ಯಕ್ಷಗಾನದ ಟೆಂಟ್, ಸೋಜಿ ಪಾಯಸ ಮತ್ತು ಬಾಲ್ಯ
“ಬೈಗಿನಿಂದ ಬೆಳಗಾಗುವವರೆಗೂ ಪೆರಡೂರು ಮೇಳದ ಭಾಗವತರ ಆಟ ನೋಡಿ ಬಂದು, ಅಡುಗೆ ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತ, ಕಾಫಿ ಕುಡಿಯುತ್ತ ಹರಟುತ್ತಿದ್ದೆವು. ನಮ್ಮೂರ ಕಡೆ ಬಯಲಾಟವನ್ನು ಭಾಗವತರಾಟ ಎಂದು ಕರೆಯುತ್ತಾರೆ. ರಾತ್ರಿ ನಾವು ನೋಡಿದ್ದ ಕಾಳಗ ರಾಮ ರಾವಣರದು. ಹುಡುಗರಿಗೆ ಕಂಡಿದ್ದನ್ನೆಲ್ಲ ಬಿಡದೆ ಅನುಸರಿಸುವುದೊಂದು ಹುಚ್ಚಷ್ಟೆ ! ಅದರಂತೆಯೆ ನಾವೆಲ್ಲ-ನಾನು, ತಿಮ್ಮು, ಮಾನು, ಓಬು, ಎಂಕ್ಟು, ವಾಸು, ದಾನಿ, ರಾಜಿ-ಆ ದಿನ ರಾಮ ರಾವಣರ ಕಾಳಗ ಆಡಬೇಕೆಂದು ಮಸಲತ್ತು ಮಾಡಿದೆವು. ಹುಡುಗರ ಲೋಕದಲ್ಲಿ ಯೋಚನೆ ಮಾಡಿದ್ದೆಲ್ಲ ಆಗಿಯೇ ಆಗುತ್ತದೆ. ಕಾಫಿ ಉಪ್ಪಿಟ್ಟುಗಳನ್ನು ಬೇಗ ಬೇಗ ಹೊಟ್ಟೆಗೆ ಸುರಿದು “ಕೊಂಡು, ಮನೆಯ ಹೊರ ಅಂಗಳಕ್ಕೆ ಹೊರಟೆವು. ಅಮ್ಮ, ಚಿಕ್ಕಮ್ಮ, ಅಕ್ಕಯ್ಯ ಇವರೆಲ್ಲ, ರಾತ್ರಿ ನಿದ್ದೆಗೆಟ್ಟಿದ್ದೀರಿ. ಮಲಗಿಕೊಳ್ಳಿ ಎಂದು ಬಯ್ದರು. ದೊಡ್ಡವರು ಹುಡುಗರನ್ನು ತಮ್ಮಂತೆಯೆ ಎಂದು ಭಾವಿಸುವುದು ಶುದ್ಧ ತಪ್ಪು. ಅವರಿಗೆ ಆಯಾಸವಾಗಿದ್ದರೆ ನಮಗೂ ಆಯಾಸವೇ ? ನಮ್ಮ ರಾಮರಾವಣರ ಯುದ್ಧದ ಮುಂದೆ ಅವರ ನಿದ್ದೆಯೇ ? ಅವರ ಮಾತನ್ನು ಕಸದ ಮೂಲೆಗೆ ಒತ್ತಿ, ಹೊರ ಅಂಗಳಕ್ಕೆ ಓಡಿದೆವು. ಒಬ್ಬರನ್ನೊಬ್ಬರು ಆತುರದಿಂದ ಹುರಿದುಂಬಿಸುತ್ತ, ಕೇಕೆ ಹಾಕುತ್ತ ನುಗ್ಗಿದೆವು. ಒಬ್ಬರನ್ನೊಬ್ಬರು ಆತುರದಿಂದ ಹುರಿದುಂಬಿಸುತ್ತ, ಕೇಕೆ ಹಾಕುತ್ತ ನುಗ್ಗಿದೆವು. ರಾಜಿ ಹೊಸಲನ್ನು ಎಡವಿ ಬಿದ್ದವಳು, ಮೆಲ್ಲನೆ ಎದ್ದು, ಸುತ್ತಲೂ ನೋಡಿ, ಯಾರೂ ನೋಡದೆ ಇದ್ದುದರಿಂದ ಪದ್ಧತಿಯಂತೆ ಬಿಕ್ಕಿ ಬಿಕ್ಕಿ ಅಳುವುದನ್ನು ತಡೆದು ಗುಂಪನ್ನು ಸೇರಿಕೊಂಡಳು“. ಕುವೆಂಪು ಅವರ ‘ರಾಮ ರಾವಣರ ಯುದ್ಧ ‘ ಎಂಬ ಮನೋಜ್ಞ ಲಘು ಪ್ರಬಂಧದ ಕೆಲವು ಸಾಲುಗಳಿವು. ಗೋರೂರು ರಾಮಸ್ವಾಮಿ ಐಯ್ಯಂಗಾರ‍್ ಸಂಪಾದಿಸಿದ ಹೊಸಗನ್ನಡ ಪ್ರಬಂಧ ಸಂಕಲನದಲ್ಲಿ ಈ ಪ್ರಬಂಧವನ್ನು ಪ್ರಕಟಿಸಲಾಗಿದೆ. ಈ ಸಾಲುಗಳನ್ನು ಓದುತ್ತಿದ್ದಂತೆ ನನಗೆ ಬಾಲ್ಯದ ದಿನಗಳು ನೆನಪಾಯಿತು.
ಕಳತ್ತೂರು ಎಂದರೆ ಕಿದೂರಿಗೆ ಸಮೀಪದ ಗ್ರಾಮ. ಅಲ್ಲಿ ನಾನು ಓದಿದ ಪ್ರಾಥಮಿಕ ಶಾಲೆ ಮತ್ತು ಅದರ ಆಟದ ಮೈದಾನ ಇದೆ. ಪ್ರತಿ ವರ್ಷ ಅಲ್ಲಿ ಯಕ್ಷಗಾನ ನಡೆಯುತ್ತಿತ್ತು. ಯಕ್ಷಗಾನದ ದಿನ ಹಗಲು ಜೀಪಿನಲ್ಲಿ ಸಂಬಂಧಪಟ್ಟವರು ಕರ ಪತ್ರಗಳನ್ನು ಬಿಸಾಡುತ್ತ , ಮೈಕ್ ನಲ್ಲಿ ಯಕ್ಷಗಾನದ ಬಗ್ಗೆ ಘೋಷಣೆ ಹೊರಡಿಸುತ್ತಿದ್ದರು.
‘ಇಂದು ರಾತ್ರಿ ಕಳತ್ತೂರು ಶಾಲೆಯ ಮೈದಾನದಲ್ಲಿ, ಪೆರ್ಡೂರು ಮೇಳದ ವತಿಯಿಂದ ವಿದ್ಯುದ್ದೀಪಗಳಿಂದ ಅಲಂಕೃತವಾದ ಭವ್ಯ ರಂಗಮಂಟಪದಲ್ಲಿ ಸಾಮ್ರಾಟ್ ನಹುಷೇಂದ್ರ ಎಂಬ ಪೌರಾಣಿಕ ಕಥಾ ಪ್ರಸಂಗವನ್ನು ನೋಡಲು ಮರೆಯದಿರಿ’..ಅಂತ ಮೈಕ್ ನಲ್ಲಿ ಅವರು ಕೂಗುತ್ತಿದ್ದರೆ, ತರಗತಿಯಲ್ಲಿ ಕೂತಿರುತ್ತಿದ್ದ ನಮಗೆಲ್ಲ ಕಿವಿ ನೆಟ್ಟಗಾಗುತ್ತಿತ್ತು. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಜೀಪು ಬಂದರೆ, ಚಿಣ್ಣರೆಲ್ಲ ಅದರ ಹಿಂದೆಯೇ ಓಡುತ್ತಿದ್ದರು. ಅವರು ಎಸೆಯುತ್ತಿದ್ದ ಕರಪತ್ರಗಳನ್ನು ಹೆಕ್ಕಿ ಸಂಭ್ರಮಿಸುತ್ತಿದ್ದರು. ನಾನೂ ಸಾಕಷ್ಟು ಸಲ ಜೀಪಿನ ಹಿಂದೆ ಓಡಿದ್ದೆ. ಆದರೆ ಕರಪತ್ರ ಸಿಕ್ಕಿರಲಿಲ್ಲ. ಆದರೂ ನನಗೆ ಅಂತಹ ಬೇಸರವಾಗುತ್ತಿರಲಿಲ್ಲ. ಮನೆಯಲ್ಲಿ ಮಾವ ಎಲ್ಲಿಂದಲೋ ಕರಪತ್ರ ತಂದು ಇಡುತ್ತಿದ್ದರು. ಅದನ್ನು ಒಂದಕ್ಷರ ಬಿಡದೆ ಓದುತ್ತಿದ್ದೆ.
ಸಂಜೆ ಕಳೆದು ಕತ್ತಲಾವರಿಸುತ್ತಿದ್ದಂತೆ ಮೈದಾನದಲ್ಲಿ ಮೇಳದ ಭಾರಿ ಟೆಂಟನ್ನು, ಅವುಗಳ ಪರದೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಟ್ಯೂಬ್ ಲೈಟ್ ಗಳ ಬೆಳಕು ಆಕರ್ಷಿಸುತ್ತಿತ್ತು. ಟೆಂಟ್ ಪಕ್ಕದಲ್ಲಿ ಸೋಜಿ ಪಾಯಸವನ್ನು ಬೀದಿ ವ್ಯಾಪಾರಿಗಳು ಮಾರುತ್ತಿದ್ದರು. ಆದರೆ ಯಾಕೋ ನನಗೆ ಅದು ಇಷ್ಟವಾಗುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ಆಸೆಯಾದರೂ ಯಾರೂ ಕೊಡಿಸುತ್ತಿರಲಿಲ್ಲ. ಮನೆಯವರೂ ಸೇವಿಸುತ್ತಿರಲಿಲ್ಲ. ಏನಿದ್ದರೂ ಮನೆಯಲ್ಲಿ ಮಾಡುವ ಪಾಯಸ ಮಾತ್ರ ಕುಡಿಯುತ್ತಿದ್ದೆವು. ಯಕ್ಷಗಾನಕ್ಕೆ ಅಜ್ಜಿ, ಅತ್ತೆ, ಅಕ್ಕ, ಮಾವಂದಿರ ಜತೆ ಹೋಗುತ್ತಿದ್ದೆ. ಅಲ್ಲಿ ನನ್ನ ಗೆಳೆಯರೂ ಸಿಗುತ್ತಿದ್ದರು. ಎಲ್ಲ ಒಟ್ಟಿಗೆ ಕೂತು ಯಕ್ಷಗಾನವನ್ನು ಆನಂದಿಸುತ್ತಿದ್ದೆವು. ಚೆಂಡೆಯ ಅಬ್ಬರದಲ್ಲೂ ನಿದ್ದೆಯ ಜೊಂಪು ಆವರಿಸುತ್ತಿತ್ತು. ತಡರಾತ್ರಿಯಾದ ಮೇಲಂತೂ ಎಲ್ಲವೂ ಮಾಯಾಲೋಕದಂತೆ ಕಾಣಿಸುತ್ತಿತ್ತು. ಬಣ್ಣದ ವೇಷಗಳು ಕುಣಿಯುವಾಗ ಭಯವಾಗುತ್ತಿದ್ದರೂ ಹೇಳಿಕೊಳ್ಳುತ್ತಿರಲಿಲ್ಲ. ಬೆಳಗಿನ ಜಾವ ಚಳಿಯಿಂದ ನಡುಗುತ್ತಿದ್ದರೂ ಚೆಂಡೆಯ ಸದ್ದಿಗೆ ಅಷ್ಟಿಷ್ಟು ಮರೆಯುತ್ತಿದ್ದೆ.
ಮರುದಿನ ತರಗತಿಗೆ ಬಂದು ಕುಳಿತರೂ, ಕಿವಿಯಲ್ಲಿ ತುಂಬ ಭಾಗವತರ ಕಂಚಿನ ಕಂಠದ ಪದಗಳು, ಚೆಂಡೆಯ ಸದ್ದು ಮಾರ್ದನಿಸುತ್ತಿತ್ತು…ಆ ದಿನಗಳು ಮತ್ತೊಮ್ಮೆ ಬರುವುದಿಲ್ಲವಲ್ಲ ಅಂತ ಈಗ ಕೊಂಚ ಬೇಸರವಾಗುತ್ತಿದೆ.
– ಕೇಶವ ಪ್ರಸಾದ. ಬಿ. ಕಿದೂರು
ನನಗೂ ಯಕ್ಷಗಾನವೆಂದರೆ ಪ್ರೀತಿ. ಸಭೆಯ ಮಧ್ಯದಿಂದ ನುಗ್ಗುವ ಮಹಿಷಾಸುರನ ಪಾತ್ರ ನೋಡಲೆಂದೇ ಹೋದದ್ದುಂಟು. ತುಂಬಾ ಚೆನ್ನಾಗಿ ಬರೆದಿದ್ದೀರಿ 🙂
ಬಾಲ್ಯದ ಆ ದಿನಗಳು ಕಣ್ಣಿಗೆ ಕಟ್ಟುವ೦ತೆ ಬರೆದಿರುವಿರಿ .
ದೇವಿಮಹಾತ್ಮೆ ನೋಡಿದ ಮರುದಿನ ನಮ್ಮಲ್ಲಿ ನನಗೆ ನೋಡಲಾಗಿರಲಿಲ್ಲವೆಂದು ಅಭಿ ಸಹಿತ ಮೂವರು ಚಿಣ್ಣರು ಪದ ,ಚೆಂಡೆ ಮದ್ದಲೆ ಎಲ್ಲ ಅವರೇ ಆರಂಭಿಸಿ ಕುಣಿದು ತೋರಿಸಿದ್ದರು .ಮುನ್ನಾದಿನದ ಯಕ್ಷಗಾನಕ್ಕಿಂತ ಮರುದಿನದ್ದೆ ಹೆಚ್ಚು ಚೆನ್ನಾಗಿತ್ತು .ಬಡಗಿನ ಯಕ್ಷಗಾನದ ಬರಹಕ್ಕೆ ಬಡಗಿನದೆ ಚೆಂಡೆ ಚಿತ್ರ ಹಾಕಿದ್ದು ಚೆನ್ನಾಗಿ ಹೊಂದಿದೆ . ಚೆನ್ನಾಗಿದೆ ಬರಹ.