“ಪ್ರೀತಿ ಎಂಬ ಮಾಯಾವಿ”
ಫೆಬ್ರವರಿ ಬಂತೆಂದರೆ ಸಾಕು…ಅದು ಪ್ರೇಮಿಗಳ ಮಾಸ..ರೋಸ್ ಡೇ, ಪ್ರಪೋಸ್ ಡೇ, ಚಾಕೊಲೆಟ್ ಡೇ,ಹೀಗೆ ಏನೇನೋ ದಿನಗಳನ್ನು ದಾಟಿಕೊಂಡು 14 ನ್ನು “ವ್ಯಾಲೆಂಟೈನ್ಸ್ ಡೇ” ಆಗಿ ಆಚರಿಸುವ ಪ್ರೇಮಿಗಳಿಗಿದು ಸುಗ್ಗಿಯ ಕಾಲ..ಸದಾ ಒಬ್ಬರಿಗೊಬ್ಬರು ಕಿತ್ತಾಡುತ್ತಾ ಇರುವ ಜೋಡಿಗಳು 14 ರಂದು ತಮ್ಮ ಪ್ರಿಯತಮ/ಪ್ರೇಯಸಿಗೆ ಕೆಂಗುಲಾಬಿ,ಚಾಕೊಲೆಟ್ ನೀಡಿ “Happy Valentine’s day ” ಎಂದು ಹೇಳಿ ತಮ್ಮ ಪ್ರೇಮದ ಸಾರ್ಥಕತೆ ಮೆರೆಯುತ್ತಾರೆ..ಅದೊಂದು ದಿನವೆಲ್ಲಾ ಖುಷಿಯ ರಸದೌತಣ..!!
ಮರುದಿನವಾದರೆ ಮತ್ತೆ ಅದೇ ಹೊಂದಾಣಿಕೆಯಿಲ್ಲದ,ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸದಿರುವುದ ವಿರಸ ಜೀವನ..!! ಹಾಗಾದರೆ ಪ್ರೇಮವೆಂಬುದು ಬರೀ ಗುಲಾಬಿ,ಉಡುಗೊರೆ,ಚಾಕೋಲೆಟ್,ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂಬ ಸಂದೇಷಕ್ಕಷ್ಟೇ ಸೀಮಿತವೇ..ಪ್ರೇಮವೆಂದರೆ ಯಾರೋ ನೆಟ್ಟು ಬೆಳೆಸಿದ ಗುಲಾಬಿಯನ್ನು ಅವನ/ಅವಳ ಕೈಗಿಡುವುದೇ..!! ಯಾವುದೋ ಅಂಗಡಿಯ ಒಳಗಿದ್ದ ಬೆಲೆ ಬಾಳುವ ಉಡುಗೊರೆಯನ್ನು ಅವರಿಗೆ ಹಸ್ತಾಂತರಿಸುವುದೇ..!!ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂಬ ಸಂದೇಶದಲ್ಲಿ ಪ್ರೇಮವನ್ನೆಲ್ಲ ಹಿಡಿದಿಡಲು ಸಾಧ್ಯವೇ..!! ಪ್ರೇಮವೆಂದರೆ ಅಷ್ಟೆಯೇ..!!
ಖಂಡಿತಾ ಅಲ್ಲ…!! ಪ್ರೇಮವೆಂಬುದು ಹೀಗೆ ಎಂದು ವ್ಯಾಖ್ಯಾನಿಸುವುದು ಕಷ್ಟ ..ಇದು ಯಾರೋ ಒಂದಿಷ್ಟು ಮಂದಿಗೆ ಸೀಮಿತವಾದದ್ದಲ್ಲ..ಅದು ವ್ಯಾಖ್ಯೆಗೆ ನಿಲುಕದ್ದು..ಎಲ್ಲಾ ಮಿತಿಗಳನ್ನು ಮೀರಿ ಬೆಳೆದಿರುವಂತದ್ದು..ಅಂತಹ ಪ್ರೇಮವನ್ನು ಬರೀ ಪ್ರಿಯತಮ- ಪ್ರೇಯಸಿಯರಿಗಷ್ಟೆ ಸೀಮಿತಗೊಳಿಸುವುದರಲ್ಲಿ ಅರ್ಥವಿಲ್ಲ..ರೋಮನ್ ಚಕ್ರವರ್ತಿಯ ಮಾತಿಗೆ ವಿರುದ್ಧವಾಗಿ ಪ್ರೇಮಿಗಳನ್ನು ಒಂದಾಗಿಸುತ್ತಿದ್ದ ‘ಸಂತ ವ್ಯಾಲೆಂಟೈನ್’ ಕೂಡ ಪ್ರೇಮ ಕೇವಲ ಪ್ರಿಯತಮ-ಪ್ರೇಯಸಿಯರ ಸ್ವತ್ತು ಎಂದು ನುಡಿಯಲಿಲ್ಲ..ಪ್ರೇಮದ ಪರಿ ವಿಭಿನ್ನವಾದದ್ದು..ಅದರ ವ್ಯಾಪ್ತಿ ವಿಶಾಲವಾದದ್ದು.
ಮಮತೆಯಿಂದ ಮುದ್ದಿಸುವ ಅಮ್ಮನದ್ದು ಪ್ರೇಮವೇ..ಕಷ್ಟಗಳಿಗೆ ಕಣ್ಣಾಗಿ ದುಡಿಯುವ ಅಪ್ಪನ ಶ್ರಮ ಪ್ರೇಮದ ಪ್ರತಿರೂಪ..ಒಡಹುಟ್ಟಿದ ಸಹೋದರಿಯ ತ್ಯಾಗದ ಇನ್ನೊಂದು ಮುಖವೇ ಪ್ರೇಮ..ತರಲೆ ಮಾಡುತ್ತಲೇ ಕಾಳಜಿ ತೋರುವ ತಮ್ಮನದ್ದು ಪ್ರೇಮವೇ..!! ಪ್ರೇಮ ಪುಷ್ಪ ಬರೀ ಪ್ರೇಯಸಿ-ಪ್ರಿಯತಮೆ ನಡುವೆ ಹುಟ್ಟಿ, ಬಿರಿದು ಬಾಡುವಂಥದ್ದಲ್ಲ..ಅದರ ಅರ್ಥ ಆಪ್ಯಾಯಮಾನವಾದದ್ದು..ಅದರ ಛಾಯೆ ಪ್ರತಿ ಸಂಬಂಧದಲ್ಲೂ ಇದೆ..!
ಲೋಕದ ಒಳಿತು-ಕೆಡುಕುಗಳನ್ನರಿಯದ ಮಗುವೂ ತನ್ನ ಸುತ್ತ ಇರುವವರನ್ನು ಪ್ರೇಮಿಸುತ್ತದೆ..ನಿಸ್ವಾರ್ಥಿಯಾದ ಪ್ರಾಣಿಗಳು ತಮ್ಮ ಮಾಲೀಕನನ್ನು ಪ್ರಾಮಾಣಿಕತೆಯಿಂದ ಪ್ರೇಮಿಸುತ್ತವೆ..ಪ್ರತಿದಿನ ಉದಯಿಸುವ ದಿನಕರನಿಗೆ ಈ ಪೃಥ್ವಿಯ ಮೇಲೆ ಮುಗಿಯದ ಪ್ರೇಮ..ಇಬ್ಬನಿಯ ಬಿಂದು ಹಸಿರು ಗರಿಕೆಯನ್ನು ಬಿಗಿದಪ್ಪಿ ಆರಾಧಿಸುತ್ತದೆ..ಹಲವರು ತಮ್ಮ ಹವ್ಯಾಸಗಳನ್ನು ಪ್ರೀತಿಸಿ,ಪ್ರೇಮಿಸುತ್ತಾರೆ..ಪುಸ್ತಕಗಳನ್ನು,ವಾಹನಗಳನ್ನು ಪ್ರೀತಿಸುವವರಿಗೇನೂ ಕೊರತೆ ಇಲ್ಲ…ತಿನ್ನುವುದನ್ನು ಪ್ರೀತಿಸುವವರೂ ಇದ್ದಾರೆ..!!! ಇಂತಹ ಪ್ರೀತಿ-ಪ್ರೇಮವು ನಿರ್ದಿಷ್ಟ ವಿಷಯಕ್ಕೋ,ವಸ್ತುಗಳಿಗೋ ಅಂಟಿಕೊಂಡಿರುವಂತದ್ದಲ್ಲ..ಒಂದು ಜನಾಂಗಕ್ಕೆ ಮುಗಿವಂತದ್ದಲ್ಲ..ಅದೊಂದು ಕೊನೆಯಿರದ ಬಂಧನ..ಅವಿನಾಶಿಯಾದ ಪ್ರೇಮ ನಿಷ್ಕಲ್ಮಶ ಹೃದಯಗಳಿರುವವರೆಗೂ ಉಸಿರಾಡುತ್ತಿರುತ್ತದೆ..!
ಮೊದಲೇ ಹೇಳಿದಂತೆ ಪ್ರೇಮವನ್ನು ಹೀಗೆ ಎಂದು ಹೇಳುವುದು ಸುಲಭವಲ್ಲ..ಅದೊಂದು ದಿವ್ಯಾನುಭೂತಿ..ಪ್ರೀತಿ ಎಂಬುದು ಗಾಳಿಯ ಹಾಗೆ. ಅದರ ಸಿಹಿ-ಕಹಿಗಳನ್ನು ಅನುಭವಿಸಬಹುದೇ ಹೊರತು ಸ್ಪರ್ಶಿಸಲು ಸಾಧ್ಯವಿಲ್ಲ..ನಮ್ಮ ಮನಸ್ಸು ಅವರಿಗೋಸ್ಕರ ಪ್ರತಿ ಕ್ಷಣ ಹಾತೊರೆದರೆ ಅದುವೇ ಪ್ರೀತಿ..ನೀವು ಇಷ್ಟ ಪಡುವವರ ತುಟಿಯ ಮೇಲೆ ಸದಾ ನಗುವೇ ತೇಲಾಡಲಿ ಎಂದು ಬಯಸಿದರೆ ಅದುವೇ ಪ್ರೀತಿ..ಮಾತೇ ಇಲ್ಲದೆ ಮೌನದ ನಡುವೆಯೇ ಸಾವಿರಾರು ಸಂಭಾಷಣೆಗಳು ವಿನಿಮಯವಾಗುತ್ತದಲ್ಲ ಅದುವೇ ಪ್ರೀತಿ..ಅವರ ಸಂತೋಷಕ್ಕಾಗಿ ನಮ್ಮದೆಲ್ಲವನ್ನು ತ್ಯಾಗ ಮಾಡ್ತೀವಲ್ಲ ಅದುವೇ ಪ್ರೀತಿ..ಅವರ ಕಷ್ಟಕ್ಕೆ ನಮ್ಮ ಕಣ್ಣಂಚಿನಲ್ಲಿ ಕಣ್ಣೀರು ತೊಟ್ಟಿಕ್ಕಿದರೆ ಅದುವೇ ಪ್ರೀತಿ..ಸಾವಿರ ಸಂಕಷ್ಟದ ನಡುವೆಯೂ’ಅವರು ಚನ್ನಾಗಿರ್ಲಿ’ ಎಂದು ಬಯಸಿದರೆ ಅದುವೇ ಪ್ರೀತಿ..ಒಟ್ಟಾರೆ ಈ ಪ್ರೀತಿ- ಪ್ರೇಮವೆಂಬುದು ಬಹುರೂಪಿಯಾದದ್ದು..ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಮಾಯಾವಿ ಸ್ವರೂಪದ್ದು..!
ಬದುಕಿನ ಒಣಹಾದಿನ್ನೆಲ್ಲ ಹಸಿರಾಗಿಸುವ ಪ್ರೀತಿ ಎಂಬ ಜೀವಜಲ ಪ್ರಿಯತಮ-ಪ್ರೇಯಸಿಗೆ ಮಾತ್ರ ಸೀಮಿತವಾಗದಿರಲಿ.. ವ್ಯಾಲೆಂಟೈನ್ಸ್ ಡೇ ಹೆಸರಲ್ಲಿ ಪ್ರೀತಿ-ಪ್ರೇಮಗಳು ಯಾಂತ್ರೀಕರಣವಾಗದಿರಲಿ..ಪ್ರೀತಿ ಎಂಬ ಅದ್ಭುತ ಸಂವೇದನೆಗೆ ಒಂದು ನಿರ್ದಿಷ್ಟ ದಿನದ ಹಂಗೇಕೆ? ಫೆಬ್ರವರಿ ಮಾತ್ರವಲ್ಲ, ವರ್ಷದ ಎಲ್ಲಾ ಋತುಗಳು ಪ್ರೇಮದಿಂದ ಕಂಗೊಳಿಸಲಿ..ಪ್ರತಿ ದಿನವೂ ಪ್ರೇಮಿಗಳ ದಿನವಾಗಲಿ..ಪ್ರೇಮದ ಘಮ ಎಲ್ಲೆಡೆ ಪಸರಿಸಲಿ..ಹೃದಯದಾಳದಿಂದ ಪ್ರೀತಿಸುವ ಎಲ್ಲಾ ಮುಗ್ಧ -ಮುದ್ದು ಮನಸ್ಸುಗಳಿಗೆ ‘ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು’.
-ಕವನ.ಬಿ.ಎಸ್, ತೀರ್ಥಹಳ್ಳಿ.
ಸುಂದರ ಬರಹ. ಪ್ರೀತಿಯ ನಿಜವಾದ ಅರ್ಥವನ್ನು ಬಹಳ ಚೆನ್ನಾಗಿ ಹೇಳಿದ್ದೀರಿ.
Thank uu
Thank uu
ಪ್ರೇಮದ ಕುರಿತು ಅದ್ಭುತವಾಗಿ ಬರೆದಿದ್ದೀರಿ. ನಿಮ್ಮ ಬರವಣಿಗೆ ಹೀಗೇ ಮುಂದುವರೆಯಲಿ.
ಪ್ರೀತಿಯನ್ನು ಪ್ರೀತಿಯಿಂದ ವರ್ಣಿಸಿದ್ದೀರ,ಚೆನ್ನಾಗಿದೆ ಬರವಣಿಗೆ
ಪ್ರೀತಿಯ ವಿವಿಧ ಮುಖಗಳನ್ನು ಹೇಳಿರುವ ರೀತಿಯ ಲೇಖನ ಬಹಳ ಆಪ್ತವಾಗಿದೆ ಧನ್ಯವಾದಗಳು ಮೇಡಂ.
ಪ್ರೀತಿಯ ಜೀವಜಾಲವನ್ನು ಸುಂದರವಾಗಿ ವರ್ಣಿಸಿದ್ದೀರಿ ವಂದನೆಗಳು
You wrote very beautyfull about love….
ಸೊಗಸಾದ ಸಾಂದರ್ಭಿಕ ಬರಹ.
ಪ್ರೀತಿಯ ದಿನವನ್ನು ಆಚರಿಸುತ್ತಾ, ಆ ದಿನ ಮಾತ್ರ ಪ್ರೀತಿಯನ್ನು ಪ್ರದರ್ಶಿಸುವ ಪರಿ ನಿಜಕ್ಕೂ ಹಾಸ್ಯಾಸ್ಪದ. ಪ್ರೀತಿಯ ಮುಖಗಳು ನೂರಾರು.. ಸುಂದರ ಸಕಾಲಿಕ ಬರಹ.
ಚಂದದ ಬರಹ. ಸುಂದರ ನಿರೂಪಣೆ. ಅಭಿನಂದನೆಗಳು.