ಸಿಂಧೂವಾಗಿ ಹರಿದ ʼಚಿಂದಿʼ

Share Button

ಸಿಂಧೂತಾಯಿ ಸಪ್ಕಾಲ್ ಹೆಸರು ಕಿವಿಗೆ ಬಿದ್ದಾಗಲೆಲ್ಲ ಅಪೂರ್ವ ಬೆಳಕೊಂದು ಮನಸ್ಸು ಹೊಕ್ಕಂತ ಅನುಭೂತಿ.  ಅಪ್ಪಳಿಸುವ ತೆರೆಗಳನ್ನು ಎದುರಿಸಿ, ಅದರೊಂದಿಗೇ ಈಜಿ ದಾಖಲೆ ಬರೆದ ಆಕೆಯ ಸಾಧನೆಯ ರೀತಿಯೇ ವಿಸ್ಮಯ. ಹೆಣ್ಣು ನಿಜಕ್ಕೂ ಮಾತಾ ಸ್ವರೂಪಿಣಿ ಅನ್ನಿಸುವುದೇ ಸಿಂಧೂತಾಯಿ ಸಮಾಜದ ದೀನರನ್ನು ಪಾಲಿಸಿ, ಪೋಷಿಸಿ, ಬೆಳೆಸಿ ಸಮಾಜಮುಖಿಗಳನ್ನಾಗಿ ಮಾಡಿದ ಸಾಹಸ ಕತೆಗಳನ್ನು ಅರಿಯುತ್ತಾ ಹೋದಾಗ.   ಅನಾಥಂಚಿ ಮಾಯಿ (ಅನಾಥರ ತಾಯಿ) ಎಂದು ಕರೆಸಿಕೊಂಡ ಆಕೆ ನಾವು ಕಂಡು ಕೇಳರಿಯದಂಥ ಜೀವನ ನಡೆಸಿದವರು. ಸಮಾಜಸೇವೆಯ ಶ್ರೇಷ್ಠ ಮಜಲೊಂದನ್ನು  ನಮ್ಮೆಲ್ಲರಿಗೆ ಅನಾವರಿಣಿಸಿ ನಮ್ಮ ಯೋಚನೆಗಳ ದಿಕ್ಕನ್ನು ಪರಾಮರ್ಶೆಗೆ ತೊಡಗಿಕೊಳ್ಳುವಂತೆ ಮಾಡಿದವರು.

ಮಹಾರಾಷ್ಟ್ರ ರಾಜ್ಯದ ಪಿಂಪ್ರಿಮೇಘೆ ಹಳ್ಳಿಯ ಬಡ ಕುಟುಂಬದ ಹೆಣ್ಣು ಮಗುವಾಗಿ ಸಿಂಧೂತಾಯಿ 14 ನವೆಂಬರ್  1948ರಲ್ಲಿ ಜನಿಸಿದರು. ಆಕೆಯ ವಿದ್ಯಾಭ್ಯಾಸದ ಬಗೆಗೆ ಮನೆಯಲ್ಲಿ ಯಾರೂ ತಲೆಕೆಡಿಸಿಕೊಂಡವರಿರಲಿಲ್ಲ. ತಂದೆಗೆ ಅವಳನ್ನು ಓದಿಸುವ ಆಸೆ ಇದ್ದರೂ, ತಾಯಿ ಅದಕ್ಕೆ ವಿರೋಧವಾಗಿದ್ದಳು.  ಹೆಣ್ಣು ಎನ್ನುವ ಕಾರಣಕ್ಕೆ ಅವಳು ಮನೆಯವರ ತಾತ್ಸಾರಕ್ಕೆ ಗುರಿಯಾಗಿದ್ದವಳು.  “ಚಿಂದಿ” ಎಂದು ಮನೆಯವರೇ ಕರೆಯುತ್ತಿದ್ದ ಹೆಸರು! ಚಿಂದಿ ಅಂದರೆ ಹರಿದ ಬಟ್ಟೆ!  ಹೊಸ ಬಟ್ಟೆಯ ಕನಸಿನ ವಯಸ್ಸಿನ ಅವಳಿಗೆ ಏಳೆಂಟು ವರ್ಷಗಳು ತುಂಬುತ್ತಿದ್ದ ಹಾಗೇ ಮನೆಯ ಹಸು, ಎಮ್ಮೆಗಳನ್ನು ಮೇಯಿಸಿ ತರುವ ಜವಾಬ್ದಾರಿ ಹೊರಬೇಕಾಯಿತು.  ಬಡತನದ ದೆಸೆಯಿಂದ ಸಿಂಧೂತಾಯಿಯನ್ನು ಆದಷ್ಟೂ ಬೇಗ ಮದುವೆ ಮಾಡಿ ಸಾಗಹಾಕುವ ಚಿಂತೆ ತಂದೆ ತಾಯಿಗಳಿಗೆ.  ಸರಿಯಾಗಿ ಹನ್ನೆರಡು ವರ್ಷವೂ ತುಂಬದಿದ್ದ ಆಕೆಯನ್ನು ನವರ್ಗಾಂವ್‌ ಹಳ್ಳಿಯ ಮೂವತ್ತೆರಡು ವರ್ಷದ ಶ್ರೀಹರಿ ಸಪ್ಕಾಲ್ ಎನ್ನುವವನಿಗೆ  ಮದುವೆ ಮಾಡಿಕೊಟ್ಟು, ಕುಟುಂಬ  ಕೈತೊಳದುಕೊಂಡಿತು.

ಗಂಡನ ಮನೆಯಲ್ಲೂ ಸುಖವಿರಲಿಲ್ಲ. ಒರಟು ಗಂಡನಾದರೆ, ಅತ್ತೆ ಕಿರುಕುಳ ಕೊಡುವ ಸ್ವಭಾವದವಳು.  ಇಪ್ಪತ್ತು ವರ್ಷ ತುಂಬುವುದರೊಳಗೆ ಆಕೆ ಮೂವರು ಗಂಡುಮಕ್ಕಳನ್ನು ಹೆತ್ತ ತಾಯಿಯಾದಳು. ಆ ಸಣ್ಣ ವಯಸ್ಸಿಗೇ ಸಂಸಾರ ಜವಾಬ್ದಾರಿಯ ಪೂರ್ಣ ಪಾಠ ಆಕೆಗೆ ತಿಳಿದುಹೋಗಿತ್ತು.  ಚಿಕ್ಕ ವಯಸ್ಸಾದರೂ ತನ್ನ ಅಕ್ಕಪಕ್ಕದ ಮನೆಗಳ ಹೆಂಗಸರಿಗೆ ಆಕೆ ಪರಿಚಯವಾಗಿದ್ದಷ್ಟೇ ಅಲ್ಲದೆ ಅವರ ಕಷ್ಟ ಸುಖಗಳಲ್ಲೂ ಭಾಗಿಯಾಗುತ್ತಿದ್ದಳು. ಅಲ್ಲಿಯ ಅರಣ್ಯ ಇಲಾಖೆಗೆ ಆ ಊರಿನ ಹೆಣ್ಣುಮಕ್ಕಳು ಮತ್ತು ಸಿಂಧೂತಾಯಿ ಸಗಣಿ ಸಂಗ್ರಹಿಸಿ ಕೊಟ್ಟು ಅಲ್ಪಸ್ವಲ್ಪ ಹಣ ಪಡೆಯತ್ತಿದ್ದರು.  ಆ ಹಳ್ಳಿಯ ಜಮೀನುದಾರನೊಬ್ಬ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದ್ದರಿಂದ ಹೆಂಗಸರಿಗೆ ಸರಿಯಾದ ಕೂಲಿ ಸಿಗುತ್ತಿರಲಿಲ್ಲ. ತಮಗಾಗುತ್ತಿರುವ ಅನ್ಯಾಯದ ವಿರುದ್ಧ  ಸಿಂಧೂತಾಯಿ ಧ್ವನಿಯೆತ್ತಿದಳು.  ಒಮ್ಮೆ ಜಿಲ್ಲೆಯ ಅಧಿಕಾರಿಯೊಬ್ಬರು ಬಂದಾಗ ಆಗುತ್ತಿರುವ ಅನ್ಯಾಯವನ್ನು ಬಹಿರಂಗಪಡಿಸಿ ಸರಿಯಾದ ಕೂಲಿ ಸಿಗುವಂತೆ ಮಾಡಿದಳು. ಇದರಿಂದ ಜಮೀನುದಾರ ತನಗೆ ಅಪಮಾನವಾಯಿತೆಂದು ಕೆರಳಿದ.  ಇದೇ ಅವಳು ಮಾಡಿದ ಮಹಾಪರಾಧ!

ಆ ಜಮೀನುದಾರ ತನ್ನ ಸೇಡನ್ನು ಸಿಂಧೂತಾಯಿಯ ಮೇಲೆ ಕೆಲವೇ ದಿನಗಳಲ್ಲಿ ತೀರಿಸಿಕೊಂಡ. ಆಕೆ  ನಾಲ್ಕನೇ ಬಾರಿಗೆ ಗರ್ಭಿಣಿಯಾಗಿದ್ದ ಸಮಯವದು. ಜಮೀನುದಾರ ಸಿಂಧೂತಾಯಿಯ ಗಂಡನ ಬಳಿ ಸಿಂಧೂ ನಡವಳಿಕೆ ಸರಿಯಿಲ್ಲವೆಂದೂ, ಅವಳು ಅನೇಕ ಗಂಡಸರ ಸಹವಾಸ ಮಾಡಿದ್ದಾಳೆ ಎಂದೂ ದೂರಿದ.  ಅಷ್ಟೇ ಅಲ್ಲದೆ ಅವಳೀಗ ಗರ್ಭಿಣಿಯಾಗಿರುವುದೂ ತನ್ನ ಮಗುವಿಗೇ ಎಂದು ಒದರಿಬಿಟ್ಟ.  ಆ ನೀಚ ಸುಳ್ಳು ಮಾತುಗಳನ್ನು ಗಂಡ ನಂಬಿದ.  ಬಂದ ಕೋಪದಲ್ಲಿ ಅವಳನ್ನು ಕೊಲ್ಲುವ ಮಟ್ಟಕ್ಕೆ ಹೋದ.  ಅವಳನ್ನು ಮನಸ್ವೇಚ್ಛೆ ಬಡಿದ. ಹೊಟ್ಟೆಗೆ ಬಲವಾಗಿ ಒದ್ದು ಪ್ರಜ್ಞಾಹೀನಗೊಳಿಸಿದ. ದೇಹವನ್ನು ಎಳೆದೊಯ್ದು ಹಸು, ಎತ್ತುಗಳನ್ನು ಕಟ್ಟಿದ್ದ ಕೊಟ್ಟಿಗೆಯ ಮಧ್ಯೆ ಎಸೆದುಬಿಟ್ಟ.  ದನಗಳ ಕಾಲ್ತುಳಿತಕ್ಕೆ ಅವಳು ಸತ್ತಳು ಎಂದು ಜನ ಭಾವಿಸಲಿ ಎನ್ನುವ ಉಪಾಯ ಅದಾಗಿತ್ತು.

ಪ್ರಜ್ಞೆ ತಪ್ಪಿದ ಸಿಂಧೂವಿಗೆ ಎಷ್ಟೋ ಸಮಯದ ನಂತರ ಎಚ್ಚರವಾಯಿತು.  ಕಣ್ಣು ತೆರೆದಾಗ ಅವಳು ತನ್ನ ನೆಚ್ಚಿನ ಹಸುವಿನ ನಾಲ್ಕು ಕಾಲುಗಳ ಮಧ್ಯೆ ಮಲಗಿರುವುದು ಅರಿವಿಗೆ ಬಂತು.  ಆ ಹಸು ಅವಳನ್ನು ಉಳಿದ ಹಸು, ಎತ್ತುಗಳ ಕಾಲ್ತುಳಿತದಿಂದ ರಕ್ಷಿಸಿತ್ತು!  ಅವಳ ಅತ್ತೆ ಮಾವಂದಿರು ಸಿಂಧು ಸತ್ತಿರುವುದನ್ನು ಗಟ್ಟಿಗೊಳಿಸಿಕೊಳ್ಳಲು ಅತ್ತ ಸುಳಿದಾಗ, ಆಶ್ಚರ್ಯವೆನ್ನುವಂತೆ, ಆ ಮೂಕ ಪ್ರಾಣಿ ಅವರನ್ನು ಹೆದರಿಸಿ ಅಟ್ಟಿಸಿ ಓಡಿಸಿತ್ತು!  ಹಾಗೆ ಅನಾಥಳಂತೆ ಬಿದ್ದಿರುವಾಗಲೇ ಅವಳಿಗೆ ಹೆಣ್ಣು ಮಗುವಿನ ಹೆರಿಗೆಯೂ ಆಯಿತು.  ಆ ಭಯಂಕರ ಸಂಕಟವನ್ನು ಸಹಿಸುತ್ತಾ ಹೊಕ್ಕುಳ ಬಳ್ಳಿಯನ್ನು ಅಲ್ಲೇ ಬಿದ್ದಿದ್ದ ಚೂಪು ಕಲ್ಲಿನಿಂದ ತಾನೇ ಕತ್ತರಿಸಿಕೊಂಡಳು. ಇಷ್ಟೂ ದೀರ್ಘ ಸಮಯ ಆ ಹಸು ತನ್ನ ನಾಲ್ಕು ಕಾಲುಗಳ ಕೆಳಗೆ ಅವಳನ್ನು ಕಾಪಾಡುತ್ತಾ ನಿಂತಿತ್ತು!

ಸಮಯದ ಪರಿವೆಯಿಲ್ಲದೆ ಸಿಂಧು ಮಲಗಿಯೇ ಇದ್ದಳು.  ಮಡಿಲಲ್ಲಿ ನವಜಾತ ಶಿಶು.  ಪ್ರಾಯಶ: ಆ ಮಗುವಿಗಾಗಿಯೇ ಇರಬೇಕು ತನ್ನ ಎಲ್ಲ ಶಕ್ತಿಯನ್ನೂ ಕೇಂದ್ರೀಕರಿಸಿ ಅಲ್ಲಿಂದ ಮೆಲ್ಲನೆ ಎದ್ದಳು. ಜೀವ ರಕ್ಷಿಸಿದ ಆ ಹಸುವನ್ನು ತಬ್ಬಿ ಕಣ್ಣೀರಾದಳು.  ಆ ಹಸು ಅವಳಿಗೆ ಹೊಸದೊಂದು ಪಾಠ ಹೇಳಿತ್ತು.  ಅವಳು ಆ ಮೂಕ ಪ್ರಾಣಿಯ ಕರುಣಾ ಹೃದಯವನ್ನು ತನ್ನೊಳಗೆ ಆವಾಹಿಸಿಕೊಂಡಳು.  ʼಗೋವು ಹೇಗೆ ನನ್ನ ಸಹಾಯಕ್ಕೆ ನಿಂತು ಜೀವ ಉಳಿಸಿತೋ ಅದೇ ರೀತಿ ಅಸಹಾಯಕರ ನೆರವಿಗೆ ನಾನು ನಿಲ್ಲುತ್ತೇನೆʼ ಎಂದು ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡಿದಳು. 

ಸಿಂಧೂತಾಯಿ ಸಪ್ಕಾಲ್

ಅವಳಿಗೆ ತನ್ನ ತವರು ಮನೆಯ ಆಶ್ರಯ ಸಿಕ್ಕುವುದಿಲ್ಲವೆಂದು ಗೊತ್ತಾಗಿತ್ತು. ಸಮಾಜದ ಕುಹಕ ದೃಷ್ಟಿಯಿಂದಲೂ ಅವಳು ರಕ್ಷಿಸಿಕೊಳ್ಳಬೇಕಿತ್ತು.  ಚಿಕಲ್ದಾರ ಅನ್ನುವ ಊರಿನ ಸ್ಮಶಾನ ಅವಳ ಮನೆಯಾಯಿತು.  ಜನ ಬರಲು ಹೆದರುತ್ತಿದ್ದ ಕಾರಣ ಅವಳು ಹೆಣ್ಣಿಗಾಗುವ ಅಪಾಯಗಳಿಂದ ಪಾರಾದಳು! ಸ್ಮಶಾನಕ್ಕೆ ಹೆಣಗಳ ಜೊತೆ ಬರುವ ಅಕ್ಕಿ, ಹಿಟ್ಟು ಇತ್ಯಾದಿ ಸಿಕ್ಕತೊಡಗಿತು.  ಹೆಣ ಸುಡುವ ಬೆಂಕಿಯಿಂದಲೇ ಆಹಾರ ಬೇಯಿಸಿಕೊಂಡು ತನ್ನ ಮಗುವಿಗಾಗಿ ಜೀವಿಸತೊಡಗಿದಳು.

ದಿನಗಳು ಸರಿಯುತ್ತಾ ಅವಳಿಗೆ ಆ ಜೀವನ ನಡೆಸುವುದು ದುಸ್ತರವೆನಿಸಿತು.  ಯಾವುದೋ ಘಳಿಗೆ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಸಮೀಪದ ರೈಲು ಹಳಿಗಳ ಮೇಲೆ ಮಗುವನ್ನು ತಬ್ಬಿ ಮಲಗಿಬಿಟ್ಟಳು. ರೈಲು ಬರುವುದು ತಡವಾಯಿತು.  ಸಿಂಧುವಿಗೆ ಆ ಸಮಯಕ್ಕೆ ಹತ್ತಿರದಲ್ಲಿ ಯಾರೋ ರೋಧಿಸುತ್ತಿರುವ ಶಬ್ದ ಕೇಳಿಸಿತು.  ತಡೆಯಲಾರದೆ, ಎದ್ದು ಆ ಶಬ್ದ ಬಂದ ಕಡೆಗೆ ನಡೆದಳು.  ಒಬ್ಬ ಕೃಶ ಶರೀರದ, ಕಾಲಿಲ್ಲದ ಮುದುಕನೊಬ್ಬ ಹಸಿವಿನಿಂದ ಕೂಗುತ್ತಿದ್ದ. ಅದು ತಾಯಿ ಹೃದಯ.  ಆ ಮುದುಕನ ಹಸಿವಿನ ಸಂಕಟ ನೋಡಲಾರದಾದಳು.  ಆ ಕ್ಷಣಕ್ಕೆ ಅವಳಿಗೆ ಅವನ ಜೀವ ಉಳಿಸುವುದೇ ಮಹತ್ವವೆನಿಸಿತು.  ತನ್ನಲ್ಲಿದ್ದ ಆಹಾರ, ನೀರು ಕೊಟ್ಟು ಅವನಿಗೆ ಉಪಚರಿಸಿದಳು. ಸಾಯುವ ಸ್ಥಿತಿಯಿಂದ ಆ ವೃದ್ಧ ಚೇತರಿಸಿಕೊಂಡ.  ತನ್ನನ್ನು ಉಳಿಸಿದ್ದಕ್ಕಾಗಿ ಆತ ಅವಳಿಗೆ ಪರಿಪರಿ ಕೃತಜ್ಞತೆ ಸಲ್ಲಿಸಿದ.  ವೃದ್ಧನ ಕಣ್ಣುಗಳಲ್ಲಿ ಕಂಡ ಆ ಧನ್ಯತಾ ಭಾವ ಅವಳಲ್ಲಿ ತಾನು ಉಳಿಯಬೇಕು, ಮತ್ತೊಬ್ಬರಿಗೆ ನೆರವಾಗಬೇಕು ಅನ್ನುವ ಮಹತ್ತರ ಸಂಕಲ್ಪ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತೆ ಮಾಡಿತು.  ಮತ್ತೆ ಎಂದಿಗೂ ಆತ್ಮಹತ್ಯೆಯತ್ತ ಅವಳು ಗಮನ ಹರಿಸಲೇ ಇಲ್ಲ!. 

ನಂತರದ ದಿನಗಳಲ್ಲಿ  ಊರಿನ ರೈಲು ನಿಲ್ದಾಣದಲ್ಲಿ ಅವಳು ಹಾಡುತ್ತಾ ಭಿಕ್ಷಾಟನೆಯಲ್ಲಿ ಕೆಲವು ವರ್ಷ ಕಳೆದಳು. ಆ ಸಮಯದಲ್ಲಿ ಅವಳಿಗೆ ಅರಿವಿಗೆ ಬಂದದ್ದು ತನ್ನಂತೆಯೇ ಹೆತ್ತವರಿಂದ ಹೊರದೂಡಲ್ಪಟ್ಟ ಬಹಳ ಮಕ್ಕಳು ಆ ಊರಿನ ಸುತ್ತಮುತ್ತಲೂ ಇದ್ದಾರೆಂದು.  ಅಂಥ ಮಕ್ಕಳನ್ನು ಅರಸಿ ಹೋದಳು. ತಾನೇ ಅವರನ್ನು ದತ್ತು ಪಡೆದು ಬೆಳೆಸಿದಳು. ಆ ಅನಾಥ ಮಕ್ಕಳಿಗೆ ತಾನು ತಾಯಿಯ ಸ್ಥಾನದಲ್ಲಿ ನಿಲ್ಲಬೇಕೆಂದು ಸಂಕಲ್ಪ ಮಾಡಿದಳು. ಜನರ ಸಹಾಯದಿಂದ ಅನಾಥಾಶ್ರಮವೊಂದನ್ನು ತೆರೆದಳು. ಮೊದಲಾಗಿ ತನ್ನ ಮಗಳ ಬಗೆಗೆ ಪಕ್ಷಪಾತ ಧೋರಣೆ ತನ್ನ ಆಶ್ರಮದಲ್ಲಿ ಆಗಬಾರದೆನ್ನುವ  ಪ್ರಯತ್ನವಾಗಿ ಅವಳನ್ನು ಪುಣೆಯ ಅನಾಥಾಶ್ರಮವೊಂದಕ್ಕೆ ದಾನ ಕೊಟ್ಟು ಉಳಿದ ಮಕ್ಕಳಿಗೆ ತಾಯಿಯಾದಳು!

ಚಿಕಲ್ದಾರದಲ್ಲಿ ಹುಲಿ ಸಂರಕ್ಷಣಾ ಯೋಜನೆಯ ಅನುಷ್ಠಾನದ ದೆಸೆಯಿಂದಾಗಿ ಅನೇಕ ಬುಡಕಟ್ಟು ಜನರ ಗ್ರಾಮಗಳನ್ನು ಸ್ಥಳಾಂತರಿಸಬೇಕಾಯಿತು. ಪುನರ್ವಸತಿ ಯೋಜನೆ ಬಹಳ ಗೊಂದಲದಿಂದ ಕೂಡಿತ್ತು. ಆ ಸಮಯದಲ್ಲಿ ಆದಿವಾಸಿಗಳ ಹಸುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು  ಹಸುವೊಂದರ ಸಾವಿಗೆ ಕಾರಣರಾದರು.  ಇದನ್ನು ನೋಡಿದ ಸಿಂಧು ಆ ಆದಿವಾಸಿ ಕುಟುಂಬಗಳ ಸೂಕ್ತ ಪುನರ್ವಸತಿಗಾಗಿ ಹೋರಾಡುವ ನಿರ್ಧಾರ ಮಾಡಿ ಚಳುವಳಿಯಲ್ಲಿ ತೊಡಗಿದಳು. ಆ ಹೋರಾಟ ಸರ್ಕಾರದ ಗಮನ ಸೆಳೆಯಿತು. ಪುನರ್ವಸತಿಯ ಕಾರ್ಯ ಯಶಸ್ವಿಯೆನಿಸಿತು. ಅದು ಅವಳ ಮೊದಲ ಆಂದೋಲನದ ಮಹತ್ತರ ಗೆಲುವಾಗಿತ್ತು.

ಆ ನಂತರದಲ್ಲಿ ಸಿಂಧೂತಾಯಿ “ಮಾಯಿ” ಎನ್ನುವ ಪ್ರೀತಿಯ ಹೆಸರಿನಿಂದ ಕರೆಸಿಕೊಂಡರು. ಅನಾಥ ಮತ್ತು ಆದಿವಾಸಿ ಮಕ್ಕಳನ್ನು ಸಾಕುವ ಜವಾಬ್ದಾರಿ, ಅವರಿಗಾಗಿ ಆಹಾರ ಸಂಗ್ರಹಿಸುವ ಕಾರ್ಯಗಳು ತನ್ನ ಜೀವನದ ಮುಖ್ಯ ಧ್ಯೇಯವನ್ನಾಗಿ ಮಾಡಿಕೊಂಡರು. ಮುಂದೆ ಸಾವಿರಾರು ಅನಾಥ ಮಕ್ಕಳ ತಾಯಿ ಎನಿಸಿದರು. ಅವರ ಆಶ್ರಯದಲ್ಲಿ ಹೆಣ್ಣುಮಕ್ಕಳಂತೆಯೇ ಗಂಡುಮಕ್ಕಳೂ ಬೆಳೆದರು. ಅವರೆಲ್ಲರ ವಿದ್ಯಾಭ್ಯಾಸದ ಹೊಣೆಯನ್ನೂ ನಿಭಾಯಿಸಿದರು. ಆ ಮಕ್ಕಳು ಬೆಳೆದು ದೊಡ್ಡವರಾದ ನಂತರ, ಅವರ ಮದುವೆ ಮುಂತಾದ ಜವಾಬ್ದಾರಿಗಳನ್ನು ಸಹ ಮುಂದೆ ನಿಂತು ಮಾಡಿದರು. ಅಲ್ಲಿಯ ನೂರಾರು ಮಕ್ಕಳು ಓದಿ ಒಳ್ಳೆಯ ನೌಕರಿಗೆ ಸೇರಿದರು.  ಅವರಲ್ಲಿ ಲೆಕ್ಕವಿಲ್ಲದಷ್ಟು ಜನ ವೈದ್ಯ, ಇಂಜಿನಿಯರ್, ವಕೀಲ, ರೈತರಾಗಿ ಉತ್ತಮ ಹೆಸರನ್ನು ಪಡೆದದ್ದು ಈಗ ಇತಿಹಾಸ.

ʼಮಾಯಿʼಯವರ ಹಸಿವನ್ನು ಗೆಲ್ಲುವ, ಅನಾಥರಿಗೆ ಆಶ್ರಯ ಕೊಟ್ಟು ಓದಿಸುವ ಈ ಕಾರ್ಯಗಳು ಸಮಾಜದ ಗಮನಕ್ಕೆ ಬರತೊಡಗಿತು.  ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾದರು. ದೇಶ ವಿದೇಶಗಳಿಂದ ಏಳು ನೂರಕ್ಕೂ ಹೆಚ್ಚಿನ ಪ್ರಶಸ್ತಿಗಳು ಅವರ ಮಡಿಲು ಸೇರಿದವು.  ತನಗೆ ಬಂದ ಖ್ಯಾತಿಯನ್ನು ಆಶ್ರಮದ ಅಭಿವೃದ್ಧಿಗಾಗಿ ಮಾಯಿ ಬಳಸಿದರು. ಅವರಿಗೆ ಎಲ್ಲಿಂದಲೇ ಆಹ್ವಾನ ಬಂದರೂ, ಎಷ್ಟೇ ದೂರವಾದರೂ  ಅಲ್ಲಿಗೆ ಪ್ರಯಾಣ ಮಾಡುತ್ತಿದ್ದರು.  ಅಲ್ಲಿ ತಮ್ಮ ಹೃದಯಾಂತರಾಳದ ಮಾತುಗಳನ್ನು ಬಹಳ ಸರಳವಾಗಿ ಸಭಿಕರ ಮುಂದೆ ತೆರೆದಿಡುತ್ತಿದ್ದರು.  ಅವರ ಮಾತುಗಳು ಸಂಯಮಪೂರಿತವೂ, ಹೃದಯಸ್ಪರ್ಶಿಯೂ ಆಗಿರುತ್ತಿದ್ದವು. ಭಾಷಣಗಳಿಂದ  ಸಿಕ್ಕುವ ಹಣದ ಸಹಾಯವನ್ನು ಆಶ್ರಮಕ್ಕಾಗಿ ವಿನಿಯೋಗ ಮಾಡುತ್ತಿದ್ದರು.  “ನಾನು ಭಿಕ್ಷುಕಿ, ನನ್ನ ಜೋಳಿಗೆ ತುಂಬಿ” ಎಂದು ತನ್ನನ್ನು ಆಹ್ವಾನಿಸುವ ಸಂಘ ಸಂಸ್ಥೆಗಳಿಗೆ ಬೇಡಿಕೆ ಇಟ್ಟು, ದೇಣಿಗೆಯನ್ನು ಪಡೆಯುವ ಅಭ್ಯಾಸವಿಟ್ಟುಕೊಂಡರು. ದೇಣಿಗೆ ಪಡೆಯುವುದು ಅವರ ಹೋರಾಟದ ಒಂದು ಭಾಗವೇ ಆಗಿತ್ತು. ʼಮನುಷ್ಯನಿಗೆ ಇರುವ ಎರಡು ಕೈಗಳಲ್ಲಿ ಒಂದು ಸ್ವಹಿತಕ್ಕಾದರೆ, ಇನ್ನೊಂದು ಪರೋಪಕಾರಕ್ಕೆ ಇರುವುದುʼ ಎನ್ನುವುದು ಅವರ ಮಾತುಗಳು. ʼರೇಷನ್ನಿಗೋಸ್ಕರ ನನ್ನ ಭಾಷಣʼ ಎಂದು ನಗುತ್ತಿದ್ದರು.

ಸಾಮಾಜಿಕ ಕಾರ್ಯಕರ್ತೆಯಾಗಿ ಮಾಯಿ ಯಶಸ್ವಿಯಾದರು. ಅವರು ಅನಾಥಾಶ್ರಮಗಳ  ನಿರ್ವಹಣೆಯನ್ನು ಬೇರೆಯವರಿಗೂ ಕಲಿಸಿದರು. ಸ್ವಂತ ಮಗಳು ಮಮತಾಳನ್ನು ವೈದ್ಯಳನ್ನಾಗಿ ಮಾಡಿದ್ದಷ್ಟೇ ಅಲ್ಲದೆ ಪುಣೆಯಲ್ಲಿಯ ಆಶ್ರಮವನ್ನು ನಡೆಸುವ ಜವಾಬ್ದಾರಿಯನ್ನೂ ಹೊರಿಸಿದರು.

2010ರಲ್ಲಿ ಮರಾಠಿ ಭಾಷೆಯಲ್ಲಿ ಅವರ ಜೀವನ ಆಧರಿಸಿದ ಒಂದು ಚಲನಚಿತ್ರ ಬಿಡುಗಡೆಯಾಯಿತು. ಆ ಚಿತ್ರದಿಂದ ಹೆಚ್ಚಿನ ಜನಕ್ಕೆ ಅವರ ಅಪೂರ್ವ ಸಮಾಜ ಸೇವೆಯ ವಿಷಯ ತಿಳಿಯತೊಡಗಿತು. ಅವರು ಭಾರತ ಸರ್ಕಾರದ 2017ರ ʼನಾರೀಶಕ್ತಿʼ ಪ್ರಶಸ್ತಿಯಿಂದ ಪುರಸ್ಕೃತರಾದರು.  ಅದರಿಂದ ಬಂದ ಹಣವನ್ನು ತನ್ನ ಆಶ್ರಮಗಳಿಗೇ ವಿನಿಯೋಗಿಸಿದರು. 2021ನೇ ವರ್ಷದ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಕೇಂದ್ರ ಸರ್ಕಾರ ಅವರಿಗೆ ಕೊಡಮಾಡಿ ಗೌರವಿಸಿತು. ಒಮ್ಮೆ ಕೌನ್ ಬನೇಗಾ ಕ್ರೋರ್ಪತಿಯ ಒಂದು ಸಂಚಿಕೆಯಲ್ಲೂ ಭಾಗವಹಿಸಿದ್ದರು.

ಮದರ್‌ ಗ್ಲೋಬಲ್‌ ಫೌಂಡೇಶನ್, ಸನ್ಮತಿ ಬಾಲ ನಿಕೇತನ್, ಮಮತಾ ಬಾಲ ಸದನ, ಸಾವಿತ್ರಿಬಾಯಿ ಫುಲೆ ಹಾಸ್ಟೆಲ್, ಅಭಿಮಾನ್‌ ಬಾಲಭವನ, ಗಂಗಾಧರಬಾಬಾ ಛತ್ರಾಲಯ, ಮನಶ್ಶಾಂತಿ ಛತ್ರಾಲಯ, ಸಪ್ತಸಿಂಧು ಶಿಕ್ಷಣ ಸಂಸ್ಥೆ ಹೀಗೆ ಅನೇಕ ಸಂಸ್ಥೆಗಳನ್ನು ಮಾಯಿ ಸ್ಥಾಪಿಸಿದ್ದಾರೆ.

ಸಿಂಧುತಾಯಿಯ ಜೀವನ ವೃತ್ತಾಂತ, ಏಳು ಬೀಳುಗಳು, ಅವರ ನಂಬಲಾಗದ ಸ್ಥೈರ್ಯದ ನಡೆಗಳು, ಸಾಧನೆಗಳು ಇವೆಲ್ಲವೂ ಚಿರಂತನ ಸ್ಫೂರ್ತಿ ಗಾಥೆ. ತನ್ನ ಪೂರ್ವಾಶ್ರಮದ ಕಹಿ ಘಟನೆಗಳನ್ನು ಅವರು ನೆನಪು ಮಾಡಿಕೊಳ್ಳುವಾಗ ತನ್ನ ಮನೆ, ಪತಿಯ ಮನೆಯಲ್ಲಾದ ಅನ್ಯಾಯಗಳನ್ನು ಪರಾಮರ್ಶಿಸುತ್ತಾ, ಅವರೆಲ್ಲ ಅಂದು ತನ್ನನ್ನು ಹೊರ ದೂಡದೇಹೋಗಿದ್ದರೆ, ಇಂದು ತಾನು ಸಾವಿರಾರು ಮಕ್ಕಳ ತಾಯಿಯಾಗುವುದು ತಪ್ಪಿಹೋಗುತ್ತಿತ್ತು ಅನ್ನುತ್ತಾರೆ.  ಹಾಗಾಗಿ, ಅವರೆಲ್ಲರಿಗೆ ಅವಳು ಕೃತಜ್ಞತೆಯನ್ನೂ ತಿಳಿಸುತ್ತಾರೆ!  ಎಂಥ ಹೃದಯವಂತಿಕೆ ಇದು! ಕೇವಲ ನಾಲ್ಕನೇ ತರಗತಿಯವರೆಗೆ ಓದಿದ ಅಪರೂಪದ ಜ್ಞಾನ, ಪ್ರಜ್ಞಾವಂತಿಕೆ ಇದು. ತನ್ನ ಬಳಿಬಂದವರಿಗೆ ವಾತ್ಸಲ್ಯ ತೋರಿ, ಅವರನ್ನು ಪೋಷಿಸಿ, ಜ್ಞಾನಾರ್ಜನೆಗೆ ಅವಕಾಶಕಲ್ಪಿಸಿ, ಬೆಳೆಸಿ, ಉದ್ಯೋಗ ಸಿಗುವವರೆಗೂ ಸಾಕಿ ಒಬ್ಬೊಬ್ಬರನ್ನೂ ಸ್ವತಂತ್ರ ವ್ಯಕ್ತಿಗಳನ್ನಾಗಿ ರೂಪಿಸಿ ಆತ್ಮತೃಪ್ತಿ ಪಡೆಯುವ ಅಪರೂಪದ ಚೇತನವದು.

ಹಿಂದೊಮ್ಮೆ ಯಾವ ಪತಿಯಾದವನು ತನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದನೋ, ಕಾಲಾನಂತರದಲ್ಲಿ ತನ್ನೆಲ್ಲ ಆಸ್ತಿ ಕಳೆದುಕೊಂಡು ಮಾಯಿಯ ಆಶ್ರಮಕ್ಕೆ ಬಂದು ಆಶ್ರಯ ಕೋರಿದ್ದು ವಿಧಿಯ ಆಟದಂತಿದೆ. ಅವನ ಹಿಂದಿನ ಧೂರ್ತತೆಯನ್ನು ಕ್ಷಮಿಸಿ ತನ್ನ ಆಶ್ರಮದಲ್ಲಿ ನಗುನಗುತ್ತಲೇ ಅವನಿಗೆ ಮಾಯಿ ವಸತಿ ಕಲ್ಪಿಸಿದ್ದು ಒಂದು ಅದ್ಭುತ ತಿರುವಿನ ಕಥೆಯಂತಿದೆ.  ತನ್ನ ಪತಿಯನ್ನು ಮನಸಾ ಕ್ಷಮಿಸಿ, ʼಇನ್ನು ಮುಂದೆ ನೀನೂ ನನ್ನ ದೊಡ್ಡ ಮಗನಂತೆʼ ಎನ್ನುವ ಅವರ ಮಾತುಗಳು ಹೃದಯವನ್ನು ಹಸಿ ಮಾಡುತ್ತದೆ. ʼಚಿಂದಿʼ ಎಂದು ಬಾಲ್ಯದಲ್ಲಿ ಕರೆಸಿಕೊಂಡ ಒಬ್ಬ ಮುಗ್ಧ ಬಾಲಿಕೆ ಸಿಂಧೂತಾಯಿಯಾದ ಕಥೆ ವಿಸ್ಮಯಕಾರಿ. ಅವರ ಜೀವನ ಯಾತ್ರೆ, ಬದುಕನ್ನು ಹೇಗೆ ಗಾಢವಾಗಿ ಪ್ರೀತಿಸಬೇಕೆನ್ನುವ ದೊಡ್ಡ ಸಂದೇಶವೂ ಆಗಿದೆ.

ಕಷ್ಟಗಳ ಹೊಸೆಹೊಸೆದು ಬತ್ತಿಯಾಗಿಸಿ
ಅಪಮಾನಗಳ ಕುಟ್ಟಿ ತೈಲ ಶೋಧಿಸಿ
ಬೆಂದು ನೊಂದವರ ಮನಮನೆಗಳಲ್ಲಿ
ಹಣತೆ ಹೊತ್ತಿಸಿ ಬೆಳಗಿಸಿದಿರಿ
ʼತಾಯಿʼ ಅನಾಥರ ಬಾಳ ದಾರಿ

ಸಿಂಧೂತಾಯಿ ಜನವರಿ 4, 2022ರಂದು ತನ್ನ 74ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ತುತ್ತಾಗಿ ವಿಧಿವಶರಾದರು. ದೇಶ ಅವರ ಅಗಲಿಕೆಯನ್ನು ದು:ಖಿಸಿತು.  ಸಿಂಧುತಾಯಿ ಅವರ ಸಮಾಜ ಸೇವೆ ಮತ್ತು ಉದಾತ್ತತೆಯನ್ನು ಪ್ರಧಾನಿ ಸ್ಮರಿಸಿದರು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಧೈರ್ಯ, ಸಮರ್ಪಣೆ ಮತ್ತು ಸೇವೆಯ ಸ್ಪೂರ್ತಿದಾಯಕ ಸಾಹಸವನ್ನು; ಅನಾಥರನ್ನು, ಬುಡಕಟ್ಟು ಮತ್ತು ಬಡತನದ ಅಂಚಿನಲ್ಲಿರುವ ಜನರನ್ನು ಪ್ರೀತಿಸಿ ಸೇವೆ ಸಲ್ಲಿಸಿರುವುದನ್ನು ಶ್ಲಾಘಿಸಿದರು.

ನೂರಾರು ಜನರು ಮತ್ತು ಅನೇಕ ಸಂಸ್ಥೆಗಳು ಅವರು ಸ್ಥಾಪಿಸಿ, ಬೆಳೆಸಿ ನಡೆಸಿದ ಆಶ್ರಮಗಳನ್ನು, ಅವರ ಆದರ್ಶಗಳನ್ನು ಮುಂದೆಯೂ ಕಾಪಾಡಿಕೊಳ್ಳುತಾರೆನ್ನುವ ಭರವಸೆ ಮತ್ತು ಆಶಯ ನಮ್ಮೆಲ್ಲರದೂ. ಸ್ವಾರ್ಥವರಿಯದ ಅವರ ಬದುಕು ಮತ್ತು ನಿಶ್ಕಲ್ಮಶತೆಯ ಮನಸ್ಸು ಎಂದಿಗೂ ಮುಕ್ಕಾಗದೆ ಹೊಳೆಯುವಂತಹುದು.  ಡಿ ವಿ ಜಿ ಅವರ ಒಂದು ಮುಕ್ತಕ ಸಿಂಧೂತಾಯಿಯಂತೆ  ಬದುಕನ್ನು ಹೇಗೆ ನಡೆಸಬೇಕೆನ್ನುವುದನ್ನು ತಿಳಿಸುವಂತಿದೆ.

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು
ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ

ಸಿಂಧೂತಾಯಿಯ ಬದುಕಿನ ಹೆಜ್ಜೆಗಳನ್ನು ನೋಡಿ ನಾವು ಕಲಿಯಬೇಕಾದದ್ದು ʼಬಾಳಿನಲ್ಲಿ ಬರಬಹುದಾದ ಕತ್ತಲನ್ನು ನಮ್ಮೊಳಗಿನ ದೀಪ ಆರಿಸಲು ಬಿಡದೆ ಬೆಳಗಿ ಮತೊಬ್ಬರ ಜೀವನವನ್ನೂ ಬೆಳಕಾಗಿಸುವುದು ಹೇಗೆʼ ಅನ್ನುವುದೇ ಆಗಿದೆ.

(ಸಿಂಧೂತಾಯಿ ಜೀವನ ಗಾಥೆಯ ಸಂಗ್ರಹ ಅನೇಕ ಲೇಖನಗಳ ಆಧಾರ)

ಅನಂತ ರಮೇಶ್

5 Responses

  1. ನಯನ ಬಜಕೂಡ್ಲು says:

    Nice article

  2. ನಾಗರತ್ನ ಬಿ.ಆರ್. says:

    ಸಮಾಜ ಸೇವಕಿ ಸಿಂಧೂ ತಾಯಿ ಅವರ ಪರಿಚಯಾತ್ಮಕ ಲೇಖನ ಮಹತ್ವಪೂರ್ಣ ವಾಗಿದೆ. ಧನ್ಯವಾದಗಳು ಸಾರ್

  3. Hema says:

    ಸಿಂಧೂತಾಯಿಯ ಚರಣಗಳಿಗೆ ಪ್ರಣಾಮಗಳು: ಸೊಗಸಾದ ನಿರೂಪಣೆ

  4. . ಶಂಕರಿ ಶರ್ಮ says:

    ಸಿಂಧೂ ತಾಯಿಯ ಜೀವನಗಾಥೆಯು ಯಾವ ಸಿನಿಮಾಕ್ಕೂ ಕಡಿಮೆಯಿಲ್ಲ! ಅಪರೂಪದ ಹೃದಯವಂತಿಕೆಯ ಹೆಣ್ಣುಮಗಳು ತನ್ನ ಜೀವನದ ಕಷ್ಟಗಳನ್ನೇ ಹೊಸೆದು ಬತ್ತಿಯಾಗಿಸಿ, ಅದನ್ನು ಬೆಳಗಿಸಿ, ಅದರ ಬೆಳಕಿನಲ್ಲಿ ಸಾವಿರಾರು ಅನಾಥರ ಅಂಧಕಾರ ತುಂಬಿದ ಬಾಳಿಗೆ ಉಜ್ವಲ ಪಥ ತೋರಿದ ಪರಿ ಅನನ್ಯ!! ಸಹಸ್ರ ವಂದನೆಗಳು.. ಆ ಮಹಾ ಜೀವಕ್ಕೆ! ಹೃದಯ ಒದ್ದೆಯಾಗಿಸುವ ಬರಹಕ್ಕಾಗಿ ಧನ್ಯವಾದಗಳು.

  5. Padma Anand says:

    ಮನೋಶಕ್ತಿಗೊಂದು ಜಲ್ವಂತ ಉದಾಹರಣೆಯಾದ ಸಿಂಧೂತಾಯಿಯ ಜೀವನಗಾಥೆಯ ಸುಂದರ ಸಂಕ್ಷಿಪ್ತ ಪರಿಚಯ. ಅಭಿನಂದನೆಗಳು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: