ಕಾದಂಬರಿ: ನೆರಳು…ಕಿರಣ 11

Spread the love
Share Button

ಹಿಂದಿನ ಸಂಚಿಕೆಯಿಂದ ಮುಂದುವರಿದುದು…..

ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಭಾಗ್ಯಳ ಮದುವೆಗೆ ನಾವು ಕಾರಣಕರ್ತರಾಗಿಬಿಟ್ಟೆವು. ಹೇಗೋ ಏನೋ ಅನ್ನುವ ಆತಂಕ ನನ್ನನ್ನು ಕಾಡುತ್ತಿತ್ತು. ಇವತ್ತು ಜೋಯಿಸರ ಮನೆಗೆ ಹೋದಾಗ ಅಲ್ಲಿನ ವಾತಾವರಣ, ಮನೆ, ಮಗ, ಅವರ ಹೆಂಡತಿಯ ನೇರ ನಡೆನುಡಿ ಕಂಡಮೇಲೆ ನೆಮ್ಮದಿಯಾಯಿತು. ಹೇಗೋ ಮುಂದಾಳತ್ವ ವಹಿಸಿಕೊಂಡಿದ್ದೇವೆ. ಸುಸೂತ್ರವಾಗಿ ನಡೆದುಬಿಟ್ಟರೆ ಸಾಕು” ಎಂದು ಹೇಳಿ ಒಳನಡೆದರು ರಾಧಮ್ಮ. ಹೆಂಡತಿಯ ಮಾತನ್ನು ಕೇಳಿದ ಕೇಶವಯ್ಯ ಬೇರೆಯವರಂತೆ ಹಿಂದುಮುಂದು ನೋಡದೆ ಆಗುವುದಿಲ್ಲವೆಂದು ನಿರಾಕರಿಸಿಬಿಟ್ಟಿದ್ದರೆ ಭಾಗ್ಯಳಿಗೆ ಇಂಥಹ ಮನೆಯ ಸಂಬಂಧ ತಪ್ಪಿಹೋಗುತ್ತಿತ್ತು. ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ತಮ್ಮ ಉಡುಪನ್ನು ಬದಲಾಯಿಸಲು ಒಳಕೋಣೆಗೆ ನಡೆದರು.

ಇತ್ತ ಗಂಡ ಮಕ್ಕಳೊಡನೆ ಮನೆತಲುಪಿದ ಲಕ್ಷ್ಮಿ ಕೈಕಾಲುಮುಖ ತೊಳೆದು ದೇವರಿಗೆ ದೀಪ ಹಚ್ಚಿ ಕೈಮುಗಿದು “ಭಗವಂತಾ ಇದುವರೆಗೆ ಎಲ್ಲವೂ ಸುಸೂತ್ರವಾಗಿ ನಡೆಸಿದ್ದೀಯೆ, ಅದೇ ರೀತಿ ನನ್ನ ಮಗಳ ಮದುವೆಯ ಮಂಗಳಕಾರ್ಯವನ್ನೂ ನಡೆಸಿಕೊಡು” ಎಂದು ಪ್ರಾರ್ಥಿಸಿ ಹೊರಬಂದಳು. ಮಕ್ಕಳು, ಭಟ್ಟರು ಕೈಕಾಲುಮುಖಗಳನ್ನು ತೊಳೆದು ಸಂಜೆಯ ಭಜನೆಗೆ ತಯಾರಿ ನಡೆಸುತ್ತಿದ್ದರು. ಲಕ್ಷ್ಮಿಗೂ ಅಡುಗೆಯ ಕೆಲಸವಿಲ್ಲದ್ದರಿಂದ ತಾನೂ ಅವರ ಜೊತೆಗೆ ಕುಳಿತಳು. ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿ ಮುಗಿಸಿದರು. ನಂತರ ಮಕ್ಕಳಿಗೆ ಭಾವೀ ಬೀಗರು ಕೊಟ್ಟು ಕಳುಹಿಸಿದ್ದ ತಿಂಡಿಯನ್ನು ಹಂಚಿ ತಿನ್ನಲುಕೊಟ್ಟಳು. ಭಟ್ಟರಿಗೆ ಅವರು ಕೇಳಿದಂತೆ ಒಂದು ಲೋಟ ಹಾಲನ್ನು ಬಿಸಿಮಾಡಿಕೊಂಡು ಅಂಗಳದಲ್ಲಿ ಕುಳಿತಿದ್ದ ಅವರ ಬಳಿಗೆ ಬಂದಳು ಲಕ್ಷ್ಮಿ.

“ಲಕ್ಷ್ಮೀ, ಬೇರೆಯವರೆಲ್ಲರ ಮಾತುಗಳನ್ನು ಕೇಳಿ ಬೇಡವೆಂದು ನಾನು ಪಟ್ಟು ಹಿಡಿದಿದ್ದರೆ ಮಗಳಿಗೆ ಚಂದದ ಬದುಕು ಕಟ್ಟಿಕೊಡಲು ನಾನೇ ಅಡ್ಡಗೋಡೆಯಾಗುತ್ತಿದ್ದೆ. ನಿನ್ನ ಧೈರ್ಯ, ನಂಬಿಕೆ, ವಿಶ್ವಾಸಕ್ಕೆ ನನ್ನದೊಂದು ಸೆಲ್ಯೂಟ್ ಕಣೇ. ಅನುಕೂಲವಂತರಾಗಿದ್ದರೂ ಸ್ವಲ್ಪವೂ ಹಮ್ಮುಬಿಮ್ಮಿಲ್ಲ. ನಿನಗೇನೆನ್ನಿಸಿತು?” ಎಂದು ಕೇಳಿದರು ಭಟ್ಟರು.

“ಹೂ..ನೀವೇ ಹೇಳಿದಂತೆ ನನಗೆ ವಿಶ್ವಾಸವೇನೋ ಇತ್ತು. ಜನಗಳ ಮಾತುಗಳನ್ನು ತಳ್ಳಿಹಾಕಿ ಹೆಜ್ಜೆ ಇಟ್ಟಾಗಿದೆ. ಮುಂದೆ ಹೇಗೋ ಎಂಬ ಅಳುಕು ಬಂದು ಹೋಗಿ ಮಾಡುತ್ತಿತ್ತು. ಆದರೆ ಜೋಯಿಸರ ಮನ, ಮನೆ ಎಲ್ಲ ನೋಡಿದಮೇಲೆ ಎಲ್ಲವೂ ಮಾಯವಾಗಿ ನೆಮ್ಮದಿ ಸಿಕ್ಕಿದೇರೀ. ಈಗ ತಾನೇ ದೇವರಲ್ಲಿ ಅದನ್ನೇ ನಿವೇದಿಸಿಕೊಂಡೆ. ಭಗವಂತಾ ಒಳ್ಳೆಯ ದಾರಿ ತೋರಿದ್ದೀಯೆ, ಚೆನ್ನಾಗಿ ನಿಭಾಯಿಸುವ ಶಕ್ತಿಯನ್ನು ನೀಡು ಎಂದು” ಉತ್ತರಿಸಿದಳು ಲಕ್ಷ್ಮಿ.

ಹೀಗೆ ದಂಪತಿಗಳು ತಂತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವಂತೆ ಮಕ್ಕಳು ತಿಂಡಿ ತಿಂದು ಮುಗಿಸಿ ಅಲ್ಲಿಗೆ ಬಂದರು. “ಅಮ್ಮಾ ತಿಂಡಿ ಬೊಂಬಾಟಾಗಿತ್ತು.” ಎಂದು ಚಿಕ್ಕಮಕ್ಕಳೆಂದರೆ, ಭಾವನಾ “ಅಗತ್ಯಕ್ಕಿಂತ ಹೆಚ್ಚಾಗಿ ದ್ರಾಕ್ಷಿ, ಗೋಡಂಬಿ, ತುಪ್ಪ ಉಪಯೋಗಿಸಿದ್ದಾರಲ್ಲವೆ ಅಮ್ಮಾ?” ಎಂದಳು.

 “ಹೂ ಅಡುಗೆಯವರ ಕಾರುಬಾರಲ್ಲವಾ, ಮನೆಯವರಿಗಿಂತ ಸ್ವಲ್ಪ ಕೈ ಮುಂದಿರುತ್ತೆ” ಎಂದಳು ಲಕ್ಷ್ಮಿ.

“ಓ ಹಾಗಾದರೆ ಆ ಮನೆಯಲ್ಲಿ ಅಡುಗೆಯವರಿದ್ದಾರೆಂದಾಯಿತು. ಹಾಗಾದರೆ ಅಕ್ಕನ ಕೆಲಸ ಸುಲಭ. ಬೇರೆ ಏನಾದರೂ ಕಲಿಯಬಹುದಲ್ಲವಾ? ಅಥವಾ ಅಕ್ಕನ ಆಸೆಯಂತೆ ಮುಂದಕ್ಕೆ ಓದಬಹುದು” ಎಂದಳು ಬಾವನಾ.

“ಅವೆಲ್ಲ ಅವರ ತೀರ್ಮಾನಕ್ಕೆ ಬಿಟ್ಟದ್ದು ಭಾವನಾ, ನಾವು ಹೇಳಬಾರದು. ಅಪ್ಪಿತಪ್ಪಿ ಇದನ್ನೆಲ್ಲ ಯಾರ ಮುಂದೆಯಾದರೂ ಬಾಯಿಬಿಟ್ಟೀಯೆ ಜೋಕೆ.” ಎಂದು ಮಗಳಿಗೆ ತಾಕೀತು ಮಾಡಿ ಗಂಡ ಹಾಲು ಕುಡಿದು ಇಟ್ಟಿದ್ದ ಲೋಟ ಹಿಡಿದು ಅಡುಗೆ ಮನೆಯಕಡೆ ಹೊರಟಳು ಲಕ್ಷ್ಮಿ. ಅಲ್ಲಿ ಭಾಗ್ಯ ಎಲ್ಲ ಕೆಲಸ ಮುಗಿಸಿ ಹಿತ್ತಲ ಬಾಗಿಲು ಭದ್ರಪಡಿಸುತ್ತಿದ್ದಳು. ಒಳಗೆ ಬಂದ ತಾಯಿಯನ್ನು “ನಿಮಗೇನಾದರೂ ಬೇಕಿತ್ತೇ?” ಎಂದು ಕೇಳಿದಳು.

ಮಗಳ ಮಾತಿಗೆ “ಏನೂ ಬೇಡ ಭಾಗ್ಯ, ಒಂದು ನಿಮಿಷ ಬಾಯಿಲ್ಲಿ” ಎಂದು ತನ್ನ ಕೋಣೆಗೆ ಕರೆದುಕೊಂಡು ಹೋದಳು. ಜೋಯಿಸರು ಕೊಟ್ಟಿದ್ದ ಚೀಟಿಯನ್ನು ಅವಳ ಕೈಲ್ಲಿಟ್ಟು ನಿನ್ನ ತಿಂಗಳ ದಿನ ಕಳೆದು ಹಸೆಮಣೆ ಏರಲು ಸೂಕ್ತವಾದ ದಿನಾಂಕಗಳನ್ನು ಗುರುತುಹಾಕಿ ಜೋಪಾನವಾಗಿ ನನ್ನಕೈಗೆ ಕೊಡು” ಎಂದು ಹೇಳಿದಳು ಲಕ್ಷ್ಮಿ.

ತಾಯಿಯು ಕೊಟ್ಟ ಚೀಟಿಯಲ್ಲಿದ್ದ ದಿನಾಂಕಗಳ ಮೇಲೆ ಕಣ್ಣಾಡಿಸಿ ಲೆಕ್ಕಾಚಾರ ಹಾಕಿ ಸೂಕ್ತವಾದ ಒಂದೆರಡು ದಿನಾಂಕಗಳನ್ನು ಬರೆದು ಅದನ್ನು ಅಮ್ಮನ ಕೈಗಿತ್ತಳು.

ಚಿಕ್ಕ ಮಕ್ಕಳು “ಭಾಗ್ಯಕ್ಕ ಬಂದಳು, ಬನ್ನಿ ನಮ್ಮ ಕೋಣೆಗೆ ಹೋಗೋಣ” ಎಂದು ಎದ್ದಾಗ ಅಮ್ಮ ಹೇಳಿದ ಎಚ್ಚರಿಕೆಯಿಂದ ಬಿಮ್ಮನೆ ಕುಳಿತಿದ್ದ ಭಾವನಾ ಅವರನ್ನು ಹಿಂಬಾಲಿಸಿದಳು. ಸ್ವಲ್ಪ ಹೊತ್ತು ಅದೂ ಇದೂ ಮಾತನಾಡಿ ಚಿಕ್ಕತಂಗಿಯರಿಬ್ಬರೂ ನಿದ್ರೆಹೋದರು. ನೆಪಕ್ಕೆ ಪುಸ್ತಕವೊಂದನ್ನು ಹಿಡಿದು ಕುಳಿತಿದ್ದ ದೊಡ್ಡತಂಗಿ ಭಾವನಾಳನ್ನು ನೋಡಿದಳು ಭಾಗ್ಯ. ತಾನು ಅಡುಗೆ ಮನೆಯಲ್ಲಿದ್ದರೂ ತಂಗಿ ಮತ್ತು ಅಮ್ಮನ ನಡುವೆ ನಡೆದ ಮಾತುಕತೆಗಳು, ಅಮ್ಮ ನೀಡಿದ ಎಚ್ಚರಿಕೆ ಮಾತು ಅವಳ ಕಿವಿಗೆ ಕೇಳಿಸಿದ್ದವು. ತಂಗಿಗೆ ಸಮಾಧಾನ ಮಾಡಬೇಕೆಂದುಕೊಂಡು “ಭಾವನಾ ಏನು ಓದುತ್ತಿದ್ದಿಯಾ?” ಎಂದು ಕೇಳಿದಳು.

ಅಕ್ಕನ ಪ್ರಶ್ನೆಯಿಂದ ನಾಚಿದ ಭಾವನಾ ಕೈಯಲ್ಲಿದ್ದುದನ್ನು ಅಲ್ಲಿಯೇ ಗೂಡಿನಲ್ಲಿಟ್ಟು “ಅಕ್ಕಾ ನೋಡಿದೆಯಾ ಅಮ್ಮ ಹೇಗೆ ಗದರಿಬಿಟ್ಟರು” ಎಂದು ತೋಡಿಕೊಂಡಳು.

“ಹೂ ನಾನೂ ಕೇಳಿಸಿಕೊಂಡೆ, ಅದರಲ್ಲಿ ತಪ್ಪೇನಿಲ್ಲ. ನಾನು ಆ ದಿನ ಮದುವೆಯ ವಿಷಯಕ್ಕೆ ಬೇಸರಗೊಂಡಿದ್ದಾಗ ನೀನೇ ನನಗೆ ಸಮಾಧಾನ ಹೇಳಿದವಳು. ಈಗ ಆ ಬಗ್ಗೆ ತಲೆಕೆಡಿಸಿಕೊಳ್ಳುವುದೇಕೆ. ಅದು ಆಗುಹೋಗದ ವಿಷಯ. ಹೆಣ್ಣುಮಕ್ಕಳನ್ನು ಓದಿಸುವ ಉದಾರಿಗಳು ಸಿಗುತ್ತಾರೆಯೇ? ಅದೂ ಸಂಪ್ರದಾಯಸ್ಥ ಮನೆತನದಲ್ಲಿ. ಬದುಕು ಹೇಗೆ ದೊರೆಯುತ್ತದೆಯೋ ಹಾಗೆ ನಿರ್ವಹಿಸಿದರಾಯಿತೆಂದು ನಾನೇ ಸುಮ್ಮನಾಗಿದ್ದೇನೆ. ಬೇಸರ ಮಾಡಿಕೊಳ್ಳಬೇಡ. ಹುಡುಗಾಟಕ್ಕಾದರೂ ಯಾರ ಮುಂದೆಯಾದರೂ ಹೇಳಬೇಡ. ಈಗ ಮಲಗಿಕೋ” ಎಂದು ಅವಳಿಂದ ಪ್ರತ್ಯುತ್ತರಕ್ಕೆ ಕಾಯದೆ ಹೊದಿಕೆ ಹೊದ್ದು ಮಲಗಿದಳು ಭಾಗ್ಯ.

ಅಕ್ಕನ ನಿರಾಶಾದಾಯಕ ಮಾತುಗಳನ್ನು ಕೇಳಿದ ಭಾವನಾಳ ಮನಸ್ಸು ಮಮ್ಮಲ ಮರುಗಿತು. “ಛೇ..ನನಗೆ ಓದಲು ಅಷ್ಟೇನೂ ಆಸಕ್ತಿಯಿಲ್ಲ. ಆದರೆ ಇವಳಿಗೆ ಎಷ್ಟೊಂದು ಆಸೆಯಿತ್ತು. ಹುಂ..ಹೆಣ್ಣಿನ ಪಾಡು ಇಷ್ಟೇ.” ಎಂದುಕೊಂಡು ಲೈಟಾರಿಸಿ ಮಲಗಿದಳು.

ದಿನಕ್ಕಿಂತ ಮುಂಚೆಯೇ ತಮ್ಮ ಕೋಣೆ ಸೇರಿದ ದಂಪತಿಗಳು ಎಂದಿನಂತೆ ತಮ್ಮ ಓದು, ಧ್ಯಾನ ಮುಗಿಸಿ ಮಲಗಲು ತಯಾರಿ ನಡೆಸಿದರು. ಆಗ ಏನೋ ನೆನೆಸಿಕೊಂಡವರಂತೆ ಭಟ್ಟರು “ ಲಕ್ಷ್ಮೀ ಜೋಯಿಸರು ಗುರುತು ಹಾಕಿಕೊಟ್ಟಿದ್ದ ದಿನಾಂಕಗಳ ಚೀಟಿಯನ್ನು ಭಾಗ್ಯಳಿಗೆ ಕೊಡಬೇಕಾಗಿತ್ತು” ಎಂದರು.

“ಹೂಂ..ಆಗಲೇ ಕೊಟ್ಟಿದ್ದೂ ಆಯಿತು, ನಮ್ಮ ಮಗಳು ಅದರ ಮೇಲೆ ಕಣ್ಣಾಡಿಸಿ ಮನದಲ್ಲೇ ಲೆಕ್ಕಾಚಾರ ಹಾಕಿ ತನಗೆ ಸರಿ ಅನ್ನಿಸಿದ ಒಂದೆರಡು ದಿನಾಂಕಗಳನ್ನು ಗುರುತು ಮಾಡಿ ನನಗೆ ಹಿಂದಿರುಗಿಸಿದ್ದೂ ಆಯಿತು.” ಎಂದಳು ಲಕ್ಷ್ಮಿ.

“ಹ್ಹ..ಹ್ಹ ಹೇಗಿದ್ದರೂ ಇವರು ಬಿಡುವುದಿಲ್ಲ ಎಂದುಕೊಂಡು ಏಕೆ ಸುಮ್ಮನೆ ಜಗ್ಗಾಟ ಎಂದುಕೊಂಡಿರಬಹುದು. ನಾಳೆಯೇ ಕೇಶವಣ್ಣನವರ ಮನೆಗೆ ಹೋಗಿ ಅದನ್ನು ತೋರಿಸಿಕೊಂಡು ಬರುತ್ತೇನೆ. ಅವರು ಒಳ್ಳೆಯ ದಿನ ನೋಡಿ ಜೋಯಿಸರ ಮನೆಯವರನ್ನು ಕರೆದುಕೊಂಡು ಬರಲಿ. ಲಗ್ನ ನಿಶ್ಚಯ ಮಾಡಿಕೊಂಡು ಬಿಡೊಣ. ಏನಂತೀ” ಎಂದು ಕೇಳಿದರು ಭಟ್ಟರು.

ಅವಸರ ಮಾಡಬೇಡಿ. ಜೋಯಿಸರ ಮನೆಯವರು ಬಂದುಹೋಗಲಿ. ಅವರಿಗೂ ನಾವು ಹಾಕಿಕೊಟ್ಟಿರುವ ದಿನಾಂಕಗಳಲ್ಲಿ ಯಾವುದು ಸರಿಯಾಗುತ್ತದೆಂದು ಹೇಳಿದ ಮೇಲೆ ನಿಮ್ಮ ಚಿಕ್ಕಪ್ಪಂದಿರಿಗೆ, ನಮ್ಮ ಸೋದರ ಮಾವನವರಿಗೆ ವಿಷಯ ತಿಳಿಸಿ ಒಂದು ದಿನ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳೋಣ. ಜೋಯಿಸರ ಮನೆಯಿಂದಲೂ ಕೆಲವು ಮುಖ್ಯರಾದವರನ್ನು ಕರೆಯಲಿ. ನಮ್ಮ ಮನೆಯಲ್ಲೇ ಸಣ್ಣದಾಗಿ ಸಮಾರಂಭ ಇಟ್ಟುಕೊಳ್ಳೋಣ” ಎಂದಳು ಲಕ್ಷ್ಮಿ.

ಹೆಂಡತಿಯ ಮಾತುಗಳನ್ನು ಕೇಳಿದ ಭಟ್ಟರ ಮನದಲ್ಲಿ ಒಂದು ಆಂದೋಲನ ಎದ್ದಿತು. “ಹೌದಲ್ಲವೇ ! ಇದೇ ಊರಿನಲ್ಲಿರುವ, ಅದೂ ನಮ್ಮ ಜಮೀನಿನ ಆಸುಪಾಸಿನಲ್ಲೇ ತಮ್ಮ ಜಮೀನು ಹೊಂದಿರುವ, ಕೂಗಳತೆಯಲ್ಲಿನ ಮನೆಗಳಲ್ಲೇ ವಾಸಿಸುತ್ತಿರುವ ಚಿಕ್ಕಪ್ಪಂದಿರು, ಲಕ್ಷ್ಮಿಯ ಸೋದರ ಮಾವ ಇವರಿಗೆಲ್ಲರಿಗೂ ತಿಳಿಸದೆ ನೇರವಾಗಿ ಮದುವೆಯ ಆಹ್ವಾನಪತ್ರಿಕೆಯನ್ನು ತೆಗೆದುಕೊಂಡು ಹೋಗಿ ಕೊಟ್ಟರೆ ಏನೆಂದುಕೊಳ್ಳಬಹುದು. ಅಬ್ಬಾ ! ಇದೆಲ್ಲ ಆಲೋಚನೆಗಳು ನನ್ನ ತಲೆಗೇಕೆ ಹೊಳೆಯುವುದಿಲ್ಲ ದೇವಾ, ನೆನ್ನೆ ಜೋಯೊಸರ ಬಾಯಲ್ಲಿ ಕೇಳಿದ ಮಾತೇ ಮರುಧ್ವನಿಸಿ ಬಾಯಿಬಿಟ್ಟೆ. ಛೇ..ಛೇ”

“ಏನು ಭಟ್ಟರೇ ಯಾವುದೋ ಲೋಕದಲ್ಲಿ ಇದ್ದೀರಿ, ನಾನು ಹೇಳಿದ್ದು ಸರಿತಾನೇ” ಎಂದು ಲಕ್ಷ್ಮಿ ಕೇಳಿದಳು.

“ಹೌದು ಲಕ್ಷ್ಮೀ, ಈ ಸೂಕ್ಷ್ಮ ವಿಚಾರಗಳೆಲ್ಲ ನನಗೇಕೆ ಹೊಳೆಯುವುದಿಲ್ಲ ಎಂದುಕೊಳ್ಳುತ್ತಿದ್ದೆ.  ಹಾಗೇ ಮಾಡೋಣ” ಎಂದರು ಭಟ್ಟರು. “ಹಾಗೇ ಇನ್ನೊಂದು ವಿಷಯ, ಈಗಲೇ ಹೇಳಿಬಿಡುತ್ತೇನೆ. ಅದರ ಬಗ್ಗೆಯೂ ಯೋಚಿಸಿರಿ” ಎಂದಳು ಲಕ್ಷ್ಮಿ.

“ಇನ್ಯಾವ ಸಂಗತಿ ಮಹಾರಾಯಿತಿ?” ಎಂದು ಪ್ರಶ್ನಿಸಿದರು.

“ಅದೇರೀ ಕಲ್ಯಾಣಮಂಟಪದ ವಿಷಯ. ನಮಗೆ ಅವರಿಗೆ ಒಪ್ಪಿಗೆಯಾದ ದಿನಾಂಕವನ್ನು ನಿಶ್ಚಯಿಸಿದ ದಿನ ಖಾಲಿಯಿದ್ದರೆ ಸಾಕು, ಕೇಶವಣ್ಣನವರ ಮೂಲಕ ಎಲ್ಲಾ ಏರ್ಪಾಡನ್ನೂ ಅವರಿಗೇ ವಹಿಸಿಬಿಡೋಣ. ಸ್ವಲ್ಪ ಖರ್ಚು ಹೆಚ್ಚಾಗಬಹುದು. ಆದರೆ ಶ್ರಮ ತಪ್ಪುತ್ತೆ. ಅಲ್ಲದೆ ಶಾಸ್ತ್ರ ಸಂಪ್ರದಾಯಕ್ಕೂ ಧಕ್ಕೆ ಬರುವುದಿಲ್ಲ. ಇದನ್ನೇ ಸ್ವಲ್ಪ ತಲೆಯಲ್ಲಿಟ್ಟುಕೊಂಡಿರೋಣ” ಎಂದಳು ಲಕ್ಷ್ಮಿ.

“ಹೂ ನೀನು ಹೇಳಿದಂತೆ ಯೋಚಿಸಬೇಕಾದದ್ದೇ. ಅದೇ ವ್ಯವಸ್ಥೆ ಉತ್ತಮ. ಆಯಿತು ಬೆಳಗಿನಿಂದ ತಯಾರಿ, ತರಾತುರಿ, ಓಡಾಟ, ಆತಂಕಗಳಲ್ಲೇ ಕಳೆದದ್ದಾಯಿತು. ಈಗ ಚರ್ಚೆಗಳಿಗೆ ವಿರಾಮ ಹಾಕಿ ಸ್ವಸ್ಥವಾಗಿ ಮಲಗೋಣವೇ?” ಎಂದರು ಭಟ್ಟರು.

ಇನ್ನು ಮಾತು ಮುಂದುವರಿಸಿ ಪ್ರಯೋಜನವಿಲ್ಲ ಎಂದು ತಿಳಿದ ಲಕ್ಷ್ಮಿ ಲೈಟಾರಿಸಿ ಮಲಗಿದಳು.

ಬೆಳಗ್ಗೆ ತನ್ನ ಕೆಲಸಗಳನ್ನೆಲ್ಲ ಮುಗಿಸಿ ಭಟ್ಟರು “ಲಕ್ಷ್ಮೀ ಕೇಶವಯ್ಯನವರ ಮನೆಗೆ ಹೋಗಿ ಬಂದುಬಿಡಲೇ?” ಎಂದು ಕೇಳಿದರು.

“ಈಗ ಬೇಡಿ, ನೀವು ಮೊದಲೇ ಹೇಳಿದಂತೆ ಸಂಜಿಗೇ ಹೋಗಿ ಬರುವಿರಂತೆ. ಆದರೆ ಐದುಗಂಟೆಯೊಳಗೆ ಹೋಗಿಬನ್ನಿ, ಪಾಠದ ಮಕ್ಕಳು ಬರುವುದು ಐದರನಂತರವೇ. ಅವರೆಲ್ಲ ಹೋಗುವಾಗ ಸಂಜೆ ಏಳರ ಮೇಲಾಗುತ್ತದೆ. ಅದಕ್ಕೇ ಮುಂಚೆಯೇ ಹೋಗುವುದೊಳ್ಳೆಯದು, ತೀರ ತಡವಾಗಿಯೂ ಬೇಡ” ಎಂದಳು.

ಹೊರಗಡೆ ಯಾರೋ “ಭಟ್ಟರೇ” ಎಂದು ಕೂಗಿದ್ದು ಕೇಳಿಸಿತು. “ಹ್ಹಾ ನೋಡಿ, ನಿಮ್ಮ ಭಂಟ ಬಸವ ಬಂದಹಾಗಿದೆ. ಯಾರನ್ನಾದರೂ ಕರೆತಂದಿರಬಹುದು, ಇಲ್ಲವೇ ಏನಾದರೂ ಕೇಳಲು ಬಂದಿರಬಹುದು.” ಎಂದು ಅಲ್ಲಿಯೇ ಗೂಟಕ್ಕೆ ನೇತು ಹಾಕಿದ್ದ ಅಂಗಡಿಯ ಬೀಗದಕೈಯನ್ನು ಭಟ್ಟರ ಕೈಗಿತ್ತಳು.

ಮನಯೊಳಗಿನಿಂದ ಭಟ್ಟರು ಹೊರಗೆ ಬರುವಷ್ಟರಲ್ಲಿ ಮೂರ್‍ನಾಕು ಬಾರಿ ಕೂಗಿದ್ದ ಬಸವ. ಅವನ ಅವಸರದ ಸ್ವಭಾವ  ತಿಳಿದಿದ್ದ ಭಟ್ಟರು ಬೇಸರಿಸಿಕೊಳ್ಳದೆ ತಮ್ಮ ಎಂದಿನ ನಡಿಗೆಯಂತೆ ಬಂದರು. “ಏನು ಭಟ್ಟರೇ, ಊಟ ಮಾಡುತ್ತಿದ್ದಿರಾ? ಇವರು ಶ್ಯಾನೆ ಅಂರ್ಜೇಂಟಿನಲ್ಲಿದ್ರು, ಅದಕ್ಕೇ ಜಾಸ್ತಿ ಸಾರಿ ಕೂಗಿಬಿಟ್ಟೆ” ಎಂದ ಬಸವ.

“ಹ್ಹ  ಹ್ಹ ನಿನ್ನ ಇವತ್ತು ನೋಡುತ್ತಿದ್ದೀನಾ, ಯಾವತ್ತೂ ಒಂದೇ ಕೂಗಿಗೆ ನಿಲ್ಲಿಸಿದ್ದೀಯಾ, ನೀನು ಬಂದಾಗ ನಾನು ಅಂಗಡಿಯಲ್ಲಿದ್ದು ಕಾಣಿಸಿದರೂ ನೀನು ಕೂಗುವುದು ತಪ್ಪಿಸೋಲ್ಲ. ಅಂತಹುದರಲ್ಲಿ” ಎಂದು ಛೇಡಿಸುತ್ತಾ ಅಂಗಡಿಯ ಬೀಗ ತೆರೆದು ಅವನ ಜೊತೆಗೆ ಬಂದವರನ್ನು ಒಳಕ್ಕೆ ಆಹ್ವಾನಿಸಿದರು ಭಟ್ಟರು.

ಬಂದವರು “ನಮಸ್ತೆ ನನ್ನ ಹೆಸರು ಶ್ರೀಪತಿ, ಇಲ್ಲೇ ಒಂದೆರಡು ಬೀದಿ ಆಚೆಗೆ ನನ್ನ ಮನೆಯಿದೆ. ನಾಡಿದ್ದು ನನ್ನ ಮಗನ ಮುಂಜಿ ಕಾರ್ಯಕ್ರಮವಿದೆ. ಅದಕ್ಕಾಗಿ ಊರಿನಿಂದ ನೆಂಟರಿಷ್ಟರೆಲ್ಲಾ ಬರುತ್ತಾರೆ. ನಮ್ಮ ವಾಸದ ಮನೆ ಅಷ್ಟೇನೂ ದೊಡ್ಡದಿಲ್ಲ. ಅದಕ್ಕೆ ಮನೆಯ ಮುಂದೆ ಶಾಮಿಯಾನಾ ಹಾಕಬೇಕು. ಅಡುಗೆಗೆ ಪಾತ್ರೆಗಳು ಮತ್ತು ಬೆಂಚು, ಕುರ್ಚಿಗಳು , ಅಲ್ಲದೆ ಆದಿನ ಮನೆಯ ಮುಂದೆ ಹಸಿರು ಚಪ್ಪರ ಹಾಕಬೇಕು. ಇವನ್ನೆಲ್ಲ ನೀವು ಮಾಡಿಸಿಕೊಡುತ್ತೀರೆಂದು ಬಸವಯ್ಯ ಕರೆದುಕೊಂಡು ಬಂದಿದ್ದಾರೆ” ಎಂದರು.

“ಒಹೋ..ಅದಕ್ಕೇನಂತೆ, ಎಲ್ಲ ವ್ಯವಸ್ಥೆ ಮಾಡೋಣ. ಎಷ್ಟು ದಿನಕ್ಕೆ ವಸ್ತುಗಳು ಬಾಡಿಗೆಗೆ ಬೇಕು? ಚಪ್ಪರ ಯಾವಾಗ ಹಾಕಿಸಬೇಕು? ಏನು ಪಾತ್ರೆಪಡಗ, ಬೆಂಚು, ಕುರ್ಚಿಗಳು ಬೇಕು ಒಂದು ಚೀಟಿಯಲ್ಲಿ ವಿವರವಾಗಿ ಬರೆದುಕೊಡಿ. ಅದರಲ್ಲಿ ನಿಮ್ಮ ವಿಳಾಸ ಇರಲಿ”ಎಂದು ಒಂದು ಖಾಲಿ ಹಾಳೆಯನ್ನು ಅವರಿಗಿತ್ತರು ಭಟ್ಟರು.

ಅವರೆಲ್ಲವನ್ನೂ ಬರೆದುಕೊಟ್ಟಮೇಲೆ ಒಂದು ಸಾವಿರ ಮುಂಗಡ ಪಡೆದು ಅದರಲ್ಲಿ ಗುರುತು ಹಾಕಿಕೊಂಡು “ನೋಡಿ, ಈವ್ಯಕ್ತಿ ನೀವು ಕೇಳುವ ಎಲ್ಲ ಸೌಕರ್ಯವನ್ನೂ ಮಾಡಿಸಿಕೊಡುತ್ತಾನೆ. ಆತಂಕಬೇಡಿ” ಎಂದರು.

“ಆಯಿತು ನಾಳೆಯೇ ಶಾಮಿಯಾನಾ ಹಾಕಿಸಿಬಿಡಿ, ಬಂದವರಿಗೆ ಕೂರಲು, ವಿಶ್ರಾಂತಿ, ಮಲಗಲು, ಊಟಕ್ಕೆ ಎಲ್ಲದಕ್ಕೂ ಅನುಕೂಲವಾಗುತ್ತೆ” ಎಂದು ಮತ್ತೊಮ್ಮೆ ನೆನಪಿಸಿ ಹೊರಟುಹೋದರು.

“ಅಂತೂ ನೀವು ಅಂಗಡಿ ಇಟ್ಟಮೇಲೆ ನನಗೂ, ನನ್ನಗಾಡಿಗೂ ಬಿಡುವಿಲ್ಲದಂತಾಗಿದೆ. ಬಾಡಿಗೆಗೆ ಹೋಗುವುದು, ಮಿಕ್ಕ ಸಮಯದಲ್ಲಿ ಮಾತ್ರ. ಈ ಕೆಲಸದಿಂದ ನನ್ನ ಕೈಯಲ್ಲಿ ನಾಲ್ಕು ಕಾಸು ಉಳಿಯುವಂತಾಗಿದೆ. ನನ್ನ ಹೆಂಡತಿಗಂತೂ ಬಹಳ ಹಿಗ್ಗು. ಬಾಡಿಗೆ ಯಾವುದೂ ಇಲ್ಲದಿದ್ದಾಗ ನಿನ್ನ ಪಟಾಲಮ್ಮನ್ನು ಕಟ್ಟಿಕೊಂಡು ಅಲ್ಲಿ‌ಇಲ್ಲಿ ಅಲೆಯುತ್ತಿದ್ದೆ. ಈಗ ಭಟ್ಟರ ಅಂಗಡಿಯ ಜವಾಬ್ದಾರಿಯಿಂದ ಅಂಡಲೆಯುವುದು ತಪ್ಪಿದೆ ಎನ್ನುತ್ತಿರುತ್ತಾಳೆ” ಎಂದು ಹಿಗ್ಗಿನಿಂದ ಹೇಳಿದ ಬಸವ.

“ಆಯಿತು ಹೋಗು, ಅವರು ಏನು ಹೇಳುತ್ತಾರೋ ಕೇಳಿಕೊಂಡು ಒಂದಿಬ್ಬರು ಸಹಾಯಕರನ್ನು ಕರೆದುಕೊಂಡು ಅಚ್ಚುಕಟ್ಟಾಗಿ ಕೆಲಸ ಮಾಡಿಕೊಡು. ಶಾಮಿಯಾನಾ ಭದ್ರವಾಗಿರಲಿ, ಗೂಟಗಳು ಸರಿಯಾಗಿದ್ದು ಅಲುಗಾಡದಂತಿರಲಿ. ಪಾತ್ರೆಗಳನ್ನು ರಾತ್ರಿಯೇ ಜೋಡಿಸಿಟ್ಟಿರುತ್ತೇನೆ. ಬೆಳಗ್ಗೆ ತೆಗೆದುಕೊಂಡು ಹೋಗುವೆಯಂತೆ” ಎಂದರು ಭಟ್ಟರು.

“ಭಟ್ಟರೇ ಒಂದು ವಿಷಯ ಕೇಳಲೋ ಬೇಡವೋ ಅಂತ ಯೋಚಿಸುತ್ತಿದ್ದೇನೆ” ಎಂದ ಬಸವ.

“ಅದಕ್ಯಾಕೆ ಸಂಕೋಚ ಕೇಳು” ಎಂದರು.

“ಅದೇ ಲಕ್ಷ್ಮಮ್ಮನೋರು ಹಳೇ ಸೀರೆಗಳನ್ನೆಲ್ಲ ಸೇರಿಸಿ ಅದೇನೊ ಮಾಡುತ್ತಾರಂತಲ್ಲಾ, ಅದನ್ನು ನನಗೊಂದು ಕೊಟ್ಟಿದ್ದರು. ಅದು ನಮ್ಮಪ್ಪನಿಗೆ. ಮಕ್ಕಳಿಗೆ ಬಾಳಾ ಇಷ್ಟ ಆಗ್ಬಿಟ್ಟದೆ. ಅದನ್ನು ಹೇಗೆ ಮಾಡೋದು ಅಂತ ಹೇಳಿಕೊಡ್ತಾರಾ ಕೇಳು ಅಂತ ದುಂಬಾಲು ಬಿದ್ದವಳೆ ನನ್ನ ಹೆಂಡ್ತಿ.” ಎಂದು ಕೇಳಿದ ಬಸವ.

ಅಷ್ಟರಲ್ಲಿ ಲಕ್ಷ್ಮಿಯೇ ಅಲ್ಲಿಗೆ ಬಂದುದನ್ನು ನೋಡಿದ ಭಟ್ಟರು “ಅದೋ ನಿಮ್ಮ ಅಮ್ಮನವರೇ ಬಂದ್ರು, ಅವರನ್ನೇ ಕೇಳು” ಎಂದರು. ವಿಷಯ ತಿಳಿದ ಲಕ್ಷ್ಮಿ “ಓ ಅದಾ ! ಅದನ್ನು ಕೌದಿ ಅನ್ನುತ್ತಾರೆ. ಅದೇನು ಬ್ರಹ್ಮವಿದ್ಯೆ ಅಲ್ಲ. ನಿನ್ನ ಹೆಂಡ್ತಿ ಕೆಂಪಿಗೆ ಹೇಳು ಮಧ್ಯಾನ್ಹದ ಹೊತ್ತು ಬಂದರೆ ಹೇಳಿಕೊಡ್ತಾರೆ ಅಂತ. ಅದಕ್ಕೆ ಬೇಕಾದ ಸೀರೆಗಳೆ ಆಗಲಿ, ಬೇರೆ ಬಟ್ಟೆಗಳೆ ಆಗಲಿ ಚೆನ್ನಾಗಿ ಒಗೆದು ಒಣಗಿಸಿಕೊಂಡು ತರಬೇಕೆಂದು. ಆಯಿತಾ? ಊಟಕ್ಕೆ ಬರುತ್ತೀಯೇನು ನಿನಗೂ ಬಡಿಸ್ತೀನಿ” ಎಂದಳು ಲಕ್ಷ್ಮಿ.

ಅದಕ್ಕೆ ಬಸವ “ನನಗೆ ಬೇಡಿ, ನಾನು ನಾಷ್ಟಾ ಮಾಡಿದ್ದೀನಿ, ಭಟ್ಟರನ್ನು ಕರೆದುಕೊಂಡು ಹೋಗಿ. ನಾನಿನ್ನು ಬರ್‍ತೀನಿ” ಎಂದು ಹೊರಟ ಅವನು ಹೋದಮೇಲೆ ಅಂಗಡಿಗೆ ಬೀಗಹಾಕಿ ಭಟ್ಟರು ಮನೆಯೊಳಕ್ಕೆ ನಡೆದರು. “ಅವರನ್ನು ಹಿಂಬಾಲಿಸುತ್ತಾ “ಅವರು ಯಾರು ಬಂದಿದ್ದು?” ಎಂದು ಕೇಳಿದಳು ಲಕ್ಷ್ಮಿ.

“ಅವರಾ ಇಲ್ಲೇ ಒಂದೆರಡು ಬೀದಿಯಾಚೆ ಅವರ ಮನೆ. ಬಸವನ ಬಾಯಲ್ಲಿ ಅವರ ಪ್ರವರ ಕೇಳಿದ್ದು, ಅವರ ಮನೆಯಲ್ಲಿ ಏರ್ಪಡಿಸುವ ಸಮಾರಂಭದ ವಿವರಗಳು, ಬೇಕಾದ ವ್ಯವಸ್ಥೆಗಳ ಬಗ್ಗೆ ಮಾತನಾಡಿ ಮುಗಿಸುವ ಹೊತ್ತಿಗೆ ಸ್ವಲ್ಪ ನಿಧಾನವಾಯಿತು. ತಗೋ ಮುಂಗಡ ಹಣವನ್ನು ಒಳಗಿಡು. ನಾಳೆ ಮುಂಜಾನೆಯೇ ಬಸವ ಬರುತ್ತಾನೆ. ಅವನಿಗೆ ಸ್ವಲ್ಪ ಹಣ ಕೊಡಬೇಕು. ಹಾಗೇ ಅವರು ಬರೆದುಕೊಟ್ಟಿರುವ ಸಾಮಾನುಗಳನ್ನು ರಾತ್ರಿಯೇ ತೆಗೆದಿರಿಸಬೇಕು.” ಎಂದು ಹೇಳಿ ಕೈಕಾಲು ತೊಳೆದು ಊಟದ ಮನೆಯನ್ನು ಹೊಕ್ಕರು.

ಭಟ್ಟರು ಕೊಟ್ಟ ಹಣವನ್ನು ಒಳಗೆ ಎತ್ತಿಡಲು ಹೊರಟ ಲಕ್ಷ್ಮಿಗೆ ಬಸವನ ಹೆಂಡತಿ ಸೀರೆಗಳನ್ನು, ಹಳೆಯ ಬಟ್ಟೆಗಳನ್ನು ಜೋಡಿಸಿ ಕೌದಿ ಹೊಲೆಯುವುದನ್ನು ಕಲಿಯುವ ಆಸೆ ವ್ಯಕ್ತಪಡಿಸಿದ್ದನ್ನು ಕೇಳಿ ತಾನು ತನ್ನ ಅತ್ತೆ, ಅಜ್ಜಿಯವರು ಉಟ್ಟುಬಿಟ್ಟಿದ್ದ ಬಣ್ಣಮಾಸಿದ ಗಟ್ಟಿಮುಟ್ಟಾಗಿದ್ದ ಸೀರೆಗಳನ್ನು ಸೇರಿಸಿ ಹೊಲಿದು ಮನೆಯವರೆಲ್ಲರ ಮೆಚ್ಚುಗೆ ಗಳಿಸಿದ್ದು ನೆನಪಾಯಿತು. ಅವುಗಳಲ್ಲಿ ಒಂದೆರಡನ್ನು ತನ್ನ ಸೋದರಮಾವನ ಮನೆಗೂ ಕೊಟ್ಟಿದ್ದಳು. ಹಾಗೇ ಬಸವನ ಹೆಂಡತಿಗೂ ಒಂದು ತಲುಪಿತ್ತು.

PC: Internet

ಆ ಕಲಾತ್ಮಕ ಹೊಲಿಗೆ,  ಮೆತ್ತಗಿನ ಅನುಭವ ಮಕ್ಕಳಿಗೂ ಮುದ ತಂದಿತ್ತು. ಬೇರೆ ಹೊದಿಕೆಗಳಿಗಿಂತ ಕೌದಿಗಳನ್ನೇ ಹೊದೆಯಲು ಇಷ್ಟಪಡುತ್ತಿದ್ದರು. ಮನೆಗೆ ಯಾರಾದರೂ ನೆಂಟರಿಷ್ಟರು ಬಂದಾಗ ಹೊದಿಕೆಗಳು ಸಾಲದೆ ಬಂದಾಗ ಇವುಗಳು ಉಪಯೋಗಕ್ಕೆ ಬರುತ್ತಿದ್ದವು. ಬಂದವರಲ್ಲಿ ಕೆಲವರು ಅವುಗಳನ್ನು ಹೇಗೆ ಹೊಲೆಯುವುದೆಂದು ಕೇಳಿ ತಮ್ಮತಮ್ಮ ಮನೆಗಳಲ್ಲಿನ ಹಳೆಯ ಸೀರೆಗಳನ್ನು ಹೊರತೆಗೆದು ಈರೀತಿ ಉಪಯೋಗ ಮಾಡಲಾರಂಭಿಸಿದ್ದರು. ಲಕ್ಷ್ಮಿಯ ಜಾಣತನವನ್ನು ಪ್ರಶಂಸಿಸುತ್ತಿದ್ದರು.

“ಲಕ್ಷ್ಮಿ, ಎಲ್ಲಿ ಹೋದೆ?” ಎಂಬ ಭಟ್ಟರ ಕರೆ  ಅವಳನ್ನು ಆಲೋಚನೆಯಿಂದ ಆಚೆಗೆ ಬರುವಂತೆ ಮಾಡಿತು. ಕೈಯಲ್ಲಿ ಹಿಡಿದಿದ್ದ ಹಣವನ್ನು ತಿಜೋರಿಯಲ್ಲಿಟ್ಟು ಬೀಗಹಾಕಿ ಲಗುಬಗೆಯಿಂದ ಊಟ ಬಡಿಸಲು ಒಳನಡೆದಳು.

ಊಟ ಮಾಡುತ್ತಿದ್ದ ಭಟ್ಟರು “ಲಕ್ಷ್ಮೀ ಬಸವ ಕೇಳಿದನಲ್ಲ ಅದೇ, ಅವನ ಹೆಂಡತಿ ಅದೇನೋ ಕೌದಿ ಹೊಲಿಯೋದು ಕಲೀಬೇಕೂಂತ, ಅದು ಆ ಹೆಂಗಸಿನ ಕೈಯಲ್ಲಿ ಸಾಧ್ಯಾನಾ? ನೀನೇನೋ ಹೇಳಿಕೊಡ್ತೀನಿ ಅಂದೆ. ಈ ಕೆಲಸ ಕಾರ್ಯಗಳ ಮಧ್ಯೆ ಇದಕ್ಕೆ ಹೇಗೆ?” ಎಂದು ಕೇಳಿದರು.

“ಗಂಡಸರಿಗೇಕೆ ಗೌರೀ ದುಃಖಾಂತ” ಈ ವಿಷಯದ ಬಗ್ಗೆ ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ. ಊಟ ಮುಗಿಸಿ ಈಗ ಮುಂಗಡ ಕೊಟ್ಟವರ ಹೆಸರು, ತಾರೀಖು ಹಾಕಿ ಲೆಕ್ಕದ ಪುಸ್ತಕದಲ್ಲಿ ಬರೆದಿಡಿ. ಆಮೇಲೆ ಅವರು ಕೇಳಿರುವ ಪಾತ್ರೆಗಳನ್ನು ತೆಗೆದಿಡಿ. ನಾನೂ ಊಟ ಮುಗಿಸಿ ಬರುತ್ತೇನೆ. ತೆಗೆದಿಟ್ಟುಬಿಡೊಣ. ಕೇಶವಣ್ಣನವರ ಮನೆಗೆ ಹೋಗಿ ಬರುವುದಿದೆ. ಆನಂತರ ಮತ್ಯಾರಾದರೂ ಬಂದರೆ ಇದಕ್ಕೆ ಟೈಂ ಸಿಗುವುದಿಲ್ಲ. ಬೆಳಗ್ಗೆ ಬೆಳಗ್ಗೇನೇ ಬಸವ ಬರುತ್ತಾನೆ. ಆಗ ಗಡಿಬಿಡಿಯಾಗುತ್ತೆ.” ಎಂದಳು ಲಕ್ಷ್ಮಿ.

ಉಟಮಾಡಿ  ಸ್ವಲ್ಪ ಹೊತ್ತು ಅಡ್ಡಾಡಿ ಮಧ್ಯಾನ್ಹದ ವರೆಗೆ ಮಲಗುವ ಆಲೋಚನೆಯಲ್ಲಿದ್ದ ಭಟ್ಟರಿಗೆ ಹೇಂಡತಿಯ ಆದೇಶ ಕಸಿವಿಸಿ ಎನ್ನಿಸಿತು. ಮತ್ತೊಂದು ಕ್ಷಣದಲ್ಲೇ ಸಾಮಾನುಗಳನ್ನು ತೆಗೆದಿಟ್ಟುಬಿಡೋದೇ ವಾಸಿ. ಅಬ್ಬಬ್ಬಾ ಎಂದರೆ ಎಷ್ಟು ಹೊತ್ತು ಹಿಡಿದೀತು. ಆಮೇಲೆ ನೆಮ್ಮದಿಯಾಗಿ ಸ್ವಲ್ಪ ಮಲಗಬಹುದು ಎಂದು ಲೆಕ್ಕಹಾಕಿ ಊಟ ಮುಗಿಸಿ ಎದ್ದರು. ಹೆಂಡತಿ ಹೇಳಿದಂತೆ ಎಲ್ಲ ಕೆಲಸ ಮುಗಿಸಿ ಮಲಗಿದ್ದ ಭಟ್ಟರಿಗೆ ಹೊರಗಿನ ಗದ್ದಲದಿಂದ ಎಚ್ಚರವಾಯಿತು. ಮಲಗಿದ್ದಂತೆಯೇ ಆತ್ತಕಡೆಗೆ ಕಿವಿಕೊಟ್ಟರು. ಹೆಂಡತಿ ಮಕ್ಕಳ ಧ್ವನಿಯಂತಿರದೆ ಬೇರೆ ಯಾರದ್ದೋ ಗಡಸಾದ ಧ್ವನಿ. ಗೋಡೆಯ ಗಡಿಯಾರದತ್ತ ನೋಟ ಹರಿಸಿದರು. ಅರೆ ಆಗಲೇ ನಾಲ್ಕು ಗಂಟೆಯಾಗುತ್ತಾ ಇದೆ. ಇಷ್ಟು ಹೊತ್ತಿನಲ್ಲಿ ಯಾರಪ್ಪಾ ಅಂದುಕೊಳ್ಳುತ್ತಿದ್ದಂತೆ ಮತ್ತೊಮ್ಮೆ ಮತ್ತೊಮ್ಮೆ ಗಡಸು ಧ್ವನಿ, ಎತ್ತರದ ನಗು ಕೇಳಿಸಿತು. ಹಿಂದೆಯೇ “ಷ್..ಕೆಂಪಿ ಮೆಲ್ಲಗೆ, ಒಳಗೆ ಭಟ್ಟರು ಮಲಗಿದ್ದಾರೆ” ಎಂದ ತಮ್ಮ ಹೆಂಡತಿಯ ಮಾತಿಗೆ, “ಅವ್ವಾ..ಭಟ್ಟರಿಗೆ ಹುಶಾರಿಲ್ಲವಾ?” ಎಂದು ಕೆಂಪಿ ಕೇಳಿದಳು.

ಓ ! ಬಸವನ ಹೆಂಡತಿ ಕೆಂಪಿ, ಭಲೇಭಲೇ ಕೌದಿ ಶಿಕ್ಷಣಕ್ಕೆ ಆಗಮನವಾದಂತಿದೆ. ಅದೇನೂ ಹುಶಾರಿಲ್ಲವಾ ಎನ್ನುತ್ತಿದ್ದಾಳಲ್ಲಾ, ಇವರೇನು ಮಧ್ಯಾನ್ಹ ಮಲಗುವುದಿಲ್ಲವಾ ಎಂದುಕೊಳ್ಳುತ್ತಿರುವಂತೆ ತಮ್ಮ ಹೆಂಡತಿಯ ಧ್ವನಿ “ಹುಶಾರಾಗಿದ್ದಾರೆ ಕೆಂಪಿ. ಊಟವಾದಮೇಲೆ ಸ್ವಲ್ಪ ಹೊತ್ತು ಮಲಗುವ ಅಭ್ಯಾಸ ಅವರಿಗೆ” ಎಂದದ್ದು ಕೇಳಿಸಿತು.

“ಹಂಗೇನು, ಈಗ ಮಲಗಿ ನಿದ್ರೆಮಾಡಿದರೆ ರಾತ್ರಿ ನಿದ್ದೆ ಬರುತ್ತದೇನು? ಬಿಡಿ ನಾನಂತೂ ಬೆಳಗ್ಗೆ ಐದಕ್ಕೆ ಶಿವಾಂತ ಎದ್ದರೆ ರಾತ್ರಿನೇಯ ಮಲಗೋದು. ಹಗಲು ಮಲಗೋದು ಖಾಯಿಲೆಕಸಾಲೆ ಬಂದಾಗ ಅಷ್ಠೇಯಾ” ಎಂದದ್ದು ಕೇಳಿಸಿತು. ಅವಳು ಹೇಳೋ ಮಾತನಲ್ಲಿ ಸತ್ಯವಿದೆ. ಆದರೇನು ಮಾಡೋದು ಈ ದೇಹಕ್ಕೆ ಚೆನ್ನಾಗಿ ಅಭ್ಯಾಸವಾಗಿಬಿಟ್ಟಿದೆ. ಹೂಂ ಇನ್ನು ಮಲಗಿದ ಹಾಗೇ, ಟೈಮೂ ಆಯ್ತು ಎಂದುಕೊಂಡು ಎದ್ದು ಹಿತ್ತಲಕಡೆ ನಡೆದರು. ಮುಖಕ್ಕೆ ಚೆನ್ನಾಗಿ ನೀರೆರೆಚಿಕೊಂಡ ಬಟ್ಟರು ಕೈಕಾಲು ಮುಖ ತೊಳೆದುಕೊಂಡರು. ತಮ್ಮ ಕೋಣೆಗೆ ಬಂದವರೇ ಕೇಶವಯ್ಯನವರ ಮನೆಗೆ ಹೋಗಲು ತಯಾರಿ ನಡೆಸಿದರು. ಅಷ್ಟರಲ್ಲಿ ಒಳಗೆ ಬಂದ ಹೆಂಡತಿಯನ್ನು ನೋಡಿದವರೇ “ಅರೆ..ನಿನ್ನ ಶಿಷ್ಯೆಯನ್ನು ಇಷ್ಟುಬೇಗ ಕಳುಹಿಸಿಬಿಟ್ಟೆಯಾ? ಅಥವ ಅವಳೇ ಸಾಕು ಅಂತ ಮನೆಗೆ ಪೇರಿಕಿತ್ತಳೇ?” ಎಂದರು ವ್ಯಂಗವಾಗಿ.

“ಹಾಗೇನಿಲ್ಲ, ನಾನು ಎರಡುಗಂಟೆ ಮೇಲೆ ಬರುತ್ತಾಳೆಂದುಕೊಂಡಿದ್ದೆ. ಆ ಮಹಾರಾಯಿತಿ ಒಂದು ಗಂಟೆಗೇ ಹಾಜರಾಗಿದ್ದಳು. ಸುಮಾರು ವಿಷಯಗಳನ್ನು ಹೇಳಿಕೊಟ್ಟೆ. ಬೇಗನೆ ಅರ್ಥಮಾಡಿಕೊಂಡು ಮಾಡುತ್ತಿದ್ದಳು. ಊರಿನಿಂದ ಯಾರೋ ಬಂದರೆಂದು ಅವರ ಮಗ ಬಂದು ಕರೆದುಕೊಂಡು ಹೋದ.” ಎಂದಳು ಲಕ್ಷ್ಮಿ.

“ಹಾಗೆ ಹೇಳು, ಅಬ್ಬಾ ಏನುಗಂಟಲು, ಮಾತಾಡಿದರೆ ಮೂರು ಮನೆಗೆ ಕೇಳಿಸುತ್ತೆ. ಇನ್ನೂ ಸ್ವಲ್ಪ ಹೊತ್ತು ಮಲಗಿರುತ್ತಿದ್ದೆ. ಅವಳ ದೆಸೆಯಿಂದ..”

“ಸ್ವಾಮಿ ಭಟ್ಟರೇ ಅದೆಷ್ಟು ನಿದ್ರೆ ಮಾಡ್ತೀರಿ. ಅವಳು ಒಂದು ಗಂಟೆಯಿಂದ ಮಾತನಾಡುತ್ತಿದ್ದಳು. ನೀವು ಗಡದ್ದಾಗಿ ಮಲಗಿದ್ದಿರಿ. ನಾನು ಮಧ್ಯೆಮಧ್ಯೆ ಹೇಳ್ತಾನೇ ಇದ್ದೆ. ಇಷ್ಟೊತ್ತಾದ ಮೇಲೆ ಎಚ್ಚರವಾಗಿದೆ. ಅವ್ವಯ್ಯಾ ನಿಮ್ಮನ್ನು  ಆದಷ್ಟು ಬದಲಾಯಿಸಿದೆ. ಆದರೆ ಈ ನಿಮ್ಮ ನಿದ್ರೆಭೂತವನ್ನು ಬಿಡಿಸಲಿಕ್ಕಾಗಲಿಲ್ಲ. ಹೂ ಬಿಡಿ, ಈಗೇನು ಕುಡಿಯಲಿಕ್ಕೆ ನಿಂಬೆ ಪಾನಕ ಮಾಡಿಕೊಡಲಾ? ಇಲ್ಲವೇ ಮಜ್ಜಿಗೆ ಇದೆ ಕೊಡಲಾ?” ಎಂದು ಕೇಳಿದಳು ಲಕ್ಷ್ಮಿ.

“ಏನೂ ಬೇಡ ಲಕ್ಷ್ಮಿ ನಾಲ್ಕೂವರೆ ಆಗುತ್ತಾ ಬಂತು. ನಾನು ಕೇಶವಯ್ಯನವರ ಮನೆಗೆ ಹೋಗಿ ಬಂದುಬಿಡುತ್ತೇನೆ.” ಎಂದರು ಭಟ್ಟರು. “ಸರಿ ಹಾಗಾದರೆ ಜೋಯಿಸರು ಕೊಟ್ಟಿದ್ದ ಚೀಟಿ. ಅದರಲ್ಲಿ ನಮಗೆ ಅನುಕೂಲವಾಗುವ ದಿನಾಂಕಗಳನ್ನು ಗುರುತು ಹಾಕಿದ್ದೇನೆ. ಹಾಗೇ ಇದರಲ್ಲಿರುವ ವಿವರಗಳನ್ನು ಇನ್ನೊಂದುಕಡೆ ಬರೆದಿಟ್ಟುಕೊಂಡಿದ್ದೇನೆ. ಕೇಶವಣ್ಣನವರಿಗೆ ಕೊಟ್ಟು ಮುಂದಿನ ವಿಷಯ ಕೇಳಿಕೊಂಡು ಬರಲು ಹೇಳಿ.” ಎಂದು ಭಟ್ಟರ ಕೈಗೆ ಅದನ್ನು ಕೊಟ್ಟಳು. ಅವರನ್ನು ಕಳುಹಿಸಿ ಮುಂಭಾಗಿಲನ್ನು ಭದ್ರಪಡಿಸಿದಳು ಲಕ್ಷ್ಮಿ.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35068

(ಮುಂದುವರಿಯುವುದು)

ಬಿ.ಆರ್,ನಾಗರತ್ನ, ಮೈಸೂರು

8 Responses

 1. ನಯನ ಬಜಕೂಡ್ಲು says:

  ಎಂದಿನಂತೆ ಸುಂದರವಾಗಿ ಸಾಗುತ್ತಿರುವ ಕಥೆ

 2. ನಾಗರತ್ನ ಬಿ. ಆರ್ says:

  ಧನ್ಯವಾದಗಳು ನಯನ ಮೇಡಂ

 3. ಗಟ್ಟಿಯಾದ ನಿರ್ಧಾರ ತೆಗೆದು ಕೊಳ್ಳುವ ವಿಚ್ಚರವನ್ನು ಲಕ್ಷ್ಮಿಯ ಪಾತ್ರದಲೋಲಕ ತೋರಿಸಿ ಕೊಡುತ್ತಿದ್ದೀರಿ ಧನ್ಯವಾದಗಳು.

 4. . ಶಂಕರಿ ಶರ್ಮ says:

  ಬಹಳ ಚೆನ್ನಾಗಿ ಹರಿದು ಬರುತ್ತಿರುವ ಸಾಮಾಜಿಕ ಕಥಾನಕ ಓದುಗರ ಮನಗೆದ್ದಿದೆ ಎನ್ನುವುದರಲ್ಲಿ ಸಂಶಯವಿಲ್ಲ…ಧನ್ಯವಾದಗಳು ನಾಗರತ್ನ ಮೇಡಂ.

 5. ನಾಗರತ್ನ ಬಿ. ಆರ್ says:

  ಧನ್ಯವಾದಗಳು ಗೆಳತಿ ವೀಣಾ

 6. ಧನ್ಯವಾದಗಳು ಶಂಕರಿ ಮೇಡಂ

 7. Padma Anand says:

  ಮದುವೆಯ ತಯಾರಿಯ ಜೊತೆ ಜೊತೆಯಲ್ಲೇ ಕೌದಿ ಹೊಲೆಯುವ ಶಿಕ್ಷಣವೂ ಸೇರಿದುದು ಲಕ್ಷ್ಮಿಯ ಪಾತ್ರದ ತೂಕ ಹೆಚ್ಚಿಸಿತು. ಸೊಗಸಾಗಿ ಸಾಗುತ್ತಿದೆ ಕಾದಂಬರಿಯ ಓಘ.

 8. ಧನ್ಯವಾದಗಳು ಪದ್ಮಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: