‘ಮುಂಗ್ಪೂ’ವಿನ ಕಬಿಗುರು ರಬೀಂದ್ರ ಭವನ

Share Button

ಎರಡು ವರುಷದ ಹಿಂದೆ ನಾವು ಪೂರ್ವ ಭಾರತ ಪ್ರವಾಸ ಹೋಗಿದ್ದೆವು.ಸಿಕ್ಕಿಂ ರಾಜಧಾನಿ ಗ್ಯಾಂಗ್ಟೋಕ್ ನೋಡಿಕೊಂಡು ಡಾರ್ಜಿಲಿಂಗಿಗೆ ಹೊರಡುತ್ತಲಿದ್ದೆವು. ಪಕ್ಕದಲ್ಲಿ ದಾರಿಯುದ್ಧ ನಮ್ಮ ಜತೆಯೇ ಸ್ಪರ್ಧೆ ನೀಡುವಂತೆ ಹರಿದು ಬರುತ್ತಿದ್ದ ತೀಸ್ತಾ ನದಿ, ಅದರ ಹಿನ್ನಲೆಯಲ್ಲಿ ಹಿಮಾಲಯ ಎಂಬ ಹೆಸರಿನಂತೆ     ಹಿಮಾಚ್ಛಾದಿತವಲ್ಲದಿದ್ದರೂ ಅಡಿಯಿಂದ ಮುಡಿಯವರೆಗೆ ಹಸಿರು ವನಸಿರಿಯನೇ ಹೊದ್ದ ಪೂರ್ವ ಹಿಮಾಲಯದ ಪರ್ವತಶ್ರೇಣಿ,ತೂರಿಬರುತ್ತಿದ್ದ ಕುಳಿರ್ಗಾಳಿ ಒಂದು ಬಗೆಯ ಆಹ್ಲಾದದ ಅಲೆಯನ್ನೇ ಎಬ್ಬಿಸಿತ್ತು.ಕಡಿದಾದ ರಸ್ತೆಯಲ್ಲಿ ನಿಧಾನವಾಗಿಯೇ ನಮ್ಮ ಬಸ್ ಚಲಿಸುತ್ತಿತ್ತು. ಆ ಸೊಬಗ ಸವಿಯಲು ಬಯಸದೆ ನಿದ್ದೆಗೆ ಶರಣಾದವರೂ ಕೆಲವರಿದ್ದರು.

ಡಾರ್ಜಿಲಿಂಗಿನಿಂದ ಮೂವತ್ತೈದು ಕಿ ಮೀ ದೂರದಲ್ಲಿದ್ದಾಗ ಪ್ರವಾಸದ ವ್ಯವಸ್ಥಾಪಕ , ಮಾತುಗಾರ ಸಚಿನ್ ಧ್ವನಿವರ್ಧಕ ಕೈಗೆತ್ತಿಕೊಂಡು ”ನಿದ್ರಾದೇವಿಯ ಆಲಿಂಗಿಸಿರುವ ಪ್ರವಾಸಿಗಳೇ, ಕಿಟಕಿಯಿಂದ ಪ್ರಕೃತಿಯ ಸೊಬಗನ್ನು  ಸವಿಯುತ್ತಿರುವ ರಸಿಕರೇ,ನಮ್ಮ ಮಧ್ಯಾಹ್ನದ ಭೋಜನವನ್ನು ಇಲ್ಲೇ ಹತ್ತಿರದ ಒಂದು ಸುಂದರವಾದ  ಹಳ್ಳಿಯಲ್ಲಿ ತೆಗೆದುಕೊಳ್ಳುತ್ತಿದ್ದೇವೆ. ಅದು ನಿಮ್ಮಲ್ಲಿರುವ ಕವಿಗಳಿಗೆ ಹಾಗೂ ಕವಿಹೃದಯದವರಿಗೆ ಬಹಳ ಸಂತಸ ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಉಳಿದ ವಿವರವನ್ನು ನಿಮಗೆ ಅಲ್ಲಿ  ಮಾರ್ಗದರ್ಶಿಯೊಬ್ಬರು ನೀಡುತ್ತಾರೆ.” ಎಂದು ಘೋಷಿಸಿದ.

”ಯಾವುದು ಆ ಸ್ಥಳ ʼಎಂದು ಕೇಳಿದವರಿಲ್ಲಾ ಅವನದೊಂದೇ ನಗುಮೊಗದ ಉತ್ತರ “ಕಾದು ನೋಡಿ”ಎಂದಷ್ಟೇ.

ಒಂದು ಐದು ಕಿ ಮೀ ಸಾಗುವಷ್ಟರಲ್ಲಿ ಒಂದು ದೊಡ್ಡ  ಬಂಗಲೆಯಂತಿದ್ದ ಕಟ್ಟಡದ ಪಕ್ಕ ಬಸ್ ನಿಂತಿತು. ದೂರದಲ್ಲಿ ಬಣ್ಣಬಣ್ಣದ ಹೂವುಗಳಿದ್ದ ಹಲವಾರು ಸಸ್ಯೋದ್ಯಾನಗಳು,ಚಹಾ ತೋಟಗಳು ಎಲ್ಲರ ಗಮನ ಸೆಳೆದವು. ಬಂಗಲೆಯ ಪಕ್ಕದಲ್ಲಿ ʼ ಸರ್ಕಾರಿ ಕ್ವಿನೈನ್ ಕಂಪನಿ ಲಿಮಿಟೆಡ್ʼಎಂಬ ಫಲಕ ಗಮನ ಸೆಳೆಯಿತು. ಬಂಗಲೆಯ ಬಾಗಿಲಲ್ಲೇ ಮತ್ತೊಂದು ಫಲಕ “ಕಬಿಗುರು ರಬೀಂದ್ರ  ಭವನ”. ಗೇಟಿನೊಳಗೆ ರವೀಂದ್ರರ ಕಪ್ಪುಶಿಲೆಯ ಎದೆಮಟ್ಟದ  ಪುತ್ಥಳಿಯೂ ಬಂದವರನ್ನು ಅಲ್ಲಿಂದಲೇ ಸ್ವಾಗತಿಸುತ್ತಿತ್ತು.

ಮುಂಗ್ಪೂ(MUNGPOO)ವಿನ ಕಬಿಗುರು ರಬೀಂದ್ರ ಭವನ

ಹೌದು ಸಚಿನ್ ನಿಜವನ್ನೇ ನುಡಿದಿದ್ದ. ಕವಿ ರವೀಂದ್ರರ ಹೆಸರೇ ಸಾಲದೆ ಕವಿಗಳಲ್ಲಿ, ಕಾವ್ಯಾಸಕ್ತರಲ್ಲಿ ಸಂಚಲನ ಉಂಟು ಮಾಡುವುದಕ್ಕೆ!

ನಾನು ಸಚಿನ್ ನನ್ನು “ಇದು ರವೀಂದ್ರರ ಜನ್ಮಸ್ಥಳವಲ್ಲ, ಕಾರ್ಯಕ್ಷೇತ್ರವೂ ಅಲ್ಲ.ಇಲ್ಲೇಕೆ ರವೀಂದ್ರರ ಸ್ಮಾರಕ?”ಎಂದು ಕೇಳಿದಾಗ ಅವನು”ಬನ್ನಿ ಒಳಗೆ ಹೋಗೋಣ ಅಲ್ಲಿ ಮಾರ್ಗದರ್ಶಿ ಮಜುಂದಾರ್ ಇರುತ್ತಾರೆ.ಅವರು ಎಲ್ಲ ರಹಸ್ಯವನ್ನೂ ನಿಮಗೆಲ್ಲ ವಿಷಯ ತಿಳಿಸುತ್ತಾರೆ”ಎನ್ನುತ್ತ ಎಲ್ಲರನ್ನೂ ಒಳಗೆ ಕರೆದುಕೊಂಡು ಹೋದ.

ಅಲ್ಲಿದ್ದ ಮಜುಂದಾರ್ ಎಲ್ಲರನ್ನೂ ನಗುಮೊಗದಿಂದ ಸ್ವಾಗತಿಸಿ “ ಆತ್ಮೀಯ ಪ್ರವಾಸಿಗಳೇ ಈ ಸ್ಥಳದ ಹೆಸರು ಮುಂಗ್ಪೂ. ಡಾರ್ಜಿಲಿಂಗ್ ಜಿಲ್ಲೆಯಲ್ಲಿರುವ ಒಂದು ಪುಟ್ಟ ಪರ್ವತ ಗ್ರಾಮ.ಇಲ್ಲಿನ ಜನ ಸಂಖ್ಯೆ ಸುಮಾರು ಇಪ್ಪತ್ತು ಸಾವಿರ.ಎದುರುಗಡೆ ಸಿಂಕೋನ ಮರಗಳ ನಡುವೆ ನೀವು ಕಾಣುತ್ತಿರುವುದು  ಸರ್ಕಾರಿ ಕ್ವಿನೈನ್ ಕಾರ್ಖಾನೆ. ನೀವು ಶಾಲೆಯ ಪಾಠಗಳಲ್ಲಿ ಸಿಂಕೋನ ಮರಗಳ ತೊಗಟೆಯಿಂದ ಮಲೇರಿಯಾದ ಔಷಧಿ ಕ್ವಿನೈನ್ ತಯಾರಿಸುತ್ತಿದ್ದರು ಎಂಬ ವಿಷಯ ತಿಳಿದಿರುತ್ತೀರಿ. ಈಗ ಕ್ವಿನೈನ್ ಅನ್ನು  ಕೃತಕವಾಗಿ ರಾಸಾಯಿನಿಕಗಳಿಂದ ತಯಾರಿಸುತ್ತಿರುವುದರಿಂದ ಸಿಂಕೋನ ತೊಗಟೆ ಬಳಕೆಯಾಗುತ್ತಿಲ್ಲ. ಹಾಗಾಗಿ ಇತರ ಬಗೆಯ  ಔಷಧೀಯ ಸಸ್ಯಗಳನ್ನೂ  ಈಗ  ಇಲ್ಲಿ ಬೆಳೆಯಲಾಗುತ್ತಿದೆ.”ಎಂದು ವಿವರಿಸತೊಡಗಿದ.

ನನ್ನ ಕುತೂಹಲವೇ ಬೇರೆ.ಈ ವಿವರವೇನೋ ಸರಿ ಕವಿ ರವೀಂದ್ರರಿಗೂ ಈ ಸ್ಥಳಕ್ಕೂ ಏನು ಸಂಬಂಧ ಎಂದು.? ನಾನು ಪ್ರಶ್ನೆ ಕೇಳುವ ಮುನ್ನವೇ ಅವನೇ ಮುಂದುವರೆಸಿದ.

“ನೀವು ಎದುರು ಕಾಣುತ್ತಿರುವ ಬೃಹತ್ ಬಂಗಲೆ ಸರ್ಕಾರಿ ಕ್ವಿನೈನ್  ಕಂಪನಿಯ ಉನ್ನತ ಅಧಿಕಾರಿ ಮನಮೋಹನ್ ಸೇನ್ ಅವರದ್ದು. ಅವರ ಪತ್ನಿ ಮೈತ್ರೇಯಿದೇವಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬಂಗಾಲಿ ಸಾಹಿತಿಯಾಗಿದ್ದು “ನಾ ಹನ್ಯತೆ” ಎಂಬ ಕಾದಂಬರಿಗಾಗಿ ಖ್ಯಾತರು. ಮೈತ್ರೇಯಿಯವರ ತಂದೆ  ಸುರೇಂದ್ರನಾಥ್ ದಾಸ್ ಗುಪ್ತ ಟಾಗೋರರ ಆಪ್ತಸ್ನೇಹಿತರಾಗಿದ್ದರು. ಮೈತ್ರೇಯಿಯವರ ಆಹ್ವಾನದ ಮೇರೆಗೆ ಟಾಗೋರರು 1938 ರಿಂದ  ನಾಲ್ಕು ಬಾರಿ ಪ್ರತಿ ವರ್ಷ ಬೇಸಗೆಯಲ್ಲಿ ಇಲ್ಲಿ ಬಂದು ತಂಗಿದ್ದರು. ಕೊನೆಯ ಬಾರಿ ಬಂದಾಗ ಅವರಿಗೆ ಅನಾರೋಗ್ಯವಾಗಿ ಮಧ್ಯದಲ್ಲೇ ಕೊಲ್ಕತ್ತಾಗೆ ವಾಪಸು ಹೋಗಬೇಕಾಯಿತು. ಈಗ ಈ ಭವನ ರವೀಂದ್ರರ ಸ್ಮಾರಕವಾಗಿದೆ.

ಮಜುಂದಾರ್ ಇವನ್ನೆಲ್ಲ ಹೇಳುತ್ತ ಬನ್ನಿ ಬಂಗ್ಲೆಯೊಳಗೆ ಹೋಗೋಣ ನಿಮಗೆ ಅಲ್ಲಿ ಇನ್ನೂ ಸುಂದರವಾದ ನೋಟಗಳು ಕಾದಿವೆ ಎಂದು ಎಲ್ಲರನ್ನೂ ಒಳಗೆ ಕರೆದುಕೊಂಡು ಹೋದ. ಅದೊಂದು ವಿಶಾಲವಾದ ಬ್ರಿಟಿಷ್ ಕಾಲದ ಬಂಗಲೆ. ಉದ್ದನೆಯ ವೆರಾಂಡ. ಎಲ್ಲೆಡೆ ರೆಡ್ ಆಕ್ಸೈಡ್ ನೆಲ.ದೊಡ್ಡ ಹಜಾರ, ಕೊಠಡಿಗಳಿಂದ ಆಹ್ಲಾದಕರ ಅನುಭವ ನೀಡಿದವು. ಹಿತ್ತಲಿನಿಂದ ಬಂದ ತಂಪು ಗಾಳಿ ಸೊಬಗನ್ನು ಇನ್ನೂ ಹೆಚ್ಚಿಸಿತು. ಟಾಗೋರರ ವಿಶಿಷ್ಟ ಉಡುಗೆಯ ಭಾವಚಿತ್ರ, ಬಿಳಿಬಣ್ಣದ ಪ್ರತಿಮೆ, ಅವರ ಹಲವು ಕವಿತೆಗಳ ಕೈಬರಹದ ಛಾಯಾಚಿತ್ರಗಳು, ಅಪರೂಪದ ಛಾಯಾಚಿತ್ರಗಳು ,ಟಾಗೋರರೇ ರಚಿಸಿದ್ದ ಚಿತ್ರಕಲೆಗಳು,ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದವು.

ಟಾಗೋರರು  ಸ್ವತಃ ವಿನ್ಯಾಸ ಮಾಡಿ ಅವರ ಮಗ ರತೀಂದ್ರನಾಥ್ ನಿರ್ಮಿಸಿದ ಮಹಾಗನಿ ಮರದ ಮೇಜು,ಕುರ್ಚಿ ಹಾಗೂ ಮಂಚ ಕೂಡ ಅಲ್ಲಿ ಪ್ರದರ್ಶನಕ್ಕೆ ಇತ್ತು .ಟಾಗೋರರ ಪ್ರಸಿದ್ಧ “ಜನಮ್ ದಿನ್ “ಕವನವನ್ನು ಅಲ್ಲದೆ ಇತರ ಹಲವಾರು ಕವನಗಳನ್ನು ಮುಂಗ್ಪುವಿನ ತಮ್ಮ ವಾಸ್ತವ್ಯದಲ್ಲೇ ಅವರು ಬರೆದಿದ್ದರಂತೆ.

ಈ ಬಾತ್ ರೂಮ್ ಕೂಡ ವಿಶೇಷ ಇಲ್ಲಿ  ನೋಡಿ ಬನ್ನಿ ಎಂದು ಮಜುಂದಾರ್ ಕರೆದಾಗ ಎಲ್ಲರಿಗೂ ವಿಶೇಷವೇನಿದ್ದೀತು ಎಂಬ ನಗು. ಮೂರು ಅಡಿ ಎತ್ತರದ ಒಂದು ತೊಟ್ಟಿ. ಪಕ್ಕದಲ್ಲೊಂದು ನಲ್ಲಿ. ಸ್ವಲ್ಪ ಎತ್ತರದಲ್ಲಿ  ಇನ್ನೊಂದು ತೊಟ್ಟಿಯಲ್ಲಿ ಬಿಸಿನೀರಿನ ವ್ಯವಸ್ಥೆ. ತಣ್ಣೀರಿಗೆ ಬಿಸಿನೀರು ಬೆರೆಸಿಕೊಂಡು ತೊಟ್ಟಿಯಲಿ ಕಾಲು ಚಾಚಿ ಕುಳಿತು ಕಿಟಕಿಯಿಂದಾಚೆ ಕಾಣುವ ರಮ್ಯ ಭೂದೃಶ್ಯವನ್ನು ನೋಡುತ್ತ ಸ್ನಾನವನ್ನೂ ಆನಂದಿಸುತ್ತಿದ್ದರಂತೆ ಟಾಗೋರರು. ಬಾತ್ ಟಬ್ ವಿನ್ಯಾಸದ ಸರಳತೆ ಬೆರಗುಗೊಳಿಸಿತು. ”ಅದಕ್ಕೇ ಅವರು ವಿಶ್ವಕವಿ” ಎಂದು ಅಭಿಮಾನದ ನಗೆ ನಕ್ಕ ಮಜುಂದಾರ್.

ಕವಿ ರವೀಂದ್ರನಾಥ ಟಾಗೋರ್ ಅವರ ವಕ್ಷಪ್ರತಿಮೆ

ಅಲ್ಲಿಗೆ ದೂರದ ಕೋಲ್ಕತ್ತಾದಿಂದ ಬಂದಿದ್ದ ಕೆಲವು ಬಂಗಾಲೀ ಕಾವ್ಯಾಸಕ್ತರು ರವೀಂದ್ರರ ಪ್ರತಿಮೆಯ ಮುಂದೆ ನಿಂತು “ರಬೀಂದ್ರ ಸಂಗೀತʼವನ್ನು ಸುಶ್ರಾವ್ಯವಾಗಿ ಹಾಡತೊಡಗಿದರು. ವಾದ್ಯದ ಅಬ್ಬರವಿಲ್ಲದ ಆ ಹಾಡಿಕೆ  ಸುಂದರ ರಸಾನುಭವ ಉಂಟುಮಾಡಿತು.

ಹೊರಗಿದ್ದ ಸೊಬಗಿನ  ಉದ್ಯಾನದಲ್ಲಿ ಊಟ ಮುಗಿಸಿದೆವು. ವಿಶ್ವಕವಿಗಳ ಪ್ರತಿಮೆಯ ಮುಂದೆ ನಿಂತು ಪೋಟೋ ತೆಗೆಸಿಕೊಂಡು “ಕವೀಂದ್ರರೆ ನಿಮ್ಮ ಕಾವ್ಯಪ್ರತಿಭೆ ನಮ್ಮ ಮಸ್ತಕಕೂ ಸ್ವಲ್ಪ ಹರಿಯಲಿ” ಎಂದು ಕೋರಿಕೊಂಡೆವು.

ಅನಿರೀಕ್ಷಿತವಾದದ್ದಾದರೂ ಅವಿಸ್ಮರಣೀಯವಾಗಿತ್ತು ಮುಂಗ್ಪೂ ವಿನ ಭೇಟಿ.

-ಮಹಾಬಲ

8 Responses

  1. Anonymous says:

    ಧನ್ಯವಾದ

  2. ನಾಗರತ್ನ ಬಿ. ಅರ್. says:

    ಮುಂಗ್ಬೂನಲ್ಲಿನ ಕಬಿಗುರು ರಬೀಂದ್ರ ನಾಥರ ಭವನಕ್ಕೆ ಭೇಟಿ ಕೊಟ್ಟ ಪ್ರವಾಸಿ ಅನುಭವ ವನ್ನು ಸೊಗಸಾಗಿ ನಿರೂಪಿಸಿದ್ದೀರಾ ..ಸಾರ್ ಧನ್ಯವಾದಗಳು

  3. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್

  4. Hema says:

    ಅಪರೂಪದ ಮಾಹಿತಿ, ಚೆಂದದ ಬರಹ ಇಷ್ಟವಾಯಿತು.

  5. Padmini Hegade says:

    ಸೊಗಸಾದ ಪ್ರವಾಸಿ ಅನುಭವ, ಅಪರೂಪದ ಮಾಹಿತಿ!

  6. . ಶಂಕರಿ ಶರ್ಮ says:

    ಕವಿ ರವೀಂದ್ರನಾಥ ಠಾಕೋರ್ ಅವರು ಆಗಾಗ ಭೇಟಿ ಕೊಡುತ್ತಿದ್ದ ಬಂಗಲೆಯನ್ನೇ ಅವರ ಸ್ಮಾರಕವಾಗಿ ಪರಿವರ್ತಿಸಿದ ಬಗೆ ನಿಜಕ್ಕೂ ಶ್ಲಾಘನೀಯ. ಪೂರಕ ಚಿತ್ರಗಳೊಂದಿಗಿನ ಚಂದದ ಲೇಖನ ಸರ್.

  7. Dr Krishnaprabha M says:

    ಓಹ್… ಊಟದ ಜೊತೆಗೆ ಟಾಗೋರರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಭಾಗ್ಯ….ಚಂದದ ಲೇಖನ

  8. B c n murthy says:

    ‘ಮುಂಗ್ಪೂ’ ವಿನ ರಬೀಂದ್ರ ಭವನದ ವರ್ಣನೆ ಚೆನ್ನಾಗಿದೆ ಸಾರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: