ಅವಿಸ್ಮರಣೀಯ ಅಮೆರಿಕ-ಎಳೆ 12
4D ಸಿನಿಮಾ ಮಜ…
ಅದಾಗಲೇ ಮಧ್ಯಾಹ್ನದ ಹೊತ್ತು.. ಹಸಿದ ಹೊಟ್ಟೆಯನ್ನು ತಣಿಸಿ ಮುಂದಕ್ಕೆ ಅತೀ ಕುತೂಹಲದ 4D ಸಿನಿಮಾ ನೋಡಲು ನಮ್ಮ ದಂಡು ಹೊರಟಿತು. ನನಗಂತೂ ಸಮಾಧಾನ..ಇದರಲ್ಲಾದರೂ ಭಯಪಡುವಂತಹುದು ಏನೂ ಇರಲಾರದು ಎಂದು.. ಆದರೆ ಮೊದಲೊಮ್ಮೆ ‘ಕುಟ್ಟಿಚ್ಚಾತನ್’ ಎಂಬ 3D ಸಿನಿಮಾ ನೋಡಿ ಹೆದರಿ ಕಣ್ಣುಮುಚ್ಚಿ ಕುಳಿತಿದ್ದುದು ನೆನಪಿಗೆ ಬಂತು!
ಸುಮಾರು ಐವತ್ತು ಆಸನಗಳ, ನಸುಗತ್ತಲೆಯ ಆ ಪುಟ್ಟ ಸಿನಿಮಾ ಮಂದಿರವನ್ನು ಹೊಕ್ಕಾಗ ಅದಾಗಲೇ ಜನ ತುಂಬಿ ಬಿಟ್ಟಿದ್ದರು. ನಾವು ನೋಡುವಂತಹುದು ಮಕ್ಕಳ ಅನಿಮೇಶನ್ ಸಿನಿಮಾ ಆಗಿತ್ತು. ಇದೇನು ಮಕ್ಕಳ ಸಿನಿಮಾಕ್ಕೆ ಬಂದುದು ಎಂದುಕೊಂಡು ಸೀಟಿನಲ್ಲಿ ಕೂತಾಗ, ಸೀಟಿನಲ್ಲಿ ಏನೋ ವಿಶೇಷತೆಯಿರುವುದು ಗಮನಕ್ಕೆ ಬಂತು.. ಏನೆಂದು ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಸಿನಿಮಾ ಪ್ರಾರಂಭವಾದಾಗ ತಿಳಿಯಿತು… ಅದರ ವಿವಿಧ ವಿಶೇಷತೆಗಳು. ಪ್ರತಿ ಸೀಟಿನ ಪಕ್ಕದಲ್ಲೇ ಇತ್ತು ಪ್ರತ್ಯೇಕ ಧ್ವನಿವರ್ಧಕ. ಸಿನಿಮಾದಲ್ಲಿ ಬರುವ ದೃಶ್ಯಗಳಿಗನುಸಾರವಾಗಿ ಆ ಕುರ್ಚಿಯೂ ಸರಿಯುವಂತೆ ಭಾಸವಾಗುತ್ತಿತ್ತು.. ಅಲ್ಲಿ ಮಳೆ ಬಂದಾಗ ನಮ್ಮ ಮೈಮೇಲೆ ನೀರಹನಿ ಬೀಳುತ್ತಿತ್ತು! ಮಿಂಚು ಗುಡುಗುಗಳು ನಮ್ಮ ಕಣ್ಣು ಕಿವಿಗಳಿಗೆ ನೇರವಾಗಿ ಅಪ್ಪಳಿಸುವಂತೆ ಭಾಸವಾಗುತ್ತಿತ್ತು.. ಜೊತೆಗೇ ನಮ್ಮ ಕುರ್ಚಿಯೂ ಗಡಗಡನೆ ಅಲ್ಲಾಡುತ್ತಿತ್ತು! ಬೆಂಕಿಯ ದೃಶ್ಯವಿದ್ದರೆ ಬಿಸಿಯ ಅನುಭವ..ಮಂಜು ಬೀಳುತ್ತಿದ್ದರೆ ಚಳಿಯ ಅನುಭವ! ಎಲ್ಲವೂ ಚೆನ್ನಾಗಿತ್ತು..ಆದರೆ ಇಲ್ಲಿಯೂ ನನ್ನ ಸಮಸ್ಯೆಯೆಂದರೆ, ಭಯಾನಕ ದೃಶ್ಯಗಳಲ್ಲಿ ಅದರಲ್ಲಿರುವ ಪಾತ್ರಗಳು ನಮ್ಮ ಮೈಮೇಲೇ ಬಂದು ಬೀಳುವಂತಿರುವುದು..ನಾನು ಭಯದಿಂದ ಕಣ್ಣು ಮುಚ್ಚಿ ಕೂರುವುದು ನಡೆದೇ ಇತ್ತು. ಅಂತೂ 3D ಮತ್ತು 4D ಸಿನಿಮಾಗಳ ಮಧ್ಯೆ ಇರುವ ವ್ಯತ್ಯಾಸ ಮಾತ್ರ ಅದ್ಭುತ!
ಮುಂದಕ್ಕೆ, ಇನ್ನೊಂದು ಸಾಹಸಕ್ರೀಡೆಗೆ ಹೋಗುವ ತಯಾರಿ ನಡೆಸಿದಾಗ ನಾನು ಹಿಂದೇಟು ಹಾಕಿದೆ..ಯಾಕೆಂದು ನೀವಾಗಲೇ ಊಹಿಸಿರುವಿರಲ್ಲಾ? ಅಲ್ಲಿ, ಹರಿಯುವ ಕಾಲುವೆಯಲ್ಲಿ, ಮೂವತ್ತು ಮಂದಿ ಕುಳಿತುಕೊಳ್ಳಲು ಅವಕಾಶವಿರುವ ವಿಶೇಷ ಯಾಂತ್ರೀಕೃತ ದೋಣಿಯು ಸಜ್ಜಾಗಿ ನಿಂತಿತ್ತು. ಅದಾಗಲೇ ಅದರಲ್ಲಿ ಮಕ್ಕಳು, ಮುದುಕರೆನ್ನದೆ ಜನ ಕುಳಿತುಬಿಟ್ಟಿದ್ದರು. ಅವರನ್ನು ತೋರಿಸಿ, ಅಳಿಯ ನಮ್ಮಲ್ಲಿ ಧೈರ್ಯ ತುಂಬಿ ಅದರಲ್ಲಿ ಕುಳಿತುಕೊಳ್ಳಿಸುವಲ್ಲಿ ಸಫಲನಾದ ಬಿಡಿ!
ಮುಂದೆ ತಗೊಳ್ಳಿ, ಯಥಾಪ್ರಕಾರ ನಮ್ಮನ್ನು ಬೆಲ್ಟ್ ಬಿಗಿದು, ಎದುರಿನಲ್ಲಿ ಅಡ್ಡಲಾಗಿ ಕಬ್ಬಿಣದ ಹಿಡಿಕೆಯನ್ನು ಸಿಕ್ಕಿಸಿ ಕೂರಿಸಲಾಯಿತು.. ಜೊತೆಗೆ, ಹಾಕಿಕೊಳ್ಳಲು ರೈನ್ ಕೋಟುಗಳನ್ನೂ ನೀಡಿದರು. ಸ್ವಲ್ಪ ಹೊತ್ತಿನಲ್ಲಿ, ಸಾಧಾರಣ ವೇಗದಲ್ಲಿ ಚಲಿಸುತ್ತಿದ್ದ ನಮ್ಮ ದೋಣಿಯು, ಕತ್ತಲೆಯ ಗುಹೆಯಂತಹ ರಚನೆಯೊಳಗೆ ಚಲಿಸತೊಡಗಿತು. ಅಲ್ಲಿ , ಮೇಲಿನಿಂದ ರಭಸದಲ್ಲಿ ನೀರಿನ ಹನಿಗಳು ಬಿದ್ದು ನಮ್ಮ ಕೋಟನ್ನು ಚೆನ್ನಾಗಿ ಒದ್ದೆ ಮಾಡಿದ್ದಂತೂ ನಿಜ. ಆ ಕತ್ತಲೆಯಲ್ಲಿ ಏನೂ ಕಾಣುತ್ತಿರಲಿಲ್ಲವಾದರೂ, ದೋಣಿಯು ಬಹಳ ವೇಗವಾಗಿ ಚಲಿಸುವ ಅನುಭವವಾಗುತ್ತಿತ್ತು. ಕೆಲವೇ ಕ್ಷಣಗಳಲ್ಲಿ, ಮುಂದೆ ಇರುವ ಸುಮಾರು ಇಪ್ಪತ್ತು ಅಡಿ ಎತ್ತರದ ಜಲಪಾತದೊಂದಿಗೆ ನಾವೂ ದೋಣಿಯೊಂದಿಗೆ ಬೀಳುವೆವೆಂಬ ಕಲ್ಪನೆಯೂ ಇಲ್ಲದಿರುವಾಗಲೇ, ಆ ಕತ್ತಲೆಯಲ್ಲಿ ಧಡಾರೆಂದು ಭಯಂಕರ ಸದ್ದು ಮಾಡುತ್ತಾ ಕೆಳಗೆ ಬಿದ್ದೇ ಬಿಟ್ಟಿತ್ತು..ನಮ್ಮ ದೋಣಿ! ನಾವು ಎಲ್ಲಿ ದೋಣಿ ಏರಿದ್ದೆವೋ ಅಲ್ಲಿ ನಮ್ಮ ಜಲವಿಹಾರಿ ನಮ್ಮ ಸಹಿತ ನೀರಿನಲ್ಲಿ ತೇಲುತ್ತಿತ್ತು…ಆನಂದದಿಂದ!!
ಅಲ್ಲಾವುದ್ದೀನನ ಭೇಟಿ…!
ಮುಂದಕ್ಕೆ ಸೊಗಸಾದ ನಾಟಕ ಮಂದಿರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಮ್ಮ ಗಮನ… ಸುಮಾರು 2000 ಆಸನಗಳುಳ್ಳ, ಫ್ರೆಂಚ್ ಮಾದರಿಯಲ್ಲಿ ಕಟ್ಟಲಾದ ಹಾಗೂ ಫ್ರೆಂಚ್ ಮಾದರಿಯ ಒಳಾಂಗಣ ಅಲಂಕಾರಗಳನ್ನು ಹೊಂದಿದ ಸುಸಜ್ಜಿತ, ಸುಂದರ, ಅತ್ಯಂತ ವಿಶಾಲವಾದ ನಾಟಕ ಮಂದಿರದೊಳಗೆ ಹೊಕ್ಕಾಗ ನನಗೆ ದಿಗ್ಭ್ರಮೆ ಪಡುವಂತಾಯಿತು. 1930- 1931ನೇ ಇಸವಿಯ ಮಧ್ಯೆ ಬರೇ ಆರು ತಿಂಗಳ ಅವಧಿಯಲ್ಲಿ ಕಟ್ಟಿ ಪೂರ್ತಿಗೊಂಡ ಹೆಗ್ಗಳಿಕೆ ಇದರದು. ಚಾರ್ಲಿ ಚಾಪ್ಲಿನ್ ಅವರ City Lights ಎಂಬ ಸಿನಿಮಾದ ಮೊದಲನೇ ಪ್ರದರ್ಶನವು, ಇದರಲ್ಲಿ ನಡೆಯುವ ಮೊದಲನೇ ಪ್ರದರ್ಶನವಾಗಬೇಕೆಂಬ ನಿಬಂಧನೆ ಮೇರೆಗೆ ಅವರು ಈ ಮಂದಿರದ ಕೊನೆ ಹಂತದ ನಿರ್ಮಾಣ ಕಾರ್ಯಕ್ಕೆ ಧನ ಸಹಾಯವನ್ನು ಮಾಡಿದರಂತೆ.
ಅಲ್ಲಾವುದ್ದೀನ ಮತ್ತು ಅದ್ಭುತ ದೀಪ ದ ಕಥೆಯು ನಾಟಕ ರೂಪದಲ್ಲಿ ಅನಾವರಣಗೊಳ್ಳಲು ಕ್ಷಣಗಣನೆ ಆರಂಭವಾಯಿತು. ಆ ಕಥೆಯನ್ನು ಅದೆಷ್ಟೋ ಬಾರಿ ಓದಿದ್ದಿದೆ, ಟಿ.ವಿ.ಯಲ್ಲಿ ಮಕ್ಕಳಿಗಾಗಿ ಬರುತ್ತಿದ್ದ ಅನಿಮೇಶನ್ ಸಿನಿಮಾವನ್ನು ಆಗಾಗ ಇಣುಕಿ ನೋಡಿದ್ದಿದೆ. ಆದರೆ, ಅದನ್ನು ನಾಟಕದ ರೂಪದಲ್ಲಿ ಹೇಗೆ ಮಾಡಬಹುದೆಂಬ ಕುತೂಹಲವುಂಟಾಗಿತ್ತು. ಭವ್ಯ ವೇದಿಕೆಯಲ್ಲಿ, ಪೂರಕ ಒಳಾಂಗಣ ಹಾಗೂ ದೀಪದ ವ್ಯವಸ್ಥೆಗಳು ನಮ್ಮ ಕಲ್ಪನೆಗೆ ನಿಲುಕದಷ್ಟು ಉತ್ಕೃಷ್ಟವಾಗಿದ್ದವು. ವಸ್ತ್ರ ವಿನ್ಯಾಸ ವಂತೂ ಅದ್ಭುತ! ಆಂಗ್ಲ ಭಾಷೆಯಲ್ಲಿ ನಡೆದ ನಾಟಕವು ಟಿ.ವಿ.ಯಲ್ಲಿ ಬರುತ್ತಿದ್ದ ಅನಿಮೇಶನ್ ಮಾದರಿಯಲ್ಲಿತ್ತು. ಅದರಲ್ಲಿದ್ದ ಮಂಗ, ಪಕ್ಷಿಯ ಪಾತ್ರಗಳನ್ನು ನೋಡುವಾಗ ನಾಟಕವೆಂದರೆ ಹೀಗೂ ಇರುತ್ತದೆ ಎಂಬುದು ತಿಳಿಯುವಂತಾಯ್ತು. ಹುಡುಗಾಟದ ಹುಡುಗ ಅಲ್ಲಾವುದ್ದೀನನ ಪಾತ್ರವಂತೂ ಅತ್ಯಂತ ಚುರುಕಾದ, ಸಹಜ ಹಾಸ್ಯದ ಅಭಿನಯದೊಂದಿಗೆ ಮೊದಲಿನಿಂದ ಕೊನೆಯ ವರೆಗೂ ಏಕ ಪ್ರಕಾರವಾಗಿ ಮನಸೆಳೆಯಿತು..ಬಾಹ್ಯ ಪ್ರಪಂಚವನ್ನೇ ಮರೆಸಿ, ಅದರಲ್ಲೇ ನಮ್ಮನ್ನು ತಲ್ಲೀನಗೊಳಿಸಿಬಿಟ್ಟಿತ್ತು. ಒಂದು ತಾಸಿನ ಈ ನಾಟಕವು ಕೊನೆಗೊಂಡಾಗ ನಿಜಕ್ಕೂ ಸಂತಸದೊಂದಿಗೆ, ಇಷ್ಟು ಬೇಗ ಮುಗಿಯಿತಲ್ಲಾ ಎಂದು ಬೇಸರಗೊಂಡದ್ದಂತೂ ನಿಜ.
WALK OF FAME
ಲಾಸ್ ಏಂಜಲ್ಸ್ ನಲ್ಲಿ ಅತಿ ಪ್ರಖ್ಯಾತಿ ಪಡೆದ ಇನ್ನೊಂದು ವಿಶೇಷ ಜಾಗವೆಂದರೆ, Walk of Fame . (Hall of Fame) ಜಗತ್ತಿನಲ್ಲಿ, ಮನೋರಂಜನಾ ವಿಭಾಗದಲ್ಲಿ ಸಾಧನೆ ಮಾಡಿ ಪ್ರಖ್ಯಾತಿ ಹೊಂದಿದವರ ಗೌರವಾರ್ಥ ಇದನ್ನು ರೂಪಿಸಲ್ಪಟ್ಟಿದೆ. ಇದರಲ್ಲಿ,ಐದು ಮೂಲೆಗಳುಳ್ಳ ನೀಲಿಬಣ್ಣದ ಹಿನ್ನೆಲೆಯುಳ್ಳ, ಗುಲಾಬಿ ಬಣ್ಣದ, ಹಿತ್ತಾಳೆಯಲ್ಲಿ ಮಾಡಿದ ನಕ್ಷತ್ರವನ್ನು ಕಾಲುದಾರಿಯಲ್ಲಿ ಅಳವಡಿಸಲಾಗುವುದು. ಅದರ ಮೇಲೆ, ವ್ಯಕ್ತಿಯ ಹೆಸರು, ಅವರು ಮಾಡಿದ ಸಾಧನೆ ಮತ್ತು ಅದನ್ನು ಅಳವಡಿಸಿದ ವರ್ಷವನ್ನು ಕೆತ್ತಲಾಗಿದೆ.
1953ನೇ ಇಸವಿಯಲ್ಲಿ ಇಂತಹ ಒಂದು ಕಾರ್ಯವನ್ನು ಆಯೋಜಿಸಲು ರೂಪರೇಖೆಗಳನ್ನು ಸಿದ್ಧಪಡಿಸಲಾಗಿದ್ದರೂ, 1958ರಲ್ಲಷ್ಟೇ ಕಾರ್ಯಗತಗೊಂಡಿತು. ಆದರೆ ಅನೇಕ ರೀತಿಯ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು, 1978ನೇ ಜುಲೈ ತಿಂಗಳಿನಿಂದ ನಿಜವಾದ ಅರ್ಥದಲ್ಲಿ ಕೆಲಸ ಪ್ರಾರಂಭವಾಯಿತು. ಜಗತ್ತಿನ ನಾಲ್ಕೂ ಮೂಲೆಗಳಲ್ಲಿರುವ, ಯಾವುದೇ ಪ್ರಖ್ಯಾತ ಸಂಗೀತಗಾರರು, ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಇತರರು ನಾಮ ನಿರ್ದೇಶನಕ್ಕೆ ಅರ್ಹರಾಗಿರುವರು. ಅಲ್ಲಿಯ ಪ್ರಖ್ಯಾತ ರಸ್ತೆಯ ಪಕ್ಕದ ಕಾಲುದಾರಿಯಲ್ಲಿ ಇದನ್ನು ಕಾಣುವುದೇ, ವ್ಯಕ್ತಿಯೊಬ್ಬರ ಜೀವನದ ಅತಿದೊಡ್ಡ ಹೆಮ್ಮೆಯ ಹಾಗೂ ಗೌರವದ ವಿಷಯವೆನ್ನಬಹುದು. ಇಲ್ಲಿ ಆಸ್ಕರ್ ಪ್ರಶಸ್ತಿ ಪಡೆದವರ ಹೆಸರನ್ನು ಕಾಣಬಹುದು. ಮಿಕ್ಕಿ ಮೌಸ್ ಪಾತ್ರಕ್ಕೆ ಸಿಕ್ಕಿದ ಗೌರವವು ಅನಿಮೇಶನ್ ಪಾತ್ರಕ್ಕೆ ಸಿಕ್ಕಿದ ಮೊದಲ ಗೌರವವಾಗಿದೆ. ಅಲ್ಲಿ ಚಾರ್ಲಿಚಾಪ್ಲಿನ್ ಹೆಸರು ಬರೆದ ನಕ್ಷತ್ರ ನೋಡಿ ಬಹಳ ಖುಷಿಯಾಯ್ತು.
ಅಮಿತಾಬ್ ಬಚ್ಚನ್ ಹೆಸರಿನ ನಕ್ಷತ್ರವಿದೆಯೆಂದು ತಿಳಿದು ಹುಡುಕಿದ್ದೇ ಹುಡುಕಿದ್ದು… ಆದರೆ ಸಿಗಲಿಲ್ಲ. ಸುಮಾರು ಮೂರು ಕಿ.ಮೀ.ಉದ್ದಕ್ಕೆ ಬೇರೆ ಬೇರೆ ರಸ್ತೆಗಳ ಪಕ್ಕಕ್ಕಿರುವ, ಅಲ್ಲದೆ 2,690ಕ್ಕಿಂತಲೂ ಹೆಚ್ಚು ನಕ್ಷತ್ರಗಳ ನಡುವೆ ಇದನ್ನು ಎಲ್ಲೆಂದು ಹುಡುಕಲಿ ಅಲ್ಲವೇ? ವರ್ಷದಲ್ಲಿ ಸುಮಾರು 10ಮಿಲಿಯ ಪ್ರವಾಸಿಗರು ಭೇಟಿ ಕೊಡುವ ಈ Walk of Fame ನ ನಕ್ಷತ್ರಗಳ ಮೇಲೆ ನಡೆದಾಡಿದಾಗ, ಅದರಲ್ಲಿ ಬರೆದವರ ಹೆಸರನ್ನು ಓದಿದಾಗ ಮನಸ್ಸಿಗೆ ಹೆಮ್ಮೆ ಎನಿಸಿದರೂ, ನನಗೆ ಮನಸ್ಸಿನ ಮೂಲೆಯಲ್ಲಿ ಅನ್ನಿಸಿದ್ದು.. ಇಷ್ಟು ದೊಡ್ಡ ಪ್ರಖ್ಯಾತರ ಪ್ರಶಸ್ತಿಗಳು ನಮ್ಮ ಕಾಲ ಕೆಳಗೆ ಇರುವುದು, ಅದರ ಮೇಲೆಯೇ ನಡೆದಾಡುವುದು ಸರಿಯೇ..?
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=34891
ಮುಂದುವರಿಯುವುದು………
-ಶಂಕರಿ ಶರ್ಮ, ಪುತ್ತೂರು.
ಎಂದಿನಂತೆ ಅಮೆರಿಕ. ಪ್ರವಾಸ ಕಥನ ವೃತ್ತಾಂತ ಚೆನ್ನಾಗಿ ಮುಂದುವರೆಯುತ್ತಿದೆ..
ಧನ್ಯವಾದಗಳು ಮೇಡಂ.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ಪ್ರತಿಯೊಂದನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ಚಂದದ ಅನುಭವ ಲೇಖನ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.