ಕೇಶ-ಕ್ಲೇಶ
ನನ್ನ ಕೇಶ-ಕ್ಲೇಶ ಪ್ರಾರಂಭವಾಗಿದ್ದು ನಾನು 6 ನೇ ವಯಸ್ಸಿನಲ್ಲಿದ್ದಾಗ. ನಾವಾಗ ಕೊಡಗಿನ ಸಣ್ಣ ಊರಲ್ಲಿ ವಾಸವಿದ್ದೆವು. ನಮ್ಮ ತಂದೆ 2 ತಿಂಗಳಿಗೊಮ್ಮೆ ನನ್ನ ಸಹೋದರರನ್ನು ಕೂಡಿಸಿ ಕೇಶ ಮುಂಡನಕ್ಕೆ ಕರೆದೊಯ್ಯುತ್ತಿದ್ದರು. ನಮಗಾವ ಸ್ವಾತಂತ್ರ್ಯವೂ ಇರಲಿಲ್ಲ. ನಾಪಿತನಿಗೆ ಸ್ಪಷ್ಟವಾಗಿ ಕೇವಲ ಅರ್ಧ ಇಂಚು ಬಿಟ್ಟು ಪೂರ ಕೇಶ ಮರ್ದನಕ್ಕೆ ಸೂಚನೆ ಕೊಡುತ್ತಿದ್ದರು. ನಾವಂತೂ ಗೊಳೋ ಎಂದು ಅಳುತ್ತಿದ್ದರೂ ನಾಪಿತನ ಕತ್ತರಿಗೆ ತಲೆಯೊಡ್ಡುವುದು ಅನಿವಾರ್ಯವಾಗಿತ್ತು. ಈಗ ಅರವತ್ತು ವರ್ಷಗಳಾದ ಮೇಲೆ ಅದೇ ಆರು ವಯಸ್ಸಿನ ಹುಡುಗ ಅಪ್ಪನ ಜೊತೆ ನಾಪಿತನ ಅಂಗಡಿಗೆ ಕಾಲಿರಿಸಿದ ಕೂಡಲೇ ಬಾಲಕನೇ ನಾಪಿತನಿಗೆ ಸೂಚನೆ ಕೊಡುತ್ತಾನೆ. ನೋಡಿ ನನಗೆ ಧೋನಿ ಅಥವಾ ವಿರಾಟ್ ಕೊಹ್ಲಿಯ ಸ್ಟೈಲ್‌ನಲ್ಲಿ ಕೇಶವಿನ್ಯಾಸ ಮಾಡಿ ಎಂದು. ಬಾಲಕನ ತಂದೆ ಅಸಹಾಯಕನಾಗಿ ನೋಡುತ್ತಿರುತ್ತಾನೆ ಅಷ್ಟೆ. ಈ ಬದಲಾವಣೆ ನನ್ನನ್ನು ಮೂಕನಾಗಿಸುತ್ತದೆ. ಕಾಲಾಯ ತಸ್ಮೈ ನಮಃ..
ಈ ಸಂದರ್ಭದಲ್ಲಿ ಓರ್ವ ಸೈನ್ಯದ ಬ್ರಿಗೇಡಿಯರ್ ರವರ ಅಳಲು ನಿಜಕ್ಕೂ ಖೇದಕರ. ಅವರ ಪ್ರಕಾರ ಅವರ ಕೆಳಗಿನ ಇಪ್ಪತ್ತು ಸಾವಿರ ಸೈನಿಕರ ಹೇರ್ ಸ್ಟೈಲ್‌ನ್ನು ಒಂದೇ ದಿನದಲ್ಲಿ ಬದಲಿಸಬಲ್ಲರು. ಆದರೆ ಅವರ ಮಗನ ಹೇರ್ ಸ್ಟೈಲ್‌ನ ಬಗ್ಗೆ ಮಾತನಾಡುವ ಹಕ್ಕು ತನಗಿಲ್ಲ ಎನ್ನುತ್ತಾರೆ. ಅದರ ಬಗ್ಗೆ ಮಾತು ಪ್ರಾರಂಭವಾದರೆ ಅದು ಭಾರತ-ಪಾಕ್ ನಂತಾಗುತ್ತದೆ ಎನ್ನುತ್ತಾರೆ. ಈ ಪರಿಸ್ಥಿತಿ ಪ್ರಾಯಶಃ ಎಲ್ಲಾ ಅಪ್ಪಂದಿರಲ್ಲೂ ಕಾಣಬರುತ್ತದೆ ಅಲ್ಲವೇ? ಒಂದು ವಕ್ರ ತುಂಡೋಕ್ತಿಯನ್ನು ಇಲ್ಲಿ ನೆನಪಿಸಬಹುದು. ನಿಮ್ಮ ಮಗ ಹೇರ್ ಸ್ಟೈಲ್ ವಿಷಯದಲ್ಲಿ ನಿಮ್ಮ ಮಾತು ಇನ್ನೂ ಕೇಳುತ್ತಾನೆ ಅಂದರೆ ಅವನಿನ್ನೂ ಬಹಳ ಚಿಕ್ಕವನು ಎಂದೇ ಅರ್ಥ.
ಇವಿಷ್ಟೂ ತಲೆಯ ಕ್ಲೇಶದ ಕ್ಲೇಶ ಗಳಾದರೆ ಗಡ್ಡದ ಬಗ್ಗೆ ಇಷ್ಟೇ ಕ್ಲೇಶ ಗಳಿವೆ. ನೀವೆಲ್ಲಾ ಕೇಳಿರುವಂತೆ ನೋ ಶೇವ್ ನವೆಂಬರ್ ಎಂಬ ಒಂದು ಪದ್ಧತಿ. ನವೆಂಬರ್ ಪೂರ ಶೇವ್ ಮಾಡದೆ ಗಡ್ಡ ಬೆಳೆಸಿ ಉಳಿಸಿದ ಹಣವನ್ನು ಕ್ಯಾನ್ಸರ್ ಪೀಡಿತರಿಗೆ, ಕ್ಯಾನ್ಸರ್ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡುವ ಪದ್ಧತಿ ವಿಶ್ವದಾದ್ಯಂತ ಆಚರಣೆಯಲ್ಲಿದೆ. ಇದೊಂದು ಒಳ್ಳೆಯ ಸುದ್ದಿ.
ಈಗಂತೂ ಗಡ್ಡ ಬಿಡುವುದು ಒಂದು ಶೋಕಿಯೋ ಅಥವಾ ಸೋಮಾರಿತನದ ಕುರುಹೋ ತಿಳಿಯದಾಗಿದೆ. ಹಿಂದೆ ಗಡ್ಡ ಬಿಟ್ಟರೆ ನಿನಗೆ ಹುಷಾರಿಲ್ಲವಾ ಎಂದು ಕೇಳುತ್ತಿದ್ದರು. ಈಗ ಎಲ್ಲರಿಗೂ ಕೇಳಬೇಕಾದ ಪರಿಸ್ಥಿತಿ ಬಂದಿದೆ. ಹಿಂದೊಮ್ಮೆ ಗಡ್ಡ ಬಿಟ್ಟವ ಪ್ರೀತಿಯಲ್ಲಿ ಸೋತವ ಎಂದರ್ಥ. ಸಿನಿಮಾಗಳಲ್ಲೂ ಇದನ್ನು ಪ್ರದರ್ಶಿಸುತ್ತಿದ್ದಂತೆ ನೆನಪು. ಗಡ್ಡ ಬಿಟ್ಟವರೆಲ್ಲಾ ಸನ್ಯಾಸಿಗಳು ಎಂದು ಬಿಂಬಿಸುತ್ತ ಮಾತನಾಡಿಸುವ ಕಾಲವಿತ್ತು. ದಕ್ಷಿಣಕನ್ನಡ, ಉಡುಪಿಯ ಕಡೆ ಇವತ್ತಿಗೂ ಗಡ್ಡ ಬಿಟ್ಟರೆ ನಿಮ್ಮ ಮನೆಯಾಕೆ ಗರ್ಭಿಣಿಯಾ? ಎಂದು ಕೇಳುವುದು ವಾಡಿಕೆ. ಗಡ್ಡ ಬಿಡುವ ಬಗ್ಗೆ ಮನೆಯಲ್ಲಿಯ ಸಾಮರಸ್ಯದ ಕೊರತೆ ಉಂಟಾಗುವುದೂ ಇದೆ. ಮನೆಯಾಕೆ ಅಥವಾ ತಾಯಿಗೆ ಗಡ್ಡದ ಬಗ್ಗೆ ಅಂಥಹ ಮೋಹವಿಲ್ಲ.
ಈಗಿನ ಯುವಕರಂತೂ ತಲೆಕೂದಲು, ಗಡ್ಡದ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ಕೇಶದ ಬಗ್ಗೆ ಕೆಲವು ಆಸಕ್ತಿಕರವಾದ ಸಂಗತಿಗಳಿರುವುದು ವಿಶೇಷ. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆಯೆಂಬುದು ಸರ್ವವಿದಿತ. ಹಾಗೆಯೇ ಪ್ರತಿ ಸುಂದರ ಮಹಿಳೆಯ ಹಿಂದೆ ಓರ್ವ ಹೇರ್ ಡ್ರೆಸರ್ ಇರುತ್ತಾಳೆ ಅಲ್ಲವೇ? ನಮ್ಮ ಕೂದಲು ಎದ್ದು ನಿಂತಿದೆಯೆಂದರೆ ಅದನ್ನು ಯಾರಾದರೂ ಸುಲಭವಾಗಿ ಕತ್ತರಿಸಬಹುದು. ಹಾಗೆ ಕೂದಲಿಲ್ಲದವರು ಯಾವಾಗಲೂ ತಲೆ ನೇವರಿಸಿಕೊಳ್ಳುತ್ತಿರುತ್ತಾರೆ. ಸಂಸಾರದಲ್ಲಿ ತಂದೆ ಮಗನಿಗೆ ಭಿನ್ನಾಭಿಪ್ರಾಯ ಬರುವುದು ಕೂದಲು ಕತ್ತರಿಸುವ ವಿಷಯದಲ್ಲೇ. ನಮ್ಮ ಸೌಂದರ್ಯ ನಿರ್ಧಾರವಾಗುವುದು ನಮ್ಮ ಕಡೆಯ ಕೇರ್ ಕಟ್‌ನಿಂದ ಮಾತ್ರವೇ. ಮಗ ತಂದೆಯ ಮಾತನ್ನು ಎಲ್ಲಾ ವಿಷಯದಲ್ಲಿ ಒಪ್ಪಿದರೂ ಕೂದಲಿನ ವಿನ್ಯಾಸದ ಬಗ್ಗೆ ಒಮ್ಮತವಿರುವುದಿಲ್ಲ. ಈಗಿನ ಯುವಕರಲ್ಲಿ ಕೂದಲನ್ನು ಬಾಚಿಕೊಳ್ಳದಿರುವುದೇ ಒಂದು ಸ್ಟೈಲ್ ಆಗಿ ಪರಿಣಮಿಸಿದೆ. ಯುವಕರಂತೂ ಜಡೆ ಕಟ್ಟುತ್ತಾರೆ. ಕ್ಲಿಪ್ ಅಳವಡಿಸಿಕೊಳ್ಳುತ್ತಾರೆ. ಇವೆಲ್ಲಾ ವಿಚಿತ್ರ ಆದರೂ ನಿಜ.
ವಿಗ್‌ನಿಂದ ಒಂದು ಉಪಯೋಗವಿದೆ. ಅದೆಂದರೆ ಹೇರ್‌ಸ್ಟೈಲ್ ಬದಲಾಗುವುದಿಲ್ಲ, ಒಂದೇ ತೆರನಾಗಿರುತ್ತದೆ. ಕನ್ನಡಿ ಮುಂದೆ ನಿಂತವರು ಕೂದಲನ್ನು ಸರಿಪಡಿಸದೆ ಇರುವುದಿಲ್ಲ. ಕೂದಲು ಕತ್ತರಿಸುವ ವಿಷಯದಲ್ಲಿ ಮಗನಿಗೂ ತಂದೆಗೂ ಇರುವ ವ್ಯತ್ಯಾಸವೆಂದರೆ ಮೊದಲ ಬಾರಿಗೆ ಕೂದಲು ಕತ್ತರಿಸಿದಾಗ ಮಗು ಅಳುತ್ತದೆ. ಇದೇ ಬೇಸರ ವಯಸ್ಸಾದವರ ಅಪ್ಪನಿಗೂ ಆಗುತ್ತದೆ. ನೀವು ಯಾರನ್ನಾದರೂ ಬದಲಿಸಬಹುದು, ಆದರೆ ಅವರ ಕೇಶ ವಿನ್ಯಾಸವನ್ನು ಬದಲಿಸಲಾರಿರಿ. ಪ್ರಯತ್ನಿಸಿನೋಡಿ. ಇನ್ನೊಂದು ವಿಶೇಷ ಕೇಶವಿರುವವರೂ, ಇಲ್ಲದಿರುವವರು ಕೇಶದ ಬಗ್ಗೆಯೇ ಚಿಂತಿಸುತ್ತಿರುತ್ತಾರೆ ಅಲ್ಲವೇ? ಕೂದಲು ಹಾಗೂ ಜಲಕ್ಕೆ ಬಹಳ ಸಾಮ್ಯತೆ ಇರುವಂತೆ ತೋರುತ್ತದೆ. ಇವೆರಡೂ ಸಮೃದ್ಧವಾಗಿದ್ದಾಗ ಯಾರಿಗೂ ಅದರ ಪ್ರಾಮುಖ್ಯತೆಯ ಅರಿವು ಇರದು. ಇಲ್ಲದಿದ್ದಾಗ ಪೇಚಾಟ, ಪರದಾಟ ಪ್ರಾರಂಭವಾಗುವುದು ಅಲ್ಲವೇ? ಕೊನೆಯದಾಗಿ ಡಕಾಯಿತರು ತಮ್ಮ ಕೇಶ ವಿನ್ಯಾಸದಿಂದ ಪೋಲಿಸರು ಕಂಡುಹಿಡಿಯುತ್ತಾರೆಂದು ಮತ್ತು ಸಿ.ಸಿ. ಕ್ಯಾಮೆರಾವನ್ನು ವಂಚಿಸಲು ತಲೆಗೆ ಪೂರಾ ಟೊಪ್ಪಿಗೆ ಧರಿಸಿರುತ್ತಾರೆ. ಇದು ನಾವು ಸಾಮಾನ್ಯವಾಗಿ ನೋಡುವ ಒಂದು ದೃಶ್ಯ.
ಇಷ್ಟೆಲ್ಲ ಆದಮೇಲೆ ಕೇಶದ ಬಗ್ಗೆ ಒಂದೆರಡು ಮಾತು. ತಿರುಪತಿಯ ಕೇಶದ ವಹಿವಾಟು ವಾರ್ಷಿಕ ಹಲವಾರು ಕೋಟಿಗಳು. ಇದು ಭಕ್ತರು ದೇವರಿಗೆ ಹರಕೆಯ ರೂಪದಲ್ಲಿ ಅರ್ಪಿಸಿದ ಕೇಶದ ವಿಲೇವಾರಿಯ ಆದಾಯ. ಹಿಂದೆ ಬರೇ ಪುರುಷರಿಗೆ ಮಾತ್ರ ಕೇಶವಿನ್ಯಾಸದ ವಿವರಗಳಿದ್ದುವು. ಈಗ ಇದಕ್ಕೂ ಮೀರಿ ಮಹಿಳೆಯರಿಗೆ ಅಲಂಕಾರ ವರ್ಧಕ ಪಾರ್ಲರ್‌ಗಳು ಸಾಕಷ್ಟಿವೆ. ಇವುಗಳ ವ್ಯವಹಾರ ಪ್ರಪಂಚದಾದ್ಯಂತ ಸಾವಿರಾರು ಕೋಟಿ ಎಂದರೆ ಆಶ್ಚರ್ಯವಲ್ಲವೇ?
ಬಹಳ ಹಿಂದೆ ಮಾನವ ದೇಹದಿಂದ ಯಾವುದಾದರೂ ಕಾರಣಕ್ಕೆ ರಕ್ತವನ್ನು ತೆಗೆಯಬೇಕಾದರೆ ಅದನ್ನು ‘ಬಾರ್ಬರ್ ಸರ್ಜನ್’ ಎಂಬುವವರು ಮಾಡುತ್ತಿದ್ದರು. ಇದು ‘ಅವಚರಣ ರಕ್ತವಿಮೋಚನ ಚಿಕಿತ್ಸೆ’ ಎಂದೇ ಪ್ರಸಿದ್ಧವಾಗಿತ್ತು. ಇವರು ತಮ್ಮ ಅಂಗಡಿಯ ಮುಂದೆ ಒಂದು ಕಂಬವನ್ನು ನೆಟ್ಟು ಅದಕ್ಕೆ ಕೆಂಪು ಮತ್ತು ಬಿಳಿಯ ಬಣ್ಣ ಬಳಿಯುತ್ತಿದ್ದರು. ಕೆಂಪು ಬಣ್ಣ ರಕ್ತವನ್ನೂ, ಬಿಳಿಯ ಬಣ್ಣ ಬ್ಯಾಂಡೇಜಿನ ಬಿಳುಪನ್ನೂ ಸೂಚಿಸುತ್ತಿದ್ದವು. ರೋಗಿಯನ್ನು ಈ ಕಂಬಕ್ಕೆ ಕಟ್ಟಿಹಾಕಿ ‘ಬಾರ್ಬರ್ ಸರ್ಜನ್’ ತಮ್ಮ ‘ರಕ್ತವಿಮೋಚನ ಚಿಕಿತ್ಸೆ’ ಪ್ರಾರಂಭಿಸುತ್ತಾರೆ. ಇದು ಆ ಕಾಲದಲ್ಲಿ ಬಹಳ ಜನಪ್ರಿಯ ಚಿಕಿತ್ಸೆಯಾಗಿತ್ತು. ಕ್ರಮೇಣ ಶಸ಼ಚಿಕಿತ್ಸೆಯ ಮಾರ್ಪಾಡಾದಂತೆ ಈ ಚಿಕಿತ್ಸೆ ನಿಧಾನವಾಗಿ ಕಣ್ಮರೆಯಾಯಿತು. ನಾಪಿತರೂ ಆ ಕಾಲದಲ್ಲಿ ಬಹಳ ಪ್ರಸಿದ್ಧರಾಗಿದ್ದರು ಎನ್ನಲು ಈ ಸಂದೇಶ.ಒಂದು ವಕ್ರತುಂಡೋಕ್ತಿಯಿಂದ ಈ ಲೇಖನವನ್ನು ಮುಗಿಸೋಣವೆ?
ಗಡ್ಡವನ್ನು ಬೋಳಿಸುವಂತೆ ಮಾಡಿ ಮುದ್ದಾಗಿ ಕಾಣುವಂತೆ
ಮಾಡುವ ತಾಖತ್ತು ಇರುವುದೂ ಅವಳಿಗೇ.
ಗಡ್ಡವನ್ನು ಬಿಡುವಂತೆ ಮಾಡಿ ಸನ್ಯಾಸಿಯ ಹಾಗೆ ಕಾಣುವಂತೆ
ಮಾಡುವ ತಾಖತ್ತು ಇರುವುದೂ ಅವಳಿಗೇ!
ಕೇಶದ ಕ್ಲೇಶ ಸಾಕೆನಿಸುತ್ತದೆ. ಕೇಶದ ಬಗ್ಗೆ ಕ್ಲೇಶ ಬೇಡ ನೀವೇನಂತೀರಿ?
–ಕೆ. ರಮೇಶ್
ಕೇಶ ಕ್ಲೇಶ ಲೇಖನ ತಮ್ಮ ಅನುಭವ ದ ಬುತ್ತಿ ಯೊಂದಿಗೆ ಇಂದಿನ ತಲೆಮಾರಿನ ವರಗೆ ತಂದಿರುವ ರೀತಿ ಚೆನ್ನಾಗಿ ಬಂದಿದೆ. ಧನ್ಯವಾದಗಳು ಸಾರ್
ಧನ್ಯವಾದಗಳು ಮೇಡಂ
ಚೆನ್ನಾಗಿದೆ
ಧನ್ಯವಾದಗಳುಮೇಡಂ
ಇದು ಮನೆ ಮನೆಯ ‘ಕ್ಲೇಶವೂ’ ಹೌದು! ನವಿರು ಹಾಸ್ಯದ ಚೆಂದದ ಬರಹ.
ಧನ್ಯವಾದಗಳುಮೇಡಂ
ಕೇಶ ಕ್ಲೇಶದ ತಿಳಿಹಾಸ್ಯ ಲೇಖನ ಇಷ್ಟವಾಯ್ತು ಸರ್.
ಅನುಭವದ ಬುತ್ತಿ ಚೆನ್ನಾಗಿದೆ!