ಬೇಸಿಗೆಕಾಲಕ್ಕೆ ಸೂಕ್ತವಾದ ತಂಪಿನ ಅಡುಗೆಗಳು
ಪ್ರತೀ ನಿತ್ಯ ಬೆಳಗಿನ ಜಾವ ಚಳಿ ಇದ್ದರೂ, ಮಧ್ಯಾಹ್ನ ಸೆಕೆ ಆರಂಭವಾಗಿದೆ. ಬರುವ ಈ ಬೇಸಿಗೆ ಕಾಲದಲ್ಲಿ ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು ಬತ್ತಿ, ನಿರ್ಜಲೀಕರಣವಾಗದಂತೆ ಈ ಪಾನಕ ಅಥವಾ ನಿಂಬೆಹಣ್ಣಿನ ಪಾನಕ ನಮ್ಮನ್ನು ಕಾಯುತ್ತದೆ.
1. ಬೇಲದ ಹಣ್ಣಿನ ಪಾನಕ:-
ಬೇಕಾದ ಪದಾರ್ಥಗಳು:- ಒಂದು ಬೇಲದ ಹಣ್ಣು, 4 ಟೇಬಲ್ ಚಮಚ ಬೆಲ್ಲದ ಪುಡಿ, 1/4 ಚಮಚ ಮೆಣಸು ಹಾಗೂ 1/4 ಚಮಚ ಏಲಕ್ಕಿ ಪುಡಿ
ಒಂದು ಬೇಲದ ಹಣ್ಣು ತೆಗೆದುಕೊಂಡು ಜೋರಾಗಿ ಹೊಡೆದು ಒಡೆದು ಇಟ್ಟುಕೊಳ್ಳಿ. ಅದನ್ನು 4 ಕಪ್ ನೀರಿನಲ್ಲಿ ಸೇರಿಸಿ ಚೆನ್ನಾಗಿ ಹಿಸುಕಿರಿ. ಜರಡಿಯಲ್ಲಿ ಸೋಸಿ ನಂತರ ಪುಡಿ ಮಾಡಿದ ಬೆಲ್ಲ, ಪುಡಿ ಮಾಡಿದ ಕಾಳುಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರಸಿದರೆ ಕುಡಿಯಲು ಸಿದ್ಧ ಬೇಲದ ಹಣ್ಣಿನ ಪಾನಕ.
2. ನೀರು ಮಜ್ಜಿಗೆ :- ಬಿಸಿಲಿನ ತಾಪಕ್ಕೆ ಜೀರ್ಣತೆಗೆ ಇದು ಉತ್ತಮ. ಗಟ್ಟಿ ಮೊಸರಿಗೆ, ನಮಗೆ ಬೇಕಾದ ದಪ್ಪ ಅಥವಾ ತೆಳುತನಕ್ಕೆ ಸರಿಯಾಗಿ ತಣ್ಣೀರು ಬೆರೆಸಿರಿ. ಹದವಾಗಿ ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಚೂರು ಚೂರಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ತುರಿದ ಹಸಿಶುಂಠಿಯನ್ನು ಜಜ್ಜಿ ಸೇರಿಸಿರಿ.
3. ಹೆಸರುಬೇಳೆ ಕೋಸಂಬರಿ:-
2 ರಿಂದ 3 ಗಂಟೆ ಹೆಸರುಬೇಳೆ ನೀರಿನಲ್ಲಿ ನೆನಸಿಡಿ. ನಂತರ ನೀರು ಬಸಿಯಿರಿ. ಹೆಸರುಬೇಳೆಗೆ ಹದವಾಗಿ ಉಪ್ಪು ಬೆರಸಿ. ಇಂಗು, ಕೊಂಚ ಅರಿಶಿನಪುಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಚಟಪಟ ಎಂದಾಗ ಹೆಸರುಬೇಳೆ ಮೇಲೆ ಹಾಕಿ. ತುರಿದ ತೆಂಗಿನಕಾಯಿ ಹಾಕಿ. ಲಿಂಬೆಹಣ್ಣಿನ ರಸ ಹಿಂಡಿ ಚೆನ್ನಾಗಿ ಕಲಸಿ ಇದಕ್ಕೆ ಕಹಿ ಇರದ ಎಳೆಸೌತೆಕಾಯಿಯ ಚಿಕ್ಕ ಚಿಕ್ಕ ಚೂರುಗಳನ್ನು ಹಾಕಿರಿ.ಇದಕ್ಕೆ ಸೌತೆಕಾಯಿ ಚೂರು ಬದಲು ಗಜ್ಜರಿ ತುರಿ ಹಾಕಿದರೆ ಪ್ರತಿದಿನದ ಸಲಾಡ್ ಆಗುತ್ತದೆ. ಇದೇ ರೀತಿ ಮೂಲಂಗಿ ತುರಿ ಹಾಕಿ ಸಲಾಡ್ ಮಾಡಿ. ಮಧುಮೇಹವಿದ್ದವರು ನವಿಲುಕೋಸಿನ ತುರಿ ಹಾಕಿ ಸಲಾಡ್ ಮಾಡಿ.
4. ಕಡಲೇಬೇಳೆ ಕೋಸಂಬರಿ :- 2 ರಿಂದ 3 ಗಂಟೆ ಕಡಲೇಬೇಳೆ ನೀರಿನಲ್ಲಿ ನೆನಸಿಡಿ. ನಂತರ ನೀರು ಬಸಿಯಿರಿ. ಕಡಲೇಬೇಳೆಗೆ ಹದವಾಗಿ ಉಪ್ಪು ಬೆರಸಿ. ಇಂಗು, ಕೊಂಚ ಅರಿಶಿನಪುಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಚಟಪಟ ಎಂದಾಗ ಕಡಲೇಬೇಳೆ ಮೇಲೆ ಹಾಕಿ. ತುರಿದ ತೆಂಗಿನಕಾಯಿ ಹಾಕಿ. ಲಿಂಬೆಹಣ್ಣಿನ ರಸ ಹಿಂಡಿ ಚೆನ್ನಾಗಿ ಕಲಸಿ ಇದಕ್ಕೆ ದಾಳಿಂಬೆ ಹಣ್ಣಿನ ಬೀಜಗಳನ್ನು ಹಾಕಿರಿ.
5. ದೊಣ್ಣ ಮೆಣಸಿನಕಾಯಿ ಪಚಡಿ:- ದೊಣ್ಣ ಮೆಣಸಿನಕಾಯಿ ಚೂರುಗಳನ್ನು ಎಣ್ಣೆ ಒಗ್ಗರಣೆಯಲಿ ಬಾಡಿಸಿ. ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು ಹಾಕಿ ಒಗ್ಗರಣೆ ಚಟ ಚಟ ಎನ್ನಲಿ. ನಂತರ ಇದಕ್ಕೆ ಚೂರು ಚೂರು ಮಾಡಿದ ಕೊತ್ತಂಬರಿ ಸೊಪ್ಪು ಹಾಕಿ, ಮೊಸರು ಹಾಕಿದರೆ ಅದೇ ಪಚಡಿಯಾಗುತ್ತದೆ.
6. ಟಮೋಟೋ ಈರುಳ್ಳಿ ಪಚಡಿ:- ಟಮೋಟೋ ಹಾಗೂ ಈರುಳ್ಳಿ ಎಣ್ಣೆ ಒಗ್ಗರಣೆಯಲ್ಲಿ ಚೆನ್ನಾಗಿ ಬಾಡಿಸಿ ಅಥವಾ ಹಸಿಯಾಗಿ ಒಗ್ಗರಣೆಗೆ ಹಾಕಿ. ಮೊಸರು ಬೆರಸಿದರೆ ಇದು ಉತ್ತಮ ಪಚಡಿ ಆಗುತ್ತದೆ ಇದು ಹಾಗೆಯೇ ತಿನ್ನಲು ನಂಚಿಕೊಳ್ಳಲು ಚೆನ್ನ. ಅದರಲ್ಲೂ ಅನ್ನ ಕಲಸಿಕೊಂಡು ತಿಂದರೆ ಇನ್ನೂ ಚೆನ್ನ.
-ಎನ್.ವ್ಹಿ ರಮೇಶ್
ಬೇಸಿಗೆಯಲ್ಲಿ ತಂಪಾಗಿಸುವ ಅಡಿಗೆಗಳ ವಿವರಣೆ ಸೊಗಸಾಗಿ ಮೂಡಿಬಂದಿದೆ ರಮೇಶ್ ಸಾರ್…. ಧನ್ಯವಾದಗಳು.
Very nice
ಬೇಸಿಗೆಯ ಬಿಸಿಲಿನ ಬೇಗೆಯ ತಾಪಕೆ/
ಸೇವಿಸಬೇಕು ನೀರನು ಆಗುವ ದಾಹಕೆ/
ಆಗುವುದಾಗ ಆಹ್ಲಾದವು ತನುಮನಕೆ/
ಎಲ್ಲಿಲ್ಲದ ಆನಂದವು ಬಳಲಿದ ದೇಹಕೆ/
ಬೇಕು ಸಿಹಿ ಪಾನಕ ಮನ ತೃಪ್ತಿಸಲು
ಸವಿ ರುಚಿಯಾದ ನಿಂಬೆಹಣ್ಣಿನ ಪಾನೀಯ/
ಬೇಕು ಸಿಹಿ ಪಾನಕ ಮನ ತೃಪ್ತಿಸಲು/
ನೀರು ಮಜ್ಜಿಗೆಯ ಪಾನವು ರಂಜನೀಯ /
ವೈವಿಧ್ಯತೆಯ ಪಚಡಿಗಳು ಸಮುಚಿತವು/
ಒದಗಿಸುವುದು ನಿಸರ್ಗವುಮಿಶ್ರಣಾಂಶವ/
ಕೋಸಂಬರಿಯು ಉಣಲು ಸಂತೋಷವು/
ಹರಸಿರುವುದು ಪ್ರಕೃತಿಯು ಘಟಕಾಂಶವ/
ಮಾರ್ಪಡುವ ಋತುಗಳಲ್ಲಿ ಕಾಣುವ ದೈವವ/
ತದನುಸಾರದಲ್ಲಿ ಸ್ವರೂಪಿಸುವ ಜೀವನವ/
ಬದಲಾಗುವ ಋತುಗಳಲ್ಲಿ ನೋಡುವ ದೈವವ/
ಸೂಕ್ತರೀತಿಯಲ್ಲಿ ಬಾಳನು ಮಾರ್ಪಡಿಸುವ
ಬಿರುಬೇಸಿಗೆಗೆಗಾಗಿ ಕೆಲವು ತಂಪು ಅಡುಗೆಗಳನ್ನು, ಪಾನೀಯಗಳನ್ನು ತಯಾರಿಸಿ ಸೇವಿಸಲು ತಮ್ಮ ಸಕಾಲಿಕ ಬರೆಹ ಬಹಳ ಸೂಕ್ತ…ಧನ್ಯವಾದಗಳು.