ಬೆಳಕು-ಬಳ್ಳಿ

ಜಿಹ್ವಾಚಾಪಲ್ಯ

Share Button

ಮನದ ಮುಂದೆ ಮಡುಗಟ್ಟಿದ ಆಸೆಯು
ಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆ
ಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದ
ಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ

ನಾಲಿಗೆಗೆ ತಾಗಿದ ಮೆತ್ತನೆಯ ತುಣುಕೊಂದು ಸವಿಯುವ ಮೋಹವ ಕೆರಳಿಸಿದೆ
ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಅಪಾಯ ತರುವ ಎಚ್ಚರಿಕೆ ಮೂಲೆ ಸೇರಿದೆ

ಬೆಳಗಿನ ತಿಂಡಿಯ ಮಣಗಟ್ಟಲೆ ನುಂಗಿದ
ಹೊಟ್ಟೆಯೂ ತಿನ್ನಲೇ ಬೇಕೆಂಬ ಶಪಥಗೈದು
ನೂರ್ಮಡಿಯಾಗಿ ಹಸಿದು ಕುಳಿತಿದೆ
ಬಂದ ಸಿಹಿ ತಿಂಡಿಯ ಕರಗಿಸಲೇ ಬೇಕೆಂದು ಲಾಲಾರಸ ಕಾದಿದೆ

ಒಳಬಂದ ಹೆಚ್ಚಿನ ‌ಕ್ಯಾಲೋರಿಯಿಂದ ದೇಹದ ತೂಕ ಹೆಚ್ಚಾಗಬಹುದು
ಎನ್ನುವ ಗೆಳೆಯರ ಮಾತು‌ ಕಿವಿಯಲಿ ಬೀಳದಾಗಿದೆ
ಬಿಸಿ ಜಿಲೇಬಿಗಳ ಪೊಟ್ಟಣ ಬಿಚ್ಚಿ ಅಲ್ಲೇ ಕೂತು ಅಗಿಯುವ ಮನಸ್ಸಾಗಿದೆ

ಹರಳುಗಟ್ಟಿದ ಸಿಹಿಪಾಕ ಸವಿಯ‌ ಎರಕ ಹೊಯ್ದದಂತಿದೆ
ತಿಂದಂತೆಲ್ಲಾ ಇನ್ನೂ ಬೇಕೆಂಬ ಬಯಕೆ ತೀರ್ವವಾಗುತಿದೆ

ನಾಲಗೆಯ ಚಪಲವ ತಡೆದವರುಂಟೇ ಈ ಜಗದಲಿ
ಚಪ್ಪರಿಸುವ ಖಾದ್ಯಗಳ ಬಿಡುವರುಂಟೇ ಈ ಬಾಳಲಿ
ದೀಪ ಕಂಡ ಪತಂಗದಂತೆ ಈ ಮನಸ್ಸು
ಮತ್ತೆ ಮತ್ತೆ ತಿನಿಸುಗಳ ಹಿಂದೆ ಬಿದ್ದಿದೆ
ಇಂದ್ರಿಯಗಳ ನಿಗ್ರಹಿಸಿ ತಪವಗೈಯುವರಲ್ಲ ನಾವು
ತಿಂದು ಸಾಯಬೇಕೆಂಬ ದೀಕ್ಷೆ ತೊಟ್ಟ ಹುಲುಮಾನವರು

ಕೆ.ಎಂ ಶರಣಬಸವೇಶ

7 Comments on “ಜಿಹ್ವಾಚಾಪಲ್ಯ

  1. ಜಿಲೇಬಿ ಯಷ್ಟೇ ಸಿಹಿಯಾದ ಕವನ, ಕವನದೊಳಗೆ ನಮ್ಮ ಮನದ ವಾಸ್ತವಿಕತೆಯ ಅನಾವರಣ.

  2. ನವಿರಾದ ಹಾಸ್ಯ ಕವನ ಜಿಹ್ವಾಚಾಪಲ್ಯ ಮುದಕೊಟ್ಟಿತು ಧನ್ಯವಾದಗಳು ಸಾರ್

  3. ಹೌದು,, ಸಿಹಿಯಾದ, ರುಚಿಯಾದ ಕವನ,,
    ಇಂತಹ ನವಿರಾದ ಹಾಸ್ಯ ಕವನಗಳು ಹೆಚ್ಚು ಬರಲಿ

  4. ಕಣ್ಮನ ಸೆಳೆಯುವ ರುಚಿಕರ ಜಿಲೇಬಿಯನ್ನು ಕಾಣುವಾಗ ಜಿಹ್ವಾಚಾಪಲ್ಯವು ಕೆರಳಿ ಮೇಲೆದ್ದು, ಬೇಡ ಬೇಡವೆಂದು ವಿವೇಕ ಎಚ್ಚರಿಸಿದರೂ ಬಿಡದೆ ಅದನ್ನು ಉದರದೊಳಗೆ ಇಳಿಸುವ ಹುಲುಮಾನವರ ಬಗ್ಗೆ ಮರುಕ ಉಕ್ಕುತ್ತದೆ…ಸೊಗಸಾದ ಕವನ.

  5. ಮನದಿಂಗಿತಕ್ಕೆ ಕಚಗುಳಿಯಿಡುವ ಸೊಗಸಾದ ಅಕ್ಷರರೂಪ.

Leave a Reply to ನಾಗರತ್ನ ಬಿ.ಆರ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *