಬಹುದು ಒಪ್ಪ, ಓರಣ

ನಿಮಗೊಂದು ಬೇಕೇ?
ಇದೆಯೇ ಝಣ, ಝಣ ಹಣ
ಇಲ್ಲವೇ?
ಹಾಗಾದರೆ ನಿಮಗಿಲ್ಲ,
ಈ ವಿಲ್ಲಾ

ಬೇಸರಿಸದಿರಿ ,
ಸುಖವೆಲ್ಲ ವಿಲ್ಲಾದಲ್ಲೇನಿಲ್ಲ
ಜೀವನ ಬಲ್ಲವಗೆ
ಸುಖ ಅವನಿರುವೆಡೆಯೆಲ್ಲ.
ಗುಡಿಸಲೇನು ? ಅರಮನೆಯೇನು?
ಸುಖವೆಂಬುದು ಮನದಿಂದ,
ಮನೆಯಿಂದಲ್ಲ

-ನಟೇಶ

9 Responses

  1. ತುಂಬಾ ಚೆನ್ನಾಗಿದೆ ಸರ್

  2. ನಯನ ಬಜಕೂಡ್ಲು says:

    ಸುಂದರ ಸಂದೇಶವಿದೆ ಕವನದಲ್ಲಿ.

  3. ನಾಗರತ್ನ ಬಿ. ಆರ್ says:

    ಸುಖ ಎಲ್ಲಿದೆ ಅದು ದೊಡ್ಡ ಚಿಕ್ಕ ನಿವಾಸ ದಲ್ಲಲ್ಲ ನಮ್ಮಲ್ಲಿಯೇ ಇದೆ ಎನ್ನುವ ಸತ್ಯವನ್ನು ಕವನದ ಮೂಲಕ ಅನಾವರಣ ಮಾಡಿರುವ ರೀತಿ ಬಹಳ ಮುದ ಕೊಟ್ಟಿತು ಸಾರ್ ಧನ್ಯವಾದಗಳು.

  4. ಅರ್ಥ ಪೂರ್ಣ ವಾದ ಕವಿತೆ ಚಿಂತನೆ ಗೆ ಹಚ್ಚಿ ಮನನ ಮಾಡಿಕೊಳ್ಳುವ ಕವಿತೆ.ಧನ್ಯವಾದಗಳು ಸಾರ್.

  5. . ಶಂಕರಿ ಶರ್ಮ says:

    ನಮ್ಮ ಬಂಧುಗಳ “ಆನಂದವಿಲ್ಲಾ” ಎನ್ನುವ ಮನೆಯ ನೆನಪಾಯಿತು. ಸೊಗಸಾದ ಸಂದೇಶ ಹೊತ್ತ ಸುಂದರ ಕವನ.

  6. ಡಾ. ಕೃಷ್ಣಪ್ರಭ ಎಂ says:

    ಹಿಂದೆಲ್ಲಾ ಅನೇಕ ವಿಲ್ಲಾಗಳಿದ್ದವು…ಚಂದದ ಕವನ

  7. Padma Anand says:

    ವಿಲ್ಲಾಗಳ ಸುಂದರ ವರ್ಣನೆಯೊಂದಿಗೆ ಸರಳ ಆಧ್ಯಾತ್ಮವೂ ಮೇಳೈಸಿ ಕವಿತೆ ಆಪ್ತ ವಾಗುತ್ತದೆ.

  8. Mittur Nanajappa Ramprasad says:

    ಮನುಜನ ಸುಖದುಃಖಗಳಿಗೆ ವಾಸಿಸುವ ನೆಲೆಯು ಕಾರಣವಲ್ಲ/

    ಮನುಜನ ಸುಖದುಃಖಗಳಿಗೆ ವಾಸಿಸುವ ನೆಲೆಯು ಕಾರಣವಲ್ಲ/
    ಸೌಬಾಗ್ಯ ದುರ್ಬಾಗ್ಯಕೆ ಬಡವ ಬಲ್ಲಿದನೆಂಬ ಬೇಧಭಾವಗಳಿಲ್ಲ/
    ಮನುಜನ ಸುಖದುಃಖಗಳಿಗೆ ವಾಸಿಸುವ ನೆಲೆಯು ಕಾರಣವಲ್ಲ/
    ಸುಕರ್ಮ ದುಷ್ಕರ್ಮಕೆ ಅರಮನೆ ಗುಡಿಸಲೆಂಬ ತಾರತಮ್ಯವಿಲ್ಲ/

    ಮನುಜನಾತ್ಮ ಹಂಬಲಿಸುವುದು ನಿರ್ಬಂಧವಿಲ್ಲದ ಸ್ವತಂತ್ರ ಬದುಕಿಗೆ/
    ತಿಳಿದೋ ತಿಳಿಯದೆಯೋ ಕಟ್ಟುವೆವು ನಿರ್ಬಂಧಗಳ ಬಾಳಿನ ವಿಮುಕ್ತಿಗೆ/
    ಮೇಲುಕೀಳೆಂಬ ಮನೋಸ್ಥಿತಿಯಲ್ಲಿ ಅಡ್ಡಿ ಆತಂಕಗಳ ಶಾಂತಿ ನೆಮ್ಮದಿಗೆ/
    ಕೃತಕ ವಿವೇಚನೆಯಲ್ಲಿ ವಿಂಗಡಿಸುವ ಯತ್ನದಲ್ಲಿ ವಿಘ್ನವಾಗುವೆವು ನಿಶ್ಚಿಂತೆಗೆ/

    ನೋವು ನಲಿವಿಗೆ ಬಹಿರ್ಮುಖ ಆಸರೆ ಅದಾರಗಳ ಅವಶ್ಯಕತೆಯಿಲ್ಲ /
    ಆಡಂಬರ ಪ್ರದರ್ಶನದ ಡಂಭಾಚಾರದ ಮೆರವಣಿಗೆಯ ಅಗತ್ಯಗಳಿಲ್ಲ/
    ಇರುವುದರಲ್ಲಿ ತೃಪ್ತರಾಗಿ ಜೀವಿಸಿದರೆ ಅನ್ಯ ಒತ್ತಾಸೆ ಬೇಕಾಗುವುದಿಲ್ಲ/
    ಇಲ್ಲದಿರುವುದಕೆ ಅಪೇಕ್ಷಿಸದೆ ಬದುಕಿದರೆ ಬೇಕಿಲ್ಲ ವರ್ಣಮಯ “ವಿಲ್ಲಾ”

  9. B C Narayana murthy says:

    ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: