ಕಾಲ ಕಾಯುವುದಿಲ್ಲ..
ಕಾಲ ಕಾಯುವುದಿಲ್ಲ ಗೆಳತಿ..
ಆಗಲೇ ಬೇಕಾದುದಕೆ ಮರುಕವನೇಕೆ
ಪಡುತಿ?
ಈ ಭಾನು ಧಗ ಧಗ ಆಪೋಷನಗೊಂಡ ನೀರು
ಆವಿಯಾಗಿ ಕೃಷ್ಣ ಮೇಘವಾಗಿ ಧೋ ಎಂದು
ಬಣ ಬಣಗೊಂಡ ಕೆಂಪು ಭೂಮಿಗೆ ಸುರಿದು
ತೊರೆಯಾಗಿ ಹೊಳೆಯಾಗಿ ಹರಿಯುತ್ತದೆ.
ಸಹನಾ ಧರಿತ್ರಿ ನೀರನ್ನು ಹೀರಿ ಪುಷ್ಪವತಿಯಾಗಿ
ಹಸಿರು ಫಲವತಿಯಾಗುತ್ತಾಳೆ
ಹೂ ಬಿಟ್ಟು ಹಣ್ಣು ಕೊಟ್ಟು ಮತ್ತೆ ಬೆತ್ತಲೆಯಾಗಿ
ಮುಸಲಾಧಾರೆಗೆ ಕಾಯುತ್ತಾಳೆ.
ಹೇಮಂತ ಗ್ರೀಷ್ಮ ಶಿಶಿರಗಳು ಉರುಳುರುಳಿ
ಮತ್ತೆ ಬರಲೇಬೇಕು ವಸಂತ.
ಮೇನಕೆಯ ಗಂಧಕ್ಕೆ ಮೈಮರೆತ ವಿಶ್ವಾಮಿತ್ರ
ಕಾಲವನು ಗೆಲಿದವನು ಅದಾವ ಸಂತ?
ಅರಳು ಹೂಮಳೆಯಾಗು ಮರಳಿ ಫಲವತಿಯಾಗು
ಮರು ಮರಳಿ ಬರುತ್ತಲಿದೆ ಇಳೆಗೆ ಜೀವ
ಜೀವ ಜೀವದ ಬೆಸುಗೆ ಮನ್ವಂತರಕೆ ನಾಂದಿ
ಕಾವ್ಯ ಮೂಡಲಿಕ್ಕೊಂದು ಹೊಸತು ಭಾವ.
ಕಾಲ ಕಾಯುವುದಿಲ್ಲ ಗೆಳತಿ
ಆಗಲೇ ಬೇಕಾದುದಕೆ ಮರುಕವನೇಕೆ
ಪಡುತಿ..?
So nice Smitha . Intense yet balanced