ಜಿಹ್ವಾಚಾಪಲ್ಯ
ಮನದ ಮುಂದೆ ಮಡುಗಟ್ಟಿದ ಆಸೆಯು
ಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆ
ಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದ
ಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ
ನಾಲಿಗೆಗೆ ತಾಗಿದ ಮೆತ್ತನೆಯ ತುಣುಕೊಂದು ಸವಿಯುವ ಮೋಹವ ಕೆರಳಿಸಿದೆ
ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಅಪಾಯ ತರುವ ಎಚ್ಚರಿಕೆ ಮೂಲೆ ಸೇರಿದೆ
ಬೆಳಗಿನ ತಿಂಡಿಯ ಮಣಗಟ್ಟಲೆ ನುಂಗಿದ
ಹೊಟ್ಟೆಯೂ ತಿನ್ನಲೇ ಬೇಕೆಂಬ ಶಪಥಗೈದು
ನೂರ್ಮಡಿಯಾಗಿ ಹಸಿದು ಕುಳಿತಿದೆ
ಬಂದ ಸಿಹಿ ತಿಂಡಿಯ ಕರಗಿಸಲೇ ಬೇಕೆಂದು ಲಾಲಾರಸ ಕಾದಿದೆ
ಒಳಬಂದ ಹೆಚ್ಚಿನ ಕ್ಯಾಲೋರಿಯಿಂದ ದೇಹದ ತೂಕ ಹೆಚ್ಚಾಗಬಹುದು
ಎನ್ನುವ ಗೆಳೆಯರ ಮಾತು ಕಿವಿಯಲಿ ಬೀಳದಾಗಿದೆ
ಬಿಸಿ ಜಿಲೇಬಿಗಳ ಪೊಟ್ಟಣ ಬಿಚ್ಚಿ ಅಲ್ಲೇ ಕೂತು ಅಗಿಯುವ ಮನಸ್ಸಾಗಿದೆ
ಹರಳುಗಟ್ಟಿದ ಸಿಹಿಪಾಕ ಸವಿಯ ಎರಕ ಹೊಯ್ದದಂತಿದೆ
ತಿಂದಂತೆಲ್ಲಾ ಇನ್ನೂ ಬೇಕೆಂಬ ಬಯಕೆ ತೀರ್ವವಾಗುತಿದೆ
ನಾಲಗೆಯ ಚಪಲವ ತಡೆದವರುಂಟೇ ಈ ಜಗದಲಿ
ಚಪ್ಪರಿಸುವ ಖಾದ್ಯಗಳ ಬಿಡುವರುಂಟೇ ಈ ಬಾಳಲಿ
ದೀಪ ಕಂಡ ಪತಂಗದಂತೆ ಈ ಮನಸ್ಸು
ಮತ್ತೆ ಮತ್ತೆ ತಿನಿಸುಗಳ ಹಿಂದೆ ಬಿದ್ದಿದೆ
ಇಂದ್ರಿಯಗಳ ನಿಗ್ರಹಿಸಿ ತಪವಗೈಯುವರಲ್ಲ ನಾವು
ತಿಂದು ಸಾಯಬೇಕೆಂಬ ದೀಕ್ಷೆ ತೊಟ್ಟ ಹುಲುಮಾನವರು
–ಕೆ.ಎಂ ಶರಣಬಸವೇಶ
ಜಿಲೇಬಿ ಯಷ್ಟೇ ಸಿಹಿಯಾದ ಕವನ, ಕವನದೊಳಗೆ ನಮ್ಮ ಮನದ ವಾಸ್ತವಿಕತೆಯ ಅನಾವರಣ.
ನವಿರಾದ ಹಾಸ್ಯ ಕವನ ಜಿಹ್ವಾಚಾಪಲ್ಯ ಮುದಕೊಟ್ಟಿತು ಧನ್ಯವಾದಗಳು ಸಾರ್
‘ರುಚಿಯಾದ’ ಕವನ!
ಹೌದು,, ಸಿಹಿಯಾದ, ರುಚಿಯಾದ ಕವನ,,
ಇಂತಹ ನವಿರಾದ ಹಾಸ್ಯ ಕವನಗಳು ಹೆಚ್ಚು ಬರಲಿ
ಕಣ್ಮನ ಸೆಳೆಯುವ ರುಚಿಕರ ಜಿಲೇಬಿಯನ್ನು ಕಾಣುವಾಗ ಜಿಹ್ವಾಚಾಪಲ್ಯವು ಕೆರಳಿ ಮೇಲೆದ್ದು, ಬೇಡ ಬೇಡವೆಂದು ವಿವೇಕ ಎಚ್ಚರಿಸಿದರೂ ಬಿಡದೆ ಅದನ್ನು ಉದರದೊಳಗೆ ಇಳಿಸುವ ಹುಲುಮಾನವರ ಬಗ್ಗೆ ಮರುಕ ಉಕ್ಕುತ್ತದೆ…ಸೊಗಸಾದ ಕವನ.
ಮನದಿಂಗಿತಕ್ಕೆ ಕಚಗುಳಿಯಿಡುವ ಸೊಗಸಾದ ಅಕ್ಷರರೂಪ.
ಸಿಹಿಸಿಹಿಯಾದ ರುಚಿರುಚಿಯಾದ ಕವನವನ್ನು ಉಣಬಡಿಸಿದ್ದಾರೆ