ಕಾದಂಬರಿ: ನೆರಳು…ಕಿರಣ 5

Share Button

ಹಿಂದಿನ ಸಂಚಿಕೆಯಿಂದ ಮುಂದುವರಿದುದು…..

ಶಂಭುಭಟ್ಟರು ಮನೆಗೆ ಬರುವಷ್ಟರಲ್ಲಿ ಅಡುಗೆ, ಮನೆಗೆಲಸ, ಸ್ನಾನ ಎಲ್ಲವೂ ಮುಗಿದದ್ದು ಕಾಣಿಸಿತು. ತಾವು ಬರುವಾಗ ತಂದಿದ್ದ ಸಾಮಾನುಗಳನ್ನು ಹೆಂಡತಿಯ ಕೈಗಿತ್ತು ಹೆಚ್ಚು ತಡಮಾಡದೆ ಸ್ನಾನ ಪೂಜೆ ಮುಗಿಸಿ ಊಟದ ಮನೆಗೆ ಬಂದರು. ಮನೆಯಲ್ಲಿ ಹಿರಿಯರೆಲ್ಲ ಮರೆಯಾದ ನಂತರ ಶಂಭುಭಟ್ಟರು ಮಕ್ಕಳೆಲ್ಲರನ್ನು ತಮ್ಮ ಜೊತೆಯಲ್ಲೇ ಊಟಕ್ಕೆ ಕೂರಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದರು. ಯಾರಾದರೂ ಹೊರಗಿನವರು ಬಂದಾಗ, ಅಥವಾ ತಾವೆಲ್ಲಾದರೂ ಬೇಗನೇ ಹೊರಗಿನ ಕೆಲಸಕ್ಕಾಗಿ ಹೋಗಬೇಕಾದಾಗ, ಮಕ್ಕಳ ಸಾಲೆಯಿದ್ದ ಸಮಯದಲ್ಲಿ ಮಾತ್ರ ಇದು ವ್ಯತ್ಯಾಸವಾಗುತ್ತಿತ್ತು. ಸಾಲಾಗಿಟ್ಟಿದ್ದ ತಟ್ಟೆ, ನೀರುತುಂಬಿದ ಲೋಟಗಳು, ಎಲ್ಲವನ್ನೂ ನೋಡಿದರು. ಮನದಲ್ಲೇ ಲೆಕ್ಕ ಹಾಕುತ್ತಲೇ ”ಭಾಗ್ಯಾ” ನೀನು ಎಂದು ಕೇಳಿದರು.

”ನಾನು ಅಮ್ಮನ ಜೊತೆಗೆ ಕೂಡುತ್ತೇನೆ ಅಪ್ಪ” ಎಂದಳು ಭಾಗ್ಯ.
”ಭಾಗ್ಯಾ ಬಾರಮ್ಮಾ, ಮದುವೆಯಾಗಿ ಹೋದಮೇಲೆ ಅಪರೂಪವಾಗಿಬಿಡುತ್ತೀ, ಅಲ್ಲದೆ ಅವರ ಮನೆಯಲ್ಲಿ ಯಾವರೀತಿ ನೀತಿ, ನಿಯಮ ಇರುತ್ತವೋ. ಬಾಮ್ಮಾ ..ಬಾ..ಕುಳಿತುಕೋ. ಲಕ್ಷ್ಮಿ ಬಡಿಸು” ಎಂದರು ಭಟ್ಟರು.
ಭಾಗ್ಯಳಿಗೆ ಅಪ್ಪನ ಅಂತಃಕರಣದ ಮಾತುಗಳನ್ನು ಕೇಳಿ ಕಣ್ಣುತುಂಬಿ ಬಂತು. ಮಾರುತ್ತರ ನೀಡದೇ ತಟ್ಟೆಯೊಂದನ್ನು ತೆಗೆದುಕೊಂಡು ತಂಗಿಯರ ಸಾಲಿನಲ್ಲಿ ಸೇರ್ಪಡೆಯಾದಳು.

”ಓಹೋ ! ಏನಪ್ಪಾ ಅಕ್ಕನಿಗೆ ಆಗಲೇ ಮದುವೆ ಆದಹಾಗೆ ಮಾತನಾಡುತ್ತಿದ್ದೀರಾ. ಅವರಿನ್ನೂ ಹೆಣ್ಣು ನೋಡಲು ಬರುತ್ತಿದ್ದಾರೆ ರಿಸಲ್ಟ್ ಏನಾಗುತ್ತೋ ಗೊತ್ತಿಲ್ಲ” ಎಂದಳು ಭಾವನಾ.

”ಹೇ ಜಾತಕಗಳು ಕೂಡಿವೆ. ನಿನ್ನಕ್ಕ ಚೆಂದದ ಗುಲಾಬಿಯ ಹಾಗಿದ್ದಾಳೆ, ಓದಿದ್ದಾಳೆ, ಕೆಲಸಬೊಗಸೆ ಎಲ್ಲಾ ಬರುತ್ತೆ. ಇನ್ನೇನು ಬೇಕಮ್ಮ? ನೋಡು ಬೇಕಾದರೆ ಅವಳಿಗಾದ ಕೂಡಲೇ ನಿಂದೂ ಪೀಪಿ ಗೊತ್ತಾ?” ಎಂದು ಹಾಶ್ಯ ಚಟಾಕಿ ಹಾರಿಸಿದರು ಭಟ್ಟರು. ಹೀಗೆ ಒಬ್ಬರಿಗೊಬ್ಬರು ಛೇಡಿಸುತ್ತಾ ಊಟ ಮುಗಿಸಿ ಎದ್ದರು.

‘ರೀ,..ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ಪಡೆಯಿರಿ, ಬೆಳಗ್ಗೆ ಬೇಗ ಎದ್ದಿದ್ದಿರಿ’ ಎಂದಳು ಲಕ್ಷ್ಮೀ.
‘ಅಮ್ಮಾ , ಅಕ್ಕ ಇಲ್ಲಿಂದಲೇ ರೆಡಿಯಾಗಿ ಹೊರಡಬೇಕಾ? ‘ಎಂದು ಕೇಳಿದಳು ಬಾವನಾ.
”ಬೇಡ, ಓಲೆ,ಬಳೆ. ಸರ ಹಾಕಿಕೊಳ್ಳಲಿ. ಗಡಿಬಿಡಿ ಮಾಡಿಕೊಳ್ಳುವುದು..ಅಲ್ಲಿಗೆ ತೆಗೆದುಕೊಂಡು ಹೋಗುವ ಉಸಾಬರಿ ಇಟ್ಟುಕೊಳ್ಳಬೇಡಿ. ಸೀರೆ ಅದಕ್ಕೆ ಬೇಕಾದ ರವಕೆ ಮತ್ತೇನಾದರೂ ಬೇಕೆನ್ನಿಸಿದ್ದನ್ನು ಒಂದು ಚೀಲಕ್ಕೆ ಒಪ್ಪವಾಗಿ ಮಡಿಸಿಟ್ಟುಕೊಳ್ಳಲಿ. ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳಿ, ಆಮೇಲೆ ಹೊರಡೋಣ” ಎಂದಳು ಲಕ್ಷ್ಮಿ.

ಮಧ್ಯಾನ್ಹ ಎರಡೂವರೆ ಗಂಟೆಯ ಹೊತ್ತಿಗೆ ಎಲ್ಲರೂ ಕೇಶವಯ್ಯನವರ ಮನೆ ತಲುಪಿದರು. ಇವರುಗಳ ಬರುವಿಕೆಗಾಗಿಯೇ ಕಾಯುತ್ತಿದ್ದಳೇನೋ ಎನ್ನುವಂತೆ ಭಾವನಾಳ ಗೆಳತಿ ಶಾಂತಾ ಬಾಗಿಲಲ್ಲೇ ನಿಂತಿದ್ದಳು. ಅವರೆಲ್ಲರನ್ನೂ ಒಳಕ್ಕೆ ಕರೆದುಕೊಂಡು ಹೋದಳು. ಅಷ್ಟರಲ್ಲಿ ಮನಯೊಳಗಿನಿಂದ ರಾಧಮ್ಮ, ಕೇಶವಯ್ಯ ಹೊರಬಂದವರೇ ”ಬಾಮ್ಮಾ ಲಕ್ಷ್ಮೀ, ಭಟ್ಟರೇ ಬನ್ನಿ ಮಕ್ಕಳೇ‌” ಎಂದು ಸ್ವಾಗತಿಸಿದರು. ಎಲ್ಲರೂ ಒಳಕ್ಕೆ ಹೋದರೂ ಅಲ್ಲೇ ನಿಂತು ತಲೆಯೆತ್ತಿ ಮನೆಯನ್ನು ದಿಟ್ಟಿಸಿ ನೋಡುತ್ತಿದ್ದ ಭಾಗ್ಯಳನ್ನು ಕಂಡು ಶಾಂತಾ ”ಭಾಗ್ಯಕ್ಕಾ, ಇದೇನು ಎಂದೂ ಈ ಮನೆಗೆ ಬಂದೇ ಇಲ್ಲವೇನೋ ಎನ್ನುವಂತೆ ನೋಡುತ್ತಿದ್ದೀ? ನಿಮ್ಮ ಮನೆ ನಮ್ಮ ಮನೆ ಎಲ್ಲಾ ಒಂದೇ ಥರ. ಒಂದು ವ್ಯತ್ಯಾಸ ಹೇಳಬಹುದು. ನಿಮ್ಮ ಮನೆಯಲ್ಲಿ ಮಹಡಿ ಇಲ್ಲ. ನಮ್ಮ ಮನೆಯಲ್ಲಿದೆ. ಅಷ್ಟೇ ಬಾ” ಎಂದು ಆಪ್ತತೆಯಿಂದ ಅವಳ ಕೈಹಿಡಿದು ಒಳಕ್ಕೆ ಕರೆದೊಯ್ದಳು.

ವೆರಾಂಡಾ ದಾಟಿ ಹಾಲಿಗೆ ಕಾಲಿಟ್ಟ ದಂಪತಿಗಳು ಸುತ್ತ ಕಣ್ಣಾಡಿಸಿದಾಗ ಅವರಿಗೆ ಹಾಸಿದ್ದ ಜಮಖಾನಾ, ಸಾಲಾಗಿ ಜೋಡಿಸಿಟ್ಟಿದ್ದ ಕುರ್ಚಿಗಳು, ಮುಂದೆ ಇಟ್ಟಿದ್ದ ಟೀಪಾಯಿ, ಮೂಲೆಯಲ್ಲಿ ಹಚ್ಚಿಟ್ಟಿದ್ದ ಧೂಪದಕಡ್ಡಿ ಕಣ್ಣಿಗೆ ಬಿದ್ದವು. ”ಓ ರಾಧಕ್ಕಾ, ಎಲ್ಲಾ ಸಜ್ಜುಗೊಳಿಸಿ ಬಿಟ್ಟಿದ್ದೀರಿ, ನಮಗೇನೂ ಕೆಲಸ ಉಳಿಸಿಲ್ಲ” ಎಂದು ನಕ್ಕರು.

”ಏನು ಮಹಾ ಕೆಲಸ ಭಟ್ಟರೇ, ಯಾವಾಗಲೂ ಇದ್ದ ಹಾಗೇ ಇದೆ. ಒಂದು ಜಮಖಾನೆ ಸೇರ್ಪಡೆಯಾಗಿದೆ ಅಷ್ಟೇ. ಬನ್ನಿ ಅವರುಗಳು ಬರುವಷ್ಟರಲ್ಲಿ ಒಂದು ಸಣ್ಣ ಕೆಲಸವಿದೆ. ಮುಗಿಸಿಬಿಡೋಣ. ಶಾಂತಿ ಮಾಡಿಸಲು ಸಾಮಾನುಗಳ ಪಟ್ಟಿಯೊಂದನ್ನು ಬರೆದುಕೊಡಿ ಎಂದಿದ್ದಾರೆ ಮುಂದಿನಮನೆಯ ಮಾದಪ್ಪ. ರಫ್ ಆಗಿ ಬರೆದಿದ್ದೇನೆ. ಅದನ್ನು ಸ್ವಲ್ಪ ಕ್ರಮವಾಗಿ ಲಿಸ್ಟ್ ಮಾಡೋಣ. ನಾನು ಹೇಳ್ತೀನಿ, ನೀವು ಬರೆಯಿರಿ. ನನ್ನ ಅಕ್ಷರಕ್ಕಿಂತ ನಿಮ್ಮ ಅಕ್ಷರ ದುಂಡಾಗಿವೆ” ಎಂದು ಹೇಳುತ್ತಾ ತಮ್ಮ ಖಾಸಗಿ ಕೋಣೆಗೆ ಭಟ್ಟರನ್ನು ಕರೆದುಕೊಂಡು ಹೋದರು ಕೇಶವಯ್ಯ.


ಇತ್ತ ರಾಧಮ್ಮ ಭಾಗ್ಯಳನ್ನು ನೋಡುತ್ತಾ ”ವ್ಹಾ.. ಅಲಂಕಾರ ಮಾಡಿಕೊಂಡೇ ಬಂದಿದ್ದೀ. ಸೀರೆಯುಟ್ಟರಾಯ್ತು. ಹೋಗು ಶಾಂತಾಳ ರೂಮಿನಲ್ಲಿ ಕನ್ನಡಿಯಿದೆ. ಎಲ್ಲರೂ ಅಲ್ಲೇ ಇರಿ, ಗದ್ದಲ ಮಾಡಿಕೋಬೇಡಿ. ನಾನು ಕರೆದಾಗ ಭಾಗ್ಯಳನ್ನು ಮಾತ್ರ ಕಳುಹಿಸಿಕೊಡಿ ಆಯ್ತಾ?” ಎಂದು ಮಕ್ಕಳನ್ನೆಲ್ಲ ತಮ್ಮ ಮಗಳ ಕೋಣೆಗೆ ಕಳುಹಿಸಿದರು. ಅವರೆಲ್ಲಾ ಅತ್ತ ಹೋದಮೇಲೆ ”ಬಾ ಲಕ್ಷ್ಮೀ ನಾವು ಒಳಗೆ ಹೋಗೋಣ” ಎಂದರು. ಲಕ್ಷ್ಮಿಯು ಅವರನ್ನು ಹಿಂಬಾಲಿಸಿದಳು. ಒಳಗಿನ ಅಂಗಳದಲ್ಲಿ ಮಂದಲಿಗೆ ಹಾಸುತ್ತಾ ”ಲಕ್ಷ್ಮೀ. ಎಂಥ ಚಲುವಿದ್ದಾರೆಯೇ ನಿನ್ನ ಮಕ್ಕಳು. ದಾಟಿಸುವುದೇನೂ ಕಷ್ವಾಗೋಲ್ಲ ಬಿಡು” ಎಂದರು ರಾಧಮ್ಮ.

”ಹಾ ರಾಧಕ್ಕಾ, ನೀವು ಹೇಳಿದಂತೆ ನನ್ನ ಮಕ್ಕಳು ರೂಪವಂತರಷ್ಟೇ ಅಲ್ಲ, ಬುದ್ಧಿವಂತರೂ ಹೌದು. ಆದರೆ ಅವುಗಳಷ್ಟೇ ಸಾಕೇ? ವರದಕ್ಷಿಣೆ, ವರೋಪಚಾರ, ಅದೂ ಇದೂ, ಗೊತ್ತಲ್ಲ ನಿಮಗೆ ಮನೆಯ ಪರಿಸ್ಥಿತಿ” ಎಂದಳು ಲಕ್ಷ್ಮಿ.

”ಹೌದು ಲಕ್ಷ್ಮಿ, ತಿಳಿಯದ್ದೇನಲ್ಲ ಬಿಡು, ನಿಮ್ಮ ಹಿರಿಯರು ಕೆಟ್ಟವರಿರಲಿಲ್ಲ. ನಿನ್ನ ಗಂಡನೂ ಅಷ್ಟೇ, ಆದರೆ ವಾಸ್ತವಿಕತೆಯ ಅರಿವಿರಲಿಲ್ಲ. ಮುಂದಾಲೋಚನೆ ಮಾಡುತ್ತಿರಲಿಲ್ಲ. ಹೋಗಲಿಬಿಡು. ಅವನ ವ್ಯಕ್ತಿತ್ವಕ್ಕೆ ಧಕ್ಕೆ ತರದಂತೆ ದುಡಿಮೆಗೆ ಹಚ್ಚಿದ್ದೀಯೆ. ಸಂಸಾರವೆಂದರೇನು ಎನ್ನುವುದರ ಬಗ್ಗೆ ತಲೆಗೆತಟ್ಟುವಂತೆ ಮಾಡಿದ್ದೀ. ನನಗೆ ನಿನ್ನ ದಾಷ್ಟಿಕತೆಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಲಕ್ಷ್ಮೀ ಯಾರಾದರೂ ಮೈಗಳ್ಳತನ ತೋರಿದರೆ, ಸುಮ್ಮನೆ ಅಂಡಲೆಯುತ್ತಿದ್ದರೆ ಅಂಥವರನ್ನು ಜನ ನಿನ್ನ ಗಂಡನನ್ನು ಹೋಲಿಸಿಕೊಂಡು ಲೇವಡಿ ಮಾಡುತ್ತಿದ್ದರು. ಈಗ ಅಂಥವರೇ ಶಂಭುಭಟ್ಟರೇ ಅಂತ ಗೌರವವಾಗಿ ಬಾಯ್ತುಂಬ ಕರೆಯುತ್ತಾರೆ. ಅದಕ್ಕೆಲ್ಲಾ ಕಾರಣ ನೀನೇ. ಲಕ್ಷ್ಮೀ ಯೋಚಿಸಬೇಡ, ಈಗ ಸಂಬಂಧ ಕೇಳಿಕೊಂಡು ಬಂದಿರುವವರು ದುರಾಸೆಯ ಜನರಲ್ಲ. ಎಲ್ಲ ಒಪ್ಪಿತವಾಗುತ್ತೆ. ಏನೇ ಬಂದರೂ ನಾವಿದ್ದೇವೆ ಹೆದರಬೇಡ. ಅಂದಹಾಗೆ ಒಡವೆ, ಬೆಳ್ಳಿ ಸಾಮಾನುಗಳು ಅಲ್ಪಸ್ವಲ್ಪ ಇದ್ದಾವಾ ಅಥವಾ ಹೊಸದಾಗಿ ಮಾಡಿಸಬೇಕಾ? ತಪ್ಪು ತಿಳಿಯಬೇಡ. ಅವರಿಗೆ ಒಪ್ಪಿಗೆಯಾದರೆ ಬೇಗನೆ ಲಗ್ನ ಇಡಿಸುವ ಇರಾದೆಯಿದೆ ಎಂದು ಇವರು ಹೇಳುತ್ತಿದ್ದರು. ಅದಕ್ಕೇ ಕೇಳಿದೆ. ಜೊತೆಗೆ ನೀವೂ ಏನೇನು ಸಂಪ್ರದಾಯ, ಶಾಸ್ತ್ರದಂತೆ ಕೊಡಬೇಕೋ ಕೊಡುತ್ತೇನೆ ಎಂದು ಹೇಳಿದ್ದೆಯಂತೆ. ಅದಕ್ಕೇ ವಿಚಾರಿಸಿದೆ” ಎಂದರು ರಾಧಮ್ಮ.

”ರಾಧಕ್ಕಾ ನಿಮ್ಮ ಹತ್ತಿರ ಮುಚ್ಚುಮರೆಯೇನು, ನಮ್ಮ ಅತ್ತೆಯ ಒಡವೆ, ಬೆಳ್ಳಿ ಸಾಮಾನುಗಳು ಸಾಕಷ್ಟಿವೆ. ಮಾವನವರಿಗೆ ಅವರ ಕಡೆಯಿಂದ, ಅತ್ತೆಗೆ ಬಂದವೂ ಇವೆ. ನನ್ನವೂ ಕೆಲವಿವೆ. ನನ್ನ ನಾಲ್ಕೂ ಮಕ್ಕಳಿಗೆ ಹಂಚಬಹುದು. ಅವುಗಳ ಬಗ್ಗೆ ಚಿಂತೆಯಿಲ್ಲ. ಇನ್ನು ಬಟ್ಟೆಬರೆ, ಕೊಡುವುದು ಬಿಡುವುದು, ಮದುವೆ ನಮಗೆ ತಾಳಿಕೊಳ್ಳುವಂತಾದರೆ ಸಾಕು” ಎಂದಳು ಲಕ್ಷ್ಮಿ.

ಇತ್ತ ಕೇಶವಯ್ಯನವರ ಮಾತುಗಳು ಶಂಭುಭಟ್ಟರಿಗೆ ಸಮಾಧಾನ ನೀಡುವಂಥಹವೇ ಆಗಿದ್ದವು. ”ಭಟ್ಟರೇ, ನಾನಂದುಕೊಂಡ ಕೆಲಸ ಮುಗಿಯಿತು. ಜೋಯಿಸರು ತುಂಬ ಸಮಯಪ್ರಜ್ಞೆಯುಳ್ಳವರು. ಬನ್ನಿ ಹಾಲಿನಲ್ಲೇ ಹೋಗಿ ಕೂಡೋಣ. ಲೇ ರಾಧಾ, ಸುಬ್ಬೂನ ಎಬ್ಬಿಸು. ಅವರುಗಳು ಬಂದಾಗ ಮಹಡಿ ಮೇಲಿನಿಂದ ಇಳಿದು ಆಕಳಿಸುತ್ತಾ ಬಂದುಬಿಟ್ಟಾನು” ಎಂದರು ಕೇಶವಯ್ಯನವರು.

”ಅಪ್ಪಯ್ಯಾ ನಾನಾಗಲೇ ಎದ್ದಿದ್ದಾಯಿತು. ಇದೋ” ಎಂದು ಅಪ್ಪನ ಮುಂದೆ ನಿಂತ ಸುಬ್ಬಣ್ಣ.
”ಏನಯ್ಯಾ ನೀನೇ ಗಂಡಿನಂತೆ ಸಿದ್ಧವಾಗಿದ್ದೀ?” ಎಂದು ನಕ್ಕರು.
”ಭಟ್ಟರೇ.ನಾನು ಗಂಡೇ ತಾನೇ” ಎಂದು ನಕ್ಕ ಸುಬ್ಬಣ್ಣ. ಅದೇ ಸಮಯಕ್ಕೆ ಹೊರಗೆ ಸದ್ದಾಯಿತು. ”ಬಂದರೂಂತ ಕಾಣಿಸುತ್ತೆ” ಎಂದು ಸುಬ್ಬಣ್ಣನೇ ಹೊರಬಾಗಿಲ ಹತ್ತಿರ ಹೋದವನೇ ಥಟ್ಟನೆ ಹಿಂತಿರುಗಿ ಬಂದು ”ಅಪ್ಪಯ್ಯಾ ಅವರುಗಳು ಬಂದರು” ಎಂದು ಹೇಳಿದವನೇ ಒಳಗೆ ಅಮ್ಮನಿಗೆ ಸುದ್ಧಿ ಮುಟ್ಟಿಸಿದನು.

ಕೇಶವಯ್ಯ ಮತ್ತು ಭಟ್ಟರು ಕುಳಿತಲ್ಲಿಂದ ಎದ್ದುಹೋಗಿ ಬಾಗಿಲು ತೆರೆದು ಬಂದವರನ್ನು ಒಳಗೆ ಬರಮಾಡಿಕೊಂಡರು. ಒಳ ಅಂಗಳದಲ್ಲಿ ಕುಳಿತು ಮಾತನಾಡುತ್ತಿದ್ದ ರಾಧಕ್ಕ ಎದ್ದು ಲಕ್ಷ್ಮಿಯೊಡನೆ ಹಾಲಿಗೆ ಬಂದರು. ಪರಸ್ಪರ ನಮಸ್ಕಾರಗಳಾದವು. ಜೋಯಿಸರು ತಮ್ಮ ಧರ್ಮಪತ್ನಿ ಸೀತಮ್ಮ, ಜೋಯಿಸರ ದೊಡ್ಡಪ್ಪ ಶೇಷಪ್ಪನವರು, ಮಗ ಶ್ರೀನಿವಾಸಜೋಯಿಸರು ಒಳಬಂದರು. ಬಂದವರ ಕಡೆ ಕಣ್ಣು ಹಾಯಿಸಿದಳು ಲಕ್ಷ್ಮಿ. ವೆಂಕಟರಮಣ ಜೋಯಿಸರು ಎತ್ತರವಾದ ಆಳು. ಅದಕ್ಕೆ ತಕ್ಕಂತ ಮೈಕಟ್ಟು, ಕಚ್ಚೆಪಂಚೆ, ಮೈಮೇಲೆ ರೇಷಿಮೆಯ ಉತ್ತರೀಯ ಹೊದ್ದಿದ್ದರು. ಎರಡೂ ಕಿವಿಯಲ್ಲಿ ಬಿಳಿ ಕಲ್ಲಿನ ಹತ್ತಕಡಕು, ಬಲಕೈಯಲ್ಲಿನ ಬೆರಳಲ್ಲಿ ಹಸಿರು ಕಲ್ಲಿನ ಉಂಗುರ, ಕೊರಳಲ್ಲಿ ಚಿನ್ನದ ತಂತಿಯಿಂದ ಪೋಣಿಸಿದ ತುಳಸೀಮಾಲೆ. ತಲೆ ಮುಂಭಾಗದಲ್ಲಿ ಗೋಪಾಳ, ಹಿಂದೆ ಗಂಟುಹಾಕಿದ ಜುಟ್ಟು, ಕೆಂಪನೆಯ ಮೈಬಣ್ಣ, ತೀಕ್ಷ್ಣವಾದ ಕಣ್ಣುಗಳು, ಮುಖದಲ್ಲಿ ಪಾಂಡಿತ್ಯದ ಕಳೆ, ಹಣೆಯಲ್ಲಿ ಗಂಧ. ವಾವ್ ! ಅವರ ಜೊತೆಯಲ್ಲಿ ನಿಂತಿದ್ದ ಅವರ ಧರ್ಮಪತ್ನಿ ಸೀತಮ್ಮ ತುಂಬ ಲಕ್ಷಣವಾದ ಮಹಿಳೆ, ದಂತದ ಮೈಬಣ್ಣ, ಎರಡೂ ಕೆನ್ನೆಗೆ ಹಚ್ಚಿಕೊಂಡಿದ್ದ ಅರಿಷಿಣ, ಹಣೆಯಲ್ಲಿ ದುಂಡಾದ ಕುಂಕುಮ, ಅದರ ಕೆಳಗೆ ಒಂದು ಪುಟ್ಟ ಕುಂಕುಮಬೊಟ್ಟು. ಕಿವಿಯಲ್ಲಿ ಬಿಳಿಕಲ್ಲಿನ ಓಲೆ, ಬಿಳಿಕಲ್ಲಿನ ಮೂಗುಬೊಟ್ಟು, ಕತ್ತಿನಲ್ಲಿ ಕರಿಮಣಿ ಪೋಣಿಸಿದ ಮಾಂಗಲ್ಯದ ಸರ, ಅದರ ಜೊತೆಗೆ ಎರಡೆಳೆ ಅವಲಕ್ಕಿ ಮೋಪಿನಸರ, ಕೈತುಂಬ ಹಸಿರುಬಣ್ಣದ ಸಾಣೇ ಬಳೆ, ಅವುಗಳ ಮುಂದಕ್ಕೆ ಒಂದೊಂದು ಚಿನ್ನದ ಬಳೆ, ಕೈ ಬೆರಳಲ್ಲಿ ಚಿನ್ನದಲ್ಲಿ ಸುತ್ತಿದ್ದ ಪವಿತ್ರ ಉಂಗುರ. ಉಟ್ಟದ್ದು ಧರ್ಮಾವರಂ ಸೀರೆ, ಅದಕ್ಕೊಪ್ಪುವ ರವಕೆ, ಹೊದ್ದ ಸೆರಗಿನ ಅಂಚನ್ನು ಕೈಲಿಹಿಡಿದು ಅದರಮೇಲೆ ಹೂ, ಹಣ್ಣು, ಅಡಿಕೆ,ವೀಳ್ಯದೆಲೆ ಇದ್ದ ತಟ್ಟೆ ಹಿಡಿದ ಅವರು ನೋಡಿದ ತಕ್ಷಣ ಗೌರವ ಮೂಡಿಸುವಂತಿದ್ದರು. ಈ ದಂಪತಿಗಳ ಸುಪುತ್ರ ಶ್ರೀನಿವಾಸ, ಇಪ್ಪತ್ತೆರಡರ ಯುವಕ. ಅವರಿಬ್ಬರನ್ನೂ ಸೇರಿಸಿ ಎರಕಹೊಯ್ದಂತೆ ಇದ್ದ ರೂಪವಂತ. ಎತ್ತರದ ನಿಲುವು, ಅಪ್ಪನಂತೆ ಲಕ್ಷಣ, ಅಮ್ಮನಂತೆ ಬಣ್ಣ, ಅಪ್ಪನಂತೆ ಗೋಪಾಲ ಮಾಡಿಸದೆ ಕ್ರಾಪ್‌ಕಟ್ ಮಾಡಿಸಿಕೊಂಡಿದ್ದ, ಆದರೆ ಸೂಕ್ಷ್ಮವಾಗಿ ಹಿಂತಲೆಯಲ್ಲಿ ಜುಟ್ಟಿತ್ತು. ಚುರುಕಾದ ಕಣ್ಣುಗಳು, ಗಂಭೀರ ಮುಖಭಾವ, ಕಾಲಕ್ಕೆ ತಕ್ಕಂತೆ ಜುಬ್ಬ ಪಾಯಿಜಾಮ ಧರಿಸಿದ್ದನು. ಅವರುಗಳೊಡನೆ ಜೊತೆಗೆ ಬಂದಿದ್ದ ಜೋಯಿಸರ ದೊಡ್ಡಪ್ಪ ಗತ್ತಿನ ಮನುಷ್ಯನಂತೆ ಲಕ್ಷ್ಮಿಯ ಕಣ್ಣಿಗೆ ಕಾಣಿಸಿದರು.

”ಹುಡುಗ ಎಂಥಹ ಆಕರ್ಷಕವಾಗಿದ್ದಾನೆ, ಇವನು ನಮ್ಮ ಭಾಗ್ಯಳನ್ನು ಒಪ್ಪಿದ್ದೇ ಆದರೆ ಹೇಳಿ ಮಾಡಿಸಿದ ಜೋಡಿ, ಸಂಪ್ರದಾಯಸ್ಥರು, ಪೂಜೆ ಪುನಸ್ಕಾರ ಹೆಚ್ಚು, ಅದೊಂದನ್ನು ಬಿಟ್ಟರೆ ಮತ್ತಾವ ತಾಪತ್ರಯ ಇದ್ದ ಹಾಗಿಲ್ಲ, ಹೊಂದಿಕೊಂಡು ಹೋಗುವ ಸ್ವಭಾವ ನಮ್ಮ ಮಗಳಲ್ಲಿ ಬೆಳೆಸಿದ್ದೇನೆ, ದೇವರು” ಎಂದು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದವಳನ್ನು ”ಲಕ್ಷ್ಮೀ ಲಕ್ಷ್ಮೀ ಎಲ್ಲಿ ಕಳೆದು ಹೋಗಿದ್ದೀಯೆ” ಎಂದು ಭುಜ ಹಿಡಿದು ಅಲುಗಿಸಿದರು ರಾಧಮ್ಮನವರು.

ಲಕ್ಷ್ಮಿ ತನ್ನ ಕಲ್ಪನೆಯಿಂದ ಎಚ್ಚೆತ್ತು ಏನು? ಎಂಬಂತೆ ಅವರೆಡೆಗೆ ನೋಡಿದರು. ”ಹೋಗು ಒಳಗೆ ಭಾಗ್ಯಳನ್ನು ಕರೆದುಕೊಂಡು ಬಾ. ನಾನಷ್ಟರಲ್ಲಿ ಕಾಫಿ ಬೆರೆಸಿ ಸಿದ್ಧಗೊಳಿಸಿಟ್ಟಿರುತ್ತೇನೆ” ಎಂದು ಕಿವಿಯಲ್ಲಿ ಪಿಸುಗುಟ್ಟಿ ಒಳ ನಡೆದರು.

ಇತ್ತ ಜೋಯಿಸರು ”ಕೇಶವಯ್ಯಾ ಇವನು ನಿನ್ನ ಮಗ ಸುಬ್ಬು ಅಲ್ಲವೇ? ಪೂಜೆ ಪುನಸ್ಕಾರಗಳಿಗೆ ಬಂದಾಗ ನೋಡಿದ ನೆನಪು”ಎಂದು ಕೇಳಿದರು.

”ಹಾ ಜೋಯಿಸರೇ, ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳೋ ಅಂತ ಹೇಳಿದ್ದೆ. ಈ ಪುಣ್ಯಾತ್ಮ ತೆವಳುತ್ತಾ ಪಿ.ಯು.ಸಿ.,ವರೆಗೂ ಬಂದ. ಅಪ್ಪಾ ಓದಿದ್ದು ಸಾಕಪ್ಪಾ ಕುಲಕಸುಬನ್ನೇ ಮುಂದುವರಿಸಿಕೊಂಡು ಹೋಗುತ್ತಾನೆಂದು ಓದಿಗೆ ಶರಣು ಹೊಡೆಸಿ ಒಂದು ಅಂಗಡಿ ಹಾಕಿಕೊಟ್ಟಿದ್ದೇನೆ. ಶಾಸ್ತ್ರ, ಪೌರೋಹಿತ್ಯ ಇವನ್ನೇ ನಂಬಿಕೊಂಡು ಜೀವಿಸಬಹುದು. ಆದರೆ ಬದುಕಿಕೊಂದು ಭದ್ರತೆಯಿಲ್ಲದೆ ಮುಂದಿನ ತಲೆಮಾರು ಬೆಳೆಸೋಕೆ ಸಾಧ್ಯವಿಲ್ಲಾಂತ ಅಂಗಡಿ ಹಾಕಿದ್ದು. ಮುತುವರ್ಜಿಯಿಂದ ನಡೆಸಿಕೊಂಡು ಹೋಗುತ್ತಿದ್ದಾನೆ” ಎಂದರು ಕೇಶವಯ್ಯನವರು.

”ನಿಮ್ಮ ಮಗನಿಗೆ ವಯಸ್ಸೆಷ್ಟು? ಮದುವೆ ಮಾಡುವ ಯೋಚನೆ ಇದೆಯಾ? ನಮ್ಮಲ್ಲಿ ಒಬ್ಬ ಕನ್ಯೆಯಿದ್ದಾಳೆ. ಅಂದರೆ ಮೊಮ್ಮಗಳು. ಜಾತಕ ಬೇಕಾದರೆ ಇಲ್ಲೇ ಇದೆ ಜೇಬಿಗೆ ಕೈಹಾಕಿ ಸಿಕ್ಕದಿದ್ದಾಗ ..ಹೂಂ ಅಂದರೆ ಕಳಿಸಿಕೊಡುತ್ತೇನೆ ”ಎಂದರು ಜೋಯಿಸರ ದೊಡ್ಡಪ್ಪ ಶೇಷಪ್ಪನವರು.

ಅವರ ಮಾತನ್ನು ಕೇಳಿದ ಕೇಶವಯ್ಯ” ವಾರೆವ್ಹಾ, ಪಕ್ಕಾ ವ್ಯವಹಾರಸ್ಥರಂತಿದ್ದಾರೆ. ಬಂದಿರುವುದು ಮೊಮ್ಮಗನಿಗೆ ಹುಡುಗಿ ನೋಡಲು, ಅದೂ ಮೂರುಜನ ಬರಬಾರದೆಂದು ಜೊತೆಗೆ ಇವರನ್ನು ಕರೆತಂದಿದ್ದಾರೆ, ಅದೇನೋ ಹೇಳ್ತಾರಲ್ಲಾ ದೊಡ್ಡ ಒಲೆಯ ಪಕ್ಕದಲ್ಲೊಂದು ಕೋಡೊಲೆ ಇದ್ದಹಾಗೇಂತ. ಅಲ್ಲೇ ತಮ್ಮ ತಪ್ಪಲೆಯಿಟ್ಟು ಕಾಯಿಸಿಕೊಳ್ಳುವ ಹಾಗೇ’ ಮನಸ್ಸಿನಲ್ಲೇ ಅಂದುಕೊಂಡು ”ಇಲ್ಲಾ ನನಗೆ ಇವನೊಬ್ಬನೇ ಮಗನಲ್ಲ, ಒಬ್ಬ ಮಗಳೂ ಇದ್ದಾಳೆ. ಆಕೆಯಿನ್ನೂ ಒಂಬತ್ತನೇ ತರಗತಿಗೆ ಬಂದಿದ್ದಾಳೆ. ಆಕೆಯದು ಆದಮೇಲೆ ಇವನದ್ದು. ಈಗಿನ್ನೂ ಹದಿನೆಂಟು ತುಂಬಿ ಹತ್ತೊಂಬತ್ತು ನಡೀತಿದೆ. ವಯಸ್ಸಿಗೆ ಮೀರಿದ ಬೆಳವಣಿಗೆ” ಎಂದರು.

”ಆಗಲಿ ಮದುವೆ ಮಾಡುವಾಗ ನನ್ನ ಮಾತು ನೆನಪಿರಲಿ. ಏಕೆಂದರೆ ನನಗೆ ಮೂವರು ಹೆಣ್ಣು ಮೊಮ್ಮಕ್ಕಳೇ ”ಇರುವುದು ಎಂದರು ಶೇಷಪ್ಪ.

”ವಿಷಯ ಎತ್ತಲೋ ಹೋಗತೊಡಗಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಜೋಯಿಸರು ಕೇಶವಯ್ಯ, ಹುಡುಗೀನ ಕರೆಸಿಬಿಡಪ್ಪಾ, ದೇವಸ್ಥಾನದ ಪೂಜೆಗೆ ತಡವಾಗುತ್ತೆ” ಎಂದರು.

”ರಾಧಮ್ಮ ಕಾಫಿ ಬೆರೆಸಿ ಲೋಟಗಳಿಗೆ ಹಾಕಿ ಒಂದು ತಟ್ಟೆಯಲ್ಲಿ ಅವುಗಳನ್ನು ಇಟ್ಟುಕೊಟ್ಟರು. ಲಕ್ಷ್ಮಿ ಭಾಗ್ಯಳನ್ನು ಕರೆದುಕೊಂಡು ಬಂದಳು. ‘ಹಾ ಭಾಗ್ಯಾ ಇದನ್ನು ಭದ್ರವಾಗಿ ಹಿಡಿದುಕೋ, ಎಲ್ಲರಿಗೂ ಕೊಡು, ಹೆದರಬೇಡ’ ಎಂದು ಹೇಳಿ ತಟ್ಟೆಯನ್ನು ಅವಳ ಕೈಗಿತ್ತರು.

ಅಷ್ಟರಲ್ಲಿ ಅಲ್ಲಿಗೆ ಬಂದ ಸುಬ್ಬು ”ಹಾಗೇ ನಿನ್ನ ಕೈಹಿಡಿಯುವನನ್ನು.. ಛೇ..ನಿನ್ನನ್ನು ನೋಡಲು ಬಂದಿರುವ ರಾಜಕುಮಾರನನ್ನು ನೋಡಿಕೋ, ಅವನ ಮುಖದಮೇಲೆ ಮೂಗಿದೆಯೋ ಇಲ್ಲವೋ ”ಎಂದು ಪಿಸುಗುಟ್ಟಿದನು.

”ಷ್..ಸುಮ್ಮನಿರೋ ಸುಬ್ಬು ಈ ಸಮಯದಲ್ಲಿ ಅದೆಂಥಾ ಚೇಷ್ಟೆ, ನೀನು ನಡೆಯಮ್ಮಾ ”ಎಂದು ತಾವೂ ಅವಳನ್ನು ಅನುಸರಿಸಿ ನಡೆದರು ರಾಧಮ್ಮ ಮತ್ತು ಲಕ್ಷ್ಮಿ. ಭಾಗ್ಯ ಭಯಭಕ್ತಿಯಿಂದಲೇ ಎಲ್ಲರಿಗೂ ಕಾಫಿಯನ್ನು ಕೊಟ್ಟಳು. ವೆಂಕಟರಮಣ ಜೋಯಿಸ ದಂಪತಿಗಳಿಗೆ ಹುಡುಗಿ ಒಪ್ಪಿತವಾದಂತೆ ಅವರ ಮುಖಚರ್ಯೆಯಿಂದಲೇ ಕಾಣಿಸಿತು. ಜೋಯಿಸರ ಧರ್ಮಪತ್ನಿ ಸೀತಮ್ಮನವರು ಭಾಗ್ಯಳನ್ನು ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡರು. ಅವಳು ಕುಳಿತುಕೊಳ್ಳುತ್ತಿದ್ದಂತೆ ಇತ್ತಕಡೆಯೇ ದೃಷ್ಟಿ ನೆಟ್ಟಿದ್ದ ತಮ್ಮ ಮಗನ ಕಡೆ ನೋಡಿದರು. ಅವನೂ ತನಗೆ ಸಮ್ಮತಿ ಎನ್ನುವಂತೆ ಕಣ್ಣುಗಳಲ್ಲೇ ಒಪ್ಪಿಗೆಯಿತ್ತ. ಜೋಯಿಸರ ದೊಡ್ಡಪ್ಪನಂತೂ ಭಾಗ್ಯಳನ್ನು ಅಚ್ಚರಿಯ ಕಣ್ಣುಗಳಿಂದ ನೋಡಿದ್ದಲ್ಲದೆ ಅವಳನ್ನು ವಿದ್ಯಾಭ್ಯಾಸ, ಹಾಡುಹಸೆ, ಕೆಲಸಬೊಗಸೆ, ಒಡಹುಟ್ಟಿದವರು ಹೀಗೆ ಅನೇಕ ಪ್ರಶ್ನೆಗಳ ಸರಮಾಲೆಯನ್ನೇ ಕೇಳಲು ಪ್ರಾರಂಭಿಸಿಬಿಟ್ಟರು. ಅದನ್ನು ಗಮನಿಸಿದ ಜೋಯಿಸರಿಗೆ ಇರಿಸುಮುರಿಸಾಗಿ ” ಆಯಿತು ಮಗು, ನೀನಿನ್ನು ಒಳಗೆ ಹೋಗು” ಎಂದುಬಿಟ್ಟರು. ಅಷ್ಟೇ ಸಾಕೆಂದು ಭಾಗ್ಯ ಹಿರಿಯರಿಗೆಲ್ಲ ನಮಸ್ಕರಿಸಿ ಅಲ್ಲೇ ಕುಳಿತಿದ್ದ ಹುಡುಗನನ್ನೊಮ್ಮೆ ಕಿರುಗಣ್ಣೀಂದ ಗಮನಿಸುತ್ತಲೇ ಒಳಕ್ಕೆ ಹೋದಳು.
ಆನಂತರ ನಾವಿನ್ನು ಬರುತ್ತೇವೆ ಕೇಶವಯ್ಯಾ, ಭಟ್ಟರೇ, ಲಕ್ಷ್ಮಮ್ಮ, ರಾಧಮ್ಮ ಎಂದು ಎದ್ದು ನಿಂತರು ಜೋಯಿಸರು. ಕೂಡಲೇ ರಾಧಮ್ಮ ಜೋಯಿಸರ ಹೆಂಡತಿಗೆ ಕುಂಕುಮ, ಹೂ ಕೊಟ್ಟು ಫಲತಾಂಬೂಲ ನೀಡಿದರು. ಮತ್ತೊಮ್ಮೆ ನಮಸ್ಕಾರಗಳ ವಿನಿಮಯದೊಡನೆ ಬಂದವರು ನಿರ್ಗಮಿಸಿದರು. ಅವರುಗಳನ್ನು ಬೀಳ್ಕೊಂಡು ಒಳಬಂದರು. ಕೇಶವಯ್ಯನವರು. ‘ಏನಪ್ಪಾ ಏನೆನ್ನಿಸಿತು ದಂಪತಿಗಳಿಗೆ?’ ಎಂದು ಭಟ್ಟರನ್ನು ಕೇಳಿದರು.

‘ನಮ್ಮದೇನಿದೆಯಣ್ಣ, ನಮಗಿಷ್ಟವಾಗಿದೆ. ಅವರೂ ಒಪ್ಪಿದರೆ ಮುಂದಿನದೆಲ್ಲ ನಿಮಗೆ ಮೊದಲೇ ಒಪ್ಪಿಸಿಬಿಟ್ಟಿದ್ದೇವಲ್ಲ’ ಎಂದರು ಒಟ್ಟಿಗೆ ಲಕ್ಷ್ಮಿ, ಶಂಭುಭಟ್ಟರು. ಆಗ ಸುಬ್ಬು ‘ನೀವು ಏನೇ ಹೇಳಿ ಅಪ್ಪಯ್ಯಾ, ಜೋಯಿಸರ ಕುಟುಂಬದೊಡನೆ ಬಂದಿದ್ದರಲ್ಲ ಆ ದೊಡ್ಡಪ್ಪ ಅನ್ನಿಸಿಕೊಂಡ ಹಿರಿಯರು ಅವರ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಅಧಿಕಪ್ರಸಂಗಿತನ..ಛೇ..ಛೇ’ ಎಂದ.

‘ಅಯ್ಯೋ ಸುಬ್ಬು, ಕೆಲವರು ಹಾಗೇ. ಅವರೇನು ಜೋಯಿಸರ ಸ್ವಂತ ದೊಡ್ಡಪ್ಪನಲ್ಲ. ಅದೇನೋ ದೂರದ ವರಸೆಯಿಂದ ದೊಡ್ಡಪ್ಪನಾಗಬೇಕಂತೆ. ಜಿಗುಟಿನ ಮನುಷ್ಯ. ಜೋಯಿಸರು ಅವರನ್ನು ದೂರ ಇಟ್ಟರೂ ಬಿಡದೆ ಪದೇಪದೇ ಅವರಲ್ಲಿಗೆ ಬರುತ್ತಿರುತ್ತಾರೆ. ಮೂರುಜನ ಆಗುತ್ತಲ್ಲಾ ಅಂತ ಅಂದಾಗ ಆತನೇ ಮೇಲೆಬಿದ್ದು ಬಂದಿರಬೇಕು. ಹೋಗಲಿಬಿಡು. ಅವರನ್ನು ಕಟ್ಟಕೊಂಡು ನಮಗೇನಾಗಬೇಕು. ಜೋಯಿಸರು ತುಂಬಾ ಸೂಕ್ಷ್ಮಸ್ವಭಾವದವರು. ವಾತಾವರಣ ಬಿಗಿಯಾಗುವ ಮುನ್ನವೇ ಜಾಗ ಖಾಲಿಮಾಡಿದರು’ ಎಂದರು.

‘ಹೂ ಅಪ್ಪಯ್ಯಾ, ನಾನೂ ಗಮನಿಸಿದೆ. ಆ ಪುಣ್ಯಾತ್ಮ ಬಾರದಿದ್ದರೆ ಈಗಲೇ ತಮ್ಮ ಅಭಿಪ್ರಾಯವನ್ನು ಹೇಳಿಬಿಡುತ್ತಿದ್ದರೆನ್ನಿಸುತ್ತದೆ’ ಎಂದು ತಂಗಿ ಶಾಂತಾಳ ರೂಮಿನೊಳಕ್ಕೆ ಹೋದ ಸುಬ್ಬಣ್ಣ.
‘ಹೂ..ಲಕ್ಷ್ಮೀ ನಾವಿನ್ನು ಹೊರಡೋಣವೇ?’ ಎಂದು ಕೇಳಿದರು ಭಟ್ಟರು.
‘ಒಂದು ನಿಮಿಷ ಬಂದೆ’ ಎನ್ನುತ್ತಾ ಲಕ್ಷ್ಮಿ ತಾನು ತಂದಿದ್ದ ಹಣ್ಣು, ಹೂವು, ವೀಳ್ಯದೆಲೆ, ಅಡಿಕೆಗಳನ್ನಿಟ್ಟು ಭಾಗ್ಯಳನ್ನು ಕರೆದು ಅವಳಿಂದ ರಾಧಮ್ಮನವರಿಗೆ ಕೊಡಿಸಿದಳು.
‘ಏ..ಏನಮ್ಮಾ ಇದೆಲ್ಲಾ? ‘ಎನ್ನುತ್ತಾ ಬಂದವರು ತಂದಿದ್ದ ಹಣ್ಣು ಮತ್ತು ಈ ಹಣ್ಣುಗಳಲ್ಲಿ ತಮಗೊಂದಿಷ್ಟು ಇಟ್ಟುಕೊಂಡು ಮಿಕ್ಕೆಲ್ಲವನ್ನೂ ಲಕ್ಷ್ಮಿಗೇ ಹಿಂತಿರುಗಿಸಿ ”ಮಕ್ಕಳಿಗೆ ಕೊಡು” ಎಂದರು. ಹಾಗೇ ಮಕ್ಕಳನ್ನು ಕರೆದು ಕಟ್ಟಿರುವ ಹೂವನ್ನು ತುಂಡರಿಸಿ ಎಲ್ಲರಿಗೂ ಮುಡಿಸಿದರು. ”ಹೌದು ಸುಬ್ಬು, ಅವರುಗಳು ಹೇಗೆ ಬಂದಿದ್ದರು? ರಿಕ್ಷಾ, ಗಾಡಿ, ಯಾವ ಸದ್ದೂ ಕೇಳಿಸಲಿಲ್ಲ” ಎಂದು ಕೇಳಿದರು ರಾಧಮ್ಮ.

”ಅವರ ಶಿಷ್ಯನೊಬ್ಬ ಮೊಟಾರ್ ಗ್ಯಾರೇಜ್ ಇಟ್ಟುಕೊಂಡಿದ್ದಾನೆ. ಅವನೇ ನಂಜುಂಡಾಂತ. ಮೆಕ್ಯಾನಿಕಲ್ ಡಿಪ್ಲೊಮಾ ಮಾಡಿದ್ದಾನೆ. ಅವರ ಮನೆಯ ಮುಂದಿನ ಜಾಗದಲ್ಲಿಯೇ ಅವನ ಗ್ಯಾರೇಜಿದೆ. ಅವನಿಗೆ ಜೋಯಿಸರು ಸಾಕಷ್ಟು ಸಹಾಯ ಮಾಡಿದ್ದಾರೆ. ಆ ಕೃತಜ್ಞತೆಯಿಂದ ಅವರೆಲ್ಲಾದರೂ ಹೋಗುವದಿದ್ದರೆ ಮೊದಲೇ ತಿಳಿಸಿದರೆ ಅವನಲ್ಲಿಗೆ ಸರ್ವೀಸಿಗೆ ಬಂದಿರುವ ಯಾವುದಾದರೂ ವಾಹನದಲ್ಲಿ ಅವರನ್ನು ಬಿಟ್ಟು ಬರುತ್ತಾನೆ. ಇಲ್ಲವಾದ್ರೆ ಅವನಪ್ಪನ ಕಾಲದ ಒಂದು ಅಂಬಾಸಿಡರ್ ಕಾರಿದೆ. ಅದನ್ನೇ ತರುತ್ತಾನೆ. ಇವತ್ತೂ ಅದರಲ್ಲೇ ಕರೆದುಕೊಂಡು ಬಂದಿದ್ದ. ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿದ್ದ. ನಾನು ಉಪಕಾರ ಮಾಡಿದ್ದೇನೆ ಅದಕ್ಕಾಗಿ ನಾನು ಕರೆದಾಗಲೆಲ್ಲ ಅವನು ಬರಬೇಕೆಂದು ಜೋಯಿಸರು ಬಯಸುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಹೇಳಿ ಕಳುಹಿಸುತ್ತಾರೆ. ಬಂದವನನ್ನು ಎಂದೂ ಬರಿಗೈಯಲ್ಲಿ ಕಳುಹಿಸುವುದಿಲ್ಲ. ಇವನ್ನೆಲ್ಲಾ ನಾನು ನಂಜುಂಡನ ಬಾಯಿಂದಲೇ ಕೇಳಿದ್ದು” ಎಂದರು ಕೇಶವಯ್ಯನವರು.

”ಸರಿ ರಾಧಕ್ಕಾ ನಾವಿನ್ನು ಬರುತ್ತೇವೆ. ಸುಬ್ಬು ಅಂಗಡಿ ತೆರೆಯಬೇಕು, ಕೇಶವಯ್ಯನವರಿಗೆ ಅವರ ಸಂಗೀತದ ಶಿಷ್ಯರು ಬರುವ ಹೊತ್ತು” ಎಂದು ಅವಸರಿಸಿದರು ಭಟ್ಟರು.

ಇದನ್ನು ಕೇಳಿದ ಸುಬ್ಬಣ್ಣ ”ಅರೇ ಭಟ್ಟರೇ, ನೀವಾ ಈ ಮಾತುಗಳನ್ನು ಹೇಳುತ್ತಿರುವುದು ವ್ಹಾವ್ ! ಎಷ್ಟೊಂದು ಬದಲಾವಣೆ. ಎಲ್ಲ ಲಕ್ಷ್ಮಮ್ಮನ ಸಹವಾಸ” ಎಂದಾಗ ಅಲ್ಲಿಯೇ ಇದ್ದ ರಾಧಮ್ಮ ಮಗನನ್ನು ಕಣ್ಸನ್ನೆಯಿಂದಲೇ ಸುಮ್ಮನಿರುವಂತೆ ಸನ್ನೆ ಮಾಡಿದರು. ಹಾಗೇ ಮಾತು ಬದಲಿಸಲೋಸುಗ ಭಾಗ್ಯಳ ತಲೆ ಸವರಿ ‘ಹೇಗಿದ್ದಾನೇ ಹುಡುಗ?’ ಎಂದು ಕೇಳಿದರು.

”ಹೂಂ..ಅವನನ್ನೇ ನುಂಗುವ ಹಾಗೆ ನೋಡುತ್ತಿದ್ದಳು ಅಲ್ಲವೇನೇ ಭಾಗ್ಯ?” ಎಂದ ಸುಬ್ಬಣ್ಣ.
ಆಗ ರಾಧಮ್ಮ ಅವನ ಬೆನ್ನ ಮೇಲೊಂದು ಗುದ್ದಿ ”ಏನು ಚೇಷ್ಟೇನೋ ನಿಂದು? ನಿನ್ನ ನೋಡಿದವರು ನಿನಗೇ ಹುಡುಗೀನ ಗಂಟು ಹಾಕಲಿಕ್ಕೆ ನೋಡ್ತಾರೆ. ನೀನು ನೋಡಿದರೆ ಹುಡುಗುಡುಗಾಗಿ ಆಡ್ತೀಯ. ಗಾಂಭೀರ್ಯ ಯಾವಾಗ ಕಲೀತೀಯೋ ” ಎಂದು ಪ್ರೀತಿಯಿಂದ ಮಗನನ್ನು ಗದರಿಕೊಂಡರು.

”ಲಕ್ಷ್ಮೀ ತೊಗೋ ಈ ಡಬ್ಬಿಯಲ್ಲಿ ಒಂದಿಷ್ಟು ರವೆಯುಂಡೆ, ಕೋಡುಬಳೆ ಇವೆ. ಮಕ್ಕಳಿಗೆ ಕೊಡು”ಎಂದು ಹೇಳಿ ಹಾಗೇ ಅವಳಿಗೆ ಕುಂಕುಮವಿತ್ತು ”ಹೋಗಿಬನ್ನಿ, ಎಲ್ಲವೂ ಒಳ್ಳೆಯದಾಗುತ್ತದೆ” ಎಂದರು. ರಾಧಮ್ಮ. ಕೂಡಲೇ ಮಕ್ಕಳೊಂದಿಗೆ ಭಟ್ಟರು ತಮ್ಮ ಮನೆಗೆ ಹೊರಟರು.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ:  http://surahonne.com/?p=34838

(ಮುಂದುವರಿಯುವುದು)

ಬಿ.ಆರ್,ನಾಗರತ್ನ, ಮೈಸೂರು

11 Responses

  1. ನಯನ ಬಜಕೂಡ್ಲು says:

    ಬ್ಯೂಟಿಫುಲ್

  2. Hema says:

    ‘ನೆರಳು’ ಕಾದಂಬರಿಯ ಛಾಪು ಸೊಗಸಾಗಿ ಮೂಡುತ್ತಲಿದೆ !

  3. . ಶಂಕರಿ ಶರ್ಮ says:

    ಸೊಗಸಾದ ಕಥಾನಿರೂಪಣೆ ಬಹಳ ಇಷ್ಟವಾಯ್ತು.. ಧನ್ಯವಾದಗಳು ನಾಗರತ್ನ ಮೇಡಂ ಅವರಿಗೆ.

  4. ನಾಗರತ್ನ ಬಿ.ಆರ್. says:

    ಧನ್ಯವಾದಗಳು ಪ್ರಿಯ ಗೆಳತಿ ಹೇಮಾ

  5. sudha says:

    ಚೆನ್ನಾಗಿದೆ ನಾಗರತ್ನ ಅವರೇ. 50 ವರ್ಷಗಳ ಹಿಂದೆ ಇದ್ದ ಕಾಲ.

  6. ವರ್ಣನೆ ಬಹಳ ಸೊಗಸಾಗಿದೆ, ಸನ್ನಿವೇಶವೆಲ್ಲ ಕಣ್ಣೆದುರೇ ನಡೆದಂತೆ ಭಾಸವಾಗುತ್ತದೆ

  7. ನಾಗರತ್ನ ಬಿ.ಆರ್. says:

    ಧನ್ಯವಾದಗಳು ಶಂಕರಿ ಮೇಡಂ

  8. ನಾಗರತ್ನ ಬಿ.ಆರ್. says:

    ಧನ್ಯವಾದಗಳು ನಯನ ಮೇಡಂ

  9. ನಾಗರತ್ನ ಬಿ.ಆರ್. says:

    ಧನ್ಯವಾದಗಳು ವೀಣಾ ಹಾಗೂ ಸುಧಾ ಮೇಡಂ.

  10. ನಾಗರತ್ನ ಬಿ.ಆರ್. says:

    ಧನ್ಯವಾದಗಳು ಗೆಳತಿ ವೀಣಾ

  11. Anonymous says:

    ತುಂಬಾ ಚೆನ್ನಾಗಿದೆ, ಅಂದು ನಡೆಯುತ್ತಿದ್ದ ಹೆಣ್ಣು ನೋಡುವ ಶಾಸ್ತ್ರ, ಅದರ ತಯಾರಿ, ವೆಂಕಟರಮಣ ಮತ್ತು ಸೀತಮ್ಮ ನವರನ್ನು ವರ್ಣಿಸಿರವುದು ಇಷ್ಟವಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: