ಸಂಪಾದಕೀಯ

ಜನರೇಕೆ ಹೀಗೆ?

Share Button

ತುರ್ತಾಗಿ ವೈದ್ಯರನ್ನು ಭೇಟಿಯಾಗಬೇಕಿತ್ತು. ಸಾಯಂಕಾಲ ಐದು ಘಂಟೆಗೆ ಭೇಟಿಯ ಸಮಯ ನಿಗದಿಯಾಗಿದ್ದರೂ, ಸಂಜೆ ಏಳು ಘಂಟೆಯವರೆಗೂ ನನ್ನ ಸರದಿ ಬಂದಿರಲಿಲ್ಲ. ನನ್ನಂತೆ ಹಲವರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಅತ್ತ ಇತ್ತ ನೋಡುವುದು, ನಮ್ಮ ಹೆಸರೆಲ್ಲಾದರೂ ಕರೆಯಬಹುದಾ ಅಂತ ಕಿವಿ ಆಗಾಗ ನೆಟ್ಟಗೆ ಮಾಡುತ್ತಾ ಸಮಯ ಸಾಗುತ್ತಿತ್ತು. ಒಮ್ಮೆಲೇ  ಅಬ್ಬರದ ಹಿಂದಿ ಗೀತೆಗಳು ಕೇಳಲಾರಂಭಿಸಿತು. ಯಾರಪ್ಪಾ, ಇಷ್ಟು ಜೋರಾಗಿ ಹಾಡು ಕೇಳುತ್ತಿರುವವರೆಂದು ಸುತ್ತ ಕಣ್ಣಾಡಿಸಿದಾಗ ಸುಶಿಕ್ಷಿತ ಯುವತಿಯೊಬ್ಬಳು ತನ್ನ ಮೊಬೈಲಿನಲ್ಲಿ ಹಿಂದಿ ಚಲನಚಿತ್ರದ ಹಾಡಿನ ನೃತ್ಯವನ್ನು ನೋಡುತ್ತಿದ್ದಳು. ಆ ದಿನ ನನಗೆ ಶಬ್ದ ಕೇಳಿದರೆ ಕಿರಿ ಕಿರಿ ಆಗುತ್ತಿತ್ತು. ಅಲ್ಲಿದ್ದ ಕೆಲವರಿಗೂ ಕಿರಿ ಕಿರಿ ಆಗುತ್ತಿತ್ತು ಅನ್ನುವುದು ಅವರ ಮುಖಭಾವದಿಂದಲೇ ವ್ಯಕ್ತವಾಗುತ್ತಿತ್ತು. ಆದರೂ ಯಾರೂ ಏನೂ ಹೇಳದೆ ಸಹಿಸಿಕೊಂಡಿದ್ದರು. ನಾನು ಆ ಯುವತಿಯ ಬಳಿ ಹೋಗಿ ನಯವಾಗಿ ಕೇಳಿದೆ “ಶಬ್ದ ಕಿರಿ ಕಿರಿ ಆಗುತ್ತಿದೆ. ದಯವಿಟ್ಟು ವಾಲ್ಯೂಮ್ ಕಡಿಮೆ ಮಾಡಬಹುದೇ?”. ಯಾವುದಪ್ಪಾ ಇದೊಂದು ವಿಚಿತ್ರ ಪ್ರಾಣಿ ಅನ್ನುವಂತೆ ನನ್ನೆಡೆಗೆ ನೋಡಿ, ನಂತರ ವಾಲ್ಯೂಮ್ ಕಡಿಮೆ ಮಾಡಿದಳೆನ್ನಿ.

ಐದು ನಿಮಿಷವೂ ಕಳೆದಿಲ್ಲ, ಇನ್ನೋರ್ವ ಮಹಾಶಯ ತನ್ನ ಮಗನಿಗೋಸ್ಕರ ಕಾರ್ಟೂನ್ ವಿಡಿಯೋ ಹಾಕಿ ಕೊಟ್ಟ. “ಅಯ್ಯೋ, ಇವತ್ತು ದಿನವೇ ಸರಿಯಿಲ್ಲ” ಅಂದುಕೊಂಡು ಶಬ್ದ ತಡೆಯಲು ಸಾಧ್ಯವೇ ಆಗದಿದ್ದರೆ ಒಂದೆರಡು ನಿಮಿಷ ಕಾದು ಬಳಿಕ ಹೇಳೋಣವೆಂದು, ಕಿವಿಗೆ ಬೆರಳಿಟ್ಟುಕೊಂಡೆ. ಸದ್ಯ ಆ ಮಹಾಶಯನಿಗೆ ದೂರವಾಣಿ ಕರೆ ಬಂತು. ಅಲ್ಲಿಗೆ ಆ ರಗಳೆ ತಪ್ಪಿತು. ಬಚಾವ್ ಅಂದುಕೊಂಡೆ. ನನ್ನ ಸರದಿಗಾಗಿ ಇನ್ನೂ ಕಾಯಬೇಕಿತ್ತು. ಕಾಯುವಿಕೆ ಮುಂದುವರಿದಿತ್ತು…..

ನನ್ನ ಪಕ್ಕವೇ ಕುಳಿತಿದ್ದ ಒಬ್ಬ ಹಿರಿಯ ನಾಗರಿಕರಿಗೆ ಜ್ಞಾನೋದಯವಾದಂತೆ ಒಮ್ಮೆಗೆ ತಮ್ಮ ಮೊಬೈಲ್ ತೆಗೆದು ಅವರ ಮೆಚ್ಚಿನ ಧಾರಾವಾಹಿ ನೋಡಲಾರಂಭಿಸಿದರು. ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿ ಎಂಬಂತಾಯಿತು ನನ್ನ ಸ್ಥಿತಿ. ಸ್ವಲ್ಪವೇ ಶಬ್ದ ಕೇಳಿದರೂ ತಲೆಯೊಳಗೆ ನೋವು ಬರುತ್ತಿತ್ತು. ಅವರ ಬಳಿ ಬಿನ್ನವಿಸಿಯೇ ಬಿಟ್ಟೆ “ಸರ್, ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡುವಿರಾ?”. “ಓಹ್, ನೀವು ಧಾರಾವಾಹಿ ನೋಡುವುದಿಲ್ಲವೇ?” ಅನ್ನುವ ಒಂದು ಮರುಕದ ನೋಟ ನನ್ನತ್ತ ಬೀರಿ ಸ್ವಲ್ಪ ವಾಲ್ಯೂಮ್ ತಗ್ಗಿಸಿದರು ಆ ವ್ಯಕ್ತಿ.

PC: Internet

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವವರೇ ಜಾಸ್ತಿ. ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ಮಾತ್ರ ಹೆಚ್ಚಿನವರು ವೈದ್ಯರ ಬಳಿಗೆ ಹೋಗುವುದು. ವೈದ್ಯರ ಭೇಟಿಗಾಗಿ ಕಾಯುವಾಗ, ಅಲ್ಲಿಯ ವಾತಾವರಣ ಗದ್ದಲದಂದ ಕೂಡಿದ್ದರೆ ರೋಗಿಗಳಿಗೂ ಕಷ್ಟ. ಆ ದಿನ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳಿವು. ಜನರೇಕೆ ಹೀಗೆ ವರ್ತಿಸುವರು ಬುದ್ಧಿಯಿಲ್ಲದವರ ತರಹ? ತನ್ನಿಂದ ಬೇರೆಯವರಿಗೆ ಉಪದ್ರ ಆಗಬಹುದು ಅನ್ನುವ ಕನಿಷ್ಟ ಕಾಳಜಿಯೂ ಇಲ್ಲವೆಂದರೆ! ವಿದ್ಯಾವಂತರಾಗಿದ್ದರೆ ಸಾಕೇ?ಪ್ರಜ್ಞಾವಂತರಾಗಿರಬೇಡವೇ? ನಾವೆಲ್ಲಿದ್ದೇವೆ ಅನ್ನುವ ತಿಳಿವಳಿಕೆ ಜಾಗೃತವಾಗಿರಬೇಕಲ್ಲವೇ? ಅದು ಸಂತೆಯಲ್ಲ ತಾನೇ? ಜನರು ಯಾವಾಗ ಬದಲಾಗಬಹುದು?

ಡಾ ಕೃಷ್ಣಪ್ರಭ ಎಂ. ಮಂಗಳೂರು

15 Comments on “ಜನರೇಕೆ ಹೀಗೆ?

  1. ಜನರೇಕೆ ಹೀಗೆ ಬಹುತೇಕ ಜನ ಹಾಗೇ ಮೇಡಂ.. ಇಂಥ ಅನುಭವಗಳು ..ನನಗೂ ಕೆಲವೆಡೆ ಆಗಿವೆ.ಹೇಳಲು ಹೋಗಿ.. ಅಡ್ಡ ಹೆಸರುಗಳನ್ನು ಪಡೆದು..ಈಗ..ನಾನು ಕಿವುಡಿ…ಕುರುಡಿಯಂತೆ ಇರುವುದ ಕಲಿತಿದ್ದೇನೆ…ಮೇಡಂ ಅನುಭವದ ಲೇಖನ ನೆನಪನ್ನು ಕೆದಕಿತು..ಧನ್ಯವಾದಗಳು ಮೇಡಂ

    1. ತಮ್ಮಿಂದಾಗಿ ಇತರರಿಗೆ ತೊಂದರೆಯಾಗುತ್ತಿದೆ ಅನ್ನುವ ಸಾಮಾನ್ಯ ಅರಿವು ಕೂಡಾ ಕೆಲವರಿಗೆ ಇರುವುದಿಲ್ಲ. ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

  2. ಬಹಳ ಚೆನ್ನಾಗಿದೆ ಮೇಡಂ. ಇಲ್ಲಿ ಹೆಚ್ಚಿನವರು ಹೀಗೇನೇ ಬೇರೆಯವರ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ, ತೊಂದರೆ ಆಗ್ತದೆ ಅಂತ ಬಾಯಿ ಬಿಟ್ಟು ಹೇಳಿದರೂ care ಮಾಡುವುದಿಲ್ಲ.

    1. ಯಾರಪ್ಪಾ ಇವರು. ಬಹುಶಃ ಅನ್ಯಗ್ರಹದ ಜೀವಿಗಳಿರಬೇಕು ಅನ್ನುವಂತೆ ನಮ್ಮತ್ತ ನೋಡುತ್ತಾರೆ. ಮೆಚ್ಚುಗೆಗೆ ಧನ್ಯವಾದಗಳು ನಯನಾ

  3. *”*ವಿದ್ಯಾವಂತರಾಗಿದ್ದರೆ ಸಾಕೇ?ಪ್ರಜ್ಞಾವಂತರಾಗಿರಬೇಡವೇ? ನಾವೆಲ್ಲಿದ್ದೇವೆ ಅನ್ನುವ ತಿಳಿವಳಿಕೆ ಜಾಗೃತವಾಗಿರಬೇಕಲ್ಲವೇ?*”*
    ಹೌದು, ನಿಜವಾಗಿಯೂ ಪರಿಜ್ಞಾನ ಇರಬೇಕು. ಹೆಚ್ಚಿನವರು ಅನುಭವಿಸುವ ಯಾತನೆಯನ್ನು ಬರಹದ ಮೂಲಕ ಸೊಗಸಾಗಿ ಪೋಣಿಸಿದ ನಿಮಗಿದೋ ನಮನಗಳು

    1. ಸುಮ್ಮನೆ ಕುಳಿತುಕೊಂಡರೆ ನಮಗೆ ಯಾತನೆ..ಹೇಳಿದರೆ ತಪ್ಪೇನು ಅಂತ ಹೇಳಿಯೇ ಬಿಟ್ಟೆ. ಪ್ರತಿಕ್ರಿಯೆಗೆ ಧನ್ಯವಾದಗಳು

  4. ಲೇಖನದ ಒಂದು ವಾಕ್ಯ ನನ್ನನ್ನ ಮತ್ತೆಮತ್ತೆ ಓದುವಂತೆ ಮಾಡಿತು. “ಅಲ್ಲಿದ್ದವರಿಗೂ ಕಿರಿ ಕಿರಿ ಆಗುತ್ತಿತ್ತು ; ಆದರೂ ಸಹಿಸಿಕೊಂಡಿದ್ದರು .
    ಸಹನೆ ಆ ಸಂದರ್ಭದಲ್ಲಿ ಅಪೇಕ್ಷಿತವಾಗಿರಲಿಲ್ಲ. ಆ ಸಹನೆಯೇ ಸಮಾಜ ಘಾತುಕರನ್ನ ಸೃಷ್ಟಿಸುತ್ತದೆ ಎಂಬ ಸಾಮಾನ್ಯ ಪ್ರಜ್ಞೆ ಕೂಡ ಇಲ್ಲದವರಾಗಿದ್ದರವರು.

    ಲೇಖನ ಅತ್ಯಂತ ಪ್ರಸ್ತುತ ವಾಗಿತ್ತು ; ಹೇಳೋದನ್ನ ನೇರವಾಗಿ ಹೇಳುವ ನಿಮ್ಮ ಶೈಲಿ ಸುಂದರವಾಗಿತ್ತು.

    ಧನ್ಯ ವಾದಗಳು.. ಕೃಷ್ಣ ಪ್ರಭಾ

    1. ಆಹಾ ಚಂದದ ಪ್ರತಿಕ್ರಿಯೆ. ಸಹನೆ ಇರಬೇಕು ಆದರೆ ಎಲ್ಲೆಡೆ ಅಲ್ಲ. ನನಗೆ ನಿಜವಾಗಿಯೂ ಕಿರಿ ಕಿರಿ ಆಗುತ್ತಿತ್ತು. ಅವರು ಏನೂ ಬೇಕಾದರೂ ತಿಳಿದುಕೊಳ್ಳಲಿ. ಹೇಳಿಯೇ ಬಿಡುವೆ ಎಂದು ಹೇಳಿಬಿಟ್ಟೆ ಅಷ್ಟೇ.. ಧನ್ಯವಾದಗಳು ಸಂತೋಷ್ ಅವರಿಗೆ

  5. ಜನರೇಕೆ ಹೀಗೆ ವರ್ತಿಸುವುರು ಅನಾಗರಿಕತೆಯಲಿ
    ಜನರೇಕೆ ಹೀಗೆ ವರ್ತಿಸುವುರು ಅನಾಗರಿಕತೆಯಲಿ/
    ಸಂದರ್ಭದ ಗಂಭೀರತೆಯ ಪರಿಗಣನೆಯಿಲ್ಲದೆಯೇ/
    ಜನರೇಕೆ ಹೀಗೆ ವರ್ತಿಸುವುರು ಅನಾಗರಿಕತೆಯಲಿ/
    ಸನ್ನಿವೇಶದ ಪ್ರಾಮುಖ್ಯತೆಯ ಜಾಗೃತಿಯಿಲ್ಲದೆಯೇ/

    ಅಜ್ಞಾನದಿಂದಲೂ ಹಮ್ಮುನಿಂದಲೋ ಅಹಂಕಾರದಿಂದಲೋ
    ಇಲ್ಲ ಸಂಸ್ಕೃತಿಯಿಲ್ಲದ ಪರಿಸರದಲ್ಲಿ ಬೆಳೆದಿಂದಲೋ/
    ಅಲಕ್ಷ್ಯದಿಂದಲೋ ನಿರ್ಲಕ್ಷ್ಯದಿಂದಲೋ ತಿರಸ್ಕಾರದಿಂದಲೋ/
    ಇಲ್ಲ ಆಶಿಕ್ಷಿತದ ವಾತಾವರಣದಲ್ಲಿ ಪ್ರಬುದ್ಧಿಸಿಂದಲೋ/

    ನಮ್ಮ ಸ್ವಾದೀನದಲ್ಲಿರುವುದು ನಮ್ಮ ಪ್ರತಿಕ್ರಿಯೆಯೊಂದೇ//
    ಇತರರ ಅಸಭ್ಯತೆಗೆ ಸಂಭಾವ್ಯತೆಯೆ ಸಮಂಜಸವು /
    ನಮ್ಮ ಆಯ್ಕೆಯಲ್ಲಿರುವುದು ನಮ್ಮ ಪ್ರತಿಸ್ಪಂದನವೊಂದೇ /
    ಇತರರ ಅನೌಚಿತ್ಯಗೆ ಸೌಜನ್ಯತೆಯೆ ಸಂಭಾವಿತವು/

    ಸಹನೆಯಲಿ ವರ್ತಿಸುವುದು ಎಂದಿಗೂ ಗೌರವಾನ್ವಿತವು/
    ತಾಳ್ಮೆಯಲಿ ತಾಳಿದರೆ ಮಾರ್ಪಡಿಸಬಹುದು ಅಜ್ಞಾನಿಗಳ/
    ಸಹಿಷ್ಣುತೆಯಲಿ ನೆಡೆಯುವುದು ಎಂದಿಗೂ ಗಣನೀಯವು/
    ಸೈರಣೆಯಲಿ ಸಹಿಸಿದರೆ ಪರಿವರ್ತಿಸಬಹುದು ಅವಿವೇಕಿಗಳ/

    1. ಆಹಾ…ಅದೆಷ್ಟು ಚಂದದ ಕವನ ಬರೆದುಬಿಟ್ಟಿರಿ.. ತಾಳ್ಮೆ, ಸಹಿಷ್ಣುತೆ, ಸೈರಣೆ ಎಲ್ಲ ಅತೀ ಅಗತ್ಯ. ತುಂಬು ಹೃದಯದ ಧನ್ಯವಾದಗಳು ಸರ್.

  6. ಸಂತೆಯೊಳಗೊಳಗೊಂದು ಮನೆಯ ಮಾಡಿ……ನೆನಪಾಯ್ತು.
    ಅಜ್ಙಾನ ಅನ್ನುವುದಕ್ಕಿಂತ ಅದೊಂದು ಗೀಳು ಎನ್ನಬಹುದು. ಇನ್ನೊಬ್ಬರನ್ನು ನೋಯಿಸುವುದರಲ್ಲೇ ಸುಖ ಕಾಣುವ ಅತೃಪ್ತ ಆತ್ಮಗಳು ನಮ್ಮ ನಡುವೆ ಎಷ್ಟಿಲ್ಲ? ಸುಮ್ಮನಿರಲಾರದೆ, ಅನುಭವಿಸಲಾಗದೆ ಇರುವ ಮನಸುಗಳು, ತಮ್ಮೊಳಗೇ ಯಾತನೆ ಅನುಭವಿಸುವವರೂ ಎಷ್ಟಿಲ್ಲ?
    ಎಲ್ಲರೂ ಚೆನ್ನಾಗಿರಲಿ ಅಂತ ಹಾರೈಸುವುದಷ್ಟೆ ನಮಗಿರುವ ದಾರಿ.

    1. ಮೇಡಂ….ನಿಮ್ಮ ಪ್ರತಿಕ್ರಿಯೆ ಓದಿ ತುಂಬಾ ಖುಷಿ ಆಯಿತು. ಬೇರೆಯದೇ ಲೋಕದಲ್ಲಿ ವಿಹರಿಸುವ ಜನರಿಗೆ ತಾವೆಲ್ಲಿದ್ದೇವೆ ಅನ್ನುವ ಸಾಮಾನ್ಯ ಜ್ಞಾನ ಜಾಗೃತವಾಗಿರಬೇಕು ತಾನೇ?

  7. ಪ್ರಸಕ್ತ ಸಾಮಾಜಿಕ ಕಳಕಳಿಯಿಂದೊಡಗೂಡಿದ ಬರಹ. ಇಂತಹ ಸನ್ನಿವೇಶಗಳು ನಮ್ಮೆದುರು ಆಗಾಗ ಧುತ್ತೆಂದು ನಿಲ್ಲುತ್ತವೆ. ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *