ಚಿತ್ರಗೀತೆಯ ಸ್ವರ ಸಾಮ್ರಾಜ್ಞಿ-ದಂತಕಥೆಯಾದ ಗಾಯಕಿ

Share Button
PC: Internet

ವ್ಯಕ್ತಿ ಸದಾ ಜೀವಂತವಾಗಿರುವುದು, ಆತನ ಹುಟ್ಟು-ಕುಟುಂಬ-ಶ್ರೀಮಂತಿಕೆ-ಅಧಿಕಾರದಿಂದಲ್ಲ; ಆತನ ಜೀವಿತ ಕಾಲದ ಸಾಧನೆಯಿಂದ. ಸತ್ಯಂ ಶಿವಂ ಸುಂದರಂ ಎಂಬ ಭಾರತೀಯ ಕಲೆಯ-ತತ್ವದ ಸಾಕಾರ ಮೂರ್ತಿ, 2022 ರ ಫೆಬ್ರವರಿ 6 ರಂದು ಭಾನುವಾರ, ಈ ಭುವಿಯ ಮೇಲಿನ ಜೀವನಕ್ಕೆ ಅಂತ್ಯಗಾನ ಹಾಡಿದಾಗ, ಇಡೀ ವಿಶ್ವವೇ ಅರೆಕ್ಷಣ ಸ್ತಬ್ಧವಾಯಿತು. ಆ ಸಂಗೀತ ಸರಸ್ವತಿ ದೇವಿ ನಿನಗೆ ಇನ್ನು ಭೂಲೋಕದ ಸಂಗೀತ ಸಾಕು, ನನ್ನ ಬಳಿ ಬಂದು ನನಗಾಗಿ ಹಾಡು ಎಂದು ಕರೆಸಿಕೊಂಡಳೇನೋ ಎಂದು, ನನ್ನಂತಹ ಸಾವಿರ ಸಾವಿರ ಸಂಗೀತಪ್ರಿಯರು-ರಸಿಕರು-ಅಭಿಮಾನಿಗಳಿಗೆ ಅನಿಸಿದ್ದರೆ-ಇದು ಎಳ್ಳಷ್ಟೂ ಅತಿಶಯೋಕ್ತಿಯಲ್ಲ. ಇಡೀ ವಿಶ್ವದ ಸಂಗೀತ, ಅದರಲ್ಲೂ ಚಲನಚಿತ್ರ ಸಂಗೀತಪ್ರಿಯರ-ಆರಾಧಕರ ಹೃದಯಗಳು ಕ್ಷಣಕಾಲ ನಿಂತಂತೆ ಬಹುಶಃ ಭಾಸವಾಗಿರಬೇಕು.

ಪ್ರದೇಶ ಹಾಗೂ ಭಾಷೆಗಳ ಸೀಮೆ ದಾಟಿ 1940 ರಿಂದ, ಪ್ರತೀ ಭಾರತೀಯನ ಜೀವನದ ಮರೆಯಲಾಗದ ಅವಿಭಾಜ್ಯ ಭಾಗವಾಗಿತ್ತು, ಈ ಲತಾ ಸಂಗೀತಯಾನ.

ಮಾನ್ಯತೆ ಸಿಕ್ಕಿದ ಮೇಲೆ, ಜನಪ್ರಿಯ ಗಾಯಕಿಯಾದ ಮೇಲೆ, ಈ ಧ್ವನಿ ಎಲ್ಲಿಯತನಕ ಹಾಡುತ್ತಿತ್ತೋ, ಅಲ್ಲಿಯ ತನಕ ಈ ಧ್ವನಿಗೆ ಕೊನೆ ಎಂಬುದೇ ಇರಲಿಲ್ಲ. ಹಾಡಿದಷ್ಟೂ ಬೇಡಿಕೆ. ನಮ್ಮ ತಲೆಮಾರಿನ ಎಲ್ಲ ಚಿತ್ರಗೀತೆ, ಭಕ್ತಿಗೀತೆ ಪ್ರಿಯರ ಕಿವಿಗಳಲ್ಲಿ, ಆ ಧ್ವನಿ ಮತ್ತೆ ಮತ್ತೆ ರಿಂಗಣ ಸುತ್ತಲೇ ಇದೆ.

ಎಂತಹ ಧ್ವನಿ ಅದು! ಓಹ್! ವರ್ಣನಾತೀತ! ಅಂತಹ ಧ್ವನಿ ಅದು. ನನಗೆ ಇಲ್ಲಿ ಅಕ್ಕಮಹಾದೇವಿಯ ಒಂದು ವಚನ ನೆನಪಿಗೆ ಬರುತ್ತಿದೆ.
”ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ
ಚೆಲುವಂಗೆ ನಾನೊಲಿದೆ
ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು”


ಇದನ್ನು ಪ್ರಾಸಂಗಿಕವಾಗಿ ಗಮನಿಸಿದರೆ, ಲತಾ ಎಂಬ ಸಂಗೀತ ನಕ್ಷತ್ರಕ್ಕೆ, ಭಾವಸರಸ್ಸಿನ ರಾಜಹಂಸಕ್ಕೆ, ಮತ್ತೆ ಮತ್ತೆ ಅದೇ ಮಧುರ ಧ್ವನಿಯ ಉಲಿಯುವಿಕೆಗೆ, ಎಂದೂ ಸಾವಿಲ್ಲ!. ಆಕೆಯ ದೇಹದ ರೂಪ ಇನ್ನು ಕಾಣಲಾಗದು. ಆದರೆ ಆ ಅಪರೂಪದಲ್ಲಿ ಅತಿ ಅಪರೂಪ ಧ್ವನಿಯ ಇಂಪಿಗೆ, ಮಾಟಕ್ಕೆ, ಸೀಮೆ ಇರಲಿಲ್ಲ!. ಇವರ ಸಂಗೀತ ಪ್ರೇಮ, ಸಾಧನೆ-ಅಮರ-ಅನನ್ಯ-ಅಪೂರ್ವ!. ವಿವಾಹವಾಗದೇ ತನ್ನ ಇಡೀ ಜೀವನ ಆ ಮಹಾದೇವನಿಗೇ ಅರ್ಪಿಸಿದ ಅಕ್ಕಮಹಾದೇವಿಯಂತೆ, ಕೃಷ್ಣನಿಗೆ ತನ್ನನ್ನು ಸಮರ್ಪಿಸಿಕೊಂಡ ಮೀರಾಬಾಯಿಯಂತೆ, ತನ್ನ ಶಾರೀರಿಕ ಪ್ರೇಮ ತ್ಯಾಗ ಮಾಡಿ, ಆತ್ಮಿಕ ಪ್ರೇಮವನ್ನು ಸಂಗೀತಕ್ಕೆ ಅರ್ಪಿಸಿ, ಏಕಾಂತದಲ್ಲೇ ಲೋಕಾಂತ ಕಂಡವಳು. ತನ್ನನ್ನು ಸಪ್ತಸ್ವರಗಳಿಗೇ ಸಮರ್ಪಿಸಿಕೊಂಡು, ಪ್ರೇಮದ ವಿರಹಾಗ್ನಿಯಲ್ಲಿ ಕೊನೆಯ ಘಳಿಗೆಯವರೆಗೂ ಬೆಂದು-ಬಸವಳಿದರೂ, ಸಂಗೀತದ ಸ್ವರಗಳನ್ನೇ ತನ್ನ ಜೀವನ ಸಂಗಾತಿ ಮಾಡಿಕೊಂಡ, ಸುರ ಸ್ವರ ಗಂಧರ್ವ ಗಾಯಕಿ, ತನ್ನ ಸಂಗೀತ ಜೀವನದ ನಾಯಕಿ, ಲತಾ.

ಸಂಗೀತದ ಈ ಮಹಾನ್ ಆತ್ಮದ ಜೀವನ ಪಯಣದ ಕೆಲವು ಪುಟಗಳನ್ನು ಈಗ ತೆರೆದು ಓದೋಣವೇ?.ಈ ಭಾರತೀಯ ಚಲನಚಿತ್ರರಂಗದ ಕೋಗಿಲೆ, ನೂತನ ಗಾಯಕರಿಗೆ ದಂತಕತೆಯಾಗಿರುವ ಈ ಗಾನಗಂಗೆ, ಪ್ರವಹಿಸಿದ ಕ್ಷೇತ್ರಗಳ ದರ್ಶನ ಮಾಡಿ ಪುನೀತರಾಗೋಣವೇ!.

PC: Internet

ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ಒಮ್ಮೆ ಹೇಳಿದ್ದರು, ”ಈಕೆಯ ಗಾಯನದಲ್ಲಿ ಒಮ್ಮೆಯೂ ಅಪಸ್ವರ ಬರುವುದಿಲ್ಲ”. ಖ್ಯಾತ ಚಲನಚಿತ್ರ ನಟ ದಿಲೀಪ್‌ಕುಮಾರ್ ಹಿಂದೊಮ್ಮೆ ಘೋಷಿಸಿದ್ದರು”ಲತಾ ಮಂಗೇಶ್‌ಕರ್ ಅವರ ಧ್ವನಿ ದೇವರು ಕೊಟ್ಟಿರುವ ಒಂದು ಪವಾಡ”.

ರಾಗ-ತಾಳ, ಶೃತಿ-ಲಯ ಎಲ್ಲದರಲ್ಲೂ Perfect ಆಗಿ, ತನ್ನ ಧ್ವನಿಯನ್ನು ಹೇಗೆ ಬೇಕೆಂದರೆ ಹಾಗೇ ಹೊರಳಿಸಿ, ಸಂಗೀತ ರಸದ ಮಾಯಾಜಾಲ ಸೃಷ್ಟಿಸುತ್ತಿದ್ದರು ಈ ಕಲಾವಿದೆ. ವಿವಿಧ ತಲೆಮಾರುಗಳ ಕವಿಗಳ ಗೀತೆಗಳನ್ನು, ವಿವಿಧ ಸಂಗೀತ ನಿರ್ದೇಶಕರ ಕಲ್ಪನೆ-ಕನಸ್ಸಿನ ಧಾಟಿಗಳಲ್ಲಿ ಹಾಡಿ, ಎಲ್ಲರನ್ನೂ ಮಂತ್ರಮುಗ್ಧ ಮಾಡುತ್ತಿದ್ದ ಧ್ವನಿಯ ಮಾಟಗಾತಿ ಈಕೆ.

ಆದರೆ ಇಂಥ ಮದುರ ಗಾಯಕಿಯ ಮೊಟ್ಟ ಮೊದಲ ಗೀತೆ 1942 ರಲ್ಲಿ ಧ್ವನಿಮುದ್ರಣವಾದರೂ, ಚಲನಚಿತ್ರದಲ್ಲಿ ಮಾಯವಾಯಿತು. ಈಕೆಯ ಆ ಮೊಟ್ಟ ಮೊದಲ ಗೀತೆ ವಸಂತ ಜೋಗಳೇಕರ್ ಅವರ ಮರಾಠಿ ಚಿತ್ರ ‘ಕಿತಿ ಹಸಾಲ್‌ ‘ದ್ದು. ಸದಾಶಿವರಾವ್ ನೇವ್ರೇಕರ್ ಸಂಗೀತ ಸಂಯೋಜಿಸಿದ್ದ ಆ ಗೀತೆ ”ನಾಚು ಯಾ ಗಡೆ ಖೇಲೂ ಸಾರಿ ಮನಿ ಹೌಸಭರೀ”. ನವಯುಗ ಚಿತ್ರಪಟದವರ ಮರಾಠಿ ಚಿತ್ರ ‘ಪಹಿಲಿ ಮಂಗಲ ಗೌರ್’ ದಲ್ಲಿ ಮಾಸ್ಟರ್ ವಿನಾಯಕರು ಲತಾಗೆ ಪುಟ್ಟ ಪಾತ್ರ ಹಾಗೂ ‘ನಟಾಲಿ ಚೈತ್ರಾಚಿ ನವಲಾಯಿ’ ಎಂಬ ಮರಾಠಿ ಗೀತೆ ಹಾಡುವ ಅವಕಾಶ ಕೊಡಿಸಿದರು.

ಮೊಟ್ಟ ಮೊದಲ ಹಿಂದಿ ಗೀತೆ ‘ಮಾತಾ ಏಕ್ ಸಪೂಟ್ ಕೀ ದುನಿಯಾ ಬದಲ್‌ದೇ ತೂ’ ಹಾಡಿದ್ದು, ಮರಾಠಿ ಚಿತ್ರ ‘ಗಜಾಭಾವು’ದಲ್ಲಿ. ಮರಾಠಿ ಹಾಗೂ ಕೊಂಕಣ ಶಾಸ್ತ್ರೀಯ ಸಂಗೀತಗಾರ ಹಾಗೂ ನಾಟಕ ಕಲಾವಿದರಾಗಿದ್ದ ದೀನಾನಾಥ್ ಮಂಗೇಶಕರ್ ಹಾಗೂ ಶೇವಂತಿ ಅವರ ಮಗಳು ಈಕೆ. ಮೊದಲ ಹೆಸರು ಹೇಮಾ. ತಂದೆಯ ನಾಟಕದಲ್ಲಿ ಲತಿಕಾ ಪಾತ್ರವಹಿಸಿದ ಹೇಮಾ ಹೆಸರು ಲತಾ ಆಯಿತು.

5 ನೇ ವರ್ಷಕ್ಕೆ ತಂದೆಯ ಸಂಗೀತ ನಾಟಕಗಳಲ್ಲಿ ನಟಿಯಾದಳು. 1945 ರಲ್ಲಿ ಮಾಸ್ಟರ್ ವಿನಾಯಕರ ಕಂಪನಿಯೊಂದಿಗೆ ಲತಾ ಮುಂಬಯಿಗೆ ಹೋದಳು. ಭಿಂಡಿ ಬಝಾರ್ ಘರಾನಾದ ಉಸ್ತಾದ್ ಅಮನ್ ಅಲಿ ಖಾನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಕೆ. ವಸಂತ ಜೋಗಳೇಕರ್ ಅವರ ‘ಆಪ್ ಕೀ ಸೇವಾ ಮೇ’ ಚಿತ್ರಕ್ಕಾಗಿ, 1946 ರಲ್ಲಿ ‘ಪಾ ಲಗೂನ್ ಕರ್ ಜೋರಿ’ ಗೀತೆಯ ಗಾಯನ. 1945 ರಲ್ಲಿ ‘ಬಡೀ ಮಾ’ ಚಿತ್ರದಲ್ಲಿ ಲತಾ-ಆಶಾ ಅಭಿನಯ. ಅಲ್ಲಿ ಒಂದು ಭಜನೆಯ ಅವಕಾಶ. ಸಂಗೀತ ನಿರ್ದೇಶಕ ಗುಲಾಮ್ ಹೈದರ್, ಶಶಿಧರ್ ಮುಖರ್ಜಿ ಅವರ ಶಹೀದ್ ಚಿತ್ರಕ್ಕೆ ಲತಾ ಹೆಸರು ಸೂಚಿಸಿದಾಗ, ಆಕೆಯ ಧ್ವನಿ ತೆಳ್ಳಗೆ ಎಂದು ನಿರಾಕರಿಸಲಾಯಿತು. ಸಿಟ್ಟಿಗೆದ್ದ ಹೈದರ್ ಗುಡುಗಿದ್ದರು. ಬರುವ ವರ್ಷಗಳಲ್ಲಿ ಚಿತ್ರಗೀತೆಗಾಗಿ ನಿರ್ಮಾಪಕ-ನಿರ್ದೇಶಕರು ಆಕೆಯ ಪಾದಕ್ಕೆ ಬಿದ್ದು ಬೇಡುವ ಸ್ಥಿತಿ ಬರುತ್ತದೆ.

1948 ರಲ್ಲಿ ‘ಮಜಬೂರ್’ ಚಿತ್ರದ ‘ದಿಲ್ ಮೇರಾ ತೋಡಾ ‘ಗೀತೆ ಜನಪ್ರಿಯವಾಯಿತು. ಆರಂಭದಲ್ಲಿ ನೂರ್‌ಜಹಾನ್ ಧ್ವನಿ ಅನುಕರಿಸಿದರೂ, ಮುಂದೆ ತನ್ನದೇ ಗಾಯನಶೈಲಿ ಬೆಳಸಿಕೊಂಡರು. ಹಿಂದಿನ ಮೆಹಫಿಲ್ ಶೈಲಿಯ ಗಾಯನ ಬಿಟ್ಟು, ಆಧುನಿಕ ಹಾಗೂ ಸಾಂಪ್ರದಾಯಿಕ ಮಹಿಳಾ ಮುಂದಾಳುಗಳಿಗೂ ಮೆಚ್ಚುಗೆಯಾಗುವ, ಹೊಸ ಶೈಲಿಯ ಗಾಯನದ ಆವಿಷ್ಕಾರ ಮಾಡಿದ್ದರು ಲತಾ.

ಭಾರತೀಯ ಚಲನಚಿತ್ರ ಗೀತೆಗಳ ಮಾಧುರ್ಯಕ್ಕೆ, ನಿಗದಿತ ಆಕಾರ ಕೊಡುವಲ್ಲಿ ಆಕೆಯ ಧ್ವನಿ ಶಕ್ತಿಯುತವಾಗಿತ್ತು. ತನ್ನ ಹಿನ್ನೆಲೆ ಗಾಯನದಲ್ಲಿ ಉತ್ತಮ ಸ್ವರ, ಮನೋಭಾವ, ಮಟ್ಟ ಹಾಗೂ ಉಚ್ಛಸ್ವರ ಅಭಿವೃದ್ಧಿಪಡಿಸಿಕೊಂಡಳು ಈ ಸಾಧಕಿ. ಹಿಂದೆ, ಹಿಂದಿ ಚಲನಚಿತ್ರಗಳಿಗೆ ಉರ್ದು ಕವಿಗಳು, ಉರ್ದುಮಿಶ್ರಿತ ಹಿಂದಿ ಗೀತೆ ಬರೆಯುತ್ತಿದ್ದರು. ಉರ್ದು ಭಾಷೆಯ ಉಚ್ಛಾರಣೆ ಸರಿಯಾಗಿ ಬರುವುದಿಲ್ಲ ಎಂದು ದಿಲೀಪ್‌ಕುಮಾರ್ ಛೇಡಿಸಿದಾಗ, ಶಫಿ ಎಂಬ ಉರ್ದು ಶಿಕ್ಷಕರಿಂದ ಉರ್ದು ಕಲಿತರು ಲತಾ. ಇವರ ಸಂಗೀತ ಪಯಣದಲ್ಲಿ, ಲತಾ ಅವರ ಧ್ವನಿ ಶೃಂಗಾರ, ಶಾಂತ, ಹಾಸ್ಯ, ಕರುಣ, ಭಕ್ತಿ ಎಲ್ಲ ಭಾವಗಳಿಗೆ, ರಸ.ಗಳಿಗೆ ಹೊಂದುವಂತಿತ್ತು. ಸಂಗೀತವನ್ನು ದೈವಿಕ ಕಲೆ ಎಂದು ಭಾವಿಸಿದ್ದ ಕಲಾವಿದರಾಗಿ, ಸ್ಟೂಡಿಯೋದಲ್ಲಿ, ರಂಗದ ಮೇಲೆ ಹಾಡುವಾಗ, ಎಂದೂ ಇವರು ಚಪ್ಪಲಿ ಧರಿಸುತ್ತಿರಲಿಲ್ಲ.

1948 ರ ‘ಮಹಲ್’ ಚಿತ್ರದ ‘ಆಯೇಗಾ ಆನೇವಾಲಾ‘ ಗೀತೆ ಅತ್ಯಂತ ಜನಪ್ರಿಯವಾಯಿತು. ಮುಂದೆ ವಿವಿಧ ಸಂಗೀತ ನಿರ್ದೇಶಕರ ಅನನ್ಯ ಶೈಲಿಗೆ ಹೊಂದಿಕೊಂಡು ಸಾಲು ಸಾಲು ಉತ್ತಮ ಗೀತೆಗಳನ್ನು ಹಾಡಿದರು. 36 ಭಾಷೆಗಳಲ್ಲಿ ಹಾಡಿರುವ ಖ್ಯಾತಿ ಹೊಂದಿದ್ದಾರೆ ಲತಾ ಮಂಗೇಶ್‌ಕರ್.

1955 ರಲ್ಲಿ ಶ್ರೀಲಂಕದ ‘ಸೇಡಾ ಸುಲಂಗ್ ಎಂಬ ಸಿಂಹಳ ಭಾಷೆಯಲ್ಲಿ 1956 ರಲ್ಲಿ ‘ವನರಥಂ’ ತಮಿಳು ಚಿತ್ರದಲ್ಲಿ ನೆಲ್ಲು ಎಂಬ ಮಲೆಯಾಳಂ ಚಿತ್ರದಲ್ಲಿ ಹಾಡಿದ ಖ್ಯಾತಿ ಇವರದು. ಸಲೀಲ್ ಚೌಧರಿ ಸಂಗೀತದ ಆಜಾರೇ ಪರದೇಶಿ ಎಂಬ ಮಧುಮತಿ ಚಿತ್ರಗೀತೆಗೆ ಫಿಲಂಫೇರ್ ಅವಾರ್ಡ್ ಬಂತು.

1955 ರಲ್ಲಿ ಮೊದಲ ಬಾರಿ ಮರಾಠಿ ಚಿತ್ರ ರಾಮ್‌ರಾಮ್ ಪೌಣೆ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದರು. ಮುಂದೆ 5ಮರಾಠಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರು 4 ಚಲನಚಿತ್ರಗಳ ನಿರ್ಮಾಣ ಮಾಡಿದ್ದಾರೆ. 1953 ರಲ್ಲಿ ವಾದಲ್ (ಮರಾಠಿ) ಹಾಗೂ ಝಾಂಝಹಾರ್ (ಹಿಂದಿ), 1955 ರಲ್ಲಿ ಕಾಂಚನ್ ಗಂಗಾ (ಹಿಂದಿ), 1990 ರಲ್ಲಿ ಲೇಕಿನ್ (ಹಿಂದಿ).

PC: Internet

ಕೆ.ಎಲ್.ಸೈಗಲ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುವ ಬಯಕೆ ಇತ್ತು ಇವರಿಗೆ. ರೇಡಿಯೋ ಕೊಂಡು ಟ್ಯೂನ್ ಮಾಡಿದಾಗ ಕೇಳಿದ್ದು-ಸೈಗಲ್ ಅವರ ಮರಣ ವಾರ್ತೆ. ಆ ನೋವಿನಿಂದ ತಕ್ಷಣ ರೇಡಿಯೋ ಆಫ್ ಮಾಡಿದ ಲತಾ ಮುಂದೆಂದೂ ರೇಡಿಯೋ ಕೇಳಲಿಲ್ಲ.

1969 ರಲ್ಲಿ ಪದ್ಮಭೂಷಣ್, 1989ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 1990 ರಲ್ಲಿ ಪದ್ಮವಿಭೂಷಣ್, 2001 ರಲ್ಲಿ ಭಾರತರತ್ನ, ಇವರಿಗೆ ದೊರೆತಿವೆ. 1999 ರಲ್ಲಿ ಜೀವಿತಾವಧಿ ಸಾಧನೆಗಾಗಿ ಇವರಿಗೆ ಝೀಸಿನಿ ಪ್ರಶಸ್ತಿ ಬಂತು. 1999 ರಲ್ಲಿ ರಾಜ್ಯ ಸಭೆಯ ಸದಸ್ಯತ್ವ ನಾಮಕರಣದಿಂದ ಸಿಕ್ಕಿತು.

1970 ರ ನಂತರ ಭಾರತ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದರೆ, ಅವುಗಳಲ್ಲಿ ಅನೇಕ ಧರ್ಮಾರ್ಥ ದಾನದ ಕಾರ್ಯಕ್ರಮಗಳೂ ಇದ್ದವು.

ಲಂಡನ್‌ನಲ್ಲಿ 1974 ರಲ್ಲಿ ಖoಥಿಚಿಟ ಂಟbeಡಿಣ ಊಚಿಟಟನಲ್ಲಿ ಇವರ ಮೊದಲ ವಿದೇಶೀ ಸಂಗೀತ ಕಛೇರಿ. ಇವರು ಮೀರಾಬಾಯಿ ಭಜನೆಗಳ ಆಲ್ಬಂ ತಂದಿದ್ದಾರೆ. ಘಾಲಿಬ್ ಕವಿಯ ಗಝಲ್‌ಗಳು, ಮರಾಠಿ ಜಾನಪದ ಹಾಡುಗಳು, ಸಂತ ತುಕಾರಾಂ ಅವರ ಅಭಂಗಗಳು ಇವುಗಳನ್ನೆಲ್ಲ ಹಾಡಿದ್ದಾರೆ.

ಈ ಸಂಗೀತ ದೇವತೆಯನ್ನು ಭಾರತೀಯ ಕ್ರಿಕೆಟ್‌ಪಟುಗಳು, ಅಭಿಮಾನಿಗಳು ಮರೆಯುವಂತೆಯೇ ಇಲ್ಲ. ತೆಂಡೂಲ್‌ಕರ್ ಅವರ ತಾಯಿ ಹೇಳಿರುವಂತೆ ”ಭಾರತ ಕ್ರಿಕೆಟ್‌ಗೆ ಜೀವ ಕೊಟ್ಟ ತಾಯಿ ಲತಾ’‘. 1983 ವಿಶ್ವ ಕ್ರಿಕೆಟ್ ಪಂದ್ಯಗಳು. ಆಗ BCCI ಬಳಿ ಹಣವಿರಲಿಲ್ಲ. ಲತಾ ಮಂಗೇಶ್‌ಕರ್ ತಮ್ಮ ಸಂಗೀತ ಕಾರ್ಯಕ್ರಮ ಮಾಡಿ, 20 ಲಕ್ಷ ರೂಪಾಯಿ ಸಂಗ್ರಹಿಸಿ ದೇಣ ಗೆ ನೀಡಿದರು. ಆಗ ವಿಶ್ವಕಪ್ ಗೆಲುವು ಬಂತು ಭಾರತಕ್ಕೆ.

1994 ರಲ್ಲಿ ಅಮೃತ ಧ್ವನಿಗಳಿಗೆ ಶ್ರದ್ಧಾಂಜಲಿ ಎಂಬ ಆಲ್ಬಂ ಬಿಡುಗಡೆ ಮಾಡಿದರು. ಇದರಲ್ಲಿ ಕೆ.ಎಲ್.ಸೈಗಲ್, ಕಿಶೋರ್‌ಕುಮಾರ್, ಮಹಮ್ಮದ್ ರಫಿ, ಹೇಮಂತ್‌ಕುಮಾರ್, ಮುಖೇಶ್, ಪಂಕಜ್ ಮಲ್ಲಿಕ್, ಗೀತಾದತ್, ಝೋಹ್ರಾಬಾಯಿ, ಅಮೀರ್ ಬಾಯಿ, ಪಾರುಲ್ ಘೋಷ್ ಹಾಗೂ ಕಾನನ್ ದೇವಿ ಹಾಡಿರುವ ಹಾಡುಗಳನ್ನು ತಮ್ಮ ಧ್ವನಿಯಲ್ಲಿ ಹಾಡಿದ್ದಾರೆ.

2001 ರಲ್ಲಿ ತಂದೆ ಮಾಸ್ಟರ್ ದೀನಾನಾಥ್ ಮಂಗೇಶ್‌ಕರ್ ಹೆಸರಿನಲ್ಲಿ ಪುಣೆಯಲ್ಲಿ ಆಸ್ಪತ್ರೆ ತೆರೆದರು.
2005 ರಲ್ಲಿ ಸ್ವರಾಂಜಲಿ ಎಂಬ ಆಭರಣಗಳ ಸಂಗ್ರಹದ ವಿನ್ಯಾಸ ಮಾಡಿದರು. ಅದರ ಹರಾಜಿನಲ್ಲಿ ಬಂದ ಹಣದ ಭಾಗವನ್ನು 2005 ರ ಕಾಶ್ಮೀರ್ ಭೂಕಂಪ ಪರಿಹಾರ ನಿಧಿಗೆ ಕೊಟ್ಟ ಮಾನವತಾವಾದಿ ಈ ಗಾಯಕಿ. ಬಂಗಾಳಿ ಭಾಷೆಯಲ್ಲಿ 185 ಹಾಡು ಹಾಡಿದ್ದಾರೆ.

ಫ್ರಾನ್ಸ್‌ದ Officer of the French Legion of Honour 2009 ರಲ್ಲಿ ಇವರಿಗೆ ದೊರೆತಿದೆ.
ಪೃಥ್ವಿ ರಾಜಕಪೂರ್ ಅವರ ವಂಶದ ಎಲ್ಲ ತಲೆಮಾರಿನ ಕಲಾವಿದರ ಚಿತ್ರಗಳಲ್ಲಿ ಹಾಡಿರುವ ಏಕೈಕ ಗಾಯಕಿ ಇವರು.
ಕಪೂರ್ ಮನೆತನದ ರಿತು ನಂದಾ ತಮ್ಮ ಪುಸ್ತಕದಲ್ಲಿ ದಾಖಲಿಸಿರುವ ಒಂದು ವಿಷಯ ಕುತೂಹಲ ಕಾರಿಯಾಗಿದೆ. ರಾಜಕಪೂರ್ ಹೇಳಿದ್ದರಂತೆ ”ಸಾಮಾನ್ಯ ಚೆಲುವಿನ ಉತ್ತಮ ಕಂಠದ ಮಹಿಳೆಯನ್ನ ಪುರುಷ ಪ್ರೀತಿಸುವ ಕಥೆ, ‘ಸತ್ಯಂ ಶಿವಂ ಸುಂದರಂ’ ಚಿತ್ರಕ್ಕಾಗಿ ನಾನು ಬರೆದಾಗ, ಆ ಪಾತ್ರಕ್ಕೆ ಲತಾ ಅವರನ್ನೇ ಆಯ್ಕೆ ಮಾಡಬಯಸಿದ್ದೆ”.

ಲತಾ ಎಂಬ ರಾಗದೇವತೆಯ ಕಂಠಶ್ರೀಯಲ್ಲಿ ಮಿಂಚಿದ ಹಲವು ಗೀತೆಗಳನ್ನು ಈಗ ನೆನೆಯೋಣ.
ಮೊಗಲ್-ಏ-ಆಝಂ ಚಿತ್ರದ ಪ್ಯಾರ್ ಕಿಯಾ ತೋ ಡರನಾ ಕ್ಯಾ,
ಬೀಸ್‌ಸಾಲ್ ಬಾದ್‌ದ ಕಹಿದೀಪ್ ಜಲೇ ಕಹಿ ದಿಲ್
ವೋ ಕೌನ್ ಥೀ ಚಿತ್ರದ ನೈನಾ ಬರಸೆ ರಿಮ್ ಜಿಮ್.
ಮೇರಾ ಸಾಯಾದ ತೂ ಜಹಾ ಜಹಾ ಚಲೇಗಾ
ಸೀಮಾ ಚಿತ್ರದ ಮನಮೋಹನ,
ದೋ ಆಂಖೇ ಬಾರಾ ಹಾಥ್ ಚಿತ್ರದ ಐ ಮಾಲಿಕ್ ತೇರೇ ಬಂದೆ ಹಮ್

ಕನ್ನಡದಲ್ಲಿ 1967 ರಲ್ಲಿ ಹಾಡಿದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ಬೆಳ್ಳನೆ ಬೆಳಗಾಯಿತು ಹಾಡನ್ನು ಮರೆಯುವಂತೇ ಇಲ್ಲ. ಮೀನಾಕುಮಾರಿ ಅಭಿನಯದ ಕೊನೆಯ ಚಿತ್ರ ಪಾಕೀಝಾ ಚಿತ್ರದ ಚಲ್ತೇ ಚಲ್ತೇ ಹಾಗೂ ಇನ್ಹಿ ಲೋಗೋನೇ. ಎಲ್ಲರನ್ನೂ ಮೆಚ್ಚಿಸಿದ ಗೀತೆಗಳು.

ತನ್ನ ದೇಶವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಈ ಗಾಯಕಿ ಭಾರತದ ಮೇಲೆ ಚೀನಾ ಆಕ್ರಮಣ ಮಾಡಿದಾಗ, 27-11-1963 ರಂದು ಪ್ರಧಾನಿ ನೆಹರೂ ಎದುರು ಪ್ರದೀಪ್ ಬರೆದ ಐ ಮೇಲೆ ವತನ್ ಕೆ ಲೋಗೋ ಹಾಡಿದರು. ಸಿ.ರಾಮಚಂದ್ರ ಅವರ ಸಂಗೀತ ಈ ಗೀತೆಗಿತ್ತು.

ಭಾರತದ ಸೈನ್ಯ ಹಾಗೂ ದೇಶಕ್ಕಾಗಿ ತಮ್ಮ ಕೊನೆಯ ಗೀತೆ ಸೌಗಂಧ್ ಮುಝೆ ಇಸ್ ಮಿಟ್ಟೀ ಕೀ ಹಾಡಿದ್ದರು.
30-3-2019 ರಲ್ಲಿ ಬಿಡುಗಡೆಯಾದ ಈ ಗೀತೆ ರಚಿಸಿದ್ದವರು ಮಯೂರೇಶ್ ಪೈ.

ಸಂಗೀತವನ್ನು ಪ್ರೀತಿಸುವ ಹಿಂದಿನ, ಇಂದಿನ, ಮುಂದಿನ ತಲೆಮಾರುಗಳ ಜನರಿಗೆ ಲತಾ ಅವರ ಧ್ವನಿ ಆಧುನಿಕ ಮಾಧ್ಯಮಗಳ ಮೂಲಕ ಸತತವಾಗಿ ಗುಣುಗುಣಿಸುತ್ತಿರುತ್ತದೆ.

– ಎನ್.ವ್ಹಿ.ರಮೇಶ್

7 Responses

  1. N.V.Ramesh says:

    Dear Editor Hemamala Madam, My hearty thanks for publishing my Article on Latha Mangeshkar in your Surahonne E-Paper I have been regularly reading your Surahonne E-Paper. It is very nice.
    N.V.Ramesh
    Mob No. 9845565238

  2. ನಾಗರತ್ನ ಬಿ.ಆರ್. says:

    ಇತ್ತೀಚಿಗೆ ದೇಹಾಂತವಾದ ಲತಾಮಂಗೇಶ್ಕರ್ ಅವರ ಸಂಗೀತ ಪಯಣದ ಲೇಖನ ಒಳ್ಳೆಯ ಮಾಹಿತಿ ಯನ್ನು ಒಳಗೊಂಡಿದೆ. ಧನ್ಯವಾದಗಳು ಸಾರ್.

  3. ನಯನ ಬಜಕೂಡ್ಲು says:

    ಅದ್ಭುತ ಗಾಯಕಿ

  4. Hema says:

    ಸಂಗೀತ ಲೋಕದ ತಾರೆ ಕಣ್ಮರೆಯಾದ ಈ ಸಂದರ್ಭದಲ್ಲಿ ಅತಿ ಸೂಕ್ತವಾದ, ಸೊಗಸಾದ ಬರಹ.

  5. . ಶಂಕರಿ ಶರ್ಮ says:

    ಚಲನಚಿತ್ರ ರಂಗದಲ್ಲಿ ಮಿನುಗಿದ ಹಿನ್ನೆಲೆ ಗಾಯಕಿಯ ಜೀವಿತಾವಧಿ ಸಾಧನೆಯು ನ ಭೂತೋ ನ ಭವಿಶ್ಯತಿ…ಎಂಬಂತಿದೆ. ಹಿಂದಿ ಸಿನಮಾರಂಗದ ಅನೇಕ ನಟಿಯರ ಹಾಡೇ ಅವರಾಗಿದ್ದರು…ಅವರಲ್ಲಿ ಸೇರಿ ಹೋಗಿದ್ದರು ಈ ಅದ್ಭುತ ಮಹಿಳೆ! ಸಕಾಲಿಕ ಲೇಖನ.. ಆ ದಿವ್ಯಾತ್ಮಕ್ಕೆ ನುಡಿನಮನ..ಧನ್ಯವಾದಗಳು ಸರ್.

  6. Padmini Hegde says:

    ಲತಾ ಮಂಗೇಶ್‌ಕರ್ ಒಂದು ಪವಾಡ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: